ಬಿಜೆಪಿ ಜೊತೆ ಆರೆಸ್ಸೆಸ್ ಅಂತರ ಹೆಚ್ಚುತ್ತಲೇ ಇದೆಯೇ ?
ಮೋದಿ ವಿರುದ್ಧವೇ ಮಾತಾಡಿದರೇ ಭಾಗವತ್ ?
ಪ್ರಧಾನಿ ಮೋದಿ ಹಾಗು ಆರೆಸ್ಸೆಸ್ ನಡುವಿನ ಮುನಿಸು ಹೆಚ್ಚುತ್ತಲೇ ಇದೆಯೇ? ಲೋಕಸಭಾ ಚುನಾವಣಾ ಫಲಿತಾಂಶ ಬಂದ ಬಳಿಕ ಶುರುವಾಗಿರುವ ಪ್ರಧಾನಿ ಹಾಗು ಬಿಜೆಪಿ ಮೇಲಿನ ಆರೆಸ್ಸೆಸ್ ವಾಗ್ದಾಳಿ ಮತ್ತೆ ಮುಂದುವರಿದಿದೆಯೇ ? ಎಂಬ ಸಂಶಯ ಈಗ ಸಾಮಾಜಿಕ ಜಾಲತಅಣಗಳಲ್ಲಿ ಚರ್ಚೆಯಾಗುತ್ತಿದೆ.
ಈಗ ಹೊರಬಂದಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿಡಿಯೋ ಜನರ ಸಂಶಯಕ್ಕೆ ಪುಷ್ಠಿ ನೀಡುತ್ತದೆ. ಮನುಷ್ಯ ದೇವನಾಗಲು ಬಯಸುತ್ತಿದ್ದಾನೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆ ಈಗ ಮತ್ತೆ ಚರ್ಚೆಗೆ ಕಾರಣವಾಗಿದೆ. ಆರೆಸ್ಸೆಸ್ ಮುಖ್ಯಸ್ಥ ಭಾಗವತ್ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
"ಮಾನವ ಮಹತ್ವಾಕಾಂಕ್ಷೆಗೆ ಅಂತ್ಯವಿಲ್ಲ. ಮನುಷ್ಯನು ಸೂಪರ್‌ಮ್ಯಾನ್, ನಂತರ ದೇವರು ಮತ್ತು ಭಗವಂತನಾಗಲು ಬಯಸುತ್ತಾನೆ" ಎಂದು ಭಾಗವತ್ ಹಾಳಿದ್ದಾರೆ.
ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ನಾಗ್ಪುರದಿಂದ ದಿಲ್ಲಿಯ ಲೋಕ ಕಲ್ಯಾಣ ಮಾರ್ಗಕ್ಕೆ ಉಡಾಯಿಸಿದ ಕ್ಷಿಪಣಿ ಇದು ಎಂದು ವ್ಯಂಗ್ಯವಾಡಿದೆ. ಉಡಾಯಿಸಲಾದ ಈ ಇತ್ತೀಚಿನ ಅಗ್ನಿ ಕ್ಷಿಪಣಿಯ ಸುದ್ದಿಯನ್ನು ಪ್ರಧಾನಿ ಪಡೆದುಕೊಂಡಿದ್ದಾರೆ ಮತ್ತು ಪ್ರಧಾನಿಯವರ ಅಧಿಕೃತ ನಿವಾಸವಾದ ಲೋಕ ಕಲ್ಯಾಣ ಮಾರ್ಗವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ.
ಮೋಹನ್ ಭಾಗವತ್ ಅವರು ಜಾರ್ಖಂಡ್ ನಲ್ಲಿ ಬುಡಕಟ್ಟು ಸಮಾಜದ ಅಭಿವೃದ್ಧಿಯ ಕುರಿತು ಚರ್ಚಿಸುತ್ತಾ, "ಅಭಿವೃದ್ಧಿ ಮತ್ತು ಮಾನವ ಮಹತ್ವಾಕಾಂಕ್ಷೆಗೆ ಅಂತ್ಯವಿಲ್ಲ. ಜನರು ಮನುಕುಲದ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸಬೇಕು" ಎಂದು ಹೇಳಿದ್ದಾರೆ.
