ಮಣಿಪುರದ ಜನರಿಗೆ ಸಾಂತ್ವನ ಹೇಳೋದು ತಪ್ಪೇ ?
ಪ್ರಧಾನಿ ಹೋಗಲ್ಲ, ಹೋಗೋರಿಗೆ ಬಿಡಲ್ಲ!
ತಿಂಗಳುಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ನೂರಾರು ಸಾವುಗಳು, ಸಾವಿರಾರು ಮಂದಿಯ ಸ್ಥಳಾಂತರ. ಅದೆಷ್ಟೋ ಮಂದಿ ಓಡಿಹೋಗಿ ನೆರೆರಾಜ್ಯದಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನು ಅಲ್ಲಿಯೇ ಉಳಿದಿರುವ ಜನರೂ ಮನೆಯೊಳಗಿಂದ ಹೊರಬರಲಾರದ ಸ್ಥಿತಿ.
ಬದುಕು ಭೀಕರವೆನ್ನಿಸಿದೆ. ಎಲ್ಲರಿಗೂ ತಮ್ಮನ್ನು ತಮ್ಮ ಪರಿವಾರವನ್ನು ಕಾಪಾಡಿಕೊಳ್ಳುವುದು ಹೇಗೆಂಬ ಕರಾಳ ಪ್ರಶ್ನೆ ಕಾಡುತ್ತಿದೆ. ಆದಿವಾಸಿಗಳ ಬದುಕು ಸಂಕಷ್ಟದಲ್ಲಿದೆ.
ಇದನ್ನೆಲ್ಲ ನೋಡಿಕೊಂಡು ಕೂತಿರುವ ದೆಹಲಿಯ ಅಧಿಕಾರಸ್ಥರು ಮಾತ್ರ ಏನನ್ನೂ ಹೇಳಲು ತಯಾರಿಲ್ಲ. ಎಲ್ಲದಕ್ಕೂ ಜಾಣ ಕಿವುಡು, ಕುರುಡತನ ತೋರುತ್ತಿರುವ ಕೇಂದ್ರದ ರೀತಿಯೇ ಅಮಾನವೀಯವಾಗಿದೆ.
ಮಣಿಪುರ ಹೊತ್ತಿ ಉರಿಯುತ್ತಿರುವಾಗಲೂ ಕೇಂದ್ರದ ಬಿಜೆಪಿ ಸರ್ಕಾರ ಚುನಾವಣೆಯಲ್ಲಿ ಗೆಲ್ಲುವ ಕಸರತ್ತು ನಡೆಸುತ್ತಿತ್ತೇ ಹೊರತು ಮಣಿಪುರದಲ್ಲಿ ಹಿಂಸೆ ನಿಲ್ಲಿಸಲು ಅದು ಸಂಪೂರ್ಣವಾಗಿ ವಿಫಲವಾಗಿದೆ.
ಈಗಲೂ ಅದಕ್ಕೆ ಮುಂದಿನ ಚುನಾವಣೆಗಳಲ್ಲಿ ಗೆಲ್ಲುವುದಕ್ಕೆ ಏನು ಮಾಡಬೇಕಿದೆ ಎಂಬುದೇ ಚಿಂತೆ. ಮೋದಿ ಒಂಭತ್ತು ವರ್ಷಗಳ ಆಡಳಿತದ ಬಗ್ಗೆ ಜನರ ಮುಂದೆ ಡಂಗುರ ಸಾರುವುದರಲ್ಲಿಯೇ ಅದು ಮೈಮರೆತಿದೆ.
ಆದರೆ ಮಣಿಪುರದಲ್ಲಿ ಜನರು ಬದುಕುವುದೇ ಕಷ್ಟವಾಗಿದೆ, ಅವರ ಬದುಕು ಬೆಂಕಿಯಲ್ಲಿ ಬೆಂದುಹೋಗುತ್ತಿದೆ ಎಂಬ ಚಿಂತೆ ಎಳ್ಳಷ್ಟೂ ಇಲ್ಲ.
ಮಣಿಪುರಕ್ಕೆ ಭೇಟಿ ನೀಡಿ ಅಲ್ಲಿನ ಜನರ ಪಾಲಿನ ಕಷ್ಟ ಕೇಳಬೇಕಾಗಿದ್ದ, ಅವರಿಗೋಸ್ಕರ ಒಂದು ಸಾಲಿನ ಸಮಾಧಾನವನ್ನಾದರೂ ಹೇಳಬೇಕಾಗಿದ್ದ ಪ್ರಧಾನಿಗೆ ಅದನ್ನೂ ಮಾಡಲಾಗಿಲ್ಲ. ಅವರಿಗೆ ಅಮೆರಿಕಕ್ಕಿಂತಲೂ ಮಣಿಪುರ ದೂರ.
