ಕೋವಿಡ್ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಣೆಗೆ ಅನುದಾನದ ಕೊರತೆ
ಬೆಂಗಳೂರು: ಕೋವಿಡ್ ನಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ ಪರಿಹಾರ ವಿತರಿಸಲು ಅನುದಾನ ಕೊರತೆಯಾಗಿರುವುದು ಇದೀಗ ಬಹಿರಂಗವಾಗಿದೆ.
ಜನವರಿ ಮೊದಲನೇ ವಾರದಲ್ಲಿ ಪರಿಹಾರ ವಿತರಣೆ ಮಾಡಬೇಕು ಎಂದು ಹೈಕೋರ್ಟ್ ನ ವಿಭಾಗೀಯ ಪೀಠಗಳು ಆದೇಶ ಹೊರಡಿಸಿವೆ. ಆದರೆ 850 ಪ್ರಕರಣಗಳಲ್ಲಿ ಪರಿಹಾರ ವಿತರಿಸಲು ಸರಕಾರದ ಬಳಿ ಅನುದಾನ ಲಭ್ಯವಿಲ್ಲ. ನಿಗದಿತ ಅವಧಿಯಲ್ಲಿ ಪರಿಹಾರ ವಿತರಿಸಲು ಸಾಧ್ಯವಾಗದೇ ಹೋದಲ್ಲಿ ನ್ಯಾಯಾಂಗ ನಿಂದನೆ ಭೀತಿಯನ್ನು ಎದುರಿಸುವಂತಾಗಿದೆ.
ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ ಮಾಡುವುದರಲ್ಲಿಯೇ ರಾಜ್ಯ ಕಾಂಗ್ರೆಸ್ ಸರಕಾರವು ಮಗ್ನವಾಗಿರುವ ಹೊತ್ತಿನಲ್ಲಿಯೇ ಕೋವಿಡ್ ಪರಿಹಾರ ವಿತರಿಸಲು ಅನುದಾನ ಲಭ್ಯವಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.
ವಿಶೇಷವೆಂದರೇ ಕಾಂಗ್ರೆಸ್ ಪ್ರತಿಪಕ್ಷದಲ್ಲಿದ್ದಾಗ ಕೋವಿಡ್ನಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ 5 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಸದನದ ಒಳಗೆ ಮತ್ತು ಹೊರಗೆ ಹಕ್ಕೊತ್ತಾಯ ಮಂಡಿಸಿತ್ತು. ಆದರೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ 8 ತಿಂಗಳಾದರೂ 50 ಸಾವಿರ ರೂ.ಪರಿಹಾರ ನೀಡಲು ಏದುಸಿರು ಬಿಡುತ್ತಿದೆ.
ಕೋವಿಡ್ನಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ 50 ಸಾವಿರ ರೂ. ಪರಿಹಾರ ನೀಡಲೂ ರಾಜ್ಯ ಸರಕಾರದ ಬಳಿ ಅನುದಾನ ಲಭ್ಯವಿಲ್ಲ. ಅನುದಾನ ಬಿಡುಗಡೆ ಮಾಡಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ಸರಕಾರಕ್ಕೆ 2024ರ ಜನವರಿ 24ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಅರ್ಜಿದಾರರ ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಎನ್ಪಿಸಿಐ ಮ್ಯಾಪಿಂಗ್ ಆಗಿರುವ ಪಟ್ಟಿಗಳನ್ನು ನಿರ್ದೇಶನಾಲಯಕ್ಕೆ ಕಳಿಸಿದ್ದಾರೆ. ಆದರೆ ಪರಿಹಾರ ವಿತರಿಸಲು ಅನುದಾನ ಲಭ್ಯವಿಲ್ಲದ ಕಾರಣ ನಿರ್ದೇಶನಾಲಯವು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿರುವುದು ಪತ್ರದಿಂದ ಗೊತ್ತಾಗಿದೆ.
