ರಾಷ್ಟ್ರಮಟ್ಟದ ಫುಟ್ಬಾಲ್ ಚಾಂಪಿಯನ್‌ಶಿಪ್: ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ವಿನು ಎಚ್.ಆರ್.
ಎರಡು ಬಾರಿ ಯೂನಿವರ್ಸಿಟಿ ಪ್ರತಿನಿಧಿಸಿದ ಆಟಗಾರ
ಮಡಿಕೇರಿ, ನ.13: ಕೊಡಗು ಜಿಲ್ಲೆಯ ಫುಟ್ಬಾಲ್ ಆಟಗಾರ ಪಾಲೆಬೆಟ್ಟ ಗ್ರಾಮದ ವಿನು ಎಚ್.ಆರ್. ಸತತ ಮೂರು ಬಾರಿ ಕರ್ನಾಟಕ ತಂಡವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.
ವಿನು ಎಚ್.ಆರ್. ಪ್ರಸ್ತುತ ಜಿಲ್ಲೆಯ ಪ್ರಖ್ಯಾತ ತಂಡವಾದ ನೆಹರೂ ಎಫ್.ಸಿ. ಪಾಲಿಬೆಟ್ಟ ತಂಡದ ಭರವಸೆಯ ಡಿಫೆಂಡರ್ ಆಗಿ ರಾಜ್ಯ ಹಾಗೂ ಹಲವಾರು ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯನ್ನು ಆಡಿ ಪ್ರಶಸ್ತಿ ಗೆದ್ದಿದ್ದಾರೆ. ಬೆಂಗಳೂರಿನ ನಡೆದ ಸೂಪರ್ ಡಿವಿಷನ್ ಪಂದ್ಯಾವಳಿಯಲ್ಲಿ ಕೊಡಗು ಎಫ್.ಸಿ. ತಂಡವನ್ನು ಕೂಡ ಪ್ರತಿನಿಧಿಸಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಫುಟ್ಬಾಲ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ವಿನು ಎಚ್.ಆರ್. ತನ್ನ ವಿಶೇಷ ಶೈಲಿಯ ಆಟದ ಮೂಲಕ ಜಿಲ್ಲೆಯ ಜನರ ಮನಸ್ಸು ಗೆದ್ದಿದ್ದಾರೆ. ಎದುರಾಳಿ ತಂಡದ ಆಟಗಾರರು ಹಾಗೂ ತೀರ್ಪುಗಾರರೊಂದಿಗೆ ಕ್ರೀಡಾ ಮನೋಭಾವದಿಂದ ವರ್ತಿಸುವ ವಿನು ಅವರು ತನ್ನ ಶಿಸ್ತುಬದ್ಧ ಆಟದ ಮೂಲಕ ಜಿಲ್ಲೆಯ ಬೆಳೆದು ಬರುತ್ತಿರುವ ಯುವ ಫುಟ್ಬಾಲ್ ಆಟಗಾರರಿಗೆ ಮಾದರಿಯಾಗಿದ್ದಾರೆ.
ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮದ ರಾಜ ಎಚ್.ವಿ ಹಾಗೂ ಲತಾ.ಆರ್ ಅವರ ಮಗನಾದ ವಿನು ಎಚ್.ಆರ್. ತನ್ನ ಪದವಿ ವ್ಯಾಸಂಗವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸೇಕ್ರೆಡ್ ಹಾರ್ಟ್ ಮಡಂತ್ಯಾರ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಪದವಿ ಶಿಕ್ಷಣ ಪಡೆಯುವಾಗ 2021 ಹಾಗೂ 2022ರಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ತಂಡದ ಪರವಾಗಿ ಆಡಿದ್ದಾರೆ.
ಅದಲ್ಲದೆ ಅಂತರ್ ಕಾಲೇಜು ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲುವುದರ ಮೂಲಕ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಗೂ
ಭಾಜನರಾಗಿದ್ದಾರೆ. 21 ವರ್ಷದ ಯುವ ಫುಟ್ಬಾಲ್ ಆಟಗಾರ ವಿನು ಅವರಿಗೆ ಕೊಡಗು ಜಿಲ್ಲೆಯ ಫುಟ್ಬಾಲ್ ಪ್ರೇಮಿಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿ, ಬೆಳೆದು ಬರುತ್ತಿರುವ ಫುಟ್ಬಾಲ್ ಆಟಗಾರರ ಬೆಳವಣಿಗೆಗೆ ವೇದಿಕೆ ಒದಗಿಸಬೇಕಾಗಿದೆ.
2017 ರಿಂದ ಸತತವಾಗಿ ಮೂರು ವರ್ಷಗಳ ಕಾಲ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದೇನೆ ಹಾಗೂ ಎರಡು ಬಾರಿ ಮಂಗಳೂರು ವಿಶ್ವ ವಿದ್ಯಾನಿಲಯ ತಂಡದ ಪರವಾಗಿ ಆಡಿದ್ದೇನೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ವಿವಿಧ ತಂಡದ ಪರವಾಗಿ ಆಡಿ ಪ್ರಶಸ್ತಿ ಗೆದ್ದಿದ್ದೇನೆ. ಇದೀಗ ಕೊಡಗು ಜಿಲ್ಲೆಯ ಪಾಲಿಬೆಟ್ಟದ ನೆಹರೂ ಎಫ್.ಸಿ. ತಂಡದ ಪರವಾಗಿ ಆಡುತ್ತಿದ್ದೇನೆ.
- ವಿನು ಎಚ್.ಆರ್.
ರಾಷ್ಟ್ರ ಮಟ್ಟದ ಫುಟ್ಬಾಲ್ ಆಟಗಾರ.