ಸವರ್ಕುಡೇಲು ಮಹಾಬಲೇಶ್ವರ ಭಟ್ ಶ್ರೀಮಂತ ಮನಸ್ಸಿನ ಧೀಮಂತ ವ್ಯಕ್ತಿಯ ನೂರರ ನೆನಪು
ಶಿಕ್ಷಣದ ಮೂಲಕ ಹಳ್ಳಿಜನರಿಗೆ ತಿಳುವಳಿಕೆ ಬೆಳೆಸಿ ಅವರನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಸಾಧ್ಯವೆಂದು ಭಟ್ಟರು ನಂಬಿದ್ದರು. ಹಳ್ಳಿಗಳ ಮಕ್ಕಳು ಶಿಕ್ಷಣವಂಚಿತರಾಗುವುದನ್ನು ಮನಗಂಡ ಭಟ್ಟರು ತನ್ನ ಮನೆಯ ಸಮೀಪದ 56 ಸೆಂಟ್ಸ್ ಸ್ವಂತ ಜಾಗವನ್ನು ಪ್ರಾಥಮಿಕ ಶಾಲೆಯ ನಿರ್ಮಾಣಕ್ಕಾಗಿ ದಾನ ನೀಡಿದರು ಮಾತ್ರವಲ್ಲ ಶಾಲೆಯ ನಿರ್ಮಾಣಕ್ಕಾಗಿ ಸಾವಿರಾರು ರೂ.ಗಳ ಆರ್ಥಿಕ ಸಹಾಯವನ್ನೂ ಮಾಡಿದ್ದರು. ಅದರ ಜೊತೆಗೆ ಮೊಂಟೆಪದವು ಹಿರಿಯ ಪ್ರಾಥಮಿಕ ಶಾಲೆಯನ್ನು ಹಂತಹಂತವಾಗಿ ಪ್ರೌಢಶಾಲೆಯಾಗಿ ವಿಸ್ತರಿಸುವ ಜವಾಬ್ದಾರಿಯನ್ನು ನಿರ್ವಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಂಗಾಣ ಗ್ರಾಮವು ನೇತ್ರಾವತಿ ಮತ್ತು ಗುರುಪುರ ಹೊಳೆಗಳ ನಡುವಿನಲ್ಲಿರುವ ಗ್ರಾಮ. ಫಲವತ್ತಾದ ಭತ್ತ ಸಾಗುವಳಿಯ ಗದ್ದೆಗಳು ಹಾಗೂ ಅಡಿಕೆ ತೋಟಗಳು ಇಲ್ಲಿ ವಿಜೃಂಭಿಸುತ್ತಿವೆ. ಮಂಗಳೂರಿಂದ ಒಳ ಮಾರ್ಗವಾಗಿ ವಿಟ್ಲದ ತನಕ ಸಾಗುವ ಮಾರ್ಗವು ಮೊಂಟೆಪದವು ಎಂಬಲ್ಲಿ ಕವಲು ಒಡೆದು ತೌಡುಗೀಳಿಯತ್ತ ಸಾಗುತ್ತದೆ. ಈ ಮಾರ್ಗದಲ್ಲಿ ಸಾಧಾರಣ ಒಂದು ಕಿ.ಮೀ. ಸಾಗಿದರೆ ಸವರ್ಕುಡೇಲು ಎಂಬ ಪ್ರಸಿದ್ಧ ಮನೆತನದ ವಸತಿ ಇದೆ. ಈ ಪ್ರದೇಶದಲ್ಲಿ ವಾಸ್ತವ್ಯದ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭತ್ತದ ಸಾಗುವಳಿ ಮತ್ತು ತೆಂಗು, ಅಡಿಕೆ ತೋಟಗಳ ಜೊತೆಗೆ ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಸವರ್ಕುಡೇಲು ಶಂಕರ ಭಟ್ಟರದ್ದಾಗಿದೆ. ಶಂಕರ ಭಟ್ಟರು ವೈಜ್ಞಾನಿಕ ಮನೋಭಾವ ಹೊಂದಿದ್ದು, ಪ್ರಗತಿಪರ ಕೃಷಿಕರಾಗಿದ್ದರು. ತನ್ನ ನೆರೆಹೊರೆಯಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರ ಪತ್ನಿಯ ಸಹಕಾರದಿಂದ ಅನೇಕ ಕ್ರಮಗಳನ್ನು ಆರಂಭಿಸಿದ್ದರು. ಇವರೀರ್ವರ ಹಿರಿಯ ಮಗನೇ ಶ್ರೀ ಮಹಾಬಲೇಶ್ವರ ಭಟ್. ತಂದೆಯವರ ದೂರದೃಷ್ಟಿ ಹಾಗೂ ಪ್ರಗತಿಪರ ಮನೋಭಾವ, ಮಗನಲ್ಲಿ ಚಿಂತನೆ ಬೆಳೆಯಲು ಬಹಳಷ್ಟು ಸಹಾಯವಾಯಿತು.
