ಮಹಾರಾಷ್ಟ್ರ : ಶಿಕ್ಷಕರ ಮೇಲೆ ಹಲ್ಲೆ ಮಾಡಿ, ಬೆತ್ತಲು ಮಾಡುವ ಸಂಘ ಪರಿವಾರದ ಗೂಂಡಾಗಳು
ಶಾಲೆಗೆ ನುಗ್ಗಿ ಪ್ರಾಂಶುಪಾಲರನ್ನು ಅಟ್ಟಾಡಿಸಿ ಬಟ್ಟೆ ಹರಿದು, ಹೊಡೆಯೋದು ಯಾವ ಸಂಸ್ಕೃತಿ ?
ಹಿಜಾಬ್ ಆಯ್ತು, ಹಲಾಲ್ ಆಯ್ತು, ವ್ಯಾಪಾರಿಗಳಿಗೆ ಬಹಿಷ್ಕಾರ ಆಯ್ತು, ಅಝಾನ್ ಆಯ್ತು, ಗೋರಕ್ಷಣೆ ಹೆಸರಲ್ಲಿನ ಹಲ್ಲೆಗಳು, ಹತ್ಯೆಗಳು, ಅನೈತಿಕ ಪೊಲೀಸ್ ಗಿರಿಯೂ ನಡೆಯುತ್ತಲೇ ಇದೆ. ಇದೆಲ್ಲದರ ಬಳಿಕ ಮುಖಕ್ಕೇ ಮೂತ್ರ ಮಾಡಿ ಪ್ರತಾಪ ಮೆರೆಯುವವರೆಗೂ ಬಂದುಮುಟ್ಟಿದೆ ಹಿಂದುತ್ವ ಕೋಮುವಾದಿಗಳ ವಿಕೃತಿ. ಸಂಸ್ಕೃತಿಯ ಬಗ್ಗೆ ದೊಡ್ಡದಾಗಿ ಮಾತನಾಡುವವರ ಅತ್ಯಂತ ಅನಾಗರಿಕ ವರ್ತನೆಗೆ ಇದಕ್ಕಿಂತ ಬೇರೆ ಪ್ರಸಂಗ ಬೇಕಿಲ್ಲ.
ಇದೆಲ್ಲದರ ಬಳಿಕ ಶಾಲೆಗಳೊಳಗೇ ಹೋಗಿ ವಿದ್ಯೆ ಕಲಿಸುವ ಗುರುಗಳ ಮೇಲೆಯೇ ಹಲ್ಲೆ ನಡೆಸುವ ದುಷ್ಟರ ಬಗ್ಗೆಯೂ ಸುದ್ದಿಗಳು ಬರತೊಡಗಿವೆ. ಇದೂ ತೀರಾ ಹೊಸತೇನೂ ಅಲ್ಲ. ಈಗ ಬಂದಿರೋದು ನಡೀತಾ ಬಂದಿರೋ ಸರಣಿಯ ಹೊಸ ಉದಾಹರಣೆ ಅಷ್ಟೇ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡವರಿಗೆ ಯಾವುದಾದರೂ ಒಂದು ನೆಪ ಬೇಕು ಅಷ್ಟೆ.
ಪುಣೆ ಶಾಲೆಗೆ ನುಗ್ಗಿ ಪ್ರಿನ್ಸಿಪಾಲರ ಮೇಲೆಯೇ ಸಂಘ ಪರಿವಾರದ ಮಂದಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸೋದಕ್ಕೆ ಸಿಕ್ಕ ನೆಪವೇನೆಂದರೆ, ಅವರು ಶಾಲೆಯಲ್ಲಿ ಮಕ್ಕಳಿಂದ ಕ್ರೈಸ್ತ ಪ್ರಾರ್ಥನೆ ಮಾಡಿಸಿದ್ದಾರೆ ಎನ್ನೋ ಆರೋಪ.
