‘ಎನ್ಇಪಿ 2020’ ಮತ್ತು ಕರ್ನಾಟಕ ಉನ್ನತ ಶಿಕ್ಷಣ: ಎರಡು ವರ್ಷಗಳ ನಂತರ...
“ಎನ್ಇಪಿ ಶಿಕ್ಷಣ ಕ್ರಮದಿಂದಾಗಿ ಕಡಿಮೆ ಸಂಖ್ಯೆಯಿರುವ ಮತ್ತು ಕೆಲವೇ ವಿಷಯಗಳನ್ನು ಬೋಧಿಸುವ ಗ್ರಾಮೀಣ ಭಾಗದ ಕಾಲೇಜುಗಳ ಅಸ್ತಿತ್ವದ ಪ್ರಶ್ನೆಯನ್ನು ಹುಟ್ಟು ಹಾಕಿದೆ. ವಿದ್ಯಾರ್ಥಿಗಳು ತಮಗೆ ಇಷ್ಟವಾಗುವ ವಿಷಯಗಳನ್ನು ಅಭ್ಯಸಿಸಲು ಎನ್ಇಪಿ ಶಿಕ್ಷಣ ಕ್ರಮದಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಹೆಚ್ಚಿನ ಆಯ್ಕೆಗಳು ದೊರೆಯದೆ ವಿದ್ಯಾರ್ಥಿಗಳಿಗೆ ತಮ್ಮಿಷ್ಟದ ವಿಷಯಗಳನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಇದು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಹೋಬಳಿ ಮಟ್ಟದ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸೇರುವ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ.
✍️ ವಸಂತ್ ಮೈಸೂರು
ಕರ್ನಾಟಕ 2021ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಉನ್ನತ ಶಿಕ್ಷಣ ವಲಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಪದವಿ ಶಿಕ್ಷಣವನ್ನು ಪರಿಚಯಿಸಿತು. ಇದರಿಂದ ದೇಶದಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಶಸ್ವಿಯಾಗಿ ಪರಿಚಯಿಸಿದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕೂಡ ಕರ್ನಾಟಕ ಪಾತ್ರವಾಯಿತು. ಕಳೆದ ಎರಡು ವರ್ಷಗಳಿಂದ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಪದವಿ ಕಾಲೇಜುಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪ್ರವೇಶಾತಿ, ಪಠ್ಯಕ್ರಮ, ಪಾಠ-ಪ್ರವಚನಗಳು ನಡೆಯುತ್ತಿವೆ. ಈ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲೂ ಕೂಡ ಎನ್ ಇಪಿ ಶಿಕ್ಷಣ ಕ್ರಮವನ್ನು ಪರಿಚಯಿಸಲು ಸಿದ್ಧತೆಗಳು ನಡೆಸಲಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಎನ್ ಇಪಿ-2020ರ ಸಾಧಕ ಭಾದಕಗಳ ಚರ್ಚೆ ಈಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎನ್ಇಪಿ ಶಿಕ್ಷಣ ಕ್ರಮವನ್ನು ರದ್ದುಪಡಿಸಿ ಹೊಸ ರಾಜ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುವುದು ಎನ್ನುವ ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಅದರಂತೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಂದ ಅಧಿಕಾರಕ್ಕೆ ಬಂದಿದ್ದು ಮಾನ್ಯ ಡಾ. ಎಂ.ಸಿ. ಸುಧಾಕರ್ರವರು ಈ ಸರಕಾರದ ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಾನ್ಯ ಉನ್ನತ ಶಿಕ್ಷಣ ಸಚಿವರು ಅಧಿಕಾರ ವಹಿಸಿಕೊಂಡ ತಕ್ಷಣ ಎನ್ಇಪಿ-2020ರ ಕುರಿತಾಗಿ ರಾಜ್ಯದ ವಿಶ್ವವಿದ್ಯಾನಿಲಯಗಳ ಉಪ-ಕುಲಪತಿಗಳ ಸಭೆಯನ್ನು ನಡೆಸಿ ಅವರ ಜೊತೆ ಇದರ ಸಾಧಕ ಬಾಧಕಗಳನ್ನು ಚರ್ಚಿಸಿದ್ದಾರೆ.