2023-24ನೇ ಸಾಲಿನಲ್ಲಿ (ಲೆಕ್ಕ ಶೀರ್ಷಿಕೆ; 2235-60-001-0-01-100)10 ಕೋಟಿ ರೂ.ಅನುದಾನ ಒದಗಿಸಿತ್ತು. ಕೋವಿಡ್ನಿಂದ ಮೃತ ಪಟ್ಟ ಎಲ್ಲ ಪ್ರಕರಣಗಳಿಗೆ ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ 50 ಸಾವಿರ ರೂ. ಪರಿಹಾರ ಪಾವತಿಸಲು ರಾಜ್ಯ ವಿಪತ್ತು ಪರಿಹಾರ ನಿಧಿ ಅಡಿ ಅನುದಾನ ಭರಿಸಲು ತಿಳಿಸಿತ್ತು. ಅದರಂತೆ ನಿರ್ದೇಶನಾಲಯವು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು ಎಂದು ಪತ್ರದಿಂದ ತಿಳಿದು ಬಂದಿದೆ.
ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬದ ವಾರಸುದಾರರಿಗೆ ತಲಾ 50 ಸಾವಿರ ರೂ.ನಂತೆ ಬಾಕಿ ಪ್ರಕರಣಗಳಲ್ಲಿ ಪರಿಹಾರ ಪಾವತಿಸಲು 10.61 ಕೋಟಿ ರೂ.ರಾಜ್ಯ ವಿಪತ್ತ ಪರಿಹಾರ ನಿಧಿ (ಲೆಕ್ಕ ಶೀರ್ಷಿಕೆ; 2245-80-102-0-01-059) ಅಡಿ ಲಭ್ಯವಿರುವ ಅನುದಾನದಿಂದ ಬಿಡುಗಡೆ ಮಾಡಬೇಕು ಎಂದು ಆರ್ಥಿಕ ಇಲಾಖೆಯು ( ಟಿಪ್ಪಣಿ ಸಂಖ್ಯೆ; ಆಇ 565 ವೆಚ್ಚ/7/ ದಿನಾಂಕ 04.07.2023) ಸೂಚಿಸಿತ್ತು. ಆದರೆ ಈ ಹಣವು ಇನ್ನೂ ಬಿಡುಗಡೆಯಾಗಿಲ್ಲ.
ಜುಮ್ಮಣ್ಣ ಅವರ ಪ್ರಕರಣದಲ್ಲಿಯೂ ಜನವರಿ 2024ರ ಮೊದಲನೇ ವಾರದಲ್ಲಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ನ ಕಲುಬುರಗಿ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ. ಹೀಗಾಗಿ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು ಎಂದು ನಿರ್ದೇಶನಾಲಯವು ಸರಕಾರವನ್ನು ಕೋರಿರುವುದು ಪತ್ರದಿಂದ ಗೊತ್ತಾಗಿದೆ.
‘ಕೋವಿಡ್ ಸಾಂಕ್ರಾಮಿಕದಿಂದ ಯಾವ ವ್ಯಕ್ತಿ ಮೃತಪಟ್ಟರೂ ಸಹ ಅವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ನೀಡಬೇಕು. ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ ಪರಿಹಾರ ನೀಡಬೇಕೆಂಬ ನಿಯಮವನ್ನು ತಿರುಚಿ ಯಾವುದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನರು ಮರಣ ಹೊಂದಿದ್ದರೂ, ಆ ಕುಟುಂಬಕ್ಕೆ, ಅದರಲ್ಲೂ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಕೇವಲ 1.5 ಲಕ್ಷ ರೂ. (ಕೇಂದ್ರ, ರಾಜ್ಯಗಳೆರಡೂ ಸೇರಿ) ನೀಡಲಾಗುವುದೆಂದು ಹೇಳುತ್ತಿದೆ,’ ಎಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಹಿಂದಿನ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕುಟುಂಬದ ದುಡಿಯುವ ಸದಸ್ಯನನ್ನು ಕಳೆದುಕೊಂಡವರು ಸಣ್ಣ ಮಟ್ಟದ ಬದುಕು ಕಟ್ಟಿಕೊಳ್ಳಬೇಕಾದರೆ ನಾಗರಿಕವೆನ್ನಿಸಿಕೊಂಡ ಸರಕಾರಗಳು ನೊಂದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಈ ಹಿನ್ನೆಲೆಯಲ್ಲಿ ನಾವು ರಾಷ್ಟ್ರೀಯ ವಿಪತ್ತು ನಿಧಿಯ ನಿಯಮಗಳ ಪ್ರಕಾರ ಪ್ರತೀ ಕುಟುಂಬಕ್ಕೆ 5 ಲಕ್ಷ ರೂ.ಗಳನ್ನಾದರೂ ಕೊಡಲೇಬೇಕು ಎಂದು ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಒತ್ತಾಯಿಸಿತ್ತು.
