ಕನ್ನಡಿಗನಾಗುವುದು ಹೇಗೆಂಬುದರ ಕುರಿತು ಪುಸ್ತಕ ಬರೆದ ಮಧ್ಯಪ್ರದೇಶದ ಯುವತಿ
‘ಕನ್ನಡ್ ಗೊತ್ತಿಲ್ಲ’ ದಿಂದ ‘ಕನ್ನಡ ಕಲಿಯುತ್ತಿದ್ದೀನಿ’ ಎಂದು ಬದಲಿಸಿಕೊಳ್ಳಿ ಎಂದ ಲೇಖಕಿ
ಝೋಯ ಮಲಿಕ್
ಬೆಂಗಳೂರು: ಕರ್ನಾಟಕ ಮತ್ತು ಕನ್ನಡಿಗರ ಒಳನೋಟದ ಕುರಿತು ಹೊಸ ತಲೆಮಾರಿನ ಯುವತಿ ಬರೆದ ಹೊಸ ಪುಸ್ತಕ ‘ಕರ್ನಾಟಕದಲ್ಲಿ’ ಪ್ರಕಟಗೊಂಡಿದೆ. ಇಲ್ಲಿ ವಿಶೇಷ ಲೇಖಕಿ ಕರ್ನಾಟಕದವರಲ್ಲ ಬದಲಾಗಿ ಮಧ್ಯ ಪ್ರದೇಶದ ಕನ್ನಡ ಮನಸ್ಸಿನವರು.
ಇಪ್ಪತ್ತೊಂದು ವರ್ಷದ ಝೋಯ ಮಲಿಕ್, ಮೂಲತಃ ಮಧ್ಯಪ್ರದೇಶದವರು , ಜೈವಿಕ ತಂತ್ರಜ್ಞಾನ ಮತ್ತು ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು 2021 ರಲ್ಲಿ ಬೆಂಗಳೂರಿಗೆ ಬಂದ ಇವರು ಮೂರು ವರ್ಷ ಕರ್ನಾಟಕದಲ್ಲಿದ್ದರೂ. ಹಠದಿಂದ ಕನ್ನಡ ಮಾತನಾಡಲು ಕಲಿತು ಈಗ ‘ಕರ್ನಾಟಕದಲ್ಲಿ’ ಎಂಬ ಪುಸ್ತಕವನ್ನು ಆಂಗ್ಲ ಭಾಷೆಯಲ್ಲಿ ರಚಿಸಿದ್ದಾರೆ.
'ಪ್ರಯತ್ನದ ಮಹತ್ವʼ ಪುಸ್ತಕದಲ್ಲಿ ಕಂಡುಬರುವ ಸಾಮಾನ್ಯ ಅಂಶ. “ಬೆಂಗಳೂರಿನ ಆರಂಭಿಕ ದಿನದಲ್ಲಿ ನಾನು ಹಠಮಾರಿತನದಿಂದಲೇ ಕನ್ನಡ ಕಲಿಯಲು ನಿರಾಕರಿಸಿದ್ದೆ, ಆದರೆ ನನ್ನ ಸಹಪಾಠಿ ಸ್ನೇಹಿತರು ಮತ್ತು ಪ್ರಾಧ್ಯಾಪಕರೊಂದಿಗೆ ಹೆಚ್ಚು ಸಮಯ ಕಳೆದಂತೆ, ನನ್ನ ಸುತ್ತಲೂ ಕನ್ನಡದಲ್ಲಿ ಮಾತನಾಡಬೇಡಿ ಎಂದು ಹೇಳುವುದು ಎಷ್ಟು ಅನ್ಯಾಯದಿಂದ ಕೂಡಿದೆ ಎಂದು ನನಗನ್ನಿಸಿತ್ತು. ನಂತರ ನಾನು ಕನ್ನಡ ಕಲಿಯಲು ಪ್ರಯತ್ನ ಪಡಬೇಕೆಂದು ತಿಳಿದೆ. ಪುಸ್ತಕದ ಉದ್ದಕ್ಕೂ, ‘ಕನ್ನಡ್ ಗೊತ್ತಿಲ್ಲ’ ದಿಂದ ‘ಕನ್ನಡ ಕಲಿಯುತ್ತಿದ್ದೀನಿ’ ಎಂದು ಬದಲಿಸಿಕೊಳ್ಳುವಂತೆ ನಾನು ಜನರನ್ನು ಒತ್ತಾಯಿಸುತ್ತೇನೆ ಮತ್ತು ಇದೇ ನನ್ನ ಸಂದೇಶ" ಎನ್ನುತ್ತಾರೆ ಲೇಖಕಿ ಝೋಯ ಮಲಿಕ್.
