ಮಹುಆ ಮೊಯಿತ್ರಾ ಸಂಸತ್ತಿನಿಂದ ಉಚ್ಚಾಟನೆ
ಎಲ್ಲವೂ ನಿರೀಕ್ಷಿಸಿದ ಹಾಗೆಯೇ ಆಗಿದೆ. ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳದ ಕೃಷ್ಣಾ ನಗರದ ಸಂಸದೆಯಾಗಿದ್ದ ಮಹುಆ ಮೊಯಿತ್ರಾ ಅವರನ್ನು ಸಂಸತ್ತಿನಿಂದ ಉಚ್ಚಾಟನೆ ಮಾಡಲಾಗಿದೆ. ಈಗವರು ಮಾಜಿ ಸಂಸದೆ. ಮಹುಆ ವಿರುದ್ಧ ದೂರು ದಾಖಲಾಗಿದ್ದು, ಸಂಸತ್ತಿನ ನೈತಿಕ ಸಮಿತಿಯಿಂದ ವಿಚಾರಣೆ ಆಗಿದ್ದು, ಸಮಿತಿ ಮಹುಆ ಉಚ್ಛಾಟನೆಗೆ ಶಿಫಾರಸು ಮಾಡಿದ್ದು, ಈಗ ಮಹುಆ ರನ್ನು ಉಚ್ಚಾಟಿಸಿದ್ದು ಎಲ್ಲವೂ ಬಹಳ ಬೇಗ ಯಾವುದೇ ಅಡೆತಡೆ ಇಲ್ಲದೆ, ಯಾವುದೇ ವಿಳಂಬವಿಲ್ಲದೆ ನಡೆದು ಹೋಗಿದೆ.
ಬಹುಶಃ ನಮ್ಮ ಸರಕಾರಗಳ ಅಭಿವೃದ್ಧಿ ಕೆಲಸಗಳು ಹಾಗು ಜನರ ಕೆಲಸಗಳು ಇದೇ ವೇಗದಲ್ಲಿ ನಡೆದಿರುತ್ತಿದ್ದರೆ ಭಾರತ ಯಾವಾಗಲೋ ವಿಶ್ವಗುರು ಆಗಿರುತ್ತಿತ್ತು. ಆದರೆ ಜನರ ಕೆಲಸದಲ್ಲಿ ಹಾಗಾಗಲ್ಲ. ಮೋದೀಜಿ... ಒಹ್ ಸಾರಿ... ಅವರು ಮೋದಿ ಅಂತಾನೆ ಕರೀಬೇಕು ಅಂದಿದ್ದಾರೆ.
ಪ್ರಧಾನಿ ಮೋದಿಯವರ ಕಾಲದಲ್ಲಿ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಅಸಾಮಾನ್ಯ ವೇಗ ಬಂದಿದೆ. ಉದಾಹರಣೆಗೆ , ರಾಹುಲ್ ಗಾಂಧಿ ಸಂಸತ್ತಿನಲ್ಲಿ ಅದಾನಿ ಹಾಗು ಮೋದಿಯವರ ಫೋಟೋ ತೋರಿಸಿ ಭಾಷಣ ಮಾಡಿದ ಮೇಲೆ ಆದ ಬೆಳವಣಿಗೆಗಳು.
ರಾಹುಲ್‌ಗಾಂಧಿಯವರು ಲೋಕಸಭೆಯಲ್ಲಿ ಅದಾನಿ ವಿರುದ್ಧ ಮಾತನಾಡಿದ 35 ದಿನಗಳಲ್ಲಿ ಅವರನ್ನು ಮೋದಿ ಉಪನಾಮ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲಾಯಿತು. 37 ದಿನಗಳಲ್ಲಿ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು.
ನ್ಯಾಯಾಲಯದ ರಜಾ ದಿನಗಳನ್ನು ಕಳೆದರೆ ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಅದಾನಿ ವಿರುದ್ಧ ಮಾತನಾಡಿದ 25 ದಿನಗಳ ಒಳಗೇ ಇಷ್ಟೆಲ್ಲವೂ ನಡೆದುಹೋಗಿದೆ. ಆಮೇಲೆ ಸುಪ್ರೀಂ ಕೋರ್ಟ್ ಆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತು ಮಾಡಿದ ಬಳಿಕ ರಾಹುಲ್ ಗಾಂಧಿ ಮತ್ತೆ ಸಂಸತ್ ಸದಸ್ಯತ್ವ ವಾಪಸ್ ಪಡೆದರು.