ಮಣಿಪುರದಿಂದ ಬಂದ ನಿಯೋಗವನ್ನು ಎರಡು ನಿಮಿಷದ ಮಟ್ಟಿಗಾದರೂ ಮಾತನಾಡಿಸುವ ಸೌಜನ್ಯ ತೋರದೆ ಬೆನ್ನುಹಾಕಿ ಅಮೆರಿಕ ಪ್ರವಾಸಕ್ಕೆ ಹೊರಟರು ಪ್ರಧಾನಿ. ಅಮೆರಿಕದಿಂದ ಬಂದ ಮೇಲೂ ಅವರು ಹೋಗಿದ್ದು ಚುನಾವಣೆ ನಡೆಯಲಿರೋ ಮಧ್ಯ ಪ್ರದೇಶಕ್ಕೆ... ಮಣಿಪುರಕ್ಕಲ್ಲ.
ಮಣಿಪುರದ ಜನರಿಗಾಗಿ ಒಂದು ಮಾತನ್ನೂ ಆಡದೇ ಇರುವ ಪ್ರಧಾನಿ ಇನ್ನು ಮಣಿಪುರಕ್ಕೆ ಹೋಗಿ ಅಲ್ಲಿನ ಸ್ಥಿತಿಯನ್ನು ನೋಡುವ ಮಾತಂತೂ ದೂರವೇ ಇದೆ.
ಹೀಗಿರುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಣಿಪುರಕ್ಕೆ ಹೋದರೆ ಇವರು ಮಾಡಿದ್ದೇನು? ಪರಿಹಾರ ಕೇಂದ್ರಗಳಲ್ಲಿನ ಸಂತ್ರಸ್ತರನ್ನು ಭೇಟಿಯಾಗದಂತೆ ಅವರನ್ನು ತಡೆಯಲಾಗಿದೆ. ತಮ್ಮವರನ್ನೇ ಛೂಬಿಟ್ಟು ರಾಹುಲ್ ವಿರುದ್ದ ಪ್ರತಿಭಟನೆ ಮಾಡಿಸಿದ್ದೂ ನಡೆದಿದೆ.
ತಿಂಗಳುಗಳಿಂದ ಮಣಿಪುರದ ಸ್ಥಿತಿ ಹೀಗೆ ಹದಗೆಟ್ಟಿದ್ದರೂ ಏನೂ ಮಾಡದ ಡಬಲ್ ಎಂಜಿನ್ ಸರ್ಕಾರ ಈಗ ರಾಹುಲ್ ಗಾಂಧಿ ಅಲ್ಲಿ ಭೇಟಿ ನೀಡಿರುವುಕ್ಕೆ ಭಯಪಡುತ್ತಿದೆಯೆ ?
ಹಿಂಸಾಚಾರ ಸಂಭವಿಸಿದ ತಕ್ಷಣ ಇಂಟರ್ನೆಟ್ ಸ್ಥಗಿತಗೊಳಿಸಿ ಕೂತುಬಿಡುವುದು ಈ ಸರ್ಕಾರಕ್ಕೆ ಒಂದು ಚಟವಾಗಿಬಿಟ್ಟದೆ. ಮಣಿಪುರದಲ್ಲಿ ಅದರ ಜೊತೆಗೆ ಸೇನೆಯ ನಿಯೋಜನೆಯೂ ಆಗಿದೆ. ಆದರೆ ಹಿಂಸೆ ನಿಲ್ಲುತ್ತಲೇ ಇಲ್ಲ.
ಇಂಥ ಸ್ಥಿತಿಯಲ್ಲಿ ಸಂತ್ರಸ್ತರ ಕಷ್ಟ ಕೇಳಲು ಪ್ರತಿಪಕ್ಷದ ನಾಯಕ ಹೊರಟರೆ ಅದನ್ನೂ ಸಹಿಸಲಾಗುತ್ತಿಲ್ಲ ಇವರಿಗೆ.
ಮಣಿಪುರದಲ್ಲಿನ ಸತ್ಯ ಏನು ಹಾಗಾದರೆ ? ಮಣಿಪುರಕ್ಕೆ ರಾಹುಲ್ ಗಾಂಧಿ ಭೇಟಿಯಿಂದ ಸರ್ಕಾರಕ್ಕೆ ಭಯವಾಗುತ್ತಿರೋದು ಏಕೆ?
