ರಾಮಮಂದಿರವನ್ನು ಬಾಬರಿ ಮಸೀದಿ ಕೆಡವಿದ ಜಾಗದಲ್ಲಿ ಕಟ್ಟುತ್ತಿಲ್ಲವೇ?
ಭಾಗ - 2
Photo: PTI
- 2019ರ ನವೆಂಬರ್ ನಲ್ಲಿ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಕೊಟ್ಟ ಅನ್ಯಾಯಯುತ ತೀರ್ಪಿನ ಅಂತಿಮ ಭಾಗದಲ್ಲಿ ವಿವಾದಕ್ಕೆ ಕೊಟ್ಟಿರುವ ಪರಿಹಾರದ ಪ್ರಕಾರ (ಪ್ಯಾರಾ : 805, ಪುಟ 625-627) :
ಅ) ಬಾಬರಿ ಮಸೀದಿ ಧ್ವಂಸ ಮಾಡಿದ ಜಾಗದ ಒಡೆತನ (ಮಸೀದಿ ಇದ್ದ ಜಾಗದ ಒಳಾವರಣ ಮತ್ತು ಹೊರಾವರಣಗಳನ್ನೂ ಒಳಗೊಂಡು) ರಾಮ ಲಲ್ಲಾನಿಗೆ ಸೇರುತ್ತದೆ. ಹೀಗಾಗಿ ಅಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಕೇಂದ್ರ ಸರಕಾರ ಮೂರು ತಿಂಗಳೊಳಗೆ ಒಂದು ಟ್ರಸ್ಟ್ ಸ್ಥಾಪನೆ ಮಾಡಬೇಕು.
ಆ) 1993 ರ ಕಾಯ್ದೆಯಡಿಯಲ್ಲಿ ವಶಪಡಿಸಿಕೊಂಡ, ಬಾಬರಿ ಮಸೀದಿ ಇದ್ದ, 2.7 ಎಕರೆ ಜಮೀನನ್ನು ಕೇಂದ್ರ ಸರಕಾರ ಆ ಟ್ರಸ್ಟ್ ಗೆ ವರ್ಗಾಯಿಸಬೇಕು.
ಇ) ಅಯೋಧ್ಯಾ ಕಾಯ್ದೆಯಡಿ ವಶಪಡಿಸಿಕೊಂಡ ೭೦ ಎಕರೆ ಜಮೀನಿನಲ್ಲಿ ಐದು ಎಕರೆ ಜಮೀನನ್ನು ಕೇಂದ್ರ ಸರಕಾರ ಮಸೀದಿ ನಿರ್ಮಿಸಲು ಕೊಡಬೇಕು ಅಥವಾ ಉತ್ತರ ಪ್ರದೇಶ ರಾಜ್ಯ ಸರಕಾರ ಪ್ರಮುಖವಾದ ಪ್ರದೇಶದಲ್ಲಿ ಸೂಕ್ತವಾದ ಐದು ಎಕರೆ ಜಮೀನನ್ನು ಕೊಡಬೇಕು.
ಆಸಕ್ತರು ತೀರ್ಪನ್ನು ಈ ವೆಬ್ ವಿಳಾಸದಲ್ಲಿ ಗಮನಿಸಬಹುದು: https://www.sci.gov.in/pdf/JUD_2.pdf
ರಿವ್ಯೆ ಪೆಟಿಷನ್ ರದ್ದಾಯಿತು-Curative Petition ಪರಿಗಣಿಸಿಲ್ಲ
- ಹೀಗಾಗಿ ಸುಪ್ರೀಂ ಕೋರ್ಟ್ ಸ್ವಯಂ ಬಾಬರಿ ಮಸೀದಿ ಇದ್ದ ಜಾಗವನ್ನು ರಾಮಮಂದಿರ ಕಟ್ಟಲು ಸಂಘಪರಿವಾರಕ್ಕೆ ನೀಡಿದೆ.
- ಈ ತೀರ್ಪಿನ ವಿರುದ್ಧ ೧೮ ಪುನರ್ ಪರಿಶೀಲನಾ ಅಹವಾಲುಗಳು ಸುಪ್ರೀಂ ಕೋರ್ಟಿನಲ್ಲಿ ಕೂಡಲೇ ದಾಖಲಾದವು.
ಆದರೆ ಅವೆಲ್ಲವನ್ನು ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪರಿಶೀಲನಾ ಪೀಠ ೨೦೧೯ರ ಡಿಸೆಂಬರ್ 12ರಂದೇ ವಜಾ ಮಾಡಿತು.
