ಹಗೆತನದ ನೆಲೆಗಳಾಗುತ್ತಿರುವ ಐಐಟಿಗಳು
ತಾರತಮ್ಯವೇ ಇಲ್ಲವೆನ್ನುವವರು ಬದಲಾವಣೆ ತರಬಲ್ಲರೆ?
ಇತ್ತೀಚೆಗೆ ದಿಲ್ಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅನಿಲ್ ಕುಮಾರ್ ಮತ್ತು ಆಯುಷ್ ಅಶ್ನಾ ಎಂಬ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಕೇವಲ 20 ವರ್ಷ ವಯಸ್ಸಿನ ಇಬ್ಬರೂ ವಿದ್ಯಾರ್ಥಿಗಳು ದಲಿತ ಸಮುದಾಯಕ್ಕೆ ಸೇರಿದವರು. ಈ ಎರಡು ಸಾವುಗಳ ನಂತರ, ಸಂಸ್ಥೆಯ ಅಧಿಕೃತ ಮಾಧ್ಯಮ ಸಂಸ್ಥೆಯಾದ ಬೋರ್ಡ್ ಫಾರ್ ಸ್ಟೂಡೆಂಟ್ ಪಬ್ಲಿಕೇಷನ್ಸ್ (ಬಿಎಸ್‌ಪಿ) ಜಾತಿ ತಾರತಮ್ಯದ ಕುರಿತು ಕ್ಯಾಂಪಸ್ ಆಧಾರಿತ ಸಮೀಕ್ಷೆಯನ್ನು ಪ್ರಾರಂಭಿಸಿತು. ಆದರೆ ಅನೇಕ ವಿದ್ಯಾರ್ಥಿಗಳು ಅದನ್ನು ಅಸೂಕ್ಷ್ಮ ಮತ್ತು ಅಪ್ರಸ್ತುತ ಎಂದು ಟೀಕಿಸಿದ್ದರಿಂದ ಒಂದು ವಾರದೊಳಗೆ ಹಿಂದೆಗೆದುಕೊಳ್ಳಲಾಯಿತು.
ಮೂರು ವರ್ಷಗಳ ಹಿಂದೆ ಇದೇ ರೀತಿಯ ಸಮೀಕ್ಷೆಯನ್ನು ಮಾಧ್ಯಮ ಸಂಸ್ಥೆ ನಡೆಸಿತ್ತು. ಸ್ನಾತಕಪೂರ್ವ ವಿದ್ಯಾರ್ಥಿಗಳ 545 ಪ್ರತಿಕ್ರಿಯೆಗಳನ್ನು ಆಧರಿಸಿದ್ದ ಆ ಸಮೀಕ್ಷೆಯ ಫಲಿತಾಂಶಗಳು ಹೇಳುತ್ತಿರುವ ಪ್ರಕಾರ, ಸಾಮಾನ್ಯ ವರ್ಗದ ಪ್ರತೀ ಮೂವರಲ್ಲಿ ಇಬ್ಬರು ವಿದ್ಯಾರ್ಥಿಗಳು ಮೀಸಲಾತಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಐಐಟಿಯಲ್ಲಿ ಅನಗತ್ಯ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಭಾವಿಸುತ್ತಾರೆ. ಇದೊಂದು ಕಟು ಸತ್ಯ. ಸಾಮಾನ್ಯ ವರ್ಗವು ಹೆಚ್ಚಾಗಿ ಮೇಲ್ಜಾತಿ ಗುಂಪುಗಳು ಮತ್ತು ಕೆಲವು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಒಳಗೊಂಡಿದೆ.
ಮೇಲ್ಜಾತಿ, ದಲಿತ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳನ್ನು ಆ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಸಮೀಕ್ಷೆಯನ್ನು ಪ್ರಕಟಿಸಲು ಅನುಮತಿ ಸಿಗಲಿಲ್ಲ. ಹಾಗಾಗಿ, ಅದು ಮೂರು ವರ್ಷಗಳಿಗೂ ಹೆಚ್ಚು ಕಾಲ ಬಹಿರಂಗವಾಗದೆ ಉಳಿದಿದೆ ಎಂದು ವಿದ್ಯಾರ್ಥಿ ಪ್ರಕಟಣೆಗಳ ಮಂಡಳಿ ಹೇಳಿದೆ.
