ಪ್ರದರ್ಶನಗೊಂಡದ್ದು ಶಕ್ತಿಯೇ? ದೌರ್ಬಲ್ಯವೇ?
ಸಾಮಾಜಿಕ ನ್ಯಾಯದ ಬಂಡಿ ಮೀಸಲಾತಿಯಿಂದ ಒಳಮೀಸಲಾತಿ ಕಡೆ ಚಲಿಸುತ್ತಿದೆ. ಪರಿಶಿಷ್ಟ ಜಾತಿ ಜನರ ಜೊತೆಯಲ್ಲಿ ಹಿಂದುಳಿದ ಜಾತಿಗಳಲ್ಲಿಯೂ ಒಳಮೀಸಲಾತಿಯ ಕೂಗು ಕೇಳಿಸತೊಡಗಿದೆ. ಕುತೂಹಲಕಾರಿ ಬೆಳವಣಿಗೆಯಲ್ಲಿ ಹಿಂದುಳಿದ ಜಾತಿಗಳೊಳಗೆ ಒಳಮೀಸಲಾತಿ ಕಲ್ಪಿಸುವ ಉದ್ದೇಶಕ್ಕಾಗಿಯೇ ಕೇಂದ್ರ ಸರಕಾರ ನೇಮಿಸಿದ್ದ ನ್ಯಾಯಮೂರ್ತಿ ರೋಹಿಣಿ ಅವರ ನೇತೃತ್ವದ ಆಯೋಗ ತನ್ನ ವರದಿ ನೀಡಿದೆ. ಇದನ್ನು ಬಳಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದುಳಿದ ಜಾತಿಗಳನ್ನು ಒಡೆಯಲು ಬಿಜೆಪಿ ಹುನ್ನಾರ ನಡೆಸುತ್ತಿರುವುದು ಕೂಡಾ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಈಡಿಗ, ಬಿಲ್ಲವ, ದೀವ, ಹಳೆಪೈಕ ಮತ್ತಿತರ ಅತಿ ಹಿಂದುಳಿದ ಜಾತಿಗಳ ಸಮಾವೇಶ, ಆ ಸಮುದಾಯಗಳ ಪ್ರಾತಿನಿಧ್ಯದ ಬಗ್ಗೆ ಗಂಭೀರವಾಗಿ ಚಿಂತನೆಯನ್ನು ಮಾಡಬೇಕಾಗಿತ್ತು. ಆದರೆ ಪ್ರಣವಾನಂದ ಎಂಬ ವಿವಾದಾತ್ಮಕ ಸ್ವಾಮಿಯ ನಾಯಕತ್ವದಿಂದಾಗಿ ಆರಂಭಕ್ಕೆ ಮೊದಲೇ ಹಾದಿ ತಪ್ಪಿದ್ದಂತೆ ಕಂಡುಬರುತ್ತಿದ್ದ ಸಮಾವೇಶ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಕೀಳುಭಾಷೆಯ ಮತ್ತು ವೈಯಕ್ತಿಕ ದ್ವೇಷ ಸಾಧನೆಯ ಹೇಳಿಕೆಗಳಿಂದಾಗಿ ಸಂಪೂರ್ಣ ಹಾದಿ ತಪ್ಪಿದೆ.
ಕಾಂಗ್ರೆಸ್ ಪಕ್ಷವೂ ಸೇರಿದಂತೆ ದೇಶದ ಯಾವುದೇ ರಾಜಕೀಯ ಪಕ್ಷ ಇಲ್ಲವೇ ರಾಜಕೀಯ ನಾಯಕರೂ ಈಗ ಪರಿಶುದ್ಧ ಸೈದ್ಧಾಂತಿಕ ಬದ್ಧತೆಯನ್ನು ಉಳಿಸಿಕೊಂಡಿಲ್ಲ. ಈ ಕಾರಣಕ್ಕಾಗಿ ಸಿದ್ಧಾಂತ, ಆದರ್ಶಗಳ ಕತ್ತಿ ಬೀಸುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಸ್ವಲ್ಪಎಚ್ಚರಿಕೆ ತಪ್ಪಿದರೂ ಕತ್ತಿಯ ಮೊನೆ, ಶತ್ರುಗಳು ಮತ್ತು ಅಕ್ಕಪಕ್ಕದಲ್ಲಿರುವ ಮಿತ್ರರನ್ನು ಮಾತ್ರವಲ್ಲ ಸ್ವಂತ ಕತ್ತಿ ಬೀಸಿದವರನ್ನೂ ಇರಿಯುವ ಸಾಧ್ಯತೆ ಇರುತ್ತದೆ.
