ಆಮೆಗತಿಯಲ್ಲಿ ಮಂಗಳೂರು ನಗರದ ಒಳಚರಂಡಿ ಕಾಮಗಾರಿ
ಕೋಟಿಗಟ್ಟಲೆ ಸುರಿದರೂ ಒಳಚರಂಡಿ ಅವ್ಯವಸ್ಥೆಗೆ ಸಿಗದ ಮುಕ್ತಿ
ಮಂಗಳೂರು, ನ.19: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಿಂದೀಚೆಗೆ 300 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಡೆಯುತ್ತಿರುವ ಭೂಗತ ಒಳಚರಂಡಿ (ಯುಜಿಡಿ) ಕಾಮಗಾರಿ ಆಮೆಗತಿಯಲ್ಲೇ ಸಾಗುತ್ತಿದೆ. ಇದರಿಂದಾಗಿ ನಗರದ ತೆರೆದ ಮಳೆ ನೀರ ಚರಂಡಿಯಲ್ಲಿ ಹರಿಯುವ ದ್ರವ್ಯತ್ಯಾಜ್ಯ, ನೀರಿನ ಮೂಲಗಳಿಗೆ ಹರಿಯುವ ಕೊಳಚೆ ನೀರಿನ ಸಮಸ್ಯೆಗೆ ಮುಕ್ತಿ ಸಿಗದಂತಾಗಿದೆ.
ಅಮೃತ್ (ಅಟಲ್ ಮಿಷನ್ ಫಾರ್ ರಿಜುವೆನೇಶನ್ ಆ್ಯಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಶನ್) ಹಾಗೂ ಎಡಿಬಿ (ಏಷ್ಯನ್ ಡೆವಲಪ್‌ಮೆಂಟ್) ಯೋಜನೆಯಡಿ 2018-19ನೇ ಸಾಲಿನಿಂದ ನಗರದಲ್ಲಿ ಒಳಚರಂಡಿ ಯೋಜನೆಗಳು ನಡೆಯುತ್ತಿವೆ. ಅಮೃತ್ 1.0 ಯೋಜನೆಯಡಿ 2018-19ರಲ್ಲಿ ನಗರದಲ್ಲಿ 150.84 ಕೋಟಿ ರೂ. ಹಾಗೂ 2020ರಲ್ಲಿ ಕರ್ನಾಟಕ ಇಂಟಿಗ್ರೇಟೆಡ್ ಅರ್ಬನ್ ವಾಟರ್ ಮ್ಯಾನೇಜ್‌ಮೆಂಟ್ ಇನ್ವೆಸ್ಟ್‌ಮೆಂಟ್ ಪ್ರೋಗ್ರಾಂ(ಕ್ವಿಮಿಪ್)ನಡಿ ಎಡಿಬಿ ನೆರವಿನಲ್ಲಿ 165 ಕೋಟಿ ರೂ. ವೆಚ್ಚದಲ್ಲಿ ಯುಜಿಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.
ಲಭ್ಯ ಸರಕಾರಿ ದಾಖಲೆಗಳ ಪ್ರಕಾರ ಕ್ವಿಮಿಪ್/ ಎಡಿಬಿ ಸಾಲದಡಿ ಕೈಗೆತ್ತಿಕೊಳ್ಳಲಾದ ಒಳಚರಂಡಿ ಕಾಮಗಾರಿಯಲ್ಲಿ 2023ರ ಅಕ್ಟೋಬರ್‌ವರೆಗೆ 126.67 ಕೋಟಿ ರೂ.ನ್ನು ಖರ್ಚು ಮಾಡಲಾಗಿದೆ. ಇದರಲ್ಲಿ ಶೇ.40 ಎಡಿಬಿ ಸಾಲ, ಶೇ.50 ರಾಜ್ಯ ಸರಕಾರ ಹಾಗೂ ಶೇ.10 ಪಾಲಿಕೆ ಅನುದಾನವಿದೆ. ಇದರಲ್ಲಿ 1.5 ಎಂಎಲ್‌ಡಿ ಸಾಮರ್ಥ್ಯದ ಮೂರು ಒಳಚರಂಡಿ ಸಂಸ್ಕರಣೆ ಘಟಕಗಳಲ್ಲಿ (ಎಸ್‌ಟಿಪಿ) ಮೂರು ವರ್ಷಗಳ ನಂತರ ಪೂರ್ಣಗೊಂಡಿರುವುದು ಕೇವಲ ಶೇ.5ರಷ್ಟು ಕೆಲಸ ಮಾತ್ರ!
ಉದ್ದೇಶಿತ 51.9 ಕಿ.ಮೀ. ಉದ್ದದ ಕೊಳವೆ ಜಾಲದಡಿ 41 ಕಿ.ಮೀ. ಕೊಳವೆಜಾಲದ ಕಾಮಗಾರಿ ನಡೆದಿದೆ. ಯೋಜನೆಯಡಿ ಉದ್ದೇಶಿಸಲಾದ 1,698 ಮ್ಯಾನ್‌ಹೋಲ್ (ಆಳು ಗುಂಡಿಗಳು)ಗಳ ಪೈಕಿ 1,260 ಮ್ಯಾನ್ ಹೋಲ್‌ಗಳ ಕಾಮಗಾರಿ ಪೂರ್ಣಗೊಂಡಿದೆ. 14.04 ಕಿ.ಮೀ ಏರು ಕೊಳವೆ ಪೈಕಿ 11.04 ಕಿ.ಮೀ. ಕಾಮಗಾರಿ ನಡೆದಿದ್ದು, 3 ವೆಟ್‌ವೆಲ್‌ಗಳ ಕಾಮಗಾರಿಯಲ್ಲಿ ಶೇ.40ರಷ್ಟು ಪೂರ್ಣಗೊಂಡಿದೆ ಎಂಬುದು ಕಾಮಗಾರಿ ಅನುಷ್ಠಾನ ಸಂಸ್ಥೆಯಾದ ಕೆಯುಐಡಿಎಫ್‌ಸಿ ಮಾಹಿತಿಯಾಗಿದೆ.
