ಸಮಗ್ರ ಕೃಷಿಯಲ್ಲಿ ಗಮನ ಸೆಳೆದಿರುವ ಮಲ್ಕೋನಹಳ್ಳಿ ರತ್ನಮ್ಮ
ಮಂಡ್ಯ: ಕೃಷಿ ಕೆಲಸ ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ. ಕೃಷಿಯಲ್ಲಿ ಮಹಿಳೆಯರ ಪಾಲು ಬಹಳ! ಎಂಬುದನ್ನು ತೋರಿಸಿರುವ, ಹಲವು ಪ್ರಶಸ್ತಿ ಪಡೆದುಕೊಂಡ ಕೃಷಿಕ ಮಹಿಳೆ, ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಶೀಳನೆರೆ ಹೋಬಳಿಯ ಮಲ್ಕೋನಹಳ್ಳಿ ಗ್ರಾಮದ ರತ್ನಮ್ಮ.
ರತ್ನಮ್ಮ ಅವರಿಗೆ 2.20 ಎಕರೆ ಜಮೀನು ಇದ್ದು, ಪತಿ ಕೃಷ್ಣೇಗೌಡನೊಂದಿಗೆ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡು ರಾಜ್ಯದ ಗಮನ ಸೆಳೆದಿದ್ದಾರೆ.
ಜಮೀನಿನಲ್ಲಿ ಭತ್ತ, ರಾಗಿ, ಅಲಸಂದೆ, ಹೆಸರು, ಉದ್ದು, ಎಳ್ಳು, ಸಿರಿಧಾನ್ಯಗಳಾದ ನವಣೆ, ಬರಗು, ಸಾಮೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತೋಟಗಾರಿಕೆ ಬೆಳೆಗಳಾದ ತೆಂಗು, ಅಡಕೆ, ಬಾಳೆ, ಪಪ್ಪಾಯ, ಸೀಬೆ, ಹಲಸು, ಏಲಕ್ಕಿ, ಶುಂಠಿ, ಬದನೆ, ಈರುಳ್ಳಿ, ಬೆಳ್ಳುಳ್ಳಿ ಬೆಳೆಗಳೂ ಸಮೃದ್ಧಿಯಾಗಿವೆ.
ಪುಷ್ಪಕೃಷಿಯೂ ಇವರ ಕೈಹಿಡಿದಿದೆ. ಕನಕಾಂಬರ, ಸೇವಂತಿಗೆ ಹೂಗಳನ್ನು ಬೆಳೆಯುತ್ತಿದ್ದಾರೆ. ಜಮೀನಿನ ಬದುಗಳ ಮೇಲೆ ತೇಗ, ಸಿಲ್ವರ್, ಹೆಬ್ಬೇವು ಮರಗಳನ್ನು ಬೆಳೆಸಿದ್ದಾರೆ. ಇದೇ ಬದುಗಳ ಮೇಲೆ ತಮ್ಮ ಜಮೀನಿನ ಸುತ್ತ ಬದುಗಳಲ್ಲಿ ಹಾಕಿದ್ದಾರೆ. ಪಶುಗಳಿಗೆ ಮೇವಿನ ಬೆಳೆಗಳನ್ನು ಸಹ ಬೆಳೆದಿದ್ದಾರೆ.