ನೇರವಾಗಿ ಹೆಸರು ಎತ್ತದೆ ಇದ್ದರೂ ಹರಿಪ್ರಸಾದ್ ಅವರ ಸೈದ್ಧಾಂತಿಕ ರಾಜಿಯ ಆರೋಪದ ಗುರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎನ್ನುವುದು ಸ್ಪಷ್ಟವಾಗಿದೆ. ಕೆಲವು ವರ್ಷಗಳ ಹಿಂದೆ ಸಿದ್ದರಾಮಯ್ಯನವರು ಒಂದು ಬಾರಿ ಲಾಲ್ ಕೃಷ್ಣ ಅಡ್ವಾಣಿಯವರನ್ನು ಭೇಟಿ ಮಾಡಿದ್ದಾರೆ ಎನ್ನುವ ಆರೋಪವನ್ನು ಜೆಡಿಎಸ್-ಬಿಜೆಪಿ ಸೇರಿದಂತೆ ಹಲವು ನಾಯಕರು ಹಲವಾರು ಬಾರಿ ಮಾಡಿದ್ದಾರೆ. ಈ ಬಾರಿ ಹರಿಪ್ರಸಾದ್ ಅವರು ಇದಕ್ಕೆ ಸಾಕ್ಷಿಯಾಗಿ ಅರವಿಂದ ಲಿಂಬಾವಳಿ ಎಂಬ ಅವರ ಪಕ್ಷದಲ್ಲಿಯೇ ಮೂಲೆಗುಂಪಾಗಿರುವ ನಾಯಕನ ಹೆಸರು ಹೇಳಿರುವುದು ಈ ಆರೋಪವನ್ನೇ ಹಾಸ್ಯಾಸ್ಪದವನ್ನಾಗಿ ಮಾಡಿದೆ.
ಒಂದು ಭೇಟಿ, ಒಂದು ಊಟ-ಉಪಾಹಾರ, ಒಂದು ಕೈಕುಲುವಿಕೆ-ಅಪ್ಪುಗೆಯಿಂದ ಯಾರಾದರೂ ಜಾತ್ಯತೀತರು ಕೋಮುವಾದಿಗಳಾಗುವುದಿದ್ದರೆ ಇಲ್ಲವೇ, ಕೋಮುವಾದಿಗಳು ಜಾತ್ಯತೀತರಾಗುವುದಿದ್ದರೆ ಈ ನೆಲದಲ್ಲಿ ಪರಿಶುದ್ದ ಜಾತ್ಯತೀತರು ಮತ್ತು ಕಟ್ಟರ್ ಕೋಮುವಾದಿಗಳು ಇಲ್ಲಿಯ ವರೆಗೆ ಹುಟ್ಟಿಲ್ಲ, ಇನ್ನು ಹುಟ್ಟುವುದಿಲ್ಲ ಎಂದಾಗಬೇಕಾಗುತ್ತದೆ. ಇದೇ ವಾದವನ್ನು ಮುಂದೊಡ್ಡುವುದಾದರೆ ಗೋಡ್ಸೆ ಪ್ರತಿಮೆ ಸ್ಥಾಪಿಸಲು ಹೊರಟಿದ್ದ ಮತ್ತು ದನಕಳ್ಳ ಸಾಗಣೆಯ ಆರೋಪ ಹೊರಿಸಿ ಮುಸ್ಲಿಮ್ ಯುವಕನನ್ನು ಹಾಡಹಗಲೇ ಕೊಲೆಗೈದ ಪೊಲೀಸರಿಗೆ ಬಹುಮಾನ ಘೋಷಿಸಿದ್ದ ಪ್ರಣವಾನಂದ ಸ್ವಾಮಿಗೆ ಸಮಾವೇಶದ ನೇತೃತ್ವ ನೀಡಿರುವುದು ಕೋಮುವಾದದ ಜೊತೆಗೆ ಮಾಡಿಕೊಂಡ ರಾಜಿಯಾಗುವುದಿಲ್ಲವೇ?
