ಮುಂಗಾರು ಮಳೆ ಕೊರತೆ: ಕಾಡುತ್ತಿರುವ ಆತಂಕಗಳೇನು?
ಈವರ್ಷ ಮುಂಗಾರು ತಡವಾಗಿ ಬಂತು. ಜೂನ್ ಆರಂಭದಲ್ಲಿ ದೇಶದಾದ್ಯಂತ ಕಡಿಮೆ ಮಳೆಯಿತ್ತು ಮತ್ತು ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ತಾಪಮಾನ ೪೭ ಡಿಗ್ರಿ ಸೆಲ್ಸಿಯಸ್ಗೆ ತಲುಪಿತ್ತು. ಸತತ ಮೂರು ವರ್ಷಗಳಿಂದಲೂ ಕಾಣಿಸಿಕೊಳ್ಳುತ್ತಿದ್ದ ಲಾ ನಿನಾ, ಅಂದರೆ ಸಮಭಾಜಕ ವೃತ್ತದ ಬಳಿಯ ಪೆಸಿಫಿಕ್ ಸಾಗರದ ಮೇಲ್ಮೈ ವಾತಾವರಣ ತೀವ್ರ ತಂಪಾಗುವ ವಿದ್ಯಮಾನದ ಬಳಿಕ ಈ ವರ್ಷ ಎಲ್ ನಿನೊ ಕಾಣಿಸಿದೆ. ಎಲ್ ನಿನೊ ಅಂದರೆ ಕಡಿಮೆ ಮಳೆಗೆ ಕಾರಣವಾಗುವ, ದಕ್ಷಿಣ ಅಮೆರಿಕ ಬಳಿ ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ಅಸಾಮಾನ್ಯ ತಾಪಮಾನ ಸ್ಥಿತಿ. ಈ ಬಾರಿ ಎಲ್ ನಿನೊ ಸ್ಥಿತಿ ಉಂಟಾಗಿರುವುದರಿಂದ ವಿಳಂಬ ಮತ್ತು ದುರ್ಬಲ ಮುಂಗಾರು ಸಾಮಾನ್ಯವಾಗಿ ಕಂಡುಬರುತ್ತದೆ. ಮುಂಬರುವ ತಿಂಗಳುಗಳಲ್ಲಿ ಎಲ್ ನಿನೊ ಬಲಗೊಳ್ಳುವುದು ಮುಂದುವರಿಯಲಿದೆ ಎಂಬ ಮುನ್ಸೂಚನೆಗಳೂ ಇದ್ದವು.
ಎಲ್ ನಿನೊ ವಿದ್ಯಮಾನಗಳು ಪ್ರಪಂಚದಾದ್ಯಂತದ ಹವಾಮಾನ ವೈಪರೀತ್ಯಗಳನ್ನು ಉಂಟುಮಾಡುತ್ತವೆ. ಆಹಾರ ಉತ್ಪಾದನೆ, ನೀರಿನ ಲಭ್ಯತೆ ಮತ್ತು ಜನರು ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ದೂರಗಾಮಿ ಪರಿಣಾಮಗಳನ್ನು ತರುತ್ತವೆ. ಭಾರತದಲ್ಲಿನ ಈ ಸಲದ ಮಳೆಯ ಸ್ಥಿತಿ ಆತಂಕವನ್ನು ಉಂಟು ಮಾಡಿರುವುದು ಇದೇ ಹಿನ್ನೆಲೆಯಲ್ಲಿ.