ಪ್ರತಿಕ್ರಿಯಿಸಿದ ಪ್ರತೀ ಇಬ್ಬರು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಲ್ಲಿ ಒಬ್ಬರು ಉದ್ದೇಶಪೂರ್ವಕವಾಗಿ ಅಥವಾ ಯಾವುದೇ ಉದ್ದೇಶವಿಲ್ಲದೆ ಜಾತಿಯನ್ನು ಟೀಕಿಸುವುದನ್ನು ಒಪ್ಪಿಕೊಂಡಿದ್ದಾರೆ ಎಂಬ ಒಂದು ಆಘಾತಕಾರಿ ಅಂಶ ಈ ಸಮೀಕ್ಷೆಯಿಂದ ಬಯಲಾಗಿದೆ. ಅಂತಹವರಲ್ಲಿ ಸುಮಾರು ಶೇ.15ರಷ್ಟು ಮಂದಿ ಉದ್ದೇಶಪೂರ್ವಕವಾಗಿಯೇ ಜಾತಿವಾದಿ ಟೀಕೆಗಳನ್ನು ಮಾಡುತ್ತಾರೆಂಬುದು ಕೂಡ ಖಚಿತವಾಗಿದೆ.
ಅನೇಕ ದಲಿತ ವಿದ್ಯಾರ್ಥಿಗಳಿಗೆ, ಅವರು ಜಾತಿವಾದವನ್ನು ಎದುರಿಸಿದ ಮೊದಲ ಸ್ಥಳವೇ ಐಐಟಿಯಾಗಿತ್ತು. ಶೇ.23ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಐಐಟಿ ಪ್ರವೇಶ ಪರೀಕ್ಷೆಯಾದ ಜೆಇಇಗೆ ತಯಾರಿ ನಡೆಸುವಾಗ ಜಾತಿವಾದವನ್ನು ಎದುರಿಸುತ್ತಿದ್ದರೆಂಬುದನ್ನು ಸಮೀಕ್ಷೆ ಹೇಳುತ್ತದೆ. ಭಾಗವಹಿಸಿದವರಲ್ಲಿ ಶೇ.14ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಐಐಟಿಗೆ ಬಂದ ನಂತರ ತಾವು ಜಾತಿವಾದವನ್ನು ಎದುರಿಸಿದ್ದೇವೆ ಎಂಬುದನ್ನು ಹೇಳಿಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ವಿವಿಧ ಐಐಟಿಗಳಲ್ಲಿ ತೀವ್ರ ಜಾತಿವಾದ ಮತ್ತು ದಲಿತ ಸಮುದಾಯಗಳ ವಿದ್ಯಾರ್ಥಿಗಳ ಸಾವಿನ ಹಲವಾರು ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಐಐಟಿಗಳು ಅಂಥ ತಾರತಮ್ಯ ನಡೆಯುತ್ತಿದೆ ಎಂಬುದನ್ನು ನಿರಾಕರಿಸುತ್ತಲೇ ಇವೆ. ಸಮೀಕ್ಷೆಗಳು ಮಾತ್ರ ಐಐಟಿ ಕ್ಯಾಂಪಸ್‌ಗಳಲ್ಲಿ ಹಗೆತನ ಮತ್ತು ಸಾಮಾಜಿಕವಾಗಿ ಅನಾರೋಗ್ಯಕರ ವಾತಾವರಣ ಇದೆಯೆಂಬುದನ್ನು ಸೂಚಿಸುತ್ತಿವೆ.
ಐಐಟಿ ಬಾಂಬೆ ವಿದ್ಯಾರ್ಥಿ, 18 ವರ್ಷದ ದರ್ಶನ್ ಸೋಲಂಕಿ ಈ ವರ್ಷದ ಫೆಬ್ರವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನಂತರ, ಆತನ ಸಾವಿನ ಕಾರಣವನ್ನು ಪರಿಶೀಲಿಸಲು 12 ಸದಸ್ಯರ ಸಮಿತಿಯನ್ನು ರಚಿಸಲಾಯಿತು. ಸಮಿತಿ ವಿವಾದಾತ್ಮಕ ವರದಿಯನ್ನು ನೀಡಿತು. ಆತನ ಸಾವಿಗೆ ವೈಯಕ್ತಿಕ ಸಮಸ್ಯೆಗಳೇ ಕಾರಣ ಎಂದಿತು. ಕಳಪೆ ಅಂಕಗಳ ವಿಚಾರವನ್ನು ಮುಂದೆ ಮಾಡಿತು. ಕ್ಯಾಂಪಸ್‌ನಲ್ಲಿ ಇರುವ ಅತಿರೇಕದ ಜಾತೀಯತೆಯನ್ನು ಸಂಪೂರ್ಣವಾಗಿ ಅದು ಅಲಕ್ಷಿಸಿತು.
ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ವಿಭಾಗ ಸೇರಿದಂತೆ ಐಐಟಿ ಬಾಂಬೆಯ ವಿವಿಧ ಘಟಕಗಳು 2021ರ ಅಂತ್ಯದ ವೇಳೆಗೆ ಬಹಳಷ್ಟು ಸಮೀಕ್ಷೆಗಳನ್ನು ನಡೆಸಿವೆ. ಅವೆಲ್ಲವೂ ಕ್ಯಾಂಪಸ್‌ನಲ್ಲಿ ಸೂಕ್ಷ್ಮವಲ್ಲದ, ಪ್ರತಿಕೂಲ ಮತ್ತು ತಾರತಮ್ಯದ ವಾತಾವರಣ ಇದೆಯೆಂಬ ಅಂಶಗಳನ್ನೇ ಹೇಳಿವೆ. ದಿಲ್ಲಿ ಐಐಟಿಯಲ್ಲಿಯೂ 2020ರ ಆರಂಭದಲ್ಲಿ ಇಂತಹ ಸಮೀಕ್ಷೆಗಳು ನಡೆದಿವೆ.
ಎರಡೂ ಕ್ಯಾಂಪಸ್‌ಗಳು ದೇಶದ ಇತರ ಪ್ರಮುಖ ಸಂಸ್ಥೆಗಳಂತೆ, ಕ್ಯಾಂಪಸ್‌ನಲ್ಲಿನ ಪರಿಸರವನ್ನು ಬದಲಾಯಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿವೆ. ಬದಲಿಗೆ, ಇತ್ತೀಚೆಗೆ ಗಮನಕ್ಕೆ ಬಂದಿರುವಂತೆ, ಐಐಟಿ ಬಾಂಬೆ ಮತ್ತು ಐಐಟಿ ಹೈದರಾಬಾದ್ ಸಸ್ಯಾಹಾರಿಗಳಿಗೆ ಪ್ರತ್ಯೇಕ ಸ್ಥಳಗಳ ವ್ಯವಸ್ಥೆ ಮಾಡಿರುವುದು ಮತ್ತೊಂದು ಅತಿರೇಕದ ತೀರ್ಮಾನವಾಗಿದೆ. ಇದನ್ನು ಪ್ರತಿಭಟಿಸಿದ ಒಬ್ಬ ವಿದ್ಯಾರ್ಥಿಗೆ 10 ಸಾವಿರ ದಂಡವನ್ನೂ ವಿಧಿಸಲಾಗಿದೆ.
ಬೋರ್ಡ್ ಫಾರ್ ಸ್ಟೂಡೆಂಟ್ ಪಬ್ಲಿಕೇಷನ್ಸ್ ನಡೆಸಿದ ಸಮೀಕ್ಷೆಯು, ಉದ್ದೇಶಪೂರ್ವಕವಾಗಿಯೇ ಜಾತಿವಾದಿ ಟೀಕೆಗಳನ್ನು ಮಾಡಲಾಗುತ್ತದೆ ಎಂದೇ ಎಸ್‌ಸಿ, ಎಸ್‌ಟಿ ಸಮುದಾಯಗಳ ಶೇ.50ರಷ್ಟು ವಿದ್ಯಾರ್ಥಿಗಳು ಭಾವಿಸುತ್ತಾರೆ ಎಂಬುದನ್ನು ತೋರಿಸಿದೆ. ಮೇಲ್ಜಾತಿ ವಿದ್ಯಾರ್ಥಿಗಳು ಮೀಸಲಾತಿ ವಿರೋಧಿ ವಾಟ್ಸ್‌ಆ್ಯಪ್ ಗುಂಪಿನ ಭಾಗವಾಗಿರುತ್ತಾರೆ. ಗುಂಪಿನಲ್ಲಿ ಜಾತಿವಾದಿ ಟೀಕೆಗಳನ್ನು ಮಾಡಲು ಅವರಲ್ಲಿ ಹೆಚ್ಚಿನವರು ಬಯಸುವುದಿಲ್ಲ. ಆದರೆ ದಲಿತ ವಿದ್ಯಾರ್ಥಿಯು ಸಾಮಾಜಿಕ ಜಾಲತಾಣದಲ್ಲಿ ಜಾತಿ ವಿರೋಧಿ ಗುಂಪಿನ ಭಾಗವಾಗಿರುವುದನ್ನು ಕಂಡರೆ ಅವನ ವಿರುದ್ಧ ಹರಿಹಾಯಲಾಗುತ್ತದೆ ಎಂದು ದಿಲ್ಲಿಯ ಐಐಟಿಯ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರು ಹೇಳುತ್ತಾರೆ.
ವಿದ್ಯಾರ್ಥಿಗಳು ಮಾತ್ರವಲ್ಲ, ಪ್ರಾಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿ ಕೂಡ ಜಾತೀಯತೆಯ ಟೀಕೆಗಳಲ್ಲಿ ಭಾಗಿಯಾಗುವುದನ್ನು ಸಮೀಕ್ಷೆ ಹೇಳುತ್ತದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.11ರಷ್ಟು ವಿದ್ಯಾರ್ಥಿಗಳು ಪ್ರಾಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿಯಿಂದ ಜಾತಿವಾದಿ ಟೀಕೆಗಳನ್ನು ಕೇಳಿದವರಾಗಿದ್ದಾರೆ.