ಆ ನಂತರ ಎಲ್ಲಾ ಮುಸ್ಲಿಮ್ ದಾವೆದಾರರು ಈ ತೀರ್ಪಿನ ವಿರುದ್ಧ ಹೋರಾಡಲು ಉಳಿದಿದ್ದ ಏಕಮಾತ್ರ ದಾರಿಯಾಗಿದ್ದ Curative Petition ದಾಖಲು ಮಾಡುವುದು ಬೇಡವೆಂದು ತೀರ್ಮಾನಿಸಿದರು.
(https://www.barandbench.com/news/breaking-supreme-court-dismisses-review-petitions-challenging-ayodhya-verdict-read-order)
- ಆದರೆ ಪೀಸ್ ಪಾರ್ಟಿ ಎಂಬ ಪಕ್ಷದ ಅಧ್ಯಕ್ಷ ಡಾ. ಮುಹಮ್ಮದ್ ಅಯ್ಯೂಬ್ ಎಂಬವರು ೨೦೨೦ರ ಜನವರಿ ೨೧ರಂದು ಅಯೋಧ್ಯಾ ತೀರ್ಪಿನ ವಿರುದ್ಧ Curative Petition ದಾಖಲಿಸಿದರು. ಅವರು ಈ ಹಿಂದೆ ದೂರುದಾರರಾಗಿರಲಿಲ್ಲ.
ಆದರೆ ಅದನ್ನು ಸುಪ್ರೀಂ ಕೋರ್ಟ್ ಇನ್ನೂ ವಿಚಾರಣೆಗೆ ಒಪ್ಪಿಕೊಂಡೂ ಇಲ್ಲ. ಅಥವಾ ತನ್ನ ಹಿಂದಿನ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆಯನ್ನು ಕೊಟ್ಟಿಲ್ಲ.
ಸುಪ್ರೀಂ ಕೋರ್ಟಿನ ವೆಬ್ ಸೈಟಿನಲ್ಲಿ ಈ ಅಹವಾಲಿನ ವಿವರಗಳನ್ನು ನೋಡಿದರೆ ಅಹವಾಲುದಾರರೂ ಇದನ್ನು ಗಂಭೀರವಾಗಿ ಬೆಂಬತ್ತಿರುವಂತೆ ಕಾಣುತ್ತಿಲ್ಲ.
ಹೀಗಾಗಿ ಈ Curative Petition ಸರಕಾರದ ಮುಂದಿನ ನಡೆಗಳಿಗೆ ಯಾವುದೇ ರೀತಿ ಅಡ್ಡಿಯಾಗಲಿಲ್ಲ. (ಮೇಲಾಗಿ ಸುಪ್ರೀಂ ಈ Curative Petition ಅನ್ನು ಪರಿಗಣಿಸುವುದೂ ಇಲ್ಲ ಎಂಬುದಕ್ಕೆ ವಿಶೇಷ ಪುರಾವೆಗಳ ಅಗತ್ಯವಿಲ್ಲ).
(https://www.barandbench.com/news/litigation/ayodhya-judgment-creates-rights-based-on-illegal-acts-incorrigible-in-light-of-settled-law-peace-party-of-india-moves-curative-petition)
ರಾಮಜನ್ಮಭೂಮಿಯಲ್ಲೇ ರಾಮಮಂದಿರ
- ಹೀಗಾಗಿ ಕ್ಯೂರಿಟಿವ್ ಪೆಟಿಶನ್ ದಾಖಲಾದ 15 ದಿನದಲ್ಲೇ ಅಂದರೆ 2020ರ ಫೆಬ್ರವರಿ 5ರಂದು ಮೋದಿ ಸರಕಾರ ಬಾಬರಿ ಮಸೀದಿ ನಾಶ ಮಾಡಿದ ಜಾಗದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಮಾಡಲು 15 ಜನ ಸದಸ್ಯರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಸ್ಥಾಪಿಸಿತು.
ಈ ೧೫ ಜನರಲ್ಲಿ 12 ಜನರನ್ನು ಮೋದಿ ಸರಕಾರವೇ ನೇಮಕ ಮಾಡಿತು. ಅದರಲ್ಲಿ ಕರ್ನಾಟಕದ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮಿಯೂ ಒಬ್ಬರು. ಈ ಟ್ರಸ್ಟ್ ಕಾಮೇಶ್ವರ್ ಚೌಪಾಲ್ ಎಂಬ ವಿಶ್ವ ಹಿಂದೂ ಪರಿಷತ್ತಿನ ದಲಿತ ನಾಯಕರನ್ನು ನೆಪಮಾತ್ರಕ್ಕೆ ಸದಸ್ಯರನ್ನಾಗಿ ಸೇರಿಸಿಕೊಂಡಿದೆ.