ಈಗ ಮಹುಆ ಮೊಯಿತ್ರಾ ಸರದಿ. ಇದೇ ವರ್ಷ ಅಕ್ಟೋಬರ್ 14 ರಂದು ಮಹುಆ ಅವರ ಮಾಜಿ ಸಂಗಾತಿ ವಕೀಲ ಅನಂತ್ ದೇಹದ್ರಾಯ್ ಸಿಬಿಐ ಹಾಗು ಲೋಕಸಭಾ ಸ್ಪೀಕರ್ ಗೆ ಪತ್ರ ಬರೆದು ಆಕೆಯ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡ್ತಾರೆ. ಅದರ ಮರುದಿನವೇ ಬಿಜೆಪಿ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಮಹುಆ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಸ್ಪೀಕರ್ ಗೆ ಪತ್ರ ಬರೆದು ಮಹುಆ ರನ್ನು ಸಂಸತ್ತಿನಿಂದ ವಜಾ ಮಾಡಬೇಕು ಎಂದು ಆಗ್ರಹಿಸುತ್ತಾರೆ. ಪ್ರಕರಣದ ವಿಚಾರಣೆಯನ್ನು ಸಂಸತ್ತಿನ ನೈತಿಕ ಸಮಿತಿಗೆ ವಹಿಸಲಾಗುತ್ತದೆ. ಅದು ವಿಚಾರಣೆಗೆ ಮಹುಆ ಅವರನ್ನು ಕರೆಯುತ್ತದೆ. ವಿಚಾರಣಾ ಸಮಿತಿಯ ಪ್ರತಿಯೊಂದು ನಡೆಯೂ ಸಂಬಂಧಪಟ್ಟ ಸಂಸದರಿಗೆ ಗೊತ್ತಾಗುವ ಮೊದಲೇ ಟಿವಿ ಚಾನಲ್ ಗಳಲ್ಲಿ ಪ್ರಸಾರವಾಗುತ್ತದೆ, ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರವಾಗುತ್ತದೆ. ನವೆಂಬರ್ 2 ಕ್ಕೆ ಸಮಿತಿ ಮುಂದೆ ಹಾಜರಾದ ಮಹುಆ ಸಮಿತಿ ತೀರಾ ಪಕ್ಷಪಾತಿ ಪ್ರಶ್ನೆಗಳನ್ನು ಕೇಳುತ್ತಿದೆ ಎಂದು ಎದ್ದು ಹೊರಹೋಗುತ್ತಾರೆ. ಮಹುಆ ಅವರಿಗೆ ತೀರಾ ಅಸಂಬದ್ಧ ಹಾಗು ವೈಯಕ್ತಿಕ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂದು ಆಕ್ಷೇಪಿಸಿ ಸಮಿತಿಯ ಸದಸ್ಯ ಜೆಡಿಯು ಸಂಸದ ಗಿರಿಧಾರಿ ಯಾದವ್ ಕೂಡ ಸಭೆಯಿಂದ ಎದ್ದು ಹೋಗುತ್ತಾರೆ.
ನವೆಂಬರ್ 10 ಕ್ಕೆ ಮಹುಆ ಅವರನ್ನು ಉಚ್ಛಾಟಿಸಲು ಶಿಫಾರಸು ಮಾಡಿ ಸಮಿತಿ ಸ್ಪೀಕರ್ ಗೆ ವರದಿ ನೀಡುತ್ತದೆ.
ಡಿಸೆಂಬರ್ 8 ಕ್ಕೆ ಸಂಸತ್ತಿನಲ್ಲಿ ಆ ವರದಿ ಮಂಡನೆ ಆಗುತ್ತದೆ. 400 ಪುಟಗಳಿಗೂ ಅಧಿಕವಿರುವ ಆ ವರದಿ ಮಂಡನೆ ಆಗಿ ಎರಡು ಗಂಟೆಗಳಲ್ಲೇ ಮಹುಆ ಸಂಸತ್ತಿನಿಂದ ಉಚ್ಚಾಟನೆ ಆಗ್ತಾರೆ. ಆ ಎರಡು ಗಂಟೆಯೊಳಗೆ ಎಲ್ಲ ಸಂಸದರು ನೂರಾರು ಪುಟಗಳ ಆ ವರದಿಯನ್ನು ಓದಿದರೆ ? ಓದುವುದು ಸಾಧ್ಯವೇ ? ಈ ಎಲ್ಲ ಪ್ರಶ್ನೆಗಳು ಈಗ ಅಪ್ರಸ್ತುತ.
