ಅರಬ್ ರಾಷ್ಟ್ರ ಯುಎಇ ಜೊತೆ ʼಭಾರತದ ಪ್ರಧಾನಿʼಯ ಪ್ರೇಮ : ಮೋದಿ ಅದಾನಿಗಾಗಿ ಕೆಲಸ ಮಾಡುತ್ತಿದ್ದಾರ?

ಪ್ರಧಾನಿ ನರೇಂದ್ರ ಮೋದಿ ʼಮುಸ್ಲಿಂ ರಾಷ್ಟ್ರʼ ಯುಎಇಗೆ ಕಳೆದ 10 ವರ್ಷಗಳಲ್ಲಿ 8 ಬಾರಿ ಭೇಟಿ ನೀಡಿದ್ದಾರೆ. ಯುಎಇ ಶೇಖ್‌ಗಳ ಜೊತೆ, ಅರಬ್ ರಾಷ್ಟ್ರದ ಜೊತೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ. 2015, 2016, 2018, 2019, 2022, 2023, 2024ರಲ್ಲಿ ಮೋದಿ ಯುಎಇಗೆ ಭೇಟಿ ನೀಡಿದ್ದಾರೆ.
ಇದು ಭಾರತದ ಪ್ರಧಾನಿಯೋರ್ವರು ಇದೇ ಮೊದಲ ಬಾರಿಗೆ ತನ್ನ ಅಧಿಕಾರವಧಿಯಲ್ಲಿ ಅತಿ ಹೆಚ್ಚು ಬಾರಿ ಅರಬ್ ರಾಷ್ಟ್ರವೊಂದಕ್ಕೆ ಭೇಟಿ ನೀಡಿದ್ದಾರೆ ಎಂಬುವುದನ್ನು ಸೂಚಿಸುತ್ತದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮತ್ತು ಖ್ಯಾತ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಹಿರಿಯ ಪತ್ರಕರ್ತ ರಾಜು ಪರುಳೇಕರ್ ʼಇವರು ಪಂಕ್ಚರ್ ಹಾಕುವ ಬಡ ಮುಸ್ಲಿಮರನ್ನು ದ್ವೇಷಿಸುತ್ತಾರೆ. ಆದರೆ, ಶ್ರೀಮಂತ ಶೇಖ್‌ಗಳೊಂದಿಗೆ ಉತ್ತಮ ಗೆಳೆತನವನ್ನಿಟ್ಟುಕೊಂಡಿದ್ದಾರೆ. ಇದು ಬಿಜೆಪಿ-ಆರೆಸ್ಸೆಸ್‌ನ ವಾಸ್ತವʼ ಎಂದು ಹೇಳಿದ್ದಾರೆ.
ಅರಬ್ ರಾಷ್ಟ್ರ ಯುಎಇ ಭಾರತದ ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯನ್ನು ನೀಡಿದೆ. ಇತರ ಅರಬ್ ರಾಜ್ಯಗಳಾದ ಕುವೈತ್, ಬಹರೈನ್ ಮತ್ತು ಫೆಲೆಸ್ತೀನ್ ಕೂಡ ಮೋದಿಗೆ ಇದೇ ರೀತಿಯ ಸಮಾನ ಗೌರವವನ್ನು ನೀಡಿದೆ. ಮೋದಿ ಆಡಳಿತದ ಕಳೆದ 10 ವರ್ಷಗಳ ಅವಧಿಯಲ್ಲಿ ಯುಎಇ ರಾಜಕುಮಾರ ಭಾರತಕ್ಕೆ ಬರೀ ಮೂರು ಅಂದರೆ 2016, 2017, 2023ರಲ್ಲಿ ಭೇಟಿ ನೀಡಿದ್ದಾರೆ. ಇದನ್ನು ಗಮನಿಸಿದಾಗ ಮೋದಿಗೆ ಭಾರತಕ್ಕೆ ಬರಲು ಯುಎಇ ರಾಜಕುಮಾರ ತೋರಿರುವ ಆಸಕ್ತಿಗಿಂತ ಹೆಚ್ಚು ಮೋದಿ ಯುಎಇಗೆ ತೆರಳಲು, ಅಲ್ಲಿನ ಶೇಖ್ ಗಳ ಜೊತೆ ಬಾಂಧವ್ಯವನ್ನು ಬೆಳೆಸಲು ಒಲವು ತೋರಿದ್ದಾರೆ ಎಂಬುವುದನ್ನು ತೋರಿಸುತ್ತದೆ.
