ನಿರಾಶ್ರಿತರ ಬೇಟೆಗೆ ಹೊರಟಿರುವ ಅಕ್ರಮ ವಲಸಿಗರು

ಇತ್ತೀಚಿನ ಕೆಲವು ಜಾಗತಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರು ಹಾಕಿದ ಕಮೆಂಟ್ ಹೀಗಿತ್ತು:
‘‘ಇಂದು ಯುಎಸ್ ಏನು ಮಾಡುತ್ತಿದೆ ಎಂಬುದನ್ನು ಯುಎಸ್ ನೋಡಿದ್ದರೆ, ಯುಎಸ್‌ನ ದಬ್ಬಾಳಿಕೆಯಿಂದ ಯುಎಸ್ ಅನ್ನು ರಕ್ಷಿಸಲಿಕ್ಕಾಗಿ ಯುಎಸ್ ದೇಶವೇ ಯುಎಸ್ ಮೇಲೆ ದಾಳಿ ನಡೆಸುತ್ತಿತ್ತು’’.
ತಮ್ಮ ವಿಲಕ್ಷಣತೆಗಳಿಗಾಗಿಯೇ ಕುಖ್ಯಾತರಾದ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ತಮ್ಮ ಕೆಲವು ವಿಪರೀತ ಹಾಗೂ ವಿಲಕ್ಷಣ ಹೇಳಿಕೆ ಹಾಗೂ ಧೋರಣೆಗಳಿಗಾಗಿ ಚರ್ಚೆಯಲ್ಲಿದ್ದಾರೆ. ವಿಶೇಷವಾಗಿ, ಕಳೆದೊಂದು ವಾರದಲ್ಲಿ ಅವರು ಫೆಲೆಸ್ತೀನ್ ಕುರಿತು ನೀಡಿದ ಎರಡು ಹೇಳಿಕೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ. ಮೊದಲು ಅವರು ಇಸ್ರೇಲ್‌ನ ಸತತ ಬಾಂಬುದಾಳಿಗಳಿಂದ ನಿರ್ವಸಿತರಾಗಿರುವ ಹಾಗೂ ನಿರಾಶ್ರಿತರಾಗಿರುವ ಫೆಲೆಸ್ತೀನ್‌ನ ಗಝ್ಝ ಪ್ರದೇಶದ ಲಕ್ಷಾಂತರ ನಿರಾಶ್ರಿತರ ಕುರಿತು-ಅವರನ್ನೆಲ್ಲಾ ಜೋರ್ಡಾನ್, ಈಜಿಪ್ಟ್ ಮುಂತಾದ ನೆರೆಯ ಅರಬ್ ದೇಶಗಳು ತಮ್ಮ ದೇಶಗಳಿಗೆ ಕರೆಸಿಕೊಂಡು ಅಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ಒಂದೆರಡು ದಿನ ಬಿಟ್ಟು ಮತ್ತೆ ಅವರು ಫೆಲೆಸ್ತೀನ್ ಕುರಿತು ಮಾತನಾಡುತ್ತಾ ಯುಎಸ್, ಗಝ್ಝ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡು ಅಲ್ಲಿ ಸದ್ಯ ನಡೆಯುತ್ತಿರುವ ಎಲ್ಲ ಪ್ರತಿರೋಧ ಚಟುವಟಿಕೆಗಳನ್ನು ನಿಯಂತ್ರಿಸಲಿದೆ ಮತ್ತು ಪೂರ್ಣಪ್ರಮಾಣದ ಅಭಿವೃದ್ಧಿ ಕೆಲಸವನ್ನು ಮಾಡಲಿದೆ ಎಂದು ಘೋಷಿಸಿದರು. ಈ ಮೂಲಕ ಅವರು ಯುಎಸ್‌ನಲ್ಲಿರುವ ಇಸ್ರೇಲ್ ಪರ ವಲಯಗಳ ಮೆಚ್ಚುಗೆ ಗಳಿಸ ಬಯಸಿದ್ದರು.
ಟ್ರಂಪ್‌ರನ್ನು ಯುಎಸ್ ಎಂಬ ಬಲಿಷ್ಠ ದೇಶದ ಅಧ್ಯಕ್ಷರಾಗಿ ಮಾತ್ರ ಕಾಣುವ ಕೆಲವರು ಅವರ ಈ ಬಗೆಯ ಹೇಳಿಕೆಗಳಿಂದ ಬೆಚ್ಚಿ ಬಿದ್ದಿದ್ದರೆ ಮತ್ತೆ ಕೆಲವರು ಗೊಂದಲಕ್ಕೀಡಾಗಿದ್ದರು. ಆದರೆ ಟ್ರಂಪ್ ಅವರ ಪ್ರಹಸನಾತ್ಮಕ ವ್ಯಕ್ತಿತ್ವದ ಪರಿಚಯ ಇರುವವರು ಯಾರೂ ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮಾತ್ರವಲ್ಲ, ಅವುಗಳನ್ನು ಚರ್ಚಾರ್ಹ ಎಂದು ಕೂಡಾ ಪರಿಗಣಿಸಲಿಲ್ಲ. ಸ್ವತಃ ಟ್ರಂಪ್ ತಮ್ಮ ಯಾವುದೇ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂಬುದು ಪದೇಪದೇ ಸಿದ್ಧವಾಗಿರುವುದರಿಂದ, ಆ ಕುರಿತು ಬಲ್ಲವರು ಅವರ ಎಲ್ಲ ಮಾತುಗಳನ್ನು ಹೆಚ್ಚೆಂದರೆ ಕ್ರೂರ ತಮಾಷೆ ಎಂದು ತಳ್ಳಿ ಹಾಕುವುದು ಸ್ವಾಭಾವಿಕ.
2021 ಜನವರಿ 20ರಂದು ‘ದಿ ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸತ್ಯಾನ್ವೇಷಣಾ ವರದಿಯಲ್ಲಿ ‘‘ಕಳೆದ ನಾಲ್ಕು ವರ್ಷಗಳಲ್ಲಿ ಟ್ರಂಪ್ 30,573 ಸುಳ್ಳು ಹಾಗೂ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ - ಅಂದರೆ ಪ್ರತಿದಿನ ಸರಾಸರಿ 21 ಸುಳ್ಳು ಹಾಗೂ ದಾರಿ ತಪ್ಪಿಸುವ ಹೇಳಿಕೆಗಳು’’ ಎಂದು ಆಧಾರ ಸಹಿತ ಹೇಳಲಾಗಿತ್ತು.
