ಮಕ್ಕಳು, ಹಿರಿಯರ ಮೇಲೆ ಯುದ್ಧದ ಪರಿಣಾಮ: ಅಧ್ಯಯನ, ಆಕ್ರಮಣ - ಎರಡೂ ಇಸ್ರೇಲ್ ನಿಂದಲೇ !
Photo: PTI
ಗಾಝಾ ಮೇಲೆ ಇಸ್ರೇಲ್ ಆಕ್ರಮಣ ಶುರುವಾಗಿ ನಲ್ವತ್ತು ದಿನಗಳಾಗುತ್ತಾ ಬಂದಿದೆ. ಗಾಝಾ ಅಕ್ಷರಶಃ ಸ್ಮಶಾನದಂತಾಗಿದೆ. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಫೆಲೆಸ್ತೀನಿಯರು ಬಲಿಯಾಗಿದ್ದಾರೆ. ಅದರಲ್ಲಿ ಐದು ಸಾವಿರಕ್ಕೂ ಹೆಚ್ಚು ಮಕ್ಕಳು ಎಂದು ವರದಿಗಳು ಹೇಳುತ್ತಿವೆ. ಈ ನಡುವೆ ಇಸ್ರೇಲ್ ವಿಜ್ಞಾನಿಗಳೇ ಈ ಹಿಂದೆ ನಡೆಸಿರುವ ಅಧ್ಯಯನವೊಂದು ಚರ್ಚೆಗೆ ಬಂದಿದೆ. ಈ ಅಧ್ಯಯನವು ಹೇಗೆ ಹಿರಿಯ ನಾಗರಿಕರ ದೇಹ ಮತ್ತು ಮನಸ್ಸಿನ ಮೇಲೆ ಯುದ್ಧ, ಆಕ್ರಮಣ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದೆ ಎಂಬುದರ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ.
ಒಂದು ಕಡೆ ಇಸ್ರೇಲಿ ವಿಜ್ಞಾನಿಗಳೇ ಮಾಡಿರುವ ಅಧ್ಯಯನ ಯುದ್ಧಗಳಿಂದ ಹಿರಿಯ ನಾಗರಿಕರ ಮೇಲೆ ಹಾಗು ಅರೋಗ್ಯ ವ್ಯವಸ್ಥೆಯ ಭಾರೀ ದುಷ್ಪರಿಣಾಮ ಉಂಟಾಗುತ್ತದೆ ಎಂಬ ವರದಿಯಿದೆ. ಇನ್ನೊಂದೆಡೆ ಅದೇ ಇಸ್ರೇಲ್ ದೇಶ ಗಾಝಾ ಮೇಲೆ ನಿರಂತರ ಬಾಂಬು ಹಾಕುತ್ತಿದೆ, ರಾಕೆಟ್ ಗಳನ್ನು ಹಾರಿಸುತ್ತಿದೆ, ಟ್ಯಾಂಕರ್ ಗಳನ್ನು ಕಳಿಸುತ್ತಿದೆ.
ಯುದ್ಧ ನಡೆದಾಗ ಅದು ಹಿರಿಯರ ಮೇಲೆ ಏನೇನು ಪರಿಣಾಮ ಬೀರುತ್ತದೆ ಎಂದು ನಡೆಸಿದ ಈ ಅಧ್ಯಯನ "Elderly People Coping With the Aftermath of War: Resilience Versus Vulnerability" ಎಂಬ ಹೆಸರಲ್ಲಿ ಪ್ರಕಟವಾಗಿದೆ. ಇಸ್ರೇಲಿ ವಿಜ್ಞಾನಿಗಳಾದ ಶೌಲ್ ಕಿಮ್ಹಿ, ಶಿರಾ ಹಂಟ್ಮ್ಯಾನ್, ಮರೀನಾ ಗೆರೊಶಿಟ್ ಎಂ ಎ, ಯೋಹಾನನ್ ಈಷೆಲ್ ಹಾಗು ಲೀಹು ಝಿಸ್ಬರ್ಗ್ ಈ ಅಧ್ಯಯನ ವರದಿಯನ್ನು ಪ್ರಕಟಿಸಿದ್ದಾರೆ.
