'ಒಳಮೀಸಲಾತಿ' ಯಾರನ್ನೂ ಮೀಸಲಾತಿ ಸೌಲಭ್ಯದಿಂದ ಹೊರಗಿಡುವುದಿಲ್ಲ: ನ್ಯಾ.ನಾಗಮೋಹನ್‌ದಾಸ್
ವಿಶೇಷ ಸಂದರ್ಶನ
ಬೆಂಗಳೂರು: ‘ಪರಿಶಿಷ್ಟರ ಒಳಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಯಾರನ್ನು ಮೀಸಲಾತಿ ಸೌಲಭ್ಯದಿಂದ ಹೊರಗಿಡುವುದಿಲ್ಲ, ಮೀಸಲಾತಿಯಿಂದ ಯಾರನ್ನೂ ವಂಚಿಸುವುದಿಲ್ಲ. ಯಾರೂ ಹೊರಗಿರುವವರನ್ನು ಹೊಸದಾಗಿ ಸೇರ್ಪಡೆ ಮಾಡುವುದಿಲ್ಲ. ಆದರೆ, ಅವರ ಪಾಲು ಅವರಿಗೆ ಸಿಗುವಂತೆ ಮಾಡಲಾಗುವುದು ಎಂದು ಒಳಮೀಸಲಾತಿ ಏಕಸದಸ್ಯ ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ದಾಸ್ ತಿಳಿಸಿದ್ದಾರೆ.
ಒಳಮೀಸಲಾತಿ ಜಾರಿಗಾಗಿ ಪೂರಕ ದತ್ತಾಂಶ ಸಂಗ್ರಹಿಸಿ ವರದಿ ಸಿದ್ಧಪಡಿಸಲು ರಾಜ್ಯ ಸರಕಾರ ನೇಮಿಸಿರುವ ಏಕ ಸದಸ್ಯ ಆಯೋಗದ ಅಧ್ಯಕ್ಷರಾದ ನ್ಯಾ.ನಾಗಮೋಹನ್ ದಾಸ್ ಅವರು, ಒಳಮೀಸಲಾತಿ ಕುರಿತು ಪರಿಶಿಷ್ಟ ಸಮುದಾಯಕ್ಕೆ ಆಗುವ ಉಪಯೋಗ ಸೇರಿದಂತೆ ಅನೇಕ ವಿಷಯಗಳನ್ನು ‘ವಾರ್ತಾಭಾರತಿ’ ಪತ್ರಿಕೆಯ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ವಾರ್ತಾಭಾರತಿ: ನ್ಯಾ.ಎ.ಜೆ.ಸದಾಶಿವ ಮತ್ತು ಕಾಂತರಾಜು ಆಯೋಗದ ವರದಿಯ ಆಧಾರದಿಂದ ಒಳಮೀಸಲಾತಿ ಜಾರಿ ಮಾಡಲು ಸಾಧ್ಯವಿಲ್ಲವೇ? ಈ ಕುರಿತು ನಿಮ್ಮ ಅಭಿಪ್ರಾಯವೇನು?.
ನ್ಯಾ.ನಾಗಮೋಹನ್ ದಾಸ್: ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ ೧೦೧ ಜಾತಿಗಳಿವೆ. ಅವರಿಗೆ ಶೇ.೧೫ರಷ್ಟು ಮೀಸಲಾತಿಯಿತ್ತು. ಒಳಮೀಸಲಾತಿ ಕಲ್ಪಿಸಲು ಎಂದು ಸರಕಾರ ನ್ಯಾ.ಎ.ಜೆ.ಸದಾಶಿವ ಆಯೋಗ ರಚಿಸಿತ್ತು. ಅವರು ವರದಿಯನ್ನು ಕೊಟ್ಟರು. ಆದರೆ ಆ ವರದಿಯನ್ನು ಸರಕಾರ ಅನೇಕ ವರ್ಷಗಳ ಕಾಲ ತೆಗೆದು ನೋಡಲಿಲ್ಲ. ವರದಿ ಹೊರಗೆ ಬರದಿದ್ದರೂ ಆ ವರದಿ ಬಗ್ಗೆ ಅನೇಕರು ಅಪಸ್ವರ ಎತ್ತಿದರು. ಲೋಪದೋಷ ಇದೆ ಎಂದು ಹೇಳಿದರು. ಈ ನಡುವೆ ರಾಜ್ಯ ಸರಕಾರ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಿ, ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕುರಿತು ವರದಿ ನೀಡಿ ಎಂದು ಹೇಳಿತ್ತು. ಅವರೂ ಕೂಡ ಮಾಡಿದ್ದರು. ಅದೂ ಹಾಗೆ ಉಳಿದಿದೆ. ಮಾಧುಸ್ವಾಮಿ ವರದಿಯ ಕಾರಣದಿಂದ ಎ.