ಮಣಿಪುರ: 79 ದಿನಗಳ ಬಳಿಕ ಮೌನ ಮುರಿದರೂ ಈ ದೇಶದ ಪ್ರಧಾನಿ ಮಾತಾಡಿದ್ದೇನು?
- ಜಾಹ್ನವಿ ಸೇನ್, ಸೌಮಶ್ರೀ ಸರಕಾರ್
ಮಣಿಪುರ ಸಂಘರ್ಷ. ಸುಮಾರು 150 ಜನರನ್ನು ಬಲಿತೆಗೆದುಕೊಂಡಿದೆ. ಹತ್ತಾರು ಸಾವಿರ ಜನ ಸ್ಥಳಾಂತರಗೊಂಡಿದ್ದಾರೆ. ಅದೇ ಕಾರಣವಾಗಿ ಅವರ ಜೀವನೋಪಾಯಕ್ಕೇ ಕಲ್ಲುಬಿದ್ದಿದೆ. ಮಣಿಪುರ ಜನಾಂಗೀಯ ಸಂಘರ್ಷ ಶುರುವಾಗಿ 79 ದಿನಗಳ ಬಳಿಕ ದೇಶದ ಪ್ರಧಾನಿ ಮೌನ ಮುರಿದಿದ್ದಾರೆ. ಮಣಿಪುರ ಹಿಂಸಾಚಾರದ ಬಗೆಗಿನ ಪ್ರಧಾನಿ ಮೌನವೇ ಅತ್ಯಂತ ವಿಚಿತ್ರವಾಗಿತ್ತು. ದೇಶವೇ ಅವರನ್ನು ಈ ವಿಚಾರವಾಗಿ ಮಾತನಾಡುವಂತೆ ಒತ್ತಾಯಿಸುತ್ತಿತ್ತು. ಆದರೆ ಅಂತಿಮವಾಗಿ ಪ್ರಧಾನಿ ಆಡಿರುವ ಮಾತುಗಳು ಏನು? ಅವು ಸಮಾಧಾನಕರವಾಗಿವೆಯೇ ಎಂದರೆ, ಅದೂ ಇಲ್ಲ.
ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಲಾದ ವೀಡಿಯೊ ವಿಚಾರವಾಗಿ ಪ್ರಧಾನಿ ಮಾತನಾಡಿದ್ದಾರೆ. ಕಾಂಗ್ಪೋಕ್ಪಿಯಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗುತ್ತಿರುವುದನ್ನು ತೋರಿಸುವ ವೀಡಿಯೊ ಅದು. ಅವರಲ್ಲಿ ಒಬ್ಬಾಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.
ಈ ವಿಚಾರದ ಬಗ್ಗೆ ತೀವ್ರ ದುಃಖಿತನಾಗಿದ್ದೇನೆ ಮತ್ತು ಕೋಪಗೊಂಡಿದ್ದೇನೆ. ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ರಕ್ಷಿಸಲು ಎಲ್ಲಾ ರಾಜ್ಯಗಳು ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು ಎಂದು ಪ್ರಧಾನಿ ಹೇಳಿದ್ದಾರೆ.
ಈವರೆಗಿನ ಪ್ರಧಾನಿಯ ಮೌನ ಎಷ್ಟು ವಿಲಕ್ಷಣವಾಗಿತ್ತೋ ಅವರ ಈ ಹೇಳಿಕೆಯೂ ಅಷ್ಷೇ ವಿಲಕ್ಷಣವಾಗಿದೆ. ಮಣಿಪುರದ ಘಟನೆಯ ಬಗ್ಗೆಯೇ ಅವರು ಮಾತನಾಡುತ್ತಿಲ್ಲ ಎಂಬುದು ಈ ಹೇಳಿಕೆಯಲ್ಲಿ ಸ್ಪಷ್ಟ. ಬಿಜೆಪಿ ಅಧಿಕಾರದಲ್ಲಿರುವ ಮಣಿಪುರದ ಜೊತೆಗೇ ಕಾಂಗ್ರೆಸ್ ಆಡಳಿತದ ಛತ್ತೀಸ್ಗಡ ಮತ್ತು ರಾಜಸ್ಥಾನಗಳಲ್ಲಿಯೂ ಸರಕಾರಗಳು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಪ್ರಸ್ತಾಪಿಸುತ್ತಾರೆ. ಇರಲಿ, ಪ್ರಸ್ತಾಪಿಸಿದರು ಎಂದೇ ಇಟ್ಟುಕೊಳ್ಳೋಣ. ಆದರೆ ಮಹಿಳೆಯರ ವಿರುದ್ಧದ ಹಿಂಸಾತ್ಮಕ ಘಟನೆಗಳು ನಡೆದಿರುವ ಇತರ ಬಿಜೆಪಿ ಆಡಳಿತದ ರಾಜ್ಯಗಳು? ಆ ರಾಜ್ಯಗಳ ಬಗ್ಗೆ ಅವರ ಹೇಳಿಕೆಯಲ್ಲಿ ಉಲ್ಲೇಖವೇ ಇಲ್ಲ. ಇದು ಆಶ್ಚರ್ಯಕರವಾಗಿದೆ. ಕಥುವಾ ಅತ್ಯಾಚಾರ ಪ್ರಕರಣ ಮತ್ತು ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಬಿಜೆಪಿಯವರೆಲ್ಲರೂ ಆರೋಪಿಗಳ ಪರವೇ ಇದ್ದರೆಂಬುದು ಪ್ರಧಾನಿಗೆ ಗೊತ್ತಿಲ್ಲವೇ?
