ಮಾಯಾ ನಗರಿಯ ಒಡಲಾಳದಲ್ಲಿ
ಅದೊಂದು ಮಾಯಾ ನಗರಿ. ರಾಜಕೀಯ ಧುರೀಣರು ಅದನ್ನು ನವ ಕಾಶಿಯೆಂದು ನಾಮಕರಣ ಮಾಡಿದ್ದಾರೆ. ಅವರ ದೃಷ್ಟಿಯಲ್ಲಿ ಈ ನಗರಿ ವಿದ್ಯಾ ನಗರಿ, ಬೌದ್ಧಿಕ ಸಮೃದ್ಧಿಯ ಸಂಕೇತ. ದೇಶದ ನಾನಾ ಕಡೆಯಿಂದ ಆ ನಗರಕ್ಕೆ ಬರೋಬ್ಬರಿ ಒಂದು ಲಕ್ಷದ ಎಂಬತ್ತು ಸಾವಿರ ವಿದ್ಯಾರ್ಥಿಗಳು ಓದಲು ಬಂದಿದ್ದಾರೆ. ಹತ್ತಾರು ಕೋಚಿಂಗ್ ಸೆಂಟರ್‌ಗಳು ಅಲ್ಲಿವೆ. ಆ ನಗರಿ ಸದಾ ಗಿಜಿಗುಡಲು ಕೋಚಿಂಗ್ ಸೆಂಟರ್‌ಗಳೇ ಕಾರಣ. ಅವು ಬರಿಯ ತರಬೇತಿ ಕೇಂದ್ರಗಳಲ್ಲ, ಅವು ಕನಸನ್ನು ಮಾರುವ ಮಾರುಕಟ್ಟೆಗಳು. ವಿದ್ಯೆಯಿಲ್ಲಿ ಬಿಕರಿಗಿದೆ.
ಆ ನಗರಿಯ ನೆಲಗಾಣ್ಕೆಯಲ್ಲೆಲ್ಲಾ ಜಾಹೀರಾತು ಬೋರ್ಡ್ ಗಳದ್ದೇ ದರ್ಬಾರು. ನೀಟ್, ಜೆಇಇ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಬೀಗುತ್ತಿರುವವರ ಚಿತ್ರಗಳು ದೇವರ ಪಟಗಳಿಗಿಂತ ಹೆಚ್ಚಾಗಿ ಕಾಣಸಿಗುತ್ತವೆ. ಕನಸುಗಳ ಹೊತ್ತು ಈ ನಗರಿಗೆ ಬರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕಳೆದ ವರ್ಷ ಉತ್ತಮ ಅಂಕ ಪಡೆದವರೇ ದೇವರುಗಳು. ಅದಕ್ಕಾಗಿಯೇ ಪ್ರತೀ ವರ್ಷ ಉತ್ತಮ ಅಂಕ ಪಡೆದವರ ಮೆರವಣಿಗೆಯಾಗುತ್ತದೆ. ಈ ಉತ್ಸವ ವೈರಮುಡಿ ಉತ್ಸವವನ್ನು ನಾಚಿಸುವಂತಿರುತ್ತದೆ. ರಸ್ತೆಯ ಎರಡೂ ಬದಿಯಲ್ಲಿ ಕಾಯುವ ವಿದ್ಯಾರ್ಥಿಗಳು ಬೀಗುವ ಮರಿದೇವರುಗಳ ಮೇಲೆ ಪುಷ್ಪ ವೃಷ್ಟಿ ಮಾಡುತ್ತಾರೆ. ನಾಲ್ಕು ಸಾವಿರ ಹಾಸ್ಟೆಲ್‌ಗಳಿರುವ, ನಲ್ವತ್ತು ಸಾವಿರ ಪೇಯಿಂಗ್ ಗೆಸ್ಟ್ ಅನುಕೂಲವಿರುವ ಈ ನಗರಿ ಎಲ್ಲಾ ವಿಧದಲ್ಲೂ ಧಾರ್ಮಿಕ ಕ್ಷೇತ್ರವನ್ನು ಹೋಲುತ್ತದೆ. ಈ ನಗರಿ ಮತ್ತಾವುದೂ ಅಲ್ಲ- ಕೋಟ. (ನಮ್ಮ ದೇಶ ಬಡ/ಮಧ್ಯಮ ವರ್ಗದವರಿಗೆ ಆಶಾವಾದದ ಕಿರಣವಿರುವುದು ಅವರ ಧಾರ್ಮಿಕ ನಂಬಿಕೆಗಳಲ್ಲಿ ಮತ್ತು ಮಕ್ಕಳ ಶಿಕ್ಷಣದಲ್ಲಿ. ದೇವರು ಕಣ್ತೆರೆದು ಅವರನ್ನು ಬಡತನ ಬವಣೆಯಿಂದ ಮೇಲೆತ್ತಬೇಕು ಅಥವಾ ಮಕ್ಕಳು ಓದಿ ಒಳ್ಳೆಯ ಕೆಲಸ ಗಿಟ್ಟಿಸಿ, ಧನಿಕರಾಗಬೇಕು.) ಕೋಟದಂತಹ ನಗರಗಳಿಗೆ ಸಾಗರೋಪಾದಿಯಲ್ಲಿ ಜನ ಬರುವುದಕ್ಕೂ, ಧಾರ್ಮಿಕ ಕ್ಷೇತ್ರಗಳಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವುದಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ ಅನ್ನುವುದು ನನ್ನ ಅನಿಸಿಕೆ.