1923ರ ನವೆಂಬರ್ 15ರಂದು ಜನಿಸಿದ ಮಹಾಬಲೇಶ್ವರ ಭಟ್ಟರು ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಿರಿಯರು ಸ್ಥಾಪಿಸಿದ ಮೊಂಟೆಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದರು. ಪ್ರೌಢ ಶಿಕ್ಷಣವನ್ನು ಮಂಗಳೂರಿನ ಡೊಂಗರಕೇರಿ ಕೆನರಾ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ಪದವಿ ಶಿಕ್ಷಣವನ್ನು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮುಂದುವರಿಸಿದರು. ಅಂದು ವಿದ್ಯಾರ್ಥಿಗಳ ನಡುವೆ ರಾಷ್ಟ್ರೀಯ ಚಳವಳಿಯ ಆಕರ್ಷಣೆ ಬಹಳವಾಗಿತ್ತು. ಅದರಲ್ಲಿ ಮಹಾಬಲೇಶ್ವರ ಭಟ್ ಒಬ್ಬರಾಗಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಇವರಿಗೆ ಭಾರತ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರಾದ ಕಾ| ಎಸ್.ವಿ. ಘಾಟೆಯವರ ಪರಿಚಯವಾಯಿತು. ಅವರ ಮೂಲಕ ಜಿಲ್ಲೆಯ ಕಾರ್ಮಿಕ ಚಳವಳಿಯ ನಾಯಕರುಗಳಾದ ಎ. ಶಾಂತಾರಾಮ ಪೈ, ಎ. ಶಿವಶಂಕರ ರಾವ್, ಬಿ.ವಿ. ಕಕ್ಕಿಲ್ಲಾಯ, ಸಿಂಪ್ಸ್ನ್ ಸೋನ್ಸ್, ಲಿಂಗಪ್ಪ ಸುವರ್ಣ, ದಾಸ ಸೇರಿಗಾರ, ದಾಸಪ್ಪ ಮಾಸ್ಟರ್ ಹಾಗೂ ಎಲ್ಲರ ಒಡನಾಡಿಯಾಗಿದ್ದ ಎಸ್.ರಾಮಚಂದ್ರ ಭಟ್ ಮುಂತಾದವರ ಪರಿಚಯವಾಯಿತು. ಹೀಗೆ ಕಮ್ಯುನಿಸ್ಟರ ಕಾರ್ಯತತ್ಪರತೆಯನ್ನು ಹಾಗೂ ರಾಜಕೀಯ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಮಹಾಬಲೇಶ್ವರ ಭಟ್ಟರು ವಿದ್ಯಾರ್ಥಿ ಸಂಘಟನೆಯಾದ ಎಐಎಸ್ಎಫ್ ಸೇರಿ ಅದರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
1942ರ ಆಗಸ್ಟ್ 9ರಂದು ಮುಂಬೈಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನ ನಡೆದಾಗ ಗಾಂಧೀಜಿಯವರು ‘‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿರಿ’’ ಎಂಬ ಚಳವಳಿಯನ್ನು ಘೋಷಿಸಿದರು. ಅದರ ಜೊತೆಗೆ ‘‘ಭಾರತೀಯರೇ ಮಾಡಿರಿ ಇಲ್ಲವೆ ಮಡಿಯಿರಿ’’ ಎಂದು ಕರೆ ನೀಡಿದರು. ಈ ಘೋಷಣೆಗಳು ದೇಶದಾದ್ಯಂತ ವಿದ್ಯಾರ್ಥಿ ಯುವಜನರನ್ನು ಹೋರಾಟಕ್ಕೆ ಬಡಿದೆಬ್ಬಿಸಿದವು. ದೇಶದಾದ್ಯಂತ ಬ್ರಿಟಿಷ್ ಆಡಳಿತ ವಿರುದ್ಧ ಪ್ರತಿಭಟನೆ ನಡೆದಾಗ, ಅನೇಕ ನಾಯಕರು ಬಂಧನಕ್ಕೆ ಒಳಗಾದರು. ಅಂತಹ ಸಂದರ್ಭದಲ್ಲಿ ಮಂಗಳೂರಲ್ಲಿ ಹೋರಾಟಕ್ಕೆ ಧುಮುಕಿದವರಲ್ಲಿ ಮಹಾಬಲೇಶ್ವರ ಭಟ್ ಒಬ್ಬರು. ಆಗ ಅವರು 19 ವರ್ಷದ ಇಂಟರ್ಮೀಡಿಯಟ್ ವಿದ್ಯಾರ್ಥಿಯಾಗಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಅಧಿಕಾರಿ, ಕೆ.ಕೆ. ಶೆಟ್ಟಿ, ಲೋಕಯ್ಯ ಶೆಟ್ಟಿ, ಅಮ್ಮೆಂಬಳ ಬಾಳಪ್ಪ, ಎಸ್. ರಾಮಚಂದ್ರ ಭಟ್ ಇವರೆಲ್ಲರ ಜೊತೆ ಚಳವಳಿಗಳಲ್ಲಿ ಭಾಗವಹಿಸಿ ಬಂಧನಕ್ಕೊಳಗಾದರು. ಅವರೆಲ್ಲರೂ ತಲಾ ಒಂದೊಂದು ವರ್ಷದ ಸಜೆಗೆ ಗುರಿಯಾಗಿ ಬಳ್ಳಾರಿ ಜೈಲಿನಲ್ಲಿ ಸಜೆ ಅನುಭವಿಸಿದರು. ಅದೇ ಸಮಯದಲ್ಲಿ ಆ ಜೈಲಲ್ಲಿ ಅವರೊಂದಿಗೆ ಕಮ್ಯುನಿಸ್ಟ್ ಪಕ್ಷದ ಗುಪ್ತ ಸಂಘಟನೆಯ ಸದಸ್ಯರಾಗಿದ್ದ ಅನೇಕ ಮಂದಿ ಕಾರ್ಯಕರ್ತರು ಸಹ ಜೈಲಿನಲ್ಲಿದ್ದರು. ಜೈಲಿನಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳ ಸೈದ್ಧಾಂತಿಕ ಮತ್ತು ರಾಜಕೀಯ ಚರ್ಚೆಗಳು, ಸಮಾಜವಾದದ ಅಧ್ಯಯನ ಮತ್ತು ಚರ್ಚೆಗಳಲ್ಲಿ ಭಾಗವಹಿಸಿದರು. ಶಿಸ್ತುಬದ್ಧವಾಗಿ ನಡೆಯುತ್ತಿದ್ದ ಕಮ್ಯುನಿಸ್ಟ್ ಗೆಳೆಯರ ಜೀವನ ಕ್ರಮಗಳನ್ನು ನೋಡಿ ಕಮ್ಯುನಿಸಂ ಕಡೆಗೆ ಆಕರ್ಷಣೆಗೆ ಒಳಗಾದವರಲ್ಲಿ ಮಹಾಬಲೇಶ್ವರ ಭಟ್ ಮತ್ತು ಅವರ ಸಂಗಡಿಗರು ಪ್ರಮುಖರು.
ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾಗಿಯಾಗಿ, ಒಂದು ವರ್ಷ ಕಾಲ ಸೆರೆಮನೆ ಅನುಭವಿಸಿ ಬಿಡುಗಡೆಯಾದಾಗ ಊರಿಗೆ ಬಂದ ಭಟ್ರವರು ಸಂತ ಅಲೋಶಿಯಸ್ ಕಾಲೇಜಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಮುಂದಾದಾಗ ಅಲ್ಲಿನ ಪ್ರಾಂಶುಪಾಲರನ್ನು ಭೇಟಿಯಾದರು. ಆಗ ಇಟೆಲಿ ದೇಶದ ಒಬ್ಬರು ಫಾದರ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅವರು ಭಟ್ಟರ ಕಾಲೇಜ್ ಪ್ರವೇಶ ನಿರಾಕರಿಸಿ ವರ್ಗಾವಣೆ ಸರ್ಟಿಫಿಕೇಟ್ ಕೊಟ್ಟು ಕಳುಹಿಸಿದರು.