ಇಂಫಾಲ್ ಏರ್ಪೋರ್ಟ್ನಿಂದ 20 ಕಿಮೀ ಹೋಗುತ್ತಿದ್ದಂತೆ ಬಿಷ್ಣುಪುರಬಳಿ ರಾಹುಲ್ ಅವರನ್ನು ತಡೆಯಲಾಯಿತು.
ಸಂತ್ರಸ್ತರು ರಾಹುಲ್ ಜೊತೆ ಭೇಟಿಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.
ಬೆಂಗಾವಲು ಪಡೆ ವಾಹನವನ್ನು ಪೊಲೀಸರು ತಡೆದಿದ್ದರಿಂದ ರಾಹುಲ್ ಗಾಂಧಿ ತಾಸುಗಟ್ಟಲೆ ಬಿಷ್ಟುಪುರದಲ್ಲಿಯೇ ಉಳಿಯುವಂತಾಯಿತು. ಕಡೆಗೆ ಹೆಲಿಕಾಪ್ಟರ್ ಮೂಲಕ ಚುರಾಚಂದ್‌ಪುರದ ನಿರಾಶ್ರಿತರ ಶಿಬಿರಕ್ಕೆ ತೆರಳಿ ಅಲ್ಲಿನ ಸಂತ್ರಸ್ತರನ್ನು ಮಾತನಾಡಿಸಬೆಕಾಯಿತು.
ರಾಹುಲ್ ಅವರನ್ನು ತಡೆಯಲಾದ ಕ್ರಮವನ್ನು ಕಾಂಗ್ರೆಸ್ ಟೀಕಿಸಿದೆ. " ಸಂತ್ರಸ್ತರನ್ನು ರಾಹುಲ್ ಮಾತನಾಡಿಸಿದರೆ ಕಾಂಗ್ರೆಸ್ ಸಹಾನುಭೂತಿಯ ಪ್ರಭಾವ ಆಗುತ್ತದೆಂಬ ಭಯದಿಂದ ಅದನ್ನು ತಡೆಯಲು ಮೋದಿ ಸರ್ಕಾರ ನಿರಂಕುಶ ಅಧಿಕಾರದ ವಿಧಾನ ಬಳಸುತ್ತಿದೆ " ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
" ರಾಹುಲ್ ಗಾಂಧಿ ಅವರು ರಾಜ್ಯದ ಜನರ ಕಣ್ಣೀರು ಒರೆಸಲು ಬಯಸಿದ್ದಾರಷ್ಟೆ. ಆದರೆ ಅವರನ್ನು ಅಧಿಕಾರಿಗಳು ಮತ್ತು ಪೊಲೀಸರು ತಡೆದಿರೋದರ ಹಿಂದೆ ಬಿಜೆಪಿ ಪಾತ್ರವಿದೆ" ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇತ್ ಹೇಳಿದ್ದಾರೆ.
"ಎರಡು ತಿಂಗಳಿನಿಂದ ಮಣಿಪುರ ಉರಿಯುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಕೊಂಚವೂ ತಲೆಕೆಡಿಸಿಕೊಂಡಿಲ್ಲ. ದ್ವೇಷದಿಂದ ತುಂಬಿದ ಪ್ರಧಾನಿಗೆ ಪ್ರೀತಿ ಕಂಡರೆ ಭಯ. ಈವರೆಗೂ 130 ಜನರು ಮೃತಪಟ್ಟು, ಸಾವಿರಾರು ಜನರು ನಿರ್ಗತಿಕರಾಗಿರುವಲ್ಲಿ ಭಾರತ್ ಜೋಡೋ ಯಾತ್ರೆ ಮುಂದುವರಿಸಲು ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡಿದರೆ ಸರ್ಕಾರ ಮತ್ತು ಬಿಜೆಪಿ ಏಕೆ ಅಡ್ಡಿಪಡಿಸುತ್ತಿದೆ " ಎಂದು ಸುಪ್ರಿಯಾ ಅವರು ಪ್ರಶ್ನಿಸಿದ್ದಾರೆ.
