ಭಾರತದಲ್ಲಿ ಚಲಾವಣೆಯಲ್ಲಿತ್ತು 10,000 ರೂ.ನೋಟು!
ಅದನ್ನು ರದ್ದುಗೊಳಿಸಿದ್ದೇಕೆ ಗೊತ್ತೇ?
ಹೊಸದಿಲ್ಲಿ: 2016ರಲ್ಲಿ ನೋಟು ನಿಷೇಧದ ಬಳಿಕ ಪರಿಚಯಿಸಲಾಗಿದ್ದ 2,000 ರೂ.ನೋಟು (ಈಗ ಚಲಾವಣೆಯಿಂದ ಹಿಂದೆಗೆದುಕೊಳ್ಳಲಾಗಿದೆ) ಭಾರತದ ಅತ್ಯಂತ ಹೆಚ್ಚಿನ ಮುಖಬೆಲೆಯ ನೋಟು ಎಂದು ಹೆಚ್ಚಿನವರು ಇಂದು ಭಾವಿಸಿದ್ದಾರೆ.
ಆದರೆ 5,000 ರೂ. ಮತ್ತು 10,000 ರೂ.ನಂತಹ ಇನ್ನೂ ಹೆಚ್ಚಿನ ಮುಖಬೆಲೆಗಳ ನೋಟುಗಳು ಭಾರತದ ವಿತ್ತೀಯ ವ್ಯವಸ್ಥೆಯ ಭಾಗವಾಗಿದ್ದ ಕಾಲವೊಂದಿತ್ತು. ದೇಶದ ಆರ್ಥಿಕ ಇತಿಹಾಸದಲ್ಲಿ ಕಡಿಮೆ ತಿಳಿದಿರುವ ಈ ಅಧ್ಯಾಯವು ಭಾರತದ ನೋಟುಗಳ ವಿಕಸನವನ್ನು ಎತ್ತಿ ತೋರಿಸುತ್ತದೆ.
10,000 ರೂ.ನೋಟಿನ ಸಂಕ್ಷಿಪ್ತ ಇತಿಹಾಸ:
ಭಾರತದ 10,000 ರೂ.ನೋಟು ಸ್ವಾತಂತ್ರ್ಯಪೂರ್ವ ಯುಗದಲ್ಲಿ ತನ್ನ ಮೂಲವನ್ನು ಹೊಂದಿದೆ.
1938ರಲ್ಲಿ ಆರ್‌ಬಿಐ ಮೊದಲ 10,000 ರೂ.ನೋಟನ್ನು ವಿತರಿಸಿದ್ದು,ಇದು ದೇಶದ ಇತಿಹಾಸದಲ್ಲಿ ಚಲಾವಣೆಗೊಂಡ ಅತ್ಯಂತ ಹೆಚ್ಚಿನ ಮುಖಬೆಲೆಯಾಗಿತ್ತು. ಇದನ್ನು ಮುಖ್ಯವಾಗಿ ಉದ್ಯಮಿಗಳು ಮತ್ತು ವ್ಯಾಪಾರಿಗಳು ಹೆಚ್ಚಿನ ಮೌಲ್ಯದ ವಹಿವಾಟುಗಳಿಗಾಗಿ ಬಳಸುತ್ತಿದ್ದರು ಮತ್ತು ಸಾಮಾನ್ಯ ನಾಗರಿಕರು ಇದನ್ನು ಬಳಸುವುದು ಅಪರೂಪವಾಗಿತ್ತು.
ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಉತ್ತುಂಗಕ್ಕೇರಿದ್ದ ಅಕ್ರಮ ದಾಸ್ತಾನು ಮತ್ತು ಕಾಳಸಂತೆ ಚಟುವಟಿಕೆಗಳನ್ನು ನಿಗ್ರಹಿಸಲು 10,000 ರೂ.ನೋಟನ್ನು ರದ್ದುಗೊಳಿಸಲು ಬ್ರಿಟಿಷ್ ಸರಕಾರವು 1946,ಜನವರಿಯಲ್ಲಿ ನಿರ್ಧರಿಸಿತ್ತು. ಆದರೆ 1954ರಲ್ಲಿ 10,000 ರೂ.ನೋಟನ್ನು ಮರುಪರಿಚಯಿಸಲಾಗಿತ್ತು ಮತ್ತು 5,000 ರೂ.ನಂತಹ ಇತರ ದೊಡ್ಡ ಮುಖಬೆಲೆಗಳ ಜೊತೆಗೆ ಚಲಾವಣೆಯಲ್ಲಿ ಮುಂದುವರಿದಿತ್ತು.