ಕೋಟ ಎಂಬ ನಗರ ತನ್ನ ಒಡಲಾಳದಲ್ಲಿ ಅಗೋಚರ ಭಯಾನಕ ಸತ್ಯಗಳನ್ನು ಹುದುಗಿಸಿಟ್ಟುಕೊಂಡಿದೆ. 2023ರಲ್ಲಿ 23 ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗಿದ್ದರೆ, 2022ರಲ್ಲಿ ಮುರಿದುಬಿದ್ದ ಕನಸುಗಳಿಂದ ಪ್ರಾಣ ಬಿಟ್ಟವರ ಸಂಖ್ಯೆ 15. ಈ ನಗರಿಯಲ್ಲಿ ಓದಲು ಬರುವ 10 ವಿದ್ಯಾರ್ಥಿಗಳಲ್ಲಿ ನಾಲ್ವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಮತ್ತು ಹತ್ತರಲ್ಲಿ ಎಂಟು ಮಂದಿ ಒತ್ತಡ, ಆತಂಕದ ಛಾಯೆಯಲ್ಲೇ ಬದುಕುತ್ತಾರೆಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಒಡಲಾಳದ ಇಂತಹ ಕರಾಳ ಸತ್ಯಗಳು ಆಗಾಗ ಚರ್ಚೆಗೆ ಗ್ರಾಸವಾಗಿ ಕ್ರಮೇಣ ಹಾಗೆ ಮಾಯವಾಗಿಬಿಡುತ್ತವೆ.
ವರ್ಷವೊಂದಕ್ಕೆ ಐದು ಲಕ್ಷದಿಂದ ಹತ್ತು ಲಕ್ಷದವರೆಗೆ ಖರ್ಚು ಮಾಡಿ ಈ ನಗರಿಗೆ ಬರುವ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುವವರು. ಅವರು ತೀವ್ರ ಒತ್ತಡಕ್ಕೆ ಸಿಲುಕುತ್ತಾರೆ. ಸಣ್ಣ ಸಣ್ಣ ಸೋಲು ಕೂಡ ಅವರನ್ನು ವಿಚಲಿತರನ್ನಾಗಿ ಮಾಡಿಬಿಡುತ್ತದೆ. ಪೋಷಕರ ಹಣ ಪೋಲು ಮಾಡುತ್ತೇವೆಂಬ ಪಾಪಪ್ರಜ್ಞೆ ಅವರನ್ನು ಸದಾ ಕಾಡುತ್ತದೆ. ಬಡತನದಿಂದ ಹೊರಬರಲು ದೇಶದ ಜನ ಸಾಲ ಸೋಲ ಮಾಡಿ ಕೋಟದಂತಹ ನಗರಕ್ಕೆ ತಂದು ಬಿಡುತ್ತಾರೆ! ಬಡವರ ಈ ರೀತಿಯ ಆಶಾವಾದವೂ ಕೂಡ ಕೆಲ ಬಾರಿ ಬೆಂಕಿಯ ಕೆನ್ನಾಲಿಗೆಯಾಗಿ ಅವರನ್ನೇ ನುಂಗಿಬಿಡುತ್ತದೆ.
