ವಿಶ್ವ ಕಾಫಿ ಸಮ್ಮೇಳನಕ್ಕೆ 21ಕೋಟಿ ರೂ.ಗಿಂತ ಹೆಚ್ಚಿನ ಹಣ ಖರ್ಚು
► ಪಿಐಬಿ ಕಡೆಗಣಿಸಿ ಖಾಸಗಿ ಸಂಸ್ಥೆಗೆ ಮಾಧ್ಯಮ ನಿರ್ವಹಣೆಯ ಹೊಣೆ ► ಕೋವಿಡ್ ಹೆಸರಿನಲ್ಲಿ ದುಂದು ವೆಚ್ಚ
Photo: witter.com/MadanRao
ಬೆಂಗಳೂರು, ನ.12: ಕೇಂದ್ರ ಸರಕಾರದ ಒಡೆತನದ ಕಾಫಿ ಮಂಡಳಿಯು ಸೆ.25ರಿಂದ ಸೆ.28ರವರೆಗೆ ಇಲ್ಲಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವ ಕಾಫಿ ಸಮ್ಮೇಳನಕ್ಕೆ(ಡಬ್ಲ್ಯೂಸಿಸಿ) 21 ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಹಣ ಖರ್ಚು ಮಾಡಿದೆ. ಅಲ್ಲದೆ, ಸಮ್ಮೇಳನಕ್ಕೆ ಸಂಬಂಧಿಸಿ ಮಾಧ್ಯಮ ನಿರ್ವಹಣೆಯನ್ನು ಕೇಂದ್ರದ ಪ್ರೆಸ್ ಇನ್ಫಾರ್ಮೆಶನ್ ಬ್ಯೂರೋ(ಪಿಐಬಿ)ವನ್ನು ಪರಿಗಣಿಸದೆ, ಖಾಸಗಿ ಸಂಸ್ಥೆಗೆ ನೀಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬೆಳಕಿಗೆ ಬಂದಿದೆ.
ವಿಶ್ವ ಕಾಫಿ ಸಮ್ಮೇಳನದ ನಿರ್ವಹಣೆಯನ್ನು ಎಂಎಂ ಆಕ್ಟೀವ್ ಸೈ-ಟೆಕ್ ಕಮ್ಯುನಿಕೇಷನ್ ಖಾಸಗಿ ಸಂಸ್ಥೆಗೆ ವಹಿಸಲಾಗಿದ್ದು, ಸಂಸ್ಥೆಯು ಕಾರ್ಯಕ್ರಮ ನಿರ್ವಹಣೆಗೆ 24,37,43,668.58 ರೂ.ಗಳಿಗೆ ಬೇಡಿಕೆ ಇಟ್ಟಿತ್ತು. ಮಂಡಳಿಯು 21,45,29,065 ರೂ.ಗಳನ್ನು ಸಂಸ್ಥೆಗೆ ನೀಡಲು ಒಪ್ಪಿಕಾರ್ಯಾದೇಶ ಪತ್ರವನ್ನು ನೀಡಿದೆ. ಅಲ್ಲದೆ ಯಾವುದೇ ಮಾಧ್ಯಮಗಳಿಗೆ ಜಾಹೀರಾತನ್ನು ನೀಡದೆ, ಮಾಧ್ಯಮ ನಿರ್ವಹಣೆಯ ಹೆಸರಿನಲ್ಲಿ ಸುಮಾರು 37,76,000 ರೂ.ಗಳಿಂತ ಅಧಿಕ ಹಣವನ್ನು ಪಡೆದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಸಮ್ಮೇಳನದಲ್ಲಿ ಮಾಧ್ಯಮ ಕೇಂದ್ರ ನಿರ್ವಹಣೆಗೆ 10,62,000 ರೂ.ಗಳನ್ನು ಖರ್ಚು ಮಾಡಲಾಗಿದೆ. ಪತ್ರಕರ್ತರು ಸಹಿತ 2,000 ಮಂದಿ ಆಹ್ವಾನಿತರ ಮಾಧ್ಯಮ ಕಿಟ್ ಹಾಗೂ ಊಟ-ಉಪಚಾರಕ್ಕಾಗಿ ಸುಮಾರು 29,50,000 ರೂ.ಗಳನ್ನು ಖರ್ಚು ಮಾಡಲಾಗಿದೆ. ಪ್ರಮೋಶನ್ಗಾಗಿ 27,14,000 ರೂ.ಗಳನ್ನು, ಸಾರ್ವಜನಿಕ ಸಂಪರ್ಕಕ್ಕಾಗಿ 9,44,000 ರೂ.ಗಳನ್ನು ಖರ್ಚು ಮಾಡಲಾಗಿದೆ.
ಹಾಗೆಯೇ ಸಮ್ಮೇಳನದ ಬ್ರಾಂಡಿಂಗ್ ಹೆಸರಿನಲ್ಲಿ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ಶಂಗ್ರೀಲಾ ಹೊಟೇಲ್ವರೆಗೆ ಹೋರ್ಡಿಂಗ್ಸ್ ಮತ್ತು ಗ್ರಾಫಿಕ್ಸ್ ಡಿಸ್ಪ್ಲೇ ಅಳವಡಿಸಲು 47,20,000 ರೂ.ಗಳನ್ನು ಖರ್ಚು ಮಾಡಲಾಗಿದೆ.
