ಜೈಲಿನೊಳಗಿಂದಲೇ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ನರ್ಗಿಸ್ ಮುಹಮ್ಮದಿ
ಶಿರಿನ್ ಇಬಾದಿ ಬಳಿಕ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ 2ನೇ ಇರಾನಿ ಮಹಿಳೆ
Photo : X / @vonderleyen
ಇರಾನ್ನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಮಾನವ ಹಕ್ಕುಗಳ ಹೋರಾಟಕ್ಕಾಗಿ ನರ್ಗಿಸ್ ಮುಹಮ್ಮದಿ ಅವರಿಗೆ 2023 ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದೆ. ಆಕೆಯ ದಿಟ್ಟ ಹೋರಾಟಕ್ಕೆ ಪ್ರತಿಯಾಗಿ 13 ಬಾರಿ ಬಂಧಿನಕ್ಕೊಳಗಾಗಿದ್ದಾರೆ. ಐದು ಬಾರಿ ಅಪರಾಧಿ ಎಂದು ತೀರ್ಪು ನೀಡಲಾಗಿದೆ. ಆಕೆಗೆ ಒಟ್ಟು 31 ವರ್ಷಗಳ ಜೈಲು ಶಿಕ್ಷೆ ಮತ್ತು 154 ಛಡಿ ಏಟಿನ ಶಿಕ್ಷೆ ವಿಧಿಸಿದೆ. ಪ್ರಶಸ್ತಿ ಘೋಷಣೆಯಾಗುವ ಸಂದರ್ಭದಲ್ಲೂ ನರ್ಗಿಸ್ ಮುಹಮ್ಮದಿ ಇನ್ನೂ ಜೈಲಿನಲ್ಲಿದ್ದಾರೆ.
ಸೆಪ್ಟೆಂಬರ್ 2022 ರಲ್ಲಿ ಯುವ ಕುರ್ದಿಷ್ ಮಹಿಳೆ ಮಹ್ಸಾ ಜಿನಾ ಅಮಿನಿ ಇರಾನಿನ ಪೊಲೀಸರ ವಶದಲ್ಲಿದ್ದಾಗ ಕೊಲ್ಲಲ್ಪಟ್ಟರು. ಆಕೆಯ ಹತ್ಯೆಯು ಇರಾನ್ನ ಆಡಳಿತದ ವಿರುದ್ಧ ಅತಿದೊಡ್ಡ ರಾಜಕೀಯ ಪ್ರತಿಭಟನೆಗಳನ್ನು ಪ್ರಚೋದಿಸಿತು. "ಮಹಿಳೆ - ಜೀವನ - ಸ್ವಾತಂತ್ರ್ಯ" ಎಂಬ ಘೋಷಣೆಯ ಅಡಿಯಲ್ಲಿ, ಸಾವಿರಾರು ಇರಾನಿಯನ್ನರು ಅಧಿಕಾರಿಗಳ ಕ್ರೂರತೆ ಮತ್ತು ಮಹಿಳೆಯರ ದಬ್ಬಾಳಿಕೆಯ ವಿರುದ್ಧ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಸರಕಾರವು ಪ್ರತಿಭಟನೆಗಳನ್ನು ಉಗ್ರವಾಗಿ ಹತ್ತಿಕ್ಕಿತು. 500 ಕ್ಕೂ ಹೆಚ್ಚು ಪ್ರತಿಭಟನಾಕಾರರು ಕೊಲ್ಲಲ್ಪಟ್ಟರು. ಪೊಲೀಸರು ಹಾರಿಸಿದ ರಬ್ಬರ್ ಗುಂಡುಗಳಿಂದ ಕುರುಡರಾದ ಹಲವರು ಸೇರಿದಂತೆ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಕನಿಷ್ಠ 20,000 ಜನರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ಪ್ರದರ್ಶನಕಾರರು ಬಳಸಿದ್ದ ಧ್ಯೇಯವಾಕ್ಯ - "ಮಹಿಳೆ - ಜೀವನ - ಸ್ವಾತಂತ್ರ್ಯ" - ನರ್ಗಿಸ್ ಮುಹಮ್ಮದಿಯವರ ಕೆಲಸವನ್ನು ಸೂಕ್ತವಾಗಿ ವ್ಯಕ್ತಪಡಿಸುತ್ತದೆ. ಸಾಮಾಜಿಕ ಸೇವೆಗೆ ಅವರ ಅರ್ಪಣೆ ಆ ಧ್ಯೇಯ ವಾಕ್ಯದಲ್ಲಿ ಎದ್ದು ಕಾಣಿಸುತ್ತದೆ.