ಇಂದು ಲೇಖಕಿ ಝೋಯ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. "ಕನ್ನಡ ಕಲಿಯಲು ನನಗೆ ಸ್ವಲ್ಪ ಸಮಯ ತೆಗೆದುಕೊಂಡಿತು. ಕನ್ನಡ ಕಲಿಸುವ ಆನ್ಲೈನ್ ಅಪ್ಲಿಕೇಶನ್ಗಳು ನನಗೆ ಸಹಾಯಕವಾಗಲಿಲ್ಲ. ಸ್ಥಳೀಯರೊಂದಿಗೆ ಸಂಭಾಷಿಸುವ ಮೂಲಕ ನಾನು ಕನ್ನಡ ಕಲಿತುಕೊಂಡೆ, ನಾನು ಕನ್ನಡ ಮಾತನಾಡಲು ಪ್ರಯತ್ನಪಟ್ಟಾಗ ಒಂದು ಅಜ್ಜಿಯ ಮತ್ತು ಆಟೋರಿಕ್ಷ ಚಾಲಕನ ನಗು, ನನ್ನ ಕನ್ನಡ ಮಾತನಾಡುವ ಪ್ರಯತ್ನವನ್ನು ಸಾರ್ಥಕಗೊಳಿಸಿತು ಎನ್ನುತ್ತಾರೆ ಝೋಯ ಮಲಿಕ್.
ಕನ್ನಡಿಗರ ಕುರಿತು ಲೇಖಕಿ ಮಾತನಾಡುವಾಗ “ಕನ್ನಡಿಗರು ತಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾರೆ, ನನಗದು ತುಂಬಾ ವಿಶೇಷ ಎಂದೆನಿಸುತ್ತದೆ, ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಇದು ಕಾಣೆಯಾಗಿದೆ. ಆಧುನೀಕರಣದ ಭರಾಟೆಯ ನಡುವೆಯೂ ಕರ್ನಾಟಕದ ಜನ ತಮ್ಮ ಮೂಲ ಆಚಾರ ವಿಚಾರಗಳನ್ನುಮರೆತಿಲ್ಲ , “ಬೆಂಗಳೂರಿನವರು ಹೊರ ರಾಜ್ಯದವರನ್ನು ದ್ವೇಷಿಸುತ್ತಾರೆ ಎಂದು ಹಲವರು ನನಗೆ ಹೇಳುತ್ತಿದ್ದರು. ಮೊದಲು ನನಗೆ ಹೊರ ರಾಜ್ಯದವರು ಮತ್ತು ಕರ್ನಾಟಕದ ಸ್ಥಳೀಯರು ಶಾಂತಿಯುತ ಸಹಬಾಳ್ವೆಯಿಂದ ಇಲ್ಲ ಎಂದು ನನ್ನಲ್ಲಿ ಅನಿಸಿತ್ತು , ಆದರೆ ನನ್ನ ಅನುಭವವೇ ಬೇರೆ ರೀತಿಯದ್ದಾಗಿತ್ತು. ಬೆಂಗಳೂರಿನ ಜನರು ನನ್ನನ್ನು ಸಂಪೂರ್ಣ ಹೃದಯದಿಂದ ಸ್ವಾಗತಿಸಿದರು, ಸಾಮಾಜಿಕ ಜಾಲತಾಣ ನೋಡಿ ಕರ್ನಾಟಕ ಹೇಗೆ ಎಂದು ತಿಳಿಯುವುದರ ಬದಲು ಜನರೊಂದಿಗೆ ಬೆರೆತು ಕನ್ನಡ ಕಲಿತು , ಕರ್ನಾಟಕವನ್ನು ತಿಳಿಯಿರಿ ಎನ್ನುತ್ತಾರೆ ಝೋಯ ಮಲಿಕ್.
ಪುಸ್ತಕದಲ್ಲಿ, ಝೋಯ ಅವರು ಕರ್ನಾಟಕದ ತಮ್ಮ ಪ್ರವಾಸದ ಅನುಭವಗಳನ್ನು ದಾಖಲಿಸಿದ್ದಾರೆ, ಮೈಸೂರು, ಮಂಗಳೂರು, ಮಡಿಕೇರಿ ಮತ್ತು ಇನ್ನಿತರ ಜಿಲ್ಲೆಗಳ ಲ್ಲಿ ಕಂಡುಬರುವ ಆಹಾರ ಪದ್ಧತಿಗಳು, ಭಾಷಾ ವೈವಿಧ್ಯತೆ, ಆಚಾರ ವಿಚಾರನ್ನು ಬಿತ್ತರಿಸಿದ್ದಾರೆ.
‘ಕರ್ನಾಟಕದಲ್ಲಿ’ಪುಸ್ತಕ ಆನ್ಲೈನ್ನಲ್ಲಿ 149 ರೂ.ಗೆ ಲಭ್ಯವಿದೆ.