ಸ್ವಾಭಾವಿಕ ಉದ್ದೇಶ
ಟ್ರಾಫಿಕ್ ಸಿಗ್ನಲ್ನಲ್ಲಿ ಕೆಂಪು ದೀಪ ಹೊತ್ತಿದೆ. ಎಲ್ಲರೂ ಹಸಿರು ದೀಪಕ್ಕಾಗಿ ಕಾಯುತ್ತಾ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡಿರುತ್ತಾರೆ. ಆದರೆ ಅವರಲ್ಲಿ ಒಂದಿಬ್ಬರು ಮೂವರು ಹಸಿರು ದೀಪಕ್ಕೆ ಕಾಯದೇ ಭರ್ ಎಂದು ಹೋಗಿಬಿಡುತ್ತಾರೆ.
ರಸ್ತೆ ನಿಯಮವನ್ನು ತಮ್ಮ ಸುಗಮ ಸಂಚಾರದ ಕ್ರಮವೆಂದು ನಿಂತಿರುವವರು ನಾರ್ಮಲ್. ಹಾಗೆ ನಿಲ್ಲಬೇಕಾಗಿರುವುದು ನಿಯಮ, ಒಂದು ಕ್ರಮವೆಂದು ಗೊತ್ತಿದ್ದರೂ ಭರ್ ಎಂದು ಹೋಗುವವರು ಅಬ್ನಾರ್ಮಲ್.
ಬಸ್ಸು ನಿಲ್ದಾಣಕ್ಕೆ ಬಂದಿದೆ. ಬಸ್ಸು ಹತ್ತುವ ಮೆಟ್ಟಿಲುಗಳ ಮೇಲೆ ಇರುವ ಅವಕಾಶ ವಾಸ್ತವವಾಗಿ ಒಬ್ಬೊಬ್ಬರೇ ಹತ್ತಲು ಆಗುವುದು. ಅದರ ರಚನೆಯೇ ಹಾಗಿರುವುದು. ಒಬ್ಬರ ಹಿಂದೆ ಮತ್ತೊಬ್ಬರು, ಅವರ ಹಿಂದೆ ಮತ್ತೊಬ್ಬರು ಕ್ರಮವಾಗಿ ಹತ್ತುತ್ತಾ ಹೋಗುವುದು ನಾರ್ಮಲ್. ಆದರೆ ಒಬ್ಬರು ಹತ್ತುವ ಸ್ಥಳಾವಕಾಶದಲ್ಲಿ ಒಬ್ಬರೊಡನೆ ಮತ್ತೊಬ್ಬರು ತಳ್ಳುತ್ತಾ ನುಗ್ಗುತ್ತಾ ನುಸುಳುತ್ತಾ ಹಿಂದಕ್ಕೆಳೆದು ತಾವು ಮುಂದಕ್ಕೆ ಹೋಗುವಂತಹ ಕ್ರಿಯೆಯು ಅಬ್ನಾರ್ಮಲ್ ಎನಿಸುತ್ತದೆ.
ನಾರ್ಮ್ ಎಂದರೆ ಕ್ರಮ, ರೂಢಿ ಎಂದು ಅರ್ಥ. ಮನಸ್ಸಿನ ವಿಷಯದಲ್ಲಿ ಕ್ರಮವರಿತ ರೂಢಿ ಅಥವಾ ರೂಢಿಸಿಕೊಳ್ಳಬೇಕಾಗಿರುವ ಕ್ರಮ. ಈ ಕ್ರಮವರಿತ ರೂಢಿಯನ್ನೇ ನಾರ್ಮಲ್ ಎನ್ನುವುದು. ಅಬ್ನಾರ್ಮಲ್ ಎಂದರೆ ರೂಢಿಸಿಕೊಳ್ಳಬೇಕಾದ ಕ್ರಮದಿಂದ ಹೊರತಾಗಿರುವುದು.