ಈ ನಗರಕ್ಕೆ ಬಂದವರಿಗೆ ದಿನಚರಿಯೊಂದನ್ನು ನೀಡಲಾಗುತ್ತದೆ. ದಿನಕ್ಕೆ 12ರಿಂದ 14 ಗಂಟೆಯ ಓದು, ಅಭ್ಯಾಸ ಕಡ್ಡಾಯ. ಆಟ, ಮೋಜು, ಮಸ್ತಿ, ಗೆಳೆತನ, ಸ್ವಲ್ಪ ತರಲೆಗಳೆಲ್ಲಾ ನಿಷಿದ್ಧ. ತರ್ಕಬದ್ಧ ಆಲೋಚನೆ, ವಿಶಾಲ ನೋಟ ಬೆಳೆಸಿಕೊಳ್ಳುವ ಜೀವನದ ಹಂತದಲ್ಲಿ ದಿನಚರಿಗೆ ಬಿದ್ದ ಯುವಕರು ಯಂತ್ರವಾಗುತ್ತಾರೆ. ಹಣ ಮಾಡುವುದರಲ್ಲಿ ನಿರತರಾಗಿರುವ ಕೋಚಿಂಗ್ ಸೆಂಟರ್‌ಗಳಿಗೆ, ಮಕ್ಕಳು ನೀಟ್, ಜೆಇಇ ಸೀಟ್ ಗಳಿಸಿಯೇ ತೀರಬೇಕೆಂಬ ಪೋಷಕರ ನಡುವೆ ಸಿಕ್ಕ ವಿದ್ಯಾರ್ಥಿಗಳ ಯೋಗಕ್ಷೇಮ, ದೊಡ್ಡ ಅವಕಾಶದಂತೆ ಒದಗಿಬಿಡುತ್ತದೆ.
ಭಿನ್ನಾಭಿಪ್ರಾಯ, ಪ್ರತಿರೋಧಗಳಿಲ್ಲದ ಜೋವು ಹಿಡಿದ ಸಮಾಜ ಸೃಷ್ಟಿಸುವಲ್ಲಿ ಇಂತಹ ಶಿಕ್ಷಣ ವ್ಯವಸ್ಥೆಯ ಕೊಡುಗೆಯೇನು? ಪ್ರತಿಭಟನೆ, ಆಕ್ಷೇಪಣೆಗಳಿಲ್ಲದೆ ಎಲ್ಲವನ್ನೂ ಸಹಿಸಿ ಮೂಕರಾಗಿ ಹಗಲಿರುಳು ಮೈಮುರಿದು ದುಡಿವ ಜನ ಸಮೂಹ ಹುಟ್ಟುಹಾಕುವಲ್ಲಿ ಇಂತಹ ವಿದ್ಯಾಕಾಶಿಯ ಯೋಗದಾನವೇನು ಎಂಬುದರ ಕುರಿತು ವ್ಯಾಪಕ ಚರ್ಚೆಯಾಗಬೇಕಿದೆ.
ಮೊನ್ನೆ ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ಮಗಳು ರಾತ್ರಿ ಹನ್ನೆರಡಾದರೂ ಮಲಗಿರಲಿಲ್ಲ. ಪರೀಕ್ಷಾ ತಯಾರಿಯಲ್ಲಿ ತೊಡಗಿದ್ದ ಅವಳ ಮೊಗದಲ್ಲಿ ಆತಂಕದ ಛಾಯೆಯಿತ್ತು. ಪಾ... ಐ ಆಮ್ ಸ್ಟ್ರೆಸ್ಡ್ ಅಂದಳು. ನನಗೆ ಸ್ವಲ್ಪ ಗಾಬರಿಯಾದರೂ, ನೋಡು ಮಗಳೇ ಅಂಕಗಳ ಬಗ್ಗೆ ಯೋಚಿಸಬೇಡ. ನನಗೆ ಗೊತ್ತಿದೆ, ಯು ವಿಲ್ ಡು ವೆಲ್ ಅಂತ. ಒಳ್ಳೆಯ ಅಂಕ ಬರದಿದ್ದರೂ ಐ ಡೋಂಟ್ ಮೈಂಡ್ ಎಂದು ನಗು ನಗುತ್ತಲೇ ಹೇಳಿದೆ. ಬಹುಶಃ ನನಗಿರುವ ಅಲ್ಪಸ್ವಲ್ಪ ಪ್ರಿವಿಲೇಜ್ ನಾನಾಡಿದ ಮಾತುಗಳಿಗೆ ಪ್ರೇರಣೆಯಾಗಿರಬಹುದು! ಪ್ರಿವಿಲೆಜ್ ಇಲ್ಲದಿದ್ದರೆ ನನ್ನ ಪ್ರತಿಕ್ರಿಯೆ ಏನಿರುತ್ತಿತ್ತು ಊಹಿಸಿ.