ಮಾನ್ಸೂನ್ನ ಮೊದಲಾರ್ಧದಲ್ಲಿ ದೇಶದಲ್ಲಿ ಒಟ್ಟಾರೆ ವಾಡಿಕೆಗಿಂತ ಹೆಚ್ಚು ಮಳೆಯೇ ಆಗಿದೆಯಾದರೂ, ಈ ಹೆಚ್ಚು ಮಳೆ ಕೆಲ ರಾಜ್ಯಗಳಿಗಷ್ಟೇ ಸೀಮಿತವಾಗಿ, ಇತರ ರಾಜ್ಯಗಳ ಹಲವಾರು ಜಿಲ್ಲೆಗಳು ಮಳೆ ಕೊರತೆ ಎದುರಿಸುತ್ತಿವೆ. ದೇಶದ ಮೂರನೇ ಒಂದು ಭಾಗದಷ್ಟು ಪ್ರದೇಶ ಮಳೆ ಕೊರತೆಯನ್ನು ಕಂಡಿದೆ ಎಂದು ಗುರುತಿಸಲಾಗಿದೆ. ದೇಶದ ಪೂರ್ವ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಜುಲೈನಲ್ಲಿ ಕಡಿಮೆ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಳೆ ಋತುವಿನ ದ್ವಿತೀಯಾರ್ಧ, ಅಂದರೆ ಆಗಸ್ಟ್-ಸೆಪ್ಟ್ಟಂಬರ್ನಲ್ಲಿಯೂ ವಾಡಿಕೆಯಂತೆಯೇ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನೇ ನೀಡಿದೆ. ಆದರೂ, ಆಗಸ್ಟ್ನಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಲಿದೆ ಎಂಬ ಸುಳಿವು ಸಿಕ್ಕಿದೆ.
ಎಪ್ರಿಲ್ನಲ್ಲಿ ಮುಂಗಾರು ಮುನ್ಸೂಚನೆ ಪ್ರಕಟಿಸಿದ್ದ ಭಾರತೀಯ ಹವಾಮಾನ ಇಲಾಖೆ, ವಾಡಿಕೆಯಷ್ಟೇ ಮಳೆಯಾಗಲಿದೆ ಎಂದೇ ಹೇಳಿತ್ತು. ಎಲ್ ನಿನೊ ಪರಿಣಾಮಗಳು ತಗ್ಗುವಂಥ ಹವಾಮಾನ ವಿದ್ಯಮಾನಗಳು ಹಿಂದೂ ಮಹಾಸಾಗರದ ಮೇಲ್ಮೈ ಮತ್ತು ಉತ್ತರ ಗೋಳಾರ್ಧದಲ್ಲಿ ಕಂಡಿರುವುದು ವಾಡಿಕೆ ಮಳೆ ಬೀಳುವುದಕ್ಕೆ ಪೂರಕವಾಗಲಿದೆ ಎಂದಿತ್ತು. ಆದರೆ ಕಡೆಗೆ ಮುಂಗಾರು ಮಳೆ ಕೈಕೊಟ್ಟಿತ್ತು.
ಇನ್ನು ಈ ಸಲದ ಮೊದಲಾರ್ಧದ ಮಾನ್ಸೂನ್ ಸ್ಥಿತಿ ಕುರಿತ ಈಗಿನ ವರದಿಗಳ ಪ್ರಕಾರ, ಒಟ್ಟು ೭೧೮ ವಿಭಾಗಗಳ ಪೈಕಿ ತೀವ್ರ ಮಳೆ ಕೊರತೆ ಕಂಡಿರುವುದು ೨೪೦ ಜಿಲ್ಲೆಗಳಲ್ಲಿ. ಜೂನ್ನಲ್ಲಿ ದೇಶದಲ್ಲಿ ಸರಾಸರಿಗಿಂತ ಶೇ.೯ರಷ್ಟು ಕಡಿಮೆ ಮಳೆಯಾಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ಕಡಿಮೆ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಶೇ.೬೦ರಷ್ಟು ಕಡಿಮೆಯಿತ್ತು ಎಂದು ವರದಿಗಳು ಹೇಳುತ್ತವೆ. ಜುಲೈ ಮಳೆ ಸರಾಸರಿಗಿಂತ ಶೇ.೧೩ರಷ್ಟು ಹೆಚ್ಚಾಗಿತ್ತು. ಜೂನ್ ೧ರಿಂದ ಜುಲೈ ೩೧ರ ಅವಧಿಯಲ್ಲಿ ದೇಶದಲ್ಲಿ ಸರಾಸರಿಗಿಂತ ಶೇ.೫ರಷ್ಟು ಹೆಚ್ಚು ಮಳೆಯಾಗಿದೆ.
