ತಳ ಸಮುದಾಯದ ಕೊಂಕಣಿ ಭಾಷಿಗರ ಕಡೆಗಣನೆ; ಕೊಂಕಣಿಯ 40 ಸಮುದಾಯಗಳಿಗೆ ಅಕಾಡಮಿಯಲ್ಲಿ ಸಿಗದ ಪ್ರಾತಿನಿಧ್ಯ
ಕೆಥೊಲಿಕ್ ಕ್ರೈಸ್ತ, ಜಿಎಸ್‌ಬಿ ಸಮುದಾಯದ್ದೇ ಪ್ರಾಬಲ್ಯ
ಮಂಗಳೂರು, ನ.6: ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಅಭಿವೃದ್ಧಿ ನಿಟ್ಟಿನಲ್ಲಿ 1994ರಲ್ಲಿ ಸ್ಥಾಪನೆಗೊಂಡಿದ್ದ ‘ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ’ಯಲ್ಲಿ ಕೆಥೊಲಿಕ್ ಕ್ರೈಸ್ತ ಮತ್ತು ಜಿಎಸ್‌ಬಿ ಸಮುದಾಯದ್ದೇ ಪ್ರಾಬಲ್ಯವಿದೆ. ಕೊಂಕಣಿ ಮನೆಮಾತಿನ ಇತರ 40 ಸಮುದಾಯಗಳಿಗೆ ಅಕಾಡಮಿಯಲ್ಲಿ ಪ್ರಾತಿನಿಧ್ಯವಿಲ್ಲ. ಅದರಲ್ಲೂ ತಳ ಸಮುದಾಯದ ಕೊಂಕಣಿ ಭಾಷಿಗರನ್ನು ಅಕಾಡಮಿಯ ಅಧ್ಯಕ್ಷ/ಸದಸ್ಯರ ನೇಮಕಾತಿಯ ಸಂದರ್ಭ ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಅಧಿಕಾರ, ಅನುದಾನ ಹಂಚಿಕೆ ಸಂದರ್ಭ ಎಲ್ಲಾ ಭಾಷೆ, ಸಮುದಾಯವನ್ನೂ ಸಮಾನವಾಗಿ ಕಾಣಲಾಗುವುದು ಎಂದು ಭರವಸೆ ನೀಡುತ್ತಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ-ಸದಸ್ಯರ ನೇಮಕದ ಸಂದರ್ಭ ಅವಕಾಶ ವಂಚಿತ ಸಮುದಾಯವನ್ನು ಪರಿಗಣಿಸಬೇಕು ಎಂಬ ಆಗ್ರಹವೂ ಕೇಳಿ ಬಂದಿದೆ.
ಕೊಂಕಣಿ ಸಾಹಿತ್ಯ ಅಕಾಡಮಿ ಸ್ಥಾಪನೆಗೊಂಡು (1994ರ ಎಪ್ರಿಲ್ 21) ಮೂವತ್ತು ವರ್ಷಗಳಾಗುತ್ತಾ ಬಂದಿವೆ. ಈವರೆಗೆ ಅಕಾಡಮಿಗೆ 10 ಅಧ್ಯಕ್ಷರನ್ನು ಸರಕಾರ ನೇಮಕ ಮಾಡಿದೆ. ಈ ಪೈಕಿ ಕೆಥೊಲಿಕ್ ಕ್ರೈಸ್ತ ಮತ್ತು ಜಿಎಸ್‌ಬಿ ಸಮುದಾಯದ ತಲಾ 4 ಮಂದಿ ಅಧ್ಯಕ್ಷರಾಗಿದ್ದಾರೆ. ಇವರೆಲ್ಲರೂ ದ.ಕ., ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಒಮ್ಮೆ ಉಡುಪಿ ಜಿಲ್ಲೆಯ ಕುಂದಾಪುರದ ‘ಖಾರ್ವಿ’ ಸಮುದಾಯ ಮತ್ತು ಇನ್ನೊಮ್ಮೆ ಉತ್ತರ ಕನ್ನಡ ಜಿಲ್ಲೆಯ ಕೋಮಾರಪಂಥ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಉಳಿದ ಸಮುದಾಯಗಳು ಅವಕಾಶ ವಂಚಿತವಾಗಿವೆ. ಈವರೆಗೆ ನೇಮಕಗೊಂಡ 10 ಮಂದಿ ಅಧ್ಯಕ್ಷರೂ ಕೂಡ ಪುರುಷರೇ ಆಗಿರುವುದು ವಿಶೇಷ. ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರನ್ನು ಪರಿಗಣಿಸಲೇ ಇಲ್ಲ ಎಂಬ ಮಾತು ವ್ಯಕ್ತವಾಗಿದೆ.