ಪುಣೆಯ ತಾಲೆಗಾಂವ್ ದಭಾದೆ ಪಟ್ಟಣದಲ್ಲಿರೋ ಡಿ ವೈ ಪಾಟೀಲ್ ಹೈಸ್ಕೂಲಿನಲ್ಲಿ ಸಂಘಪರಿವಾರದವರಿಂದ ಈ ದುಷ್ಟ ಕೃತ್ಯ ನಡೆದಿದೆ. ಪ್ರಿನ್ಸಿಪಾಲ್ ಮೇಲಿನ ಹಲ್ಲೆ ಘಟನೆಯ ಅತ್ಯಂತ ಆಘಾತಕಾರಿ ವೀಡಿಯೊ ಕೂಡ ವೈರಲ್ ಆಗಿದೆ.
ಪ್ರಿನ್ಸಿಪಾಲ್ ಅಲೆಕ್ಸಾಂಡರ್ ಕೋಟ್ಸ್ ರೀಡ್ ಅವರನ್ನು ಗುಂಪೊಂದು ಬೆನ್ನಟ್ಟುತ್ತಿರೋದು, ಪ್ರಿನ್ಸಿಪಾಲ್ ಮೆಟ್ಟಿಲುಗಳನ್ನು ಹತ್ತುತ್ತಿರೋದು, ಅವರ ಬಟ್ಟೆ ಹರಿದಿರೋದು, ಗುಂಪಿನಲ್ಲಿದ್ದವರು ಅವರ ಮೇಲೆ ಹಲ್ಲೆ ಮಾಡೋದು ವೀಡಿಯೊದಲ್ಲಿ ಕಾಣಿಸುತ್ತದೆ. ಗುಂಪಿನಲ್ಲಿದ್ದವರು ಹರ ಹರ ಮಹಾದೇವ್ ಘೋಷಣೆ ಕೂಗೋದೂ ಕೇಳಿಸುತ್ತದೆ. ಇನ್ನಾರೋ ಬಂದು ಅವರನ್ನೆಲ್ಲ ತಡೆದಿದ್ದಾರೆ. ಇದೆಲ್ಲ ಮುಗಿದ ಮೇಲೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಶಾಲಾ ಕಟ್ಟಡದೊಳಕ್ಕೆ ನುಗ್ಗಿದ್ದ ಗುಂಪಿನಲ್ಲಿ ಸುಮಾರು ನೂರು ಜನರಿದ್ದರು ಎಂದು ವರದಿಯಿದೆ.
ಆದರೆ ಯಾವುದೋ ಒಂದು ನೆಪವಿಟ್ಟುಕೊಂಡು ಶಾಲೆಯೊಳಗೆ ನುಗ್ಗಿ ಪ್ರಿನ್ಸಿಪಾಲ್ ಮೇಲೆ ಹಲ್ಲೆ ನಡೆಸುವ ಮಟ್ಟಕ್ಕೆ ಇವರಿಗೆ ಸರ್ಕಾರ ಅಧಿಕಾರ ಕೊಟ್ಟಿದೆಯೆ ? ಸಂಘ ಪರಿವಾರದವರಾದ್ರೆ ಏನೂ ಮಾಡಬಹುದೆ ಈ ದೇಶದಲ್ಲಿ ? ಹರಹರ ಮಹದೇವ್ ಅಂದು ಘೋಷಣೆ ಕೂಗಿಕೊಂಡು ಈ ದುಷ್ಟರು ಮಾಡಿರೋ ಕೃತ್ಯ ಹಿಂದೂ ಧರ್ಮಕ್ಕೆ, ಅದರ ನಂಬಿಕೆಗಳಿಗೆ, ಬೋಧನೆಗಳಿಗೆ ಮಾಡಿರೋ ಬಹುದೊಡ್ಡ ಅವಮಾನ.
