ಕ್ರಿಶ್ಚಿಯನ್ನರ ಮೇಲೆ ಇಸ್ರೇಲ್ ದಾಳಿ
ಇಸ್ರೇಲ್ ಮತ್ತು ಫೆಲೆಸ್ತೀನ್ ಸಂಘರ್ಷದಲ್ಲಿ ಚರ್ಚ್‌ಗಳ ಮೇಲಿನ ದಾಳಿಗಳ ಬಗ್ಗೆಯೂ ಕೇಳುತ್ತಲೇ ಇದ್ದೇವೆ. ಇದೇನೂ ಹೊಸದಲ್ಲ. ಮೊದಲಿಂದಲೂ ಸಂಘರ್ಷ ತೀವ್ರಗೊಂಡಾಗಲೆಲ್ಲ ಯೆಹೂದಿ ಮತ್ತು ಮುಸ್ಲಿಮ್ ಪವಿತ್ರ ಸ್ಥಳಗಳಲ್ಲಿ ಉದ್ವಿಗ್ನತೆ ತಲೆದೋರುತ್ತಲೇ ಬಂದಿದೆ. ಇಸ್ರೇಲಿಗಳು ಮತ್ತು ಫೆಲೆಸ್ತೀನಿಯನ್ನರ ನಡುವಿನ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದಂತೆ, ಜೆರುಸಲೇಮ್‌ನಲ್ಲಿರುವ ಕ್ರಿಶ್ಚಿಯನ್ನರು ಕೂಡ ದಾಳಿಗೆ ಒಳಗಾಗುತ್ತಲೇ ಇರುತ್ತಾರೆ.
ಜೆರುಸಲೇಮ್‌ನ ಕ್ರಿಶ್ಚಿಯನ್ನರು ವರ್ಷಗಳಿಂದಲೂ ಬೆದರಿಕೆಗೆ ಒಳಗಾಗುತ್ತಿದ್ಧಾರೆ. ಪ್ರಸಕ್ತ ಇವರ ಜನಸಂಖ್ಯೆ ಸುಮಾರು 10,000. ಅಂದರೆ, ನಗರದ ಜನಸಂಖ್ಯೆಯ ಶೇ. ಒಂದಕ್ಕಿಂತ ಸ್ವಲ್ಪ ಹೆಚ್ಚು, ಶತಮಾನದಷ್ಟು ಹಿಂದೆ ಜನಸಂಖ್ಯೆಯ ಕಾಲುಭಾಗದಷ್ಟಿತ್ತು ಈ ಸಮುದಾಯದ ಜನಸಂಖ್ಯೆ. ಬಲಪಂಥೀಯ ಧಾರ್ಮಿಕ ವ್ಯಕ್ತಿಗಳ ಪ್ರಾಬಲ್ಯದಿಂದಾಗಿ ಜೆರುಸಲೇಮ್ ಒಡೆದುಹೋಗುತ್ತಿದೆ ಮತ್ತು ಕ್ರಿಶ್ಚಿಯನ್ನರನ್ನು ಮತ್ತಷ್ಟು ಅಂಚಿಗೆ ತಳ್ಳಲಾಗುತ್ತಿದೆ. ಅವರಲ್ಲಿ ಅನೇಕರು ಹೆಚ್ಚು ಸುರಕ್ಷಿತ ಭವಿಷ್ಯಕ್ಕಾಗಿ ಬೇರೆಡೆಗೆ ನೋಡುವ ಸ್ಥಿತಿ ಬಂದೊದಗಿದೆ ಎಂದು ಇವತ್ತಿನ ಸ್ಥಿತಿಯನ್ನು ಕ್ರಿಶ್ಚಿಯನ್ ಮುಖ್ಯಸ್ಥರು ವಿವರಿಸುತ್ತಾರೆ.