ಕಳೆದ ವರ್ಷ ಅಕ್ಟೊಬರ್ 9ರಂದು ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಅವರು ಎರಡು ಕಡೆ ಚುನಾವಣಾ ಭಾಷಣಗಳನ್ನು ಮಾಡಿದ್ದರು. ಈ ಕುರಿತು ಮರುದಿನವೇ ‘ಸಿಎನ್‌ಎನ್’ನಲ್ಲಿ ಪ್ರಕಟವಾದ ಒಂದು ವರದಿಯಲ್ಲಿ ಹೀಗಿತ್ತು:
‘‘.....ಪ್ರಸ್ತುತ ಎರಡು ಭಾಷಣಗಳಲ್ಲಿ ಟ್ರಂಪ್ ಕನಿಷ್ಠ 40 ಸುಳ್ಳುಗಳನ್ನು ಹೇಳಿದ್ದಾರೆ.’’
ಯುಎಸ್ ಅಧ್ಯಕ್ಷರುಗಳ ಪೈಕಿ ಸುಳ್ಳಿನಲ್ಲಿ ಯಾರು ಪ್ರವೀಣರು ಎಂಬ ಚರ್ಚೆಯ ಕೊನೆಯಲ್ಲಿ ಹೀಗೆಂದು ತೀರ್ಮಾನಿಸಲಾಗಿತ್ತು ಎನ್ನುತ್ತಾರೆ:
‘‘ಜಾರ್ಜ್ ವಾಷಿಂಗ್ಟನ್ ಅವರಿಗೆ ಸುಳ್ಳು ಹೇಳುವ ಸಾಮರ್ಥ್ಯ ಇರಲಿಲ್ಲ, ರಿಚರ್ಡ್ ನಿಕ್ಸನ್‌ರಿಗೆ ಸತ್ಯ ಹೇಳುವ ಸಾಮರ್ಥ್ಯ ಇರಲಿಲ್ಲ. ಟ್ರಂಪ್‌ರಿಗೆ ಸತ್ಯ ಯಾವುದು-ಸುಳ್ಳುಯಾವುದು ಎಂಬುದನ್ನು ಗುರುತಿಸುವ ಸಾಮರ್ಥ್ಯವಿಲ್ಲ.’’
ಅಮೆರಿಕದಲ್ಲಿ ‘ಕಾನೂನು ಬಾಹಿರವಾಗಿ ವಾಸಿಸುತ್ತಿರುವ ವಿದೇಶಿ’ಗಳನ್ನು ಹೆಕ್ಕಿ ಹೆಕ್ಕಿ ಅವರವರ ದೇಶಕ್ಕೆ ಮರಳಿಸುವ ದೊಡ್ಡ ಪ್ರಮಾಣದ ಒಂದು ಜನಮರುಳು ಕಾರ್ಯಾಚರಣೆಯನ್ನು ಟ್ರಂಪ್ ಆರಂಭಿಸಿದ್ದಾರೆ. ಅದರ ಭಾಗವಾಗಿ, ಪ್ರಾಶಸ್ತ್ಯದ ಮೇರೆಗೆ ಭಾರತೀಯ ಮೂಲದ ನೂರಕ್ಕೂ ಹೆಚ್ಚು ವಲಸಿಗರನ್ನು ಭಾರತಕ್ಕೆ ಮರಳಿಸಿದ್ದಾರೆ. ಪ್ರಸ್ತುತ ವಲಸಿಗರಿಗೆ ಬೇಡಿ, ಕೈಕೋಳಗಳನ್ನು ತೊಡಿಸಿ ಅವರನ್ನು ಮಿಲಿಟರಿ ವಿಮಾನದಲ್ಲಿ ತುಂಬಿ ಅಷ್ಟೊಂದು ಕ್ರೂರ ಹಾಗೂ ಅಪನಾತ್ಮಕ ರೀತಿಯಲ್ಲಿ ಕಳಿಸಿದ ಸ್ವರೂಪದ ಬಗ್ಗೆ ಭಾರತದ ಸರಕಾರೇತರ ವಲಯಗಳಲ್ಲಿ ವ್ಯಾಪಕ ಆಕ್ರೋಶ ಪ್ರಕಟವಾಗಿದೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಹೊರಗಿನವರೇ ಕಾರಣ. ಹೊರಗಿನವರನ್ನು ಹೊರಗೆ ಕಳಿಸಿದ ಮಾತ್ರಕ್ಕೆ ನಿಮ್ಮ ಉದ್ಧಾರವಾಗಿ ಬಿಡುತ್ತದೆ ಎಂದು ಯುಎಸ್‌ನ ಪುಢಾರಿಗಳು ಅಲ್ಲಿನ ಒಂದು ದೊಡ್ಡ ವರ್ಗವನ್ನು ನಂಬಿಸಿದ್ದಾರೆ. ಮೂರ್ಖ ಭಾವುಕರ ಈ ವರ್ಗದ ಶಿಳ್ಳೆ, ಚಪ್ಪಾಳೆ ಗಿಟ್ಟಿಸುವುದೇ ಟ್ರಂಪ್‌ರ ಪ್ರಸ್ತುತ ಕಸರತ್ತುಗಳ ಉದ್ದೇಶವಾಗಿದೆ.
ಈ ರೀತಿ ಯುಎಸ್ ಸರಕಾರವು ಒಂದೆಡೆ ಇಸ್ರೇಲ್ ಜೊತೆ ಸೇರಿ ಫೆಲೆಸ್ತೀನ್ ನಾಗರಿಕರನ್ನು ಅವರ ಸ್ವಂತ ನಾಡಿನಿಂದ ಹೊರಹಾಕಲು ಹೊರಟಿರುವುದು ಮತ್ತು ಇನ್ನೊಂದೆಡೆ ಯುಎಸ್ ಸರಕಾರವು ತನ್ನ ನೆಲದಲ್ಲಿರುವ ಕೆಲವರನ್ನು ‘ಅಕ್ರಮ ವಲಸಿಗ’ರೆಂದು ಗುರುತಿಸಿ ಅವರನ್ನು ಹೊರದಬ್ಬಲು ಹೊರಟಿರುವುದು ಮೂಲಭೂತ ಸ್ವರೂಪದ ಎರಡು ಐತಿಹಾಸಿಕ ಪ್ರಶ್ನೆಗಳಿಗೆ ಜನ್ಮ ನೀಡುತ್ತದೆ:
1. ಇಸ್ರೇಲ್ ಸರಕಾರ ಅಸ್ತಿತ್ವಕ್ಕೆ ಬಂದ ಮತ್ತು ಕ್ರಮೇಣ ಬೆಳೆದ ಸ್ವರೂಪ ಎಷ್ಟು ಸಕ್ರಮ ಅಥವಾ ಎಷ್ಟು ಕ್ರಮಬದ್ಧವಾಗಿತ್ತು?
2. ಸಾಕ್ಷಾತ್ ಯುಎಸ್ ಸಮಾಜ ಮತ್ತು ಸರಕಾರ ಹುಟ್ಟಿ ಬೆಳೆದ ಸ್ವರೂಪ ಎಷ್ಟು ಸಕ್ರಮ ಅಥವಾ ಎಷ್ಟು ಕ್ರಮಬದ್ಧವಾಗಿತ್ತು?