ಮೊದಲೇ ದೈಹಿಕವಾಗಿ, ಮಾನಸಿಕವಾಗಿ ದುರ್ಬಲವಾಗಿರುವ ಹಿರಿಯರು ಯುದ್ಧ, ಆಕ್ರಮಣಗಳಿಂದ ಜರ್ಜರಿತರಾಗುತ್ತಾರೆ. ಅವರ ಒತ್ತಡ ಹೆಚ್ಚುತ್ತದೆ, ಅರೋಗ್ಯ ಕೆಡುತ್ತದೆ ಹಾಗು ಭಾವನಾತ್ಮಕವಾಗಿಯೂ ಅವರು ಬಹಳ ದುರ್ಬಲವಾಗುತ್ತಾರೆ ಎಂದು ಈ ವರದಿ ಹೇಳಿದೆ.
ಆದರೆ ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣವನ್ನು ಇಸ್ರೇಲ್ ನ ವೈದ್ಯರೂ ಬೆಂಬಲಿಸಿದ್ದಾರೆ. ಇಸ್ರೇಲ್ ಗಾಝಾದ ಆಸ್ಪತ್ರೆಗಳನ್ನೂ ಬಿಡದೆ ದಾಳಿ ಮಾಡುತ್ತಿದೆ. ಈ ಮೂಲಕ ಯುದ್ಧದ ಸಂದರ್ಭಗಳಲ್ಲಿ ಪಾಲಿಸಬೇಕಾದ ನಿಯಮ ಹಾಗೂ ನೈತಿಕತೆಯನ್ನು ಉಲ್ಲಂಘಿಸಿದೆ. ಆದರೆ ಅದೇ ಇಸ್ರೇಲ್ ನ ಬಹಳಷ್ಟು ವೈದ್ಯರು ಇಸ್ರೇಲ್ ನ ಈ ಆಕ್ರಮಣವನ್ನು ಬೆಂಬಲಿಸಿದ್ದಾರೆ.
"ಪಾಶ್ಚಿಮಾತ್ಯರ ಅನುಕಂಪದ ಲಾಭ ಪಡೆದು ಆಸ್ಪತ್ರೆಗಳನ್ನು ಭಯೋತ್ಪಾದಕರ ತಾಣವಾಗಿಸಿ ಗಾಝಾದ ಜನರು ಸ್ವತಃ ತಮ್ಮ ಮೇಲೆ ವಿನಾಶವನ್ನು ತಂದುಕೊಂಡಿದ್ದಾರೆ. ಭಯೋತ್ಪಾದನೆಯನ್ನು ಎಲ್ಲೇ ಹೇಗೇ ಇದ್ದರೂ ನಿರ್ನಾಮ ಮಾಡಬೇಕು. ಹಾಗಾಗಿ ಇಸ್ರೇಲಿ ಸೇನೆ ಉಗ್ರರನ್ನು ಕೊಲ್ಲಲು ಆಸ್ಪತ್ರೆ ಮೇಲೆ ದಾಳಿ ಮಾಡಿದ್ದರೆ ಅದು ಸರಿ, ಅದು ಸೇನೆಯ ಕರ್ತವ್ಯವೂ ಹೌದು " ಎಂದು ಹಲವು ಇಸ್ರೇಲಿ ವೈದ್ಯರು ನೀಡಿರುವ ಹೇಳಿಕೆ ಪ್ರಚಾರ ಪಡೆದಿದೆ.