ನನ್ನ ಎರಡನೇ ಮಗಳಿಗೆ ಹೊಟ್ಟೆ ನೋವು, ವಾಂತಿಯೆಲ್ಲಾ ಹಿಂದಿ ಪರೀಕ್ಷೆಯ ದಿನವೇ ಶುರುವಾಗುತ್ತದೆ. ಬಹಳಷ್ಟು ಪೋಷಕರು ಇಂತಹ ಸಂಗತಿಗಳನ್ನು ಮಕ್ಕಳಾಡುವ ನಾಟಕವೆಂದೇ ಪರಿಗಣಿಸುತ್ತಾರೆ. ನನ್ನ ಮಗಳ ಕ್ಲಾಸ್ ಟೀಚರ್ ಕೂಡ ನಿರ್ದಾಕ್ಷಿಣ್ಯವಾಗಿ ‘‘ನಾಲ್ಕು ಬಾರಿಸಿ ಎಳೆದುಕೊಂಡು ತರಗತಿಗೆ ತಂದುಬಿಡಿ’’ ಎಂದಾಗ ದಿಗಿಲಾಯಿತು. ಪ್ರಿವಿಲೇಜಿನ ವಿಷಯ ಒಂದೆಡೆಯಾದರೆ, ವಿದ್ಯಾರ್ಥಿಗಳ ಸೈಕೋ ಸೊಮ್ಯಾಟಿಕ್ ಡಿಸ್‌ಆರ್ಡರ್ ಕುರಿತು ಪೋಷಕರಿಗಾಗಲಿ, ಶಿಕ್ಷಕರಿಗಾಗಲಿ ಅರಿವಿದ್ದಂತಿಲ್ಲ.
ಕೋಟದ ದುರಂತ ದೇಶದ ಪ್ರತೀ ಕಾಲೇಜಿನಲ್ಲೂ ಮರುಕಳಿಸುತ್ತಲೇ ಇರುತ್ತದೆ. ಬದುಕು ಅಸಹನೀಯವಾಗಿ ಆತ್ಮಹತ್ಯೆಯೇ ಒಳಿತು ಎಂಬ ನಿರ್ಧಾರಕ್ಕೆ ಯುವಕರು ಬಂದುಬಿಡುತ್ತಾರೆ. ಆದರೂ ಕಾಲೇಜಿನ ಆಪ್ತ ಸಮಾಲೋಚನಾ ಘಟಕಗಳು ಎಳೆಯ ಜರ್ಜರಿತ ಮನಸ್ಸುಗಳ ಸಂಕೀರ್ಣ ಸಿಕ್ಕು ಬಿಡಿಸುವ ಬದಲಾಗಿ ಪ್ರವಚನ ನೀಡುವುದರಲ್ಲಿ ನಿರತವಾಗಿವೆ. ಮಾನಸಿಕ ಖಿನ್ನತೆಗೊಳಗಾದ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಹೇಳಿಕೊಟ್ಟರೆ ಒಳ್ಳೆಯದಲ್ಲವೇ? ಎಂದು ಕೇಳುವ ಶಿಕ್ಷಕರಿದ್ದಾರೆ!