ರಾಜ್ಯ ಸರಕಾರವು ಕೊಂಕಣಿ ಮಾತೃಭಾಷೆಯ 42 ಸಮುದಾಯಗಳನ್ನು ಗುರುತಿಸಿದೆ. ಆದರೆ ಕೆಥೊಲಿಕ್ ಕ್ರೈಸ್ತ ಮತ್ತು ಜಿಎಸ್‌ಬಿ ಸಮುದಾಯದವರಿಗೆ ಮಾತ್ರ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಕೇವಲ ಕೆಥೊಲಿಕ್ ಕ್ರೈಸ್ತ ಮತ್ತು ಜಿಎಸ್‌ಬಿ ಸಮುದಾಯದ ಕೊಂಕಣಿಗರು ಮಾತ್ರ ಕೊಡುಗೆ ನೀಡಿದ್ದಲ್ಲ. ಇತರ 40 ಸಮುದಾಯಗಳು ಕೂಡ ‘ಕೊಂಕಣಿ’ಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿವೆ. ಆದರೆ ಅಕಾಡಮಿಯ ನೇಮಕಾತಿ ಸಂದರ್ಭ ಈ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿವೆ ಎಂಬ ಆರೋಪ ಕೇಳಿ ಬಂದಿವೆ.
ಈವರೆಗೆ ಅಧ್ಯಕ್ಷರಾದವರು
1. ಡಾ.ವಿಜೆಪಿ ಸಲ್ದಾನ (ಮಂಗಳೂರು)
2. ಬಿ.ವಿ.ಬಾಳಿಗಾ (ಮಂಗಳೂರು)
3. ಬಸ್ತಿ ವಾಮನ ಶೆಣೈ (ಬಂಟ್ವಾಳ)
4. ಅಲೆಗ್ಸಾಂಡರ್ ಎಫ್. ಡಿಸೋಜ (ಮಂಗಳೂರು)
5. ಎರಿಕ್ ಒಝಾರಿಯೊ (ಮಂಗಳೂರು)
6. ಕುಂದಾಪುರ ನಾರಾಯಣ ಖಾರ್ವಿ (ಕುಂದಾಪುರ)
7. ಕಾಸರಗೋಡು ಚಿನ್ನಾ (ಕಾಸರಗೋಡು)
8. ರೊನಾಲ್ಡ್ ಎಸ್. ಕ್ಯಾಸ್ಟಲಿನೊ (ಮಂಗಳೂರು)
9. ಆರ್.ಪಿ.ನಾಯ್ಕ (ಉತ್ತರ ಕನ್ನಡ)
10. ಡಾ.ಕೆ.ಜಗದೀಶ್ ಪೈ (ಕಾರ್ಕಳ)
ನವಾಯತ್ ಭಾಷೆಗೆ ಪ್ರತ್ಯೇಕ ಅಕಾಡಮಿಯ ಬೇಡಿಕೆ
ನವಾಯತ್ ಸಮುದಾಯದ ಜನರು ಸುಮಾರು ಒಂದು ಸಾವಿರ ವರ್ಷಗಳಿಂದ ನವಾಯತ್ ಭಾಷೆಯನ್ನು ಮಾತ ನಾಡುತ್ತಾರೆ. ಈ ಭಾಷೆಯು ಸಾಂಸ್ಕೃತಿಕ ಪರಂಪರೆಯಲ್ಲಿ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಅಲ್ಲದೆ ಇತರ ಯಾವುದೇ ಭಾಷೆ ಅಥವಾ ಸಾಂಸ್ಕೃತಿಕ ಸಂದರ್ಭದಲ್ಲಿ ನವಾವತ್ ಭಾಷೆಯನ್ನು ಸಂಯೋಜಿಸಲು ಸಾಧ್ಯವಿಲ್ಲ. ಹಾಗಾಗಿ ಕೊಂಕಣಿ ಅಕಾಡಮಿಯಲ್ಲಿ ನವಾಯತ್ ಭಾಷಿಗರಿಗೆ ಪ್ರಾತಿನಿಧ್ಯ ಕಲ್ಪಿಸುವ ಬದಲು ನವಾಯತ್ ಭಾಷೆಗೆ ಪ್ರತ್ಯೇಕ ಅಕಾಡಮಿಯನ್ನು ಸ್ಥಾಪಿಸಬೇಕಿದೆ ಎಂಬ ಕೂಗು ಕೇಳಿ ಬರತೊಡಗಿದೆ.