ಮಹುಆ ವಿರುದ್ಧ ದೂರು ನೀಡಿದ ಒಬ್ಬರು ಅವರ ಮಾಜಿ ಸಂಗಾತಿ. ಅವರಿಬ್ಬರ ನಡುವೆ ಸಾಕು ನಾಯಿಯ ಬಗ್ಗೆ ಜಗಳ ನಡೆಯುತ್ತಿತ್ತು. ಇನ್ನೊಬ್ಬರು ಅದಾನಿ ಆಪ್ತ ಎಂದೇ ಗುರುತಿಸಲಾಗುವ ಬಿಜೆಪಿ ಸಂಸದ. ಅವರ ವಿರುದ್ಧ ಸಾಕ್ಷ್ಯ ನುಡಿದವರು ಒಬ್ಬ ಉದ್ಯಮಿ. ಮಹುಆ ವಿರುದ್ಧ ದೂರು ನೀಡಿದ ಬಿಜೆಪಿ ಸಂಸದ ಮಹುಆ ಉದ್ಯಮಿಯ ಹಿತಾಸಕ್ತಿಯ ಪ್ರಶ್ನೆ ಕೇಳಲು ಲಂಚ ಪಡೆದರು ಎಂದು ಹೇಳುತ್ತಾರೆ. ಅದೇ ಉದ್ಯಮಿ ನೈತಿಕ ಸಮಿತಿಗೆ ನೀಡಿದ ಹೇಳಿಕೆಯಲ್ಲಿ ಮಹುಆ ತನ್ನದೇ ಹಿತಾಸಕ್ತಿಯ ಪ್ರಶ್ನೆ ಅಪ್ಲೋಡ್ ಮಾಡುವಂತೆ ನನಗೆ ಒತ್ತಡ ಹಾಕಿದರು ಎಂದು ಹೇಳುತ್ತಾರೆ.
ಸಂಪೂರ್ಣ ತದ್ವಿರುದ್ಧ ಹೇಳಿಕೆಗಳು. ಮಹುಆ ವಿರುದ್ಧ ಮುನಿಸಿಕೊಂಡ ಆಕೆಯ ಮಾಜಿ ಸಂಗಾತಿ ದೂರು ನೀಡಿದ 55 ದಿನಗಳಲ್ಲಿ ಮಹುಆ ಸಂಸತ್ತಿನಿಂದ ವಜಾ ಆಗ್ತಾರೆ. ಇದರಲ್ಲಿ ಸರಕಾರಿ ರಜಾ ದಿನಗಳನ್ನು ಹೊರತುಪಡಿಸಿದರೆ ಸುಮಾರು 40 ದಿನಗಳಲ್ಲೇ ಮಹುಆ ವಿರುದ್ಧ ಉಚ್ಚಾಟನೆ ಕ್ರಮವಾಗುತ್ತದೆ.
ಆದರೆ, ಈ ವೇಗ ಬೇರೆ ಕಡೆ ನಿಮಗೆ ಕಾಣಲು ಸಿಗೋದಿಲ್ಲ. ಈ ವರ್ಷ ಜನವರಿ 24 ರಂದು ಅದಾನಿ ವಿರುದ್ಧ ಗಂಭೀರ ಅಕ್ರಮಗಳ ಆರೋಪ ಮಾಡಿದ ಹಿಂಡೆನ್ ಬರ್ಗ್ ವರದಿ ಪ್ರಕಟವಾಯಿತು. 2 ವರ್ಷಗಳ ತನಿಖೆಯ ಬಳಿಕ ಪ್ರಕಟವಾದ 32 ಸಾವಿರ ಪದಗಳ ನೂರಾರು ದಾಖಲೆಗಳಿದ್ದ ಹಾಗು ಅದಾನಿ ಗ್ರೂಪ್ ಗೆ 88 ಪ್ರಶ್ನೆಗಳನ್ನು ಕೇಳಿದ್ದ ತನಿಖಾ ವರದಿ ಅದು. ಆ ವರದಿಯ ಬಳಿಕ ಅದೇ ಅದಾನಿ ಗ್ರೂಪ್ ವಿರುದ್ಧ ಇನ್ನೂ ಹಲವು ಗಂಭೀರ ಅಕ್ರಮಗಳ ಆರೋಪಗಳ ವರದಿಗಳು ಬಂದವು.