ಆದರೆ ಅದರ ಜೊತೆ ಜೊತೆಗೇ "ಮನುಷ್ಯ ಮೊದಲು ಸೂಪರ್‌ಮ್ಯಾನ್ ಆಗಲು ಬಯಸುತ್ತಾನೆ, ನಂತರ ದೇವರಾಗಲು ಬಯಸುತ್ತಾನೆ ಮತ್ತು ನಂತರ ಭಗವಂತನಾಗಲು ಬಯಸುತ್ತಾನೆ" ಎಂದು ಹೇಳಿದ್ದಾರೆ.
ಭಾಗವತ್ ಅವರು ಪ್ರಧಾನಿ ಮೋದಿ ಹೆಸರು ಎಲ್ಲೂ ಉಲ್ಲೇಖಿಸದಿದ್ದರೂ ಇದು ಪ್ರಧಾನಿ ಮೋದಿ ವಿರುದ್ಧ ಅವರು ಮಾಡಿದ ಪರೋಕ್ಷ ವಾಗ್ದಾಳಿ ಎಂದೇ ರಾಜಕೀಯ ವಲಯದಲ್ಲಿ ಹಾಗು ಸಾಮಾಜಿಕ ಜಾಲತಾಣದಲ್ಲೂ ವಿಶ್ಲೇಷಿಸಲಾಗುತ್ತಿದೆ.
ಜನರು ತಮ್ಮ ಸಾಧನೆಗಳಿಂದ ತೃಪ್ತರಾಗಬಾರದು. ಅಭಿವೃದ್ಧಿ ಮತ್ತು ಮಾನವ ಮಹತ್ವಾಕಾಂಕ್ಷೆಯ ಅನ್ವೇಷಣೆಗೆ ಕೊನೆಯಿಲ್ಲ. ಆದ ಕಾರಣ ಮನುಕುಲದ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ ನೀಡಿದ್ದಾರೆ.
"ಕೆಲಸ ಮುಂದುವರಿಯಬೇಕು, ಪರಿಸರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಿರಂತರವಾಗಿ ಕೆಲಸ ಮಾಡಲು ಶ್ರಮಿಸಬೇಕು. ಇದಕ್ಕೆ ಅಂತ್ಯವಿಲ್ಲ ಮತ್ತು ವಿವಿಧ ಕ್ಷೇತ್ರಗಳಲ್ಲಿ ನಿರಂತರ ಕೆಲಸವೊಂದೇ ಪರಿಹಾರ. ಈ ಜಗತ್ತನ್ನು ಸುಂದರವಾಗಿಸಲು ನಾವು ಶ್ರಮಿಸಬೇಕು”ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿಯವರನ್ನು ಕುಟುಕಿ ಜೈರಾಮ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಾರ್ಖಂಡ್‌ನಿಂದ ಲೋಕ ಕಲ್ಯಾಣ ಮಾರ್ಗವನ್ನು ಗುರಿಯಾಗಿಸಿಕೊಂಡು ನಾಗ್ಪುರ ಉಡಾಯಿಸಿದ ಈ ಇತ್ತೀಚಿನ ಅಗ್ನಿ ಕ್ಷಿಪಣಿಯ ಸುದ್ದಿಯನ್ನು ನಾನ್ ಬಯಲೋಜಿಕಲ್ ಪ್ರಧಾನಿ ಪಡೆದುಕೊಂಡಿರಬೇಕು ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ.
ದೇವರು ನನ್ನನ್ನು ಒಂದು ಉದ್ದೇಶಕ್ಕಾಗಿ ಕಳುಹಿಸಿದ್ದಾನೆ ಎಂಬ ಪ್ರಧಾನಿ ಮೋದಿ ಮಾತನ್ನು ಕಾಂಗ್ರೆಸ್ ಆಗಾಗ ಲೇವಡಿ ಮಾಡುತ್ತಲೇ ಬಂದಿದೆ.