ಮೂಲಭೂತವಾದಿ ಯೆಹೂದಿಗಳು ಜೆರುಸಲೇಮ್‌ನ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ತೋರುವ ಹಗೆತನ ಹೊಸದಲ್ಲ, ಇದೇ ಕಾರಣದಿಂದಲೇ 2005ರಿಂದ ಕ್ರಿಶ್ಚಿಯನ್ ಆಚರಣೆಗಳು ಭಾರೀ ಭದ್ರತೆಯ ನಡುವೆ ನಡೆಯಬೇಕಾದ ಸ್ಥಿತಿ ತಲೆದೋರಿದೆ. ಐತಿಹಾಸಿಕವಾಗಿ 11,000ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿದ್ದ ಸಮಾರಂಭಗಳು ಕಳೆದ ವರ್ಷದಿಂದ 1,800ಕ್ಕೆ ಸೀಮಿತವಾಗಿವೆ.
ಇಸ್ರೇಲ್‌ನ ಹೊಸ ಸರಕಾರ ಅಧಿಕಾರಕ್ಕೆ ಬಂದ ನಂತರವಂತೂ ಜೆರುಸಲೇಮ್‌ನಲ್ಲಿ ಕ್ರಿಶ್ಚಿಯನ್ನರ ವಿರುದ್ಧದ ದಾಳಿಗಳು ಹೆಚ್ಚು ಹಿಂಸಾತ್ಮಕ ಮತ್ತು ಸಾಮಾನ್ಯವಾಗಿದೆ ಎಂಬ ವರದಿಗಳಿವೆ. ಈ ವರ್ಷದ ಆರಂಭದಲ್ಲಿ, ಪ್ರೊಟೆಸ್ಟಂಟ್ ಮೌಂಟ್ ಜಿಯಾನ್ ಸ್ಮಶಾನದಲ್ಲಿ 30 ಕ್ರಿಶ್ಚಿಯನ್ ಸಮಾಧಿಗಳನ್ನು ಅಪವಿತ್ರಗೊಳಿಸಲಾಯಿತು. ಹಲವೆಡೆ ಗೋಡೆಗಳ ಮೇಲೆ ಅರಬರು, ಕ್ರಿಶ್ಚಿಯನ್ನರು ಮತ್ತು ಅರ್ಮೇನಿಯನ್ನರಿಗೆ ಸಾವು ಕಾದಿದೆ ಎಂಬ ಬರಹಗಳು ಕಾಣಿಸಿಕೊಂಡವು. ಇಂತಹ ಎಲ್ಲ ಸಂದರ್ಭಗಳಲ್ಲೂ ಪೊಲೀಸರು ದಾಳಿಕೋರರ ಮೇಲೆ ಕ್ರಮ ಜರುಗಿಸುವುದು ತೀರಾ ಕಡಿಮೆ ಎಂದೇ ಸಂತ್ರಸ್ತರು ದೂರುತ್ತಾರೆ. ದಾಳಿಕೋರರನ್ನು ಮಾನಸಿಕ ಅಸ್ವಸ್ಥರು ಎಂದು ಸಾರಾಸಗಟಾಗಿ ಹೇಳಿಬಿಡುವ ಪೊಲೀಸರು, ಇಂತಹ ದಾಳಿಗಳನ್ನು ನಿರ್ಲಕ್ಷಿಸುವ ಪ್ರವೃತ್ತಿಯೊಂದು ಸಾಮಾನ್ಯವಾಗಿದೆ ಎಂದೇ ಚರ್ಚ್ ಮತ್ತು ಸಮುದಾಯದ ಮುಖಂಡರು ಹೇಳುತ್ತಾರೆ.