ಹೆಚ್ಚಾಗಿ ದೇಶದ ಪೂರ್ವ ಮತ್ತು ಈಶಾನ್ಯ ವಲಯದ ಜಿಲ್ಲೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಪೂರ್ವ ಉತ್ತರ ಪ್ರದೇಶ, ಪೂರ್ವ ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಗಂಗಾತೀರದ ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳು ಮತ್ತು ಕೇರಳದ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಪೂರ್ವ ಮತ್ತು ಈಶಾನ್ಯ ಭಾಗದಲ್ಲಿ ಶೇ.೨೫ರಷ್ಟು ಮಳೆ ಕೊರತೆಯಾಗಿರುವುದಾಗಿ ವರದಿಗಳು ಹೇಳುತ್ತಿವೆ.
ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಜುಲೈನಲ್ಲಿ ದಾಖಲಾಗಿರುವುದು 1901ರಿಂದ ಈವರೆಗಿನ ಮೂರನೇ ಅತಿ ಕಡಿಮೆ ಮಳೆ. ಅಂದರೆ, 280.9 ಮಿ.ಮೀ. ಮಳೆಯಾಗಿದೆ. ಈ ಹಿಂದಿನ ಅತಿ ಕಡಿಮೆ ಮಳೆಯ ವರ್ಷಗಳೆಂದರೆ, ೨೦೨೨ರ ಮಳೆಯ ಪ್ರಮಾಣ ೨೩೪.೮ ಮಿ.ಮೀ.; ೧೯೦೩ರ ಮಳೆಯ ಪ್ರಮಾಣ 249.5 ಮಿ.ಮೀ.
ಚಂಡಿಗಡ, ಅಂಬಾಲಾ ಮತ್ತು ಹಿಮಾಚಲ ಪ್ರದೇಶದ ಇತರ ಹವಾಮಾನ ಕೇಂದ್ರಗಳಾದ ಕುಲು, ಸೋಲನ್, ಶಿಮ್ಲಾ, ಕಂಗ್ರಾ, ಸಿರ್ಮೌರ್, ಹಮೀರ್ಪುರ್ ಮೊದಲಾದ ನಗರಗಳಲ್ಲಿ ಆದ ಏಕದಿನ ಮಳೆ ಸಾರ್ವಕಾಲಿಕ ದಾಖಲೆಯನ್ನು ಮುರಿದಿದೆ. ವಾಯವ್ಯ ಭಾರತದಲ್ಲಿ 2001ರಿಂದ ಈವರೆಗಿನ ಅವಧಿಯಲ್ಲಿಯೇ ಅತಿ ಹೆಚ್ಚು, ಅಂದರೆ ೨೫೮.೬ ಮಿ.ಮೀ. ಮಳೆಯಾಗಿದೆ.
ಮಾನ್ಸೂನ್ನ ದ್ವಿತೀಯಾರ್ಧದಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದೇ ಐಎಂಡಿ ಮುನ್ಸೂಚನೆ ನೀಡಿದ್ದರೂ, ಆಗಸ್ಟ್ ಮುನ್ಸೂಚನೆ ಪ್ರಕಾರ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ. ತನ್ನ ಮಾಸಿಕ ಮುನ್ಸೂಚನೆಯಲ್ಲಿ, ಐಎಂಡಿ ಪೂರ್ವ ಮತ್ತು ಈಶಾನ್ಯ ಭಾರತ, ಹಿಮಾಲಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಹಾಗೂ ದಕ್ಷಿಣ ಪರ್ಯಾಯ ದ್ವೀಪ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗಲಿದೆ ಎಂದು ಹೇಳಿದೆ.