ಈ ಅರ್ಥವನ್ನು ಕನ್ನಡದಲ್ಲಿ ಕಾಣಲು ಹೋದರೆ ನಾರ್ಮಲ್ ಕ್ರಮವಾಗಿಯೂ, ಅಬ್ನಾರ್ಮಲ್ ಅಕ್ರಮವಾಗಿಯೂ ತೋರುತ್ತದೆ. ಆದರೆ ಪದಗಳ ಅರ್ಥದ ಗ್ರಹಿಕೆ ಮತ್ತು ಬಳಕೆಯ ರೂಢಿ ಭಿನ್ನವಾಗಿರುವುದರಿಂದ ನಾರ್ಮಲನ್ನು ಸಹಜವೆಂದು, ಅಬ್ನಾರ್ಮಲನ್ನು ಅಸಹಜವೆಂದು ಮನೋಶಾಸ್ತ್ರೀಯವಾಗಿ ಬಳಸುವುದು ಸೂಕ್ತವಾಗಿದೆ.
ಮನುಷ್ಯನೆಂಬ ಜೀವಿಯು ಬರಿಯ ಪ್ರಾಣಿ ಮಾತ್ರವಲ್ಲದೆ ಸಾಮಾಜಿಕ ಪ್ರಾಣಿ ಅಥವಾ ಸಂಘ ಜೀವಿ ಆಗಿರುವ ಕಾರಣದಿಂದ ತನ್ನ ಸಾಮಾಜಿಕ ಜೀವನಕ್ಕೆ ಅಥವಾ ಸಂಘ ಜೀವನಕ್ಕೆ ಅನುಗುಣವಾಗಿ ಕ್ರಮವರಿತ ರೂಢಿಗೊಳಗಾಗುವುದು ಒಂದು ಅಗತ್ಯವೂ ಮತ್ತು ಆ ಕ್ರಮವನ್ನು ಒಪ್ಪಿಕೊಂಡು ನಡೆಸುತ್ತೇನೆ ಎಂಬ ಒಪ್ಪಂದವೂ ಮುಖ್ಯವಾಗುತ್ತದೆ. ಈ ಒಪ್ಪಂದದ ಪ್ರಕಾರವೇ ಹೋಗುವುದು ಮನುಷ್ಯರಾದವರಿಗೆಲ್ಲಾ ನಾರ್ಮಲ್ ಅಥವಾ ಸಹಜ.
ಮನಶಾಸ್ತ್ರೀಯವಾಗಿ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ, ಕ್ರಮವರಿತ ರೂಢಿಯು ಸಾಮಾನ್ಯ ಸ್ವಭಾವ ಎಂಬಂತೆ ಮನುಷ್ಯನ ಮನಸ್ಸಿನಲ್ಲಿ ಅಳವಡಿಕೆಯಾಗಿದ್ದರೆ ಅಥವಾ ಪ್ರೋಗ್ರಾಂ ಆಗಿದ್ದರೆ ಅದು ಸಹಜ ಮನಸ್ಸು. ಅಸಹಜ ಮನಸ್ಸು ಅಸಹಜ ವರ್ತನೆಗಳನ್ನು ತೋರುತ್ತದೆ ಮತ್ತು ಅವುಗಳನ್ನೇ ಮಾನಸಿಕ ಸಮಸ್ಯೆಗಳು ಎಂದು ಕರೆಯುವುದು.