ದಾಳಿಗಳಿಗೆ ಅವರು ಅಲ್ಪಸಂಖ್ಯಾತ ಯೆಹೂದಿ ಉಗ್ರರನ್ನು ದೂಷಿಸಿದರೂ, ಇಸ್ರೇಲ್‌ನ ಬಲಪಂಥೀಯ ಸರಕಾರ ಯೆಹೂದಿಯೇತರರ ಮೇಲಿನ ಇಂತಹ ನಿರಾತಂಕ ದಾಳಿಗಳಿಗೆ ಕಾರಣ ಎಂಬ ಅಂಶವೂ ಅವರಿಗೆ ಗೊತ್ತಿಲ್ಲದೆ ಇಲ್ಲ. ಇಸ್ರೇಲಿ ನೀತಿಗಳು ಸಮುದಾಯಕ್ಕೆ ಹೆಚ್ಚು ಬೆದರಿಕೆ ಒಡ್ಡಿವೆ ಎಂಬುದನ್ನು ಫೆಲೆಸ್ತೀನಿಯನ್ ರಾಷ್ಟ್ರೀಯ ಕ್ರಿಶ್ಚಿಯನ್ ಒಕ್ಕೂಟದ ಮುಖ್ಯಸ್ಥರು ಹೇಳುತ್ತಾರೆ. ಇಲ್ಲಿಯೇ ಉಳಿಯುವುದು ಮತ್ತು ತಮ್ಮ ಪರಂಪರೆಯನ್ನು ರಕ್ಷಿಸುವುದು ಕಷ್ಟಕರವಾಗುತ್ತಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸುತ್ತಾರೆ.
ಚರ್ಚ್‌ಗಳ ಗೋಡೆಗಳ ಮೇಲೆ ಏನೇನೋ ಬರೆಯುವುದು, ಇಲ್ಲಿ ನೆಲೆಸಿರುವ ಮತ್ತು ಕೆಲಸ ಮಾಡುವ ಪಾದ್ರಿಗಳಿಗೆ ಕಿರುಕುಳ ನೀಡುವುದು, ಒಮ್ಮೊಮ್ಮೆ ದೈಹಿಕ ಹಲ್ಲೆಯೂ ನಡೆಯುತ್ತಿರುವುದರ ಬಗ್ಗೆ ದೂರುಗಳು ಇದ್ದೇ ಇವೆ. ಆದರೆ ಇಂತಹ ಘಟನೆಗಳಲ್ಲಿ ಹೆಚ್ಚಿನವುಗಳ ಬಗ್ಗೆ ತನಿಖೆಯೂ ಆಗುವುದಿಲ್ಲ ಎಂಬುದು ಕ್ರಿಶ್ಚಿಯನ್ ಮುಖಂಡರ ಕಳವಳ.
ಕ್ರಿಶ್ಚಿಯನ್ ವಿರೋಧಿ ಘಟನೆಗಳಿಗೆ ನಿಖರವಾದ ಲೆಕ್ಕವಿಲ್ಲ. ಆದರೆ ಇಸ್ರೇಲ್ ಮತ್ತು ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ಸ್ಮಶಾನಗಳು, ಚರ್ಚ್‌ಗಳು ಮತ್ತು ಮಸೀದಿಗಳ ಮೇಲೆ ಯೆಹೂದಿಗಳ ದಾಳಿಗಳು ಏರುತ್ತಲೇ ಇವೆ. 2022ರಲ್ಲಿ ಕೇವಲ ಎರಡು ಮತ್ತು 2021ರಲ್ಲಿ ಮೂರು ಘಟನೆಗಳಿಗೆ ಹೋಲಿಸಿದರೆ, 2023ರ ಮೊದಲ ಮೂರೇ ತಿಂಗಳುಗಳಲ್ಲಿ ಇಂಥ ಆರು ಘಟನೆಗಳು ನಡೆದಿರುವುದರ ಬಗ್ಗೆ ವರದಿಗಳು ಹೇಳುತ್ತಿವೆ.
ಇಸ್ರೇಲಿ ಸರಕಾರ ಮಾತ್ರ, ಎಲ್ಲಾ ನಂಬಿಕೆಗಳ ಜನರು ಸುರಕ್ಷಿತವಾಗಿ ಬದುಕುವಂತೆ ನೋಡಿಕೊಳ್ಳುವುದಕ್ಕೆ ಬದ್ಧವಾಗಿರುವುದಾಗಿ ಹೇಳುತ್ತಿದೆ. ಧಾರ್ಮಿಕ ದಾಳಿಗಳು ಮತ್ತು ವಿಧ್ವಂಸಕ ಕೃತ್ಯಗಳ ವಿರುದ್ಧದ ತನಿಖೆ ಮತ್ತು ಕಾನೂನು ಉಲ್ಲಂಘಿಸುವವರನ್ನು ಶಿಕ್ಷಿಸುವ ಬಗ್ಗೆ ಇಸ್ರೇಲ್ ಪೊಲೀಸರೂ ಹೇಳುತ್ತಲೇ ಇರುತ್ತಾರೆ.