ಜೆ.ಸದಾಶಿವ ಆಯೋಗದ ವರದಿ ಅಪ್ರಸ್ತುತವಾಯಿತು. ಈ ಮಧ್ಯದಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವಂತೆ ೨೦೧೯ರಲ್ಲಿ ನನ್ನ (ನಾಗಮೋಹನ್ದಾಸ್) ನೇತೃತ್ವದಲ್ಲಿ ಆಯೋಗ ರಚನೆ ಮಾಡಿದರು. ೨೦೨೦ರಲ್ಲಿ ವರದಿ ನೀಡಿದೆ. ಎಸ್ಸಿಗಳಿಗೆ ಶೇ.೧೫ರಿಂದ ೧೭ರಷ್ಟು, ಎಸ್ಟಿಗಳಿಗೆ ಶೇ.೩ರಿಂದ ೫ರಷ್ಟು ಮೀಸಲಾತಿ ಹೆಚ್ಚಳ ಮಾಡಲಾಯಿತು. ಅದನ್ನು ಎಲ್ಲ ಪಕ್ಷಗಳು ಸರ್ವಾನುಮತದಿಂದ ಒಪ್ಪಿವೆ. ಸದನದಲ್ಲಿ ಕಾಯ್ದೆ ಆಗಿ ಜಾರಿಯಾಗಿದೆ. ಆ ವರದಿಯಲ್ಲಿ ಒಳಮೀಸಲಾತಿ ನೀಡಲು ತಿಳಿಸಿದ್ದೇನೆ. ಆದರೆ ಆಗ ಕಾನೂನಿನಲ್ಲಿ ಕೆಲವು ತೊಡಕುಗಳಿದ್ದವು. ೨೦೨೪ರ ಆಗಸ್ಟ್ ೧ರಂದು ಸುಪ್ರೀಂ ಕೋರ್ಟ್ ರಾಜ್ಯ ಸರಕಾರಗಳಿಗೆ ಒಳಮೀಸಲಾತಿ ನೀಡುವ ಅಧಿಕಾರವಿದೆ ಎಂದು ಹೇಳಿದೆ.
ವಾ.ಭಾ.: ಒಳಮೀಸಲಾತಿ ಜಾರಿಗಾಗಿ ನಿಮ್ಮ ನೇತೃತ್ವದ ಆಯೋಗದ ರಚನೆ ಮಾಡುವ ಅಗತ್ಯ ಇರಲಿಲ್ಲ ಎಂಬುದು ಕೆಲವರ ವಾದ! ಇದರ ಬಗ್ಗೆ ತಾವು ಏನು ಹೇಳುತ್ತೀರಿ?
ನಾಗಮೋಹನ್ ದಾಸ್: ಇದು ತಪ್ಪು. ಯಾಕೆಂದರೆ ಸಾಮಾಜಿಕವಾಗಿ ಹಿಂದುಳಿದಿರುವಿಕೆಯ ಆಧಾರದ ಮೇಲೆ ವರ್ಗೀಕರಣ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳುತ್ತೆ. ಸಾರ್ವಜನಿಕ ಉದ್ಯೋಗದಲ್ಲಿ ಸಮಾನ ಪ್ರಾತಿನಿಧ್ಯ ಇರುವ ಬಗ್ಗೆ ಕಂಡುಕೊಳ್ಳಬೇಕು. ಇವೆರಡನ್ನು ಮಾಡಬೇಕಾದರೆ ದತ್ತಾಂಶ ಸಂಗ್ರಹಿಸಬೇಕು. ಇದನ್ನು ಸರಕಾರ ಮಾಡದೇ ಒಳಮೀಸಲಾತಿ ಜಾರಿಗೊಳಿಸಿದರೆ, ಕೋರ್ಟ್ಗಳಲ್ಲಿ ರದ್ದಾಗುತ್ತದೆ. ಹಾಗಾಗಿ ಸರಕಾರ ಸುಪ್ರೀಂಕೋರ್ಟ್ ತೀರ್ಪಿನ ಮಾನದಂಡಗಳ ಪ್ರಕಾರ ಈ ಆಯೋಗ ರಚನೆ ಮಾಡಿದೆ.
ವಾ.ಭಾ.: ಒಳಮೀಸಲಾತಿ ಜಾರಿಗಾಗಿ ಅಗತ್ಯ ದತ್ತಾಂಶಗಳ ವರದಿ ನೀಡಲು ನಿಮ್ಮ ಮುಂದಿರುವ ಸವಾಲುಗಳೇನು?