ಉದಾಹರಣೆಗೆ ಎದುರಿಗಿನ ಯಾವುದೋ ವ್ಯಕ್ತಿಗೆ ಪೆಟ್ಟಾಗುತ್ತದೆ. ಅದರಿಂದ ನೋವಾಗುತ್ತದೆ. ನೋವುಂಟಾದ ಕಾರಣದಿಂದ ಆ ವ್ಯಕ್ತಿ ಅದರ ಪ್ರಕಟಣೆಯಾಗಿ ಅಥವಾ ಅಭಿವ್ಯಕ್ತಿಸುತ್ತಾ ಅಳುತ್ತಾನೆ. ಆ ಅಳು ನೋವಿನ ಕಾರಣದಿಂದಾದದ್ದು. ಬಯಸದೇ ಇದ್ದದ್ದು. ಅನಿರೀಕ್ಷಿತವಾಗಿ ಯಾವುದೋ ಘಟನೆ ಅಥವಾ ಪ್ರಸಂಗ ಒದಗಿ ನೋವನ್ನು ಉಂಟು ಮಾಡಿರುವುದು. ಇದನ್ನು ನೋಡುವ ಒಬ್ಬ ವ್ಯಕ್ತಿಗೆ ನೋವು ತಿಳಿದಿರುತ್ತದೆ. ಆ ನೋವಿನಿಂದ ಆಗುವ ಸಂಕಟ ತಿಳಿದಿರುತ್ತದೆ. ಹಾಗಾಗಿ ಅವರ ಶೋಕವನ್ನು ನೋಡಿ ತಾನೂ ಶೋಕಿಸುತ್ತಾನೆ ಅಥವಾ ಮರುಕ ಪಡುತ್ತಾನೆ ಅಥವಾ ದೃಢ ಮನಸ್ಕನಾಗಿ ಅವರಿಗೆ ಸಮಾಧಾನ ಹೇಳಿ ಅವರಿಗೆ ನೋವಿನಿಂದ ಹೊರಗೆ ತರಲು ಪ್ರಯತ್ನಿಸುತ್ತಾನೆ. ಇದು ನಾರ್ಮಲ್ ಅಥವಾ ಸಹಜ. ಆದರೆ ಅಳುತ್ತಿರುವ ವ್ಯಕ್ತಿಗೆ ಸಮಾಧಾನಿಸುವ ಅಥವಾ ಮರುಕಪಡುವ ಬದಲು ನಕ್ಕರೆ, ಹಾಗೇ ಆಗಲಿ ಎಂದು ಬಯಸಿದರೆ, ಇನ್ನಷ್ಟು ನೋಯಲಿ ಎಂದು ಆಶಿಸಿದರೆ ಅದು ಅಬ್ನಾರ್ಮಲ್ ಅಥವಾ ಅಸಹಜವಾಗುತ್ತದೆ. ಅದನ್ನು ಮಾನಸಿಕ ಸಮಸ್ಯೆಯಾಗಿ ಸ್ಯಾಡಿಸಂ ಅಥವಾ ಹಿಂಸಾರತಿ ಅಥವಾ ಕ್ರೌರ್ಯಾಮೋದ ಎಂದು ಕರೆಯುತ್ತೇವೆ.
ಸಂಘಜೀವಿಯಾದ ಮನುಷ್ಯ ತಾನು ಕ್ರಮವರಿತ ರೂಢಿಯನ್ನು ಅಭ್ಯಾಸ ಮಾಡುವುದಕ್ಕೆ ಒಪ್ಪಿಕೊಳ್ಳುವ ಒಪ್ಪಂದ ಅಥವಾ ಒಡಂಬಡಿಕೆಗೆ ತಾತ್ವಿಕವಾಗಿ ಬದ್ಧವಾಗುವುದಕ್ಕೆ ನೈತಿಕತೆ ಎನ್ನುವುದು. ಆಲೋಚನೆಗಳಲ್ಲಿ ಗ್ರಹಿಸಿದ ನೀತಿಯನ್ನು ವರ್ತನೆಗಳಲ್ಲಿ ಪ್ರಕಟಿಸುವುದು ಸನ್ನಡತೆ ಎಂದು ಹೇಳಲಾಗುವುದು. ಸನ್ನಡತೆ ಎಂದರೆ ಮನಶಾಸ್ತ್ರೀಯವಾಗಿ ಸಹಜ ನಡವಳಿಕೆ ಎಂದೇ ಅರ್ಥ. ನೀತಿ ಎಂಬುದು ತಾತ್ವಿಕ, ಕ್ರಮ ಎಂಬುದು ತಾಂತ್ರಿಕ ಅಥವಾ ಪ್ರಾಯೋಗಿಕ ಸ್ವರೂಪದ್ದು. ಇನ್ನು ನಡತೆ ಎಂಬುದು ನೀತಿ ಮತ್ತು ಕ್ರಮವನ್ನು ತೋರುವ ಪ್ರಕಟಣೆ.