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಲು ಅವರು 79 ದಿನಗಳನ್ನು ತೆಗೆದುಕೊಂಡರು. ಹಾಗಿರುವಾಗ ಅಲ್ಲಿನ ದುರಂತಮಯ ಸನ್ನಿವೇಶದ ಬಗ್ಗೆ ಪ್ರಧಾನಿ ಮಾತನಾಡಿರುತ್ತಾರೆ ಎಂದುಕೊಂಡರೆ ಅದು ತಪ್ಪು. ಬದಲಾಗಿ, ಅವರ ಹೇಳಿಕೆ ಹೆಚ್ಚು ಗೊಂದಲಮಯವಾಗಿದೆ. ಮಣಿಪುರ ಘಟನೆಯನ್ನು ತೆಗೆದುಕೊಂಡು ಅದನ್ನು ಇತರ ಸಂಗತಿಗಳ ಜೊತೆಗೆ ಸಾಮಾನ್ಯೀಕರಿಸಿದ್ದೇ ವಿಚಿತ್ರ. ಮಣಿಪುರದ ಅತ್ಯಂತ ಹೇಯವಾದ ಘಟನೆಯ ಸಂದರ್ಭವನ್ನು ಕಡೆಗಣಿಸಿದ ರೀತಿಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ, ಅವರು ಮಾತನಾಡಲೇಬೇಕಿರುವ ಮುಖ್ಯ ವಿಚಾರಗಳು ಇನ್ನೂ ಕೆಲವಿವೆ.
ಮೊದಲನೆಯದಾಗಿ, ಮೇ 3ರಿಂದ ಮಣಿಪುರದಲ್ಲಿ ನಿರಂತರ ಹಿಂಸಾಚಾರ ನಡೆಯುತ್ತಿದೆ. ಎಸ್ಟಿ ಸ್ಥಾನಮಾನಕ್ಕಾಗಿ ಬಹುಸಂಖ್ಯಾತ ಮೈತೈ ಸಮುದಾಯದ ಬೇಡಿಕೆಗೆ ಮಣಿಪುರ ಹೈಕೋರ್ಟ್ ಸಮ್ಮತಿಸಿದ ಬಳಿಕ ಉದ್ವಿಗ್ನತೆ ಹೆಚ್ಚಾಯಿತು. ಮಣಿಪುರದ ಬುಡಕಟ್ಟು ಸಮುದಾಯಗಳು ಇದು ತಮ್ಮ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಭಾವಿಸಿ ಪ್ರತಿಭಟನೆ ನಡೆಸಿದರು.
ಅಂದಿನಿಂದ, ಮಣಿಪುರದಲ್ಲಿ ಉದ್ದೇಶಿತ ಹಿಂಸಾಚಾರ, ಶಸ್ತ್ರಾಸ್ತ್ರಗಳ ಲೂಟಿ, ಮಹಿಳೆಯರೂ ಸೇರಿದಂತೆ ಅಮಾಯಕರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಸಾವು ನೋವುಗಳು ಸಂಭವಿಸಿವೆ. ಆದರೆ ಪ್ರಧಾನಿ ಮಾತು ಗಮನಿಸಿದರೆ ಇದ್ಯಾವುದೂ ನಡೆದೇ ಇಲ್ಲ ಎನ್ನುವಂತಿದೆ. ಮನುಷ್ಯರು ಮತ್ತು ಮಾನವೀಯತೆಯ ಮಾರಣ ಹೋಮ ನಡೆದ ಸಂದರ್ಭಕ್ಕೆ ಪ್ರಧಾನಿ, ಅದೂ 79 ದಿನಗಳ ಬಳಿಕ ಕೊಡುತ್ತಿರುವ ಪ್ರತಿಕ್ರಿಯೆ ಈ ಬಗೆಯಲ್ಲಿರುತ್ತದೆ ಎಂದರೆ ಏನೆನ್ನಬೇಕು?