ಮಹಾರಾಷ್ಟ್ರದಲ್ಲಿ ಬಿಜೆಪಿಯ ಅಸಹ್ಯ ರಾಜಕಾರಣ ಅಲ್ಲಿನ ಶಾಸಕರನ್ನು ಎಲ್ಲರೆದುರು ನಗ್ನರಾಗಿಸಿ ಬಿಟ್ಟಿದೆ. ಇತ್ತ ಸಂಘ ಪರಿವಾರದವರು ಶಾಲೆಯೊಳಗೆ ನುಗ್ಗಿ ಅಲ್ಪಸಂಖ್ಯಾತ ಪ್ರಿನ್ಸಿಪಾಲರನ್ನು ಥಳಿಸಿ ಬೆತ್ತಲೆ ಮಾಡಲು ಹೊರಟಿದ್ದಾರೆ. ಇವರಿಗೆಲ್ಲ ಶಿಕ್ಷಣ, ಸಂಸ್ಕೃತಿ ಅನ್ನೋದರ ಕನಿಷ್ಠ ಅರ್ಥವಾದರೂ ಗೊತ್ತಿದೆಯೆ ?
ಅತ್ತ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮುಂದೆ ನಿಂತು ಚಹ, ಪಕೋಡ, ನೂಡಲ್ಸ್ ಬಗ್ಗೆ ಮಾತನಾಡುವ ಪ್ರಧಾನಿ.
ಇತ್ತ ಪಾಠ ಮಾಡುವ ಗುರುಗಳನ್ನೇ ಹಿಡಿದು ಥಳಿಸಿ ಅವರ ಬಟ್ಟೆ ಹರಿಯುವ ಸಂಘ ಪರಿವಾರದ ಗೂಂಡಾಗಳು. ನೆಹರೂ ದಶಕಗಳ ಹಿಂದೆಯೇ ಐಐಟಿಯಂಥ ಸಂಸ್ಥೆಗಳನ್ನು ಕಟ್ಟಿದ್ದ ಈ ದೇಶದಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿ ಶಿಕ್ಷಣದ, ವಿವಿಗಳ, ಕಾಲೇಜುಗಳ, ಶಾಲೆಗಳ ಮಟ್ಟ ಎಲ್ಲಿಗೆ ಬಂದಿದೆ ಎಂಬುದನ್ನು ನೋಡಿದರೇ ಆತಂಕವಾಗುತ್ತದೆ.
‘
ಒಂದೆಡೆ ಇಡೀ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣಗೊಳಿಸುವ ಹುನ್ನಾರ ನಡೆದಿದ್ದರೆ, ತಪ್ಪು ಮತ್ತು ಸುಳ್ಳು ಇತಿಹಾಸ ಸೇರಿಸುವ ಸಂಚು ನಡೆದಿದ್ದರೆ, ಗುಣಮಟ್ಟದ ಶಿಕ್ಷಣವನ್ನು ಬೆಂಬಲಿಸುವತ್ತ ಆಸಕ್ತಿಯೇ ಈ ಸರ್ಕಾರಕ್ಕಿಲ್ಲ ಎಂಬ ಸತ್ಯ ಮತ್ತೊಂದೆಡೆ. ಪ್ರಾಥಮಿಕ ಹಂತದಿಂದ ಹಿಡಿದು ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಹಳ್ಳ ಹಿಡಿಸಲಾಗುತ್ತಿದೆ ಎಂಬುದನ್ನು ಹಲವು ವರದಿಗಳೇ ಹೇಳುತ್ತವೆ. ಮಾರ್ಚ್ 2022ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-20 ಕೂಡ ಅಂಥ ಹಲವು ಅಂಶಗಳನ್ನು ಮುಂದಿಡುತ್ತದೆ.