ಪ್ರಸಂಗವೊಂದನ್ನು ಗಮನಿಸಿ. ಬಸ್ಸು ತನ್ನ ಸ್ಟಾಪಿನಲ್ಲಿ ನಿಂತಿತು. ನೀವು ಆ ಸ್ಟಾಪಿನಲ್ಲಿ ಇಳಿಯಬೇಕು. ನಿಮ್ಮ ಮುಂದೆ ನಿಂತಿರುವ ವ್ಯಕ್ತಿ ನಿಮ್ಮ ದಾರಿಗೆ ಅಡ್ಡವಾಗಿದ್ದಾರೆ. ಅವರು ಮುಂದಕ್ಕಾಗಲಿ, ಪಕ್ಕಕ್ಕಾಗಲಿ ಸರಿಯುವಂತಹ ಸೂಚನೆ ಕಾಣುವುದಿಲ್ಲ. ಹಾಗಾಗಿ ನೀವು ಸ್ವಲ್ಪ ಪಕ್ಕಕ್ಕೆ ಬನ್ನಿ ಎಂದು ಹೇಳುತ್ತೀರಿ. ಆದರೆ ಆ ವ್ಯಕ್ತಿಯು ಕೆರಳಿ ತಟ್ಟನೆ ಹಿಂದಕ್ಕೆ ತಿರುಗಿ ‘‘ತಾಳ್ರೀ, ನಾವೂ ಇಳಿತಾಯಿದ್ದೀವಿ’’ ಎಂದು ಗದರಿಸುತ್ತಾರೆ.
ಆ ವ್ಯಕ್ತಿಯು ನಿಮಗೆ ಸಂಪೂರ್ಣ ಅಪರಿಚಿತ. ಈ ಹಿಂದೆ ಯಾವುದೇ ರೀತಿಯ ಅನುಭವ ನಿಮ್ಮೊಡನೆ ಹೊಂದಿರುವುದಿಲ್ಲ. ಆದರೂ ಅವರು ನಿಮ್ಮೊಡನೆ ಒರಟಾಗಿ ನಡೆದುಕೊಂಡರು. ಒಂದು ವೇಳೆ ಈ ಹಿಂದೆ ನಿಮ್ಮಿಬ್ಬರ ನಡುವೆ ಮನಸ್ತಾಪ ಅಥವಾ ಸಂಘರ್ಷವಾಗಿದ್ದು ಈಗ ಅವರು ನಿಮ್ಮ ಜೊತೆ ಹಾಗೆ ನಡೆದುಕೊಳ್ಳುತ್ತಿದ್ದಾರೆಂದರೆ ಅವರಿಗೆ ಪೂರ್ವಾನುಭವ ಒತ್ತಡ ಹಾಗೆ ಮಾಡಲು ಪ್ರೇರೇಪಿಸಿತು ಎನ್ನಬಹುದು. ಆದರೆ ಯಾವುದೇ ನಿಮ್ಮಿಬ್ಬರ ಎದುರುಗೊಂಡಿರುವ ಚರಿತ್ರೆ ಇರದಿದ್ದರೂ ಹಾಗೆ ವರ್ತಿಸಿದರೆಂದರೆ ಅವರದ್ದು ಅಸಹಜ ವರ್ತನೆ.
ಮನಸ್ಸು ತನ್ನ ಅಸಹಜವಾದ ಸ್ವಭಾವವನ್ನು ವರ್ತನೆಗಳ ಮೂಲಕ ಪ್ರಕಟಿಸುತ್ತದೆ. ಹಾಗಾಗಿ ನಾವಿಲ್ಲಿ ಅಸಹಜ ಮನಸ್ಸಿನ ಬಗ್ಗೆ ಗಮನಿಸುತ್ತಾ ಅಸಹಜ ವರ್ತನೆಗಳ ತಿಳುವಳಿಕೆಯನ್ನೂ ಗ್ರಹಿಸಬಹುದು. ಯಾವುದೇ ಅಸಹಜವಾದ ವರ್ತನೆಗಳನ್ನು ಗಮನಿಸುವಾಗ ಅದರ ಮೂಲವನ್ನು, ಪ್ರಕಟಣೆಗಳನ್ನು, ರೂಢಿಗಳು ಕ್ರಮವಿಲ್ಲದೇ ರೂಪುಗೊಂಡಿರುವ ಬಗೆಗಳನ್ನು, ಆಲೋಚನೆಗಳನ್ನು, ಪ್ರವೃತ್ತಿಗಳನ್ನು ಮತ್ತು ಪ್ರಚೋದನೆಗಳನ್ನು ಕೂಡಾ ಅವಲೋಕಿಸಿದರೆ ವ್ಯಕ್ತಿಯ ಅಸಹಜತೆಗೆ ಕಾರಣಗಳು ತಿಳಿಯುತ್ತವೆ.