ಅವರ ಮಾತಿನಲ್ಲಿ ಮಣಿಪುರ ಹಿಂಸಾಚಾರದ ಉಲ್ಲೇಖವೇ ಇಲ್ಲ. ಇನ್ನು ಅಲ್ಲಿ ಶಾಂತಿ ಕಾಯ್ದುಕೊಳ್ಳಲು ಮನವಿ ಮಾಡುವುದು ದೂರವೇ ಉಳಿಯಿತು. ಮೊದಲಿನಿಂದಲೂ ಎಲ್ಲಾ ಪಕ್ಷಗಳು ಅವರನ್ನು ಶಾಂತಿ ಕಾಯ್ದುಕೊಳ್ಳಲು ಮನವಿ ಮಾಡುವಂತೆ ಒತ್ತಾಯಿಸುತ್ತಲೇ ಬಂದಿವೆ. ಆದರೆ ಅವರು ಒಮ್ಮೆಯೂ ಮಣಿಪುರದ ಜನರನ್ನು ಉದ್ದೇಶಿಸಿ ಮಾತನಾಡಲಿಲ್ಲ.
ಎರಡನೆಯದಾಗಿ, ಮಣಿಪುರ ಸರಕಾರದ ವಿಚಾರವಾಗಿ ಪ್ರಧಾನಿ ಅಭಿಪ್ರಾಯ. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸೋತಿರುವುದು ತೀವ್ರ ಟೀಕೆಗೆ ಒಳಗಾಗಿದೆ. ಹಿಂಸಾಚಾರ ಶುರುವಾದಾಗಲೂ ಅವರು ಅದರ ಜನಾಂಗೀಯ ಸ್ವರೂಪದ ವಿಚಾರವನ್ನು ಬಾಯ್ಬಿಡಲಿಲ್ಲ. ಬದಲಾಗಿ, ಭಯೋತ್ಪಾದಕರು ಮತ್ತು ನುಸುಳುಕೋರರಿಂದಾಗಿ ಇದೆಲ್ಲ ನಡೆಯುತ್ತಿದೆ ಎಂದು ದೂಷಿಸಿದರು. ನಂತರ, ಅವರು ಟ್ವಿಟರ್ನಲ್ಲಿ ತಮ್ಮನ್ನು ಟೀಕಿಸುವವರನ್ನು ಕುಕಿಗಳು ಮತ್ತು ಮ್ಯಾನ್ಮಾರ್ನಿಂದ ಬಂದವರು ಎಂದು ಜರೆದರು.
ಶಸ್ತ್ರಸಜ್ಜಿತ ಮೈತೈ ಗುಂಪುಗಳು ತಮ್ಮನ್ನು ಗುರಿಯಾಗಿಸಿ ಕೊಲ್ಲಲು ಸರಕಾರವೇ ಅವಕಾಶ ನೀಡುತ್ತಿದೆ, ಮೈತೈಗಳ ಪರವಾಗಿರುವ ಸಿಂಗ್ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದು ಕುಕಿ ಗುಂಪುಗಳು ಹಲವು ಬಾರಿ ಹೇಳಿವೆ. ಪ್ರಾಣ ಮತ್ತು ಆಸ್ತಿ ರಕ್ಷಿಸಲು ಅವರು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮೈತೈ ಗುಂಪುಗಳು ಕೂಡ ಆರೋಪಿಸಿವೆ. ಪರಿಸ್ಥಿತಿ ಹಿಡಿತಕ್ಕೆ ತರಲು ಅಥವಾ ಜನರ ವಿಶ್ವಾಸವನ್ನು ಗಳಿಸಲು ಸರಕಾರ ವಿಫಲವಾದ ಕಾರಣ ಅವರ ರಾಜೀನಾಮೆಗೆ ಹಲವಾರು ಬಾರಿ ನಿರಂತರ ಒತ್ತಾಯಗಳು ಕೇಳಿಬಂದಿವೆ, ಆದರೆ ಸಿಂಗ್ ತಮ್ಮ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಬಿಜೆಪಿ ಮಿತ್ರ ಪಕ್ಷಗಳು ಕೂಡ ಇದನ್ನು ಪ್ರಶ್ನಿಸಿದ್ದರೂ, ತಮ್ಮ ಪಕ್ಷ ಮತ್ತು ಅದರ ನಾಯಕರು ಮಣಿಪುರದಲ್ಲಿನ ಅಸ್ಥಿರ ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂಬುದರ ಬಗ್ಗೆ ಮತ್ತು ರಾಜಕೀಯ ಲಾಭಕ್ಕಾಗಿ ಅಲ್ಲಿನ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವಂಥ ಆರೋಪಗಳಲ್ಲಿಯೇ ಕಳೆದದ್ದರ ಬಗ್ಗೆ ಮೋದಿ ಏನನ್ನೂ ಹೇಳಲಿಲ್ಲ.
