‘ಇಂಡಿಯಾ’ ಮೈತ್ರಿಕೂಟ ಮುನ್ನಡೆಸಬಲ್ಲ ನಾಯಕರಾಗಿ ಕಾಣಿಸುತ್ತಿರುವ ಖರ್ಗೆ
ಮಲ್ಲಿಕಾರ್ಜುನ ಖರ್ಗೆ | Photo: PTI
ಐದು ರಾಜ್ಯಗಳಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ‘ಇಂಡಿಯಾ’ ಮೈತ್ರಿಕೂಟಕ್ಕೆ ಸ್ಪಷ್ಟವಾದ ಎಚ್ಚರಿಕೆಯಾಗಿವೆ. 2024ರ ಲೋಕಸಭಾ ಚುನಾವಣೆಗೆ ಮೊದಲು ನಾಲ್ಕು ವಿಧಾನಸಭೆಗಳ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ತೋರಿಸುವ ಮೂಲಕ, ಮಿತ್ರ ಪಕ್ಷಗಳ ಜೊತೆ ಸೀಟು ಹಂಚಿಕೆ ವಿಚಾರದಲ್ಲಿನ ಚೌಕಾಸಿಗೆ ಬಲ ಬರಬಹುದೆಂದು ಕಾಂಗ್ರೆಸ್ ಭಾವಿಸಿತ್ತು. ಸಮೀಕ್ಷೆಗಳೂ ಅದರ ವಿಶ್ವಾಸ ಹೆಚ್ಚಿಸಿದ್ದವು. ಆದರೆ, ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆಗೆ ಹೋದುದಕ್ಕೆ ಮಿತ್ರ ಪಕ್ಷಗಳು ಅಸಮಾಧಾನಗೊಂಡವು. ಇಂಡಿಯಾ ಮೈತ್ರಿಕೂಟದ ಕಲ್ಪನೆಗೆ ಒಂದು ಹಂತದಲ್ಲಿ ಹಿನ್ನಡೆಯಾದಂತಾಯಿತು.
ಇದರ ನಡುವೆ, ಹಿಂದಿ ಭಾಷಿಕ ರಾಜ್ಯಗಳಲ್ಲಿನ ಬಿಜೆಪಿಯ ಗೆಲುವುಗಳು ಭಾರತೀಯ ಚುನಾವಣೆಗಳ ಒಂದು ಅಂಶವನ್ನು ಸ್ಪಷ್ಟಪಡಿಸಿವೆ. ಅವು ಹೆಚ್ಚು ಹೆಚ್ಚು ನೇರ ಹಣಾಹಣಿಯ ಕಣಗಳಾಗುತ್ತಿವೆ ಮತ್ತು ಬಿಜೆಪಿಯದ್ದೇ ಪ್ರಾಬಲ್ಯವಿದೆ. ಇಂತಹ ಹೊತ್ತಿನಲ್ಲಿ ‘ಇಂಡಿಯಾ’ ಮೈತ್ರಿಯ ಪಕ್ಷಗಳು ತಮ್ಮ ಪ್ರತಿಷ್ಠೆ ಬದಿಗಿಟ್ಟು ಸಾಮಾನ್ಯ ಕಾಳಜಿಗಳ ಮೇಲೆ ಒಂದಾಗುವುದು ಅವಶ್ಯವಿದೆ. ಕಾಂಗ್ರೆಸ್ ಮತ್ತು ಇತರ ಬಿಜೆಪಿ ವಿರೋಧಿ ಶಕ್ತಿಗಳ ಸಾಂಪ್ರದಾಯಿಕ ಮತಗಳ ಹಂಚಿಕೆಯಲ್ಲಿ ಸ್ಥಿರತೆ ಕಾಣಿಸುತ್ತಿದೆ. ಅಲ್ಲಿ ಇಲ್ಲಿ ಸಣ್ಣ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದರೆ ಅವು ಕೇವಲ ಸಾಂದರ್ಭಿಕವಾಗಿರುತ್ತವೆ ಮತ್ತು ಕಳೆದ ದಶಕದಲ್ಲಿ ವಿಧಾನಸಭೆ ಚುನಾವಣೆಗಳು ಮತ್ತು ಲೋಕಸಭೆ ಚುನಾವಣೆಗಳು ಸಾಕ್ಷಿಯಾಗಿರುವ ತೀವ್ರ ಬದಲಾವಣೆಗಳನ್ನು ಗಮನಿಸಿದರೆ ಅವುಗಳನ್ನು ಸುಲಭವಾಗಿ ತೆಗೆದುಕೊಳ್ಳಲಾಗದು. ಮತ್ತೊಂದೆಡೆ, ಬಿಜೆಪಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಗಮನಾರ್ಹ ಏರಿಕೆ ಸಾಧಿಸುತ್ತಿದೆ.