ಬಹುಮುಖ್ಯವಾಗಿ ಮಾನ್ಯ ಉನ್ನತ ಶಿಕ್ಷಣ ಸಚಿವರು ಗಮನಿಸಬೇಕಾದ ಸಂಗತಿ ಎಂದರೆ ರಾಜ್ಯದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಎನ್ಇಪಿಯನ್ನು ತರಾತುರಿಯಲ್ಲಿ ಜಾರಿಗೊಳಿಸುವ ಸಂದರ್ಭದಲ್ಲಿ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಾಗಿ ಯಾವುದೇ ಗಂಭೀರ ಚರ್ಚೆ, ಸಂವಾದಗಳು ನಡೆಯಲಿಲ್ಲ ಎನ್ನುವುದು. ಕೋವಿಡ್ನಿಂದಾಗಿ ಚೇತರಿಸಿ ಕೊಳ್ಳುತ್ತಿದ್ದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ 2021ರಲ್ಲಿ ರಾಜ್ಯ ಸರಕಾರದ ನಿರ್ಧಾರದಂತೆ ಎನ್ಇಪಿಯನ್ನು ಜಾರಿಗೊಳಿಸಲಾಯಿತು. ಅದರಂತೆ ವಿಶ್ವವಿದ್ಯಾನಿಲಯಗಳು ಯಾವುದೇ ಚರ್ಚೆಗಳಿಲ್ಲದೇ ಅವುಗಳನ್ನು ತಮ್ಮ ಸಂಸ್ಥೆಗಳಲ್ಲಿ ಮತ್ತು ಸಂಯೋಜಿತ ಕಾಲೇಜಗಳಲ್ಲಿ ಜಾರಿಗೊಳಿಸಿದವು. ಇದ್ದರಿಂದಾಗಿ ವಿಶ್ವವಿದ್ಯಾನಿಲಯದ ಉಪ-ಕುಲಪತಿಗಳು ಈ ನೀತಿಯ ಒಳ-ಹೊರವುಗಳ ಬಗ್ಗೆ ಸೂಕ್ತ ಮಾಹಿತಿಗಳನ್ನು ಉನ್ನತ ಶಿಕ್ಷಣ ಸಚಿವರಿಗೆ ನೀಡುತ್ತಾರೆ ಎನ್ನುವ ಭರವಸೆಯ ಬಗ್ಗೆ ಅನುಮಾನವಿದೆ. ಎನ್ಇಪಿಯನ್ನು ಜಾರಿಗೊಳಿಸಲು ತೀರ ಉತ್ಸಾಹ ತೋರಿದ ರಾಜ್ಯ ಸರಕಾರ ರಾಜ್ಯದಲ್ಲಿ ಇದರ ಯಶಸ್ವಿ ಜಾರಿಗೆ ಬೇಕಾದ ಮೂಲ ಸೌಕರ್ಯ ಮತ್ತು ಮಾನವ ಸಂಪನ್ಮೂಲ ನಮ್ಮ ವಿವಿಗಳಲ್ಲಿ ಮತ್ತು ಕಾಲೇಜುಗಳಲ್ಲಿ ಇವೆಯೇ ಎನ್ನವುದನ್ನು ಕಡೆಗಣಿಸಿತ್ತು.