ನಂತರ ಭಟ್ಟರು ಉದ್ಯೋಗವನ್ನು ಅರಸಿಕೊಂಡು ಮುಂಬೈಗೆ ಹೋದರು. ಅವರಾಗಲೇ ಕಮ್ಯುನಿಸ್ಟ್ ಪಕ್ಷವನ್ನು ಸೇರುವ ಸಂಕಲ್ಪ ಮಾಡಿದ್ದರು. ಹಾಗೆ ಅವರು ಮುಂಬೈಯ ಕೇತುವಾಡಿ ಮುಖ್ಯ ರಸ್ತೆಯಲ್ಲಿ ಬಹಿರಂಗವಾಗಿ ಕೆಲಸ ಮಾಡುತ್ತಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ ಸಂಪರ್ಕವನ್ನು ಪಡೆದರು. ಪಕ್ಷದ ನಾಯಕರಾದ ಪಿ.ಸಿ. ಜೋಷಿ, ಎಸ್.ಎ. ಡಾಂಗೆ ಮುಂತಾದವರ ಸಂಪರ್ಕ ಬೆಳೆಯಿತು. ಅಂದಿನ ಪಕ್ಷದ ಮುಖಪತ್ರಿಕೆಯಾಗಿದ್ದ ಪೀಪಲ್ಸ್ ವಾರ್ ಪತ್ರಿಕೆಯ ಸಂಪಾದಕರಾಗಿದ್ದ ಎನ್.ಕೆ. ಕೃಷ್ಣನ್, ಮೋಹನ ಕುಮಾರ ಮಂಗಲಂ ಮುಂತಾದವರ ಗೆಳೆತನವಾಯಿತು. ಆ ಕಾಲದ ಫ್ಯಾಶಿಸ್ಟ್ ಪ್ರವೃತ್ತಿಯ ಸಮಾಜಘಾತಕ ಶಕ್ತಿಗಳು ಪಕ್ಷದ ಮುದ್ರಣಾಲಯ ಮತ್ತು ಪತ್ರಿಕೆಯ ಸಂಪಾದಕರ ಕಚೇರಿಯ ಮೇಲೆ ದಾಳಿ ನಡೆಸಿದಾಗ ತಮ್ಮ ಜೀವದ ಹಂಗು ತೊರೆದು ಪಕ್ಷದ ಕಚೆೇರಿ ರಕ್ಷಣೆಗೆ ಹೋರಾಡಿದವರಲ್ಲಿ ಮಹಾಬಲೇಶ್ವರ ಭಟ್ ಮತ್ತು ನಾರಾಯಣ ಶೆಟ್ಟರು ಪ್ರಮುಖರಾಗಿದ್ದರು. ಪತ್ರಿಕೆಯನ್ನು ಮುಂಬೈ ಬೀದಿಗಳಲ್ಲಿ ನಿರ್ಭಯದಿಂದ ಘೋಷಣೆ ಕೂಗುತ್ತಾ ಮಾರಾಟ ಮಾಡುವ ಕಾರ್ಯವನ್ನು ತಪ್ಪದೆ ಮಾಡುತ್ತಿದ್ದರು.
1945ರಲ್ಲಿ ದ್ವಿತೀಯ ಮಹಾಯುದ್ಧ ಮುಗಿದ ಬೆನ್ನಲ್ಲೇ ಮುಂಬೈಯ ಬಂದರಿನಲ್ಲಿ ತಂಗಿದ್ದ ರೋಯಲ್ ಇಂಡಿಯನ್ ನೇವಿಯ ಸಿಪಾಯಿಗಳು ತಮ್ಮ ಮೇಲೆ ಆಗುತ್ತಿದ್ದ ಅನ್ಯಾಯ, ದಬ್ಬಾಳಿಕೆ ಮತ್ತು ಅಪಮಾನಗಳ ವಿರುದ್ಧ ಬಂಡಾಯ ಹೂಡಿದರು. ತಲವಾರ್ ನೌಕೆಯ ಭಾರತೀಯ ಅಧಿಕಾರಿಗಳು ಮತ್ತು ಸೈನಿಕರು ತಮ್ಮ ನೌಕೆಯ ಮೇಲೆ ಕಾಂಗ್ರೆಸ್, ಮುಸ್ಲಿಮ್ ಲೀಗ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಬಾವುಟಗಳನ್ನು ಒಂದೇ ಧ್ವಜಸ್ತಂಭದ ಮೇಲೆ ಏರಿಸಿ ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯುವುದಾಗಿ ಘೋಷಿಸಿದರು. ಆಗ ಹತಾಶರಾಗಿದ್ದ ಬ್ರಿಟಿಷ್ ಆಡಳಿತಗಾರರು ಮುಂಬೈ ಬಂದರನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದರು. ಈ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷ ಮತ್ತು ಎಐಟಿಯುಸಿ ನೇತೃತ್ವದಲ್ಲಿ ಮುಂಬೈ ನಗರದ ಕಾರ್ಮಿಕರು ಹಾಗೂ ಜನಸಾಮಾನ್ಯರು ನಾವಿಕರಿಗೆ ಬೆಂಬಲ ನೀಡಲು ಬೀದಿಗಿಳಿದರು. ಈ ಹೋರಾಟದ ಪರವಾಗಿ ಕಮ್ಯುನಿಸ್ಟ್ ಪಕ್ಷ ಎಲ್ಲಾ ರೀತಿಯ ಸಹಾಯವನ್ನು ನಾವಿಕರಿಗೆ ನೀಡಲು ಸಿದ್ಧವಾಯಿತು. ಪಕ್ಷದ ಸ್ವಯಂಸೇವಕರ ತಂಡಗಳು ಬಂದರಿಗಿಳಿದವು.