ಭಾರತದ ಅರ್ಧದಷ್ಟು ಕೃಷಿಭೂಮಿಗೆ ನೀರಾವರಿ ಕೊರತೆಯಿರುವುದರಿಂದ ಮುಂಗಾರು ಮಳೆಯು ನಿರ್ಣಾಯಕವಾಗಿದೆ. ದೇಶದಲ್ಲಿ ಮುಂಗಾರು ಮಳೆಯ ಪ್ರಭಾವ ಜೂನ್ನಿಂದ ಸೆಪ್ಟಂಬರ್ವರೆಗೂ ಇರುತ್ತದೆ. ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಹಿಂಗಾರು ಮಳೆಯಿರುತ್ತದೆ. ಆದರೆ, ಈ ಬಾರಿ ಜೂನ್ ಅಂತ್ಯದವರೆಗೂ ಬಹಳಷ್ಟು ಭಾಗಗಳಲ್ಲಿ ಮುಂಗಾರು ಕುಂಠಿತವಾಗಿಯೇ ಇತ್ತು. ಮಳೆ ಕೊರತೆ ಬರದ ಛಾಯೆಗೂ ಕಾರಣವಾಗಿದೆ.
ಜೂನ್ ಆರಂಭದಿಂದ ಮುಂಗಾರು ಶುರುವಾಗುತ್ತಿದ್ದಂತೆ ರೈತರು ಸಾಮಾನ್ಯವಾಗಿ ಅಕ್ಕಿ, ಜೋಳ, ಹತ್ತಿ, ಸೋಯಾಬೀನ್, ಕಬ್ಬು ಮತ್ತು ಕಡಲೆಕಾಯಿ ಮೊದಲಾದ ಬೆಳೆಗಳಿಗಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ. ಬಿತ್ತನೆ ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ಆರಂಭದವರೆಗೆ ಇರುತ್ತದೆ. ಪೂರ್ವ ಭಾರತದಲ್ಲಿ ಭತ್ತ ಬೆಳೆಯುವ ರಾಜ್ಯಗಳು ಆಗಸ್ಟ್ನಲ್ಲಿ ಹೆಚ್ಚುವರಿ ಮಳೆಯನ್ನು ಪಡೆಯುವ ಸಾಧ್ಯತೆಯಿದೆ. ಆದರೆ ಭತ್ತ, ಹತ್ತಿ ಮತ್ತು ಕಬ್ಬು ಬೆಳೆಯುವ ದಕ್ಷಿಣ ರಾಜ್ಯಗಳಲ್ಲಿ ಮಳೆ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಐಎಂಡಿ ಹೇಳಿದೆ.
ಜೂನ್ನಲ್ಲಿ ಅಲ್ಪ ಪ್ರಮಾಣದ ಮಳೆಯಿಂದಾಗಿ ಬೇಸಿಗೆ ಬೆಳೆಗಳ ಬಿತ್ತನೆ ವಿಳಂಬವಾಗಿದೆ. ಆಗಸ್ಟ್ನಲ್ಲಿಯೂ ಮಳೆ ಕಡಿಮೆಯಾದರೆ ಕೃಷಿಕರಿಗೆ ಆತಂಕ ಎದುರಾಗಲಿದೆ. ಆಗಸ್ಟ್ನಲ್ಲಿ ಆಗುವ ಮಳೆಯ ದೀರ್ಘಾವಧಿಯ ಸರಾಸರಿ ಶೇ.92 ಎಂಬುದು ಐಎಂಡಿ ಮಾಡಿರುವ ಅಂದಾಜು. ಮುಂದಿನ ತಿಂಗಳು ಕಡಿಮೆ ಮಳೆಯಾಗುವ ಅಂದಾಜಿನ ಹೊರತಾಗಿಯೂ, ಆಗಸ್ಟ್ ಮತ್ತು ಸೆಪ್ಟಂಬರ್ನಲ್ಲಿ ದೇಶದಲ್ಲಿನ ಹೆಚ್ಚುವರಿ ಮಳೆ ಸರಾಸರಿಯಾಗಿರಬಹುದು ಎಂದು ಐಎಂಡಿ ನಿರೀಕ್ಷಿಸಿದೆ.