ಆದರೆ ಇವತ್ತಿನವರೆಗೆ ಗೌತಮ್ ಅದಾನಿ ಅವರನ್ನು ಈ ದೇಶದ ಒಂದೇ ಒಂದು ತನಿಖಾ ಸಂಸ್ಥೆ ವಿಚಾರಣೆಗೆ ಕರೆದಿರುವ ವರದಿ ಎಲ್ಲಿಯೂ ಬಂದಿಲ್ಲ. ಅವರ ಸಂಸ್ಥೆಗಳ ಮೇಲೆ ಐಟಿ, ಇಡಿ, ಸಿಬಿಐಗಳ ದಾಳಿ ಆಗಿರುವ ಒಂದೇ ಒಂದು ಮಾಹಿತಿ ಇಲ್ಲ. ಈ ದೇಶದ ಹಲವು ವಿಮಾನ ನಿಲ್ದಾಣಗಳನ್ನು, ಬಂದರುಗಳನ್ನು ನಡೆಸುತ್ತಿರುವ ಅದಾನಿ ಸಮೂಹದಲ್ಲಿ ವಿದೇಶಿ ಅದರಲ್ಲೂ ವಿಶೇಷವಾಗಿ ಚೀನೀ ಪ್ರಜೆಗಳು ಹೂಡಿಕೆ ಮಾಡಿರುವ ಗಂಭೀರ ಆರೋಪವಿದೆ. ಆದರೆ ಯಾವುದಾದರೂ ಸುರಕ್ಷತಾ ಸಂಸ್ಥೆಯಾಗಲಿ, ತನಿಖಾ ಸಂಸ್ಥೆಯಾಗಲಿ ಅದಾನಿಯನ್ನು ಈ ಬಗ್ಗೆ ಪ್ರಶ್ನಿಸಿರುವ, ತನಿಖೆ ನಡೆಸಿರುವ ಸುದ್ದಿ ಬಂದೇ ಇಲ್ಲ.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಭಾರತದ ಅಗ್ರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಈ ವರ್ಷದ ಆರಂಭದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಬ್ರಿಜ್ ಅವರನ್ನು ಕುಸ್ತಿ ಫೆಡೆರೇಶನ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಕುಸ್ತಿಪಟುಗಳಿಗೆ ನಿರಂತರ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಅದು.
ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳಲ್ಲಿ ಲೈಂಗಿಕ ಕಿರುಕುಳ ಮಾತ್ರವಲ್ಲದೆ ದೈಹಿಕ ಕಿರುಕುಳ, ಸರ್ವಾಧಿಕಾರಿ ಕಾರ್ಯನಿರ್ವಹಣೆ ಮತ್ತು ಫೆಡರೇಷನ್ ನಿರ್ವಹಣೆಯಲ್ಲಿನ ಆರ್ಥಿಕ ಅಕ್ರಮಗಳು ಸೇರಿವೆ .
