ಬಿಜೆಪಿ ಜೊತೆ ಮೈತ್ರಿಗೆ ಮುಸ್ಲಿಮರನ್ನು ದೂರುತ್ತಿರುವ ಕುಮಾರಸ್ವಾಮಿ
ಜೆಡಿಎಸ್ ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡು ಎನ್ ಡಿ ಎ ಸೇರಿದೆ. ಅದು ಬಿಜೆಪಿ ಜೊತೆ ಸೇರ್ತಾ ಇರೋದು ಇದೇ ಮೊದಲೇನಲ್ಲ. ಈಗ ಮತ್ತೆ ಅದು ಬಿಜೆಪಿ ಜೊತೆ ಸೇರಿಕೊಂಡಾಗ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪ್ರದರ್ಶಿಸುತ್ತಿರುವ ನಿಲುವು ಹಾಗು ಅವರ ಹೇಳಿಕೆಗಳು ಚರ್ಚೆಯಾಗುತ್ತಿವೆ. ಮೊನ್ನೆ ಟಿವಿ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಾನು ಮುಸ್ಲಿಂ ಸಮಾಜ ಒಂದನ್ನೇ ನಂಬಿಕೊಂಡು ಕೂತಿಲ್ಲ. ಅದೊಂದು ಸಮುದಾಯವನ್ನು ನೆಚ್ಚಿಕೊಂಡು ರಾಜಕೀಯ ಮಾಡುತ್ತಿಲ್ಲ. ಕರ್ನಾಟಕದ ಆರೂವರೆ ಕೋಟಿ ಜನತೆಯ ಪ್ರತಿನಿಧಿಯಾಗಿ ನಮ್ಮ ಪಕ್ಷವಿದೆ ಎಂದು ಹೇಳಿದ್ದಾರೆ.
ಮುಸ್ಲಿಮರು 2018 ರಲ್ಲಾಗಲಿ, 2019 ರಲ್ಲಾಗಲೀ 2023 ರಲ್ಲಾಗಲೀ ಯಾಕೆ ನಮ್ಮನ್ನು ಬೆಂಬಲಿಸಿಲ್ಲ ಎಂದು ಕುಮಾರಸ್ವಾಮಿ ಕೇಳಿದ್ದಾರೆ. ಹಿಜಾಬ್ ವಿವಾದ, ಹಲಾಲ್ ಕಟ್ ವಿವಾದ ಆದಾಗ ಮುಸ್ಲಿಂ ಸಮುದಾಯದ ಬೆನ್ನಿಗೆ ನಿಂತಿದ್ದೇ ಜೆಡಿಎಸ್. ಆವಾಗ ಕಾಂಗ್ರೆಸ್ ಎಲ್ಲೋಗಿತ್ತು? ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಗೋಲಿಬಾರ್ ಆದಾಗ ಆ ಸಮುದಾಯದ ಪರ ವಹಿಸಿದ್ದೆವು. ಆವಾಗಲೂ ಕಾಂಗ್ರೆಸ್ ಚಕಾರ ಎತ್ತಿರಲಿಲ್ಲ. ಇಷ್ಟೆಲ್ಲ ಆದರೂ ಮುಸ್ಲಿಮರು ನಮ್ಮನ್ನು ಬೆಂಬಲಿಸಲಿಲ್ಲ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕೆ ಅವರು ಜನತಾ ದಳವನ್ನು ಬೆಂಬಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ಮುಸ್ಲಿಂ ಮುಖಂಡರ ಬಗ್ಗೆ ಕೇಳಿದ್ದಕ್ಕೆ " ಯಾರು ಬೇಕಾದರೂ ರಾಜೀನಾಮೆ ಕೊಡಲಿ, ಅದನ್ನು ಇಟ್ಟುಕೊಳ್ಳುವವರು ಯಾರು? ಹೋಗುವವರು ಹೋಗಲಿ. ನಾನು ಯಾವುದೇ ಒಂದು ಸಮಾಜದ ಪ್ರತಿನಿಧಿಯಲ್ಲ. ನಮ್ಮ ಸಮಾಜ, ಒಕ್ಕಲಿಗ ಸಮಾಜ ನನಗೆ ಬೆಂಬಲ ಕೊಟ್ಟಿರಬಹುದು. ಹಾಗೆಂದು ನಾನು ಅದೊಂದು ಸಮಾಜದ ಪ್ರತಿನಿಧಿಯಲ್ಲ. ಕರ್ನಾಟಕದ ಆರೂವರೆ ಕೋಟಿ ಜನತೆಯ ಪ್ರತಿನಿಧಿ. ರಾಜ್ಯದ ಒಳಿತಿಗಾಗಿ ಕ್ರಮ ಕೈಗೊಳ್ಳುತ್ತೇನೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ "ಜಾಸ್ತಿ ದಿನ ಈ ಸರ್ಕಾರ ಇರುವುದಿಲ್ಲ. ಆವಾಗ ಮುಸ್ಲಿಂ ಸಮುದಾಯದ ರಕ್ಷಣೆಗೆ ಯಾರು ಇರುತ್ತಾರೆ ? ಕಾಂಗ್ರೆಸ್ನವರು ಬರುತ್ತಾರೆಯೇ ? ಮತ್ತೆ ನಾನೇ ಅವರಿಗೆ ಬೇಕಾಗಲಿದ್ದೇನೆ " ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕುಮಾರಸ್ವಾಮಿ ಅವರ ಈ ಹೇಳಿಕೆಗಳು ಏನನ್ನು ಸೂಚಿಸುತ್ತವೆ ? . ಅವರ ಈ ಹೇಳಿಕೆಗಳ ಒಟ್ಟೂ ಸಾರಾಂಶ ಏನಂದ್ರೆ " ಈ ಸರ್ತಿ ಮುಸ್ಲಿಮರು ನಮಗೆ ಓಟು ಹಾಕಿಲ್ಲ, ಹಾಗಾಗಿ ನಾವು ಅಧಿಕಾರಕ್ಕೆ ಬಂದಿಲ್ಲ, ನಮಗೆ ಕಡಿಮೆ ಸೀಟು ಬರಲು ಮುಸ್ಲಿಮರು ಓಟು ಹಾಕದೆ ಇರೋದು ಕಾರಣ. ಹಾಗಾಗಿ ನಾನೀಗ ಬಿಜೆಪಿ ಜೊತೆ ಸೇರಿದ್ದೇನೆ" ಅಂತ ಅಲ್ವಾ ?
ಕುಮಾರಸ್ವಾಮಿಯವರು ಮುಸ್ಲಿಮರು ಬೆಂಬಲ ಕೊಡಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಜೊತೆ ಹೋಗ್ತಾ ಇದ್ದಾರೆ ಅಂದ್ರೆ, ಇಲ್ಲಿ ಎರಡು ಮುಖ್ಯ ಪ್ರಶ್ನೆಗಳೇಳುತ್ತವೆ. ಒಂದು - ಈ ರಾಜ್ಯದ ಮುಸ್ಲಿಮರು ಈ ಸರ್ತಿ ಕಾಂಗ್ರೆಸ್ ಗೆ ಒಗ್ಗಟ್ಟಾಗಿ ಓಟು ಹಾಕಿದ್ದಾರೆ. ಸರಿ. ಅವರೆಲ್ಲರೂ ಒಗ್ಗಟ್ಟಾಗಿ ಜೆಡಿಎಸ್ ಗೆ ಓಟು ಹಾಕಿದ್ರೆ ಜೆಡಿಎಸ್ ಗೆ ಬಹುಮತ ಬರ್ತಿತ್ತಾ ? ಕುಮಾರಸ್ವಾಮಿ ಸಿಎಂ ಆಗ್ತಿದ್ರಾ ? ಮುಸ್ಲಿಮರು ಓಟು ಹಾಕ್ದೆ ಇರೋದು ಮಾತ್ರ ಜೆಡಿಎಸ್ ಅಧಿಕಾರಕ್ಕೆ ಬರದೇ ಇರೋದಕ್ಕೆ ಕಾರಣನಾ ? ಮುಸ್ಲಿಮರನ್ನು ಹೊರತುಪಡಿಸಿ ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರು, ದಲಿತರು, ಇತರ ಹಿಂದುಳಿದ ವರ್ಗಗಳು - ಈ ಎಲ್ಲಾ ಸಮುದಾಯಗಳ ಎಲ್ಲ ಮತದಾರರು ಈ ಸರ್ತಿ ಜೆಡಿಎಸ್ ಗೇ ಓಟು ಹಾಕಿದ್ರಾ ?
