ಪಿಪಿಇ ಕಿಟ್ ಖರೀದಿ ಟೆಂಡರ್ನಲ್ಲೇ ಅಕ್ರಮ
ಪಿಪಿಇ ಕಿಟ್ ಹೊಲಿಯುತ್ತಿರುವುದು (ಸಾಂದರ್ಭಿಕ ಚಿತ್ರ PC: PTI)
ಬೆಂಗಳೂರು: ಕೋವಿಡ್ ಮೊದಲ ಮತ್ತು ಎರಡನೇ ಅಲೆ ವೇಳೆಯಲ್ಲಿ ಪಿಪಿಇ ಕಿಟ್ ಖರೀದಿ ಸಂಬಂಧ ಕರೆದಿದ್ದ ಟೆಂಡರ್ನಲ್ಲಿಯೇ ಬಿಡ್ ರಿಗ್ಗಿಂಗ್ ನಡೆದಿತ್ತು. ಆದರೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಕಂಪೆನಿಗಳ ವಿರುದ್ಧ ಯಾವುದೇ ಕ್ರಮವನ್ನೂ ಕೈಗೊಂಡಿರಲಿಲ್ಲ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿನ ಅಧಿಕಾರಿಗಳ ನೇತೃತ್ವದ ಸಮಿತಿಯು ಸರಕಾರಕ್ಕೆ 2023ರ ಡಿಸೆಂಬರ್ನಲ್ಲೇ ಸಲ್ಲಿಸಿರುವ ತನಿಖಾ ವರದಿಯು ಪಿಪಿಇ ಕಿಟ್ಗಳ ಟೆಂಡರ್ನ ಮತ್ತೊಂದು ಮುಖವಾಡವನ್ನು ಕಳಚಿದೆ. ತನಿಖಾ ವರದಿಯ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ಲಾಜ್ ಎಕ್ಸ್ಪೋರ್ಟ್ಸ್ ಮತ್ತು ಎಲ್ಇಎಲ್ ಇಂಟರ್ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಬಿಡ್ಗಳನ್ನು ಒಬ್ಬರೇ ಸಲ್ಲಿಸಿದ್ದರು. ಆದರೆ ಈ ಕುರಿತು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಗಮನಿಸಿರಲಿಲ್ಲ. ಬಿಡ್ ರಿಗ್ಗಿಂಗ್ ಆಗಿದ್ದರೂ ಸಹ ಈ ಕಂಪೆನಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳದ ಅಧಿಕಾರಿಗಳ ಗಂಭೀರ ಕರ್ತವ್ಯಲೋಪವನ್ನು ತನಿಖಾ ಸಮಿತಿಯು ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.
ಲಾಜ್ ಎಕ್ಸ್ಪೋರ್ಟ್ಸ್ಗೆ 2020 ಮತ್ತು 2021ರ ಜೂನ್ನಲ್ಲಿ ಸರಬರಾಜು ಆದೇಶ ನೀಡಲಾಗಿತ್ತು. 2020ರ ಜೂನ್ 20ರಂದು 2,75,00,000 ರೂ. ಮೊತ್ತದಲ್ಲಿ 11.00 ಲಕ್ಷ ಸಂಖ್ಯೆಯ ಎನ್ 95 ಮಾಸ್ಕ್, 2021ರ ಜೂನ್ 5ರಂದು 4,95,93,500.00 ರೂ. ಮೊತ್ತದಲ್ಲಿ 78,100 ಸಂಖ್ಯೆಯ ಪಿಪಿಇ ಕಿಟ್ನ ಕವರ್ ಆಲ್, 2021ರ ಜೂನ್ 11ರಂದು 1.00 ಲಕ್ಷ ಸಂಖ್ಯೆಯ ಕವರ್ ಆಲ್, 2021ರ ಜೂನ್ 17ರಂದು 6.35 ಕೋಟಿ ರೂ. ಮೊತ್ತದ 1.00 ಲಕ್ಷ ಸಂಖ್ಯೆಯ ಕವರ್ ಆಲ್ ಸರಬರಾಜಿಗೆ ಆದೇಶ ನೀಡಿತ್ತು.