ಅನೇಕರು ಜಾತಿ ಆಧಾರಿತ ತಾರತಮ್ಯವನ್ನು ಎದುರಿಸುತ್ತಿದ್ದರೆ, ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರವೇ ಅದರ ವಿರುದ್ಧ ಮಾತನಾಡಲು ಸಾಧ್ಯವಾಗುತ್ತದೆ ಎಂದು ಸಮೀಕ್ಷೆ ಹೇಳುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳ ನಾಲ್ವರಲ್ಲಿ ಮೂವರು ವಿದ್ಯಾರ್ಥಿಗಳು ಜಾತಿವಾದಿ ಟೀಕೆಗಳಿಂದ ನಕಾರಾತ್ಮಕವಾಗಿ ಪ್ರಭಾವಿತರಾಗಿದ್ದಾರೆ ಎಂಬುದನ್ನು ಸಮೀಕ್ಷೆ ಕಂಡುಕೊಂಡಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಪೈಕಿ ಶೇ.20ರಷ್ಟು ಮಾತ್ರ ಜಾತೀಯತೆ ಎದುರಾದಾಗ ಅದನ್ನು ವಿರೋಧಿಸಿದವರಾಗಿದ್ದಾರೆ.
ದಲಿತ ವರ್ಗದವರಿಗೆ ದೊರೆಯುವ ಸೌಲಭ್ಯಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಮೇಲ್ಜಾತಿ ವಿದ್ಯಾರ್ಥಿಗಳ ಪ್ರಮಾಣ ದೊಡ್ಡದೇ ಇದೆ. ಶೇ.60ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮೇಲ್ಜಾತಿಯ ಕಾರಣಕ್ಕಾಗಿ ವಿಭಿನ್ನ ಶುಲ್ಕಗಳನ್ನು ಪಾವತಿಸಬೇಕಿರುವುದನ್ನು ಅನ್ಯಾಯ ಎಂದು ಅಭಿಪ್ರಾಯಪಡುತ್ತಾರೆ. ಮೀಸಲು ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಸೌಲಭ್ಯಗಳು ಸಿಗುವುದರ ಬಗ್ಗೆ ಅವರಿಗೆ ತೀವ್ರ ಅಸಮಾಧಾನವಿದೆ.
ಜಾತಿವಾದಿ ಟೀಕೆಗಳನ್ನು ಕೇಳಿದಾಗ ಅದರಿಂದ ನೊಂದವರೇ ಹೆಚ್ಚು. ಕೆಲವರಂತೂ ಮೊದಲ ವರ್ಷದಲ್ಲಿ ತಮ್ಮ ಜಾತಿಯನ್ನು ಇತರರ ಮುಂದೆ ಬಹಿರಂಗಪಡಿಸಲು ಹಿಂಜರಿದಿದ್ದರು ಎಂಬುದನ್ನು ಸಮೀಕ್ಷೆಯು ತೋರಿಸಿದೆ.
ಪರಿಶಿಷ್ಟ ಜಾತಿಯ ಶೇ.88 ಮತ್ತು ಪರಿಶಿಷ್ಟ ಬುಡಕಟ್ಟಿನ ಶೇ.74ರಷ್ಟು ವಿದ್ಯಾರ್ಥಿಗಳು ತಮ್ಮ ಜಾತಿಯ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ ಎಂದು ಸಮೀಕ್ಷೆ ಹೇಳುತ್ತದೆ. ಆದರೆ ಇತರ ಹಿಂದುಳಿದ ಜಾತಿಯ ವಿದ್ಯಾರ್ಥಿಗಳಲ್ಲಿ ಹೀಗೆ ಹಿಂಜರಿಯುವವರ ಸಂಖ್ಯೆ ಸ್ವಲ್ಪ ಕಡಿಮೆ. ಈ ಸಮೀಕ್ಷೆಯ ಪ್ರಕಾರ ಅಂಥವರ ಸಂಖ್ಯೆ ಶೇ.46ರಷ್ಟು. ಮೀಸಲು ವರ್ಗಗಳ ವಿದ್ಯಾರ್ಥಿಗಳು ಮೊದಲೇ ಕೀಳರಿಮೆ ಹೊಂದಿರುತ್ತಾರೆ ಮತ್ತು ಜಾತಿವಾದಿ ಟೀಕೆಗಳು ಎದುರಾದಾಗ ಇನ್ನಷ್ಟು ಕುಗ್ಗಿಹೋಗುತ್ತಾರೆ ಎಂಬುದನ್ನೇ ಸಮೀಕ್ಷೆ ಹೇಳುತ್ತದೆ.
(ಕೃಪೆ:thewire.in)