ಎರಡನೇ ಬಹುಮುಖ್ಯ ಪ್ರಶ್ನೆ - ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಕೈಜೋಡಿಸೋದಕ್ಕೂ, ಜಾತ್ಯತೀತ ಅಂದ್ರೆ ಏನರ್ಥ ಅಂತ ಕೇಳೋದಕ್ಕೂ ಮುಸ್ಲಿಮರು ಅವರಿಗೆ ಓಟು ಹಾಕೋದಕ್ಕೂ ಏನು ಸಂಬಂಧ ? ಕುಮಾರಸ್ವಾಮಿ ಅವರು ಜಾತ್ಯತೀತ ಅಂದ್ರೆ ಏನು ಅಂತ ಕೇಳದೆ ಇರೋ ಹಾಗೆ ನೋಡಿಕೊಳ್ಳೋದು, ಅವರು ಬಿಜೆಪಿ ಜೊತೆ ಸೇರಿಕೊಳ್ಳದ ಹಾಗೆ ಅವರನ್ನು ತಡೆಯೋದು ಈ ರಾಜ್ಯದ ಮುಸ್ಲಿಮರ ಕರ್ತವ್ಯನಾ ? ಜೆಡಿಎಸ್ ಹಾಗು ಕುಮಾರಸ್ವಾಮಿ ಅವರ ಜಾತ್ಯತೀತ ನಿಲುವು ಮುಸ್ಲಿಮರು ಯಾರಿಗೆ ಓಟು ಹಾಕುತ್ತಾರೆ ಎಂಬುದನ್ನು ಅವಲಂಬಿಸಿದೆಯೇ ? ಕುಮಾರಸ್ವಾಮಿ ಹಾಗು ಅವರ ಪಕ್ಷದ ಜಾತ್ಯತೀತತೆಯನ್ನು ಕಾಪಾಡೋದು ಇಲ್ಲಿನ ಮುಸ್ಲಿಮರ ಕರ್ತವ್ಯವೇ ?
ಕುಮಾರಸ್ವಾಮಿ ಅವರು ಮುಸ್ಲಿಮರಿಗೆ ಹಲವು ಸಂದರ್ಭಗಳಲ್ಲಿ ರಾಜಕೀಯ ಬೆಂಬಲ ನೀಡಿದ್ದಾರೆ. ಹಿಜಾಬ್, ಹಲಾಲ್ ಕಟ್ , ವ್ಯಾಪಾರಿಗಳಿಗೆ ನಿರ್ಬಂಧ ಇತ್ಯಾದಿ ವಿವಾದಗಳಾದಾಗ, ಮಂಗಳೂರಿನಲ್ಲಿ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಾಗ ಕುಮಾರಸ್ವಾಮಿ ಧೈರ್ಯದಿಂದ ಮಾತಾಡಿದ್ದಾರೆ. ವಾಸ್ತವಗಳನ್ನು ಜನರ ಮುಂದಿಟ್ಟಿದ್ದಾರೆ. ಬಿಜೆಪಿ ಹಾಗು ಸಂಘ ಪರಿವಾರದ ಕೋಮುವಾದಿ ರಾಜಕೀಯವನ್ನು ಖಂಡಿಸಿದ್ದಾರೆ. ದಮನಿತರ ಪರವಾಗಿ ಧ್ವನಿ ಎತ್ತಿದ್ದಾರೆ. ಅವರಿಗೆ ರಾಜಕೀಯ ಶಕ್ತಿ ತುಂಬಿದ್ದಾರೆ. ಆ ಎಲ್ಲ ಸಂದರ್ಭಗಳಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಅಷ್ಟು ಸಮರ್ಥವಾಗಿ ಸತ್ಯವನ್ನು ಹೇಳಲಿಲ್ಲ, ಕೋಮುವಾದವನ್ನು ಗಟ್ಟಿ ಧ್ವನಿಯಲ್ಲಿ ಖಂಡಿಸಲಿಲ್ಲ, ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಬಿಜೆಪಿ ಸರಕಾರವನ್ನು ಬಲವಾಗಿ ಖಂಡಿಸಲಿಲ್ಲ. ಕೇವಲ ತೋರಿಕೆಯ ಪ್ರತಿರೋಧ ತೋರಿಸಿದರು.