ಇಲ್ಲಿ ನಾವು ಪ್ರಥಮವಾಗಿ, ಇಸ್ರೇಲ್ ಸರಕಾರವು ತೆರವುಗೊಳಿಸಲು ಬಯಸುವ ಗಝ್ಝದ ಇತಿಹಾಸವನ್ನು ನೋಡಿದರೆ, ಅಲ್ಲೀಗ ಲಕ್ಷಾಂತರ ಸಂಖ್ಯೆಯಲ್ಲಿ ನಿರ್ವಸಿತರಾಗಿರುವ ಫೆಲೆಸ್ತೀನ್ ಪೌರರಲ್ಲಿ ಯಾರೊಬ್ಬರೂ ಅಕ್ರಮ ವಲಸಿಗರಲ್ಲ. ಅವರೆಲ್ಲರೂ ಶತಶತಮಾನಗಳಿಂದ ಫೆಲೆಸ್ತೀನ್‌ನಲ್ಲಿ ವಾಸಿಸುತ್ತಾ ಬಂದಿರುವ, ಅಲ್ಲಿನ ಮೂಲನಿವಾಸಿಗಳು ಮತ್ತವರ ಸಂತತಿಗಳು. ನಿಜವಾಗಿ ಈ ಹಿಂದೆ ಅವರನ್ನು ಫೆಲೆಸ್ತೀನ್‌ನ ವಿವಿಧ ಭಾಗಗಳಿಂದ ಹೊರದಬ್ಬಿ ಗಝ್ಝದಲ್ಲಿ ನೆಲೆಸಲು ನಿರ್ಬಂಧಿಸಿದವರು ಮತ್ತು ಇದೀಗ ಅವರನ್ನು ಗಝ್ಝದಿಂದಲೂ ಹೊರತಳ್ಳಲು ಹೊರಟಿರುವವರು ಇಸ್ರೇಲ್ ಎಂಬ ಅಕ್ರಮವಾಗಿ ಸ್ಥಾಪಿತವಾದ ದೇಶದವರು. ಇಸ್ರೇಲ್ ಎಂಬುದು ಹೆಚ್ಚೆಂದರೆ 50ರಿಂದ 100 ವರ್ಷಗಳ ಹಿಂದೆ ಯಾವ್ಯಾವುದೋ ದೇಶಗಳಿಂದ ಫೆಲೆಸ್ತೀನ್‌ಗೆ ವಲಸೆ ಬಂದು, ಸಂಪೂರ್ಣ ಅಕ್ರಮ ಹಾಗೂ ಅಮಾನುಷ ವಿಧಾನಗಳಿಂದ ಫೆಲೆಸ್ತೀನ್‌ನೊಳಗೆ ನೆಲೆಸಿದ ಅಕ್ರಮ ವಲಸಿಗರು ಕಟ್ಟಿಕೊಂಡ ಅಕ್ರಮ ದೇಶ ಎಂಬುದು ಯಾರೂ ನಿರಾಕರಿಸಲಾಗದ ಐತಿಹಾಸಿಕ ಸತ್ಯ.
ಪ್ರಥಮ ಮಹಾ ಯುದ್ಧ (1914 - 1918) ನಡೆಯುತ್ತಿದ್ದಾಗ ಜಗತ್ತಿನಲ್ಲಿ ಇಸ್ರೇಲ್ ಎಂಬೊಂದು ದೇಶವೇ ಅಸ್ತಿತ್ವದಲ್ಲಿರಲಿಲ್ಲ. ಇಂದು ಇಸ್ರೇಲ್ ಇರುವಲ್ಲಿ ಅಂದು ಸಂಪನ್ನ ಇತಿಹಾಸವಿರುವ ಫೆಲೆಸ್ತೀನ್ ಎಂಬ ದೇಶವಿತ್ತು. ಪ್ರಥಮ ಮಹಾಯುದ್ಧವು ಕೊನೆಯ ಹಂತದಲ್ಲಿದ್ದಾಗ 1917 ಅಕ್ಟೋಬರ್ ಕೊನೆಯಲ್ಲಿ ಬ್ರಿಟಿಷ್ ಪಡೆಗಳು ಉಸ್ಮಾನಿಯಾ (ಒಟ್ಟೊಮಾನ್) ಪಡೆಗಳನ್ನು ಸೋಲಿಸಿ ಫೆಲೆಸ್ತೀನ್ ನಾಡನ್ನು ತಮ್ಮ ವಶಕ್ಕೆ ತೆಗೆದುಕೊಂಡವು. ಈ ಮೂಲಕ ಸಕ್ರಮ ಫೆಲೆಸ್ತೀನ್ ಹಠಾತ್ತನೆ ‘ಆಕ್ರಮಿತ ಫೆಲೆಸ್ತೀನ್’ ಆಗಿ ಮಾರ್ಪಟ್ಟಿತು. ಆಗ ಅಲ್ಲಿ ಮುಸ್ಲಿಮರು, ಕ್ರೈಸ್ತರು ಮತ್ತು ಯಹೂದಿಗಳು ಜೊತೆಯಾಗಿ ಬಾಳುತ್ತಿದ್ದರು. ಆ ಪೈಕಿ ಯಹೂದಿಗಳ ಜನಸಂಖ್ಯೆ ಕೇವಲ ಸುಮಾರು ಶೇ. 6ರಷ್ಟಿತ್ತು. ಬ್ರಿಟಿಷ್ ಆಕ್ರಮಣದ ಬೆನ್ನಿಗೆ, ಜಗತ್ತಿನ ವಿವಿಧೆಡೆಗಳಿಂದ, ವಿಶೇಷವಾಗಿ ವಿವಿಧ ಯುರೋಪಿಯನ್ ದೇಶಗಳಿಂದ ಯಹೂದಿಗಳನ್ನು ಫೆಲೆಸ್ತೀನ್‌ಗೆ ಆಮದು ಮಾಡುವ ಬೃಹತ್ ಕಾರ್ಯಾಚರಣೆಯೊಂದು ಆರಂಭವಾಯಿತು. ಇದರ ಪರಿಣಾಮವಾಗಿ 1947ರ ಹೊತ್ತಿಗೆ ಅಲ್ಲಿ ಯಹೂದಿಗಳ ಜನಸಂಖ್ಯೆ ಶೇ. 33ರಷ್ಟಾಗಿ ಬಿಟ್ಟಿತ್ತು. ಎರಡನೆಯ ಮಹಾ ಯುದ್ಧದ ಬೆನ್ನಿಗೇ (1945) ಅಸ್ತಿತ್ವಕ್ಕೆ ಬಂದ ವಿಶ್ವ ಸಂಸ್ಥೆಯು 1947 ನವೆಂಬರ್ ಕೊನೆಯಲ್ಲಿ ಫೆಲೆಸ್ತೀನ್ ಬಿಕ್ಕಟ್ಟನ್ನು ಬಗೆಹರಿಸುವ ಹೆಸರಲ್ಲಿ ಫೆಲೆಸ್ತೀನ್ ಅನ್ನು ವಿಂಗಡಿಸುವ ನಿರ್ಣಯವೊಂದನ್ನು ಮುಂದಿಟ್ಟಿತು. ಈ ನಿರ್ಣಯದ ಪ್ರಕಾರ ಫೆಲೆಸ್ತೀನ್ ನೆಲದ ಶೇ. 