ಕೊನೆಗೂ ನಡೆಯಲಿದೆಯೇ ದೇಶದ ಜನಗಣತಿ?
ಜನಗಣತಿ ಜೊತೆ ಜಾತಿ ಗಣತಿಯೂ ನಡೆಯಬಹುದೇ?
PC : PTI
ಬಹು ಸಮಯದಿಂದ ಸ್ಥಗಿತವಾಗಿರುವ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ನವೀಕರಣ 2025ರ ಆರಂಭದಲ್ಲಿ ಶುರುವಾಗುವ ಸಾಧ್ಯತೆಯಿದೆ. ಜನಗಣತಿ ಅಂಕಿ ಅಂಶಗಳು 2026ರ ವೇಳೆಗೆ ಬಹಿರಂಗಗೊಳ್ಳಬಹುದು ಎಂದು ಮೂಲಗಳು ಹೇಳಿವೆ.
ಮುಂಬರುವ ವರ್ಷಗಳಲ್ಲಿ ಜನಗಣತಿ ಚಕ್ರಗಳು ಪೂರ್ತಿಯಾಗಿ ಬದಲಾಗಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಆದರೆ, ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ಕೈಗೊಳ್ಳುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ದೇಶದಲ್ಲಿ ಜನಗಣತಿಯನ್ನು 1951 ರಿಂದ ಪ್ರತಿ 10 ವರ್ಷಗಳಿಗೊಮ್ಮೆ ನಡೆಸಲಾಗುತ್ತಿತ್ತು. ಅದರಂತೆ 2021ರಲ್ಲಿ ನಡೆಯಬೇಕಿದ್ದ ಜನಗಣತಿ ಕೋವಿಡ್ ಕಾರಣದಿಂದ ನಡೆಯಲಿಲ್ಲ. ಅದು ಮುಂದೆ ಯಾವಾಗ ನಡೆಯಲಿದೆ ಎಂಬುದರ ಬಗ್ಗೆಯೂ ಈವರೆಗೆ ಅಧಿಕೃತವಾಗಿ ಘೋಷಿಸಿಲ್ಲ.
► ಬದಲಾಗಲಿರುವ ಜನಗಣತಿ ಚಕ್ರ:
ಜನಗಣತಿ ಮತ್ತು ಎನ್ಪಿಆರ್ ಕೆಲಸ ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭವಾಗುತ್ತದೆ. 2026 ರ ವೇಳೆಗೆ ಜನಸಂಖ್ಯೆ ಅಂಕಿ ಅಂಶಗಳನ್ನು ಪ್ರಕಟಿಸಲಾಗುವುದು. ಇದರೊಂದಿಗೆ, ಮುಂದೆ ಜನಗಣತಿ ನಡೆಯುವ ಚಕ್ರ ಕೂಡ ಬದಲಾವಣೆಯಾಗುವ ಸಾಧ್ಯತೆಯಿದೆ. ಅದು 2025-2035, 2035-2045 ಈ ರೀತಿಯಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
► ಎಸ್ ಎಸ್ಟಿ ಕುರಿತ ಪ್ರಶ್ನೆಗಳು :
ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ಗಣತಿ ಕಾರ್ಯದ ಸಮಯದಲ್ಲಿ ನಾಗರಿಕರಿಗೆ ಕೇಳಲು 31 ಪ್ರಶ್ನೆಗಳನ್ನು ಸಿದ್ಧಪಡಿಸಿದೆ. ಈ ಪ್ರಶ್ನೆಗಳ ಪಟ್ಟಿಯಲ್ಲಿ ಹಿಂದಿನ ಜನಗಣತಿಯಲ್ಲಿ ಕೇಳಿದಂತೆ, ಕುಟುಂಬದ ಮುಖ್ಯಸ್ಥ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾನೆಯೆ, ಕುಟುಂಬದ ಇತರ ಸದಸ್ಯರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆಯೆ ಎಂಬ ಪ್ರಶ್ನೆಯೂ ಇರಲಿದೆ.