ಮೂರನೆಯದಾಗಿ, ಮಾಹಿತಿಗಳನ್ನು ಮುಚ್ಚಿಹಾಕುತ್ತಿರುವುದು. ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿರುವ ಮತ್ತು ಅವರಲ್ಲಿ ಒಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮೇ 4ರಂದು ನಡೆದದ್ದು. ಅದು ಜುಲೈ 19ರಂದು ಬಹಿರಂಗವಾಗುತ್ತದೆ. ಈ ವೀಡಿಯೊ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಟ್ವಿಟರ್ ವಿರುದ್ಧ ಕೇಂದ್ರ ಸರಕಾರ ಕ್ರಮ ತೆಗೆದುಕೊಳ್ಳಲು ಯೋಚಿಸುತ್ತಿದೆ ಎಂಬ ವರದಿಗಳಿವೆ.
ಮೇ 3ರಿಂದ ರಾಜ್ಯದಲ್ಲಿ ಸಂಪೂರ್ಣ ಇಂಟರ್ನೆಟ್ ಸ್ಥಗಿತಗೊಳಿಸಲು ರಾಜ್ಯ ಸರಕಾರ ಆದೇಶಿಸಿದ್ದು, ಇದು ಶಾಂತಿ ಪುನಃಸ್ಥಾಪನೆಗೆ ಮತ್ತು ವದಂತಿಗಳ ಹರಡುವಿಕೆ ತಡೆಯಲು ಅಗತ್ಯ ಎಂದು ಹೇಳಿಕೊಂಡಿದೆ. ಆದರೂ, ಇಂಟರ್ನೆಟ್ ಸ್ಥಗಿತಗೊಳಿಸುವಿಕೆ ವಾಸ್ತವವಾಗಿ ವಿರುದ್ಧ ಪರಿಣಾಮಗಳನ್ನೇ ಉಂಟುಮಾಡಿದೆ ಎಂಬುದು ಅನೇಕರ ವಾದ. ಅಲ್ಲಿನ ವಾಸ್ತವದ ಪ್ರಮುಖ ಮಾಹಿತಿ ಮತ್ತು ಹಿಂಸಾಚಾರದ ಪ್ರಮಾಣದ ವಿವರಗಳೇ ಸಾರ್ವಜನಿಕರಿಗೆ ಲಭ್ಯವಿಲ್ಲದಂತಾಗಿದೆ. ಜೊತೆಗೆ, ವಿಶ್ವಾಸಾರ್ಹ ಮಾಹಿತಿಯನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತಿರುವ ಪತ್ರಕರ್ತರು ಮತ್ತು ಇತರರು ಕಷ್ಟಕರ ಮತ್ತು ವಿರೋಧಾತ್ಮಕ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವಂತಾಗಿದೆ. ರಾಜ್ಯ ಪ್ರಾಯೋಜಿತ ಹಿಂಸಾಚಾರ ನಡೆಯುತ್ತಿದೆ ಎಂದು ಹೇಳಿದ ಸತ್ಯಶೋಧನಾ ಆಯೋಗದ ಸದಸ್ಯರು ಈಗ ಪೊಲೀಸ್ ಪ್ರಕರಣ ಎದುರಿಸುತ್ತಿದ್ದಾರೆ.