ಇಂತಹ ಸಂದರ್ಭಗಳಲ್ಲಿ ‘ಇಂಡಿಯಾ’ ಮೈತ್ರಿಕೂಟ ಪ್ರಾಥಮಿಕ ಅಂಶಗಳಿಗೆ ಹಿಂದಿರುಗಬೇಕಾಗಿದೆ. ಕ್ರಿಯಾಶೀಲ ಸಾಮೂಹಿಕ ನಾಯಕತ್ವವನ್ನು ಕಂಡುಕೊಳ್ಳಬೇಕಿದೆ. ಬಿಜೆಪಿಯಿಂದ ಸ್ಪಷ್ಟವಾಗಿ ಭಿನ್ನ ಎನ್ನಿಸುವ ಸೈದ್ಧಾಂತಿಕ ನಿರೂಪಣೆಯನ್ನು ರೂಪಿಸಬೇಕಿದೆ ಮತ್ತು ಅದರ ಸಾಮಾಜಿಕ ನೆಲೆಯನ್ನು ವಿಸ್ತರಿಸುವ ಅಗತ್ಯವೂ ಇದೆ. ಪ್ರಾದೇಶಿಕವಾಗಿ ನಿಯಂತ್ರಣ ಸಾಧಿಸಲು ಪ್ರತಿಪಕ್ಷಗಳು ಹೇಗೆ ಹೋರಾಡುತ್ತಿವೆ ಎಂಬುದನ್ನು ಗಮನಿಸಿದರೆ, ಇದನ್ನು ಗ್ರಹಿಸಬಹುದು. ಲೋಕಸಭೆ ಚುನಾವಣೆಯನ್ನು ಎದುರಿಸಲು ಈಗ ಪ್ರತಿಪಕ್ಷಗಳಿಗೆ ಇರುವ ಸಮಯ ತೀರಾ ಕಡಿಮೆ. ಇದರ ಜೊತೆಗೇ ಬಿಜೆಪಿ ಬಹುಶಃ ರಾಜಕೀಯವಾಗಿ ಪ್ರಬಲವಾಗುವ ಸಮಯವೂ ಹೌದು. ಆದಷ್ಟು ಬೇಗ ಒಗ್ಗೂಡುವುದು ಪ್ರತಿಪಕ್ಷಗಳಿಗೆ ಇರುವ ಏಕೈಕ ಆಯ್ಕೆಯಾಗಿದೆ.
ಕೇವಲ ಸೀಟು ಹಂಚಿಕೆಯಲ್ಲಿ ಒಮ್ಮತಕ್ಕೆ ಬರುವುದರಿಂದ ಬಿಜೆಪಿಯನ್ನು ಸೋಲಿಸಬಹುದು ಎಂದು ಇಂಡಿಯಾ ಮೈತ್ರಿಪಕ್ಷಗಳ ನಾಯಕರು ಭಾವಿಸಿದರೆ, ಅದು ಮತ್ತೊಂದು ಅಪಾಯವನ್ನು ತಂದಿಡಬಹುದು. ಇತ್ತೀಚಿನ ಸಮೀಕ್ಷೆಗಳು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಎತ್ತಿದ ಜಾತಿ ಗಣತಿಯ ಏಕೈಕ ದೊಡ್ಡ ವಿಷಯ ವಾಸ್ತವದಲ್ಲಿ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ತೋರಿಸಿವೆ. ಸ್ಪರ್ಧಾತ್ಮಕ ರಾಜಕೀಯ ನಿರೂಪಣೆಯನ್ನು ರಚಿಸಲು ಮೈತ್ರಿಕೂಟದ ಎಲ್ಲಾ ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಒಬಿಸಿಗಳು, ದಲಿತರು, ಮುಸ್ಲಿಮರು ಮತ್ತು ಆದಿವಾಸಿಗಳನ್ನು ತಲುಪಬೇಕಾದ ರೀತಿಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ಆ ನಿಟ್ಟಿನಲ್ಲಿ ಅವು ತಮ್ಮ ರಣತಂತ್ರವನ್ನು ರೂಪಿಸಬೇಕಿದೆ. ಈ ಹಂತದಲ್ಲಿ ಸ್ವಲ್ಪ ಕಠಿಣ ಮತ್ತು ಸವಾಲಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ಅಗತ್ಯವಾಗಬಹುದು. ಹೊಸ ನಾಯಕತ್ವವನ್ನು ಉತ್ತೇಜಿಸುವುದು, ಕೆಲವು ನಾಯಕರನ್ನು ಹೊಣೆಗಾರಿಕೆಯಿಂದ ಬದಿಗಿರಿಸುವುದು ಮತ್ತು ಅಂಚಿನಲ್ಲಿರುವ ಸಮುದಾಯಗಳ ಹೆಚ್ಚಿನ ಅಭ್ಯರ್ಥಿಗಳನ್ನು ಸೆಳೆಯುವುದು ಇಂಥ ಕ್ರಮಗಳನ್ನು ತೆಗೆದುಕೊಳ್ಳುವ ದಿಟ್ಟತನ ಈಗ ಬೇಕಾಗಿದೆ.