ಪ್ರಕರಣದ ವಿವರ: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಆಡಳಿತ ವ್ಯಾಪ್ತಿಯಲ್ಲಿನ ವೈದ್ಯಕೀಯ ಕಾಲೇಜುಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಅವಶ್ಯವಿದ್ದ ಪಿಪಿಇ ಕಿಟ್ ಮತ್ತು ಎನ್-95 ಮಾಸ್ಕ್ಗಳನ್ನು ಟೆಂಡರ್ ಮೂಲಕ ಖರೀದಿಸಲು ಕ್ರಮ ವಹಿಸಿತ್ತು. ಈ ಸಂಬಂಧ 2020ರ ಆಗಸ್ಟ್ 26ರಂದು ಇ ಪೋರ್ಟಲ್ನಲ್ಲಿ ಟೆಂಡರ್ ಆಹ್ವಾನಿಸಿತ್ತು.
2020ರ ಸೆ.2ರಂದು ಬಿಡ್ ಸಲ್ಲಿಸಲು ಅಂತಿಮ ದಿನ ನಿಗದಿಪಡಿಸಿತ್ತು. ಟೆಂಡರ್ ಕರೆಯುವಾಗ ಖರೀದಿಗೆ ಉದ್ದೇಶಿಸಿದ್ದ ಪಿಪಿಇ ಕಿಟ್ನ ಪ್ರಮಾಣವನ್ನು 2,59,563 ಸಂಖ್ಯೆ ಎಂದು ನಿರ್ದಿಷ್ಟವಾಗಿ ನಮೂದಿಸಿತ್ತು.
ಈ ಟೆಂಡರ್ನಲ್ಲಿ ಒಟ್ಟು 3 ಸಂಸ್ಥೆಗಳು ಭಾಗವಹಿಸಿದ್ದವು. ಲಾಜ್ ಎಕ್ಸ್ ಪೋರ್ಟ್ಸ್, ಎಲ್ಇಎಲ್ ಇಂಟರ್ ನ್ಯಾಷನಲ್ ಮತ್ತು ಸಚ್ ಎಕ್ಸ್ಪೋರ್ಟ್ಸ್
ಭಾಗವಹಿಸಿದ್ದವು. ಈ ಎಲ್ಲಾ ಮೂರು ಸಂಸ್ಥೆಗಳು ಸಲ್ಲಿಸಿದ್ದ ತಾಂತ್ರಿಕ ಬಿಡ್ ಅಂಗೀಕೃತಗೊಂಡಿತ್ತು. ಹೀಗಾಗಿ ಆರ್ಥಿಕ ಬಿಡ್ಡನ್ನು ತೆರೆದಿತ್ತು. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಸಲ್ಲಿಸಿದ್ದ ಬಿಡ್ ದಾಖಲೆಗಳನ್ನು ಸಮಿತಿಯು ಪರಿಶೀಲಿಸಿತ್ತು.
ಈ ಮೂರು ಸಂಸ್ಥೆಗಳು ಸಲ್ಲಿಸಿದ್ದ ಬಿಡ್ನಲ್ಲಿ ಶೇ.80ರಷ್ಟು ಕಾರ್ಯನಿರ್ವಹಣಾ ಪ್ರಮಾಣ ಪತ್ರ, ಪಿಪಿಇ ಕಿಟ್ನ ಕವರ್ ಆಲ್ ಉತ್ಪಾದನೆಯ ಪರವಾನಿಗೆ ದಾಖಲೆಗಳು ಕಡತದಲ್ಲಿ ಇರಲಿಲ್ಲ. ಈ ಟೆಂಡರ್ಗೆ ಸಂಬಂಧಿಸಿದಂತೆ ಡಿಎಂಇಯಿಂದ ತಯಾರಿಸಬೇಕಿದ್ದ ಅಗತ್ಯ ಮೌಲ್ಯಮಾಪನ, ತಾಂತ್ರಿಕ ವಿವರಣೆ ಮತ್ತು ಟೆಂಡರ್ ಪರಿಶೀಲನಾ ಸಮಿತಿಯ ನಡವಳಿಗಳೂ ಸಹ ಕಡತದಲ್ಲಿ ಕಂಡು ಬಂದಿಲ್ಲ ಎಂದು ತನಿಖಾ ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ. ಹಾಗೆಯೇ ಎಲ್ಇಎಲ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಮತ್ತು ಸಚ್ ಎಕ್ಸ್ಪೋರ್ಟ್ಸ್ ಸಂಸ್ಥೆಗಳ ಸರಾಸರಿ ವಾರ್ಷಿಕ ವಹಿವಾಟು ಟೆಂಡರ್ ದಾಖಲೆ ಮಾನದಂಡಗಳ ಪ್ರಕಾರ ಇರಲಿಲ್ಲ. ವಿಶೇಷವೆಂದರೆ ಲಾಜ್ ಎಕ್ಸ್ಪೋರ್ಟ್ಸ್ ಮತ್ತು ಎಲ್ಇಎಲ್ ಇಂಟರ್ ನ್ಯಾನಲ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳ ಬಿಡ್ಗಳನ್ನು ಒಬ್ಬರೇ ಸಲ್ಲಿಸಿದ್ದರು ಎಂಬ ಸಂಗತಿಯನ್ನೂ ತನಿಖಾ ಸಮಿತಿಯು ಪತ್ತೆ ಹಚ್ಚಿದೆ.