ಸೈದ್ಧಾಂತಿಕವಾಗಿ ತಾನು ಮತ್ತು ತನ್ನ ಪಕ್ಷ ವಿರೋಧಿಸುವ ಬಿಜೆಪಿಯ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅತಿಥಿಗಳಾಗಿ ಆಹ್ವಾನಿಸಿ ಅವರ ಎದುರಲ್ಲಿ ಹರಿಪ್ರಸಾದ್ ಅವರು ತನ್ನದೇ ಪಕ್ಷದ ನಾಯಕರ ವಿರುದ್ಧ ಮಾತನಾಡುವುದು ಕೋಮುವಾದಿಗಳ ಜೊತೆಗಿನ ಹೊಂದಾಣಿಕೆಯಾಗುವುದಿಲ್ಲವೇ? ಆದ್ದರಿಂದ ಸೈದ್ಧಾಂತಿಕ ಬದ್ಧತೆ ವಿಚಾರದಲ್ಲಿನ ಇಂತಹ ನಡವಳಿಕೆಗಳನ್ನು ಭೂತಕನ್ನಡಿಯಲ್ಲಿ ಸೆರೆ ಹಿಡಿಯುವ ಕಾಲ ಸರಿದುಹೋಗಿದೆ.
ಸೈದ್ಧಾಂತಿಕ ಬದ್ಧ್ದತೆಯ ಜೊತೆಯಲ್ಲಿ ಇತಿಹಾಸವನ್ನು ಕೆದಕುವುದೂ ಬಹಳ ಅಪಾಯಕಾರಿ ಸಾಹಸ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ಇತಿಹಾಸ ಇರುತ್ತದೆ, ಎಲ್ಲರಿಗೂ ಹೆಮ್ಮೆ ಪಡುವ ಇತಿಹಾಸ ಇರುವುದಿಲ್ಲ, ಕೆಲವರಿಗೆ ಮುಜುಗರ ಪಡುವ ಇತಿಹಾಸವೂ ಇರುತ್ತದೆ. ಸತ್ಯ-ಸುಳ್ಳುಗಳ ವಿಶ್ಲೇಷಣೆ ಏನೇ ಇರಬಹುದು, ಆದರೆ ಹರಿಪ್ರಸಾದ್ ಅವರ ಪೂರ್ವಾಶ್ರಮ ಕೂಡಾ ಹೆಮ್ಮೆ ಪಡುವಂತಹದ್ದಲ್ಲ. ಅದನ್ನು ಮೀರಿ ತನ್ನನ್ನು ಪರಿವರ್ತನೆಗೆ ಒಳಪಡಿಸಿ ಚಿಂತನಶೀಲ ನಾಯಕರಾಗಿ ಬೆಳೆದಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಅವರು ಈಗಿನ ಗೌರವ-ಸ್ಥಾನಮಾನ ಗಳಿಸಿದ್ದಲ್ಲವೇ?
