ಕಂಗೊಳಿಸಲು ಸಜ್ಜಾಗುತ್ತಿದೆ ಮಡಿಕೇರಿ ಅರಮನೆ
ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನವೀಕರಣ
ಮಡಿಕೇರಿ: ಕೋಟೆ ಆವರಣದಲ್ಲಿರುವ ರಾಜರ ಅರಮನೆ ನವೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, 2024ರ ಫೆಬ್ರವರಿ ಅಂತ್ಯಕ್ಕೆ ನೂತನ ಅರಮನೆಯಂತೆ ಕಂಗೊಳಿಸಲಿದೆ.
ಅರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದಿಂದ ನಡೆಯುತ್ತಿರುವ ಐತಿಹಾಸಿಕ ರಾಜರ ಅರಮನೆಯ ನವೀಕರಣ ಕಾಮಗಾರಿ ಭರದಿಂದ ಸಾಗಿದ್ದು, ಶೇ.90 ರಷ್ಟು ಮುಗಿದಿದೆ. ಇನ್ನು ಪ್ಲಾಸ್ಟರಿಂಗ್, ಪ್ಯಾಚ್ ವರ್ಕ್ ಮತ್ತು ಸುಣ್ಣ ಬಣ್ಣ ಬಳಿಯುವ ಕೆಲಸ ಮಾತ್ರ ಬಾಕಿಯಿದ್ದು, ಫೆಬ್ರವರಿ ವೇಳೆಗೆ ಅರಮನೆ ಸಂಪೂರ್ಣ ಸಿದ್ಧಗೊಂಡು ಹೊಸದರಂತೆ ಕಂಗೊಳಿಸಲಿದೆ.
► 10.70 ಕೋಟಿ ರೂ. ವೆಚ್ಚದ ಕಾಮಗಾರಿ: ಭಾರತೀಯ ಪುರಾತತ್ವ ಇಲಾಖೆಯಿಂದ 10.70 ಕೋಟಿ ರೂ. ವೆಚ್ಚದಲ್ಲಿ 2021ರ ಅಕ್ಟೋಬರ್ ತಿಂಗಳಲ್ಲಿ ಅರಮನೆ ನವೀಕರಣ ಕಾಮಗಾರಿ ಆರಂಭಿಸಲಾಯಿತು. ಆರಂಭದಲ್ಲಿ ಮಳೆ ಮತ್ತಿತರ ಕಾರಣಗಳಿಂದ ಆಮೆ ಗತಿಯಲ್ಲಿ ಸಾಗಿದ್ದ ಕಾಮಗಾರಿ ಈಗ ಮುಕ್ತಾಯದ ಹಂತಕ್ಕೆ ತಲುಪಿದೆ. ಅರಮನೆಯ ಮೇಲ್ಛಾವಣಿ, ಒಳಗಿನಿಂದ ಮರದ ಸೀಲಿಂಗ್, ಕಿಟಕಿ-ಬಾಗಿಲುಗಳ ಮರು ಜೋಡಣೆ, ಟೈಲ್ಸ್ ಬದಲಾವಣೆ, ಫ್ಲೋರಿಂಗ್, ಪ್ಲಾಸ್ಟರಿಂಗ್, ಮರದ ಪೀಠೋಪಕರಣಗಳಿಗೆ ಪಾಲಿಷಿಂಗ್ ಸೇರಿ ಬಹುತೇಕ ಪ್ರಮುಖ ಕೆಲಸಗಳೆಲ್ಲವೂ ಮುಗಿದಿದೆ. ಖಾಸಗಿ ಕಂಪೆನಿಗಳಿಗೆ ಗುತ್ತಿಗೆ ನೀಡದೇ ಪುರಾತತ್ವ ಇಲಾಖೆಯ ಮೇಲುಸ್ತುವಾರಿಯಲ್ಲಿಯೇ ಕಾಮಗಾರಿ ನಡೆಸಲಾಗುತ್ತಿದ್ದು, ಪ್ಯಾಚ್ ವರ್ಕ್ ಮತ್ತು ಪೇಂಟಿಂಗ್ ಕೆಲಸಗಳು ಮಾತ್ರ ಬಾಕಿ ಉಳಿದಿದೆ.
ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕೆಲಸ: ಅರಮನೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಲಾಗುತ್ತಿದೆ. ಟೈಲ್ಸ್, ಮರಗಳು ಸೇರಿದಂತೆ ಹಿಂದೆ ಯಾವ ವಸ್ತುಗಳನ್ನು ಬಳಸಿ ಅರಮನೆ ನಿರ್ಮಾಣ ಮಾಡಲಾಗಿತ್ತೋ ಅದೇ ವಸ್ತುಗಳನ್ನೇ ಬಳಸಿ ನವೀಕರಣ ಮಾಡಲಾಗುತ್ತಿದೆ. ಆ ಮೂಲಕ ಮೂಲ ಸ್ವರೂಪಕ್ಕೆ ಕಿಂಚಿತ್ತೂ ಧಕ್ಕೆಯಾಗದಂತೆ ಪುರಾತತ್ವ ಇಲಾಖೆ ಎಚ್ಚರ ವಹಿಸುತ್ತಿದೆ. ಪ್ರಮುಖವಾಗಿ ಕಟ್ಟಡಕ್ಕೆ ಒಂದಿಷ್ಟೂ ಸಿಮೆಂಟ್ ಬಳಸದೆ ಹಳೆಯ ಸುಣ್ಣದ ಗಾರೆಯಿಂದಲೇ ಸಂಪೂರ್ಣ ಕಾಮಗಾರಿ ನಿರ್ವಹಿಸಲಾಗಿದೆ.
► ಸುಣ್ಣದ ಗಾರೆ ಬಳಸಿ ನಿರ್ಮಾಣ: ಹಿಂದೆ ಕಟ್ಟಡಗಳಿಗೆ ಸಿಮೆಂಟ್ ಬದಲು ಸುಣ್ಣದ ಗಾರೆ ಬಳಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಆದ್ದರಿಂದ ನವೀಕರಣ ಕಾಮಗಾರಿಗೂ ಇದೇ ಸುಣ್ಣದ ಗಾರೆಯನ್ನೇ ಬಳಸಲಾಗುತ್ತಿದೆ. ಸುಣ್ಣ, ಮರಳು, ಹರಳೇಕಾಯಿ, ಅಂಟುವಾಳ, ಬಿಲ್ವಪತ್ರೆ, ಅಲೋವೆರಾ ಮತ್ತು ಬೆಲ್ಲದ ನೀರಿನ ಮಿಶ್ರಣದಿಂದ ಈ ಸುಣ್ಣದ ಗಾರೆಯನ್ನು ತಯಾರಿಸಲಾಗುತ್ತದೆ. ಇದಕ್ಕೆ ಬೇಕಾದ ಯಂತ್ರೋಪಕರಣಗಳನ್ನೂ ತರಿಸಿಕೊಳ್ಳಲಾಗಿದೆ.