23 ವರ್ಷಗಳ ಹಿಂದೆ ನವಾಯತ್ ಭಾಷೆ, ಜೀವನಶೈಲಿ, ಸಾಂಸ್ಕೃತಿಕ ಗುರುತನ್ನು ರಕ್ಷಿಸುವ ಮತ್ತು ಪ್ರಚಾರ ಮಾಡುವ ಉದ್ದೇಶದಿಂದ ‘ನವಾಯತ್ ಮೆಹಫಿಲ್’ ಸ್ಥಾಪಿಸಲಾಯಿತು. ಮುಂದಿನ ಪೀಳಿಗೆಗೆ ನವಾಯತ ಸಂಸ್ಕೃತಿಯನ್ನು ಪರಿಚಯಿಸುವ ಅಗತ್ಯವಿದೆ. ಅಲ್ಲದೆ ಸ್ವತಂತ್ರ ಭಾಷೆಯ ಅಸ್ಮಿತೆಯು ನವಾಯತ್ ಭಾಷೆಗೆ ಇದೆ. ಕಳೆದ 30 ವರ್ಷ ದಿಂದ ನವಾಯತ್ ಅಕಾಡಮಿಯ ಸ್ಥಾಪನೆಗಾಗಿ ಪ್ರಯತ್ನ ನಡೆಯುತ್ತಲೇ ಇದೆ. ನವಾಯತ್ ಭಾಷೆಯನ್ನು ಯಾವ ಕಾರಣಕ್ಕೂ ಇತರ ಭಾಷೆ ಯೊಂದಿಗೆ ವಿಲೀನಗೊಳಿಸಬಾರದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಕೊಂಕಣಿ ಮಾತನಾಡುವ ಕರ್ನಾಟಕದ 42 ಸಮುದಾಯಗಳು
1.ಗೌಡ ಸಾರಸ್ವತ ಬ್ರಾಹ್ಮಣ(ಜಿಎಸ್‌ಬಿ), 2.ದೈವಜ್ಞ ಬ್ರಾಹ್ಮಣ, 3.ರಾಜಾಪುರ ಸಾರಸ್ವತ ಬ್ರಾಹ್ಮಣ(ಆರ್‌ಎಸ್‌ಬಿ), 4.ಕ್ರೈಸ್ತ-ಕೆಥೊಲಿಕ್, 5.ಚಾರೋಡಿ ಕ್ರೈಸ್ತರು, 6.ಸಿರಿಯನ್ ಕ್ರೈಸ್ತರು, 7.ಕುಡುಬಿ, 8.ಖಾರ್ವಿ, 9.ಸಿದ್ದಿ-ಕ್ರೈಸ್ತ, 10.ಸಿದ್ದಿ ಮುಸ್ಲಿಮ್, 11.ಸಿದ್ದಿ-ಹಿಂದೂ, 12.ನವಾಯತ್, 13.ದಾಲ್ದಿ, 14.ಮೇಸ್ತ, 15.ಆಚಾರಿ, 16.ಭಂಡಾರಿ, 17.ಕುಂಬಾರ್, 18.ವ್ಹಾಜಂತ್ರಿ, 19.ಮಾಡಕಾರ ಭಂಡಾರಿ(ರೆಂದೆರ್), 20.ವೈಶ್ಯವಾಣಿಯ, 22.ಗೋಮಾಂತಕ(ದೇವಳಿ), 23.ಗೋಮಾಂತಕ್(ಕಲಾವಂತ), 24.ಚಿತ್ರಾಪುರ ಸಾರಸ್ವತ ಬ್ರಾಹ್ಮಣ, 25.ಪಡ್ತಿ, 26.ಮಡಿವಾಳ್, 27.ಕೋಮಾರ್, 28.ಗೋವ್ಳಿ, 29.ಕೆಲ್ಶಿ ನಾಪಿತ, 30.ಗಾಬಿತ್, 31.ಚೆಪ್ಟೇಕರ್ ಸಾರಸ್ವತ್, 32.ಚಿತ್ಪವನ್ ಬ್ರಾಹ್ಮಣ್, 33.ಗುಡಿಗಾರ್, 34. ಮ್ಹಾರ್‌ಯಾ ಅಂಬೇಡ್ಕರಾಯ್ಟ್, 35.ಮರಾಠ, 36.ಜಮಾಯತಿ, 37.ಗಾವಡೆ, 38.ಚಾಂಬಾರ, 39.ಗೋಸಾವಿ, 40.ಶೇರುಗಾರ್, 41.ಕುಡಾಲ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ, 42. ಬಾಲಾವಳಿಕರ್ ಸಾರಸ್ವತ್ ಬ್ರಾಹ್ಮಣ