ಇದೆಲ್ಲವೂ ಸತ್ಯ. ಕುಮಾರಸ್ವಾಮಿ ಅದೆಲ್ಲವನ್ನೂ ಮಾಡಿದ್ದಾರೆ. ಕಾಂಗ್ರೆಸ್ ನವರು ಆಗ ಕುಮಾರಸ್ವಾಮಿಯವರಷ್ಟು ಸ್ಪಷ್ಟವಾಗಿ ಕೋಮುವಾದವನ್ನು ವಿರೋಧಿಸಿ ಮಾತಾಡಿಲ್ಲ.
ಆದರೆ ಇದ್ದಿದ್ದನ್ನು ಇದ್ದ ಹಾಗೆ ಹೇಳುವುದು, ದೌರ್ಜನ್ಯಕ್ಕೊಳಗಾದವರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ಬೆಂಬಲ ನೀಡುವುದು ಮಾಜಿ ಮುಖ್ಯಮಂತ್ರಿಯಾಗಿ, ಹಿರಿಯ ರಾಜಕೀಯ ನಾಯಕನಾಗಿ ಕುಮಾರಸ್ವಾಮಿಯವರ ಕರ್ತವ್ಯ ಆಗಿರಲಿಲ್ಲವೇ ? ಮುಸ್ಲಿಮರಂತೆ ಉಳಿದ ಸಮುದಾಯಗಳಿಗೂ ಅವರು ಇದೇ ರೀತಿಯ ಅಥವಾ ಇದಕ್ಕಿಂತ ಬಲವಾದ ಬೆಂಬಲ ಕೊಟ್ಟಿಲ್ಲವೇ ?
ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಸರಣಿ ಅನ್ಯಾಯಗಳನ್ನು ಇಡೀ ರಾಜ್ಯ ನೋಡಿದೆ. ಆ ಬಳಿಕ ಎದುರಾದ ಚುನಾವಣೆಯಲ್ಲಿ ಎಲ್ಲರಿಗೂ ನ್ಯಾಯ ಒದಗಿಸುವ, ಸಂವಿಧಾನಕ್ಕೆ ಬದ್ಧವಾಗಿ ಆಡಳಿತ ನಡೆಸುವಂತಹ ಸರಕಾರ ರಚಿಸಬಲ್ಲ ಸಾಧ್ಯತೆ ಯಾವ ಪಕ್ಷಕ್ಕೆ, ಯಾವ ನಾಯಕರಿಗೆ ಹೆಚ್ಚಿದೆ ಎಂದು ಆಗಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದು ಮುಸ್ಲಿಮರ ತಪ್ಪೇ ?
ಕಳೆದ ಚುನಾವಣೆಯಲ್ಲಿ ಈ ರಾಜ್ಯದ ಬಹುತೇಕ ಎಲ್ಲ ಸಮುದಾಯಗಳ ಒಲವು ನಿಲುವುಗಳು ಕಾಂಗ್ರೆಸ್ ಕಡೆಗೇ ಇದೆ ಎಂಬುದನ್ನು ಗಮನಿಸಿಯೇ ಮುಸ್ಲಿಮರೂ ಕಾಂಗ್ರೆಸ್ ಪರ ವಾಲಿದ್ದಲ್ಲವೇ ?