ಚುರಾಚಾಂದ್ಪುರ,ಬಿಷ್ಣುಪುರ, ಕಂಗ್ಪೊಕ್ಪಿ, ತೆಂಗ್ನೌಪಾಲ್, ಇಂಫಾಲ್ ಪಶ್ಚಿಮ, ಚಂದೇಲ್, ತೌಬಾಲ್, ಇಂಫಾಲ್ ಪೂರ್ವ, ಜಿರಿಬಂ, ಕಕ್ಚಿಂಗ್, ಸೇನಾಪತಿ ಇವೆಲ್ಲ ಬಹಳ ತೀವ್ರವಾಗಿ ಹಿಂಸಾಚಾರಕ್ಕೆ ತುತ್ತಾದ ಪ್ರದೇಶಗಳು.
ಇಲ್ಲೆಲ್ಲ ಚರ್ಚ್ಗಳ ಮೇಲೆ, ಪೊಲೀಸ್ ಠಾಣೆಗಳ ಮೇಲೆ ದಾಳಿಯಾಗಿದೆ.
ಈಗ ಎಲ್ಲಿ ರಾಹುಲ್ ಭೇಟಿಯಿಂದ, ಅವರು ಸಂತ್ರಸ್ತರ ಅಳಲು ಕೆಳೋದರಿಂದ ಡಬಲ್ ಇಂಜಿನ್ ಸರ್ಕಾರದ ವೈಫಲ್ಯ ಬಯಲಾಗುವುದೊ ಎಂಬ ಭಯ ಬಿಜೆಪಿಯದ್ದು.
ರಾಹುಲ್ ಕೇಳುವ ಕಠಿಣ ಪ್ರಶ್ನೆಗಳು ಈ ಸರಕಾರದ ನಿದ್ದೆಗೆಡಿಸಿವೆ.
ಅದಕ್ಕಾಗಿಯೇ ಶಿಕ್ಷೆಯ ನೆಪದಲ್ಲಿ ಈಗ ಅವರ ಸಂಸತ್ ಸದಸ್ಯ ರದ್ದುಗೊಳಿಸಲಾಗಿದೆ.
ಆದರೆ ರಾಹುಲ್ ಗಾಂದಿಯ ಪ್ರಭಾವ, ಜನಪ್ರಿಯತೆ ಮಾತ್ರ ಹೆಚ್ಚುತ್ತಲೇ ಇರುವುದು ಬಿಜೆಪಿಗೆ ಸಹಿಸಿಕೊಳ್ಳಲಾಗದ ಸಂಗತಿಯಾಗಿದೆ.
ಎಲ್ಲೆಲ್ಲಿ ಬಿಜೆಪಿ ಸರ್ಕಾರ ವಿಫಲಾವಾಗಿದೆಯೊ ಅಲ್ಲೆಲ್ಲ ರಾಹುಲ್ ಗಾಂಧಿಯ ಪ್ರಭಾವ ಹೆಚ್ಚುತ್ತಿದೆ.
ಸಂವೇದನಾಶೀಲತೆಯಿಲ್ಲದ ಸರ್ಕಾರದ ನಡೆ ಜನರಿಗೆ ಅರ್ಥವಾಗುತ್ತಿದೆ.
ಮಣಿಪುರದಲ್ಲಿ ಇಂಥ ಸ್ಥಿತಿಯಿರುವಾಗ ಮೋದಿ ಮೌನ ವಹಿಸಿದರೆ, ಬಿಜೆಪಿ ನಾಯಕರೆಲ್ಲ ಚುನಾವಣಾ ಪ್ರಚಾರದಲ್ಲಿ ಬಿಝಿಯಾಗಿದ್ದಾರೆ.
ಅವರ ಭಾಷಣಗಳಲ್ಲಿ ಮೋದಿ ಆಡಳಿತದ ಒಂಬತ್ತು ವರ್ಷಗಳ ಕುರಿತ ಬಡಾಯಿ ಇದೆ.
ಎಲ್ಲಿ ರಾಹುಲ್ ಅವರನ್ನು ತಡೆಯಲಾಯಿತೊ ಆ ಬಿಷ್ಣುಪುರದಲ್ಲಿ ಆರು ಸ್ಥಾನಗಳಲ್ಲಿ ಬಿಜೆಪಿಯೇ ಗೆದ್ದಿದೆ. ಇದು ಇಂಫಾಲ್ನ ಭಾಗ. ಹಾಗಾಗಿ ಇಡೀ ಪ್ರದೇಶ ಬಿಜೆಪಿಯ ಹಿಡಿತದಲ್ಲಿಯೇ ಇದೆ. ಅಲ್ಲಿ ರಾಹುಲ್ ಅವರನ್ನು ತಡೆದು ನಿಲ್ಲಿಸಲಾಗುತ್ತದೆ.
ಹಾಗಾದರೆ ಮಣಿಪುರದ ಜನರ ಜವಾಬ್ದಾರಿ ಯಾರದು?