ನಾಗಮೋಹನ್ ದಾಸ್: ಸುಪ್ರೀಂಕೋರ್ಟ್ ಮಾನದಂಡದ ಪ್ರಕಾರ ವರದಿ ತಯಾರಿಸುವ ಪ್ರಯತ್ನದಲ್ಲಿ ನಾವಿದ್ದೇವೆ. ದತ್ತಾಂಶಗಳನ್ನು ಸಂಗ್ರಹಿಸುವ ಕೆಲಸ ಪ್ರಾರಂಭ ಮಾಡಿದ್ದೇವೆ. ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಪತ್ರ ಬರೆದು ಅದರಲ್ಲಿ ಎಸ್ಸಿಗಳಿಗೆ, ಎಷ್ಟು ದಾಖಲಾತಿ ಮಾಡಿಕೊಳ್ಳಲಾಗಿದೆ. ಎಸ್ಸಿಗಳಲ್ಲಿ ಇರುವ ಯಾವ್ಯಾವ ಉಪಜಾತಿಗಳಿಗೆ ಎಷ್ಟು ಸೀಟುಗಳು ಸಿಕ್ಕಿವೆ. ವಿವಿಯಲ್ಲಿ ಉದ್ಯೋಗ ಪ್ರಮಾಣ ಎಷ್ಟಿದೆ? ಎಸ್ಸಿಗಳಿಗೆ ಎಷ್ಟು ಉದ್ಯೋಗ ನೀಡಲಾಗಿದೆ.
ಅದರ ಉಪಜಾತಿಗಳಿಗೆ ನೀಡಿರುವ ಉದ್ಯೋಗ ಮಾಹಿತಿ ಪಡೆದುಕೊಳ್ಳುತ್ತೇವೆ. ಅದೇ ರೀತಿ ೪೩ ಸರಕಾರಿ ಇಲಾಖೆಗಳ ಉದ್ಯೋಗ, ಸ್ಥಳೀಯ ಸಂಸ್ಥೆ, ಎಂಎಲ್ಎ, ಎಂಪಿಗಳಲ್ಲಿ ಎಸ್ಸಿಗಳ ಪ್ರಾತಿನಿಧ್ಯದ ಬಗ್ಗೆ ದತ್ತಾಂಶ ಸಂಗ್ರಹಿಸುತ್ತೇವೆ. ಅದರ ಜತೆಗೆ ಎಸ್ಸಿ, ಎಸ್ಟಿಗಳಿಗೆ ಇರುವ ಅನೇಕ ನಿಗಮಗಳಲ್ಲಿ ಯಾವ್ಯಾವ ಜಾತಿಗೆ ಏನೇನು ಅನುಕೂಲ ಸಿಕ್ಕಿವೆ. ಈ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇವೆ. ಈ ಮಾಹಿತಿ ಸಂಗ್ರಹಿಸಿದ ನಂತರ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಕಂಡುಹಿಡಿಯಲು ಸಾಧ್ಯ. ಸಾರ್ವಜನಿಕ ಉದ್ಯೋಗದಲ್ಲಿ ಪ್ರಾತಿನಿಧ್ಯ, ಜತೆಗೆ ಶೈಕ್ಷಣಿಕ ಸ್ಥಿತಿಗತಿ ಕಂಡುಹಿಡಿಯಲು ಸಾಧ್ಯವಾಗುತ್ತದೆ.
ವಾ.ಭಾ.: ಎಲ್ಲ ದತ್ತಾಂಶ ಸಂಗ್ರಹಿಸಲು ಸರಕಾರ ನಿಮಗೆ ನೀಡಿರುವ ಕಾಲವಕಾಶ ಸಾಕಾಗುತ್ತಾ?
ನಾಗಮೋಹನ್ ದಾಸ್: ನಾವು ಕೆಲಸ ಮಾಡಲು ಪ್ರಾರಂಭಿಸಿದ ದಿನದಿಂದ ೨ ತಿಂಗಳವರೆಗೆ ಸಮಯ ನೀಡಿದ್ದು, ಜ.೧ರಿಂದ ಕೆಲಸ ಪ್ರಾರಂಭಿಸಿದ್ದೇವೆ. ಇನ್ನು ತಜ್ಞರು, ಸಿಬ್ಬಂದಿ, ತಾಂತ್ರಿಕ ಸಹಾಯಕರನ್ನು ನೇಮಕ ಮಾಡಿಕೊಳ್ಳಬೇಕು. ಇಲಾಖೆಗಳಿಗೆ ಕರೆಸ್ಪಾಂಡೆನ್ಸ್ಗಳನ್ನು ಮಾಡಬೇಕು. ಇವರಿಂದ ಎಲ್ಲ ವರದಿಗಳು ಸಮಯಕ್ಕೆ ಸರಿಯಾಗಿ ಸಿಕ್ಕರೆ ಕೆಲಸ ಬೇಗ ಮುಗಿಯುತ್ತದೆ.