ಕೋಟದಂತಹ ನಗರಗಳು ದೇಶದೆಲ್ಲೆಡೆ ನಾಯಿಕೊಡೆಗಳಂತೆ ಚಿಗುರುತ್ತಿವೆ. ನನ್ನ ಮಗ/ಮಗಳು ಮನೆಯಲ್ಲಿ ಇದ್ದರೆ ಓದುವುದಿಲ್ಲ. ದೂರದ ಊರಿನ ಬೋರ್ಡಿಂಗ್ ಶಾಲೆಗೆ ಸೇರಿಸುವೆ ಎಂದು ಎಳೆಯ ವಯಸ್ಸಿನಲ್ಲಿಯೇ ಸೆರೆಮನೆಯಂತಹ ಶಾಲೆಗಳಿಗೆ ಬಿಟ್ಟುಬರುವ ಪೋಷಕರಿಗೇನು ಕೊರತೆಯಿಲ್ಲ. ಪ್ರಸಿದ್ಧ ಇಂಗ್ಲಿಷ್ ರೋಮ್ಯಾಂಟಿಕ್ ಕವಿ ಸಾಮ್ಯುಯೆಲ್ ಟೈಲರ್ ಕಾಲ್ರಿಡ್ಜ್ ಸೆರೆಮನೆಯಂತಹ ಸ್ಕೂಲಿನ ಕುರಿತು ತನ್ನ ಪದ್ಯ ‘ಫ್ರಾಸ್ಟ್ ಅಟ್ ಮಿಡ್‌ನೈಟ್’ನಲ್ಲಿ ಬರೆಯುತ್ತಾನೆ. ಹತ್ತೊಂಬತ್ತನೇ ಶತಮಾನದಲ್ಲೇ ಶಾಲೆಯ ಯಾತನಾನುಭವದ ಬಗ್ಗೆ ಪ್ರಸ್ತಾಪ ಮಾಡಿದ್ದ.
ಶಾಲಾ ಕೊಠಡಿಯ ಸರಳುಗಳ ಒಳಗಿಂದ ಇಣುಕಿ ನೋಡುತ್ತಾ ಹುಟ್ಟೂರಿನ ಚರ್ಚ್, ಸುಮಧುರ ಸಂಗೀತ, ಮರಳು ತುಂಬಿದ ತಡಿಗಳು, ಸರೋವರಗಳು, ಪ್ರಾಚೀನ ಪರ್ವತಗಳು, ಆಗಸ, ತಾರೆಗಳ ಕನಸು ಕಾಣುತ್ತಾನೆ ಕಾಲ್ರಿಡ್ಜ್. ತತ್ ಕ್ಷಣ ಆತ ಪುಳಕಿತನಾಗುತ್ತಾನೆ. ಪ್ರಕೃತಿ ಚಿರವಾದ ಭಾಷೆ ಬಳಸಿ ನಮ್ಮೊಡನೆ ಸಮಾಲೋಚನೆ ನಡೆಸುತ್ತಲೇ ಇರುತ್ತದೆ, ಪ್ರಕೃತಿಗಿಂತ ಮಿಗಿಲಾದ ಶಿಕ್ಷಕನಿಲ್ಲ ಎಂಬ ತೀರ್ಪು ನೀಡುತ್ತಾನೆ. ವರ್ಡ್ಸ್‌ವರ್ತ್ ಕೂಡ ತನ್ನ ಲೂಸಿ ಪದ್ಯಗಳಲ್ಲಿ ಇದನ್ನೇ ಹೇಳುತ್ತಾನೆ.
ನಾವು ಬದುಕುತ್ತಿರುವ ಅಸಮಾನತೆಯ ಸಮಾಜದಲ್ಲಿ ಬಡವರು/ಮಧ್ಯಮ ವರ್ಗದವರು ಅನುಭವಿಸುವ ದಿನನಿತ್ಯದ ಅವಮಾನ, ಮೂಕ ವೇದನೆ ಅವರಲ್ಲಿ ನನ್ನ ಮಕ್ಕಳು ಮೆಡಿಕಲ್ ಅಥವಾ ಇಂಜಿನಿಯರಿಂಗ್ ಮಾಡಿ ಉನ್ನತಾಧಿಕಾರಿಗಳಾಗಲಿ ಎಂಬ ತೀವ್ರ ತುಡಿತಕ್ಕೆ ಜನ್ಮನೀಡುತ್ತದೆ. ಈ ಉತ್ಕಟ ತುಡಿತ ಸಹಜ ಕೂಡ. ಬಡವರ ಬವಣೆ, ಅಸಹಾಯಕತೆ, ಸಮಾಜದಲ್ಲಿರುವ ಅಸಮಾನತೆ, ತಾತ್ಸಾರಗಳಿಂದ ಕೋಟದಂತಹ ಮಾಯಾನಗರಿಗಳು ಉದ್ಭವವಾಗುತ್ತವೆ. ಇveಡಿಥಿboಜಥಿ ಟoves ಣhe Pooಡಿ. ಎಲ್ಲರೂ ಹತಾಶ ಬಡವರನ್ನು ಪ್ರೀತಿಸುತ್ತಾರೆ. ಅವರನ್ನು ಸುಲಿಗೆ ಮಾಡುವುದು ಸುಲಭ.