2014 ಮತ್ತು 2019ರ ಚುನಾವಣೆಗಳಲ್ಲಿ, ಬಿಜೆಪಿಯ ಪ್ರಣಾಳಿಕೆ ದೇಶದ ಶಿಕ್ಷಣದ ವಿಚಾರವಾಗಿ ಕೊಟ್ಟಿದ್ದು ದೊಡ್ಡ ದೊಡ್ಡ ಭರವಸೆಗಳನ್ನೇ. ಆದರೆ ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸಿಯೇ ಗೊತ್ತಿಲ್ಲದ ಈ ಸರ್ಕಾರ ಶಿಕ್ಷಣದ ವಿಚಾರದಲ್ಲೂ ಅದನ್ನೇ ಮಾಡಿದೆ. ಹೀಗೆ ಏನೇನೂ ಮಾಡದಿರುವುದರಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳ ಡಬಲ್ ಇಂಜಿನ್ ಪಾಲು ಬಹಳವಿದೆ.
ಸಾಮಾಜಿಕ ಒಗ್ಗಟ್ಟು, ಧಾರ್ಮಿಕ ಸೌಹಾರ್ದತೆ, ರಾಷ್ಟ್ರ ನಿರ್ಮಾಣ ಮತ್ತು ಬೆಳವಣಿಗೆಗೆ ಶಿಕ್ಷಣ ಅತ್ಯಂತ ಅಗತ್ಯ ಎಂದು ಪ್ರಣಾಳಿಕೆಯಲ್ಲಿ ಮಾತ್ರ ಹೇಳುವ ಇವರು ಏನು ಮಾಡುತ್ತಿದ್ದಾರೆ ? ಸಮಾಜದ ವಂಚಿತ ವರ್ಗಗಳ ಸಬಲೀಕರಣದ ಮಾತನ್ನೂ ಆಡುತ್ತಾರೆ. ಸಮಾನ ಅವಕಾಶಗಳ ಮಾತನ್ನೂ ಆಡುತ್ತಾರೆ. ಆದರೆ ವಾಸ್ತವದಲ್ಲಿ ಎಲ್ಲವೂ ತದ್ವಿರುದ್ಧ. ಪ್ರಣಾಳಿಕೆಗಳಲ್ಲಿ ಘೋಷಿಸಿದ ಯಾವುದಕ್ಕೂ ಇವರ ಬಜೆಟ್ನಲ್ಲಿ ಮಾತ್ರ ಬಲವಿಲ್ಲ. ನವೋದಯ ವಿದ್ಯಾಲಯಗಳ ಪ್ರವೇಶ ಹೆಚ್ಚಳ, ಹೆಚ್ಚಿನ ಏಕಲವ್ಯ ಮಾದರಿ ವಸತಿ ಶಾಲೆಗಳ ಘೋಷಣೆ ಎಲ್ಲವೂ ಪ್ರಣಾಳಿಕೆಗೇ ಸೀಮಿತ. ಕಾರ್ಯರೂಪಕ್ಕೆ ಬರಲು ಬಜೆಟ್‌ನಲ್ಲಿ ಅಗತ್ಯ ಹಣವೇ ಇಲ್ಲ.
2014ರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಮುಚ್ಚುವ ವಿಚಾರದಲ್ಲಿಯೇ ಸರ್ಕಾರ ಹೆಚ್ಚು ಉತ್ಸಾಹ ತೋರಿಸಿದೆ. ಇನ್ನು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು (ಆರ್‌ಟಿಇ) ಕೋಟಾದಡಿಯಲ್ಲಿಯೂ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆವ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಕರ್ನಾಟಕದ ಖಾಸಗಿ ಶಾಲೆಗಳು 2018-19ರಲ್ಲಿ ಈ ಕಾಯಿದೆಯಡಿಯಲ್ಲಿ 12,165 ಮಕ್ಕಳನ್ನು ಹೊಂದಿದ್ದವು 2020-21ರಲ್ಲಿ ಅದು ಕೇವಲ 221ಕ್ಕೆ ಬಂದುಮುಟ್ಟಿತು. ಉತ್ತರ ಪ್ರದೇಶದಲ್ಲೂ ಇದೇ ಪರಿಸ್ಥಿತಿ.
