ಮುಸ್ಲಿಮರಿಗಾಗಿ 'ಇಫ್ತಾರ್' ಆಯೋಜಿಸಿದ ರಾಮನ ಭಕ್ತೆ 'ಮೀನಾಕ್ಷಿ ಅಮ್ಮ'

ಆ ಸಭಾಂಗಣದಲ್ಲಿ ಪರಸ್ಪರ ಆಲಿಂಗನ ಇತ್ತು, ಪ್ರೀತಿಯ ಮಾತು ಇತ್ತು, ಪ್ರೀತಿಯ ಅಪ್ಪುಗೆ ಇತ್ತು, ಎಲ್ಲರನ್ನೂ ಒಳಗೊಳ್ಳುವ ಪ್ರೀತಿಯ ಹಾಡು ಇತ್ತು, ಸಮಾರಂಭದ ಕೊನೆಗೆ ಹೊಟ್ಟೆ ಪೂರ್ತಿ ರುಚಿಕರವಾದ ಬಿರಿಯಾನಿಯೂ ಇತ್ತು...ಇಲ್ಲದೇ ಇದ್ದದ್ದು 'ದ್ವೇಷ' ಮಾತ್ರ!
ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಂಗಳೂರಿನ ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಆಶೀರ್ವಾದ್ ಸಭಾಂಗಣದಲ್ಲಿ.
ದೇಶದಲ್ಲಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದ್ವೇಷ ಭಾಷಣಗಳಿಗೆ ವಿರುದ್ಧವಾಗಿ ತಮಿಳುನಾಡು ಮೂಲದ ಮೀನಾಕ್ಷಿ ಅಮ್ಮನ ಕುಟುಂಬ ಮೂರನೇ ಬಾರಿಗೆ ಬೆಂಗಳೂರಿನಲ್ಲಿ 'ಅಮ್ಮನ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದರು. ಈ ಇಫ್ತಾರ್ ಕೂಟದಲ್ಲಿ ಹಿಂದೂ-ಮುಸ್ಲಿಮರು ಸೇರಿದಂತೆ ಕ್ರಿಶ್ಚಿಯನ್ ಸಮುದಾಯದ ಮಂದಿಯೂ ಭಾಗವಹಿಸಿ, 'ದ್ವೇಷದ ಭಾಷೆಗೆ ಪ್ರೀತಿಯೇ ಉತ್ತರ' ಎಂದು ಸಾರಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರನ್ನುದ್ದೇಶಿಸಿ ಮಾತನಾಡಿದ ಮೀನಾಕ್ಷಿ ಶ್ರೀನಿವಾಸನ್, "ಇದು ನಮ್ಮ ಕುಟುಂಬ ಮುಸ್ಲಿಮ್ ಸಹೋದರ-ಸಹೋದರರಿಗಾಗಿ ಮೂರನೇ ಬಾರಿ ಆಯೋಜಿಸಿರುವ ಇಫ್ತಾರ್ ಕೂಟ. ನಮ್ಮ ದೇಶದಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ಪ್ರತಿದಿನವೂ ದ್ವೇಷ ಹುಟ್ಟಿಸುವಂತಹ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಆದರೆ, ನಾವೆಲ್ಲರೂ ಮನುಷ್ಯರು. ಪರಸ್ಪರ ಪ್ರೀತಿಯಿಂದ ಬಾಳಿ-ಬದುಕಿ ಈ ದೇಶವನ್ನು ಕಟ್ಟಬೇಕು. ಸಮಾಜದಲ್ಲಿ ದ್ವೇಷ ಹುಟ್ಟಿಸುವ ಮಂದಿ ಕಡಿಮೆ ಇದ್ದರೂ ಅದರ ಪರಿಣಾಮ ದೊಡ್ಡದಾಗಿದೆ. ಹಾಗಾಗಿ, ನಾವೆಲ್ಲರೂ ಒಗ್ಗಟ್ಟಿನಲ್ಲಿ ಸಾಗಬೇಕು. ಸಮಾಜದಲ್ಲಿ ಪ್ರೀತಿ ಹರಡುವವರಾಗಬೇಕು" ಎಂದು ಕರೆ ನೀಡಿದರು.