2009 ರಲ್ಲಿ ಇಸ್ರೇಲಿನ ಇನ್ನೊಂದು ವಿಜ್ಞಾನಿಗಳ ತಂಡ ಎರಡನೇ ಮಹಾಯುದ್ಧದಲ್ಲಿ ಬಲವಂತದಿಂದ ಒಕ್ಕಲೆಬ್ಬಿಸಲ್ಪಟ್ಟ ಪರಿಣಾಮ ಇಂದಿನ ಹಿರಿಯರ ಮಾನಸಿಕ ಆರೋಗ್ಯದ ಮೇಲೆ ಹೇಗಾಗಿದೆ ಎಂಬ ಬಗ್ಗೆ "Impact of forced displacement during World War II on the present-day mental health of the elderly" ಹೆಸರಲ್ಲಿ ಒಂದು ಅಧ್ಯಯನ ವರದಿ ಪ್ರಕಟಿಸಿತು. ಇಸ್ರೇಲಿ ವಿಜ್ಞಾನಿಗಳಾದ ಫಿಲಿಪ್ ಕುವೆರ್ಟ್, ಎಲ್ಮರ್ ಬ್ರಹ್ಲೆರ್ , ಹೀಡ್ ಗ್ಲಾಸ್ಮೆರ್ , ಹೆರಾಲ್ಡ್ ಜರ್ಗನ್ ಫ್ರೆಬೆರ್ಗೆರ್ ಹಾಗು ಒಲಿವರ್ ಡೆಕೆರ್ ಅವರು ಈ ವರದಿಯನ್ನು ಪ್ರಕಟಿಸಿದ್ದರು. ಯುದ್ಧದ ಸಮಯದಲ್ಲಿ ತಮ್ಮ ಮನೆ ಹಾಗು ಪ್ರದೇಶದಿಂದ ಹೋಗಬೇಕಾದವರು ಬಹಳ ಒತ್ತಡ ಹಾಗು ಕಡಿಮೆ ಪ್ರತಿರೋಧ ಶಕ್ತಿ ಪ್ರದರ್ಶಿಸುತ್ತಾರೆ. ಅವರಿಗೆ ಜೀವನದಲ್ಲಿ ನೆಮ್ಮದಿಯೂ ಕಡಿಮೆ ಇರುತ್ತದೆ ಎಂದು ವರದಿ ಹೇಳಿತ್ತು.
ಯುದ್ಧ ಹಾಗು ಆಕ್ರಮಣಗಳ ಬಗ್ಗೆ ತಮ್ಮದೇ ದೇಶದ ವಿಜ್ಞಾನಿಗಳು ಇಷ್ಟೆಲ್ಲಾ ಅಧ್ಯಯನ ಮಾಡಿದ್ದರೂ ಗಾಝಾದ ಜನರ ಮೇಲೆ ಮಾತ್ರ ಇಸ್ರೇಲ್ ಇಂದಿಗೂ ಆಕ್ರಮಣ ನಡೆಸುತ್ತಲೇ ಇದೆ. ಈ ಆಕ್ರಮಣದಿಂದ ಈಗ ಆಗುತ್ತಿರುವ ನಾಶ, ನಷ್ಟ, ಪ್ರಾಣ ಹಾನಿ ಅಲ್ಲದೆ ಇದರ ದೀರ್ಘಕಾಲೀನ ಪರಿಣಾಮಗಳನ್ನು ಅಲ್ಲಿನ ಮಹಿಳೆಯರು, ಮಕ್ಕಳು ಹಾಗು ಹಿರಿಯ ನಾಗರಿಕರು ಎದುರಿಸಬೇಕಾಗಿದೆ. ಹಿಂಸೆ, ದಾಳಿ, ಆಕ್ರಮಣ, ನಾಶ, ನಷ್ಟಗಳು ಅವರ ಮೇಲೆ ಬೀರುವ ಪರಿಣಾಮವನ್ನು ಮುಂದಿನ ಹಲವು ದಶಕಗಳ ಕಾಲ ಅವರು ಅನುಭವಿಸಬೇಕಾಗುತ್ತದೆ. ಇದೆಲ್ಲವನ್ನೂ ಇಸ್ರೇಲಿ ವಿಜ್ಞಾನಿಗಳೇ ಅವರ ವರದಿಗಳಲ್ಲಿ ಹೇಳಿದ್ದಾರೆ. ಆದರೆ ಅದೇ ಇಸ್ರೇಲ್ ಸ್ವತಃ ಆಕ್ರಮಣ ಮಾಡುತ್ತಿದೆ, ಅದನ್ನು ಮುಂದುವರಿಸುತ್ತಲೇ ಇದೆ.