ಬಿಪರ್ಜಾಯ್ ಚಂಡಮಾರುತದ ಪ್ರಭಾವದಿಂದಾಗಿ ದಕ್ಷಿಣ ಭಾರತದಲ್ಲಿ ಮಾನ್ಸೂನ್ ಆರಂಭದಿಂದಲೂ ದುರ್ಬಲವಾಗಿದೆ ಎಂದು ಐಎಂಡಿ ಹೇಳಿದೆ. ಇನ್ನು ಕರ್ನಾಟಕದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡುವುದಾದರೆ, ಬರ ಪರಿಸ್ಥಿತಿ ಎದುರಾಗಬಹುದು ಎಂಬ ಭೀತಿಯೂ ಇದೆ ಎನ್ನುತ್ತವೆ ವರದಿಗಳು.
ರಾಜ್ಯಕ್ಕೆ ಪ್ರತೀ ವರ್ಷ ಜೂನ್ ಮೊದಲ ವಾರದಲ್ಲೇ ಮುಂಗಾರು ಆಗಮನವಾಗುತ್ತಿತ್ತು. ಈ ಬಾರಿ ಒಂದು ವಾರ ತಡವಾಗಿ ಬಂತು. ಆನಂತರವೂ ನಿರೀಕ್ಷಿತ ಮಟ್ಟಕ್ಕೆ ಮಳೆಯಿರಲಿಲ್ಲ. ಬಿಪರ್ಜಾಯ್ ಚಂಡಮಾರುತ ಮುಂಗಾರು ಮಾರುತಗಳ ತೇವವನ್ನು ಹೀರಿದ್ದು ಮಳೆ ಕೊರತೆಗೆ ಕಾರಣವಾಗಿತ್ತು.
ಜೂನ್ ಕಡೇ ವಾರದ ವರದಿಗಳ ಪ್ರಕಾರ, ರಾಜ್ಯದಲ್ಲಿ ಶೇ. 71ರಷ್ಟು ಮಳೆ ಕೊರತೆ ಎದುರಾಗಿತ್ತು. ಕಳೆದ 28 ವರ್ಷಗಳಲ್ಲೇ ಈ ರೀತಿಯ ಸನ್ನಿವೇಶ ಮೊದಲ ಬಾರಿಗೆ ಕಾಣಿಸಿದ್ದಾಗಿ ವರದಿಗಳು ಹೇಳಿದ್ದವು. ವಾಡಿಕೆ ಪ್ರಕಾರ ಜೂನ್ ೧ರಿಂದ ಜೂನ್ ೧೦ರ ಅವಧಿಯಲ್ಲಿ ರಾಜ್ಯದಲ್ಲಿ ಸರಾಸರಿ 51 ಮಿ.ಮೀ. ಮಳೆಯಾಗಬೇಕು. ಆದರೆ, ಈ ಬಾರಿ ಕೇವಲ 14 ಮಿ.ಮೀ. ಮಳೆಯಾಗಿದೆ.
ಕರ್ನಾಟಕ ಸೇರಿದಂತೆ ದೇಶದ ೧೦ ರಾಜ್ಯಗಳು ಅತ್ಯಂತ ಹೆಚ್ಚಿನ ಮಳೆ ಕೊರತೆ ಎದುರಿಸುತ್ತಿವೆ. ಇದರ ಜೊತೆಯಲ್ಲೇ ಬಿಸಿಗಾಳಿಯನ್ನೂ ಎದುರಿಸುತ್ತಿರುವುದು ಆತಂಕದ ಸಂಗತಿ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಬಗ್ಗೆಯೂ ಆತಂಕ ವ್ಯಕ್ತವಾಗಿದೆ.
ದಕ್ಷಿಣದ ಇತರ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ. ಕೇರಳ, ತಮಿಳುನಾಡು ಕೂಡ ಮಳೆ ಕೊರತೆ ಎದುರಿಸುತ್ತಿವೆ.