ಆ ಸಮಯದಲ್ಲಿ ಹೋರಾಟಗಳನ್ನು ಹಿಂದೆಗೆಯಬೇಕೆಂದು ಹಾಗೂ ನಾವಿಕರು ಶರಣಾಗಬೇಕೆಂದು ಕಾಂಗ್ರೆಸ್ ಪಕ್ಷದ ಸರದಾರ ವಲ್ಲಭ ಭಾ ಪಟೇಲರು ಕರೆ ನೀಡಿದರು. ಅದರ ಬೆನ್ನಿಗೆ ಮುಸ್ಲಿಮ್ ಲೀಗ್ ಸಹ ಬೆಂಬಲ ಇಲ್ಲವೆಂದು ಘೋಷಿಸಿತು. ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಬಾವುಟಗಳು ಕೆಳಗಿಳಿದವು. ಆದರೆ ಕಮ್ಯುನಿಸ್ಟ್ ಪಕ್ಷ ಕೊನೆತನಕ ಈ ಹೋರಾಟಗಳಲ್ಲಿ ಸಕ್ರಿಯವಾಗಿ ಬೆಂಬಲ ನೀಡಿತು. ಈ ಹೋರಾಟಗಳ ಪರಿಣಾಮವಾಗಿ ನಾವಿಕರು ಕಠಿಣ ಶಿಕ್ಷೆಗೆ ಗುರಿಯಾದರೂ ಬಿಸಿತಾಗಿದ ಬ್ರಿಟಿಷ್ ಮಂತ್ರಿ ಮಂಡಲವು ಭಾರತಕ್ಕೆ ಕೆಲವೇ ತಿಂಗಳುಗಳಲ್ಲಿ ಸ್ವಾತಂತ್ರ್ಯ ನೀಡುವುದಾಗಿ ಆಶ್ವಾಸನೆ ನೀಡಿತು.
ಇದೇ ಸಮಯದಲ್ಲಿ ಸುಭಾಷ್ಚಂದ್ರ ಬೋಸ್ರವರ ನೇತೃತ್ವದಲ್ಲಿ ಇಂಡಿಯನ್ ನೇಷನಲ್ ಆರ್ಮಿಯ ಅಧಿಕಾರಿಗಳು ಭಾರತಕ್ಕೆ ಮರಳಿ ಬರತೊಡಗಿದಾಗ ಅವರನ್ನು ಗಡಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಅವರ ಬಿಡುಗಡೆಗಾಗಿ ದೇಶದಾದ್ಯಂತ ನಡೆದ ಹೋರಾಟಗಳಲ್ಲಿ ಕಮ್ಯುನಿಸ್ಟ್ ಪಕ್ಷ ವಿಶೇಷ ಪಾತ್ರ ವಹಿಸಿತು. ಈ ಎಲ್ಲಾ ಹೋರಾಟಗಳಲ್ಲಿ ಮಹಾಬಲೇಶ್ವರ ಭಟ್ ಮತ್ತು ಸಂಗಡಿಗರು ಸಕ್ರಿಯವಾಗಿ ಭಾಗವಹಿಸಿ ಅವಿಶ್ರಾಂತವಾಗಿ ದುಡಿದರು. ಮಹಾಬಲೇಶ್ವರ ಭಟ್ ಮತ್ತು ನಾರಾಯಣ ಶೆಟ್ಟರ ಹೆಸರು ಪಕ್ಷದ ಕೇಂದ್ರ ಸಮಿತಿಯ ದಾಖಲೆಗಳಲ್ಲಿ ಎಂದೆಂದಿಗೂ ಶಾಶ್ವತವಾಗಿ ಉಳಿಯುವಂತೆ ದಾಖಲಾಗಿವೆ.
1945ರ ಕೊನೆಗೆ ಭಟ್ರವರು ಮುಂಬೈ ಬಿಟ್ಟು ಮರಳಿ ಊರಿಗೆ ಬಂದರು. ತಂದೆಯವರು ಅಭಿವೃದ್ಧಿಪಡಿಸಿದಂತಹ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡರು. ಹಳ್ಳಿಗಳ ಬೆಳವಣಿಗೆ, ಕಿರಿಯರ ವಿದ್ಯಾಭ್ಯಾಸ, ಕೃಷಿ ಅಭಿವೃದ್ಧಿ, ಕೃಷಿ ಕಾರ್ಮಿಕರ ಜೀವನ ಮಟ್ಟ ಸುಧಾರಣೆ ಮುಂತಾದ ವಿಷಯಗಳಲ್ಲಿ ಚಿಂತನೆ ನಡೆಸಿ ಕಾರ್ಯಪ್ರವೃತ್ತರಾದರು. ಅದರೊಂದಿಗೆ ಧ್ವನಿವರ್ಧಕ ಉಪಕರಣಗಳ ದುರಸ್ತಿ ಕೆಲಸ ಮಾಡಲಾರಂಭಿಸಿದು. ಪಕ್ಷ ನಡೆಸುತಿದ್ದ ನವಶಕ್ತಿ ಪುಸ್ತಕ ಅಂಗಡಿಯಲ್ಲೂ ಸಹಾಯಕರಾಗಿ ದುಡಿದರು. ಮೊದಲೇ ಪರಿಚಯವಿದ್ದ ಕಮ್ಯುನಿಸ್ಟ್ ಚಿಂತಕರು ಹಾಗೂ ನಾಯಕರಾಗಿದ್ದ ಎಸ್.ಆರ್. ಭಟ್, ಶಾಂತಾರಾಮ ಪೈ, ಬಿ.ವಿ. ಕಕ್ಕಿಲ್ಲಾಯ, ಸಿಂಪ್ಸನ್ ಸೋನ್ಸ್ ಮುಂತಾದವರೊಂದಿಗೆ ಕಮ್ಯುನಿಸ್ಟ್ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಆಗಲೇ ಎಐಟಿಯುಸಿ ಪ್ರಮುಖ ಮುಂದಾಳುಗಳಾದ ಲಿಂಗಪ್ಪ ಸುವರ್ಣ, ಮೋನಪ್ಪ ಶೆಟ್ಟಿ, ಎ. ಕೃಷ್ಣ ಶೆಟ್ಟಿ, ಎಂ.ಎಚ್. ಕೃಷ್ಣಪ್ಪ, ದಾಸ ಸೇರಿಗಾರ, ದಾಸಪ್ಪ ಮಾಸ್ಟರ್ ಮೊದಲಾದವರ ಸಂಪರ್ಕ ಬೆಳೆಸಿ ಸೈದ್ಧಾಂತಿಕ ಮಾರ್ಕ್ಸ್ವಾದಿ, ಲೆನಿನ್ವಾದಿ ಚಿಂತನೆಗಳನ್ನು ಬೆಳೆಸಿಕೊಂಡರು. ಸ್ವಾತಂತ್ರ್ಯ ಸಂಗ್ರಾಮಗಳಲ್ಲಿ ವಿಶೇಷ ಆಸಕ್ತಿಯನ್ನು ತಳೆಯುತ್ತಾ ಕಾರ್ಯತತ್ಪರರಾದರು. ಬಡತನ, ದಬ್ಬಾಳಿಕೆ ವಿರುದ್ಧ ನಡೆದ ಹೋರಾಟಗಳಲ್ಲಿ ಭಾಗವಹಿಸಿದರು. 1947ರಲ್ಲಿ ದೇಶ ಸ್ವತಂತ್ರವಾದಾಗ ಅವರೊಬ್ಬ ಕಮ್ಯುನಿಸ್ಟರಾದರು. ಅವರ ಗ್ರಾಮದಲ್ಲಿ ಪ್ರಮುಖ ಮುಖಂಡರಾದರು.