ಟ್ರಸ್ಟಿನ ವೆಬ್ಸೈಟ್ ಸ್ಪಷ್ಟಪಡಿಸುವಂತೆ ಟ್ರಸ್ಟಿನ ಉದ್ದೇಶ:
‘‘ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡಲೆಂದೇ ಭಾರತ ಸರಕಾರ ಟ್ರಸ್ಟನ್ನು ಸ್ಥಾಪಿಸಿದೆ.’’
ಹೆಚ್ಚಿನ ವಿವರಗಳಿಗೆ ಆಸಕ್ತರು ಟ್ರಸ್ಟಿನ ವೆಬ್ಸೈಟನ್ನು ಈ ವಿಳಾಸದಲ್ಲಿ ಗಮನಿಸಬಹುದು:
https://srjbtkshetra.org/
- 2020 ರ ಆಗಸ್ಟ್ ೫ರಂದು ಪ್ರಧಾನಿ ಮೋದಿ ಬಾಬರಿ ಮಸೀದಿ ಕೆಡವಿದ ಜಾಗದಲ್ಲೇ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಮಾಡಿದರು.
(https://www.ndtv.com/india-news/ayodhya-ram-mandir-bhoomi-pujan-pm-narendra-modi-likely-to-spend-around-3-hours-in-ayodhya-tomorrow-2273752)
ಭೂಮಿ ಪೂಜೆ ಮಾಡಿದ ಜಾಗದಲ್ಲೇ ಅಂದರೆ ಬಾಬರಿ ಮಸೀದಿ ಧ್ವಂಸ ಮಾಡಿದ ಜಾಗದಲ್ಲೇ ರಾಮಮಂದಿರವೂ ನಿರ್ಮಾಣವಾಗುತ್ತಿದೆ.
(https://www.reuters.com/world/india/indian-temple-built-site-razed-mosque-open-in-january-2023-09-14/)
ಹೀಗಾಗಿ ಮಸೀದಿ ಇದ್ದ ಜಾಗದಿಂದ ಮೂರು ಕಿ.ಮೀ. ದೂರದಲ್ಲಿ ನಿರ್ಮಾಣವಾಗುತ್ತಿದೆ ಎಂಬ ವದಂತಿಯೆಲ್ಲಾ ಸುಳ್ಳು ಎಂಬುದನ್ನು ಮೇಲಿನ ಮಾಹಿತಿಗಳು ಸ್ಪಷ್ಟಪಡಿಸುತ್ತವೆ.
ಈ ಮಧ್ಯೆ ಮಸೀದಿ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರಕಾರವೂ ಅಯೋಧ್ಯೆಯಿಂದ ೨೫ ಕಿ.ಮೀ. ದೂರವಿರುವ ಧುನ್ಪುರದಲ್ಲಿ ಐದು ಎಕರೆ ಜಮೀನನ್ನು ನೀಡಿದೆ.
ಆದ್ದರಿಂದ ಕೇಂದ್ರ ಸರಕಾರ ವಶಪಡಿಸಿಕೊಂಡಿದ್ದ ೭೦ ಎಕರೆಗಳಲ್ಲೂ ರಾಮಮಂದಿರ ಸಂಸ್ಥಾನವನ್ನೇ ಮೋದಿ ಸರಕಾರ ನಿರ್ಮಿಸುತ್ತಿದೆ.
ಇದು ಬೃಹತ್ ಅನ್ಯಾಯ.
ಮಹಾ ಅಧರ್ಮ.
ಇವೆಲ್ಲಾ ಗೊತ್ತಿರುವ ವಿಷಯವೇ. ಈ ಅನ್ಯಾಯದ ವಿರುದ್ಧ ಮತ್ತು ಅಧರ್ಮದ ವಿರುದ್ಧ ನ್ಯಾಯವಂತರು ಧ್ವನಿ ಎತ್ತಬೇಕಿರುವ ಹೊತ್ತಿನಲ್ಲಿ ಇದ್ದಕ್ಕಿದ್ದಂತೆ ಬಾಬರಿ ಮಸೀದಿಯಿಂದ ಮೂರು ಕೀಮಿ. ದೂರದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂಬ ಹುಸಿ ಸಮಾಧಾನ ಕೊಡುವ ಹುಸಿ ಸುದ್ದಿ ಚಾಲ್ತಿಗೆ ಬಂದಿದೆ.