1950ರ ದಶಕದಲ್ಲಿ ಇಂಗ್ಲೆಂಡಿನ ಲಿವರ್‌ಪೂಲ್ ನಗರದ ಶಾಲೆಯಲ್ಲಿ ಪಾಲ್ ಮೆಕಾರ್ಟ್ನಿ ಮತ್ತು ಜಾರ್ಜ್ ಹ್ಯಾರಿಸನ್ ಓದುತ್ತಿದ್ದರು. ಸರಳವಾಗಿ ಹೇಳಬೇಕೆಂದರೆ ಪ್ರಖ್ಯಾತ ಬೀಟಲ್ ಬ್ಯಾಂಡ್ ಆ ತರಗತಿಯ ಟೀಚರ್ ಮುಂದಿತ್ತು! ಇವರಿಬ್ಬರಿಗಿದ್ದ ಅದ್ಭುತ ಪ್ರತಿಭೆಯನ್ನು ಶಾಲೆಯ ಯಾರೊಬ್ಬ ಶಿಕ್ಷಕನೂ ಗುರುತಿಸಿರಲಿಲ್ಲ. ಅಮೆರಿಕನ್ ಸಂಗೀತ ಮಾಂತ್ರಿಕ ಎಲ್ವಿಸ್ ಪ್ರೆಸ್ಲೆಯನ್ನು ಶಾಲಾ ಸಂಗೀತ ಗುಂಪಿನಿಂದ ತೆಗೆದುಹಾಕಲಾಯಿತು. ಭಾರತದಲ್ಲಿ 2023ರಲ್ಲೂ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡುವಲ್ಲಿ ಶಿಕ್ಷಕರು ಸೋತಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯಗಳಿಲ್ಲ.
ಹಾಗಾದರೆ ಶಿಕ್ಷಕರ ಜವಾಬ್ದಾರಿ ಏನು? ಕೆನ್ ರಾಬಿನ್ಸನ್ ಹೇಳುವ ಹಾಗೆ ‘‘ಜ್ಞಾನವೆಂಬುದು ನಮಗೆ ತಿಳಿದದ್ದು ಮಾತ್ರವಲ್ಲ. ಜ್ಞಾನವೆಂಬುದು ನಮ್ಮ ತಿಳಿವಿಗೆ ಬಾರದ್ದು ಕೂಡ.’’ ಆದ್ದರಿಂದ ವಿದ್ಯಾರ್ಥಿಗಳೊಡನೆ ನಿರಂತರ ಕಲಿಕೆಯಲ್ಲಿ ತೊಡಗಿಕೊಂಡರೆ ಮಾತ್ರ ಶ್ರೇಷ್ಠ ಬೋಧಕರಾಗುತ್ತಾರೆ.
ಎಲ್ಲರಿಗೂ ಎಲ್ಲವೂ ತಿಳಿದಿರಬೇಕೆಂಬುದು ಬಹುಶಃ ನಮ್ಮ ಶಿಕ್ಷಣ ಕ್ಷೇತ್ರದ ಅತಿದೊಡ್ಡ ದುರಂತ. ಇಲ್ಲಿ ತಿಳಿದಿರುವವನು ಕೇಳುವ ಪ್ರಶ್ನೆಗೆ ಉತ್ತರಿಸಬೇಕು. ಉತ್ತರಿಸದಿದ್ದಲ್ಲಿ ವಿದ್ಯಾರ್ಥಿ ಫೇಲ್ ಆಗುತ್ತಾನೆ. ಫೇಲ್ ಆಗದೆ ಇರುವಂತೆ ನೋಡಿಕೊಳ್ಳಲು ಕೋಚಿಂಗ್ ಸೆಂಟರ್‌ಗಳಿವೆ. ಪೋಷಕರ ಭಯ, ವಿದ್ಯಾರ್ಥಿಗಳ ಆತಂಕ, ಭರ್ಜರಿ ಜಾಹೀರಾತುಗಳ ಆಮಿಷಗಳಿಂದ ಕೋಚಿಂಗ್ ಸೆಂಟರ್‌ಗಳು ಕೋಟ್ಯಂತರ ರೂ.ವ್ಯವಹಾರ ನಡೆಸುತ್ತಿವೆ. ಬಹುಶಃ ಶಿಕ್ಷಣ ಕ್ಷೇತ್ರದಷ್ಟು ವ್ಯಾಪಾರೀಕರಣ ಮತ್ತು ಖಾಸಗೀಕರಣಗೊಂಡಿರುವ ವಲಯ ಬೇರೊಂದಿಲ್ಲ. (ಇನ್ನು ಮೆರಿಟ್ ಅನ್ನುವುದು ಪ್ರತಿಭೆ, ಬುದ್ಧಿವಂತಿಕೆಗೆ ಮಾತ್ರ ಸೀಮಿತವಾಗದೆ ಪೌಷ್ಟಿಕ ಆಹಾರ, ಬೋಧನಾ ವಿಧಾನ, ಭಾಷೆ, ಸುದೀರ್ಘ ಕಾಲ ದೊರೆತ ಸವಲತ್ತುಗಳ ಮೇಲೆ ಆಧರಿಸಿದೆ ಎಂಬುದನ್ನು ಪೋಷಕರು ಒಪ್ಪಿಲ್ಲ.)