ರಾಜ್ಯದಲ್ಲಿ, ಕೆಆರ್ಎಸ್ನಂಥ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ 30 ಅಡಿಗಿಂತ ಕಡಿಮೆಯಾಗಿತ್ತೆಂದು ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ವರದಿಗಳು ಹೇಳಿವೆ. ಗರಿಷ್ಠ ಮಟ್ಟ 124.8 ಅಡಿ ಇರುವ ಅಣೆಕಟ್ಟಿನಲ್ಲಿ ಕಳೆದ ವರ್ಷ ನೀರಿನ ಮಟ್ಟ 106.5 ಅಡಿ ಇತ್ತೆಂಬುದನ್ನು ವರದಿಗಳು ಉಲ್ಲೇಖಿಸಿವೆ.
ಅದೇ ರೀತಿ, ತುಂಗಭದ್ರಾ ಅಣೆಕಟ್ಟಿನಲ್ಲಿ 4.1 ಟಿಎಂಸಿ ನೀರು ಮಾತ್ರ ಇದೆ ಎನ್ನಲಾಗಿದೆ. ಕಳೆದ ವರ್ಷ ಈ ಪ್ರಮಾಣ 43.9 ಟಿಎಂಸಿ ಇತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಘಟಕದ ಪ್ರಕಾರ, ಕಾವೇರಿ ಮತ್ತು ತುಂಗಭದ್ರೆಯಂತಹ ನದಿಗಳನ್ನು ಮರುಪೂರಣಗೊಳಿಸುವ ಜಲಾನಯನ ಪ್ರದೇಶಗಳಲ್ಲಿ ಮಳೆಗಾಲದ ಮೊದಲ 35 ದಿನಗಳಲ್ಲಿ ವಾಡಿಕೆ ಮಳೆಯ ಮೂರನೇ ಒಂದು ಭಾಗಕ್ಕಿಂತಲೂ ಕಡಿಮೆ ಮಳೆಯಾಗಿದೆ.
ಭಾರತದ ಆರ್ಥಿಕತೆಗೆ ದೊಡ್ಡ ಪಾಲು ನೀಡುವ ಕೃಷಿ ಬಹುತೇಕ ಮಳೆಯನ್ನೇ ಅವಲಂಬಿಸಿದೆ. ಕೃಷಿ ಜಮೀನುಗಳಿಗೆ ನೀರುಣಿಸಲು ಮತ್ತು ಜಲಾಶಯಗಳ ಭರ್ತಿಗೆ ಅಗತ್ಯವಿರುವ ಸುಮಾರು ಶೇ.70ರಷ್ಟು ಮಳೆಯೊದಗುವುದು ಮುಂಗಾರು ಅವಧಿಯಲ್ಲಿಯೇ. ಇಲ್ಲಿ ವ್ಯತ್ಯಯವಾದರೆ ಪರಿಸ್ಥಿತಿ ಹದಗೆಡುತ್ತದೆ.
ಮಳೆ, ಪ್ರಮುಖ ನೀರಿನ ಮೂಲಗಳಾದ ನದಿಗಳು, ಅವನ್ನು ತುಂಬಿಸುವ ಜಲಾನಯನ ಪ್ರದೇಶಗಳು ಇವೆಲ್ಲವೂ ಒಂದು ಸಮತೋಲಿತ ಸ್ಥಿತಿಯಲ್ಲಿದ್ದಾಗಲೇ ಎಲ್ಲವೂ ಸರಿಯಿರುವುದು ಸಾಧ್ಯ. ಸ್ವಲ್ಪ ವ್ಯತ್ಯಾಸವಾದರೂ ಅದು ತರುವ ಪರಿಣಾಮಗಳನ್ನು ಸುಧಾರಿಸುವುದಕ್ಕೆ ಮತ್ತೆ ಬಹು ಕಾಲವೇ ಬೇಕಾಗುತ್ತದೆ.