ಸರ್ಕಾರ ನಡೆಸುತ್ತಿರುವವರು ಮಣಿಪುರದ ಜನರ ಕಷ್ಟ ಕೇಳುತ್ತಿಲ್ಲ. ಹೀಗಿರುವಾಗ ಪ್ರತಿಪಕ್ಷದ ನಾಯಕ ಅಲ್ಲಿಗೆ ಜನರ ಸ್ಥಿತಿ ತಿಳಿಯಲು ಹೋದರೆ ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ತಡೆಯಲಾಗುತ್ತದೆ. ಹಿಂಸಾಚಾರ ಶುರುವಾಗಿ ಇಷ್ಟು ಸಮಯದ ನಂತರವೂ ಅಂಥ ಸ್ಥಿತಿಯೆ?
ಮಣಿಪುರದಂಥ ಸುಂದರ ನೆಲವನ್ನು ಇವರ ರಾಜಕೀಯ ಅದೆಷ್ಟು ಹಾಳುಗೆಡವಿದೆ ಎಂದರೆ, ಅಲ್ಲಿನ ಪ್ರಕೃತಿಯ ಭಾಗವೇ ಆದ ಬುಡಕಟ್ಟು ಜನರಿಂದು ನೆಮ್ಮದಿಯಿಂದ ಇರಲಾಗುತ್ತಿಲ್ಲ. ಅದೆಷ್ಟೋ ಅಮಾಯಕರ ಬದುಕು ಬರ್ಬರವಾಗಿದೆ.
ಒಂದಿಡೀ ರಾಜ್ಯ ಹೊತ್ತಿ ಉರಿಯುತ್ತಿರುವಾಗ, ಅಲ್ಲಿನ ಜನಸಾಮಾನ್ಯರು, ಅಮಾಯಕರು ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವಾಗ, ಅವರು ಬದುಕುವ ಹಕ್ಕುಗಳನ್ನೇ ಕಳೆದುಕೊಂಡಂಥ ಸನ್ನಿವೇಶವನ್ನು ಎದುರಿಸುತ್ತಿರುವಾಗ ಈ ದೇಶದ ಪ್ರಧಾನಿ ಅಮೆರಿಕದಿಂದ ಬಂದಿಳಿದು " ದೇಶ್ ಮೇ ಕ್ಯಾ ಚಲ್ ರಹಾ ಹೈ... " ಎಂದು ಕೇಳುತ್ತಾರೆ. ತಮ್ಮ ಸರ್ಕಾರದ ಒಂಬತ್ತು ವರ್ಷದ ಆಡಳಿತ ಕುರಿತ ಪ್ರಚಾರ ದೇಶಾದ್ಯಂತ ನಡೆದಿರುವುದಕ್ಕೆ ಖುಷಿಪಡುತ್ತಾರೆ. ಅವರ ಪಕ್ಷದ ನಾಯಕರು, ಬೆಂಬಲಿಗರೆಲ್ಲ ಅವರನ್ನು ಓಲೈಸುವುದರಲ್ಲಿಯೇ ಮಗ್ನರಾಗಿದ್ದಾರೆ.
ಇವರೆಲ್ಲ ದೇಶವೆಂದರೆ ಬಿಜೆಪಿಯ ಒಂಬತ್ತು ವರ್ಷದ ಆಡಳಿತ ಮಾತ್ರ ಎಂದುಕೊಂಡಿರುವ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಮಣಿಪುರದ ನೋವಿಗೆ, ಅಲ್ಲಿನ ಜನರ ಕಣ್ಣೀರಿಗೆ ಸ್ಪಂದಿಸಲು ಪ್ರತಿಪಕ್ಷದ ನಾಯಕರೊಬ್ಬರು ಹೋದರೆ, ಅವರು ಜನರ ಬಳಿ ಹೋಗದಂತೆ ತಡೆಯಲಾಗುತ್ತಿದೆ.
ಸತ್ಯ ಹೇಳಲಾರದ ಇವರಿಗೆ ಸತ್ಯ ಬೇರೆಯವರಿಗೆ ಗೊತ್ತಾಗುವುದೇ ಬೇಕಿಲ್ಲ. ಇವರ ದುರಾಡಳಿತದ ಪರಿಣಾಮವಾಗಿಯೇ ಉರಿಯುತ್ತಿರುವ ಮಣಿಪುರದ ಕುರಿತ ಸತ್ಯಗಳು ಬಯಲಾಗಲೇಬೇಕಿದೆ.