ಕಾಂಗ್ರೆಸ್ ಗ್ಯಾರಂಟಿ ದೂಷಿಸಿದ ಬಿಜೆಪಿಯಿಂದ ಜಾರ್ಖಂಡ್ ನಲ್ಲಿ ಗ್ಯಾರಂಟಿ ಘೋಷಣೆ!
ಕರ್ನಾಟಕದ ಗ್ಯಾರಂಟಿಯನ್ನು ಕಾಪಿ ಪೇಸ್ಟ್ ಮಾಡಿದ ಬಿಜೆಪಿ
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಈಡೇರಿಸಲಾಗದ ಸುಳ್ಳುಗಳು, ರಾಜ್ಯದ ಅಭಿವೃದ್ಧಿ ಕುಸಿದಿದೆ. ಗ್ಯಾರಂಟಿಗಳು ಕಣ್ಣೊರೆಸುವ ತಂತ್ರ ಎಂದು ಕರ್ನಾಟಕದ ಗ್ಯಾರಂಟಿಗಳ ಬಗ್ಗೆ ಬಿಜೆಪಿಯು ಹಿಗ್ಗಾಮುಗ್ಗಾ ಟೀಕಿಸಿತ್ತು. ಆ ಟೀಕೆಗೆ ಬಿಜೆಪಿ ನಾಯಕರು, ಐಟಿಸೆಲ್ ಭರ್ಜರಿ ಪ್ರಚಾರ ಕೊಟ್ಟು ರಾಜ್ಯ ದಿವಾಳಿ ಆಗಿದೆ, ಆರ್ಥಿಕತೆ ಕುಸಿದಿದೆ ಅಂತೆಲ್ಲಾ ಅಪಪ್ರಚಾರ ಮಾಡಿದ್ದರು. ಅತ್ತ ಜಾರ್ಖಂಡ್ ನಲ್ಲಿ ಅದೇ ಮೋದಿಯವರ ಪಕ್ಷ ಚುನಾವಣೆಗೆ ಅದೇ ಗ್ಯಾರಂಟಿ ಗಳನ್ನು ಘೋಷಣೆ ಮಾಡಿದೆ!
ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ, ಈಗ ಈ ಯೋಜನೆಗಳು ಹೆಚ್ಚು ಕಾಲ ಇರುವುದಿಲ್ಲ ಎಂಬ ಅಪಪ್ರಚಾರ. ಉಚಿತ ಭರವಸೆಗಳನ್ನು ಕೊಟ್ಟಿರೋದು ಕಾಂಗ್ರೆಸ್ ಆದರೆ ರಾಜ್ಯ ದಿವಾಳಿ, ಅದೇ ಬಿಜೆಪಿ ಆದರೆ ಅದು ಮಹಾ ಅಭಿವೃದ್ಧಿ. ಇದು ಸದ್ಯ ನಮ್ಮ ದೇಶದಲ್ಲಿ ಕಂಡುಬರುತ್ತಿರುವ ರಾಜಕೀಯ .
‘ಪ್ರಚಾರದ ವೇಳೆ ಅವರು ಜನರಿಗೆ ಭರವಸೆಗಳನ್ನು ನೀಡುತ್ತಾರೆ. ಅದನ್ನು ಈಡೇರಿಸಲು ಆಗುವುದಿಲ್ಲ ಎನ್ನುವುದೂ ಅವರಿಗೆ ತಿಳಿದಿದೆ. ಈಗ ಅವರು ಜನರ ಮುಂದೆ ಬೆತ್ತಲಾಗಿದ್ದಾರೆ’ ಎಂದು ಮೊನ್ನೆ ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದರು. ಅದರ ಬೆನ್ನಲ್ಲೇ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಪ್ರಕಟಿಸಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಘೋಷಿಸಿದಂತಹ ಗ್ಯಾರಂಟಿಗಳದ್ದೇ ಕಾಪಿ ಪೇಸ್ಟ್ ಮಾಡಿದಂತಿದೆ.