ತರಗತಿಯ ಶಿಕ್ಷಕ-ವಿದ್ಯಾರ್ಥಿ ಅನುಪಾತ, ಉಣಲು ಸಿಗುವ ಪೌಷ್ಟಿಕ ಆಹಾರ, ಪೋಷಕರ ನೈತಿಕ ಬೆಂಬಲ, ನಿರೀಕ್ಷೆಗಳ ಒತ್ತಡ, ಅನಾರೋಗ್ಯಕರ ಸ್ಪರ್ಧಾತ್ಮಕ ಜಗತ್ತು, ಜಾತಿ ನಿಂದನೆ, ತಾರತಮ್ಯ, ಬೇಕೆಂದೇ ಶಿಕ್ಷಣ ಕ್ಷೇತ್ರದಲ್ಲಿ ಪದೇ ಪದೇ ಸೃಷ್ಟಿಸಲಾಗುವ ಗೊಂದಲ, ಶಿಕ್ಷಣದ ವ್ಯವಸ್ಥಿತ ನಿರಾಕರಣೆಗಳಿಂದ ಬಡವರ ಮಕ್ಕಳ ಕಲಿಕೆ ಕುಂಠಿತವಾಗುವಂತೆ ಖಾತರಿ ಪಡಿಸಿಕೊಳ್ಳುವ ವ್ಯವಸ್ಥೆ... ಶಿಕ್ಷಣವೆಂಬುದಕ್ಕೆ ಎಷ್ಟೆಲ್ಲಾ ಆಯಾಮಗಳಿವೆ. ನಾವು ಈ ಕುರಿತು ಎಷ್ಟು ಚರ್ಚಿಸಿದರೂ ಕಡಿಮೆಯೇ.
ಕೋಟದಲ್ಲಿ ಆತ್ಮಹತ್ಯೆಗಳು ಹೆಚ್ಚಾದಂತೆಲ್ಲಾ, ಎಚ್ಚೆತ್ತುಕೊಂಡ ಪ್ರಭುತ್ವ ವಿದ್ಯಾರ್ಥಿ ಕೊಠಡಿಗಳ ಸೀಲಿಂಗ್ ಫ್ಯಾನ್‌ಗಳಿಗೆ ಸ್ಪ್ರಿಂಗ್ ಅಳವಡಿಸುವಂತೆ ಎಲ್ಲಾ ಹಾಸ್ಟೆಲ್ ವಾರ್ಡನ್‌ಗಳಿಗೆ ಹಾಗೂ ಪೇಯಿಂಗ್ ಗೆಸ್ಟ್ ಹೌಸ್ ಮಾಲಕರಿಗೆ ಸೂಚನೆ ನೀಡಿದೆಯಂತೆ!
ಕುಟುಂಬಕ್ಕೆ ನಿಮ್ಮ ಇರುವಿಕೆ ಮುಖ್ಯ, ನೀಟ್, ಜೆಇಇ ಪಾಸಾಗದಿದ್ದರೆ ಏನಂತೆ ಹರುಷಕ್ಕಿದೆ ದಾರಿ ಎಂದು ಹೇಳಲು ಪೋಷಕರು, ಶಿಕ್ಷಕರು ಹಿಂಜರಿಯುತ್ತಿದ್ದಂತೆ, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಲು ನವನವೀನ ವಿಧಾನಗಳ ಆವಿಷ್ಕಾರದಲ್ಲಿ ತೊಡಗಿದ್ದಾರೆ.