ಕರಾವಳಿಯ ಭೂತಾರಾಧನೆಯಲ್ಲಿ ಮಹಿಷ
ಮಂಗಳೂರು-ಉಡುಪಿಯಲ್ಲಿ ಮಹಿಷಾಸುರನ ಆರಾಧನೆ ಅಥವಾ ಮಹಿಷ ದಸರಾ ಮಾಡಲು ಬಿಡುವುದಿಲ್ಲ ಎಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಪತ್ರಿಕಾಗೋಷ್ಠಿ ಮಾಡಿ ಹೇಳಿದೆ. ಇದು ಕರಾವಳಿಯ ಸಂಸ್ಕೃತಿ, ಹಿಂದೂ ಆರಾಧನಾ ಕ್ರಮಗಳ ಮೇಲಿನ ದಾಳಿಯಲ್ಲವೇ? ಕರಾವಳಿಯಲ್ಲಿ ಮಹಿಷಾಸುರನ ಆರಾಧನೆ ಎಂಬುದು ಪ್ರಾಚೀನ ಕಾಲದಿಂದಲೂ ಇದೆ, ಈಗಲೂ ಇದೆ. ಕರಾವಳಿಯ ಭೂತಾರಾಧನೆ ಮತ್ತು ಅಳಿಯ ಸಂತಾನ ಕಟ್ಟು ಪ್ರಾರಂಭವಾಗುವುದೇ ಮಹಿಷಾಸುರನಿಂದ ಎಂಬುದು ಹಿಂದೂ ಧರ್ಮ ರಕ್ಷಕ(?)ರಿಗೆ ಗೊತ್ತಿಲ್ಲದಿರುವುದು ವಿಪರ್ಯಾಸ!
ಮಹಿಷಾಸುರ ಕರಾವಳಿಯ ಮೂಲ ದೈವ. ಹಲವು ಮನೆಗಳಲ್ಲಿ, ಊರುಗಳಲ್ಲಿ ನಿತ್ಯ ಪೂಜೆ, ವಾರ್ಷಿಕ ಆರಾಧನೆಗಳು ಮಹಿಷಾಸುರನಿಗೆ ನಡೆಯುತ್ತದೆ. ಮಹಿಷಾಸುರನನ್ನು ಕುಂಡೋದರ, ಮಹಿಸಂದಾಯ(ಮೈಸಂದಾಯ), ನಂದಿಕೋಣ ಎಂಬ ಬೇರೆ ಬೇರೆ ಹೆಸರುಗಳಲ್ಲಿ, ಬೇರೆ ಬೇರೆ ಕತೆಗಳಲ್ಲಿ ಆರಾಧಿಸುತ್ತಾರೆ. ಇವೆಲ್ಲವೂ ಮೈಸೂರನ್ನು ಆಳಿದ್ದ ಮಹಿಷಾಸುರನ ಕುರಿತಾದ ಹಲವು ಕತೆ ಮತ್ತು ಜನಪದ ನಂಬಿಕೆಗಳು.