ರತ್ನಮ್ಮ ಅವರು ಕೃಷಿಯೊಂದಿಗೆ ಹಸು, ಕುರಿ, ಮೇಕೆಗಳನ್ನು ಸಾಕುವಲ್ಲಿ ಆಸಕ್ತಿ ಹೊಂದಿದ್ದಾರೆ. ನಾಲ್ಕು ಹಸುಗಳನ್ನು ಸಾಕಿದ್ದಾರೆ. ಪ್ರತಿದಿನ 20 ಲೀ., ಹಾಲು ಮಾರಾಟ ಮಾಡುತ್ತಿದ್ದಾರೆ. ಉಳುಮೆ ಹಸು ಬಳಸಿ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದಾರೆ. ಇವರ ಉಪಕಸುಬಿನಲ್ಲಿ ಮೇಕೆ, ನಾಟಿ ಕೋಳಿ ಸಾಕಾಣಿಕೆ ಇದೆ. ಜಮೀನಿನಲ್ಲಿ ಉಪ್ಪಿನಕಾಯಿ ಶುಂಠಿ ಬೆಳೆಯಲಾಗಿದ್ದು, ಕಟಾವಿಗೆ ಬಂದಿದೆ. ಸುಮಾರು 10 ಕ್ವಿಂಟಾಲ್ ಇಳುವರಿ ಅಂದಾಜಿಸಲಾಗಿದೆ. ಇದಕ್ಕೆ ಸಾಮಾನ್ಯ ಶುಂಠಿಗಿಂತ ಹೆಚ್ಚಿನ ಬೆಲೆಯಿದೆ. ಇದರೊಂದಿಗೆ 150 ಕ್ವಿಂಟಾಲ್ ಸಾಮಾನ್ಯ ಶುಂಠಿ ಬೆಳೆದಿದ್ದಾರೆ. ಎರಡು ಜೇನು ಪೆಟ್ಟಿಗೆಯನ್ನು ತೋಟದಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ. ಜೇನುತುಪ್ಪವನ್ನು ಮನೆಗೆ ಬಳಸಿಕೊಂಡು ಸ್ಥಳೀಯವಾಗಿಯೂ ಮಾರಾಟ ಮಾಡುತ್ತಿದ್ದಾರೆ.
ರತ್ನಮ್ಮ ಅವರು ಟಿವಿ,ರೇಡಿಯೋದಲ್ಲಿ ಪ್ರಸಾರವಾಗುವ ಕೃಷಿ ಆಧಾರಿತ ಕಾರ್ಯಕ್ರಮಗಳನ್ನು ಕೇಳಿ ಹೊಸ ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಂಡಿದ್ದಾರೆ. ಕೃಷಿ ಇಲಾಖೆಗೆ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಸಲಹೆ ಪಡೆಯುತ್ತಾರೆ. ಇವರ ತೋಟಕ್ಕೆ ರೈತರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಮೈಸೂರು ಆಕಾಶವಾಣಿಯಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ.
2017-18ನೇ ಸಾಲಿನಲ್ಲಿ ಕೃಷಿ ಇಲಾಖೆ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, 2019-20ನೇ ಸಾಲಿನ ಕೃಷಿ ವಿಶ್ವವಿದ್ಯಾನಿಲಯದ ಜಿಲ್ಲಾಮಟ್ಟದ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿ ಹಾಗೂ 2022ರಲ್ಲಿ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಮಾದರಿ ಕೃಷಿ ಮಹಿಳೆ ಪ್ರಶಸ್ತಿಗೆ ರತ್ನಮ್ಮ ಭಾಜನರಾಗಿದ್ದಾರೆ.
ಭತ್ತ, ರಾಗಿ ಬೆಳೆಯಿಂದ ವಾರ್ಷಿಕ ಸರಾಸರಿ 60 ಸಾವಿರ ರೂ., ಅಲಸಂದೆ, ಹೆಸರು, ಉದ್ದು ಫಸಲಿನಿಂದ 20 ಸಾವಿರ ರೂ. ತೆಂಗಿನ ಕಾಯಿ, ಎಳನೀರು ಫಸಲಿನಲ್ಲಿ ಸುಮಾರು 1.20 ಲಕ್ಷ ರೂ., ಹೂವು ಕೃಷಿಯಿಂದ 60 ಸಾವಿರ ರೂ. ಆದಾಯ ಬರುತ್ತಿದೆ. ಇದರ ಜತೆಗೆ, ಹೈನುಗಾರಿಕೆ, ಜೇನು ಕೃಷಿಯಿಂದಲೂ ಲಾಭ ಬರುತ್ತಿದೆ.
► ರತ್ನಮ್ಮ, ಕೃಷಿಕ ಮಹಿಳೆ