ಹೊಸದಿಲ್ಲಿಯ ತಂಡವೊಂದು ಭಟ್ಕಳಕ್ಕೆ ಭೇಟಿ ನೀಡಿ ನವಾಯತ್ ಭಾಷೆಯ ಲಿಪಿ ಮತ್ತು ಭಾಷಾ ಸೂಕ್ಷತೆಗಳನ್ನು ಪರಿಶೀಲಿಸುತ್ತಿದೆ. ನವಾಯತ್ ಭಾಷೆಯು ಕೇವಲ ಭಟ್ಕಳಕ್ಕೆ ಸೀಮಿತವಾಗಿಲ್ಲ. ಇದು ದೇಶಾದ್ಯಂತ ವಿವಿಧೆಡೆ ಪ್ರವರ್ಧಮಾನಕ್ಕೆ ಬರುತ್ತಿದೆ. ಆದ್ದರಿಂದ, ಈ ಭಾಷೆಯ ನಿರಂತರ ಅಭಿವೃದ್ಧಿ ಮತ್ತು ಏಳಿಗೆಗೆ ಸ್ವತಂತ್ರ ಅಕಾಡಮಿಯ ಸ್ಥಾಪನೆ ಅತ್ಯಗತ್ಯ. ಕರ್ನಾಟಕ ಸರಕಾರವು ಇದಕ್ಕೆ ಪೂರಕ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ.
- ಅತೀಕುರ್ರಹ್ಮಾನ್ ಶಾಬಂದ್ರಿ,
ಸಂಸ್ಥಾಪಕ ಹಾಗೂ ಪ್ರಧಾನ ಕಾರ್ಯದರ್ಶಿ
ನವಾಯತ್ ಮೆಹಫಿಲ್ ಭಟ್ಕಳ
ಅಕಾಡಮಿಯಲ್ಲಿ ಕೆಥೊಲಿಕ್ ಕ್ರೈಸ್ತರು ಮತ್ತು ಜಿಎಸ್‌ಬಿ ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚು ಪ್ರಾತಿನಿಧ್ಯ ಸಿಕ್ಕಿರುವುದು ಅಕ್ಷರಶಃ ಸತ್ಯ. ಬಿಜೆಪಿ ಸರಕಾರ ಬಂದಾಗ ಜಿಎಸ್‌ಬಿಗೂ, ಕಾಂಗ್ರೆಸ್ ಸರಕಾರ ಬಂದಾಗ ಕೆಥೊಲಿಕ್ ಕ್ರೈಸ್ತರಿಗೂ ಹೆಚ್ಚಿನ ಮನ್ನಣೆ ಸಿಗುತ್ತದೆ. ಉಳಿದ 40 ಸಮುದಾಯ ಗಳಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ. ಒಮ್ಮೆ ಮಾತ್ರ ಸಣ್ಣ ಸಮುದಾಯಕ್ಕೆ (ಆರ್‌ಪಿ ನಾಯ್ಕ) ಅವಕಾಶ ಸಿಕ್ಕಿದೆ. ಇತರ ಸಮುದಾಯಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಮರ್ಥರಿಲ್ಲ ಎಂಬ ಆರೋಪವಿದೆ. ಮೊದಲು ಆ ಸಮುದಾಯದವರನ್ನು ಸದಸ್ಯ ಸ್ಥಾನಕ್ಕೆ ನೇಮಕಗೊಳಿಸಿ ಆ ಬಳಿಕ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬಹುದು. ಹೀಗೆ ಮಾಡಿದರೆ ಮಾತ್ರ ಸಾಮಾಜಿಕ ನ್ಯಾಯ ಕಲ್ಪಿಸಿದಂತಾಗುತ್ತದೆ. ಇಲ್ಲದಿದ್ದರೆ ಪ್ರಬಲ ಸಮುದಾಯ ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವವರು ಅಧ್ಯಕ್ಷ ಸ್ಥಾನದಲ್ಲಿ ರಾರಾಜಿಸುತ್ತಾರೆ. ಇದಕ್ಕೆ ಈ ಬಾರಿಯಾದರೂ ಕಡಿವಾಣ ಹಾಕಬೇಕು.