ವಾ.ಭಾ.: ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಜಾರಿಯಾದರೆ ಏನೇನು ಬದಲಾವಣೆಗಳು ಆಗುತ್ತವೆ?
ನಾಗಮೋಹನ್ ದಾಸ್: ಯಾವ ಸಮುದಾ ಯಗಳಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ಇಲ್ಲವೋ ಅವರಿಗೆ ಪ್ರಾತಿನಿಧ್ಯ ಸಿಗುತ್ತದೆ. ಅವರಿಗೆ ಒಂದು ಧ್ವನಿ, ಅವಕಾಶ ವಂಚಿತರಿಗೆ ಅವಕಾಶ ಸಿಗುತ್ತವೆ. ಮೀಸಲಾತಿ ಎನ್ನುವುದು, ಬಡತನ ನಿವಾರಣೆ ಮಾಡುವ ಕಾರ್ಯಕ್ರಮ ಅಲ್ಲ. ಜಾತಿ ನಿವಾರಣೆ ಮಾಡುವ ಕಾರ್ಯಕ್ರಮವೂ ಅಲ್ಲ. ಉದ್ಯೋಗ ನೀಡುವ ಕಾರ್ಯಕ್ರಮವೂ ಅಲ್ಲ. ಮೀಸಲಾತಿ ಎನ್ನುವುದು ಒಂದು ಅವಕಾಶವಾಗಿದೆ. ಶತಮಾನಗಳ ಕಾಲ ಯಾವ ಸಮುದಾಯಗಳಿಗೆ ನೀರಿನ ಹಕ್ಕು ನೀಡಿಲ್ಲವೋ, ಮಾತಿನ ಹಕ್ಕು, ಅಧಿಕಾರ ಹಂಚಿಕೆಯ ಹಕ್ಕು ನೀಡಿಲ್ಲವೋ, ಅವರಿಗೆ ಅವರ ಹಕ್ಕುಗಳನ್ನು ನೀಡುವುದೇ ಮೀಸಲಾತಿಯ ಉದ್ದೇಶ.
ವಾ.ಭಾ.: ಒಳಮೀಸಲಾತಿ ವಿಷಯದಲ್ಲಿ ರಾಜಕೀಯ ಒತ್ತಡ ಏನಾದರೂ ಇದೆಯೇ?.
ನಾಗಮೋಹನ್ ದಾಸ್: ಯಾವ ಒತ್ತಡವೂ ಇಲ್ಲ. ಆದರೆ ಒತ್ತಡ ಇದ್ದರೂ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ನನ್ನಲ್ಲಿ ಇದೆ.
ವಾ.ಭಾ.: ಒಳಮೀಸಲಾತಿ ಜಾರಿ ಯಾಗುವು ದರಿಂದ ದಲಿತರೊಳಗಿನ ಉಪಜಾ ತಿಗಳಿಗೆ ಯಾವ ರೀತಿ ಅವಕಾಶ ಸಿಗುತ್ತವೆ.
ನಾಗಮೋಹನ್ ದಾಸ್: ಎಸ್ಸಿಗಳಿಗೆ ಶೇ.೧೭ರಷ್ಟು ಮೀಸಲಾತಿ ಇದೆ. ಅದರಲ್ಲಿ ೧೦೧ ಜಾತಿಗಳಿವೆ. ಅವರೆಲ್ಲರೂ ಸಮಾನರಲ್ಲ. ಬಲಿಷ್ಠರೂ ಇದ್ದಾರೆ. ಕಡಿಮೆ ಶಕ್ತಿ ಇರುವವರೂ ಇದ್ದಾರೆ. ಮಧ್ಯಮದವರೂ ಇದ್ದಾರೆ. ಬಹಳ ಬಡವರೂ ಇದ್ದಾರೆ. ಆದ್ದರಿಂದ ಒಳಮೀಸಲಾತಿಯಿಂದ ಅವರ ಪಾಲು ಅವರಿಗೆ ಸಿಗುತ್ತದೆ. ಇಲ್ಲವಾದರೆ ಬಡವರ ಮಕ್ಕಳು ಅಧಿಕಾರಿಗಳು ಮತ್ತು ರಾಜಕಾರಣಿಗಳ ಮಕ್ಕಳೊಂದಿಗೆ ಸ್ಪರ್ಧೆ ಮಾಡಲು ಆಗುವುದಿಲ್ಲ. ಅವರೆಲ್ಲರೂ ಉತ್ತಮ ಶಿಕ್ಷಣ ಒದಗಿಸುತ್ತಾರೆ. ಅವರ ಮನೆಯಲ್ಲಿ ಅಗತ್ಯ ಸೌಲಭ್ಯಗಳೂ
ಇರುತ್ತವೆ.