ಎನ್ಇಪಿ ಶಿಕ್ಷಣ ಕ್ರಮದಂತೆ ನಮ್ಮ ಕಾಲೇಜುಗಳು ನಾಲ್ಕು ವರ್ಷದ ಪದವಿ ನೀಡಲು ಇಂದು ಕೂಡ ಸಜ್ಜಾಗಿಲ್ಲ. ಮೂರು ವರ್ಷ ಪದವಿ ಪೂರೈಸಿದ ವಿದ್ಯಾರ್ಥಿಗಳು ನಾಲ್ಕನೇ ವರ್ಷದ ಪದವಿಗೆ ಯಾವ ಕಾಲೇಜು ಸೇರ ಬೇಕು ಅದಕ್ಕೆ ಸೂಕ್ತ ವ್ಯವಸ್ಥೆ ಇದೆಯೇ ಎನ್ನುವ ಗೊಂದಲದಲ್ಲಿದ್ದಾರೆ. ರಾಜ್ಯದಲ್ಲಿ ಎರಡು ವರ್ಷ ಪೂರೈಸಿರುವ ಎನ್ಇಪಿ ಆಧಾರಿತ ಹೊಸ ಶಿಕ್ಷಣ ಕ್ರಮದಲ್ಲಿ ಮೊದಲ ವರ್ಷ ಪೂರೈಸಿ (ನಿಗದಿತ ಕ್ರೆಡಿಟ್ ಪಡೆದು) ಸರ್ಟಿಫಿಕೇಟ್ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು? ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮಗೆ ಪದವಿಯನ್ನು ಮುಗಿಸಲು ಅನುಕೂಲವಾಗುವ ಕಾಲೇಜಿಗೆ ಸೇರುವುದು ವಾಡಿಕೆ. ಅದರೆ ಈಗ ತಾವು ತಮ್ಮ ಸಂಪೂರ್ಣ ಪದವಿಯನ್ನು ಅಂದರೆ ನಾಲ್ಕು ವರ್ಷದ ಪದವಿ (ಆನರ್ಸ್) ಮುಗಿಸಲು ಮೂರು ವರ್ಷ ಒಂದು ಕಾಲೇಜು ಮತ್ತು ನಾಲ್ಕನೇ ವರ್ಷಕ್ಕೆ ಮತ್ತೊಂದು ಕಾಲೇಜನ್ನು ಸೇರುವುದು ಬಹುತೇಕ ವಿದ್ಯಾರ್ಥಿಗಳಿಗೆ ದುಸ್ತರವಾಗುತ್ತದೆ.
ಎನ್ಇಪಿ ಶಿಕ್ಷಣ ಕ್ರಮದಿಂದಾಗಿ ಕಡಿಮೆ ಸಂಖ್ಯೆಯಿರುವ ಮತ್ತು ಕೆಲವೇ ವಿಷಯಗಳನ್ನು ಬೋಧಿಸುವ ಗ್ರಾಮೀಣ ಭಾಗದ ಕಾಲೇಜುಗಳ ಅಸ್ತಿತ್ವದ ಪ್ರಶ್ನೆಯನ್ನು ಹುಟ್ಟು ಹಾಕಿದೆ. ವಿದ್ಯಾರ್ಥಿಗಳು ತಮಗೆ ಇಷ್ಟವಾಗುವ ವಿಷಯಗಳನ್ನು ಅಭ್ಯಸಿಸಲು ಎನ್ಇಪಿ ಶಿಕ್ಷಣ ಕ್ರಮದಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಹೆಚ್ಚಿನ ಆಯ್ಕೆಗಳು ದೊರೆಯದೆ ವಿದ್ಯಾರ್ಥಿಗಳಿಗೆ ತಮ್ಮಿಷ್ಟದ ವಿಷಯಗಳನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಇದು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಹೋಬಳಿ ಮಟ್ಟದ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸೇರುವ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ.
ಎನ್ಇಪಿ ಶಿಕ್ಷಣದಿಂದಾಗಿ ಹೊಸ ಪಠ್ಯಕ್ರಮವನ್ನು ಅನುಸರಿಸಲಾಗುತ್ತಿದ್ದು ವಿದ್ಯಾರ್ಥಿಗಳಿಗೆ Discipline Core (DSC), Discipline Electives (DSE) Ability enhancement Compulsory courses (AECC), skill enhancement courses (SEC)
ಎನ್ನುವ ವಿವಿಧ ಮಾದರಿಯ ಪಠ್ಯಕ್ರಮಗಳನ್ನು ಅಳವಡಿಸಲಾಗಿದೆ. SEC ಯಡಿಯಲ್ಲಿ ಡಿಜಿಟಲ್ ಫ್ಲ್ಯೂಯನ್ಸಿ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪತ್ರಿಕೆಗಳನ್ನು ಪರಿಚಯಿಸಲಾಗಿದೆ. ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಕಲಿಕೆ ತೀರ ಅತ್ಯವಶ್ಯಕ ಅದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮ ಕಾಲೇಜುಗಳಲ್ಲಿ ಎಷ್ಟು ಜನ ಕಂಪ್ಯೂಟರ್ ಶಿಕ್ಷಕರಿದ್ದಾರೆ. ಬಹುತೇಕ ಕಾಲೇಜುಗಳಲ್ಲಿ ಈ ವಿಷಯಗಳನ್ನು ಬೋಧಿಸಲು ಅಧ್ಯಾಪಕರಿಲ್ಲ. ಈ ವಿಷಯಗಳನ್ನು ವಾಣಿಜ್ಯ ಶಾಸ್ತ್ರದ ಉಪನ್ಯಾಸಕರು ಬೋಧಿಸುತ್ತಿದ್ದಾರೆ. ಅವರಿಗೆ ಮಿಷನ್ ಲರ್ನಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಡೇಟಾ ಅನಾಲಿಟಿಕ್ಸ್ ಈ ವಿಷಯಗಳ ಬಗ್ಗೆ ಹೆಚ್ಚಿನ ತಜ್ಞತೆ ಇಲ್ಲ.