"ದೇವರು ನನ್ನನ್ನು ಒಂದು ಉದ್ದೇಶಕ್ಕಾಗಿ ಕಳುಹಿಸಿದ್ದಾನೆ" ಎಂದು ಚುನಾವಣಾ ಪ್ರಚಾರದ ವೇಳೆ ಸಂದರ್ಶನ ಒಂದರಲ್ಲಿ ಪ್ರಧಾನಿ ಮೋದಿ ಹೇಳಿದ್ದರು. "ನನ್ನ ತಾಯಿ ಬದುಕಿರುವವರೆಗೂ, ನಾನು ಜೈವಿಕವಾಗಿ ಹುಟ್ಟಿದ್ದೇನೆ ಎಂದು ನಾನು ಭಾವಿಸುತ್ತಿದ್ದೆ. ಅವರ ನಿಧನದ ನಂತರ, ನನ್ನ ಅನುಭವಗಳನ್ನು ನೋಡಿದಾಗ, ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಎಂದು ನನಗೆ ಮನವರಿಕೆಯಾಗಿದೆ" ಎಂದು ಮತ್ತೊಂದು ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿದ್ದರು.
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು “ಭಗವತ್ ಬಾಂಬ್” ಮತ್ತು “ಅಗ್ನಿ ಕ್ಷಿಪಣಿ” ಎಂದು ಹೇಳಿ ಕಾಂಗ್ರೆಸ್ ಪ್ರಧಾನಿ ಮೋದಿ ಹಾಗು ಬಿಜೆಪಿಯನ್ನು ಚುಚ್ಚಿದೆ.
ಈ ಹಿಂದೆ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಜಂಟಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಾವೆಲ್ಲರೂ ಹುಟ್ಟುತ್ತೇವೆ ಮತ್ತು ಸಾಯುತ್ತೇವೆ, ಆದರೆ ‘ಪರಮಾತ್ಮ’ ಮೋದಿಯ ‘ಆತ್ಮ’ದ ಜೊತೆ ಮಾತನಾಡುತ್ತಾರೆ ಎಂದು ತಮಾಷೆ ಮಾಡಿದ್ದರು.
ಚುನಾವಣಾ ಪ್ರಚಾರದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಜೆಪಿ ಈಗ ಸಶಕ್ತವಾಗಿದೆ, ನಮಗೆ ಈಗ ಆರೆಸ್ಸೆಸ್ ನ ಅಗತ್ಯವಿಲ್ಲ ಎಂದು ಹೇಳಿಕೆ ಕೊಟ್ಟಾಗಿನಿಂದ ಈ ವಿವಾದ ಶುರುವಾಗಿದೆ.
ಚುನಾವಣೆಯಲ್ಲಿ ಬಿಜೆಪಿ ಬಹುಮತ ಕಳಕೊಂಡ ಬಳಿಕ ಆರೆಸ್ಸೆಸ್ ನ ನಾಯಕರು, ಅದರ ಪತ್ರಿಕೆ ಬಿಜೆಪಿ ಹಾಗು ಮೋದಿ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಅತಿ ಆತ್ಮ ವಿಶ್ವಾಸದಿಂದ, ಅಹಂ ನಿಂದ ಬಿಜೆಪಿ ಹಿನ್ನಡೆ ಕಂಡಿತು ಎಂದು ಹೇಳಿದ್ದಾರೆ.
ಆರೆಸ್ಸೆಸ್ ಮತ್ತು ಮೋದಿ ಶಾ ಜೋಡಿಯ ನಡುವೆ ಎಲ್ಲವೂ ಸರಿ ಇಲ್ಲ ಎಂದು ಚರ್ಚೆಯಾಗುತ್ತಿರುವ ಸಮಯದಲ್ಲೇ ಭಾಗವತ್ ಅವರ ಈ ಹೇಳಿಕೆ ಬಂದಿದೆ.