ಕರಾವಳಿಯ ಅಳಿಯ ಸಂತಾನ ಕಟ್ಟು/ಮಾತೃಮೂಲ ನಿಯಮ ಜಾರಿಗೆ ಬಂದಿದ್ದೇ ಕುಂಡೋದರ/ಮಹಿಷಾಸುರ ದೈವದಿಂದ! ‘‘ಬಾರಕೂರಿನಲ್ಲಿ ಆಳುತ್ತಿದ್ದ ಸಂತತಿಯ ಕಡೇ ಅರಸನು ಕಾಲವಾಗಲು, ಸಿಂಹಾಸನಕ್ಕೆ ಹಕ್ಕುದಾರರಿಲ್ಲದೆ, ಪ್ರಜೆಗಳೆಲ್ಲರೂ ಕೂಡಿ ಬಹಳ ಐಶ್ವರ್ಯವಂತನಾದ ದೇವಪಾಂಡ್ಯನ ಅಳಿಯನಾದ ಜಯನಿಗೆ ಪಟ್ಟವನ್ನು ಕಟ್ಟುವುದೆಂದು ಆಲೋಚಿಸಿದರು. ಆ ಮೇಲೆ ಅವನಿಗೆ ಪಟ್ಟಕಟ್ಟಿ ‘ಭೂತಾಳಪಾಂಡ್ಯ’ನೆಂಬ ಹೆಸರನಿಟ್ಟರು. ತುಳು ಜನರೆಲ್ಲರೂ ಭೂತಗಳನ್ನಾರಾಧಿಸುವವರಾದ್ದರಿಂದ ‘ಕುಂಡೋದರ’ ಎಂಬ ಭೂತದ ದಯೆಯಿಂದ ಈ ಕೆಲಸಗಳೆಲ್ಲಾ ನಡೆದವೆಂದು ಈ ಹೆಸರನ್ನು ಇಟ್ಟರು’’ ಎಂದು ಗಣಪತಿ ರಾವ್ ಐಗಳರು 1923ರಲ್ಲಿ ಬರೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಪುಸ್ತಕದ ಪುಟ ಸಂಖ್ಯೆ 44ರಲ್ಲಿ ಉಲ್ಲೇಖಿಸಿದ್ದಾರೆ.
ಅತೀ ಪ್ರಾಚೀನ ಕಾಲದಿಂದಲೂ ಮೈಸೂರಿಗೂ ನಮ್ಮ ತುಳುನಾಡಿಗೂ ಪರಸ್ಪರ ಸಂಬಂಧವಿರುವುದು ಕಂಡು ಬರುತ್ತದೆ (ಗುರುರಾಜ ಭಟ್ಟರ ‘ತುಳುನಾಡು’ ಪುಸ್ತಕ - 1963ರಲ್ಲಿ ಪ್ರಕಟಿತ/ಅಧ್ಯಾಯ: ಜೈನಧರ್ಮ/ ಪುಟ 179)
ಚಾಮುಂಡಿ ಮಹಿಷಾಸುರನನ್ನು ವಧೆ ಮಾಡಿದ ಕತೆ ಮೈಸೂರಿನಲ್ಲಿದ್ದರೆ, ದುರ್ಗಾಪರಮೇಶ್ವರಿಯು ಮೈಸಾಸುರನನ್ನು ವಧೆ ಮಾಡಿ ಕಟೀಲಿನ ‘ನಂದಿ’ (‘ನಂದಿನಿ’ ನದಿ ಎಂದು ಹೆಸರುವಾಸಿ) ನದಿಯ ಕಟಿ(ಸೊಂಟದ ಭಾಗ)ಯಲ್ಲಿ ನೆಲೆ ನಿಂತಳು ಎಂಬುದು ಕರಾವಳಿಯಲ್ಲಿ ಕತೆ ಇದೆ. ಮೈಸಾಸುರನ ವಧೆಗೂ ಮೊದಲು ಚಾಮುಂಡಿ ಅಥವಾ ದುರ್ಗಾಪರಮೇಶ್ವರಿಯು ಚಂಡಮುಂಡರನ್ನು ವಧೆ ಮಾಡುತ್ತಾಳೆ. ಚಂಡ ಮುಂಡರೆಂದರೆ ರಾಕ್ಷಸರಲ್ಲ. ಬದಲಾಗಿ ಕರ್ನಾಟ ರಕ್ಕಸರು ಎಂದು ಹೆಸರು ಪಡೆದ ಕರುನಾಡಿನ ಜನ. ಇಲ್ಲಿನ ಮೂಲ ನಿವಾಸಿ ಮುಂಡ ಸಮುದಾಯದ ಆಳ್ವಿಕೆಯನ್ನು ಕೊನೆಗೊಳಿಸಲಾಯಿತು ಎಂಬುದರ ಸೂಚಕವೇ ಚಂಡಮುಂಡರ ವಧೆ ! ಕರ್ನಾಟ ರಕ್ಕಸವೆಂಬ ಸ್ಕಂದ ಪುರಾಣದಲ್ಲಿ ಈ ರೀತಿಯ ಉಲ್ಲೇಖವಿದೆ. ‘‘ದುರ್ಗೆಯು ಸಂಹರಿಸಿದ್ದು ಚಂಡಮುಂಡರೆಂಬ ರಾಕ್ಷಸರನ್ನಲ್ಲ. ಚಂಡರೆಂಬ ಜನಗಳೂ, ಮುಂಡರೆಂಬ ಜನಗಳನ್ನೂ...’’ ಎಂದು 1947ರಲ್ಲಿ ಶಂ.ಬಾ.ಜೋಶಿಯವರು ಬರೆದ ‘ಎಡೆಗಳು ಹೇಳುವ ಕಂನಾಡ ಕತೆ’ ಪುಸ್ತಕದ ಕಂನಾಡಿನ ಬೇರೆ ಕೆಲವು ಜನಗಳು ಅಧ್ಯಾಯದ ಪುಟ ಸಂಖ್ಯೆ 111ರಲ್ಲಿ ಹೇಳಲಾಗಿದೆ.