ಮುಖ್ಯವಾಗಿ Discipline Core (DSC) ಮತ್ತು Discipline Electives (DSE) ಹೊರತುಪಡಿಸಿ AECC ಮತ್ತು SEC ಪಠ್ಯಗಳನ್ನು ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ತಯಾರಿಸಿದೆ. ವಿಶ್ವವಿದ್ಯಾನಿಲಯಗಳು ತಮ್ಮ ಹಂತದಲ್ಲಿ ತಯಾರಿಸುತ್ತಿದ್ದ ಪಠ್ಯಗಳನ್ನು ಬಿಟ್ಟು ಈಗ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ತಯಾರಿಸಿದ ಪಠ್ಯವನ್ನು ಬೋಧಿಸಬೇಕಿದೆ. ಪಠ್ಯಗಳ ಹೊರೆಯನ್ನು ತಗ್ಗಿಸಿ ಕೌಶಲವೃದ್ಧ್ದಿಗೆ ಮಹತ್ವವಿರುವ ಎನ್ಇಪಿ ನೀತಿಯಡಿಯಲ್ಲಿ ಕೆಲ ವಿಷಯಗಳು ಪಠ್ಯಗಳನ್ನು ಒಂದು ಸೆಮಿಸ್ಟರ್ನಲ್ಲಿ ನಿಗದಿ ಮಾಡಿರುವ ಸಮಯದಲ್ಲಿ ಬೋಧಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ ಎನ್ನಲಾಗುತ್ತಿದೆ. ಉದಾಹರಣೆಗೆ AECCಯಲ್ಲಿ ಪರಿಚಯಿಸಿರುವ ಭಾರತ ಮತ್ತು ಭಾರತೀಯ ಸಂವಿಧಾನ ಪಠ್ಯದಲ್ಲಿ ಅಗತ್ಯವಿಲ್ಲದ ಅನೇಕ ಪಾಠಗಳನ್ನು ಪರಿಚಯಿಸಲಾಗಿದೆ (ಉದಾ: ಭಾರತೀಯ ತತ್ವಶಾಸ್ತ್ರೀಯ ಮತ್ತು ರಾಜಕೀಯ ತಳಹದಿ ಎಂದು ಧರ್ಮದ ಬಗ್ಗೆ ಪಾಠಗಳನ್ನು ಸೇರಿಸಿರುವುದು). ಈ ವಿಷಯಗಳನ್ನು ಬೋಧಿಸಲು ಸಾಕಷ್ಟು ಸಮಯಾವಕಾಶಗಳು ಬೇಕಾಗುತ್ತದೆ ಎನ್ನಲಾಗಿದೆ. ಇದೇ ಪಠ್ಯವನ್ನು ವಿಶ್ವವಿದ್ಯಾನಿಲಯಗಳು ರಚಿಸಿವೆ.