ನರ್ಗಿಸ್ ಅವರು ಮಹಿಳೆಯರ ಮೇಲಿನ ವ್ಯವಸ್ಥಿತ ತಾರತಮ್ಯ ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಾರೆ. ಗೌರವಯುತ ಜೀವನ ನಡೆಸುವ ಹಕ್ಕಿಗಾಗಿ ಮಹಿಳೆಯರು ನಡೆಸುವ ಹೋರಾಟವನ್ನು ಅವರು ಬೆಂಬಲಿಸುತ್ತಾರೆ. ಇರಾನ್ನಾದ್ಯಂತ ಈ ಹೋರಾಟವು ಕಿರುಕುಳ, ಜೈಲು ವಾಸ, ಚಿತ್ರಹಿಂಸೆ ಮತ್ತು ಸಾವನ್ನು ಕೂಡ ಎದುರಿಸಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗಾಗಿ ನರ್ಗಿಸ್ ದನಿಯೆತ್ತಿದ್ದಾರೆ. ಮಹಿಳೆಯರು ಮುಖ್ಯವಾಹಿನಿಯಿಂದ ದೂರವಿರಲು ಮತ್ತು ಅವರ ದೇಹವನ್ನು ಮುಚ್ಚಿಕೊಳ್ಳುವ ನಿಯಮಗಳ ವಿರುದ್ಧ ಹೋರಾಟ ಮಾಡಿದ್ದಾರೆ. 1990ರ ದಶಕದಲ್ಲಿ ಭೌತಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ ಯುವ ನರ್ಗಿಸ್ ಮುಹಮ್ಮದಿ ಅವರು ಸಮಾನತೆ ಮತ್ತು ಮಹಿಳಾ ಹಕ್ಕುಗಳ ವಕೀಲರೆಂದು ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದರು. ತನ್ನ ಅಧ್ಯಯನವನ್ನು ಮುಗಿಸಿದ ನಂತರ, ಅವರು ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಿವಿಧ ಸುಧಾರಣಾ ಮನೋಭಾವದ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಕೆಲಸ ಮಾಡಿದರು. 2003 ರಲ್ಲಿ ಅವರು ಟೆಹ್ರಾನ್ನಲ್ಲಿರುವ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಶಿರಿನ್ ಇಬಾದಿ ಸ್ಥಾಪಿಸಿದ ಸಂಸ್ಥೆ ಡಿಫೆಂಡರ್ಸ್ ಆಫ್ ಹ್ಯೂಮನ್ ರೈಟ್ಸ್ ಸೆಂಟರ್ನೊಂದಿಗೆ ತೊಡಗಿಸಿಕೊಂಡರು. ಸೆರೆವಾಸದಲ್ಲಿರುವ ಕಾರ್ಯಕರ್ತರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುವ ಪ್ರಯತ್ನಗಳಿಗಾಗಿ 2011 ರಲ್ಲಿ ಮುಹಮ್ಮದಿಯನ್ನು ಮೊದಲ ಬಾರಿಗೆ ಬಂಧಿಸಲಾಯಿತು. ಹಲವು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು.
ಎರಡು ವರ್ಷಗಳ ನಂತರ, ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಮುಹಮ್ಮದಿ ಮರಣದಂಡನೆಯ ವಿರುದ್ಧದ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಅತ್ಯಧಿಕ ಪ್ರಮಾಣದಲ್ಲಿ ಮರಣದಂಡನೆ ವಿಧಿಸುವ ದೇಶಗಳಲ್ಲಿ ಇರಾನ್ ಬಹಳ ಹಿಂದಿನಿಂದಲೂ ಮುಂಚೂಣಿಯಲ್ಲಿದೆ. ಜನವರಿ 2022 ರಿಂದ, ಇರಾನ್ನಲ್ಲಿ 860 ಕ್ಕೂ ಹೆಚ್ಚು ಕೈದಿಗಳಿಗೆ ಮರಣದಂಡನೆ ವಿಧಿಸಲಾಗಿರುವುದೇ ಇದಕ್ಕೆ ನಿದರ್ಶನ.