ಇದನ್ನು ರದ್ದುಗೊಳಿಸಿದ್ದೇಕೆ?
10,000 ರೂ.ನೋಟಿನ ಭವಿಷ್ಯವು 1978ರಲ್ಲಿ ಇನ್ನೊಂದು ತಿರುವನ್ನು ಪಡೆದುಕೊಂಡಿತ್ತು. ಸ್ವತಂತ್ರ ಭಾರತದ ಸರಕಾರವು 5,000 ರೂ.ನೋಟಿನ ಜೊತೆಗೆ 10,000 ರೂ.ನೋಟನ್ನು ಮತ್ತೆ ನಿಷೇಧಿಸಲು ನಿರ್ಧರಿಸಿತ್ತು.
ಆ ಸಮಯದಲ್ಲಿ ಈ ಹೆಚ್ಚಿನ ಮೌಲ್ಯದ ನೋಟುಗಳು ಜನಸಾಮಾನ್ಯರಿಂದ ವ್ಯಾಪಕವಾಗಿ ಬಳಕೆಯಲ್ಲಿರಲಿಲ್ಲ. ಹೆಚ್ಚಾಗಿ ವ್ಯಾಪಾರದಲ್ಲಿ ದೊಡ್ಡ ಮೊತ್ತದ ವಹಿವಾಟುಗಳಿಗೆ ಅಥವಾ ಹೆಚ್ಚು ಕಳವಳಕಾರಿಯಾಗಿ ಕಾಳಸಂತೆ ವ್ಯವಹಾರಗಳಲ್ಲಿ ಬಳಕೆಯಾಗುತ್ತಿದ್ದವು.
ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಸರಕಾರದ ಕ್ರಮವು ಹಣಕಾಸು ಅವ್ಯವಹಾರಗಳನ್ನು ಮತ್ತು ದೊಡ್ಡ ಮೊತ್ತಗಳ ಅಕ್ರಮ ಬಳಕೆಯನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿತ್ತು.
ಈ ನೋಟು ನಿಷೇಧದ ಪರಿಣಾಮವು ತುಲನಾತ್ಮಕವಾಗಿ ಗೌಣವಾಗಿತ್ತು. ಆರ್‌ಬಿಐ ದತ್ತಾಂಶಗಳಂತೆ 1976,ಮಾ.31ಕ್ಕೆ ಇದ್ದಂತೆ ಚಲಾವಣೆಯಲ್ಲಿದ್ದ ಒಟ್ಟು ನಗದು ಮೊತ್ತವು 7,144 ಕೋಟಿ ರೂ.ಆಗಿತ್ತು. ಈ ಪೈಕಿ 1,000 ರೂ.ನೋಟುಗಳ ಮೌಲ್ಯ 87.91 ಕೋಟಿ ರೂ.ಆಗಿದ್ದು,ಇದು ಚಲಾವಣೆಯಲ್ಲಿದ್ದ ಒಟ್ಟು ನಗದಿನ ಕೇವಲ ಶೇ.1.2 ಆಗಿತ್ತು. 5,000 ರೂ.ನೋಟುಗಳ ಮೌಲ್ಯ 22.90 ಕೋಟಿ ರೂ.ಆಗಿತ್ತು. 10,000 ರೂ.ನೋಟುಗಳ ಸಂಖ್ಯೆ ಕೇವಲ 1,260 ಆಗಿದ್ದು,ಒಟ್ಟು ಮೌಲ್ಯ 1.26 ಕೋಟಿ ರೂ.ಆಗಿತ್ತು. ಒಟ್ಟಾರೆಯಾಗಿ ಹೆಚ್ಚಿನ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯ ಚಲಾವಣೆಯಲ್ಲಿದ್ದ ಒಟ್ಟು ಕರೆನ್ಸಿಯ ಶೇ.2ಕ್ಕೂ ಕಡಿಮೆಯಿತ್ತು.
5,000 ರೂ. ಮತ್ತು 10,000 ರೂ.ನೋಟುಗಳು ಈಗ ಭಾರತದ ಆರ್ಥಿಕ ಚರಿತ್ರೆಯ ಅವಶೇಷಗಳಾಗಿದ್ದರೂ ಅವುಗಳ ಇತಿಹಾಸವು ದೇಶದ ವಿತ್ತೀಯ ವಿಕಸನದ ಆಕರ್ಷಕ ಚಿತ್ರಣವನ್ನು ನೀಡುತ್ತಿವೆ.
ಕೃಪೆ: indiatoday.in