ಗೋಗೋ - ದೀದಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2100 ರು.ಆರ್ಥಿಕ ನೆರವು, ಮಾಸಿಕ 300 ಯುನಿಟ್ವರೆಗೆ ಉಚಿತ ವಿದ್ಯುತ್ ಪೂರೈಕೆ, ವಾರ್ಷಿಕ 2 ಉಚಿತ ಎಲ್ಪಿಜಿ ಸಿಲಿಂಡರ್, ಪದವಿ, ಸ್ನಾತಕೋತ್ತರ ಪದವೀಧರರಿಗೆ 2 ವರ್ಷಗಳವರೆಗೆ ಮಾಸಿಕ 2000 ರು. ನೆರವು, 5 ಲಕ್ಷ ಸ್ವಯಂ ಉದ್ಯೋಗ ಸೃಷ್ಟಿ, 2.87 ಲಕ್ಷ ಸರ್ಕಾರಿ ಹುದ್ದೆ ಭರ್ತಿ, ಅಗ್ನಿವೀರರಿಗೆ ಖಚಿತ ಉದ್ಯೋಗದ ಭರವಸೆ ಸೇರಿದಂತೆ ಹಲವು ಯೋಜನೆಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಕಟಿಸಿದೆ.
ಅಲ್ಲದೆ ಆದಿವಾಸಿಗಳನ್ನು ಹೊರಗಿಟ್ಟು ಏಕರೂಪ ನಾಗರಿಕ ಸಂಹಿತೆ ಜಾರಿಯ ಭರವಸೆಯನ್ನೂ ಕಮಲ ಪಕ್ಷ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಣಾಳಿಕೆ ಒಳಗೊಂಡ ‘ಸಂಕಲ್ಪ ಪತ್ರ’ವನ್ನು ರವಿವಾರ ಇಲ್ಲಿ ಬಿಡುಗಡೆ ಮಾಡಿದ್ದಾರೆ.
81 ಸ್ಥಾನಬಲದ ರಾಜ್ಯ ವಿಧಾನಸಭೆಗೆ ನ.13 ಮತ್ತು ನ.20ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು. ನ.23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಈ ವೇಳೆ ಮಾತನಾಡಿರುವ ಅಮಿತ್ ಶಾ , ರಾಜ್ಯದಲ್ಲಿ ಜೆಎಂಎಂ ಸರ್ಕಾರ ನುಸುಳುಕೋರರಿಗೆ ಪ್ರೋತ್ಸಾಹ ನೀಡುತ್ತಿದೆ. ಪರಿಣಾಮ ರಾಜ್ಯದಲ್ಲಿ ಬುಡಕಟ್ಟು ಜನಸಂಖ್ಯೆ ಕ್ಷೀಣಿಸುತ್ತಿದ್ದು, ಗಿರಿಜನ ವಾಸಿಗಳ ಜೀವ, ಜೀವನಕ್ಕೆ ಆತಂಕ ಎದುರಾಗಿದೆ. ಜನಸಂಖ್ಯೆಯ ಸ್ವರೂಪ ವೇಗವಾಗಿ ಬದಲಾಗುತ್ತಿದೆ. ಹಿಂದೂಗಳ ಸಂಖ್ಯೆ ಸಹ ಕಡಿಮೆಯಾಗುತ್ತಿದೆ. ತುಷ್ಟೀಕರಣದ ಫಲವಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ ಹೆಚ್ಚಿದೆ. ಭ್ರಷ್ಟ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಆರೋಪಿಸಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ನ ಗ್ಯಾರಂಟಿಗಳು ಬಿಜೆಪಿಯ ಗಂಟಲ ಮುಳ್ಳಾಗಿ ಬಿಟ್ಟಿವೆ ಎಂಬುದು ಗ್ಯಾರಂಟಿಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವಲ್ಲಿ ಆ ಗ್ಯಾರಂಟಿಗಳನ್ನೇ ವಿರೋಧಿಸಿದವರು, ತಾನು ಚುನಾವಣೆ ಎದುರಿಸುವಲ್ಲಿ ಅದೇ ಗ್ಯಾರಂಟಿಗಳನ್ನು ಒಂದಿಷ್ಟೂ ನಾಚಿಕೆಯಿಲ್ಲದೆ ಕಾಪಿ ಪೇಸ್ಟ್ ಮಾಡಿ ಘೋಷಣೆ ಮಾಡಿದ್ದಾರೆ.