‘ಲಾಜ್ ಎಕ್ಸ್ಪೋರ್ಟ್ಸ್ ಮತ್ತು ಎಲ್ಇಎಲ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳ ಬಿಡ್ಗಳನ್ನು ಒಬ್ಬರೇ ಸಲ್ಲಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಎಂಎಸ್ಎಂಇ ಪ್ರಮಾಣಪತ್ರದಲ್ಲಿ ಸಲ್ಲಿಸಿರುವ ಲಾಜ್ ಎಕ್ಸ್ಪೋರ್ಟ್ಸ್ ಮತ್ತು ಎಲ್ಇಎಲ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳಿಗೆ ಉದ್ಯಮಿ ಹೆಸರು ಮತ್ತು ಆಧಾರ್ ಸಂಖ್ಯೆ ಒಂದೇ ಆಗಿದೆ. ಈ ಸಂದರ್ಭದಲ್ಲಿ ಬಿಡ್ ರಿಗ್ಗಿಂಗ್ ನಡೆದಿರುವ ಬಗ್ಗೆ ಖಚಿತಪಡಿಸಿಕೊಂಡು ಲಾಜ್ ಎಕ್ಸ್ಪೋರ್ಟ್ಸ್ ಮತ್ತು ಎಲ್ಇಎಲ್ ಇಂಟರ್ ನ್ಯಾಷನಲ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ತನಿಖಾ ಸಮಿತಿಯು ವಿವರಿಸಿರುವುದು ತಿಳಿದು ಬಂದಿದೆ.
ಮತ್ತೊಂದು ವಿಶೇಷವೆಂದರೆ ಲಾಜ್ ಎಕ್ಸ್ಪೋರ್ಟ್ಸ್ ಕಡಿಮೆ ಮೊತ್ತ ಸಲ್ಲಿಸಿತ್ತು. ಇದಕ್ಕೆ ಎಲ್ 1 ಎಂದು ಅವಾರ್ಡ್ ಕಾಂಟ್ರಾಕ್ಟ್ ನೀಡಲಾಗಿತ್ತು. ಈ ಟೆಂಡರ್ಅನ್ನು ಒಂದು ವರ್ಷದ ಅವಧಿಗೆ ನೀಡಲಾಗಿತ್ತು. ಅಗತ್ಯವಿದ್ದಲ್ಲಿ 6 ತಿಂಗಳವರೆಗೆ ವಿಸ್ತರಿಸುವ ಅವಕಾಶವನ್ನೂ ಕರಾರು ಒಪ್ಪಂದ ಮಾಡಿಕೊಂಡಿತ್ತು. ಈ ಕಂಪೆನಿಗೆ ಟೆಂಡರ್ ಅಂತಿಮಗೊಳಿಸಿದ್ದರೂ ಸಹ ಸರಬರಾಜು ಮಾಡಿ ಹಣ ಪಾವತಿಗಾಗಿ ಬಿಲ್ ಸಲ್ಲಿಸುವ ಅಧಿಕಾರವನ್ನು ಮುಂಬೈ ಮೂಲದ ಪ್ರುಡೆಂಟ್ ಮ್ಯಾನೇಜ್ಮೆಂಟ್ ಸೊಲ್ಯುಷನ್ಸ್ಗೆ ಪ್ರತ್ಯಾಯೋಜಿಸಿತ್ತು. ಇದನ್ನು ಕರಾರು ಒಪ್ಪಂದದಲ್ಲೂ ನಮೂದಿಸಲಾಗಿತ್ತು. ಆದರೆ ಟೆಂಡರ್ ಆಹ್ವಾನಿಸಿದಾಗ ಆರ್ಇಪಿನಲ್ಲಿ ಈ ಷರತ್ತು ಇರಲಿಲ್ಲ. ಹೀಗಾಗಿ ಇದು ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಆಗಿದೆ ಎಂದು ತನಿಖಾ ಸಮಿತಿಯು ವರದಿಯಲ್ಲಿ ವಿವರಿಸಿದೆ.