ಕೇಂದ್ರಕ್ಕೆ ಸೆಡ್ಡು ಹೊಡೆಯಲಿದೆ ಕಾಂಗ್ರೆಸ್ ಸರ್ಕಾರ !
ಕೇಂದ್ರದ 3 ನಿರ್ಧಾರಗಳನ್ನು ವಿರೋಧಿಸಲು ರಾಜ್ಯ ಸರ್ಕಾರ ಸಿದ್ಧತೆ
ಸಿದ್ದರಾಮಯ್ಯ ಸರಕಾರ ಕೇಂದ್ರದ ಮೋದಿ ಮೈತ್ರಿ ಸರಕಾರಕ್ಕೆ ಜೋರಾಗಿಯೇ ಸೆಡ್ಡು ಹೊಡೆಯಲು ನಿರ್ಧರಿಸಿದ ಹಾಗೆ ಕಾಣುತ್ತಿದೆ. ಈಗ ಮೂರು ಪ್ರಮುಖ ವಿಷಯಗಳಲ್ಲಿ ಕೇಂದ್ರ ಸರಕಾರದ ಧೋರಣೆಯನ್ನು ವಿರೋಧಿಸಿ ಸಿದ್ದರಾಮಯ್ಯ ಸರಕಾರ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.
ಈ ಮೂರೂ ವಿಷಯಗಳ ಬಗ್ಗೆ ರಾಜ್ಯ ಸರಕಾರದ ವಿರೋಧದ ಬಗ್ಗೆ ಇದೇ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಲು ಸಿದ್ದರಾಮಯ್ಯ ಸರಕಾರ ಹೊರಟರೆ ಅಲ್ಲಿಗೆ ಕೇಂದ್ರ ಸರಕಾರದ ಜೊತೆ ಹೊಸ ಫೈಟ್ ಶುರುವಾಗಲಿದೆ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ NTA ನಡೆಸುವ ನೀಟ್ ಪರೀಕ್ಷೆಯನ್ನು ವಿರೋಧಿಸಿ, ವಿಧಾನ ಮಂಡಲ ಉಭಯ ಅಧಿವೇಶನದಲ್ಲಿ ನಿರ್ಣಯ ಮಂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರದ ‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆ ಮತ್ತು ಜನಸಂಖ್ಯೆ ಆಧಾರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಮರು ವಿಂಗಡನೆ ಪ್ರಕ್ರಿಯೆಯನ್ನೂ ವಿರೋಧಿಸಿ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.
ಈ ಸಾಲಿನಲ್ಲಿ ನಡೆದ ನೀಟ್ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ವಿಚಾರ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು, ಇದೇ ಅಧಿವೇಶನದಲ್ಲಿ ನೀಟ್ ವಿರೋಧಿಸಿ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಜ್ಯ ಸರ್ಕಾರವೇ ಅರ್ಹತಾ ಪರೀಕ್ಷೆ ನಡೆಸಲು ಸಿದ್ಧವಿದೆ. ಅದಕ್ಕೆ ಅವಕಾಶ ನೀಡಬೇಕು ಎಂಬ ಮತ್ತೊಂದು ನಿರ್ಣಯವನ್ನು ತೆಗೆದುಕೊಳ್ಳಲು ಸಭೆ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ವೈದ್ಯ ಮತ್ತು ದಂತವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಕೇಂದ್ರದಿಂದ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ‘ನೀಟ್’; ಕೇಂದ್ರದ ಮಹತ್ವಾಕಾಂಕ್ಷಿ ‘ರಾಜ್ಯವಾರು ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ’ ಹಾಗೂ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವನೆಗಳನ್ನು ವಿರೋಧಿಸಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯಕ್ಕೆ ಮಾರಕವಾಗುತ್ತಿರುವ ಕೇಂದ್ರದ ಮೂರು ನಿರ್ಧಾರಗಳನ್ನು ವಿರೋಧಿಸಿ ವಿಧಾನಮಂಡಲದಲ್ಲಿ ನಿರ್ಣಯ ಅಂಗೀಕಾರಕ್ಕೆ ನಿರ್ಧರಿಸಲಾಗಿದೆ.