56.47(15,264 ಚದರ ಕಿ.ಮೀ.) ಭಾಗವನ್ನು ಯಹೂದಿಗಳಿಗೆ ಮತ್ತು ಶೇ. 42.88 (11,592 ಚದರ ಕಿ.ಮೀ.) ಭಾಗವನ್ನು ಅರಬ್ ಜನತೆಗೆ ನೀಡಲಾಯಿತು. ಧಾರ್ಮಿಕ ಮತ್ತು ಐತಿಹಾಸಿಕವಾಗಿ ಮುಸ್ಲಿಮರು, ಕ್ರೈಸ್ತರು ಮತ್ತು ಯಹೂದಿಗಳಿಗೆ ತುಂಬಾ ಮಹತ್ವದ್ದಾಗಿದ್ದ 176 ಚದರ ಕಿ.ಮೀ. ವ್ಯಾಪ್ತಿಯ ರಾಜಧಾನಿ ಜೆರುಸಲೇಮ್ ಅನ್ನು ‘ಅಂತರ್‌ರಾಷ್ಟ್ರೀಯ ಪ್ರದೇಶ’ವೆಂದು ಘೋಷಿಸಲಾಯಿತು. 1948ರಲ್ಲಿ ಬ್ರಿಟಿಷ್ ಪಡೆಗಳು ಫೆಲೆಸ್ತೀನ್ ಅನ್ನು ಬಿಟ್ಟು ತೆರಳುವ ದಿನವೇ ಫೆಲೆಸ್ತೀನ್‌ನ ಹೆಚ್ಚಿನ ಭೂಭಾಗದಲ್ಲಿ ಇಸ್ರೇಲ್ ಎಂಬ ಹೊಸ ದೇಶದ ಸ್ಥಾಪನೆಯನ್ನು ಘೋಷಿಸಲಾಯಿತು.
ಹೀಗೆ ಒಂದು ಕಡೆ ಹೊರಗಿನಿಂದ ವಲಸಿಗರನ್ನು ತಂದು ಫೆಲೆಸ್ತೀನ್‌ನಲ್ಲಿ ನೆಲೆಸುವ ಮತ್ತು ಇಸ್ರೇಲ್ ಎಂಬ ನೂತನ ದೇಶವನ್ನು ಕಟ್ಟುವ ಸಂಘಟಿತ ಕಾರ್ಯಾಚರಣೆಯ ಜೊತೆಜೊತೆಗೆ ಇನ್ನೂ ಮೂರು ಕಾರ್ಯಾಚರಣೆಗಳು ನಡೆಯುತ್ತಿದ್ದವು:
1. ಫೆಲೆಸ್ತೀನ್‌ನೊಳಗಿರುವ ಅರಬ್ ಪ್ರಜೆಗಳನ್ನು ನಿರ್ವಸಿತರಾಗಿಸಿ ಹೊರದಬ್ಬುವ ಕಾರ್ಯಾಚರಣೆ:
1948ರಲ್ಲಿ ನಡೆದ ಅರಬ್-ಇಸ್ರೇಲ್ ಯುದ್ಧ ಕೊನೆಗೊಳ್ಳುವ ಹೊತ್ತಿಗೆ 7ಲಕ್ಷಕ್ಕಿಂತಲೂ ಹೆಚ್ಚಿನ ಫೆಲೆಸ್ತೀನ್ ಪ್ರಜೆಗಳನ್ನು ಅವರ ಪಿತ್ರಾರ್ಜಿತ ನೆಲಗಳಿಂದ ಹೊರದಬ್ಬಲಾಗಿತ್ತು. ಅರಬ್ ನಾಗರಿಕರು ವಾಸಿಸುತ್ತಿದ್ದ 600ಕ್ಕೂ ಹೆಚ್ಚಿನ ಗ್ರಾಮಗಳನ್ನು ಧ್ವಂಸಮಾಡಿ ತೆರವುಗೊಳಿಸಲಾಗಿತ್ತು. ಈ ಪ್ರಕ್ರಿಯೆ ಅಂದಿನಿಂದ ಇಂದಿನತನಕವೂ ನಿರಾತಂಕವಾಗಿ ಮುಂದುವರಿದಿದೆ. ವಿಶ್ವ ಸಂಸ್ಥೆಯು ಒದಗಿಸಿರುವ ನಿರಾಶ್ರಿತರ ದಾಖಲೆಯ ಪ್ರಕಾರ 2019ರಲ್ಲಿ 56 ಲಕ್ಷ ಫೆಲೆಸ್ತೀನ್ ಪ್ರಜೆಗಳು ನಿರಾಶ್ರಿತರಾಗಿ ನೋಂದಾಯಿಸಲ್ಪಟ್ಟಿದ್ದರು. 1948ರಲ್ಲಿ ಇಸ್ರೇಲ್ ಸ್ಥಾಪನೆಯ ವೇಳೆ ಮತ್ತು ಆ ಬಳಿಕ 1967 ರ ‘ಆರು ದಿನಗಳ ಯುದ್ಧ’ದಲ್ಲಿ ನಿರಾಶ್ರಿತರಾದ ಫೆಲೆಸ್ತೀನ್ ಪ್ರಜೆಗಳು ಮತ್ತವರ ಸಂತತಿಗಳಲ್ಲಿ ಹೆಚ್ಚಿನವರು ಫೆಲೆಸ್ತೀನ್‌ನೊಳಗಿನ ಗಝ್ಝ ಪಟ್ಟಿ ಹಾಗೂ ವೆಸ್ಟ್ ಬ್ಯಾಂಕ್‌ನಲ್ಲಿ ಮತ್ತು ನೆರೆಯ ದೇಶಗಳಾದ ಜೋರ್ಡಾನ್, ಲೆಬನಾನ್ ಮತ್ತು ಸಿರಿಯಾದಲ್ಲಿರುವ 68 ಅಧಿಕೃತ ನಿರಾಶ್ರಿತ ಶಿಬಿರಗಳಲ್ಲಿ ಅಥವಾ ಅವುಗಳ ಸುತ್ತ ಮುತ್ತ ವಾಸಿಸುತ್ತಿದ್ದಾರೆ. ವಿಶ್ವ ಸಂಸ್ಥೆಯ ಪರಿಹಾರ ಸಂಸ್ಥೆ UNRWA, ಸುಮಾರು 59 ಲಕ್ಷದಷ್ಟು ಫೆಲೆಸ್ತೀನ್ ನಿರಾಶ್ರಿತರು ಅಧಿಕೃತವಾಗಿ ತನ್ನ ಸೇವೆಗಳಿಗೆ ಅರ್ಹರಾಗಿದ್ದಾರೆ ಎಂದು ಪ್ರಕಟಿಸಿದೆ.