1949ರಲ್ಲಿ ಭಟ್ಟರು ನೆರೆಗ್ರಾಮದ ಮಣಿಪ್ಪಾಡಿ ಕೃಷ್ಣ ಭಟ್ ಅವರ ಸುಪುತ್ರಿಯಾದ ಸರಸ್ವತಿಯನ್ನು ವಿವಾಹವಾದರು. ವಕೀಲ ವೃತ್ತಿ ಮಾಡಿಕೊಂಡು ಕಮ್ಯುನಿಸ್ಟ್ ಪಕ್ಷದ ಕಾರ್ಯಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದ ಪಿ.ಎನ್. ನಾರಾಯಣ ಮೂರ್ತಿ ಹಾಗೂ ಮಹಾಬಲೇಶ್ವರ ಭಟ್ಟರು ನಿಕಟ ಸ್ನೇಹಿತರಾಗಿದ್ದರು.
1952ರಲ್ಲಿ ಭಟ್ರವರ ತಂದೆ ಶಂಕರ ಭಟ್ ನಿಧನರಾದ ಬಳಿಕ ಮನೆಯ ಜವಾಬ್ದಾರಿಯನ್ನು ಭಟ್ಟರು ಹೊರಬೇಕಾಯಿತು. ಆಸ್ತಿ ಪಾಲಾಗಿ ಸವರ್ಕುಡೇಲು ಹಿರಿಮನೆ ಭಟ್ಟರ ಪಾಲಿಗೆ ಬಂದಾಗ ಅವರು ಅಲ್ಲೇ ಉಳಿಯಬೇಕಾಯಿತು. ಆಗ ಅವರು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡಲಾರಂಭಿಸಿದರು. ಶಿಕ್ಷಣದ ಮೂಲಕ ಹಳ್ಳಿಜನರಿಗೆ ತಿಳುವಳಿಕೆ ಬೆಳೆಸಿ ಅವರನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಸಾಧ್ಯವೆಂದು ಭಟ್ಟರು ನಂಬಿದ್ದರು. ಹಳ್ಳಿಗಳ ಮಕ್ಕಳು ಶಿಕ್ಷಣವಂಚಿತರಾಗುವುದನ್ನು ಮನಗಂಡ ಭಟ್ಟರು ತನ್ನ ಮನೆಯ ಸಮೀಪದ 56 ಸೆಂಟ್ಸ್ ಸ್ವಂತ ಜಾಗವನ್ನು ಪ್ರಾಥಮಿಕ ಶಾಲೆಯ ನಿರ್ಮಾಣಕ್ಕಾಗಿ ದಾನ ನೀಡಿದರು ಮಾತ್ರವಲ್ಲ ಶಾಲೆಯ ನಿರ್ಮಾಣಕ್ಕಾಗಿ ಸಾವಿರಾರು ರೂ.ಗಳ ಆರ್ಥಿಕ ಸಹಾಯವನ್ನೂ ಮಾಡಿದ್ದರು. ಅದರ ಜೊತೆಗೆ ಮೊಂಟೆಪದವು ಹಿರಿಯ ಪ್ರಾಥಮಿಕ ಶಾಲೆಯನ್ನು ಹಂತಹಂತವಾಗಿ ಪ್ರೌಢಶಾಲೆಯಾಗಿ ವಿಸ್ತರಿಸುವ ಜವಾಬ್ದಾರಿಯನ್ನು ನಿರ್ವಹಿಸಿದರು. ಅವರು ತಾವೇ ಕೋರ್ಟ್-ಕಚೇರಿಗಳಿಗೆ ಓಡಾಡಿ ಶಾಲೆಯ ಪೂರ್ಣ ವಿಸ್ತರಣೆಗೆ ಕಾರಣರಾದರು. ಹೀಗೆ ವಿದ್ಯಾವಂತರಾದ ಸಾವಿರಾರು ವಿದ್ಯಾರ್ಥಿಗಳು ಒಳ್ಳೆಯ ಉದ್ಯೋಗದಲ್ಲಿದ್ದು ಈಗಲೂ ಭಟ್ಟರನ್ನು ನೆನೆಸಿಕೊಳ್ಳುತ್ತಾರೆ. ಗ್ರಾಮೀಣ ಪ್ರದೇಶದ ಬಡಜನರಿಗೆ ಬೆಳೆ ಸರಿಯಾಗಿ ಬೆಳೆಯದಿರುವಾಗ ಹಾಗೂ ನೆರೆ, ಅನಾವೃಷ್ಟಿ ಮುಂತಾದ ಕಷ್ಟಕಾಲದಲ್ಲಿ ಭಟ್ಟರು ಅವರ ನೆರವಿಗೆ ಮುಂದಾಗುತ್ತಿದ್ದರು. ಮಾರ್ಕ್ಸ್ವಾದಿ ಪ್ರಜ್ಞೆ, ವೈಜ್ಞಾನಿಕ ಮನೋಭಾವ ಹಾಗೂ ಮಾನವೀಯತೆ ಅವರ ಈ ಸ್ಪಂದನಗಳಿಗೆ ಕಾರಣವಾಗಿತ್ತು.