ಮೊದಲು ಕೋವಿಡ್ ಸಾವಿನ ಸಂಖ್ಯೆಯ ಸುಳ್ಳು ಲೆಕ್ಕ ನೀಡಿ ಕಡಿಮೆ ತೋರಿಸಿದಿರಿ, ಈಗ ಪರಿಹಾರದ ಮೊತ್ತವನ್ನು ಕೂಡಾ ಕಡಿತಗೊಳಿಸಿ ಸತ್ತವರ ಜೊತೆ ಬದುಕಿರುವ ಅವರ ಕುಟುಂಬವನ್ನೂ ಸಾಯಿಸಲು ಹೊರಟಿದ್ದೀರಿ. ನೊಂದವರ ಶಾಪ ಸರಕಾರಕ್ಕೆ ತಟ್ಟದೆ ಇರಲಾರದು ಎಂದು ಹೇಳಿದ್ದನ್ನು ಸ್ಮರಿಸಬಹುದು.
‘ಪ್ರಸ್ತುತ ಕೋವಿಡ್ ಪರಿಹಾರ ಅಂಕಿ ಅಂಶಗಳಂತೆ 850 ಪ್ರಕರಣಗಳಲ್ಲಿ ಎಪ್ರಿಲ್ 2023ರ ನಂತರ ಎಪಿಸಿಐ ಮ್ಯಾಪಿಂಗ್ ಆಗಿದ್ದು ಅನುದಾನ ಲಭ್ಯವಿಲ್ಲದೇ ಪರಿಹಾರ ಪಾವತಿಗೆ ಬಾಕಿ ಇದೆ. ಇಂತಹ ಪ್ರಕರಣಗಳಲ್ಲಿ ಅರ್ಜಿದಾರರು ಪರಿಹಾರ ಪಾವತಿ ಕೋರಿ ಪದೇಪದೇ ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದಾರೆ. ತಾಲೂಕು ಮತ್ತು ಜಿಲ್ಲಾಧಿಕಾರಿ ಕಚೇರಿಗಳ ಅಧಿಕಾರಿಗಳೂ ಸಹ ನಿರ್ದೇಶನಾಲಯಕ್ಕೆ ಭೇಟಿ ನೀಡಿ ಪರಿಹಾರ ಪಾವತಿಗಾಗಿ ಕೋರುತ್ತಿರುತ್ತಾರೆ. ಹಾಗೂ ಈ ಕುರಿತು ತಾಲೂಕು ಮತ್ತು ಜಿಲ್ಲಾಧಿಕಾರಿಗಳಿಂದ ಸಹ ಪತ್ರಗಳು ಸ್ವೀಕೃತವಾಗಿರುತ್ತವೆ,’ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ನಿರ್ದೇಶನಾಲಯವು ಸರಕಾರಕ್ಕೆ ಬರೆದಿರುವ ಪತ್ರದಲ್ಲಿ ವಿವರಿಸಿದೆ.