ಅವುಗಳು ನಿಗದಿತ ಸಮಯದಲ್ಲಿ ಬೋಧಿಸುವಂತೆ ಸಂವಿಧಾನದ ಮೂಲಭೂತ ಪರಿಕಲ್ಪನೆಗಳನ್ನು ಸುಲಭವಾಗಿ ತಿಳಿಯುವಂತೆ ಪಠ್ಯವನ್ನು ರಚಿಸಿದ್ದರೂ ಅದನ್ನು ಬೋಧನೆಗೆ ಬಳಸುತ್ತಿಲ್ಲ. ಎನ್ಇಪಿ ಶಿಕ್ಷಣದ ಐದು ಮತ್ತು ಆರನೇ ಸೆಮಿಸ್ಟರ್ ಪಠ್ಯಕ್ರಮಗಳನ್ನು ಇನ್ನೂ ಬಿಡುಗಡೆ ಮಾಡುವ ಹಂತದಲ್ಲಿಯೇ ಇವೆ. ಇದರಿಂದ ವಿದ್ಯಾರ್ಥಿಗಳಿಗೆ ಅಧ್ಯಾಪಕರಿಗೆ ಸೂಕ್ತ ಸಮಯದಲ್ಲಿ ಪಠ್ಯಪುಸ್ತಕಗಳು ಸಿಗುತ್ತಿಲ್ಲ. ಡಿಜಿಟಲ್ ತಂತ್ರಜ್ಞಾನಗಳನ್ನು ಶಿಕ್ಷಣ ವ್ಯವಸ್ಥೆಯಲ್ಲಿ ತರಲು ಎನ್ಇಪಿ ಸಾಕಷ್ಟು ಶಿಫಾರಸುಗಳನ್ನು ಮಾಡಿದೆ. ಅದರಂತೆ ವಿದ್ಯಾರ್ಥಿಯು ಯಾವುದೇ ಪದವಿ ಹಂತದಲ್ಲಿ ಗಳಿಸಬೇಕಾದ ಶೇ. 40 ಕ್ರೆಡಿಟ್ಗಳನ್ನು ಆನ್ಲೈನ್ ಕೋರ್ಸ್ಗಳ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ಕರ್ನಾಟಕ ಎಲ್ ಎಂಎಸ್ (ಲರ್ನಿಂಗ್ ಮ್ಯಾನೆಜ್ಮೆಂಟ್ ಸಿಸ್ಟಂ) ವ್ಯವಸ್ಥೆಯನ್ನು ರೂಪಿಸಿದ್ದು ಇದರ ಮೂಲಕ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅನ್ಲೈನ್ ಕಂಟೆಂಟ್ಗಳನ್ನು ಬಳಸುವಂತೆ ಮಾಡಲಾಗುತ್ತಿದೆ. UUCMS (Unified University and College Management System ಮೂಲಕ ಸಂಪೂರ್ಣ ಪ್ರವೇಶಾತಿ, ಫಲಿತಾಂಶಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದ್ದು ಬಹುತೇಕ ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆಯಲ್ಲಿ ಅರ್ಜಿ ಸಲ್ಲಿಸಿ ಕಾಲೇಜುಗಳಿಗೆ ಸೇರುವುದು ದೊಡ್ಡ ಸರ್ಕಸ್ ಆಗಿದೆ. ಆಧಾರ್ ಪರಿಶೀಲನೆ ಮತ್ತು ಲಿಂಕ್ ಆಗದೆ ಸಾಕಷ್ಟು ವಿದ್ಯಾರ್ಥಿಗಳು ಸೈಬರ್ ಕೆಫೆ ನಾಡಕಚೇರಿಗಳನ್ನು ಅಲೆಯುವಂತಾಗಿವೆ. ಅಕಾಡಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಬಗ್ಗೆ ಕೂಡ ವಿದ್ಯಾರ್ಥಿಗಳಲ್ಲಿ ಸೂಕ್ತ ಮಾಹಿತಿಯ ಕೊರತೆಗಳಿವೆ.