| ಕಲ್ಲಚ್ಚು ಮಹೇಶ್ ಆರ್. ನಾಯಕ್,
ಮಂಗಳೂರು
ಕೆಲವು ಮಂದಿ ಎರಡ್ಮೂರು ಬಾರಿ ಸದಸ್ಯ ಮತ್ತು ಅಧ್ಯಕ್ಷರಾದ ಬಳಿಕವೂ ಸದಸ್ಯರಾದ ಉದಾಹರಣೆಯೂ ಇದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ನಿಯಮಾವಳಿಯನ್ನು ಮೀರಿ ಕೊಂಕಣಿ ಅಕಾಡಮಿಗೆ ನೇಮಕಾತಿ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಕುಡುಬಿ, ಮೇಸ್ತ, ಸಿದ್ದಿ (ಎಸ್ಟಿ), ಮಹರ್ (ಎಸ್ಸಿ) ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಬಾರಿ ಅವಕಾಶ ಕಲ್ಪಿಸಬೇಕು.
- ಅರವಿಂದ್ ಶ್ಯಾನ್‌ಭಾಗ್, ಕುಮಟಾ
ಅಂದಾಜು 21 ಸಾವಿರ ಜನಸಂಖ್ಯೆಯಿರುವ ‘ದಾಲ್ದಿ’ ಸಮುದಾಯವನ್ನು ಕೊಂಕಣಿ ಸಾಹಿತ್ಯ ಅಕಾಡಮಿಯ ನೇಮಕಾತಿ ಸಂದರ್ಭ ನಿರ್ಲಕ್ಷಿಸಲಾಗುತ್ತದೆ. ಈವರೆಗೆ ‘ದಾಲ್ದಿ’ ಸಮುದಾಯದ ಒಬ್ಬರಿಗೆ ಮಾತ್ರ ಅಕಾಡಮಿಯ ಸದಸ್ಯತ್ವ ಸಿಕ್ಕಿದೆ. ಇದು ಸರಿಯಲ್ಲ. ಕೊಂಕಣಿ ಭಾಷೆ, ಸಾಹಿತ್ಯದ ಅಭಿವೃದ್ಧಿಗೆ ‘ದಾಲ್ದಿ’ ಸಮುದಾಯದ ಕೊಡುಗೆಯೂ ಇದೆ. ಹಾಗಾಗಿ ನಮಗೂ ಸೂಕ್ತ ಪ್ರಾತಿನಿಧ್ಯ ಸಿಗಬೇಕು.
- ಮಾಮ್ದು ಇಬ್ರಾಹೀಂ ಸುಲೈಮಾನ್, ಶಿರೂರು, ಲೇಖಕ-ನಿವೃತ್ತ ಶಿಕ್ಷಕ
ರಾಜ್ಯದಲ್ಲಿ ಕೊಂಕಣಿ ಭಾಷೆಯನ್ನು ಮಾತನಾಡುವ ಸುಮಾರು 1 ಲಕ್ಷ ಪರಿಶಿಷ್ಟ ಜಾತಿ ಸಮುದಾಯದವರಿದ್ದಾರೆ. ಆದರೆ ಅಕಾಡಮಿಯ ಅಧ್ಯಕ್ಷ-ಸದಸ್ಯರ ನೇಮಕದ ಸಂದರ್ಭ ನಮಗೆ ಯಾವುದೇ ಅವಕಾಶ ಸಿಕ್ಕಿಲ್ಲ. ಪ್ರಬಲ ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವವರು ಸರಕಾರದ ಮೇಲೆ ಒತ್ತಡ ಹಾಕಿ ಅಕಾಡಮಿಯಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುತ್ತಿದ್ದಾರೆ.
- ವಿನಾಯಕ ನಾಯ್ಕ್, ಶಿರಸಿ,
ಕಾರ್ಯಕ್ರಮ ಸಂಘಟಕ