2. ಫೆಲೆಸ್ತೀನ್ ಅನ್ನು ವಿಭಜಿಸುವಾಗ ಅರಬ್ ನಾಗರಿಕರಿಗೆಂದು ನೀಡಲಾಗಿದ್ದ ಭೂಭಾಗದ ಮೇಲೂ ಕ್ರಮೇಣ ಇಸ್ರೇಲ್‌ನ ಸ್ವಾಮ್ಯ ಸಾಧಿಸುವ ಕಾರ್ಯಾಚರಣೆ:
ಇಸ್ರೇಲ್‌ನ ಸ್ಥಾಪನೆಯ ವೇಳೆ ಫೆಲೆಸ್ತೀನ್‌ನ ಶೇ. 56.47 ಭೂಭಾಗವನ್ನು ವಿಶ್ವ ಸಂಸ್ಥೆಯು ಇಸ್ರೇಲ್‌ಗೆ ನೀಡಿತ್ತು. ಆದರೆ ಶೀಘ್ರವೇ ತನ್ನ ಗಡಿಗಳನ್ನು ವಿಸ್ತರಿಸಿಕೊಂಡ ಇಸ್ರೇಲ್ 1949ರ ಅಂತ್ಯದ ಹೊತ್ತಿಗೆ ಐತಿಹಾಸಿಕ ಫೆಲೆಸ್ತೀನ್‌ನ ಶೇ. 78 ಭೂಭಾಗವನ್ನು ತನ್ನ ವಶಕ್ಕೆ ತೆಗೆದುಕೊಂಡಾಗಿತ್ತು. 1949ರ ಅಂತ್ಯದ ಹೊತ್ತಿಗೆ ಐತಿಹಾಸಿಕ ಫೆಲೆಸ್ತೀನ್‌ನ ಶೇ. 78 ಭೂಭಾಗವು ಇಸ್ರೇಲ್‌ನ ವಶವಾಗಿಬಿಟ್ಟಿತ್ತು. ಇಂದು ಐತಿಹಾಸಿಕ ಫೆಲೆಸ್ತೀನ್‌ನ ಶೇ. 85 ಭಾಗವು ಇಸ್ರೇಲ್‌ನ ವಶದಲ್ಲಿದೆ.
3. ವಿವಿಧ ಆಕ್ರಮಿತ ಅರಬ್ ಭೂಭಾಗಗಳಲ್ಲಿ ಸಶಸ್ತ್ರ ವಲಸಿಗ ಯಹೂದಿಗಳಿಗೆಂದೇ ಮೀಸಲಾದ ವಸತಿ ಪ್ರದೇಶಗಳನ್ನು ನಿರ್ಮಿಸುವ ಕಾರ್ಯಾಚರಣೆ:
ಈ ರೀತಿ ಹೊರಗಿನಿಂದ ತರಿಸಿ ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೇಮ್‌ನಲ್ಲಿ ನೆಲೆಗೊಳಿಸಲಾದ ಯಹೂದಿ ವಲಸಿಗರ ಸಂಖ್ಯೆ 1993ರಲ್ಲಿ 2.5 ಲಕ್ಷದಷ್ಟಿದ್ದರೆ 2023ರ ಹೊತ್ತಿಗೆ ಆ ಸಂಖ್ಯೆ 7 ಲಕ್ಷ ದಾಟಿತ್ತು.
ಈ ಹಿನ್ನೆಲೆಯಲ್ಲಿ ಇಂದು ಗಝ್ಝದಲ್ಲಿ ನಡೆಯುತ್ತಿರುವುದು ಅಕ್ರಮ ಸರಕಾರವೊಂದು ಸಕ್ರಮ ನಾಗರಿಕರನ್ನು ಹೊರದಬ್ಬುವ ಕಾರ್ಯಾಚರಣೆಯೇ ಹೊರತು, ಸಕ್ರಮ ಸರಕಾರವು ಅಕ್ರಮ ನಿವಾಸಿಗಳನ್ನು ಹೊರಹಾಕುವ ಕಾರ್ಯಾಚರಣೆಯಂತೂ ಖಂಡಿತ ಅಲ್ಲ. ನ್ಯಾಯ ಪ್ರಕಾರ ಅಲ್ಲಿ ನಡೆಯಬೇಕಾಗಿರುವುದು, ಐತಿಹಾಸಿಕ ಫೆಲೆಸ್ತೀನ್ ನೆಲವನ್ನು ಸಂಪೂರ್ಣವಾಗಿ ಫೆಲೆಸ್ತೀನ್ ಜನತೆಯ ವಶಕ್ಕೆ ಕೊಟ್ಟು, ಎಲ್ಲ ಬಿಕ್ಕಟ್ಟುಗಳಿಗೆ ಕಾರಣರಾಗಿರುವ ಇಸ್ರೇಲಿಗಳನ್ನು ಫೆಲೆಸ್ತೀನ್‌ನಿಂದ ಹೊರದಬ್ಬುವ ಕಾರ್ಯಾಚರಣೆ. ಯುಎಸ್ ಮತ್ತು ಯುರೋಪಿನ ದೇಶಗಳು ಮಾನವೀಯ ನೆಲೆಯಲ್ಲಿ ಮತ್ತು ತಮ್ಮದೇ ಐತಿಹಾಸಿಕ ಅಪರಾಧಗಳಿಗೆ ಪರಿಹಾರ ರೂಪದಲ್ಲಿ ಆ ಇಸ್ರೇಲಿಗಳನ್ನು ತಮ್ಮಲ್ಲಿಗೆ ಕರೆಸಿಕೊಂಡು ಅವರಿಗೆ ಆಶ್ರಯ ಒದಗಿಸುವ ಮಾರ್ಗೋಪಾಯಗಳ ಕುರಿತು ಚರ್ಚಿಸ ಬೇಕೇ ಹೊರತು ಗಝ್ಝದವರನ್ನು ತೆರವುಗೊಳಿಸುವ ಕುರಿತಲ್ಲ.
ಇದು ಇಸ್ರೇಲ್‌ನ ಅಕ್ರಮ ಸರಕಾರದ ಕಥೆಯಾದರೆ, ತನ್ನ ಗಡಿಗಳೊಳಗಿರುವ ‘ಅಕ್ರಮ ವಲಸಿಗ’ ರ ಬೇಟೆಗೆ ಹೊರಟಿರುವ ಯುಎಸ್ ಸಮಾಜದ ಕಥೆ ಏನು?