ಹಾಗಾದರೆ ರಾಜ್ಯದ ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರು, ದಲಿತರು, ಹಿಂದುಳಿದ ವರ್ಗಗಳ ಬಗ್ಗೆ ಯಾಕೆ ಕುಮಾರಸ್ವಾಮಿ ಇದೇ ರೀತಿಯ ಸಿಟ್ಟು, ಸೆಡವು ತೋರಿಸುತ್ತಿಲ್ಲ ? ಮುಸ್ಲಿಮರನ್ನು ದೂರಿದಂತೆ ಆ ಪ್ರಬಲ ಸಮುದಾಯಗಳನ್ನು ದೂರಿದರೆ ದುಬಾರಿಯಾದೀತು ಎಂಬ ಭಯವೇ ? ಮುಸ್ಲಿಮರನ್ನು ಈಗ ಹೇಗೂ ನಡೆಸಿಕೊಳ್ಳಬಹುದು, ಅವರನ್ನು ಹೇಳೋರು ಕೇಳೋರು ಯಾರೂ ಇಲ್ಲ, ಮತ್ತೆ ಏನಾದರೊಂದು ಹೇಳಿ ಒಲಿಸಿಕೊಳ್ಳಬಹುದು ಎಂಬ ತಾತ್ಸಾರ ಭಾವನೆಯೇ ?
ಈ ವಿಷಯದಲ್ಲಿ ಕಾಂಗ್ರೆಸ್ ಕೂಡ ಯಾವ ರೀತಿಯಲ್ಲೂ ಸಾಚಾ ಅಲ್ಲ. ಸ್ವತಃ ಮೃದು ಹಿಂದುತ್ವ ನೀತಿ ಪಾಲಿಸುತ್ತಾ ಪ್ರತಿ ಚುನಾವಣೆಯಲ್ಲಿ ಮುಸ್ಲಿಮರಿಗೆ ಮಾತ್ರ "ಜಾತ್ಯತೀತ ಸರಕಾರ ಬರಲು ನೀವು ಎಚ್ಚರಿಕೆಯಿಂದ ಮತ ಹಾಕಬೇಕು, ಇಲ್ಲದಿದ್ದರೆ ಬಿಜೆಪಿ ಬರುತ್ತೆ, ಅದರಿಂದ ನಿಮಗೆ ಅಪಾಯ" ಎಂದು ತಾಕೀತು ಮಾಡ್ತಾರೆ ಕಾಂಗ್ರೆಸ್ ನಾಯಕರು. " ನೀವು ನಮಗೆ ಮತ ಹಾಕದೇ ಇದ್ರೆ ನಿಮಗೇ ಅಪಾಯ " ಅಂತ ಪರೋಕ್ಷ ಬೆದರಿಕೆಯನ್ನೂ ಹಾಕ್ತಾರೆ. ಅದೇ ಬೆದರಿಕೆ ಧಾಟಿಯ ಎಚ್ಚರಿಕೆಯನ್ನು ಅವರು ಬೇರೆ ಯಾವುದೇ ಸಮುದಾಯಗಳಿಗೆ ಅಪ್ಪಿತಪ್ಪಿಯೂ ಕೊಡೋದಿಲ್ಲ.