ಜನರನ್ನು ಸೆಳೆಯುವ ಮತ್ತು ಸಮಾವೇಶಗೊಳಿಸುವ, ಅವರೊಂದಿಗೆ ಸೂಕ್ತ ಸಂಪರ್ಕ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮೈತ್ರಿಕೂಟದ ನಾಯಕರು ಎಲ್ಲ ನೆಲೆಯಿಂದಲೂ ಯತ್ನಿಸಬೇಕಿದೆ. ಇಂಡಿಯಾ ಮೈತ್ರಿಕೂಟದ ಎಲ್ಲ ನಾಯಕರೂ, ಕಾರ್ಯಕರ್ತರೂ ಒಂದೇ ಧ್ವನಿಯಲ್ಲಿ ಮಾತನಾಡಬೇಕು. ಅನಗತ್ಯ ವಿವಾದಗಳಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಬೇಕು. ಆಗ ಮಾತ್ರವೇ ಅವರು ಬಿಜೆಪಿಯನ್ನು ಕೆಳಗಿಳಿಸುವ ಸಾಧ್ಯತೆಯನ್ನು ನಿರೀಕ್ಷಿಸಬಹುದು.
ಬೆಲೆ ಏರಿಕೆ, ನಿರುದ್ಯೋಗದಂಥ ವಿವಿಧ ವಿಚಾರಗಳ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಆದರೆ ಬಹುಪಾಲು ಮತದಾರರಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಪರ್ಯಾಯವೆಂಬ ನಂಬಿಕೆ ಮೂಡಿಸುವ ಸಾಧ್ಯತೆಯಿಂದ ‘ಇಂಡಿಯಾ’ ಮೈತ್ರಿಕೂಟ ದೂರವಿದೆ. ಅಂಥದೊಂದು ನಂಬಿಕೆ ಬರುವ ನಿಟ್ಟಿನಲ್ಲಿ ಅಗತ್ಯವಾದ ಹೆಜ್ಜೆ ಸಾಧ್ಯವಾಗಬೇಕಿದೆ.
ಈ ಸಮಯದಲ್ಲಿ ‘ಇಂಡಿಯಾ’ ಮೈತ್ರಿಕೂಟ ಎದುರಿಸುತ್ತಿರುವ ಕಠಿಣ ಸವಾಲನ್ನು ನಿರ್ದಿಷ್ಟ ನಾಯಕರಿಂದ ಮಾತ್ರವೇ ಎದುರಿಸಲು ಸಾಧ್ಯ. ‘ಇಂಡಿಯಾ’ ಮೈತ್ರಿಕೂಟದ ಪ್ರಾದೇಶಿಕ ಪಕ್ಷಗಳು ಈಗಾಗಲೇ ಕಾಂಗ್ರೆಸ್ಗೆ ಬೆಂಬಲವಾಗಿ ನಿಂತಿರುವುದರಿಂದ, ಮಲ್ಲಿಕಾರ್ಜುನ ಖರ್ಗೆಯವರ ಪಾತ್ರ ನಿರ್ಣಾಯಕವಾಗಿದೆ. ನಿತೀಶ್ ಕುಮಾರ್, ಲಾಲು ಪ್ರಸಾದ್ ಮತ್ತು ಶರದ್ ಪವಾರ್ ಅವರಂತಹ ದೊಡ್ಡ ನಾಯಕರು ತಮ್ಮ ಭದ್ರಕೋಟೆಗಳಲ್ಲಿ ಉಳಿಯಬೇಕಾಗಿರುವುದರಿಂದ, ಈ ಹಂತದಲ್ಲಿ ಖರ್ಗೆಯವರೇ ಅಂಥ ನಾಯಕನಾಗಿ ಕಾಣಿಸತೊಡಗಿದ್ದಾರೆ. ಅವರು ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಂಡ ಕೆಲವೇ ಸಮಯದಲ್ಲಿಯೇ, ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಬಲ್ಲ ಮತ್ತು ಅದಕ್ಕೆ ಅಗತ್ಯವಿರುವ ಆಧಾರವಾಗಬಲ್ಲ ಸಾಕಷ್ಟು ಲಕ್ಷಣಗಳನ್ನು ತೋರಿಸಿದ್ದಾರೆ. 2022ರ ಉದಯಪುರ ಘೋಷಣೆಯಲ್ಲಿನ ಪ್ರಗತಿಪರ ನಿರ್ಧಾರಗಳನ್ನು ಜಾರಿಗೆ ತರಲು ಖರ್ಗೆ ಪ್ರಯತ್ನಿಸಿದ್ದಾರೆ. ಆದರೆ ಅವರು ಉನ್ನತ ಸ್ಥಾನದಲ್ಲಿ ಸಾಕಷ್ಟು ಸಮಯವನ್ನು ಕಳೆಯಲು ಸಾಧ್ಯವಾಗಲಿಲ್ಲ. ಅವರು ತಮ್ಮ ಚುನಾವಣಾ ಭಾಷಣಗಳನ್ನು ಬಡವರ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದ್ದಾರೆ ಮತ್ತು ಬಹುಸಂಸ್ಕೃತಿಯ ಕಡೆಗೆ ಬಲವಾದ ಬದ್ಧತೆಯನ್ನು ತೋರಿಸಿದ್ದಾರೆ.
ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಖರ್ಗೆಯವರನ್ನು ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಷ್ಟ್ರೀಯ ಜನತಾ ದಳದ ಸಂಸದ ಮನೋಜ್ ಕುಮಾರ್ ಝಾ ಅವರು, ಖರ್ಗೆಯವರು ಇತರ ಹಲವು ನಾಯಕರಿಗಿಂತ ಮೂಲಭೂತವಾಗಿ ಭಿನ್ನವಾಗಿದ್ದಾರೆ ಎಂದು ವೈಯಕ್ತಿಕ ಅನುಭವದಿಂದ ನಿರೂಪಿಸಿದರು. ಖರ್ಗೆಯವರು ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಗೆ ತಮ್ಮ ಬದ್ಧತೆಯನ್ನು ತೋರಿಸಿದವರು ಎಂದು ಝಾ ಹೇಳಿದರು. ಅಂಬೇಡ್ಕರ್ ಅವರು ವಿಮೋಚನೆಯ ಕಲ್ಪನೆಯೊಂದಿಗೆ ನಡೆದರು. ನೆಹರೂ ಸಹಾನುಭೂತಿಯ ಪರವಾಗಿ ನಿಂತರು. ಖರ್ಗೆ ಅವರು ಇಬ್ಬರ ನಡುವೆ ಸೇತುವೆಯನ್ನು ನಿರ್ಮಿಸುತ್ತಿದ್ದಾರೆ ಎಂದು ಝಾ ಹೇಳಿದರು.
ಖರ್ಗೆಯವರನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂಬುದು ಕೂಡ ‘ಇಂಡಿಯಾ’ ಬಣವನ್ನು ಮುನ್ನಡೆಸಲು ಅವರನ್ನು ಸಮರ್ಥ ಮತ್ತು ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸುವಂತೆ ಮಾಡುತ್ತದೆ. ದಶಕಗಳ ರಾಜಕೀಯ ಅನುಭವ ಉಳ್ಳವರಾಗಿ ಖರ್ಗೆಯವರು ಮೈತ್ರಿಕೂಟವನ್ನು ಒಗ್ಗಟ್ಟಿನ ಮನೆಯಾಗಿ ಕಟ್ಟುವ ಸಾಮರ್ಥ್ಯವನ್ನು ಖಂಡಿತ ಹೊಂದಿದ್ದಾರೆ.
(ಕೃಪೆ:thewire.in)