ಹುಸಿ ವದಂತಿಗಳಲ್ಲ- ಗಟ್ಟಿ ಹೋರಾಟಗಳು ಬೇಕು
ಇದಕ್ಕೆ ಯಾವ ತರ್ಕವೂ ಇಲ್ಲ.
ಮೇಲಿನ ವಿವರಗಳು ಅದನ್ನು ಸ್ಪಷ್ಟ ಪಡಿಸುತ್ತವೆ.
ಈವರೆಗೆ ಯಾವ ವಿರೋಧ ಪಕ್ಷಗಳೂ ಅಥವಾ ಈಗ ಇದನ್ನು ತಮ್ಮದೇ ಕಾರಣಗಳಿಗೆ ವಿರೋಧಿಸುತ್ತಿರುವ ಶಂಕರಾಚಾರ್ಯರೂ ಈ ವದಂತಿಯನ್ನು ಪರೋಕ್ಷವಾಗಿ ಸಮರ್ಥಿಸುವ ವಿಷಯವನ್ನೂ ಹೇಳುತ್ತಿಲ್ಲ.
ಉತ್ತರ ಪ್ರದೇಶದಲ್ಲಿ ಬೇರುಗಳನ್ನು ಹೊಂದಿರುವ ಯಾವ ಜನಪರ, ಪ್ರಗತಿಪರ ಪರ್ಯಾಯ ಮಾಧ್ಯಮಗಳೂ ರಾಮಮಂದಿರವು ಬಾಬರಿ ಮಸೀದಿ ನಾಶವಾದ ಜಾಗದಿಂದ ಮೂರು ಕಿ.ಮೀ. ದೂರದಲ್ಲಿ ನಿರ್ಮಾಣವಾಗುತ್ತಿದೆ ಎಂದು ವರದಿ ಮಾಡಿಲ್ಲ. ಏಕೆಂದರೆ ಅದು ವಾಸ್ತವವಲ್ಲ.
ಹಿಂದುತ್ವ ಫ್ಯಾಶಿಸ್ಟರ ವಿರುದ್ಧ ಹೋರಾಟ ಸುದೀರ್ಘವಾದುದು. ಹಾಗೂ ಸ್ಪಷ್ಟತೆಯನ್ನು ಬಯಸುವಂಥದ್ದು.
ಶತ್ರುಗಳನ್ನು ಮಿತ್ರರೆಂದು ಭಾವಿಸುವುದಾಗಲೀ, ತಾತ್ಕಾಲಿಕ ಪ್ರಯೋಜನಗಳ ದುಡುಕುಗಳಾಗಲೀ ಈ ಯುದ್ಧದಲ್ಲಿ ಆತ್ಮಹತ್ಯಾಕಾರಿಯಾಗುತ್ತದೆ. ಅಲ್ಲವೇ?
ಬಾಬರಿ ಮಸೀದಿ ಕೆಡವಿದ ಜಾಗ ಮತ್ತು ರಾಮಮಂದಿರ ಕಟ್ಟುತ್ತಿರುವ ಜಾಗ ಎರಡೂ ಒಂದೇ - ಎರಡು ಬೇರೆ ಬೇರೆ ಎಂಬ ಮಾಹಿತಿ ಸುಳ್ಳು- Alt News
ಗೂಗಲ್ ಮ್ಯಾಪ್ ಮತ್ತು ಸೆಟಲೈಟ್ ಮ್ಯಾಪ್ಗಳಲ್ಲಿ ಎರಡು ಬೇರೆ ಬೇರೆ ಪ್ರದೇಶಗಳನ್ನು ಬಾಬರಿ ಮಸೀದಿ ಜಾಗ ಮತ್ತು ರಾಮಮಂದಿರ ಜಾಗ ಎಂದು ತೋರಿಸುತ್ತಿರುವುದು ನಿಜವೇ ಎಂಬ ಬಗ್ಗೆ ಪ್ರಖ್ಯಾತ ಫ್ಯಾಕ್ಟ್ ಚೆಕ್ ವೆಬ್ಸೈಟಾದ Alt News ಕೂಲಂಕಷ ಅಧ್ಯಯನ ಮಾಡಿ ಇದು ಸುಳ್ಳು ಸುದ್ದಿ ಎಂದು ಸಾಬೀತು ಮಾಡಿದೆ.