ಜೆರುಸಲೇಮ್‌ಗೆ ಭೇಟಿ ನೀಡುವ ಯೆಹೂದಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವುದರ ವಿರುದ್ಧ ಮತ್ತು ನಿರ್ದಿಷ್ಟವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಕೃತ್ಯಗಳ ವಿರುದ್ಧ ಕ್ರಮದ ಭರವಸೆ ಕೊಡುವ ಪೊಲೀಸರು ನಿಜವಾಗಿಯೂ ಅದಕ್ಕೆ ಬದ್ಧರಾಗಿದ್ದಾರೆಯೇ ಎಂಬ ಪ್ರಶ್ನೆಯಿದೆ.
ಇಸ್ರೇಲ್‌ನ ಸಾಮಾಜಿಕ ರಚನೆಯನ್ನು ರೂಪಿಸುವ ಅಸ್ಮಿತೆ ಮತ್ತು ನಂಬಿಕೆಗಳ ಸಂಕೀರ್ಣತೆಯಲ್ಲಿ, ಮುಸ್ಲಿಮರು ಮತ್ತು ಯೆಹೂದಿಗಳು ಹಾಗೆಯೇ ಇಸ್ರೇಲಿಗಳು ಮತ್ತು ಫೆಲೆಸ್ತೀನಿಯರು ಎಂಬ ಸಂಘರ್ಷದ ನಡುವೆ ಕ್ರಿಶ್ಚಿಯನ್ನರ ಅವಸ್ಥೆ ಕೆಲವೊಮ್ಮೆ ದಿಕ್ಕೆಟ್ಟಂತಾಗುವುದು ನಿಜ.
ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿರುವ ಅನೇಕ ಕ್ರಿಶ್ಚಿಯನ್ನರು ಫೆಲೆಸ್ತೀನಿಯರಾಗಿದ್ಧಾರೆ. ಇಸ್ಲಾಮ್ ಧರ್ಮಕ್ಕೆ ಬದ್ಧವಾಗಿರುವ ಹೆಚ್ಚಿನ ಫೆಲೆಸ್ತೀನಿ ಜನಸಂಖ್ಯೆಗೆ ಹೋಲಿಸಿದರೆ ಕ್ರಿಶ್ಚಿಯನ್ ಫೆಲೆಸ್ತೀನಿಯರು ಅಲ್ಪಸಂಖ್ಯಾತರಾಗಿದ್ದಾರೆ.
ಮುಸ್ಲಿಮ್ ಮತ್ತು ಯೆಹೂದಿಗಳ ಪವಿತ್ರ ಸ್ಥಳಗಳ ಸುತ್ತಲಿನ ಉದ್ವಿಗ್ನತೆಗಳು ಸಾಮಾನ್ಯವಾಗುತ್ತಿವೆ. ಇಸ್ರೇಲ್‌ನಲ್ಲಿನ ಇತ್ತೀಚಿನ ಹಿಂಸಾತ್ಮಕ ಭುಗಿಲೇಳುವಿಕೆ ಮತ್ತು ಅಲ್-ಅಕ್ಸಾ ಮಸೀದಿಯ ಆವರಣದ ಮೇಲೆ ಈ ತಿಂಗಳು ನಡೆದ ಇಸ್ರೇಲಿ ಪೋಲಿಸ್ ದಾಳಿಗೆ ಪ್ರತಿಕ್ರಿಯೆಯಾಗಿ ತಲೆದೋರಿರುವ ಈಗಿನ ಸಂಘರ್ಷ ಇವೆಲ್ಲವೂ ಇದರದ್ದೇ ಭಾಗ.