'ನನ್ನ ಅಮ್ಮ ರಾಮನ ಭಕ್ತೆ. ದ್ವೇಷ ಯಾವುದಕ್ಕೂ ಉತ್ತರವಲ್ಲ. ರಾಮನ ಜೀವನ ಸಲಹೆಯಲ್ಲಿ ಯಾವತ್ತೂ ದ್ವೇಷಕ್ಕೆ ಜಾಗವಿಲ್ಲ. ಹಿಂದೂ-ಮುಸ್ಲಿಮರ ನಡುವಿನ ಗಲಭೆಗಳು ದಿನದಿಂದ ದಿನಕ್ಕೆ ದಿಕ್ಕನ್ನೇ ಬದಲಾಯಿಸುತ್ತಿದೆ. ದ್ವೇಷ ಹುಟ್ಟುವಂತೆ ಮಾಡುತ್ತದೆ. ಸಮುದಾಯಗಳ ನಡುವೆ ಸ್ನೇಹ-ಸಂಬಂಧ ಗಟ್ಟಿ ಮಾಡಲಿಕ್ಕಾಗಿ ಈ ಇಫ್ತಾರ್ ಕೂಟ ಆಯೋಜಿಸಿದ್ದೇವೆ' ಎಂದು ಮೀನಾಕ್ಷಿ ಅಮ್ಮನ ಮಗ, ವೃತ್ತಿಯಲ್ಲಿ ಬ್ಯಾಂಕರ್ ಆಗಿರುವ ವೆಂಕಟ್ ಶ್ರೀನಿವಾಸನ್ ತಿಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ವಕೀಲೆ ರಾಜಲಕ್ಷ್ಮಿ ಅಂಕಲಗಿ, 'ಇಲ್ಲಿ ಸೇರಿರುವವರಲ್ಲಿ ಬೆರಳೆಣಿಕೆಯಷ್ಟು ಮಂದಿ ಇರಬಹುದು. ಆದರೆ, ಇಂತಹ ಬಾಂಧವ್ಯ ಬೆಸೆಯುವ ಸಣ್ಣ ಪುಟ್ಟ ಸಮಾರಂಭಗಳು ಪ್ರತೀ ಹಳ್ಳಿಗಳಲ್ಲಿ ನಡೆಯಬೇಕಿದೆ. ಇಫ್ತಾರ್ ಕೂಟ ಆಯೋಜಿಸಿದ ಮೀನಾಕ್ಷಿ ಅಮ್ಮನ ಕುಟುಂಬದ ನಿಜಕ್ಕೂ ಶ್ಲಾಘನೆಗೆ ಅರ್ಹವಾದವರು' ಎಂದು ತಿಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಮುಖಂಡರಾದ ಯೂಸುಫ್ ಕನ್ನಿ ಮಾತನಾಡಿ, 'ನಮಗಾಗಿ ಇಫ್ತಾರ್ ಕೂಟ ಆಯೋಜಿಸಿದ್ದಕ್ಕೆ ಮೀನಾಕ್ಷಿ ಅಮ್ಮನ ಕುಟುಂಬದ ಧನ್ಯವಾದ ಸಲ್ಲಿಸುತ್ತೇನೆ. ಮೀನಾಕ್ಷಿ ಅಮ್ಮ ಕೇವಲ ಇಬ್ಬರು ಮಕ್ಕಳ ಅಮ್ಮ ಮಾತ್ರವಲ್ಲ, ಅವರು ನಮ್ಮೆಲ್ಲರ ಅಮ್ಮ. ಅವರಲ್ಲಿರುವುದು ನಿಷ್ಕಲ್ಮಶ ಪ್ರೀತಿ ಮಾತ್ರ ಎಂದು ತೋರಿಸಿಕೊಟ್ಟಿದ್ದಾರೆ. ದೇಶದಲ್ಲಿ ವ್ಯವಸ್ಥಿತವಾಗಿ ಹರಡಲಾಗುತ್ತಿರುವ ದ್ವೇಷಕ್ಕೆ ಇಂತಹ ಕಾರ್ಯಕ್ರಮಗಳನ್ನು ನಾವು ಪರಸ್ಪರ ಆಯೋಜಿಸುವ ಮೂಲಕ ದೇಶವನ್ನು ದ್ವೇಷದಿಂದ ರಕ್ಷಣೆ ಮಾಡಬಹುದು ಎಂದು ಹೇಳಿದರು.