ಅಮೃತ್ 1.0 ಯೋಜನೆಯಡಿ 2018-19ನೇ ಸಾಲಿನಲ್ಲಿ 150.84 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ ಶೇ.50 ಕೇಂದ್ರ, ಶೇ.20 ರಾಜ್ಯ ಹಾಗೂ ಶೇ. 30 ಮನಪಾ ಅನುದಾನವಿದೆ. ಯೋಜನೆಯಡಿ ಈವರೆಗೆ 103.59 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇದರಡಿ ಉದ್ದೇಶಿತ ಕೊಳವೆ ಜಾಲ 65 ಕಿ.ಮೀ. ಪೈಕಿ 48 ಕಿ.ಮೀ. ಮಾತ್ರ ಆಗಿದೆ. 3,876 ಆಳ ಗುಂಡಿಗಳ ಪೈಕಿ 2,196 ಮಾತ್ರ ಮುಗಿದಿದೆ. ಒಂದು ವೆಟ್‌ವೆಲ್ ನಿರ್ಮಾಣವಾಗಬೇಕಿದ್ದು, ಈವರೆಗಿನ ಪ್ರಗತಿ ಶೇ. 15 ಮಾತ್ರ!
► ಸ್ಮಾರ್ಟ್‌ಸಿಟಿಯಲ್ಲೂ ಒಳಚರಂಡಿ: ಒಳಚರಂಡಿ ಯೋಜನೆ ಕಾಮಗಾರಿ ವಿವಿಧ ಕಾರಣದಿಂದ ತಡವಾಗುತ್ತಿದೆ. ಇವುಗಳಿಗೆ ವೇಗ ನೀಡುವ ಕಾರ್ಯದ ಜೊತೆಗೆ ಸ್ಮಾರ್ಟ್‌ಸಿಟಿಯಲ್ಲಿ 8 ವಾರ್ಡ್ ವ್ಯಾಪ್ತಿಯಲ್ಲಿ ಹೊಸ ಒಳಚರಂಡಿ ಜಾಲ
ಕೆಲಸ ನಡೆಸಲಾಗಿದೆ. ಇದರಲ್ಲಿ ಉಳಿಕೆಯಾದ ಸುಮಾರು 15 ಕೋ.ರೂ. ಮೊತ್ತವನ್ನು ಹೆಚ್ಚುವರಿಯಾಗಿ ನಗರದ 6 ವೆಟ್‌ವೆಲ್ ಉನ್ನತೀಕರಣಕ್ಕೆ ಬಳಸಲು ನಿರ್ಧರಿಸಲಾಗಿದೆ.
► ಮೇಯರ್‌ರಿಂದ ಎಸ್‌ಟಿಪಿಗಳ ಪರಿಶೀಲನೆ: ಕಳೆದ ಮನಪಾ ಸಾಮಾನ್ಯ ಸಭೆಯಲ್ಲಿ ಸುರತ್ಕಲ್, ಬಜಾಲ್ ಹಾಗೂ ಪಚ್ಚನಾಡಿಯ ಎಸ್‌ಟಿಪಿಗಳ ಅವ್ಯವಸ್ಥೆ ಕುರಿತಂತೆ ಪ್ರತಿಪಕ್ಷದ ನಾಯಕ ಪ್ರವೀಣ್‌ಚಂದ್ರ ಆಳ್ವ ಸೇರಿದಂತೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಖುದ್ದು ಈ ಮೂರು ಎಸ್‌ಟಿಪಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಇತ್ಯರ್ಥಕ್ಕೆ ಸೂಚನೆ ನೀಡಿದ್ದಾರೆ.
‘ಸಾಮಾನ್ಯ ಸಭೆಯಲ್ಲಿ ಎಸ್‌ಟಿಪಿ ಬಗ್ಗೆ ಚರ್ಚೆ ಆದ ಹಿನ್ನೆಲೆಯಲ್ಲಿ ನಾನು ಸುರತ್ಕಲ್‌ನ ಎಸ್‌ಟಿಪಿಗೆ ಭೇಟಿ ನೀಡಿ ಅಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಪಚ್ಚನಾಡಿಯಲ್ಲಿ ಪೈಪ್ ಕಾಮಗಾರಿ ಬಾಕಿ ಇತ್ತು. ಅದು ಈಗ ಕೊನೆಯ ಹಂತದಲ್ಲಿದೆ. ಎಸ್‌ಟಿಪಿಗಳಳಲ್ಲಿ ಜನರೇಟರ್ ಅಳವಡಿಕೆ ದುಬಾರಿ ಎಂಬ ನೆಲೆಯಲ್ಲಿ ಎಕ್ಸ್‌ಪ್ರೆಸ್ ಫೀಡರ್‌ಗಳನ್ನು ಅಳವಡಿಸಲಾಗಿದೆ. ಆದರೆ ಕೆಲವು ಫ್ಲ್ಯಾಟ್‌ಗಳವರು ಈ ಫೀಡರ್‌ಗಳಿಂದ ಟ್ಯಾಪಿಂಗ್ ಮಾಡಿರುವುದು ಕಂಡು ಬಂದಿದ್ದು, ಮೆಸ್ಕಾಂ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಅನಧಿಕೃತ ಸಂಪರ್ಕ ತೆರವಿಗೆ ತಿಳಿಸಲಾಗಿದೆ’ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾಹಿತಿ ನೀಡಿದ್ದಾರೆ.