ಯುಎಸ್ ಸರಕಾರವು ತನ್ನ ಗಡಿಗಳೊಳಗೆ ಅಕ್ರಮ ವಲಸಿಗರನ್ನು ಗುರುತಿಸಲು ಹೊರಟಿರುವುದೇ ಒಂದು ಹಾಸ್ಯಾಸ್ಪದ ವೈರುಧ್ಯ. ಏಕೆಂದರೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಎಂಬ ದೇಶ ಅಸ್ತಿತ್ವಕ್ಕೆ ಬಂದ ಇತಿಹಾಸ ನೋಡಿದರೆ ಅದರ ಬೇರುಗಳಿರುವುದು ಅಮಾನುಷ ಅಕ್ರಮ ಮತ್ತು ದೌರ್ಜನ್ಯಗಳ ದೀರ್ಘ ಸರಮಾಲೆಯಲ್ಲಿ. 1492ರಲ್ಲಿ ಕ್ರಿಸ್ಟೊಫರ್ ಕೊಲಂಬಸ್ ತನ್ನ ನೌಕಾ ತಂಡದೊಂದಿಗೆ ಉತ್ತರ ಅಮೆರಿಕ ಖಂಡದ ಕಡಲತೀರದಲ್ಲಿ ಕಾಲಿಟ್ಟಾಗ ಅದೊಂದು ನಿರ್ಜನ ಖಂಡವಾಗಿರಲಿಲ್ಲ. ಅಂದು ಆ ನೆಲದಲ್ಲಿ, ಸಹಸ್ರಮಾನಗಳಿಂದ ಬಾಳುತ್ತಾ ಬಂದಿರುವ ಅದರ ಸಹಜ ಒಡೆಯರಾಗಿದ್ದ ಮೂಲನಿವಾಸಿಗಳು ದೊಡ್ಡ ಸಂಖ್ಯೆಯಲ್ಲಿದ್ದರು. ಆ ಮೂಲ ನಿವಾಸಿಗಳ ಸಂಖ್ಯೆ ನಿರ್ದಿಷ್ಟವಾಗಿ ಎಷ್ಟಿತ್ತೆಂಬ ಕುರಿತು ತಜ್ಞರ ಮಧ್ಯೆ ವಿಭಿನ್ನ ಅಭಿಮತಗಳಿವೆ. ಕೆಲವು ತಜ್ಞರು ಅವರ ಸಂಖ್ಯೆ ಕೇವಲ 9 ಲಕ್ಷವಿತ್ತೆಂದು ವಾದಿಸಿದ್ದರೆ ಇನ್ನು ಕೆಲವರು ಅಲ್ಲಿ 1.22 ಕೋಟಿಯಷ್ಟು ಮೂಲನಿವಾಸಿಗಳಿದ್ದರೆಂದು ಪ್ರತಿಪಾದಿಸಿದ್ದಾರೆ. ಈ ವಿಷಯವನ್ನು ಗುಪ್ತವಾಗಿಡಲು ಮತ್ತು ಆ ಕುರಿತು ಚರ್ಚೆ ನಡೆಯದಂತೆ ನೋಡಿಕೊಳ್ಳಲು ಹಲವರು ಹಲವು ಬಗೆಯಲ್ಲಿ ಶ್ರಮಿಸಿದ್ದಾರೆ. ಆದರೆ ಅಲ್ಲಿ ಯಾರೂ ಇರಲಿಲ್ಲ ಎಂದು ಮಾತ್ರ ಈತನಕ ಯಾರೂ ವಾದಿಸಿಲ್ಲ.
ಕೊಲಂಬಸ್ ಮತ್ತು ಆ ಬಳಿಕ ಹಲವು ಐರೋಪ್ಯ ದೇಶಗಳ ಬಿಳಿಯ ವಸಾಹತುಶಾಹಿ ಪಡೆಗಳು ಉತ್ತರ ಅಮೆರಿಕದ ಮೂಲನಿವಾಸಿಗಳ ನಾಡನ್ನು ಪ್ರವೇಶಿಸುವಾಗ ಯಾವುದೇ ಅಧಿಕೃತ ಅನುಮತಿ ಪಡೆದಿರಲಿಲ್ಲ. ಅವರ ಬಳಿ ಪಾಸ್ ಪೋರ್ಟ್, ವೀಸಾ ಇತ್ಯಾದಿ ಯಾವುದೇ ಅಧಿಕೃತ ದಾಖಲೆ ಪತ್ರಗಳಿರಲಿಲ್ಲ. ಅಮೆರಿಕದೊಳಕ್ಕೆ ಅವರ ಪ್ರವೇಶ ಶುದ್ಧ ಅಕ್ರಮ ಹಾಗೂ ತೀರಾ ಕ್ರೂರ ಸ್ವರೂಪದ್ದಾಗಿತ್ತು. ಅವರ ಪ್ರವೇಶದ ವಿರುದ್ಧ ಅಲ್ಲಿನ ಮೂಲ ನಿವಾಸಿಗಳ ಕಡೆಯಿಂದ ತೀವ್ರ ಪ್ರತಿರೋಧ ಪ್ರಕಟವಾಗಿತ್ತು. ಪ್ರಸ್ತುತ ಅಕ್ರಮ ವಲಸಿಗರು ಹಿಂಸಾತ್ಮಕವಾಗಿ ಆ ಮೂಲನಿವಾಸಿಗಳ ಧ್ವನಿಯನ್ನು ಅಡಗಿಸಿ ಬಿಟ್ಟರು. ದೊಡ್ಡ ಪ್ರಮಾಣದಲ್ಲಿ ಅವರ ಸಾಮೂಹಿಕ ವಧೆ ನಡೆಸಿ, ಕ್ರಮೇಣ ಅವರ ಅಸ್ತಿತ್ವವನ್ನೇ ಅಳಿಸಿ ಹಾಕಲು ಶ್ರಮಿಸಿದರು. ಇದರ ಪರಿಣಾಮವಾಗಿ 1492ರಿಂದ 1776ರ ವರೆಗಿನ ಅವಧಿಯಲ್ಲಿ ಅಮೆರಿಕನ್ ಮೂಲ ನಿವಾಸಿಗಳ ಜನಸಂಖ್ಯೆಯಲ್ಲಿ ಶೇ. 