ಕೇವಲ ಒಂದೇ ಒಂದು ನೋಂದಣಿ ಹಾಲ್ ನಿರ್ಮಾಣ ಮತ್ತು ನಿರ್ವಹಣೆಗಾಗಿ 21,11,610 ರೂ.ಗಳನ್ನು ಖರ್ಚು ಮಾಡಲಾಗಿದೆ. ಮೂರು ದಿನಗಳ ಮಟ್ಟಿಗೆ ಮಾಧ್ಯಮ ಕೇಂದ್ರ ಸಹಿತ ಇತರ ಕೋಣೆಗಳಿಗೆ ಲ್ಯಾಪ್ಟಾಪ್, ಪ್ರಿಂಟರ್, ಇಂಟರ್ನೆಟ್ ಬ್ಯಾಂಡ್ನ್ನು ಒದಗಿಸಲು 7,08,000 ರೂ. ಖರ್ಚು ಮಾಡಿದ್ದು, ಆದೇಶ ಪತ್ರದಲ್ಲಿ ವಸ್ತುಗಳ ಕುರಿತು ಯಾವುದೇ ಅಂಕಿ-ಅಂಶದ ದಾಖಲೆ ಪ್ರಕಟಿಸಿಲ್ಲ. ಲೈಟ್ಸ್, ಸೌಂಡ್ಸ್ ಮತ್ತು ಆಡಿಯೊ-ವೀಡಿಯೊಗೆ 99,12,000 ರೂ.ಗಳನ್ನು ಖರ್ಚು ಮಾಡಿದ್ದು, ಅದನ್ನು ಹೊರತುಪಡಿಸಿ ಇತರ ಸೇವೆ ಮತ್ತು ವಸ್ತುಗಳಿಗಾಗಿ 2,47,22,298 ರೂ. ವ್ಯಯಿಸಲಾಗಿದೆ. ಆದರೆ, ಆದೇಶ ಪತ್ರಿಯ ಎ ವಿಭಾಗದ ಕ್ರಮ ಸಂಖ್ಯೆ ಒಂದರಿಂದ ನಾಲ್ಕರವರೆಗೆ ಸುಮಾರು 3 ಕೋಟಿ ರೂ.ಗಳನ್ನೂ ಇದೇ ಉದೇಶಕ್ಕಾಗಿ ಬಳಕೆ ಮಾಡಿರಬಹುದು ಎಂಬ ಅನುಮಾನಗಳಿವೆ.
ಟ್ರೋಫಿ ಮತ್ತು ಮೊಮೆಂಟೋಗಳಿಗಾಗಿ 5,90,000 ರೂ., ಸ್ಪರ್ಧೆಗಳಿಗಾಗಿ ಮತ್ತು ಅವಾರ್ಡ್ಗಳಿಗಾಗಿ ಬರೋಬ್ಬರಿ 1,05,22,768 ರೂ.ಗಳನ್ನು ಖರ್ಚು ಮಾಡಲಾಗಿದೆ. ಇನ್ನು ಬಿಬಿಎಂಪಿ, ಪೊಲೀಸ್ ಇನ್ನಿತರ ಇಲಾಖೆಗಳಿಂದ ಅನುಮತಿಯನ್ನು ಪಡೆಯಲು 3,54,000 ರೂ.ಗಳನ್ನು ಖರ್ಚು ಮಾಡಲಾಗಿದೆ. ಪೋಟೋಗ್ರಫಿ ಮತ್ತು ವೀಡಿಯೊಗ್ರಫಿಗೆ ಸುಮಾರು 4,72,000 ರೂ.ಗಳನ್ನು ಖರ್ಚು ಮಾಡಲಾಗಿದೆ.
ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಡಿಜಿಟಲ್ ಇಂಡಿಯಾವನ್ನು ಗಣನೆಗೆ ತೆಗೆದುಕೊಳ್ಳದೆ, ಡಿಜಿಟಲ್ ಯುಗದಲ್ಲಿಯೂ ಒಟ್ಟು 5,90,000 ರೂ.ಗಳನ್ನು ಆಹ್ವಾನ ಪತ್ರಿಕೆ, ವಿಸಿಟರ್ ಪಾಸ್, ಸೇರಿ ಕಾಗದಗಳಿಗೆ ಖರ್ಚು ಮಾಡಲಾಗಿದೆ.