ಕಳೆದ ಜನವರಿಯಲ್ಲಿ ಇಬ್ಬರು ಯುವಕರು ಯೆಹೂದಿಗಳ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ 28 ಸಮಾಧಿಗಳನ್ನು ಧ್ವಂಸಗೊಳಿಸಿದ್ದು ಭದ್ರತಾ ಕ್ಯಾಮರಾಗಳಲ್ಲಿ ದಾಖಲಾಗಿರುವುದಾಗಿ ಇಸ್ರೇಲಿ ಪೊಲೀಸರು ಹೇಳುತ್ತಾರೆ. 14 ಮತ್ತು 18 ವರ್ಷದ ಯುವಕನನ್ನು ನಂತರ ಬಂಧಿಸಿ ಅವರ ಮೇಲೆ ದೋಷಾರೋಪ ಮಾಡಲಾಯಿತು. ಇಂತಹ ಹಿಂಸಾಚಾರಗಳನ್ನು ಕೊನೆಗೊಳಿಸಲು ಸರಕಾರಕ್ಕೆ ಸಾಧ್ಯವಿದೆ ಎಂಬ ನಂಬಿಕೆ ತಮಗಿಲ್ಲ ಎಂದೇ ಚರ್ಚ್ ಮುಖ್ಯಸ್ಥರಲ್ಲಿ ಕೆಲವರು ಭಾವಿಸುತ್ತಾರೆ.
ಉಗ್ರರ ದಾಳಿಯಿಂದ ಸಂತ್ರಸ್ತರಾದವರಿಗೆ ಸಂತಾಪ ಸೂಚಿಸುವ ಕೆಲಸವನ್ನು ಒಂದೆಡೆ ಯೆಹೂದಿಗಳು ಮಾಡುತ್ತಿದ್ದರೆ, ಯೆಹೂದಿ ಉಗ್ರರು ಶಿಕ್ಷೆಯಿಲ್ಲದೆ ನಿರಾತಂಕವಾಗಿರುವುದೂ ಇನ್ನೊಂದೆಡೆ ನಡೆದಿದೆ ಎಂಬುದು ಅವರ ಸಂಕಟ.
ಕ್ರಿಶ್ಚಿಯನ್ನರು ಮತ್ತು ಅವರ ಪವಿತ್ರ ಸ್ಥಳಗಳನ್ನು ಗುರಿಯಾಗಿಸುವುದು ಕೆಲವು ಅತಿ ಧಾರ್ಮಿಕ ಯೆಹೂದಿ ಗುಂಪುಗಳು ಎಂಬುದು ಚರ್ಚ್ ಮುಖಂಡರ ದೂರು.
ಹದಿಹರೆಯದ ಯೆಶಿವಾ ವಿದ್ಯಾರ್ಥಿಗಳನ್ನು ಇದಕ್ಕಾಗಿ ಬಳಸಲಾಗುತ್ತದೆ. ಎಲ್ಲವನ್ನೂ ವಶಪಡಿಸಿಕೊಳ್ಳಬೇಕೆಂಬ ಮನೋಭಾವವನ್ನು ಅವರಲ್ಲಿ ತುಂಬಲಾಗುತ್ತದೆ. ಏನನ್ನು ಮಾಡಲೂ ಹೆದರದ ಸುಮಾರು 15 ಅಥವಾ 16ರ ವಯಸ್ಸಿನ ಯುವಕರನ್ನು ಮುಂದೆ ಬಿಟ್ಟು ಇಂಥದನ್ನೆಲ್ಲ ಮಾಡಿಸುವವರು ಇದ್ದಾರೆ ಎಂಬುದು ಅವರ ಆರೋಪ.