50ರಷ್ಟು ಕಡಿತವಾಗಿತ್ತು. ವಿಶೇಷವಾಗಿ 17ನೇ ಮತ್ತು 18ನೇ ಶತಮಾನದಲ್ಲಿ ನಡೆದ ಈ ಸಂಘಟಿತ ಸಮೂಹ ವಧೆಯ ಪ್ರಕ್ರಿಯೆಯು 19ನೇ ಶತಮಾನದಲ್ಲೂ ಮುಂದುವರಿಯಿತು. ಅಮೆರಿಕವನ್ನು ಆಕ್ರಮಿಸಿಕೊಂಡು ಅಲ್ಲಿ ನೆಲೆಸಿದ್ದ ವಸಾಹತುಶಾಹಿಗಳ ಸಂತತಿಗಳು ವಸಾಹತುಶಾಹಿ ಪ್ರಭುಗಳ ವಿರುದ್ಧ ದಂಗೆ ಎದ್ದು ಹೋರಾಡಿ 1776ರಲ್ಲಿ ‘ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ’ (USA) ಎಂಬ ಸ್ವತಂತ್ರ ದೇಶದ ಸ್ಥಾಪನೆಯನ್ನು ಘೋಷಿಸಿದ ಬಳಿಕವೂ ಅಲ್ಲಿನ ಮೂಲ ನಿವಾಸಿಗಳ ನಿರ್ಗತಿಕ ಹಾಗೂ ದಮನಿತ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಲಿಲ್ಲ. ಕೆಲವು ಇತಿಹಾಸಕಾರರ ಪ್ರಕಾರ ಅಮೆರಿಕದಲ್ಲಿ 1800ರಲ್ಲಿ 6 ಲಕ್ಷದಷ್ಟಿದ್ದ ಅಲ್ಲಿನ ಮೂಲನಿವಾಸಿಗಳ ಜನಸಂಖ್ಯೆಯು 1890ರ ಹೊತ್ತಿಗೆ 2.5 ಲಕ್ಷಕ್ಕೆ ಕುಸಿದು ಬಿಟ್ಟಿತ್ತು. ತಮ್ಮ ಘನತೆ, ಉಳಿವು ಮತ್ತು ಭದ್ರತೆಗಾಗಿ ಮೂಲನಿವಾಸಿಗಳು ನಿರಂತರ ಹೋರಾಟ ನಡೆಸುತ್ತಲೇ ಇದ್ದರು. ಅದರ ಫಲವಾಗಿ 20ನೇ ಶತಮಾನದಲ್ಲಿ ಕೆಲವು ಶಾಸನಾತ್ಮಕ ಸುಧಾರಣೆಗಳ ರೂಪದಲ್ಲಿ ಅವರಿಗೆ ಒಂದಿಷ್ಟು ಪರಿಹಾರ ಸಿಗತೊಡಗಿತು. 1924ರಲ್ಲಿ ಅಂದರೆ ವಲಸಿಗ ಅಮೆರಿಕನ್ನರ ಪ್ರಜಾಸತ್ತಾತ್ಮಕ ಸರಕಾರವು ತಾನು ಅಸ್ತಿತ್ವಕ್ಕೆ ಬಂದ ಒಂದೂವರೆ ಶತಮಾನಗಳ ಬಳಿಕ ಅಮೆರಿಕನ್ ಮೂಲ ನಿವಾಸಿಗಳಿಗೆ ಯುಎಸ್ ಪೌರತ್ವವನ್ನು ದಯಪಾಲಿಸಿತು. ಅದಾಗಿ ಸುಮಾರು ಒಂದು ಶತಮಾನದ ಬಳಿಕ ಅಂದರೆ 2023ರಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ, ಯುಎಸ್‌ನಲ್ಲಿ ಸದ್ಯ 71 ಲಕ್ಷದಷ್ಟು ಮೂಲ ನಿವಾಸಿಗಳಿದ್ದಾರೆಂಬುದು ಬಹಿರಂಗವಾಗಿದೆ.
ಈ ಮಧ್ಯೆ, ಇದೇ ಬಿಳಿಯ ಐರೋಪ್ಯರು 16ರಿಂದ 19ನೇ ಶತಮಾನದ ಅವಧಿಯಲ್ಲಿ ಆಫ್ರಿಕಾ ಖಂಡದ ಮೇಲೆ ಪದೇ ಪದೇ ಆಕ್ರಮಣಗಳನ್ನು ನಡೆಸಿ ಅಲ್ಲಿನ 12.5 ಕೋಟಿಯಷ್ಟು ಸ್ವತಂತ್ರ ಕರಿಯ ಮನುಷ್ಯರನ್ನು ಗುಲಾಮರಾಗಿಸಿ ಅಮೆರಿಕನ್ ಬಿಳಿಯರ ಸೇವೆಗಾಗಿ ಉತ್ತರ ಅಮೆರಿಕಕ್ಕೆ ಸಾಗಿಸಿದ್ದರು. ಆ ಮನುಷ್ಯರ ನರಳಿಕೆಗಳ ಕಥೆ ಬೇರೆಯೇ ಇದೆ. ಈ 21ನೇ ಶತಮಾನದಲ್ಲೂ ಕರಿವರ್ಣದ ಆ ಮಾನವರು ತಮ್ಮ ದಾರುಣ ಸ್ಥಿತಿಯಿಂದ ಸಂಪೂರ್ಣವಾಗಿ ಹೊರಬಂದಿಲ್ಲ.
ಸದ್ಯ ಯುಎಸ್‌ನಲ್ಲಿ ಮತ್ತು ಇಸ್ರೇಲ್‌ನಲ್ಲಿ ನಡೆಯುತ್ತಿರುವ ‘ಹೊರದಬ್ಬುವ’ ಪ್ರಕ್ರಿಯೆಯಲ್ಲಿ ಹಾಸ್ಯಾಸ್ಪದವಾದ ಇನ್ನೂ ಹಲವು ಆಯಾಮಗಳಿವೆ. ಉದಾ:
ಯುಎಸ್‌ನಲ್ಲಿ ನಡೆಯುತ್ತಿರುವುದು ಶತಮಾನಗಳ ಹಿಂದೆ ವಲಸೆ ಹೋದ ಹಳೆಯ ಅಕ್ರಮ ವಲಸಿಗರು ತೀರಾ ಇತ್ತೀಚೆಗೆ ವಲಸೆ ಹೋದ ಹೊಸ ಅಕ್ರಮ ವಲಸಿಗರನ್ನು ಹುಡುಕಿ ಹೆಕ್ಕುತ್ತಿರುವ ಪ್ರಕ್ರಿಯೆ. ಇಲ್ಲಿಯ ಹಳೆಯ ವಲಸಿಗರು ಕೇವಲ ಅಕ್ರಮ ವಲಸೆ ಎಂಬ ಒಂದು ಅಪರಾಧವನ್ನು ಮಾತ್ರ ಮಾಡಿರುವುದಲ್ಲ. ಉತ್ತರ ಅಮೆರಿಕದ ಸಕ್ರಮ ಮೂಲ ನಿವಾಸಿಗಳ ಹಲವಾರು ಪೀಳಿಗೆಗಳನ್ನು ಸಾಮೂಹಿಕವಾಗಿ ವಧಿಸಿದ ಮತ್ತು ಆಫ್ರಿಕಾದ ಹಲವು ಸ್ವತಂತ್ರ ಪೀಳಿಗೆಗಳನ್ನು ದಾಸ್ಯಕ್ಕೆ ತಳ್ಳಿ ಅಮಾನುಷ ಹಿಂಸೆಗೊಳಪಡಿಸಿದ ಮಹಾಪರಾಧಗಳ ಕಳಂಕ ಕೂಡಾ ಅವರ ಮೇಲಿದೆ.