ಕೈರಂಗಳ ಗ್ರಾಮದ ಆನೆಗುಂಡಿ ಪ್ರದೇಶದ ಪರಿಶಿಷ್ಟ ಜಾತಿಯವರು ಗೇಣಿಗಾಗಿ ಮತ್ತು ಸರಕಾರಿ ನಿವೇಶನಗಳಲ್ಲಿ ಮನೆಕಟ್ಟಿ ವಾಸಿಸುತ್ತಿದ್ದರು. ತಮ್ಮ ನಿವೇಶನಗಳ ಸುತ್ತಮುತ್ತ ಕೃಷಿ ವ್ಯವಸಾಯ ಮಾಡಿ ಅವರು ಜೀವಿಸುತ್ತಿದ್ದರು. ಶ್ರೀಮಂತ ಕೃಷಿಕರು ಮಳೆನೀರನ್ನು ದಿಕ್ಕು ತಪ್ಪಿಸಿ ಬಡವರ ನಿವೇಶನದ ಕಡೆಗೆ ಹರಿಯಬಿಟ್ಟಾಗ ಬಡವರು ಪ್ರತಿಭಟನೆಗೆ ಇಳಿದರು. ಆಗ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷರಾಗಿದ್ದ ಮಹಾಬಲೇಶ್ವರ ಭಟ್ಟರು ಮಧ್ಯ ಪ್ರವೇಶ ಮಾಡಿ ವಿವಾದವನ್ನು ಯಶಸ್ವಿಯಾಗಿ ಪರಿಹರಿಸಿದರು. ನರಿಂಗಾಣ ಗ್ರಾಮದ ಇನ್ನೊಂದು ನಿವೇಶನದಲ್ಲಿ ಯಂತ್ರದ ಮೂಲಕ ಜಲ್ಲಿ ತಯಾರಿಸುವ ಪ್ರಯತ್ನವೊಂದನ್ನು ಅಲ್ಲಿನ ಪ್ರಭಾವಶಾಲಿ ವ್ಯಕ್ತಿಯೊಬ್ಬರು ನಡೆಸಿದರು. ಅದರಿಂದ ಪರಿಸರ ಮಾಲಿನ್ಯ, ಶಾಲೆ ಮಕ್ಕಳಿಗೆ ಉಸಿರಾಟ ತೊಂದರೆ, ಗದ್ದೆ ತೋಟಗಳಲ್ಲಿ ಕಗ್ಗಲ್ಲಿನ ದೂಳು ಮುಂತಾದ ಸಮಸ್ಯೆಗಳು ಉಂಟಾದಾಗ ಗ್ರಾಮದ ಜನರು ಕಷ್ಟ ನಷ್ಟಗಳಿಗೆ ಒಳಗಾದರು. ನಾರಾಯಣ ಹೊಳ್ಳ, ವಿಶ್ವನಾಥ ಕೊಂಡೆ ಮುಂತಾದ ಸ್ಥಳೀಯ ಪ್ರಮುಖರನ್ನು ಸೇರಿಸಿಕೊಂಡು ಗಣಿಗಾರಿಕೆ ವಿರುದ್ಧ ಚಳವಳಿ ನಡೆಸಿ ಅದನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಕಮ್ಯುನಿಸ್ಟ್ ಕಾರ್ಯಕರ್ತನಾಗಿ ಸಾರ್ವಜನಿಕ ಹಿತಾಸಕ್ತಿಗಳ ಬಗ್ಗೆ ಗಾಢವಾದ ಆಸಕ್ತಿ ಇರುವುದನ್ನು ಭಟ್ರವರ ಈ ಹೋರಾಟಗಳು ತೋರಿಸಿಕೊಡುತ್ತವೆ.
1974ರಲ್ಲಿ ಭೂಸುಧಾರಣೆ ಕಾನೂನು ಜಾರಿಗೆ ಬಂದಾಗ ಅದನ್ನು ಜಾರಿಗೆ ತರುವ ಮಹತ್ತರ ಜವಾಬ್ದಾರಿ ಪಕ್ಷದ ಮೇಲಿತ್ತು. ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಈ ಕಾನೂನು ಜಾರಿಗೆ ಅಡೆತಡೆಗಳಿತ್ತು. ಇದು ಜಾರಿಗೆ ಬರುವಲ್ಲಿ ಕಮ್ಯುನಿಸ್ಟ್ ಪಕ್ಷ ಮಹತ್ತರ ಪಾತ್ರ ವಹಿಸಿತು. ಈ ಸಮಯದಲ್ಲಿ ಬಿ.ವಿ. ಕಕ್ಕಿಲ್ಲಾಯರು ಬಂಟ್ವಾಳ ಕ್ಷೇತ್ರದ ಶಾಸಕರಾಗಿದ್ದರು. ಪಕ್ಷದ ಮುಂದಾಳುಗಳಾಗಿದ್ದ ಬಿ. ವಿಶ್ವನಾಥ ನಾಯಕ್, ಸಿಂಪ್ಸನ್ ಸೋನ್ಸ್, ಪಿ.ಎಂ. ನಾರಾಯಣ ಮೂರ್ತಿ, ಕೆ. ಮೋನಪ್ಪ ಭಂಡಾರಿ, ವಿಠಲ ಬಂಗೇರ, ಕೆ. ಆನಂದ, ಪೂವಪ್ಪ ಬಂಗೇರ, ಹೆನ್ರಿ ಲೋಬೋ, ಅಹಮ್ಮದ್ ಬಾವ, ಪೂವಪ್ಪ ಮೂಲ್ಯ ಸುಬ್ಬ ಭಂಡಾರಿ, ಬಿ. ಭಾಸ್ಕರ್, ಕೆ. ಈಶ್ವರ್, ದಾಸಪ್ಪ ಮಾಸ್ಟರ್, ಪಿ. ಸಂಜೀವ, ಬಿ.ಕೆ. ಕೃಷ್ಣಪ್ಪ, ಬಾಬು ಭಂಡಾರಿ, ಎನ್. ಎ. ಹಮೀದ್ ಹಾಗೂ ಮಹಾಬಲೇಶ್ವರ ಭಟ್ಟರು ಈ ಕಾನೂನು ಜಾರಿಗೆ ತರುವಲ್ಲಿ ಶ್ರಮ ವಹಿಸಿದರು. ಬಂಟ್ವಾಳ ತಾಲೂಕಿನಲ್ಲಿ ಈ ಕಾನೂನು ಜಾರಿಗೆ ಬರುವಲ್ಲಿ ಭಟ್ ಮತ್ತು ಇತರ ನಾಯಕರ ಶ್ರಮ ಬಹಳಷ್ಟಿದೆ.