ಸಾಮಾನ್ಯವಾಗಿ ಕ್ರಿಶ್ಚಿಯನ್ ಚಿಹ್ನೆಗಳನ್ನು ಗುರಿಯಾಗಿಸುವ ಇಂತಹ ದಾಳಿಕೋರರು ಮೊದಲು ಇಷ್ಟು ಧೈರ್ಯ ತೋರುತ್ತಿರಲಿಲ್ಲ. ಆದರೆ ಇತ್ತೀಚೆಗೆ ಕ್ರಿಶ್ಚಿಯನ್ನರ ಮೇಲೆ ಒಬ್ಬ ತನ್ನ ಬಂದೂಕಿನಿಂದ ಗುಂಡು ಹಾರಿಸಿದ ಘಟನೆಯ ಬಳಿಕ, ತಾವು ಏನನ್ನು ಮಾಡುವುದಕ್ಕೂ ತಯಾರು ಎಂಬಂಥ ಸಂದೇಶ ನೀಡಿದಂತಿರುವುದು ಆತಂಕವನ್ನು ಹೆಚ್ಚಿಸಿದೆ.
1948ರಿಂದಲೂ ಇರುವ ಇಸ್ರೇಲ್ ಮತ್ತು ಚರ್ಚ್‌ಗಳ ನಡುವಿನ ಅತ್ಯಂತ ಗಂಭೀರ ಬಿಕ್ಕಟ್ಟು ಇದೆಲ್ಲದರ ಹಿಂದಿದೆ. ಇಸ್ರೇಲಿ ಸರಕಾರ ಮೌಂಟ್ ಆಫ್ ಆಲಿವ್‌ನಲ್ಲಿರುವ ಕ್ರಿಶ್ಚಿಯನ್ ತಾಣಗಳನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿರುವುದರಿಂದ ಇದು ಸಂಭವಿಸುತ್ತಿದೆ ಎಂದು ಹೇಳಲಾಗುತ್ತದೆ.
ಧಾರ್ಮಿಕ ವಿಷಯಗಳು ಹೆಚ್ಚು ರಾಜಕೀಯಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ಚರ್ಚ್ ಮುಖಂಡರು ಗಮನ ಸೆಳೆಯುತ್ತಾರೆ. ಜೆರುಸಲೇಮ್‌ನಲ್ಲಿನ ರಾಜಕೀಯ ಸಂಘರ್ಷವನ್ನು ಧಾರ್ಮಿಕವಾಗಿ ಬದಲಾಯಿಸಲು ಬಯಸುವವರು ಹೆಚ್ಚಿದ್ದಾರೆ. ಅಂತಿಮವಾಗಿ ಉಗ್ರರು ಗೆಲ್ಲುವಂತಾಗಿದೆ ಎಂಬುದು ಅವರ ಕಳವಳ.
ಇಂಥ ವಿಷಮ ಸ್ಥಿತಿಯ ನಡುವೆ ಕ್ರಿಶ್ಚಿಯನ್ ಸಮುದಾಯದ ಒಳಗುಂಪುಗಳು ಒಗ್ಗಟ್ಟಾಗುವ ಮನಃಸ್ಥಿತಿಗೆ ಬರುತ್ತಿವೆ. ಪ್ರತ್ಯೇಕವಾಗಿ ಇರುತ್ತೇವೆ ಎಂದು ಹೊರಟರೆ ಅಂತಿಮವಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ ಎಂಬ ಗ್ರಹಿಕೆ ಸಮುದಾಯದೊಳಗೆ ಮೂಡುತ್ತಿದೆ. ಬೆದರಿಕೆಗಳು, ಹಿಂಸಾಚಾರ, ವಿಧ್ವಂಸಕತೆಗಳು ಹೆಚ್ಚುತ್ತಿದ್ದಂತೆ ಜನರು ಒಗ್ಗೂಡುತ್ತಿದ್ದಾರೆ. ಚರ್ಚ್ ಗಳು ಎಚ್ಚರಗೊಳ್ಳುತ್ತಿವೆ. 50 ವರ್ಷಗಳ ಕಾಲದಿಂದ ಇದ್ದ ಒಡಕನ್ನು ನಿವಾರಿಸಿಕೊಳ್ಳುವ ಹಾದಿಯೊಂದು ಸಮುದಾಯದ ಎದುರು ತೆರೆದುಕೊಳ್ಳುತ್ತಿರುವಂತಿದೆ.