2024ರ ಜನವರಿಯಲ್ಲಿ ಅವರನ್ನು ಗುಜರಾತ್ ಗ್ಲೋಬಲ್ ಶೃಂಗಸಭೆಯ ಮುಖ್ಯ ಅತಿಥಿಯಾಗಿ ಯುಎಇ ಅಧ್ಯಕ್ಷ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಆಗಮಿಸಿದ್ದರು. ಜನವರಿ 2025ರ ಮಾಧ್ಯಮ ವರದಿಗಳ ಪ್ರಕಾರ, ನರೇಂದ್ರ ಮೋದಿ ಅವರು ಏಪ್ರಿಲ್ 2025ರಲ್ಲಿ ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡುವಂತೆ ಯುಎಇ ರಾಜಕುಮಾರನನ್ನು ಆಹ್ವಾನಿಸಿದ್ದಾರೆ.
ಈ ಮಧ್ಯೆ ನಾವು ಕೆಲವೊಂದು ಅಂಶಗಳನ್ನು ಗಮನಿಸಬೇಕಿದೆ. 2023ರ ಜನವರಿಯಲ್ಲಿ ಹಿಂಡೆನ್ಬರ್ಗ್ ವರದಿ ಪ್ರಕಟವಾದ ಬಳಿಕ, ಅದಾನಿ ಎಂಟರ್ಪ್ರೈಸಸ್ ನ ಶೇರುಗಳ ವೌಲ್ಯವು ಕೊಡುಗೆ ದರ (Offer price)ಕ್ಕಿಂತ ಶೇ.20ರಷ್ಟು ಕುಸಿತವನ್ನು ಕಂಡಿವೆ. ಅದಾನಿ ಸಮೂಹವು ದಶಕಗಳಿಂದ ಶೇರು ವ್ಯವಹಾರಗಳಲ್ಲಿ ಅಕ್ರಮವನ್ನು ನಡೆಸಿದೆ ಹಾಗೂ ಲೆಕ್ಕಪತ್ರದಲ್ಲಿ ವಂಚನೆ ಎಸಗಿದೆಯೆಂದು ಹಿಂಡೆನ್ಬರ್ಗ್ ವಿತ್ತೀಯ ಸಂಶೋಧನಾ ಸಂಸ್ಥೆ ಆರೋಪಿಸಿದ ಬಳಿಕ ಆದಾನಿ ಉದ್ಯಮಸಮೂಹಕ್ಕೆ ಸೇರಿದ 7 ಕಂಪೆನಿಗಳ ಶೇರುಗಳು ವೌಲ್ಯವು ಕುಸಿಯಲ್ಪಟ್ಟಿತ್ತು. ಇದರ ಬಳಿಕ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್ಬಿಐ) ಸಾಗರ್ ಅದಾನಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸ್ವಾಧೀನಪಡಿಸಿಕೊಂಡಿದೆ. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ (DOJ) ಅದಾನಿ ಮತ್ತು ಇತರರನ್ನು ದೋಷಾರೋಪಣೆ ಮಾಡಿದೆ. ಆದರೆ ಈ ಸಂದರ್ಭದಲ್ಲಿ ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ (ADIA) ಜೊತೆಗೆ ಖತರ್ ಹೂಡಿಕೆ ಪ್ರಾಧಿಕಾರ(QIA) ಅದಾನಿಯನ್ನು ರಕ್ಷಿಸಲು ಮುಂದೆ ಬಂದಿದೆ ಎಂಬುವುದನ್ನು ಗಮನಿಸಬಹುದಾಗಿದೆ.
ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ (ಎಡಿಐಎ) ಮತ್ತು ಖತರ್ ಹೂಡಿಕೆ ಪ್ರಾಧಿಕಾರ (ಕ್ಯೂಐಎ) ಎರಡೂ ʼಅದಾನಿ ಎನರ್ಜಿʼಯಲ್ಲಿ ಸುಮಾರು 1 ಬಿಲಿಯನ್ ಡಾಲರ್ (ರೂ.8,500 ಕೋಟಿ) ಹೂಡಿಕೆ ಮಾಡಿವೆ. ಕತಾರ್ ಹೂಡಿಕೆ ಪ್ರಾಧಿಕಾರ(QIA) ಈಗಾಗಲೇ ಮುಂಬೈನಲ್ಲಿ ಅದಾನಿ ವಿದ್ಯುತ್ ವಿತರಣಾ ವ್ಯವಹಾರದಲ್ಲಿ 25% ಪಾಲನ್ನು ಹೊಂದಿದೆ. ಯುಎಇ ಈ ಹೂಡಿಕೆಗಳು ಅದಾನಿ ಗ್ರೂಪ್ ಗೆ ಲೈಫ್ಲೈನ್ ಆಗಿ ಕಾರ್ಯನಿರ್ವಹಿಸಿದೆ ಎನ್ನುವುದರಲ್ಲಿ ಸಂದೇಹವಿಲ್ಲ.
ಮೋದಿಯ ಯುಎಇ ಪ್ರೇಮ, ಅದಾನಿ ಸಾಮ್ರಾಜ್ಯ ಸಂಕಷ್ಟದಲ್ಲಿದ್ದಾಗ ಯುಎಇಯಿಂದ ರಕ್ಷಣೆ ಏನನ್ನು ಹೇಳುತ್ತದೆ? ಮೋದಿ ಅದಾನಿಗಾಗಿ ಕೆಲಸ ಮಾಡುತ್ತಿಲ್ಲವೇ? ಎಂದು ಪ್ರಶ್ನಿಸಿದ ಖ್ಯಾತ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಹಿರಿಯ ಪತ್ರಕರ್ತ ರಾಜು ಪರುಳೇಕರ್, RSS ಮತ್ತು BJP ವ್ಯವಸ್ಥೆಯ ವಾಸ್ತವ ಇದು. ಅವರು ಪಂಕ್ಚರ್ ಹಾಕುವ ಬಡ ಮುಸ್ಲಿಮರನ್ನು ದ್ವೇಷಿಸುತ್ತಾರೆ. ಆದರೆ, ಶ್ರೀಮಂತ ಶೇಖ್‌ಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಮುಂದಿನ ಬಾರಿ ಅವರು ಅಲ್ಪಸಂಖ್ಯಾತರನ್ನು ದೂಷಿಸಿದರೆ, ನರೇಂದ್ರ ಮೋದಿಯವರಿಗೆ ಯುಎಇಗೆ 8 ಬಾರಿ ಬೇಟಿ ನೀಡಿದ್ದನ್ನು ನೆನಪಿಸಬೇಕು. ಇದಲ್ಲದೆ ಯುಎಇ, ಫೆಲೆಸ್ತೀನ್, ಬಹರೈನ್ ಮತ್ತು ಕುವೈತ್‌ನಿಂದ ಅತ್ಯುನ್ನತ ನಾಗರಿಕ ಗೌರವಗಳನ್ನು ಸ್ವೀಕರಿಸಿರುವುದನ್ನು ನೆನಪಿಸಿಬೇಕಿದೆ ಎಂದು ಹೇಳಿದ್ದಾರೆ.