Alt News ಫ್ಯಾಕ್ಟ್ ಚೆಕ್ನಿಂದ ಕೆಳಗಿನ ಅಂಶಗಳು ಸಾಬೀತಾಗಿವೆ:
1) ರಾಮಮಂದಿರದಿಂದ ಮೂರು ಕಿ.ಮೀ. ದೂರದಲ್ಲಿ ಬಾಬರಿ ಮಸೀದಿ ಇದೆ ಎಂದು ಯಾವುದನ್ನು ಆ ವೈರಲ್ ಪೋಸ್ಟ್ ಹೇಳುತ್ತಿದೆಯೋ ಆ ಜಾಗವು ವಾಸ್ತವದಲ್ಲಿ ಬಿರ್ಲಾ ಸೀತಾರಾಮ್ ಮಂದಿರ. ಅದನ್ನು ತಪ್ಪಾಗಿ ಬಾಬರ್ ಮಸೀದಿ ಎಂದು ತೋರಿಸಲಾಗಿದೆ.
2) ಹೆಸರೂ ಕೂಡ Babri Masjid ಎಂದಿಲ್ಲದೆ - Babar Masjid ಎಂದಿರುವುದನ್ನು ಇಲ್ಲಿ ಗಮನಿಸಬೇಕು.
3) Google Photo Pro ಆ್ಯಪ್ ಬಳಸಿ ಫೋಟೊಗಳ ಅಧ್ಯಯನ ನಡೆಸಿದಾಗ ನಿರ್ಮಾಣ ಪೂರ್ವದ ಬಾಬರಿ ಮಸೀದಿ ಜಾಗ ಹಾಗೂ ಈಗ ರಾಮಮದಿರ ನಿರ್ಮಾಣ ಆಗುತ್ತಿರುವ ಜಾಗ ಎರಡೂ ಒಂದೇ ಎಂದು ಸಾಬೀತಾಗಿದೆ ಮತ್ತು ಅದರ ಅಕ್ಷಾಂಶ ಮತ್ತು ರೇಖಾಶ ಎರಡೂ ಒಂದೇ ಆಗಿದೆ - 26°47’43.74″N 82°11’38.77″E
4) 2011ರ ಗೂಗಲ್ ಫೋಟೊಗಳನ್ನು ಈ ಹಿಂದೆ ಲಭ್ಯವಿರುವ ಬಾಬರಿ ಮಸೀದಿ ಪರಿಸರದ ಫೋಟೊಗಳೊಡನೆ ಹೋಲಿಸಿ ನೋಡಿದಾಗ ಆ ಜಾಗ ಒಂದೇ ಎಂದು ಸಾಬೀತಾಗಿದೆ.
ಆಸಕ್ತರು Alt News ಫ್ಯಾಕ್ಟ್ ಚೆಕ್ ನ ಪೂರ್ಣ ವಿವರಗಳನ್ನು ಈ ವೆಬ್ ವಿಳಾಸದಲ್ಲಿ ಗಮನಿಸಬಹುದು:
https://www.altnews.in/hindi/false-claim-viral-that-construction-of-ram-temple-is-3-km-away-from-babri-masjid/?utm_source=website&utm_medium=social-media&utm_campaign=newpost
ಸಾರಾಂಶದಲ್ಲಿ ಗೂಗಲ್ ಸ್ಯಾಟಲೈಟ್ ಇಮೇಜಸ್ನಲ್ಲಿ ಬಿರ್ಲಾ ಸೀತಾ ರಾಮ ಮಂದಿರದ ಜಾಗವನ್ನು ಸಂಬಂಧಪಟ್ಟವರು ಅಥವಾ ಕಿಡಿಗೇಡಿಗಳು ತಪ್ಪಾಗಿ ‘ಬಾಬರ್ ಮಸ್ಜಿದ್’ ಎಂದು ದಾಖಲಿಸಿರುವುದರಿಂದ ಗೊಂದಲ ಹುಟ್ಟಿದೆ. ವಿರೋಧ ಪಕ್ಷದ ನಾಯಕರುಗಳು ಅತ್ಯಂತ ಬೇಜವಾಬ್ದಾರಿಯಿಂದ ಅದರ ಸತ್ಯಾಸತ್ಯತೆಯನ್ನು ಗಮನಿಸದೆ ಪ್ರಚಾರ ಮಾಡಿದ್ದಾರೆ. ಕೆಲವು ಪ್ರಗತಿಪರರು ಸಹ ದುಡುಕಿದ್ದಾರೆ.