ಕರಾವಳಿಯ ದೈವ ಅಥವಾ ದೇವರಿಂದ ಹತ್ಯೆಗೊಳಗಾದವರು/ಮಾಯವಾದವರು ದೈವವಾಗುವುದು ವಾಡಿಕೆ. ಆ ಕಾರಣಕ್ಕಾಗಿ ದುರ್ಗೆಯಿಂದ ಹತ್ಯೆಯಾದ ಮಹಿಷಾಸುರ ಮಹಿಸಂದಾಯ/ಕುಂಡೋದರ/ನಂದಿಕೋಣ ದೈವವಾಗಿರಬಹುದು. ನಂದಿನಿ ನದಿ ಎಂದು ಕರೆಯಲ್ಪಡುವ ನಂದಿ ನದಿಯ ದಡದಲ್ಲಿರುವ ಊರುಗಳು, ಊರಿನ ಗುತ್ತುಗಳಲ್ಲಿ ನಂದಿಕೋಣ/ ಮೈಸಂದಾಯದ ದೈವಾರಾಧನೆ ಹೆಚ್ಚಾಗಿ ಇದೆ ಎಂಬುದು ಕೂಡಾ ಮುಖ್ಯವಾಗುತ್ತದೆ. ಮಹಿಷಂದಾಯ ಮತ್ತು ಸಿರಿ ದೈವ ಸಂಪರ್ಕದ ಕತೆ ಮಹಿಷಾಸುರ ಕತೆಯನ್ನು ಹೋಲುವುದಿಲ್ಲವಾದರೂ ಸಂಬಂಧವನ್ನು ಸಂಪೂರ್ಣ ತಳ್ಳಿ ಹಾಕಲಾಗುವುದಿಲ್ಲ. ಸಿರಿ ಮತ್ತು ಮಹಿಷಾಸುರರಿಬ್ಬರೂ ಮಾತೃಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾರೆ. ಕತೆಗಳು ಬದಲಾಗಲು ಜನಪದೀಯ ಕತೆಗಳು, ಪಾಡ್ದನಗಳು ಊರಿಗೊಂದರಂತೆ ಬದಲಾಗುವುದು ಕಾರಣವಾಗಿರಬಹುದು.
ಕರಾವಳಿಯ ಅಳಿಯ ಕಟ್ಟಿನಲ್ಲಿ ಉಲ್ಲೇಖಿಸಲಾಗಿರುವ ವಿಷಯವನ್ನು ಕೂಲಂಕಶವಾಗಿ ಪರಿಶೀಲಿಸಿದರೆ, ಕತೆಯ ಹಲವು ಭಾಗಗಳು ಮೈಸೂರಿನಿಂದ ಕೊಂಡುದುದು ಎಂಬುದು ತಿಳಿಯುತ್ತದೆ. ಅದರಲ್ಲಿ ಮೊದಲನೆಯದ್ದು ‘ಅಳಿಯ ಸಂತಾನ ಕಟ್ಟಿಗೆ ಮಹಿಷಾಸುರನನ್ನು ಅಧಿದೇವತೆಯಾಗಿ ನೇಮಿಸಿದುದು’ ಎಂದು ಡಾ. ಪಾದೂರು ಗುರುರಾಜ ಭಟ್ಟರ ‘ತುಳುನಾಡು’ ಪುಸ್ತಕದಲ್ಲಿ ಬರೆಯಲಾಗಿದೆ.
ಕರಾವಳಿಯ ಮೂಲದಲ್ಲಿ ದನಕರುಗಳ ಆರಾಧನೆಯಿಲ್ಲ. ತುಳುನಾಡಿನ ದೈವಾರಾಧನೆಯಲ್ಲಿ ಕೋಣನ ಆರಾಧನಾ ಸಂಸ್ಕೃತಿಯಿದೆ. ಮಹಿಷ ಕುಲವೆಂದರೆ ನಾಗಾರಾಧನೆ ಮಾಡುವ ತುರುವ ಜನಾಂಗ ಎಂದರ್ಥ. ತುರುವರು ಎಂದರೆ ದನ ಸಾಕುವವರು, ಕೃಷಿಕರು ಎಂದರ್ಥ. ತುರುವರನ್ನೇ ತುಳುವರು ಎನ್ನಲಾಗುತ್ತದೆ.
ಕುಂಡೋದರ ದೈವ ಎಂಬುದೇ ಮಹಿಷಾಸುರ ದೈವದ ಇನ್ನೊಂದು ಹೆಸರು. ಈ ಕುಂಡೋದರ ದೈವವನ್ನು ಭೂತರಾಜ ಎಂದು ಕರೆಯುತ್ತಾರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಭೂತರಾಜರ ಆರಾಧನೆಯ ಕ್ರಮ ಇದೆ ಎಂದು 1969ರಲ್ಲಿ ಡಾ ಮ.ಸ. ಅಚ್ಯುತ ಶರ್ಮರು ಬರೆದ ‘ಉಡುಪಿ ಕ್ಷೇತ್ರದ ನೈಜ ಚಿತ್ರ ಮತ್ತು ಚಾರಿತ್ರಿಕ ಹಿನ್ನಲೆ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮಹಿಷಾಸುರ ಆರಾಧನೆ ಇದೆ ಎಂದರ್ಥ!
ಭೂತಾಳ ಪಾಂಡ್ಯನ ಅಳಿಯ ಸಂತಾನ ಕಟ್ಟುಕಟ್ಟಲೆ-ಮಂಗಳೂರು ಜರ್ಮನ್ ಮಿಶನ್ ಪ್ರೆಸ್ - 1857ರಲ್ಲಿ ಪ್ರಕಟಿತವಾದ ಪುಸ್ತಕದಲ್ಲಿ ‘‘ಕುಂಡೋದರನಿಗೆ ಸ್ಥಾನಮಾನ ಕಟ್ಟಿ ತಕ್ಕ ಬಿಂಬವನ್ನು ಪ್ರತಿಷ್ಠಾಪಿಸಿ, ಮಹಿಪಾಲಕನಾದ ಮಹಿಷಾಸುರ ಎಂಬ ಹೆಸರನ್ನಿಟ್ಟು, ಆತನಿಗೆ ಬಲಿಕೊಡುವುದಕ್ಕೆ ಸಹಸ್ರಪಡಿ ಅಕ್ಕಿ, ಸಹಸ್ರಪಡಿ ಅರಳು, ಅವಲಕ್ಕಿ, ಸಹಸ್ರಕಾಯಿ, ಸೀಯಾಳ, ಬಾಳೆಹಣ್ಣು, ಹಿಂಗಾರ, ದೂಪ ದೀಪಾದಿಗಳಿಂದ ಕುಕ್ಕುಟ(ಕೋಳಿ)ಗಳ ಸಹಸ್ರ ಬಲಿ ಕೊಟ್ಟು ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಕುಂಡೋದರನು ಮನುಷ್ಯನ ಮೈಮೇಲೆ ಬಂದು ಪ್ರಜೆಗಳಿಗೂ, ಅರಸರಿಗೂ, ಅಳಿಯ ಸಂತಾನ ಕಟ್ಟಿನಲ್ಲಿ ನಡೆದುಕೊಳ್ಳಬೇಕು ಎಂದೂ ಇದನ್ನು ಪಾಲಿಸದವರ ಸಂತಾನ ನಿಸ್ಸಂತಾನ(ಸಂತಾನ ನಾಶ) ಆಗಲೆಂದೂ, ಅನಂತೇಶ್ವರ ದೇಗುಲಕ್ಕೆ ಮಹಿಷಾಸುರ ದೈವವು ಕ್ಷೇತ್ರಪಾಲನೆಂದೂ...’’ ಬರೆಯಲಾಗಿದೆ.
ಕುಂಡೋದರ ಅಥವಾ ಮಹಿಷಾಸುರ ದೈವ ಹಾಕಿಕೊಟ್ಟ ಕಟ್ಟಲೆಗಳನ್ನು ನಂಬದವರ ಸಂತಾನ ನಾಶವಾಗಲಿದೆ ಎಂಬ ನಂಬಿಕೆ ಕರಾವಳಿಯಲ್ಲಿದೆ. ಹಾಗಾಗಿಯೇ ಇನ್ನೂ ಮಾತೃಪ್ರಧಾನ ಸಂಸ್ಕೃತಿಯಾಗಿರುವ ಅಳಿಯ ಸಂತಾನ ಕಟ್ಟು ಚಾಲ್ತಿಯಲ್ಲಿದೆ. ಮಹಿಷನೆಂದರೆ ಕೋಣವಲ್ಲ.. ! ಕೋಣನ ತಲೆಯುಳ್ಳವನೂ ಅಲ್ಲ. ಮಹಿಷನೆಂದರೆ ಕೋಣವನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದ ಜನರ ಪ್ರತಿನಿಧಿ. ಈಗಲೂ ಕರಾವಳಿಯಲ್ಲಿ ಕೋಣ ಸಾಕುವುದು ಎಂದರೆ ಪ್ರತಿಷ್ಠೆಯ ಸಂಗತಿ. ಎಮ್ಮಿಗರ ನಾಡು ಮೈಸೂರು ಮತ್ತು ತುರುವರ ನಾಡು ಕರಾವಳಿಗರಿಗೆ ಕೋಣವೇ ಪ್ರತಿಷ್ಠಿತ ಸಂಕೇತವಾಗಿದ್ದರಿಂದ ಅದರ ಮಹಿಪಾಲಕನಿಗೆ ಮಹಿಷಾಸುರ ಎಂಬ ಹೆಸರು ಬಂದಿರಬಹುದು. ಅಂದು ನಮ್ಮ ಪೂರ್ವಿಕರನ್ನು ರಕ್ಷಿಸಿದ್ದ ಮಹಿಷಾಸುರ ಇಂದೂ ದೈವವಾಗಿ ರಕ್ಷಿಸುತ್ತಿದ್ದಾನೆ ಎಂಬ ನಂಬಿಕೆಯಲ್ಲಿ ಕರಾವಳಿಯಲ್ಲಿ ಆರಾಧನೆ ಪಡೆಯುತ್ತಿದ್ದಾನೆ.
ಹಿಂದೂ ಧರ್ಮದ ರಕ್ಷಕರೆಂದು ಹೇಳಿಕೊಳ್ಳುವವರು ಮಾತ್ರ ಕರಾವಳಿಯಲ್ಲಿ ಮಹಿಷಾಸುರನ ಆರಾಧನೆಗೆ ಅವಕಾಶ ಕೊಡುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಇದು ಕರಾವಳಿಯ ಹಿಂದೂಗಳ ದೈವಾರಾಧನೆಯ ಮೇಲೆ ನಡೆಯುವ ಹಿಂದುತ್ವವಾದಿಗಳ ದಾಳಿಯಲ್ಲವೇ?