ಮನಸ್ಸು ಅಸಹಜವಾದಾಗ ಪ್ರಕಟಿಸುವ ಧಾವಂತದಲ್ಲಿ ಇರುತ್ತದೆ. ತನ್ನ ದುಮ್ಮಾನ, ಒತ್ತಡ, ಬೇಸರ; ಒಟ್ಟಾರೆ ಭಾರವಾಗಿದ್ದು ಬಾಧಿಸುತ್ತಿರುವ ವಿಷಯಗಳನ್ನು ಎಲ್ಲಿಯಾದರೂ, ಯಾರ ಮೇಲಾದರೂ ಒಗೆದು ಬಿಡೋಣ ಎಂದು ಹಾತೊರೆಯುತ್ತಿರುತ್ತದೆ. ಏಕೆಂದರೆ ಆ ಭಾರ ಅವರನ್ನು ಕುಗ್ಗಿಸುತ್ತಿರುತ್ತದೆ. ನಲುಗಿಸುತ್ತಿರುತ್ತದೆ. ಅವರ ಶಕ್ತಿಯನ್ನು ವ್ಯರ್ಥ ಮಾಡುತ್ತಿರುತ್ತದೆ ಅಥವಾ ಅದನ್ನು ಭರಿಸಲು ಶಕ್ತಿಯೇ ಸಾಕಾಗುವುದಿಲ್ಲ. ಹಾಗಾಗಿ ಎಷ್ಟು ಬೇಗ ಬಿಸಾಡೋಣ ಎಂದು ಒದ್ದಾಡುತ್ತಿರುತ್ತಾರೆ.
ಸಹಜ ಮನಸ್ಸು ನೀಡುವುದರ ಮೂಲಕ ಪಡೆಯುವ ಮಾರ್ಗವನ್ನು ಅಥವಾ ಉಪಾಯವನ್ನು ಹುಡುಕುತ್ತಿರುತ್ತದೆ.
ವ್ಯಕ್ತಿಯೊಬ್ಬನು ಮನೋಜೈವಿಕವಾಗಿ ಸಹಜ ಮನಸ್ಸನ್ನು ಹೊಂದಬೇಕಾಗಿರುವ ಸ್ವಾಭಾವಿಕ ಉದ್ದೇಶವೇನು? ಅಥವಾ ಸಹಜ ಮನಸ್ಸಿನ ಆಶಯವೇನು?