ಹೀಗೆ ಬಿಜೆಪಿ ದರ್ಬಾರಿನಲ್ಲಿ ಶಿಕ್ಷಣ ಅನ್ನೋದು ಬರೀ ಪ್ರಣಾಳಿಕೆಯಲ್ಲಿ, ಮಾತಿನಲ್ಲಿ ಮಾತ್ರವೇ ಇದೆ. ಸಾಮರಸ್ಯ, ಸೌಹಾರ್ದತೆಗೆ ಶಿಕ್ಷಣ ಬೇಕೆನ್ನುವ ಅವರ ಬಾಯಿಮಾತು ವಾಸ್ತವದಲ್ಲೆಂದೂ ಜಾರಿಯಾಗಿಯೇ ಇಲ್ಲ.ಬದಲಾಗಿ ಈಗ ಶಾಲೆಯೊಳಕ್ಕೇ ನುಗ್ಗಿ ಶಿಕ್ಷಕರಿಗೆ ಹಲ್ಲೆ ಮಾಡಿ, ತಮ್ಮ ಪಕ್ಷ ಶಿಕ್ಷಣಕ್ಕೆ ಎಷ್ಟು ಮಹತ್ವ ಕೊಡುತ್ತದೆ ಎಂಬುದನ್ನು ಸಂಘ ಪರಿವಾರದ ಗೂಂಡಾಗಳು ಇಡೀ ಜಗತ್ತಿಗೆ ಸಾರಿ ಹೇಳಿದ್ದಾರೆ.
ದಶಕಗಳಿಂದ ಸಾವಿರಾರು ಮಕ್ಕಳಿಗೆ ಪಾಠ ಹೇಳಿದ, ಅವರಿಂದ ಗೌರವ ಪಡೆದ ಆ ಹಿರಿಯ ಪ್ರಾಂಶುಪಾಲರಿಗೆ ಆಗಿರುವ ಆಘಾತವನ್ನು ಯಾರಾದರೂ ಊಹಿಸಲು ಸಾಧ್ಯವೇ ? ಎಂದಾದರೂ ಅವರಿಗೆ ಈ ಭಯಾನಕ ದಾಳಿಯನ್ನು ಮರೆಯಲು ಸಾಧ್ಯವೇ ? ಅವರಿಗೆ ಇನ್ನು ರಾತ್ರಿ ನೆಮ್ಮದಿಯ ನಿದ್ರೆ ಬರೋದು ಸಾಧ್ಯನಾ ? ತಾನು ಈ ವೃತ್ತಿಗೆ ಏಕಾದರೂ ಬಂದೆ ಎಂದು ಅವರಿಗೆ ಅನಿಸದೇ ಇರಬಹುದಾ ?
ಅವರ ಶೋಚನೀಯ ಸ್ಥಿತಿಯನ್ನು ನೋಡಿದ ದೇಶದ ಇತರ ಲಕ್ಷಾಂತರ ಶಿಕ್ಷಕರಿಗೆ ಏನಾಗಬಹುದು ? ಅವರಿನ್ನು ತಮ್ಮ ಶಾಲೆ ಕಾಲೇಜುಗಳಲ್ಲಿ ಯಾವುದೇ ಭಯವಿಲ್ಲದೆ ಪಾಠ ಮಾಡಲು ಸಾಧ್ಯವೇ ? ಇದನ್ನೆಲ್ಲಾ ನೋಡಿದ ಮೇಲೆ ಯುವಜನರು ಮುಂದೆ ಶಿಕ್ಷಕರಾಗಲು ಪ್ರೇರಣೆ ಸಿಗುತ್ತದೆಯೇ ?
ಈ ಎಲ್ಲ ಪ್ರಶ್ನೆಗಳಿಗೆ ಪ್ರಧಾನಿ ಮೋದಿಯವರು ಉತ್ತರಿಸಬೇಕಾಗಿದೆ.