ಉದ್ಘಾಟನೆ ಸಮಾರಂಭದ ಆಹ್ವಾನ ಪತ್ರಿಕೆಗೆ ಸುಮಾರು 1,18,000 ರೂ.ಗಳನ್ನು ಖರ್ಚು ಮಾಡಲಾಗಿದೆ. ಅಂಚೆ ಮತ್ತು ಪತ್ರ ವ್ಯವಹಾರಕ್ಕಾಗಿ 1,18,000 ರೂ.ಗಳನ್ನು ಪ್ರತ್ಯೇಕವಾಗಿ ಖರ್ಚು ಮಾಡಲಾಗಿದೆ. ಹಾಗೆಯೇ ವಿಸಿಟರ್ ಪಾಸ್ಗಳಿಗೆ ಮತ್ತೇ 1,18,000 ರೂ.ವ್ಯಯ ಮಾಡಲಾಗಿದೆ. ಕಾರ್ಯಕ್ರಮದ ಕರಪತ್ರ, ಎಕ್ಸ್ಪೋ ಡಿಕ್ಷನರಿ, ಕಿರು ಹೊತ್ತಿಗೆಗಳಿಗೆ 2,36,000 ರೂ.ಗಳನ್ನು ಖರ್ಚು ಮಾಡಲಾಗಿದೆ.
ಕೋವಿಡ್ ಹೆಸರಿನಲ್ಲಿ ದುಂದು ವೆಚ್ಚ: ರಾಜ್ಯ ಸೇರಿದಂತೆ ಕೋವಿಡ್ ಪ್ರಕರಣಗಳು ಇಲ್ಲದಿದ್ದರೂ, ಕೋವಿಡ್ ಸಂಬಂಧಿತ ವಸ್ತುಗಳಿಗೂ 1,18,000 ರೂ.ಗಳನ್ನು ಖರ್ಚು ಮಾಡಲಾಗಿದೆ. ಆದರೆ ಸಮ್ಮೇಳನಕ್ಕೆ ಬಂದವರಿಗೆ ಯಾವುದೇ ಮಾಸ್ಕ್, ಸ್ಕಾನಿಟೈಸರ್ಗಳನ್ನೂ ನೀಡಿಲ್ಲ. ವ್ಯಾಕ್ಸಿನ್ ಆಗಿರುವ ಬಗ್ಗೆ ಪರಿಶೀಲನೆಯು ನಡೆಸಿಲ್ಲ. ಆದರೆ, ಈ ಹಣವನ್ನು ಏಕೆ ಖರ್ಚು ಮಾಡಿದ್ದಾರೆ ಎಂಬ ಮಾಹಿತಿಯನ್ನು ವಿವರವಾಗಿ ಒದಗಿಸಿಲ್ಲ.
ನಿರ್ವಹಣೆ ಜವಾಬ್ದಾರಿ ಖಾಸಗಿ ಸಂಸ್ಥೆಗೆ: ಕೇಂದ್ರ ಸರಕಾರದ ಮಾಧ್ಯಮ ನಿರ್ವಹಣೆಯ ಕಾರ್ಯವನ್ನು ನಿರ್ವಹಿಸುವ ಪಿಐಬಿಗೆ ಸಮ್ಮೇಳನವನ್ನು ವಹಿಸಲಿಲ್ಲ. ಕಾಫಿ ಮಂಡಳಿಯು ಪಿಐಬಿಗೆ ಯಾವುದೇ ರೀತಿಯಲ್ಲಿ ಅಧಿಕೃತ ಪತ್ರವನ್ನು ಬರೆದಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ದೃಢೀಕರಿಸಿದೆ. ಸಮ್ಮೇಳನ ನಿರ್ವಹಣೆಯ ಟೆಂಡರ್ ಅನ್ನು ಪಡೆದುಕೊಂಡ ಎಂಎಂ ಆ್ಯಕ್ಟೀವ್ ಸೈ-ಟೆಕ್ ಕಮ್ಯುನಿಕೇಷನ್ ಖಾಸಗಿ ಸಂಸ್ಥೆಯು ಡಂಟ್ಸು ಎಂಬ ಮತ್ತು ಖಾಸಗಿ ಸಂಸ್ಥೆಗೆ ಮಾಧ್ಯಮ ನಿರ್ವಹಣೆಯ ಜವಾಬ್ದಾರಿಯನ್ನು ನೀಡಿರುವುದಾಗಿ ತಿಳಿದು ಬಂದಿದೆ.
ಈ ರೀತಿಯಾಗಿ ಖಾಸಗಿ ಸಂಸ್ಥೆಗೆ ನೀಡಿದ ಉಪ ಟೆಂಡರ್ನ ಹಣವನ್ನು ದುಂದು ವೆಚ್ಚವಾಗಿ ಕಾಫಿ ಮಂಡಳಿಯು ಖರ್ಚು ಮಾಡಿದೆ. ಸಾಮಾನ್ಯವಾಗಿ ಕೇಂದ್ರ ಸರಕಾರದ ಕಾರ್ಯಕ್ರಮಗಳಲ್ಲಿ ಮಾಧ್ಯಮ ನಿರ್ವಹಣೆಯನ್ನು ಪಿಐಬಿಗೆ ವಹಿಸಲಾಗುತ್ತದೆ. ಆದರೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಈ ಕಾರ್ಯಕ್ರಮಕ್ಕೆ ಬಂದರೂ, ಕಾರ್ಯಕ್ರಮದ ಕುರಿತು ಕಾಫಿ ಮಂಡಳಿಯು ಪಿಐಬಿಗೆ ಪತ್ರವನ್ನು ಬರೆದು ಮಾಹಿತಿ ನೀಡದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.