ಹೀಗಿರುವಾಗ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ ಸೈದ್ಧಾಂತಿಕವಾಗಿ ಹೇಗೆ ನಡೆದುಕೊಂಡಿದ್ದಾರೆ ಮತ್ತು ರಾಜಕೀಯ ಅಧಿಕಾರ ಸಿಕ್ಕಿದಾಗ ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯಕೊಡಿಸಲು ಏನೆಲ್ಲ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎನ್ನುವುದನ್ನು ಸಂಫೂರ್ಣವಾಗ ಕಡೆಗಣಿಸಿ ಯಾವುದೋ ಒಂದು ಹಳೆ ಭೇಟಿಯನ್ನು ಆಧಾರವಾಗಿಟ್ಟುಕೊಂಡು ಅವರ ವಿರುದ್ಧ ಸೈದ್ಧಾಂತಿಕ ಭ್ರಷ್ಟತೆಯ ಆರೋಪ ಹೊರಿಸುವುದು ಬಾಲಿಷತನವಾಗುತ್ತದೆ.
ಬಹುಕೋಟಿ ರೂ.ಗಳ ಭ್ರಷ್ಟಾಚಾರದ ಹಗರಣಗಳು ನಿತ್ಯ ಬಯಲಾಗುತ್ತಿರುವ ಈ ದಿನಗಳಲ್ಲಿ ಕೈಗೆ ಒಂದು ಬೆಲೆಬಾಳುವ ವಾಚ್ ಕಟ್ಟುವುದರಿಂದ ಯಾರಾದರೂ ಭ್ರಷ್ಟರಾಗುವುದಾದರೆ, ಮಜವಾದಿಗಳಾಗುವುದಾದರೆ ಹರಿಪ್ರಸಾದ್ ಅವರೂ ಸೇರಿದಂತೆ ಇಂದಿನ ರಾಜಕೀಯದಲ್ಲಿ ಯಾರೂ ಪ್ರಾಮಾಣಿಕರಲ್ಲ ಎಂದು ಹೇಳಬೇಕಾಗುತ್ತದೆ.
ಹರಿಪ್ರಸಾದ್ ಅವರು ರಾಜಕೀಯವಾಗಿ ಹಿಂದುಳಿದ ಜಾತಿಗಳಿಗೆ ಆಗಿರುವ ಅನ್ಯಾಯವನ್ನು ವಿಸ್ತಾರವಾಗಿ ಪ್ರಸ್ತಾಪಿಸಿದ್ದಾರೆ. ಹರಿಪ್ರಸಾದ್ ಅವರನ್ನು ಸಚಿವರನ್ನಾಗಿ ಮಾಡದೆ ಸಿದ್ದರಾಮಯ್ಯನವರು ಅನ್ಯಾಯ ಮಾಡಿದ್ದಾರೆ ಎಂದು ಸಮಾವೇಶದಲ್ಲಿ ಭಾಗವಹಿಸಿದ್ದ ಅನೇಕ ಸ್ವಾಮಿಗಳು ಮತ್ತು ನಾಯಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಸಚಿವ ಸ್ಥಾನದಿಂದ ವಂಚಿತರಾಗಿರುವ ಹರಿಪ್ರಸಾದ್ ಅವರಿಗೆ ಅನ್ಯಾಯವಾಗಿರುವುದು ನಿಜ, ಅದಕ್ಕೆ ಯಾರು ಹೊಣೆ? ಕೇವಲ ಸಿದ್ದರಾಮಯ್ಯನವರೇ?
ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ಅವರು ಸಿದ್ದರಾಮಯ್ಯನವರಿಗಿಂತಲೂ ಹಳಬರು. ತಮ್ಮ ಬದುಕಿನ ಮುಕ್ಕಾಲು ಭಾಗವನ್ನು ದಿಲ್ಲಿಯಲ್ಲಿ ಹೈಕಮಾಂಡ್ ಜೊತೆ ಕಳೆದವರು. ಇಂದಿರಾಗಾಂಧಿ-ಸಂಜಯ್ ಗಾಂಧಿಯವರಿಂದ ಹಿಡಿದು ಸೋನಿಯಾ-ರಾಹುಲ್‌ವರೆಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಆಪ್ತವಲಯದಲ್ಲಿದ್ದವರು. ಈ ಕಾರಣದಿಂದಾಗಿಯೇ ರಾಜ್ಯದ ಯಾವುದೇ ಹಿಂದುಳಿದ ವರ್ಗದ ನಾಯಕರಿಗೆ ಕೊಡದಷ್ಟು ಅವಕಾಶ ಮತ್ತು ಸ್ಥಾನಮಾನವನ್ನು ಪಕ್ಷ ಹರಿಪ್ರಸಾದ್ ಅವರಿಗೆ ನೀಡಿದೆ. ಎಐಸಿಸಿ ಆಯಕಟ್ಟಿನ ಜಾಗದಲ್ಲಿ ದೀರ್ಘಕಾಲ ಸ್ಥಾನ ಹೊಂದಿದ್ದ ಹರಿಪ್ರಸಾದ್ ಹದಿನೆಂಟು ವರ್ಷ ರಾಜ್ಯಸಭೆಯಲ್ಲಿದ್ದರು. ಈಗ ವಿಧಾನಪರಿಷತ್ ಸದಸ್ಯರು. ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರೂ ಆಗಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಪಕ್ಷದ ಉಸ್ತುವಾರಿಗಳಾದ ಸುರ್ಜೆವಾಲಾ ಮತ್ತು ವೇಣುಗೋಪಾಲ್ ಮಾತ್ರವಲ್ಲ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರೂ ಹರಿಪ್ರಸಾದ್ ಅವರಿಗೆ ಆತ್ಮೀಯರು. ಸಿದ್ದರಾಮಯ್ಯನವರೊಬ್ಬರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಹರಿಪ್ರಸಾದ್ ಅವರಿಗೆ ಆಪ್ತರು. ಪ್ರಾರಂಭದಿಂದಲೂ ಸಿದ್ದರಾಮಯ್ಯನವರಿಂದ ಅಂತರ ಕಾಪಾಡಿಕೊಂಡು ಬಂದಿರುವ ಹರಿಪ್ರಸಾದ್ ಅವರು ಎಂದೂ ಅವರ ಆತ್ಮೀಯ ವಲಯದಲ್ಲಿ ಇರಲೇ ಇಲ್ಲ. ಹೀಗಿದ್ದಾಗ ತಮಗಾಗಿರುವ ಅನ್ಯಾಯಕ್ಕಾಗಿ ಅವರು ಯಾರನ್ನು ದೂರಬೇಕಾಗಿದೆ? ತಮ್ಮ ವಿರೋಧಿಯಾಗಿರುವ ಸಿದ್ದರಾಮಯ್ಯನವರನ್ನೇ? ಇಲ್ಲವೇ ಹಿತೈಷಿಗಳಾಗಿರುವ ತಮ್ಮ ಸ್ನೇಹಿತರ ಗುಂಪನ್ನೇ? ಹಾಗಿದ್ದರೆ ದಿಲ್ಲಿಯಿಂದ ಬೆಂಗಳೂರಿನವರೆಗೆ ಇರುವ ತಮ್ಮ ಸ್ನೇಹಿತರೆಲ್ಲರ ಬಾಯಿ ಮುಚ್ಚಿಸಿ ಸಿದ್ದರಾಮಯ್ಯನವರು ಹರಿಪ್ರಸಾದ್ ಅವರಿಗೆ ಅವಕಾಶ ನಿರಾಕರಿಸಿದ್ದರೇ?