ಇನ್ನೂ ಒಂದು ಪ್ರಶ್ನೆ ಇದೆ. ಈಗ ಕುಮಾರಸ್ವಾಮಿ ಅವರ ಪಕ್ಷಕ್ಕೆ ಕೇವಲ 19 ಎಮ್ಮೆಲ್ಲೆ ಸ್ಥಾನ ಬಂದಿದೆ, ಮುಸ್ಲಿಮರು ಅವರಿಗೆ ಕೈಕೊಟ್ಟರು ಅಂತ ಬೇಜಾರಾಗಿ ಅವರು ಬಿಜೆಪಿ ಜೊತೆ ಹೋಗ್ತಿದ್ದಾರೆ ಅಂತ ಪ್ರಚಾರ ಮಾಡಲಾಗ್ತಾ ಇದೆ. 2004 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ 58 ಎಮ್ಮೆಲ್ಲೆಗಳು ಗೆದ್ದು ಬಂದಿದ್ದರು. ಸಾಕಷ್ಟು ಪ್ರಮಾಣದಲ್ಲಿ ಮುಸ್ಲಿಮರು ಬೆಂಬಲ ನೀಡಿದ್ದರಿಂದಲೇ ಜೆಡಿಎಸ್ ಅಷ್ಟು ಸ್ಥಾನ ಪಡೆಯಲು ಸಾಧ್ಯವಾಗಿತ್ತು. ಆದರೆ ಅಷ್ಟು ಸ್ಥಾನ ಸಿಕ್ಕಿದಾಗಲೂ 2006 ರಲ್ಲಿ ಕುಮಾರಸ್ವಾಮಿಯವರು ಯಾವುದೇ ಮುಲಾಜಿಲ್ಲದೆ ಬಿಜೆಪಿ ಜೊತೆ ಹೋಗಿ ಸೇರಿಕೊಂಡರು. ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅದೇ ಮೊದಲ ಬಾರಿ ಅಧಿಕಾರ ಕೊಡಿಸಿದರು. ಆಗ " ಮುಸ್ಲಿಮರು ನಮಗೆ ಸಾಕಷ್ಟು ಬೆಂಬಲ ನೀಡಿದ್ದಾರೆ, ನಾವು ಬಿಜೆಪಿ ಜೊತೆ ಸೇರೋದು ಸರಿ ಅಲ್ಲ" ಎಂದು ಎಚ್ ಡಿ ಕೆ ಯವರು ಏನಾದರೂ ಹಿಂದೆ ಸರಿದಿದ್ರಾ ? ಇಲ್ವಲ್ಲ ?
ಹಾಗಾಗಿ ಇದು ಮುಸ್ಲಿಮರಿಗೆ ಸಂಬಂಧಿಸಿದ ವಿಷಯ ಅಲ್ಲ. ಕುಮಾರಸ್ವಾಮಿ ಹೇಳಿಕೊಳ್ಳುತ್ತಿರುವಂತೆ ರಾಜ್ಯದ ಹಿತಾಸಕ್ತಿಯ ವಿಷಯವಂತೂ ಅಲ್ವೇ ಅಲ್ಲ. ಇದು ಕೇವಲ ರಾಜಕೀಯ ಅವಕಾಶವಾದಿತನದ ವಿಷಯ. ಅಧಿಕಾರದ ಹಪಾಹಪಿಯ ವಿಷಯ.
ಇನ್ನು ಜೆಡಿಎಸ್ ಬಿಜೆಪಿ ಜೊತೆ ಹೋಗಿರುವ ಬಗ್ಗೆ ಆಕ್ಷೇಪ ಇರುವವರೆಲ್ಲರೂ ಆ ಪಕ್ಷದಲ್ಲಿರುವ ಮುಸ್ಲಿಂ ಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಇದೂ ಬಹಳ ವಿಚಿತ್ರವಾಗಿದೆ. ಪ್ರಶ್ನಿಸೋದೇ ಆದ್ರೆ ಜೆಡಿಎಸ್ ನಲ್ಲಿರುವ ಒಕ್ಕಲಿಗರು, ಲಿಂಗಾಯತರು, ಬ್ರಾಹ್ಮಣರು, ಇನ್ನಿತರ ಎಲ್ಲ ಸಮುದಾಯಗಳ ನಾಯಕ ನಾಯಕಿಯರನ್ನೂ ಜನ ಪ್ರಶ್ನಿಸಬೇಕಲ್ವಾ ? ಅವರಿಗೆಲ್ಲ ಜೆಡಿಎಸ್ ನ ಎಸ್ ಸೈಲೆಂಟ್ ಯಾಕಾಗಿದೆ ಎಂದು ಉತ್ತರಿಸೋ ಹೊಣೆಗಾರಿಕೆ ಇಲ್ವಾ ? ಕೇವಲ ಜೆಡಿಎಸ್ ನ ಮುಸ್ಲಿಂ ನಾಯಕರು ಮಾತ್ರ ಇದಕ್ಕೆ ಜವಾಬ್ದಾರಿ ಹೇಗಾಗ್ತಾರೆ ? ಅವರನ್ನು ಮಾತ್ರ ಪ್ರಶ್ನಿಸೋದು ,ಹಂಗಿಸೋದು ಯಾವ ಲಾಜಿಕ್ಕು ? ಅಷ್ಟಕ್ಕೂ ಜೆಡಿಎಸ್ ನ ನೀತಿ ನಿರೂಪಣೆಯಲ್ಲಿ ಅಲ್ಲಿರುವ ಮುಸ್ಲಿಂ ನಾಯಕರಿಗೆ ಎಷ್ಟು ಪಾತ್ರವಿದೆ ? ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ಪಕ್ಷದ ಎಷ್ಟು ಮುಸ್ಲಿಂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದಾದರೂ ಪ್ರಮುಖ ತೀರ್ಮಾನ ತೆಗೊಳ್ತಾರೆ ?
ಸಂಸತ್ತಿನೊಳಗೆ ಮಾಡುವ ಭಾಷಣದಲ್ಲೇ ಬಿಜೆಪಿ ಸಂಸದರು ಇನ್ನೊಬ್ಬ ಸಂಸದನನ್ನು ಭಯೋತ್ಪಾದಕ ಅಂತ ಕರೀತಾರೆ. ಇನ್ನೂ ಏನೇನೋ ಅವಾಚ್ಯ ಅವಹೇಳನಕಾರಿ ಪದ ಬಳಸಿ ಜರೀತಾರೆ. ಅಂತಹ ಸಂಸದನನ್ನು ಪಕ್ಷದಿಂದ ಉಚ್ಛಾಟಿಸುವುದು ಬಿಟ್ಟು ಆತನಿಗೆ ದೊಡ್ಡ ರಾಜ್ಯದಲ್ಲಿ ಚುನಾವಣಾ ಉಸ್ತುವಾರಿ ಕೊಡ್ತಾರೆ ಪ್ರಧಾನಿ ಮೋದಿ ಹಾಗು ಅವರ ಪಕ್ಷ ಬಿಜೆಪಿ. ಸ್ಪೀಕರ್ ಕೂಡ ಯಾವುದೇ ಕ್ರಮ ಕೈಗೊಳ್ಳದೇ ಇನ್ನೊಂದು ಸರ್ತಿ ಹಾಗೆ ಮಾಡಬೇಡಿ ಅಂತಾರೆ. ಅಂತಹ ಪಕ್ಷದ ನಾಯಕರ ಪಕ್ಕ ನಿಂತುಕೊಂಡು ಕುಮಾರಸ್ವಾಮಿ "ಮುಸ್ಲಿಮರನ್ನು ನೆಚ್ಚಿಕೊಂಡು ರಾಜಕೀಯ ಮಾಡುತ್ತಿಲ್ಲ" ಎಂದು ಹೇಳುತ್ತಿದ್ದಾರೆ.
ಈಗ ಕುಮಾರಸ್ವಾಮಿಯವರು ಬಿಜೆಪಿ ಜೊತೆ ದೋಸ್ತಿ ಮಾಡಿಕೊಂಡ ಹೊರೆಯನ್ನು ಮುಸ್ಲಿಮರ ತಲೆಗೆ ಕಟ್ಟಿದ್ದಾರೆ. ಕಾಂಗ್ರೆಸ್ - ಜೆಡಿಎಸ್ ಮತ್ತು ಇಂತಹ ಎಲ್ಲ ಪಕ್ಷಗಳಿಗೆ ಹಾಗು ಅದರ ನಾಯಕರಿಗೆ " ಜಾತ್ಯತೀತತೆ ನಾವು ಅಚಲವಾಗಿ ಪಾಲಿಸಲೇಬೇಕಾದ ಬಹುಮುಖ್ಯ ತತ್ವ" ಎಂಬ ಅರಿವು, ಹೊಣೆಗಾರಿಕೆ ಇಲ್ಲದೆ "ಅದು ಮುಸ್ಲಿಮರು ಕಾಪಾಡಬೇಕಾದ ಯಾವುದೊ ಪಳೆಯುಳಿಕೆ" ಎಂಬಂತಾಗಿರುವುದು ನಿಜಕ್ಕೂ ವಿಪರ್ಯಾಸ.