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಈ ವರ್ಷ ಜೂ.13ಕ್ಕೆ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯಲ್ಲಿ ಆತ ಕುಸ್ತಿಪಟುಗಳಿಗೆ ಮತ್ತೆ ಮತ್ತೆ ಲೈಂಗಿಕ ಕಿರುಕುಳ ನೀಡಿದ್ದಾನೆ, ಬೆದರಿಕೆ ಹಾಕಿದ್ದಾನೆ ಹಾಗು ಹಿಂಬಾಲಿಸಿದ್ದಾನೆ. ಆತನನ್ನು ವಿಚಾರಣೆಗೆ ಕರೆಯಬೇಕು ಹಾಗು ಆತನ ಅಪರಾಧಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. 15 ಮಂದಿ ಸಾಕ್ಷಿಗಳು ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳನ್ನು ಪುಷ್ಟೀಕರಿಸಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಭಾರತೀಯ ದಂಡ ಸಂಹಿತೆಯ 506 (ಕ್ರಿಮಿನಲ್ ಬೆದರಿಕೆ ), 354 (ಮಹಿಳೆಯ ಜೊತೆ ಅಸಭ್ಯ ವರ್ತನೆ), 354 A (ಲೈಂಗಿಕ ಕಿರುಕುಳ ) ಹಾಗೂ 354 D (ಹಿಂಬಾಲಿಸುವ) ಸೆಕ್ಷನ್ಗಳನ್ನು ಹಾಕಲಾಗಿದೆ. ಒಂದು ಪ್ರಕರಣದಲ್ಲಿ ಬ್ರಿಜ್ ಭೂಷಣ್ ಮತ್ತೆ ಮತ್ತೆ ನಿರಂತರ ಕಿರುಕುಳ ನೀಡಿದ್ದಾನೆ ಎಂದೂ ಪೊಲೀಸರು ಹೇಳಿದ್ದಾರೆ.
ಆದರೆ ಬ್ರಿಜ್ ಭೂಷಣ್ ಈವರೆಗೂ ಬಂಧನವಾಗಿಲ್ಲ. ಮಾತ್ರವಲ್ಲ ಇವತ್ತಿಗೂ ಬ್ರಿಜ್ ಭೂಷಣ್ ಲೋಕಸಭೆಯಲ್ಲಿ ಸಂಸದರಾಗಿ ವಿರಾಜಮಾನರಾಗಿದ್ದಾರೆ. ನೂತನ ಸಂಸತ್ತಿನ ಉದ್ಘಾಟನೆ ದಿನ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟಿಸಿ ರಸ್ತೆಯಲ್ಲಿ ಪೊಲೀಸರಿಂದ ಪೆಟ್ಟು ತಿನ್ನುತ್ತಿರುವಾಗ ಅದೇ ಬ್ರಿಜ್ ಭೂಷಣ್ ಹೊಸ ಸಂಸತ್ತಿನಲ್ಲಿ ಮಿಂಚುತ್ತಿದ್ದರು.
ಈ ವರ್ಷ ಸೆಪ್ಟೆಂಬರ್ 22 ರಂದು ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧುಡಿ ಅವರು ಬಿಎಸ್ಪಿ ಸಂಸದ ದಾನಿಶ್ ಅಲಿ ವಿರುದ್ಧ ಭಯೋತ್ಪಾದಕ ಸಹಿತ ಇನ್ನೂ ಕೆಲವು ಇಲ್ಲಿ ಹೇಳಲೂ ಆಗದಷ್ಟು ಅತ್ಯಂತ ಅಸಭ್ಯ, ಅವಹೇಳನಕಾರಿ ಪದಗಳನ್ನು ಬಳಸಿದರು. ಲೋಕಸಭೆಯೊಳಗೆ ಕಲಾಪ ನಡೆಯುತ್ತಿರುವಾಗಲೇ ಈ ಅವಹೇಳನ ಎಲ್ಲರೆದುರೇ ನಡೆಯಿತು.
ದಾನಿಶ್ ಅಲಿ ಸ್ಪೀಕರ್ ಗೆ ದೂರು ನೀಡಿದರು. ಆದರೆ ಇವತ್ತಿನವರೆಗೂ ರಮೇಶ್ ಬಿಧುಡಿ ಸಂಸತ್ತಿನಲ್ಲೇ ಇದ್ದಾರೆ. ಈ ನಡುವೆ ಬಿಧುಡಿ ಅವರಿಗೆ ರಾಜಸ್ತಾನದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿಯನ್ನೂ ನೀಡಿತು. ಘಟನೆ ನಡೆದು ಎರಡೂವರೆ ತಿಂಗಳ ಬಳಿಕ ನಿನ್ನೆ ರಮೇಶ್ ಬಿಧುಡಿ ತನ್ನ ಮಾತಿಗಾಗಿ ವಿಷಾದ ವ್ಯಕ್ತಪಡಿಸಿದರು. ಆದರೆ ಅವರ ವಿರುದ್ಧ ಈವರೆಗೂ ಯಾವುದೇ ಕ್ರಮವಾಗಿಲ್ಲ.
ಬಿಜೆಪಿ ಸಂಸದೆ, ಭಯೋತ್ಪಾದನಾ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ 2019 ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಗಾಂಧೀಜಿ ಹಂತಕ ಗೋಡ್ಸೆಯನ್ನು ಪ್ರಶಂಸಿಸಿ ಮಾತಾಡಿದರು. ಆಮೇಲೆ ಸಂಸತ್ತಿನ ಒಳಗೂ ಸೇರಿ ಹಲವು ಬಾರಿ ಪ್ರಜ್ಞಾ ಸಿಂಗ್ ಗೋಡ್ಸೆಯನ್ನು ಪ್ರಶಂಸಿಸಿ ಮಾತಾಡಿದರು.
ಆಗ ಸ್ವತಃ ಪ್ರಧಾನಿ ಮೋದಿ ಹೇಳಿದ್ದೇನು ? " ಆಕೆ ಕ್ಷಮೆ ಯಾಚಿಸಿದ್ದಾರೆ, ಆದರೂ ನಾನು ಆಕೆಯನ್ನು ಕ್ಷಮಿಸುವುದಿಲ್ಲ." ಆದರೆ ಆದದ್ದೇನು ? ಏನೂ ಇಲ್ಲ. ಪ್ರಜ್ಞಾ ಸಿಂಗ್ ಇಂದಿಗೂ ಬಿಜೆಪಿ ಸಂಸದರಾಗಿಯೇ ಇದ್ದಾರೆ. ಇಂದಿಗೂ ಅದೇ ಧಾಟಿಯಲ್ಲಿ ಮಾತಾಡುತ್ತಲೇ ಇದ್ದಾರೆ. ಕೆಲವೇ ತಿಂಗಳ ಹಿಂದೆ ಶಿವಮೊಗ್ಗಕ್ಕೆ ಬಂದಿದ್ದ ಅದೇ ಪ್ರಜ್ಞಾ ಸಿಂಗ್ ಮನೆಯಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳಿ ಎಂದು ಭಾಷಣ ಮಾಡಿ ಹೋಗಿದ್ದಾರೆ.
ಆದರೆ ಪ್ರಜ್ಞಾ ಸಿಂಗ್ ಇವತ್ತಿಗೂ ಲೋಕಸಭೆಯ ಸದಸ್ಯೆಯಾಗಿಯೇ ಇದ್ದಾರೆ. ಈಗ ಮಹುಆ ಮೊಯಿತ್ರಾ ಅವರನ್ನು ಸಂಸತ್ತಿನಿಂದ ಹೊರ ಹಾಕಲಾಗಿದೆ. ಪ್ರಜ್ಞಾ ಸಿಂಗ್ ಠಾಕೂರ್, ರಮೇಶ್ ಬಿಧುಡಿ, ಬ್ರಿಜ್ ಭೂಷಣ್ ಸಿಂಗ್ ಅಂತವರ ಜೊತೆ ನೀವಿರೋದು ಬೇಡ ಅಂತ ಅವರನ್ನು ಕಳಿಸಿದ್ರಾ... ಗೊತ್ತಿಲ್ಲ. ಈ ದೃಷ್ಟಿಯಲ್ಲಿ ನೋಡಿದರೆ ಮಹುಆ ಪಾಲಿಗೆ ಇದೊಂದು ಗೌರವ. ಇದೊಂದು ಬ್ಯಾಜ್ ಆಫ್ ಹಾನರ್.
ಪ್ರಶ್ನೆ ಅಂದ್ರೆ ಮೋದಿ ಅವರಿಗೆ ಆಗೋದಿಲ್ಲ. ಅದರಲ್ಲೂ ಅದಾನಿ ಬಗ್ಗೆ ಪ್ರಶ್ನೆ ಅಂದ್ರೆ ಅವರು ಸಹಿಸೋದೇ ಇಲ್ಲ ಅಂತ ಇಡೀ ದೇಶವೇ ಮಾತಾಡಿಕೊಳ್ಳುತ್ತಿದೆ. ಈಗ ಸಂಸತ್ತಿನಲ್ಲಿ ಅದಾನಿ ಬಗ್ಗೆ ದಿಟ್ಟವಾಗಿ ಪ್ರಶ್ನೆ ಕೇಳುವ ಮಹುಆ ಅವರನ್ನು ಹೊರಗಟ್ಟಲಾಗಿದೆ. ಆದರೆ ಸಂಸತ್ತಿನ ಹೊರಗೆ ನಿಂತು ಮಹುಆ ಮತ್ತೆ ಸರಕಾರಕ್ಕೆ ಅದೇ ಕಠಿಣ ಪ್ರಶ್ನೆಗಳನ್ನು ಕೇಳಿದ್ದಾರೆ, ಕೇಳುತ್ತಲೇ ಇರುವ ಸವಾಲು ಹಾಕಿದ್ದಾರೆ.
"ಇದು ಗಲ್ಲಿಗೇರಿಸುವ ಕಾಂಗರೂ ಕೋರ್ಟ್ ನಂತಹ ಕ್ರಮ. ಈ ನೈತಿಕ ಸಮಿತಿ ಏನನ್ನು ಮಾಡಬಾರದೋ ಅದನ್ನೇ ಮಾಡಿದೆ. ಮತ್ತು ಈ ವರದಿ ಕಾನೂನಿನಲ್ಲಿರುವ ಎಲ್ಲವನ್ನೂ ನಾಶ ಮಾಡಿದೆ. ನಾನು ತಪ್ಪಿತಸ್ಥಳೆಂದು ನೀವು ಕಂಡುಕೊಂಡಿರುವುದು ಅನೈತಿಕ ಮತ್ತು ಅದು ಸಮರ್ಥನೀಯವಲ್ಲ. ಇಬ್ಬರು ಖಾಸಗಿ ವ್ಯಕ್ತಿಗಳ ಲಿಖಿತ ಹೇಳಿಕೆಗಳ ಆಧಾರದ ಮೇಲೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನನಗೆ ಅವರನ್ನು ಪ್ರಶ್ನಿಸಲು ಅವಕಾಶ ನೀಡಿಲ್ಲ. ಸಂಸತ್ತಿನಲ್ಲಿ ಇವತ್ತು ಮಾತಾಡಲೂ ನನಗೆ ಅವಕಾಶ ನೀಡಿಲ್ಲ. ನನಗೆ 49 ವರ್ಷ. ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ ಮತ್ತು ಹೊರಗೆ ನಿಮ್ಮೊಂದಿಗೆ ಹೋರಾಡುತ್ತೇನೆ. ಬೀದಿಗಿಳಿದು ಹೋರಾಟ ಮಾಡುತ್ತೇವೆ. ಪಂಜಾಬ್ ಸಿಂಧ್ ಗುಜರಾತ್ ದ್ರಾವಿಡ ಉತ್ಕಲ ಬಂಗಾ.... ಪಂಜಾಬ್ ನಿಮ್ಮ ಕೈಯ್ಯಲ್ಲಿ ಇಲ್ಲ. ದ್ರಾವಿಡವೂ ನಿಮ್ಮದಲ್ಲ. ಉತ್ಕಲ್ ಮತ್ತು ಬಂಗಾಳವು ನಿಮ್ಮ ಹತ್ತಿರವಿಲ್ಲ. ನೈತಿಕ ಸಮಿತಿಗೆ ಹೊರಹಾಕುವ ಅಧಿಕಾರವಿಲ್ಲ. ಇದು ನಿಮ್ಮ ಅಂತ್ಯ. ನಾವು ಮತ್ತೆ ಹಿಂತಿರುಗಿ ಬಂದೆ ಬರುತ್ತೇವೆ. ಮತ್ತು ನೀವು ಅಂತ್ಯವನ್ನು ನೋಡಲಿದ್ದೀರಿ." ಎಂದವರು ಆರ್ಭಟಿಸಿದ್ದಾರೆ.
ಮಹುಆ ಅವರನ್ನು ಸಂಸತ್ತಿನಿಂದ ಹೊರಹಾಕಬಹುದು. ಆದರೆ ಅವರಲ್ಲಿನ ಧೈರ್ಯವನ್ನು, ಅವರ ನೈತಿಕ ಸ್ಥೈರ್ಯವನ್ನು, ಅವರ ಸೋಲೊಪ್ಪದ ವ್ಯಕ್ತಿತ್ವವನ್ನು ಯಾರೂ ಉಚ್ಚಾಟಿಸಲು ಸಾಧ್ಯವಿಲ್ಲ.