ಸಿದ್ದರಾಮಯ್ಯನವರು ಇತರ ಹಿಂದುಳಿದ ಜಾತಿಗಳನ್ನು ತುಳಿದಿದ್ದಾರೆ ಎಂದು ಆರೋಪಿಸುತ್ತಿರುವ ಹರಿಪ್ರಸಾದ್ ಅವರು ತಮ್ಮ ಗತವನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕಾಗಿತ್ತು. ಪತ್ರಕರ್ತನಾಗಿ ನಾನು ಗಮನಿಸಿದ ಹಾಗೆ ಅವರೊಬ್ಬ ಹುಟ್ಟು ಭಿನ್ನಮತೀಯ ನಾಯಕ. ಇಂದು ಅವರು ಗೌರವದಿಂದ ಪ್ರಸ್ತಾಪಿಸುತ್ತಿರುವ ದೇವರಾಜ ಅರಸು, ಎಸ್ .ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಇವರು ದಿಲ್ಲಿಯಲ್ಲಿ ರಾಜ್ಯದ ಭಿನ್ನಮತೀಯರ ಮಾರ್ಗದರ್ಶಕರಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಈ ಮೂವರು ಮುಖ್ಯಮಂತ್ರಿಗಳಲ್ಲಿ ಅರಸು ಅವರು ಹಿಂದುಳಿದ ಜಾತಿಗಳ ನಾಯಕರಾಗಿದ್ದರೆ, ಇಬ್ಬರು ಸ್ವತ: ಹಿಂದುಳಿದ ಜಾತಿಗೆ ಸೇರಿದವರಾಗಿದ್ದರು ಎನ್ನುವುದು ಕೂಡಾ ವಾಸ್ತವ.
ಎಂಭತ್ತರ ದಶಕದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಆರು ಬಿಲ್ಲವ ಶಾಸಕರಿದ್ದರು. ಎರಡು ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿಯೇ ಆರು ಮಂದಿ ಈಡಿಗ-ಬಿಲ್ಲವ ಸಂಸದರಿದ್ದರು, ವಿನಯಕುಮಾರ್ ಸೊರಕೆ, ಆರ್.ಎಲ್.ಜಾಲಪ್ಪ, ಎಚ್.ಜಿ.ರಾಮುಲು ಮತ್ತು ದೇವರಾಯ ನಾಯಕ್ ಲೋಕಸಭೆಯಲ್ಲಿ, ಜನಾರ್ದನಪೂಜಾರಿ ಮತ್ತು ಬಿ.ಕೆ.ಹರಿಪ್ರಸಾದ್ ರಾಜ್ಯಸಭೆಯಲ್ಲಿ. ಇಂದು ಒಬ್ಬ ಬಿಲ್ಲವ-ಈಡಿಗ ಸದಸ್ಯರೂ ಇಲ್ಲ. ಈ ರಾಜಕೀಯ ಅನಾಥ ಸ್ಥಿತಿಗೂ ಸಿದ್ದರಾಮಯ್ಯನವರನ್ನೇ ಹೊಣೆಗಾರರನ್ನಾಗಿ ಮಾಡೋಣವೇ?
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಂದಾಜು ಶೇ.30ರಷ್ಟು ಬಿಲ್ಲವರು ಮತ್ತು ಶೇ.25ರಷ್ಟು ಮುಸ್ಲಿಮರಿದ್ದಾರೆ. ಈ ಮತಬ್ಯಾಂಕ್ ಬಲದಿಂದಲೇ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಜನಾರ್ದನ ಪೂಜಾರಿಯವರು ನಾಲ್ಕು ಬಾರಿ ಮತ್ತು ಆಸ್ಕರ್ ಫೆರ್ನಾಂಡಿಸ್ ಅವರು ಉಡುಪಿ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದ ಈ ಚುನಾವಣಾ ಗೆಲುವಿನ ಗುಟ್ಟನ್ನು ಬಲ್ಲ ಸಂಘ ಪರಿವಾರ ಮುಸ್ಲಿಮರ ವಿರುದ್ಧ ಬಿಲ್ಲವರನ್ನು ಎತ್ತಿಕಟ್ಟಿ ಈ ಮತ ಬ್ಯಾಂಕನ್ನು ವ್ಯವಸ್ಥಿತವಾಗಿ ಒಡೆದು ಹಾಕಿತ್ತು. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷಕ್ಕೆ ಚೇತರಿಸಿಕೊಳ್ಳಲು ಆಗಿಲ್ಲ.
ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ ಇದ್ದ ಹರಿಪ್ರಸಾದ್ ಅವರಿಗೆ ಕನಿಷ್ಠ ಈ ಎರಡು ಜಿಲ್ಲೆಗಳಲ್ಲಿ ಕೋಮವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಅವಕಾಶ ಇತ್ತು. ಕಳೆದ ಲೋಕಸಭಾ ಚುನಾವಣೆ ಮತ್ತು ಎರಡು ವಿಧಾನಸಭಾ ಚುನಾವಣೆಗಳ ಕಾಲದಲ್ಲಿ ಹರಿಪ್ರಸಾದ್ ಅವರು ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಸಂಘ ಪರಿವಾರದ ಕಡೆ ಆಕರ್ಷಿತರಾಗಿ ಅವರ ಸಂಘಟನೆಗಳ ಕಾಲಾಳುಗಳಾಗಿರುವ ಬಿಲ್ಲವರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಗುವಂತೆ ಮಾಡಿ, ಅವರನ್ನು ಅಲ್ಲಿಂದ ಹೊರತರುವ ಪ್ರಯತ್ನವನ್ನು ಮಾಡಬಹುದಿತ್ತು. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿಯವರು ನಾಲ್ಕು ಬಾರಿ ಗೆದ್ದಿದ್ದ ಮಂಗಳೂರು ಲೋಕಸಭಾ ಕ್ಷೇತ್ರವನ್ನು ಬಂಟ ಅಭ್ಯರ್ಥಿಗೆ ಬಿಟ್ಟುಕೊಡಲಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್ ನೀಡಿದ್ದು ಬಿಲ್ಲವ ಸಮುದಾಯದೊಳಗೆ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಅನ್ಯಾಯದ ವಿರುದ್ಧ ದನಿ ಎತ್ತಿರುವ ಬಿಲ್ಲವ ಕಾರ್ಯಕರ್ತರು ಪಕ್ಷದ ಶಿಸ್ತುಕ್ರಮಕ್ಕೆ ಒಳಗಾಗಿ ಕೇಳುವವರೇ ಇಲ್ಲದಂತಾಗಿದೆ. ಆಗಲೇ ಈ ಅನ್ಯಾಯದ ವಿರುದ್ಧ ಹರಿಪ್ರಸಾದ್ ದನಿ ಎತ್ತಿದ್ದರೆ, ತನ್ನೆಲ್ಲ ಪ್ರಭಾವ ಬಳಸಿ ಪಕ್ಷದ ಹೈಕಮಾಂಡ್ ನಿಂದ ರಾಜಕೀಯ ಪ್ರಾತಿನಿಧ್ಯ ಕೊಡಿಸಿದ್ದರೆ ಈಗ ಸಮುದಾಯದ ಸಮಾವೇಶ ನಡೆಸಿ ಗುಟುರು ಹಾಕುವ ಸಂದರ್ಭವೇ ಬರುತ್ತಿರಲಿಲ್ಲ.
ಅಂತಿಮವಾಗಿ ಈ ಸಮಾವೇಶದಿಂದ ಸಾಧಿಸಿದ್ದೇನು? ಬಿಜೆಪಿ ಶಾಸಕ ಕೋಟ ಶ್ರೀನಿವಾಸ ಪೂಜಾರಿಯವರೊಬ್ಬರನ್ನು ಹೊರತುಪಡಿಸಿದರೆ ಬಿಲ್ಲವ-ಈಡಿಗ ಜಾತಿಯ ಇಲ್ಲವೇ ಇತರ ಹಿಂದುಳಿದ ಜಾತಿಗಳ ಜನಪ್ರತಿನಿಧಿಗಳು ಇಲ್ಲವೇ ಪ್ರಮುಖ ನಾಯಕರು ಯಾರೂ ಇದರಲ್ಲಿ ಪಾಲ್ಗೊಂಡಿಲ್ಲ. ಅಂತಿಮವಾಗಿ ಇದು ಶಕ್ತಿ ಪ್ರದರ್ಶನಕ್ಕಿಂತ ದೌರ್ಬಲ್ಯ ಪ್ರದರ್ಶನದಂತೆ ನಡೆದದ್ದು ಹಿಂದುಳಿದ/ ಅತಿ ಹಿಂದುಳಿದ ಜಾತಿಗಳ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ.