ಬೆಂಗಳೂರಿನ ನೌಕರಿ ಬಿಟ್ಟುಕೃಷಿಯಲ್ಲಿ ಮಾದರಿಯಾದ ಕವಿತಾ
ಮಂಡ್ಯ: ಕೋವಿಡ್ ಲಾಕ್ಡೌನ್ ಕಾಲದಲ್ಲಿ ಬೆಂಗಳೂರಿನಿಂದ ಅನಿವಾರ್ಯವಾಗಿ ತಮ್ಮ ಹುಟ್ಟೂರಿಗೆ ಬಂದ ಹಲವು ಯುವಕ-ಯುವತಿಯರು, ದಂಪತಿಗಳು ಕೃಷಿಯಲ್ಲಿ ಹೊಸ ಪ್ರಯೋಗ ಮಾಡುವ ಮೂಲಕ ಬದುಕನ್ನು ಕಟ್ಟಿಕೊಳ್ಳುವ ಜತೆಗೆ ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ. ಇದರ ಪರಿಣಾಮ ಸಾಂಪ್ರದಾಯಿಕ ಕೃಷಿ ಪದ್ಧತಿ, ಬೆಳೆಗಳಿಗೆ ಜೋತುಬಿದ್ದಿದ್ದ ಅನೇಕ ರೈತರು ತಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಹೊರಬಂದು ಪರ್ಯಾಯ ಬೆಳೆಯ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಕವಿತಾ ಅವರು ತನ್ನ ಊರಿನ ರೈತರಿಗೆ ಸ್ಫೂರ್ತಿಯಾಗಿದ್ದಾರೆ.
ಜಿಲ್ಲೆಯ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಬುರುಡುಗುಂಟೆ ಗ್ರಾಮದ ಎಸ್.ಕವಿತಾ ಹಲವು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕೋವಿಡ್ ಲಾಕ್ಡೌನ್ ಸಂದರ್ಭ ಸ್ವಗ್ರಾಮಕ್ಕೆ ಮರಳಿದ ಅವರು ಇರುವ ನಾಲ್ಕು ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯದಲ್ಲಿ ಸಾವಯವ ಪದ್ಧತಿ ಅಳವಡಿಸಿಕೊಂಡು ಉತ್ತಮ ಫಸಲು ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.
ಪೂರ್ಣ ಮಳೆಯಾಶ್ರಿತ ತನ್ನ ಗ್ರಾಮದ ಕೃಷಿ ಭೂಮಿಯಲ್ಲಿ ಎರಡು ಕೊಳವೆ ಬಾವಿ ನೀರಿನಿಂದ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಸೀಬೆ, ಸೀತಾಫಲ, ರಾಮಫಲ, ಹಲಸು, ಬಾಳೆ, ಮಾವು, ಬೆಣ್ಣೆಹಣ್ಣು, ಜ್ಯೂಸ್ ಹಣ್ಣು, ಚಕ್ಕೆ, ನಿಂಬೆ, ಕರಿಬೇವು, ಮರಗೆಣಸು, ಶ್ರೀಗಂಧ, ದಾಳಿಂಬೆ, ಕಾಫಿ, ಬೆಂಡೆ, ಬದನೆ, ಟೊಮೆಟೊ, ನುಗ್ಗೆ, ಕತ್ತಿಕಾಯಿ, ದಪ್ಪ ಮೆಣಸಿನಕಾಯಿ, ಸೋರೆಕಾಯಿ, ಹರಿಶಿನಕೊನೆ, ಸುವರ್ಣಗೆಡ್ಡೆ, ನಾಟಿ ಈರುಳ್ಳಿ ಫಸಲು ಕೈಸೇರಿದೆ.
ಕೃಷಿ ಜತೆಗೆ ಉಪಕಸುಬಾಗಿ ಹೈನುಗಾರಿಕೆ, ಜೇನುಕೃಷಿಯನ್ನೂ ಮಾಡುತ್ತಿದಾರೆ. ಎಮ್ಮೆ, ಹಸು, ಆಡು, ಕುರಿ ಕೋಳಿಗಳನ್ನು ಸಾಕಿದ್ದಾರೆ. ಮೇವಿಗಾಗಿ ಜಮೀನಿನಲ್ಲಿ ಸೀಮೆ ಹುಲ್ಲು ಮತ್ತು ಚಂಬೆ ಮರಗಳನ್ನು ಬೆಳೆಸಿದ್ದಾರೆ. ಇವು ಮೇವು ಪೂರೈಸಲು ಸಹಕಾರಿಯಾಗಿದೆ. ಹೈನುಗಾರಿಕೆ ತ್ಯಾಜ್ಯವನ್ನು ಬಳಸಿ ಸಾವಯವ ಗೊಬ್ಬರವನ್ನು ಉತ್ಪಾದಿಸುತ್ತಾರೆ. ಜೊತೆಗೆ ಹೂವಿನ ಬೆಳೆ ಬೆಯುವುದರಿಂದ ಜೇನು ಕೃಷಿಗೂ ಪೂರಕ ವಾತಾವರಣ ಸೃಷ್ಟಿಸಿಕೊಂಡಿದ್ದಾರೆ.
ಒಂದೆಲಗ, ದೊಡ್ಡಪತ್ರೆ, ಚಕ್ರಮುನಿ, ಅಲೋವೆರಾ, ನಿಂಬೆಹುಲ್ಲು, ನಾಗದಾಳಿ, ಪುದೀನ, ಬ್ರಹ್ಮದಂಡೆ ಸೇರಿದಂತೆ ವಿವಿಧ ಬಗೆಯ ಔಷಧೀಯ ಸಸ್ಯಗಳನ್ನು ಸಹ ಬೆಳೆಸಿದ್ದಾರೆ. ಅಗತ್ಯವಿದ್ದಾಗ ಸ್ಥಳೀಯರು ಇವುಗಳನ್ನು ಬಳಸಿಕೊಳ್ಳಲು ಮುಕ್ತ ಅವಕಾಶವಿದೆ.
ಬೇಸಿಗೆಯಲ್ಲಿ ಕೊಳವೆಬಾವಿಯಲ್ಲಿನ ನೀರಿನ ಕೊರತೆ ನೀಗಿಸಲು ಕೃಷಿಹೊಂಡ ನಿರ್ಮಿಸಿಕೊಂಡಿದ್ದೇನೆ. ಹನಿ ನೀರಾವರಿ ಪದ್ಧತಿ ಅಳವಡಿಕೆಯಿಂದಾಗಿ ನೀರು ವ್ಯಯವಾಗುವುದಿಲ್ಲ. ಎಲ್ಲ ವೆಚ್ಚ ಕಳೆದು ವರ್ಷಕ್ಕೆ ಸುಮಾರು ೧೦ ಲಕ್ಷ ರೂ.ವರೆಗೆ ಆದಾಯಗಳಿಸುತ್ತಿದ್ದೇನೆ.
- ಕವಿತಾ