► ಜಾತಿ ಗಣತಿಗೆ ಕಾಂಗ್ರೆಸ್ – ಆರ್ ಜೆ ಡಿ ಒತ್ತಾಯ:
ದೇಶದ ಒಟ್ಟು ಒಬಿಸಿ ಜನಸಂಖ್ಯೆಯನ್ನು ತಿಳಿದುಕೊಳ್ಳಲು ಜಾತಿ ಗಣತಿಗಾಗಿಯೂ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಆರ್ಜೆಡಿ ಒತ್ತಾಯಿಸುತ್ತಿವೆ. ಆದರೆ ಜಾತಿ ಗಣತಿ ಕುರಿತು ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
► ಲೋಕಸಭಾ ಕ್ಷೇತ್ರ ಮರುವಿಂಗಡನೆ ಸಾಧ್ಯತೆ:
ಜನಗಣತಿಯ ಅಂಕಿ ಅಂಶ ಪ್ರಕಟವಾದ ನಂತರ 2026 ರಲ್ಲಿ ಲೋಕಸಭಾ ಕ್ಷೇತ್ರ ಮರುವಿಂಗಡಣೆಗೆ ಸರ್ಕಾರ ಮುಂದಾಗುವ ಸಾಧ್ಯತೆಯಿದೆ. ದಕ್ಷಿಣ ರಾಜ್ಯಗಳ ಹಲವಾರು ರಾಜಕೀಯ ನಾಯಕರು ತಮ್ಮ ರಾಜ್ಯಗಳು ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯ ಬಗ್ಗೆ ಈಗಾಗಲೇ ಆತಂಕ ವ್ಯಕ್ತಪಡಿಸಿದ್ದಾರೆ. ಹೊಸ ಅಂಕಿ ಅಂಶಗಳೊಂದಿಗೆ ಮರುವಿಂಗಡಣೆ ನಡೆಸಿದರೆ ದಕ್ಷಿಣದ ರಾಜ್ಯಗಳ ಲೋಕಸಭಾ ಸ್ಥಾನಗಳು ಈಗಿರುವುದಕ್ಕಿಂತ ಕಡಿಮೆಯಾಗಬಹುದು ಎಂಬುದು ಅವರ ಕಳವಳ.
► ಮರುವಿಂಗಡನೆ ನಡೆದರೆ ಉತ್ತರಕ್ಕೆ ಹೆಚ್ಚು ಪ್ರಾಮುಖ್ಯ!
ಅದೇ ಆಧಾರದಲ್ಲಿ ಮರುವಿಂಗಡಣೆ ಆದರೆ ಉತ್ತರ ಭಾರತದ ರಾಜ್ಯಗಳ ಲೋಕಸಭಾ ಸ್ಥಾನಗಳು ಬಹಳ ಹೆಚ್ಚಾಗಲಿವೆ ಎಂದೂ ಅಂದಾಜಿಸಲಾಗಿದೆ. ಹೀಗಾದರೆ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತಕ್ಕೆ ಪ್ರಾಮುಖ್ಯತೆಯೇ ಇಲ್ಲವಾಗಲಿದೆ. ಬಹುಮತಕ್ಕೆ ಬೇಕಾದ ಸ್ಥಾನಗಳನ್ನು ಯಾವುದೇ ಪಕ್ಷ ಉತ್ತರದ ರಾಜ್ಯಗಳಲ್ಲೇ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಸಂವಿಧಾನದ 82ನೇ ವಿಧಿ, 2026ರ ನಂತರದ ಮೊದಲ ಜನಗಣತಿಯ ಅಂಕಿ ಅಂಶ ಪ್ರಕಟಿಸುವವರೆಗೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಅಗತ್ಯವಿಲ್ಲ ಎಂದು ಹೇಳಿದೆ. ಅಂದರೆ, 2025ರಲ್ಲಿ ಜನಗಣತಿ ನಡೆದು, ಅದರ ಅಂಕಿ ಅಂಶ 2026ರಲ್ಲಿ ಪ್ರಕಟವಾದರೆ, 2025ರ ಜನಗಣತಿ ಅಂಕಿ ಅಂಶ ಆಧರಿಸಿ ಕ್ಷೇತ್ರ ಮರುವಿಂಗಡಣೆ ಮಾಡಲು ಆಗುವುದಿಲ್ಲ. ಹಾಗೆ ಮಾಡಲೇಬೇಕು ಎಂದಾದರೆ, 82ನೇ ವಿಧಿಗೆ ತಿದ್ದುಪಡಿ ತರಬೇಕಾಗುತ್ತದೆ. ಕ್ಷೇತ್ರ ಮರುವಿಂಗಡಣೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಈ ಎಲ್ಲಾ ಅಂಶಗಳನ್ನು ಪರಿಗಣಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.
► ಜನಗಣತಿಯಲ್ಲಿ ಯಾವುದೆಲ್ಲಾ ಪ್ರಶ್ನೆಗಳಿರಲಿವೆ?
ಜನಗಣತಿ ವೇಳೆ ಪ್ರತಿ ಕುಟುಂಬಕ್ಕೆ ಕೇಳಲಾಗುವ 31 ಪ್ರಶ್ನೆಗಳಲ್ಲಿ ಸಾಮಾನ್ಯವಾಗಿ ಇರಬಹುದಾದ ಪ್ರಶ್ನೆಗಳೆಂದರೆ,
ಕುಟುಂಬದ ಒಟ್ಟು ಸದಸ್ಯರು ಎಷ್ಟು?