ವೃತ್ತಿಯಲ್ಲಿ ವೈದ್ಯರಾದ ಡಾ. ಗಿರೀಶ್ ಮೂಡ್ ಮಾತನಾಡಿ, 'ಈ ಭೂಮಿಯ ಮೇಲೆ ನಾವು ಯಾರೂ ಕೂಡ ಶಾಶ್ವತವಾಗಿ ಇರುವವರಲ್ಲ. ಇರುವಷ್ಟು ದಿನ ಪ್ರೀತಿಯಿಂದ ಬದುಕಬೇಕಿದೆ. ಮಾನವೀಯ ಮೌಲ್ಯಗಳನ್ನು ತಮ್ಮಲ್ಲಿ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕಾದ ವೈದ್ಯರು ಕೂಡ ಇಂದು ತಮಯ ವೈದ್ಯಕೀಯ ವೃತ್ತಿಯ ವೇಳೆ ದ್ವೇಷ ಕಾರುತ್ತಿರುವುದನ್ನು ನೋಡುವಾಗ ಆತಂಕವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ದ್ವೇಷವನ್ನು ಹೋಗಲಾಡಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಲ್ಲರನ್ನೂ ಸೇರಿಸುವ ಸಂದೇಶವುಳ್ಳ ಹಾಡನ್ನು ಸಾಮಾಜಿಕ ಕಾರ್ಯಕರ್ತರಾದ ವಿನಯ್ ಶ್ರೀನಿವಾಸ್, ತನ್ವೀರ್, ಮಲ್ಲಿಗೆ ಸಿರಿಮನೆ ಸೇರಿದಂತೆ ಹಲವು ಮಂದಿ ಗುಂಪಿನಲ್ಲಿ ಹಾಡಿ, ಪ್ರೀತಿಯಿಂದ ಬೀಳುವಂತೆ ಬಾಳುವಂತೆ ಕರೆ ನೀಡಿದರು.
ಅಮ್ಮನ ಈ ಇಫ್ತಾರ್ ಕೂಟದಲ್ಲಿ ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್, ಪತ್ರಕರ್ತರಾದ ಎನ್ ಎಂ ಇಸ್ಮಾಯಿಲ್, ರಾಜಕೀಯ ಕಾರ್ಯಕರ್ತರಾದ ಡಾ. ವಾಸು ಎಚ್ ವಿ, ಜನಶಕ್ತಿಯ ಗೌರಿ, ತೌಸೀಫ್ ಬೆಂಗಳೂರು ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದರು. ಮೀನಾಕ್ಷಿ ಅಮ್ಮನ ಮಗಳಾದ ಶೋಭಾ ಶ್ರೀನಿವಾಸನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಮುಸ್ಲಿಮರು ಉಪವಾಸವನ್ನು ಮುರಿಯಲು ಬೇಕಾಗುವ ಹಣ್ಣು-ಹಂಪಲುಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಈ ಸೌಹಾರ್ದಯುವ ಕಾರ್ಯಕ್ರಮಕ್ಕೆ ಊಟೋಪಚಾರವನ್ನು ಕರೀಮ್ಸ್ ರೆಸ್ಟೋರೆಂಟ್‌ನವರು ನೋಡಿಕೊಂಡಿದ್ದರು. ಅಲ್ಲದೇ, ಸಭಾಂಗಣದ ಕೊಠಡಿಯೊಂದರಲ್ಲಿ ಸಂಜೆಯ ನಮಾಝ್ ನಿರ್ವಹಿಸಲು ಕೂಡ ಪ್ರತ್ಯೇಕವಾದ ವ್ಯವಸ್ಥೆಯನ್ನು ಮೀನಾಕ್ಷಿ ಅಮ್ಮನ ಕುಟುಂಬವೇ ಮಾಡಿದ್ದು ವಿಶೇಷವಾಗಿತ್ತು.