ಮೋದಿ ಸರಕಾರ 2015ರಿಂದ ಭಾರತವನ್ನು ವಿಶ್ವದ ಇಂಟರ್ನೆಟ್ ಸ್ಥಗಿತಗೊಳಿಸುವ ರಾಜಧಾನಿಯನ್ನಾಗಿ ಮಾಡಿದೆ. ಕಳೆದ ವಾರ ನಡೆದ ಜಿ 20 ಸಭೆಯಲ್ಲಿ ಇದು ಪ್ರಸ್ತಾಪಗೊಂಡಿತು. ರೈತರ ಪ್ರತಿಭಟನೆಯ ಸಂದರ್ಭದಲ್ಲಿಯೂ ಹೀಗೆಯೇ ಮಾಡಲಾಯಿತು. ಸತ್ಯ ಸಂಗತಿಗಳನ್ನು ವರದಿ ಮಾಡಿದ್ದಕ್ಕಾಗಿ ಪತ್ರಕರ್ತರನ್ನು ವಾಡಿಕೆಯಂತೆ ಜೈಲಿಗೆ ಹಾಕಲಾಗುತ್ತದೆ, ಕಾಶ್ಮೀರದ ಸ್ಥಿತಿಯಂತೂ ಅತ್ಯಂತ ಕೆಟ್ಟದಾಗಿದೆ. ಈ ವೀಡಿಯೊ ಬಹಿರಂಗವಾಗದೆ ಇದ್ದಲ್ಲಿ ಈಗಲೂ ಪ್ರಧಾನಿ ಮೌನ ಮುರಿಯುತ್ತಿರಲಿಲ್ಲವೇನೊ.
ನಾಲ್ಕನೆಯದಾಗಿ, ಮಣಿಪುರದಲ್ಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತ್ರ ಮಾತನಾಡಲು ಮೋದಿ ಬಯಸಿದ್ದರೂ, ಅಂತಹ ಹಲವಾರು ಪ್ರಕರಣಗಳು ದಾಖಲಾಗಿವೆ ಎಂಬ ವರದಿಗಳನ್ನು ಅವರು ನಿರ್ಲಕ್ಷಿಸಿದ್ದಾರೆ. ‘ದಿ ಪ್ರಿಂಟ್’ ಪ್ರಕಾರ, ಕುಕಿ ಮಹಿಳೆಯರ ಮೇಲಿನ ಅತ್ಯಾಚಾರದ ಕನಿಷ್ಠ ಆರು ಪ್ರಕರಣಗಳು ಕಂಡುಬಂದಿವೆ, ಇದರಲ್ಲಿ 18 ವರ್ಷ ವಯಸ್ಸಿನವರೂ ಸೇರಿದ್ದಾರೆ. ಈ ಪೈಕಿ ಕೆಲವು ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದೆ.
ಐದನೆಯದಾಗಿ, ಮೋದಿ ಅಮೆರಿಕ ಮತ್ತು ಈಜಿಪ್ಟ್ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಮಣಿಪುರದ ಪರಿಸ್ಥಿತಿಯ ಕುರಿತು ಉನ್ನತ ಮಟ್ಟದ ಸಭೆಯನ್ನು ಕರೆದರು. ಸಭೆಯಲ್ಲಿ ಸಂಪುಟದ ಹಿರಿಯ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಮತ್ತು ಹರ್ದೀಪ್ ಸಿಂಗ್ ಪುರಿ ಉಪಸ್ಥಿತರಿದ್ದರು. ಸಭೆ ನಡೆಸಿದ ವಿಚಾರ ಮಾತ್ರ ಸುದ್ದಿಯಾಯಿತೇ ಹೊರತು, ಅದರ ನಂತರ ಏನು ತೀರ್ಮಾನ ತೆಗೆದುಕೊಳ್ಳಲಾಗಿದೆ, ಮುಂದಿನ ನಡೆ ಏನು ಎಂಬುದರ ಕುರಿತು ಯಾವುದೇ ಮಾಹಿತಿಗಳಿಲ್ಲ.
ಮಣಿಪುರಕ್ಕೆ ಶಾ ಭೇಟಿಯ ಸಮಯದಲ್ಲಿ ಸ್ಥಾಪಿಸಲಾದ ಶಾಂತಿ ಸಮಿತಿ-ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಮಾಡಿದ್ದ ಒಂದೇ ಒಂದು ಕೆಲಸ ಕೂಡ ವಿಫಲವಾಗಿದೆ, ಕುಕಿ ಮತ್ತು ಮೈತೈ ಗುಂಪುಗಳು ಭಾಗವಹಿಸುವುದಿಲ್ಲ ಎಂದು ಹೇಳಿವೆ. ಕೇಂದ್ರ ಸರಕಾರ ಪರಿಸ್ಥಿತಿಯನ್ನು ಪರಿಹರಿಸಲು ಇನ್ನೇನು ಯೋಜಿಸಿದೆ ಎಂಬುದರ ಕುರಿತು ಮೋದಿ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.
(ಕೃಪೆ: thewire.in)