ನೀಟ್ ಬೇಡ :
ನೀಟ್‌ನಲ್ಲಿ ಪರೀಕ್ಷಾ ಅಕ್ರಮ, ಫಲಿತಾಂಶ ಪ್ರಕಟಣೆಯಲ್ಲಿ ಭಾರೀ ಲೋಪವಾಗಿದೆ. ಅಲ್ಲದೇ ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ನೀಟ್ ಪಾವಿತ್ರ್ಯತೆ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಸ್ಥಳೀಯ ವಿದ್ಯಾರ್ಥಿಗಳಿಗೆ ಅನ್ಯಾಯ, ರಾಜ್ಯದ ಕಾಲೇಜಿನ ಸೀಟುಗಳು ಅನ್ಯ ರಾಜ್ಯದವರ ಪಾಲಾಗುತ್ತಿರುವುದು, ಪರೀಕ್ಷಾ ಒತ್ತಡ ಸೇರಿದಂತೆ ಅನೇಕ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ರಾಜ್ಯದಲ್ಲಿ ನೀಟ್ ರದ್ದುಪಡಿಸಿ ತಮಿಳುನಾಡು ಮಾದರಿಯಲ್ಲಿ ನಿರ್ಣಯ ಕೈಗೊಳ್ಳಲು ಸಂಪುಟದಲ್ಲಿ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ನೀಟ್ ರದ್ದುಪಡಿಸಿ, ಈ ಹಿಂದೆ ಇದ್ದಂತೆ ಆಯಾ ರಾಜ್ಯಗಳಿಗೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಸೀಟು ಹಂಚಿಕೆ ಮಾಡಲು ಅವಕಾಶ ನೀಡುವಂತೆ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ.
ಕರ್ನಾಟಕವು ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸುವ ಸಿಇಟಿ ಮಾದರಿಯಾಗಿದೆ. ಹಾಗಾಗಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೂ ಇದೇ ಮಾದರಿ ಅನುಸರಿಸಲು ಅವಕಾಶ ನೀಡಬೇಕು ಎಂದು ಕೋರಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಕ್ಷೇತ್ರ ವಿಂಗಡಣೆ :
ರಾಜ್ಯವಾರು ವಿಧಾನಸಭೆ ಕ್ಷೇತ್ರಗಳ ಸಮೀಕ್ಷೆ ನಡೆಸಿದ ಬಳಿಕ 2026ರಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆಯನ್ನು ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕೂಡ ವಿರೋಧಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಒಂದು ದೇಶ, ಒಂದು ಚುನಾವಣೆ :
ಪ್ರಾದೇಶಿಕವಾರು ಜನರ ಸಮಸ್ಯೆಗಳು, ಆಕಾಂಕ್ಷೆಗಳಿಗೆ ಅನುಗುಣವಾಗಿ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ನಡೆಯಬೇಕು. ಅದೇ ಈವರೆಗೂ ಇರುವ ವಾಡಿಕೆ. ಇದು ವೈವಿಧ್ಯಮಯ ದೇಶವಾದ ಭಾರತಕ್ಕೆ ಸರಿಹೊಂದುತ್ತದೆ. ಆದರೆ ಪ್ರಜಾಪ್ರಭುತ್ವದ ವಿಕೇಂದ್ರೀಕರಣದ ವಿರುದ್ಧ ಕೇಂದ್ರವು ಏಕಕಾಲಕ್ಕೆ ಚುನಾವಣೆ ನಡೆಸಲು ಹೊರಟಿರುವುದು ದೇಶಕ್ಕೆ ಮಾರಕ. ಹೀಗಾಗಿ ಒಂದು ದೇಶ ಒಂದು ಚುನಾವಣೆ ವಿರೋಧಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.