ಮಹುಆ ಮೊದಲ ಬಾರಿ ಸಂಸತ್ ಸದಸ್ಯರಾದವರು. ಈ ಮೊದಲು ಶಾಸಕಿಯಾಗಿದ್ದರು. ಬಹು ರಾಷ್ಟ್ರೀಯ ಕಂಪೆನಿಯಲ್ಲಿ ದೊಡ್ಡ ಸಂಬಳದ ಹುದ್ದೆ ಬಿಟ್ಟು ರಾಜಕೀಯಕ್ಕೆ ಬಂದವರು ಮಹುಆ. ಆದರೆ ಮೊದಲ ಅವಧಿಯಲ್ಲೇ ಒಬ್ಬ ಸಂಸತ್ ಸದಸ್ಯರ ಸಾಮರ್ಥ್ಯ ಏನು ಎಂದು ಇಡೀ ದೇಶಕ್ಕೇ ತೋರಿಸಿದವರು.
ಪ್ರಶ್ನೆಗಳೇ ಇಲ್ಲದಂತಾಗಿರುವ ಇಂದಿನ ರಾಜಕೀಯದಲ್ಲಿ ಆಡಳಿತ ಪಕ್ಷಕ್ಕೆ, ಪ್ರಧಾನಿಗೆ ನಿರಂತರ ಪ್ರಶ್ನೆಗಳನ್ನು ಕೇಳಿದವರು ಮಹುಆ.
ಈ ದೇಶದ ಆಡಳಿತ ಪಕ್ಷ ರಾಷ್ಟ್ರೀಯತೆ, ದೇಶ ಭಕ್ತಿ ಹೆಸರಲ್ಲಿ ಮಾಡುತ್ತಿರುವ ಕೆಟ್ಟ ರಾಜಕೀಯವನ್ನು ಪ್ರಶ್ನಿಸಿದರು. ಇಲ್ಲಿ ಬೆರಳೆಣಿಕೆಯ ಉದ್ಯಮಿಗಳಿಗೆ ಎಲ್ಲ ನಿಯಮ ಮೀರಿ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಪ್ರಶ್ನಿಸಿದರು. ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ, ಗುಂಪು ಹಿಂಸೆ, ಹತ್ಯೆಗಳ ಬಗ್ಗೆ ಪ್ರಶ್ನಿಸಿದರು. ದೇಶಭಕ್ತಿಯ , ದೇಶ ರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಅಗಾಧ ಭ್ರಷ್ಟಾಚಾರವನ್ನು ಪ್ರಶ್ನಿಸಿದರು.
ಇಲ್ಲಿ ಮಾಧ್ಯಮಗಳಿಗೆ ಇಲ್ಲವಾಗುತ್ತಿರುವ ಸ್ವಾತಂತ್ರ್ಯದ ಬಗ್ಗೆ ಪ್ರಶ್ನಿಸಿದರು.
ಈ ಸರಕಾರ ಏನೇನೆಲ್ಲವನ್ನು ಚಾನಲ್ ಗಳ ಮೂಲಕ , ಐಟಿ ಸೆಲ್ ಮೂಲಕ ಮುಚ್ಚಿ ಹಾಕುತ್ತಿದೆಯೋ ಅದೆಲ್ಲವನ್ನೂ ಅವರು ಸಂಸತ್ತಿನಲ್ಲಿ ಪ್ರಶ್ನಿಸಿದರು. ಇಡೀ ದೇಶದ ಗಮನ ಸೆಳೆದರು.
ಮಹುಆ ಸಂಸತ್ತಿನ ಹೊರಗೆ ನಿಂತೂ ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆಗಳು ಇಡೀ ದೇಶಕ್ಕೆ ಕೇಳಿಸಲಿವೆ. ಅದಕ್ಕೆ ಉತ್ತರಿಸಬೇಕಾದವರು ಏನು ಮಾಡುತ್ತಿದ್ದಾರೆ ಎಂದು ಇಡೀ ದೇಶ ಕೇಳಲಿದೆ. ಆ ಪ್ರಶ್ನೆ ಕೇಳುವುದನ್ನು ನಿಲ್ಲಿಸದೆ ಇರುವ ದಿಟ್ಟತನಕ್ಕೆ, ಚೈತನ್ಯಕ್ಕೆ ನಮ್ಮದೊಂದು ಸೆಲ್ಯೂಟ್.