ಮರಣದಂಡನೆಯ ವಿರುದ್ಧದ ಆಕೆಯ ಹೋರಾಟವನ್ನು ದಮನಿಸಲು 2015 ರಲ್ಲಿ ಮುಹಮ್ಮದಿಯನ್ನು ಪುನಃ ಬಂಧಿಸಲಾಯಿತು. ಶಿಕ್ಷೆಯ ಪ್ರಮಾಣ ಹೆಚ್ಚಿಸಲಾಯಿತು. ಜೈಲಿಗೆ ಹೋದ ಬಳಿಕ, ಇರಾನಿನ ಜೈಲುಗಳಲ್ಲಿ ರಾಜಕೀಯ ಕೈದಿಗಳನ್ನು, ಅದರಲ್ಲೂ ಮಹಿಳೆಯರನ್ನು ಚಿತ್ರಹಿಂಸೆ ಮತ್ತು ಲೈಂಗಿಕ ದೌರ್ಜನ್ಯಕ್ಕಾಗಿ ಬಳಸುವುದನ್ನು ಅವರು ವಿರೋಧಿಸಿದರು.
ಕಳೆದ ವರ್ಷದ ಪ್ರತಿಭಟನೆಯ ಅಲೆಯು ಟೆಹ್ರಾನ್ನ ಜೈಲಿನಲ್ಲಿದ್ದ ರಾಜಕೀಯ ಕೈದಿಗಳಿಗೆ ತಿಳಿದಿತ್ತು. ಮತ್ತೊಮ್ಮೆ ಮುಹಮ್ಮದಿ ನಾಯಕತ್ವವನ್ನು ವಹಿಸಿಕೊಂಡರು. ಜೈಲಿನಿಂದಲೇ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದರು. ಸಹ ಕೈದಿಗಳ ನಡುವೆ ಒಗ್ಗಟ್ಟಿರುವಂತೆ ನೋಡಿಕೊಂಡರು. ಇದನ್ನು ಗಮನಿಸಿದ ಜೈಲು ಅಧಿಕಾರಿಗಳು ಆಕೆಗೆ ನೀಡಿದ್ದ ಸವಲತ್ತುಗಳನ್ನು ಕಿತ್ತುಕೊಂಡರು. ಬಿಗಿ ನಿಲುವು ತಾಳಿದರು. ಮುಹಮ್ಮದಿ ಅವರು ಕರೆಗಳನ್ನು ಸ್ವೀಕರಿಸುವುದನ್ನು ಮತ್ತು ಸಂದರ್ಶಕರನ್ನು ಭೇಟಿಯಾಗುವುದನ್ನು ನಿಷೇಧಿಸಲಾಗಿದೆ. ಅದೆಷ್ಟೇ ನಿರ್ಬಂಧ ವಿಧಿಸಿದ್ದರೂ ಮಹ್ಸಾ ಜಿನಾ ಅಮಿನಿಯ ಜೈಲಿನೊಳಗಿನಿಂದಲೇ ಕಳುಹಿಸಿ ಹತ್ಯೆಗೆ ಒಂದು ವರ್ಷದ ತುಂಬುವ ದಿನ ನ್ಯೂಯಾರ್ಕ್ ಟೈಮ್ಸ್ನಲ್ಲಿ
ಲೇಖನ ಪ್ರಕಟವಾಗುವಂತೆ ನೋಡಿಕೊಂಡರು. ಆ ಲೇಖನದ ಸಂದೇಶವು ಹೀಗಿತ್ತು: "ನಮ್ಮನ್ನು ಬಂಧಿಸಿ ಇಟ್ಟಷ್ಟು ಹೆಚ್ಚು ನಾವು ಬಲಶಾಲಿಯಾಗುತ್ತೇವೆ”. ಆ ಮೂಲಕ ಮುಹಮ್ಮದಿ ಪ್ರತಿಭಟನೆಗಳು ಮತ್ತು ಅವುಗಳ ಪ್ರಭಾವ ಕಡಿಮೆಯಾಗದಂತೆ ನೋಡಿಕೊಂಡರು.
ನರ್ಗಿಸ್ ಮುಹಮ್ಮದಿ ಒಬ್ಬ ಮಹಿಳೆ, ಮಾನವ ಹಕ್ಕುಗಳ ವಕೀಲೆ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ. ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವಾಗ, ನಾರ್ವೇಜಿಯನ್ ನೊಬೆಲ್ ಸಮಿತಿಯು ಇರಾನ್ನಲ್ಲಿ ಮಾನವ ಹಕ್ಕುಗಳು, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ಅವರ ಧೈರ್ಯಶಾಲಿ ಹೋರಾಟವನ್ನು ಗೌರವಿಸಲು ಬಯಸುತ್ತದೆ ಎಂದು ಹೇಳಿದೆ.
ಆಧಾರ : nobelprize.org