ಊರಿನಲ್ಲಿ ಸಮಾಜ ಸುಧಾರಕರಾಗಿ ದುಡಿದ ಅವರು 1952ರ ಸಾರ್ವಜನಿಕ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಉಮೇದ್ವಾರರಾದ ಎ. ಕೃಷ್ಣ ಶೆಟ್ಟಿಯವರಿಗೆ ಮುಖ್ಯ ಸಹಾಯಕರಾಗಿ ಕೆಲಸ ಮಾಡಿದರು. ಜಿಲ್ಲೆಯಾದ್ಯಂತ ಹಾಗೂ ಕೊಡಗಿನಾದ್ಯಂತ ಪ್ರಚಾರ ಕಾರ್ಯವನ್ನು ಅವರು ನಡೆಸಿದರು.
ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಎ.ಶಾಂತಾರಾಮ ಪೈಯವರ ಪರವಾಗಿ ತೀವ್ರ ಪ್ರಚಾರವನ್ನು ಭಟ್ಟರು ನಡೆಸಿದರು. ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಬಿ.ವಿ. ಕಕ್ಕಿಲ್ಲಾಯರು ಸ್ಪಷ್ಟ ಬಹುಮತದಿಂದ ಆಯ್ಕೆಯಾಗುವಲ್ಲಿ ಭಟ್ಟರ ಪರಿಶ್ರಮ ಬಹಳಷ್ಟಿತ್ತು. ಮುಂದಿನ ಚುನಾವಣೆಗಳಲ್ಲೂ ಭಟ್ಟರು ಸಕ್ರಿಯವಾಗಿ ದುಡಿದಿದ್ದರು. 1978ರಲ್ಲಿ ವಿಟ್ಲ ಕ್ಷೇತ್ರದಿಂದ ಬಿ.ವಿ. ಕಕ್ಕಿಲ್ಲಾಯರು ಸ್ಪರ್ಧಿಸಿ ವಿಜೇತರಾಗಲು ಮಹಾಬಲೇಶ್ವರ ಭಟ್, ಪದ್ಮನಾಭ ಕೈರಂಗಳ, ಕೆ. ಮೋನಪ್ಪ ಭಂಡಾರಿ, ಪಿ. ಸುಂದರ ಮುಂತಾದವರ ಪರಿಶ್ರಮ ಕಾರಣವಾಗಿತ್ತು.
1965ರಲ್ಲಿ ಭಟ್ಟರು ಬಂಟ್ವಾಳ ತಾಲೂಕು ರೈತಸಂಘದ ಅಧ್ಯಕ್ಷರಾಗಿಯೂ 1983ರಿಂದ 1997ರ ವರೆಗೆ ಅವರು ಪಾಣೆಮಂಗಳೂರು ಫಿರ್ಕಾ ಬೀಡಿ ಆ್ಯಂಡ್ ಜನರಲ್ ವರ್ಕರ್ಸ್ ಯೂನಿಯನ್ನ ಅಧ್ಯಕ್ಷರಾಗಿದ್ದರು. ಕಮ್ಯುನಿಸ್ಟ್ ಪಕ್ಷದ ದ.ಕ. ಜಿಲ್ಲಾ ಮಂಡಳಿ ಹಾಗೂ ಬಂಟ್ವಾಳ ತಾಲೂಕು ಮಂಡಳಿ ಸದಸ್ಯರಾಗಿಯೂ ಎಐಟಿಯುಸಿಯ ಕಾರ್ಯಕಾರಿ ಸಮಿತಿಯಲ್ಲೂ ಅವರು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಕ್ಷ ಮತ್ತು ಜಿಲ್ಲೆಯ ಎಐಟಿಯುಸಿಯ ಅಧ್ಯಯನ ಶಿಬಿರಗಳಲ್ಲಿ ಅವರು ಕ್ಲಾಸು ನೀಡುತ್ತಿದ್ದರು. ದ.ಕ. ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಸಂಸ್ಥೆಯ ಸ್ಥಾಪನಾಧ್ಯಕ್ಷರಾಗಿ ಅದನ್ನು ಬೆಳೆಸುವಲ್ಲಿ ಕೂಡಾ ಅವರ ಪಾತ್ರ ಹಿರಿದಾದದ್ದು.
ಬಂಟ್ವಾಳ ತಾಲೂಕು ಭೂಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾ ಗಿಯೂ ಅವರು ಕೆಲಸ ಮಾಡಿದ್ದಾರೆ. ಅವರು ಭೂ ನ್ಯಾಯ ಮಂಡಳಿಯ ಸದಸ್ಯನಾಗಿ ಎರಡು ಬಾರಿ ನಾಮಾಂಕಿತರಾಗಿದ್ದರು. ಅವರ ಮೂಲಕ ಪರಿಹಾರವಾದ ಅನೇಕ ಭೂ ತಗಾದೆಗಳು ಎರಡು ಪಕ್ಷದವರಿಗೂ ತೃಪ್ತಿಯನ್ನು ಕೊಟ್ಟಿವೆ. ಅವರನ್ನು ಬಲ್ಲವರು ಅವರು ಸಮರ್ಥ ಹಾಗೂ ನ್ಯಾಯಯುತ ರಾಜಕಾರಿಣಿ ಎಂಬುದನ್ನು ಒಪ್ಪುತ್ತಾರೆ ಮತ್ತು ಗೌರವಿಸುತ್ತಾರೆ.