ಎನ್ಇಪಿಯಡಿಯಲ್ಲಿ ನಾಲ್ಕು ವರ್ಷದ ಪದವಿ ಎಂದು ಕಳೆದ ವರ್ಷದಿಂದ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಕುಂಠಿತವಾಗಿದೆ. ಎನ್ಇಪಿಯಡಿಯಲ್ಲಿ multiple entries ಮತ್ತು multiple ಎಕ್ಸಿಟ್ ಗೆ ಅವಕಾಶವಿದ್ದು ಅಂದರೆ ವಿದ್ಯಾರ್ಥಿ ತನ್ನ ಪದವಿ ಸಮಯದಲ್ಲಿ ನಿಗದಿತ ಕ್ರೆಡಿಟ್ ಪಡೆದ ಯಾವುದೇ ವರ್ಷದಲ್ಲಿ ತನ್ನ ವಿದ್ಯಾಭ್ಯಾಸವನ್ನು ನಿಲ್ಲಿಸಬಹುದು ಮತ್ತು ಮತ್ತೆ ಸೇರಬಹುದು. ಮೂರು ವರ್ಷ ಪೂರೈಸಿದರೆ ಪದವಿ ಪ್ರಮಾಣ ಪತ್ರ ನೀಡಲಾಗುವುದು. ಆನರ್ಸ್ ಪದವಿ ಪಡೆಯಲು ನಾಲ್ಕು ವರ್ಷಗಳ ಅವಶ್ಯಕತೆ ಇದೆ. ಇಂತಹ ಮಾಹಿತಿಗಳು ವಿದ್ಯಾರ್ಥಿಗಳಿಗೆ ಈಗಲೂ ಗೊಂದಲಮಯವಾಗಿವೆ.
ಇದರಿಂದಾಗಿ ಪದವಿ ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಸಾಕಷ್ಟು ಕುಂಠಿತವಾಗುತ್ತಿದೆ. ಒಂದು ಮಾಹಿತಿಯ ಪ್ರಕಾರ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಅರ್ಜಿಗಳನ್ನು ಅನ್ಲೈನ್ ಮೂಲಕ ಸಲ್ಲಿಸಬೇಕಾಗಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಸೈಬರ್ ಸೆಂಟರ್ ಗಳನ್ನು/ಮೊಬೈಲ್ ಪೋನ್ ಗಳನ್ನು ಅರ್ಜಿ ತುಂಬಲು ಬಳಸುವುದರಿಂದ ಅನೇಕ ಬಾರಿ ತಪ್ಪುಮಾಹಿತಿಗಳಿಂದ/ಸರಿಯಾಗಿ ಸೂಕ್ತ ದಾಖಲೆಗಳನ್ನು ಅಪ್ಲೋಡ್ ಮಾಡಲು ತಿಳಿಯದೆ/ಆಧಾರ್ ಲಿಂಕ್ ಆಗದೆ ಅವರಿಗೆ ವಿದ್ಯಾರ್ಥಿ ವೇತನ ಸೂಕ್ತ ಸಮಯದಲ್ಲಿ ದೊರೆಯದೆ ಸಾಕಷ್ಟು ತೊಂದರೆಗಳಾಗಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಶೇ. 50 ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ನೀಡುವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇಂತಹ ಸಮಸ್ಯೆಗಳು ಒಂದು ದೊಡ್ಡ ವಿದ್ಯಾರ್ಥಿ ಸಮೂಹವನ್ನು ಉನ್ನತ ಶಿಕ್ಷಣ ವಲಯದಿಂದ ಹೊರಗಿಡುವ ಸಾಧ್ಯತೆಗಳೇ ಹೆಚ್ಚು. ಕರ್ನಾಟಕದಲ್ಲಿ 2021ರಲ್ಲಿ ಸೂಕ್ತ ತಯಾರಿಗಳಿಲ್ಲದೆ ಅನೇಕ ಗೊಂದಲಗಳ ನಡುವೆ ಉನ್ನತ ಶಿಕ್ಷಣ ವಲಯದಲ್ಲಿ ಎನ್ಇಪಿಯನ್ನು ಪರಿಚಯಿಸಲಾಯಿತು. ಈಗಲೂ ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಸಾಕಷ್ಟು ಗೊಂದಲಗಳು ಮತ್ತು ಮಾಹಿತಿಯ ಕೊರತೆ ಇದೆ. ಹೊಸ ಸರಕಾರ ಈ ಶಿಕ್ಷಣ ನೀತಿಯನ್ನು ಕೂಲಂಕಶವಾಗಿ ಪರಿಶೀಲಿಸಿ ಗ್ರಾಮೀಣ ಭಾಗದ ಕಾಲೇಜುಗಳು ಮುಚ್ಚದಂತೆ ಮತ್ತು ಉನ್ನತ ಶಿಕ್ಷಣ ಪಡೆಯಲು ಬಯಸುವ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತವಾಗದಂತೆ ಶಿಕ್ಷಣ ನೀತಿಯನ್ನು ರೂಪಿಸಬೇಕು.