ಅತ್ತ ಇಸ್ರೇಲ್‌ನಲ್ಲಿ ನಡೆಯುತ್ತಿರುವುದು ಇದಕ್ಕಿಂತಲೂ ಕ್ರೂರ ಪ್ರಕ್ರಿಯೆ. ಅಲ್ಲಿ ನೂರು ವರ್ಷಕ್ಕಿಂತ ಕಡಿಮೆ ಇತಿಹಾಸವಿರುವ ಅಕ್ರಮ ವಲಸಿಗರು, ಶತಮಾನ ಮಾತ್ರವಲ್ಲ ಸಹಸ್ರಮಾನಗಳಿಂದ ಫೆಲೆಸ್ತೀನ್‌ನ ಸಕ್ರಮ ನಿವಾಸಿಗಳಾಗಿದ್ದವರನ್ನು ಅವರ ಊರುಗಳಿಂದ ಮತ್ತು ಮನೆಗಳಿಂದ ಹೊರಹಾಕಿ, ಅವರನ್ನು ನಿರ್ವಸಿತ ಹಾಗೂ ನಿರಾಶ್ರಿತರಾಗಿಸಿ, ಅವರ ಸಾಮೂಹಿಕ ವಧೆ ನಡೆಸುತ್ತಿದ್ದಾರೆ. ಸಾಯಿಸಲಾಗದ ಅಳಿದುಳಿದವರನ್ನು ಬೇರೆ ದೇಶಗಳಿಗೆ ಸಾಗಿಸುವ ಸಂಚು ನಡೆಸುತ್ತಿದ್ದಾರೆ.
ತಾತ್ವಿಕವಾಗಿ ಯುಎಸ್ ಮತ್ತು ಇಸ್ರೇಲ್ ಎರಡೂ ಪ್ರಜಾಸತ್ತಾತ್ಮಕ ದೇಶಗಳು. ಮಾತ್ರವಲ್ಲ ಹಲವು ಆಧುನಿಕ, ಉದಾರ ತತ್ವಾದರ್ಶಗಳನ್ನು ಪ್ರತಿಪಾದಿಸುವ ಮತ್ತು ಜಗತ್ತಿಗೆ ಬೋಧಿಸುವ ದೇಶಗಳು. ಆದರೆ ಅವು ಆಚರಿಸುತ್ತಿರುವುದು ಎಲ್ಲ ಹಕ್ಕು ಅಧಿಕಾರಗಳು ರಟ್ಟೆಬಲ ಗಟ್ಟಿ ಇದ್ದವರಿಗೆ ಮಾತ್ರ ಸೇರಿದೆ ಮತ್ತು ಅವರ ಹಿತಾಸಕ್ತಿಯೇ ನ್ಯಾಯ ಎಂಬ ಶಿಲಾಯುಗದವರ ಮೇಲೆ ಆರೋಪಿಸಲಾಗುವ ನಿಯಮವನ್ನು. ದುರದೃಷ್ಟವಶಾತ್ ಈ ನಮ್ಮ 21ನೇ ಶತಮಾನದಲ್ಲೂ, ಶಿಲಾಯುಗದವರ ಮೇಲೆ ಆರೋಪಿಸಲಾಗುವ ಪ್ರಸ್ತುತ ನಿಯಮವನ್ನು ಸೋಲಿಸುವುದಕ್ಕೆ ಯಾವುದೇ ಏರ್ಪಾಡು ಲಭ್ಯವಿಲ್ಲ. ಕೊಲಂಬಸ್‌ನ ಪಡೆಗಳ ಅಮೆರಿಕ ಪ್ರವೇಶದೊಂದಿಗೆ ವಸಾಹತುಶಾಹಿಗಳು ಆರಂಭಿಸಿದ, ಮೂಲನಿವಾಸಿಗಳ ಸಮೂಹ ಹತ್ಯೆಯ ಪ್ರಕ್ರಿಯೆಯನ್ನು ತಡೆಯುವುದಕ್ಕೆ ಆ ಕಾಲದಲ್ಲಿ ಮಾನವ ಹಕ್ಕುಗಳು, ಪ್ರಜಾಪ್ರಭುತ್ವ, ಜನತೆಯ ಸಾರ್ವಭೌಮತ್ವ, ಕಾನೂನಿನ ಪ್ರಾಬಲ್ಯ ಇತ್ಯಾದಿ ಮೌಲ್ಯಗಳೆಲ್ಲಾ ಹೆಚ್ಚು ಜನಪ್ರಿಯವಾಗಿರಲಿಲ್ಲ. ಅಂದು ವಿಶ್ವ ಸಂಸ್ಥೆ ಅಸ್ತಿತ್ವದಲ್ಲಿರಲಿಲ್ಲ. ಆದರೆ ಫೆಲೆಸ್ತೀನ್ ದೇಶದವರನ್ನು ಅವರ ನಾಡಿನಿಂದ ಹೊರದಬ್ಬಿ ಇಸ್ರೇಲ್ ಎಂಬ ದೇಶವನ್ನು ಸ್ಥಾಪಿಸುವ ಅಕ್ರಮ ಕಾರ್ಯಾಚರಣೆ ನಡೆಯುವಾಗ ವಿಶ್ವ ಸಂಸ್ಥೆ ಅಸ್ತಿತ್ವದಲ್ಲಿತ್ತು. ಮಾತ್ರವಲ್ಲ, ವಿಶ್ವ ಸಂಸ್ಥೆಯನ್ನು ಸಾಧನವಾಗಿ ಬಳಸಿಯೇ ಆ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಇಂದು ಕೂಡಾ ಜಗತ್ತಿನ ವಿವಿಧೆಡೆ, ವಿವಿಧ ರೂಪಗಳಲ್ಲಿ ರಟ್ಟೆಬಲ ಗಟ್ಟಿ ಇರುವವರ ದರ್ಬಾರೇ ಮೆರೆಯುತ್ತಿದೆ. ರಟ್ಟೆ ಬಲದ ಮುಂದೆ ಎಲ್ಲ ಹಕ್ಕುಗಳು, ನಿಯಮಗಳು, ಸತ್ಯ, ನ್ಯಾಯ ಮುಂತಾದ ಮೌಲ್ಯಗಳೆಲ್ಲಾ ಅಸಹಾಯಕವಾಗಿವೆ.