ಮಹಾಬಲೇಶ್ವರ ಭಟ್ - ಸರಸ್ವತಿ ದಂಪತಿಗೆ ಐದು ಜನ ಮಕ್ಕಳು. ನಾಲ್ಕು ಹೆಣ್ಣು ಹಾಗೂ ಒಬ್ಬ ಗಂಡು. ಎಲ್ಲರೂ ವೈದ್ಯರಾಗಿ ಜನಸೇವೆ ಮಾಡುತ್ತಿದ್ದಾರೆ. ಪಾಣೆಮಂಗಳೂರು ಫಿರ್ಕಾ ಬೀಡಿ ಆ್ಯಂಡ್ ಜನರಲ್ ವರ್ಕರ್ಸ್ ಯೂನಿಯನ್ನ 25ನೇ ರಜತ ಮಹೋತ್ಸವದ ಅಂಗವಾಗಿ 2002ನೇ ಮೇ ದಿನದಂದು ಪಕ್ಷದ ರಾಜ್ಯ ಕಾರ್ಯದರ್ಶಿ ಡಾ. ಸಿದ್ಧನಗೌಡ ಪಾಟೀಲರ ಉಪಸ್ಥಿತಿಯಲ್ಲಿ ಭಟ್ಟರಿಗೆ ಸಾರ್ವಜನಿಕ ಸನ್ಮಾನ ಮಾಡಲಾಯಿತು ಅವರ ಸಮಾಜಸೇವೆಗಾಗಿ 2003ರಲ್ಲಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಸ್ವಾತಂತ್ರ್ಯ ಹೋರಾಟಗಾರನೆಂಬ ನೆಲೆಯಲ್ಲಿ ಅವರಿಗೆ ಕೇಂದ್ರ ಸರಕಾರದ ತಾಮ್ರಪತ್ರ ಹಾಗೂ ಗೌರವಧನ ದೊರೆತಿದೆ.
2003ರಲ್ಲಿ ಪಕ್ಷದ ಜಿಲ್ಲಾ ವತಿಯಿಂದ, ಬಂಟ್ವಾಳ ಶಾಸಕ ಹಾಗೂ ಸಚಿವ ಬಿ. ರಮಾನಾಥ ರೈಯವರ ಅಧ್ಯಕ್ಷತೆಯಲ್ಲಿ, ಜಿಲ್ಲೆಯ ನಾಯಕರ ಉಪಸ್ಥಿತಿಯಲ್ಲಿ, ಬಂಟ್ವಾಳ ತಾಲೂಕಿನ ಗಣ್ಯ ರಾಜಕೀಯ ಮುಂದಾಳುಗಳ ಸಮ್ಮುಖದಲ್ಲಿ ಸರ್ವ ಪಕ್ಷ ಸನ್ಮಾನ ಸಮಾರಂಭ ಜರುಗಿರುವುದು ಅವರ ವ್ಯಕ್ತಿತ್ವದ ಹಿರಿಮೆಯನ್ನು ತೋರಿಸುತ್ತದೆ.
ಭಾರತ ಕಮ್ಯುನಿಸ್ಟ್ ಪಕ್ಷದ 21ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನದ ಅಂಗವಾಗಿ ಮಂಗಳೂರಿನ ನೆಹರೂ ಮೈದಾನದಲ್ಲಿ 31-12-2011ರಂದು ಜರುಗಿದ ಬಹಿರಂಗ ಸಭೆಯ ವೇದಿಕೆಗೆ ಎಸ್. ಮಹಾಬಲೇಶ್ವರ ಭಟ್ ವೇದಿಕೆ ಎಂದು ಹೆಸರಿಟ್ಟು ಗೌರವಿಸಲಾಗಿತ್ತು.
ತಾ. 10-04-2008ರಂದು ಕೆಲಕಾಲದ ಅಸೌಖ್ಯದಿಂದ ನಿಧನರಾದರು. ಆಗ ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮಹಾಬಲೇಶ್ವರ ಭಟ್ಟರ ನಡೆನುಡಿ, ಅವರ ಸೇವಾ ಮನೋಭಾವ, ಬಡಜನರ ಕಷ್ಟ ಸಮಸ್ಯೆಗಳ ಬಗ್ಗೆ ಅವರಿಗಿದ್ದ ಕಾಳಜಿ ಹಾಗೂ ಅವುಗಳ ನಿವಾರಣೆಗೆ ಅವರ ಪ್ರಯತ್ನ ಮುಂತಾದ ಅವರ ಉದಾತ್ತ ಗುಣಗಳಿಂದ ಜನಪ್ರಿಯರಾಗಿದ್ದರು. ಅವರ ಕಮ್ಯನಿಸ್ಟ್ ಒಲವು ಈ ಎಲ್ಲಾ ಗುಣಗಳಿಗೆ ಕಾರಣವಾಗಿತ್ತು. ಎಲ್ಲಾ ರಾಜಕೀಯ ಪಕ್ಷದವರು ಅವರ ಈ ವಿಶಿಷ್ಟ ಗುಣಗಳಿಂದಾಗಿ ಅವರನ್ನು ಗೌರವಿಸುತ್ತಿದ್ದರು.
1923ರಲ್ಲಿ ಜನಿಸಿದ ಇವರಿಗೆ ಈ ವರ್ಷ (2023) ನವೆಂಬರ್ 15ರಂದು 100 ವರ್ಷ ತುಂಬಿದೆ. ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ), ಬಂಟ್ವಾಳ ತಾಲೂಕು ಸಮಿತಿ ಹಾಗೂ ಪಾಣೆಮಂಗಳೂರು ಫಿರ್ಕಾ ಬೀಡಿ ಆ್ಯಂಡ್ ಜನರಲ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) -ಇವರಿಂದ ಜಂಟಿಯಾಗಿ ನವೆಂಬರ್ 26ರಂದು ಬಂಟ್ವಾಳದ ಕಾ| ಎ. ಶಾಂತಾರಾಮ ಪೈ ಸ್ಮಾರಕ ಭವನದಲ್ಲಿ ಭಟ್ಟರಿಗೆ ‘ಗೌರವಾರ್ಪಣೆ ಹಾಗೂ ನೂರರ ನುಡಿ ನೆನಪು’ ಸಮಾರಂಭ ಆಯೋಜಿಸಲಾಗಿದೆ.
ಸವರ್ಕುಡೇಲು ಮಹಾಬಲೇಶ್ವರ ಭಟ್ ಎಂಬ ಶ್ರೀಮಂತ ಮನಸ್ಸಿನ ಧೀಮಂತ ವ್ಯಕ್ತಿತ್ವಕ್ಕೆ ನಮನಗಳು.