ಸಂಘಜೀವನದಲ್ಲಿ ವ್ಯಕ್ತಿ ತಾನು ಬಾಳುತ್ತಾ ಇತರರಿಗೂ ಬಾಳಗೊಡುತ್ತಾ ಇರಲು ಸಾಧ್ಯವಾಗುವಂತಹ ಕ್ರಮವನ್ನು ರೂಢಿಸಿಕೊಳ್ಳುವುದು ಸಹಜತೆ. ಈ ಸಹಜತೆಯಿಂದಾಗಿ ವ್ಯಕ್ತಿಗಳು ಒಬ್ಬರದೊಬ್ಬರ ಹಿತವಲಯದಲ್ಲಿ ಅತಿಕ್ರಮ ಪ್ರವೇಶ ಮಾಡುವುದಿಲ್ಲ. ಹಾಗೆಯೇ ಒತ್ತಡಗಳನ್ನು ಸೃಷ್ಟಿಸಿಕೊಂಡು, ಆ ಒತ್ತಡವನ್ನು ಭರಿಸಲಾಗದೇ ಸಂಘರ್ಷಕ್ಕೆ ಆಸ್ಪದ ಕೊಡುವುದಿಲ್ಲ. ಘರ್ಷಣೆಯುಂಟಾದಾಗ ಯಾರೋ ಒಬ್ಬರು ಯಾರೋ ಒಬ್ಬರ ಮೇಲೆ ಮೇಲ್ಗೈ ಸಾಧಿಸುತ್ತಾರೆ. ಒಬ್ಬರು ಸೋತರು ಮತ್ತೊಬ್ಬರು ಗೆದ್ದರು ಎಂದರೆ ಯುದ್ಧ ಮುಗಿಯಿತು ಎಂದಲ್ಲ. ಯುದ್ಧವಿರಾಮ ಘೋಷಿತವಾಗಿದೆ ಎಂದರ್ಥ. ಏಕೆಂದರೆ ಈಗ ಸೋತವರ ಮೇಲೆ ಪ್ರತೀಕಾರದ ಒತ್ತಡ ಬಲವಾಗತೊಡಗುತ್ತದೆ. ಆ ಒತ್ತಡವನ್ನು ಭರಿಸದೇ ಆ ಭಾರವನ್ನು ಕೆಡವಲೇ ಬೇಕು. ಅದು ಮತ್ತೆ ಮುಂದೆ ಸಂಭವಿಸುವ ಸಂಘರ್ಷಕ್ಕಾಗಿ ಕಾಯುತ್ತದೆ ಮತ್ತು ಘರ್ಷಣೆಯನ್ನು ಮುಂದುವರಿಸುತ್ತದೆ. ಹೀಗೆ ಒಬ್ಬರದೊಬ್ಬರ ಹಿತವಲಯದಲ್ಲಿ (ಕಂಫರ್ಟ್ ಜೋನ್) ಅತಿಕ್ರಮ ಪ್ರವೇಶ ಮಾಡುವ, ದಾಳಿ ಮಾಡುವ ಕೆಲಸಗಳಿಂದಾಗಿ ಯುದ್ಧ ಮುಂದುವರಿಯುತ್ತದೆ.
ಒಟ್ಟಾರೆ ಈ ಪ್ರಕೃತಿಯಲ್ಲಿ ಒಂದು ಜೀವಿಯ ಸ್ವಾಭಾವಿಕ ಉದ್ದೇಶ ಏನೆಂದರೆ, ಅದರಲ್ಲೂ ಸಂಘಜೀವಿಯಾದ ಮನುಷ್ಯನ ಮನಸ್ಸಿನ ಸಹಜ ಉದ್ದೇಶವೇನಿರುತ್ತದೆ ಎಂದರೆ, ಪರಸ್ಪರ ಹಿತವನ್ನು ಕೊಡುಕೊಳ್ಳುವಿಕೆಯ ಒಡಂಬಡಿಕೆಗೆ ಬದ್ಧವಾಗಿರುವುದು. ಪರಸ್ಪರರ ಹಿತವಲಯದಲ್ಲಿ ಅತಿಕ್ರಮ ಪ್ರವೇಶ ಮಾಡದೆ ಆನಂದ ಮತ್ತು ಮನೋಬಲ ನೀಡುವ, ಒತ್ತಡಗಳನ್ನು ಇಳಿಸುವುದೇ ಮೊದಲಾದ ಸಹಕಾರದ ಭಾವನೆಗಳಿಗೆ ಅವಕಾಶವನ್ನು ಕಲ್ಪಿಸಿಕೊಳ್ಳುವ ಬಯಕೆ. ಈ ಬಯಕೆಯು ಅನೈಚ್ಛಿಕವಾಗಿರುವಷ್ಟು ರೂಢಿಗೆ ಒಳಗಾಗಿರುವುದು. ನಾನೂ ಬಾಳ ಬೇಕು, ಇತರರಿಗೆ ಬಾಳಗೊಡಬೇಕು ಎಂಬ ತಾತ್ವಿಕ ಬದ್ಧತೆಯೇ ಸಹಜ ಮನಸ್ಸಿನ ಸ್ವಾಭಾವಿಕ ಉದ್ದೇಶ.