ಮಡಿಕೇರಿ ಅರಮನೆ ಇತಿಹಾಸ
1681ರಲ್ಲಿ ಹಾಲೇರಿ ರಾಜ ವಂಶದ ಮುದ್ದುರಾಜನಿಂದ ಮಡಿಕೇರಿ ಅರಮನೆ ನಿರ್ಮಾಣ ಮಾಡಲಾಯಿತು. 1812 ರಿಂದ 1814ರ ನಡುವೆ ಎರಡನೇ ಲಿಂಗರಾಜೇಂದ್ರ ಅವಧಿಯಲ್ಲಿ ಅರಮನೆ ಪುನರ್ ರಚನೆ ಮಾಡಲಾಯಿತು. ಹಳೆಯ ಅರಮನೆಯನ್ನು ಹುಲ್ಲು ಮತ್ತು ಮರದಿಂದ ನಿರ್ಮಿಸಲಾಗಿತ್ತು. ಬ್ರಿಟಿಷರು ಕೊಡಗನ್ನು ವಶಪಡಿಸಿಕೊಂಡ ನಂತರ ಹೆಂಚು ಹಾಕಿದ್ದರು. ಬ್ರಿಟಿಷರ ಅವಧಿಯಲ್ಲಿ ಹಲವು ಬಾರಿ ನವೀಕರಣಗೊಳಿಸಲಾಗಿತ್ತು. ಕೊಡಗು ಪ್ರತ್ಯೇಕ ರಾಜ್ಯವಾಗಿದ್ದಾಗ ಇದು ವಿಧಾನ ಸಭಾಂಗಣವಾಗಿತ್ತು. 1956ರಲ್ಲಿ ಕೊಡಗು ಮೈಸೂರಿನೊಂದಿಗೆ ವಿಲೀನವಾದ ಬಳಿಕ ಕೋಟೆ ಜಿಲ್ಲಾಧಿಕಾರಿಗಳ ಕಚೇರಿಯಾಯಿತು. ರಾಜರ ಅರಮನೆ ಸುತ್ತ ಕಲ್ಲಿನ ಬೃಹತ್ ಕೋಟೆ ನಿರ್ಮಿಸಲಾಗಿದೆ. ಇದಕ್ಕೆ ಹೆಬ್ಬಾಗಿಲು, ಕಾವಲು ಕೊಠಡಿ, ಸಭಾಂಗಣ, ನೀರಿನ ತೊಟ್ಟಿ, ರಾಜರ ಕಾಲದ ಪಟ್ಟದಾನೆಯ ಕಲ್ಲಿನ ಪ್ರತಿರೂಪವನ್ನು ಹೊಂದಿರುವ ಐತಿಹಾಸಿಕ ಕಟ್ಟಡ ಇದಾಗಿದೆ.
ಆಗಸ್ಟ್ ತಿಂಗಳಲ್ಲಿ ಅರಮನೆ ಕಾಮಗಾರಿ ಪರಿಶೀಲನೆ ವೇಳೆ ಜನವರಿಯಲ್ಲಿ ಕಾಮಗಾರಿ ಮುಗಿಸುವುದಾಗಿ ಎಎಸ್‌ಐ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈಗ ಅಂತಿಮ ಹಂತದ ಕಾಮಗಾರಿ ನಡೆಯುತ್ತಿರುವುದರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಬೇಕಿದೆ. ಎಎಸ್‌ಐ ಹಿರಿಯ ಅಧಿಕಾರಿಗಳು ಬರುವ ದಿನ ನಿಗದಿಯಾಗಬೇಕಿದ್ದು, ಜಂಟಿಯಾಗಿ ಪರಿಶೀಲನೆ ನಡೆಸಲಾಗುವುದು.
► ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ
► ಸಿಮೆಂಟ್‌ಗಿಂತಲೂ ಉತ್ತಮ: ಸುಣ್ಣದ ಗಾರೆ ಈಗಿನ ಸಿಮೆಂಟ್‌ಗಿಂತಲೂ ಬಲಿಷ್ಠವಾಗಿದ್ದು, ಕಟ್ಟಡ ಸದೃಢವಾಗಿರುತ್ತದೆ ಎಂದು ಕಾಮಗಾರಿ ಮೇಲ್ವಿಚಾರಕರು ಹೇಳುತ್ತಾರೆ. ಮೊದಲು ಈ ಗಾರೆಗೆ ಮೊಟ್ಟೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಈಗ ಅದರ ಬದಲು ಬೆಲ್ಲದ ಮಿಶ್ರಣ ಬಳಸಲಾಗುತ್ತಿದೆ. ಇದರಿಂದ ತಯಾರಾದ ಗಾರೆ ಇಂದಿನ ಸಿಮೆಂಟ್‌ಗಿಂತಲೂ ಉತ್ತಮವಾಗಿದ್ದು, ವರ್ಷಗಳು ಕಳೆದಷ್ಟೂ ಹಿಡಿತ ಗಟ್ಟಿಯಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.