ಕುಟುಂಬದ ಮುಖ್ಯಸ್ಥರು ಮಹಿಳೆಯೇ?
ಕುಟುಂಬದ ಅಡಿಯಲ್ಲಿಯೇ ಪ್ರತ್ಯೇಕವಾಗಿ ವಾಸವಿರುವವರ ಕೋಣೆಗಳ ಸಂಖ್ಯೆ?
ವಿವಾಹಿತ ದಂಪತಿಗಳ ಸಂಖ್ಯೆ?
ಕುಟುಂಬದಲ್ಲಿ ದೂರವಾಣಿ, ಇಂಟರ್ನೆಟ್ ಸಂಪರ್ಕ, ಮೊಬೈಲ್ ಅಥವಾ ಸ್ಮಾರ್ಟ್ಫೋನ್, ಬೈಸಿಕಲ್, ದ್ವಿಚಕ್ರ ವಾಹನಗಳು, ಕಾರು, ಜೀಪು, ವ್ಯಾನ್ ಗಳು ಇವೆಯೆ?
ಮನೆಯಲ್ಲಿ ಸೇವಿಸುವ ಸಿರಿಧಾನ್ಯ ಯಾವುದು?
ಕುಡಿಯುವ ನೀರಿನ ಮುಖ್ಯ ಮೂಲ ಯಾವುದು?
ಬೆಳಕಿನ ಮುಖ್ಯ ಮೂಲ ಯಾವುದು?
ಶೌಚಾಲಯ ಇದೆಯೆ, ಇದ್ದರೆ ಯಾವ ಪ್ರಕಾರದ್ದು?
ತ್ಯಾಜ್ಯ ನೀರಿನ ಔಟ್ ಲೆಟ್, ಸ್ನಾನದ ಸೌಲಭ್ಯ, ಅಡುಗೆಮನೆ ಮತ್ತು ಎಲ್ಪಿಜಿ ಲಭ್ಯತೆ ಬಗ್ಗೆಯೂ ಪ್ರಶ್ನೆಗಳು ಇರಲಿವೆ.
ಮೊದಲ ಜನಗಣತಿಯಾದದ್ದು ಯಾವಾಗ?
ಭಾರತದ ಮೊದಲ ಜನಗಣತಿ 1872 ರಲ್ಲಿ ನಡೆಯಿತು. ಸ್ವಾತಂತ್ರ್ಯದ ನಂತರದ ಮೊದಲ ಜನಗಣತಿ 1951 ರಲ್ಲಿ ನಡೆಯಿತು. ಕೊನೆಯದಾಗಿ ಜನಗಣತಿ ನಡೆದದ್ದು 2011ರಲ್ಲಿ. 2011 ರ ಜನಗಣತಿ ಅಂಕಿ ಅಂಶಗಳ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆ 121 ಕೋಟಿ.
ಲಿಂಗ ಅನುಪಾತ 1,000 ಪುರುಷರಿಗೆ 940 ಮಹಿಳೆಯರು. ಸಾಕ್ಷರತೆ ಪ್ರಮಾಣ ಶೇ.74.04 ಮತ್ತು 2001 ರಿಂದ 2011 ರವರೆಗೆ ಜನಸಂಖ್ಯೆಯ ಬೆಳವಣಿಗೆ ಶೇ.17.64 ಇತ್ತು. ಗ್ರಾಮೀಣ ಪ್ರದೇಶದ ಜನಸಂಖ್ಯೆ ಶೇ.68.84 ಇದ್ದರೆ, ನಗರ ಪ್ರದೇಶದ ಜನಸಂಖ್ಯೆ ಶೇ.31.16 ಆಗಿದೆ.
► ಅತೀ ಹೆಚ್ಚು ಜನಸಂಖ್ಯೆ ಇರುವ ರಾಜ್ಯ ಯಾವುದು?
ಉತ್ತರ ಪ್ರದೇಶ 20 ಕೋಟಿ ಜನಸಂಖ್ಯೆಯೊಂದಿಗೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿದೆ. 64,429 ಜನಸಂಖ್ಯೆಯನ್ನು ಹೊಂದಿರುವ ಲಕ್ಷದ್ವೀಪ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಿದೆ. ಭೌಗೋಳಿಕವಾಗಿ ರಾಜಸ್ಥಾನ 3,42,239 ಚದರ ಕಿಮೀ ವಿಸ್ತೀರ್ಣದೊಂದಿಗೆ ಅತೀ ದೊಡ್ಡ ರಾಜ್ಯವಾಗಿತ್ತು. ಗೋವಾ 3,702 ಚದರ ಕಿಮೀ ವಿಸ್ತೀರ್ಣದೊಂದಿಗೆ ಅತೀ ಚಿಕ್ಕ ರಾಜ್ಯವಾಗಿತ್ತು.