ಅವ್ಯವಸ್ಥೆಯಿಂದ ಕೂಡಿದ ವಿದ್ಯಾರ್ಥಿ ನಿಲಯ: ಆರೋಪ
ಬಂಗಾರಪೇಟೆ, ಡಿ.25: ಸರಕಾರ ಬಡವರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ಅದರ ಪ್ರಯೋಜನ ಪಡೆಯಲು ಮಕ್ಕಳಿಗೆ ಮರೀಚಿಕೆಯಾಗಿತ್ತಿರುವುದು ಆಡಳಿತ ವ್ಯವಸ್ಥೆಗೆ ಕನ್ನಡಿ ಹಿಡಿದಂತಾಗಿದೆ.
ಕೆಜಿಎಫ್ ಪಟ್ಟಣದ ಸ್ಕೂಲ್ ಆಫ್ ಮೈನ್ಸ್ ಸಮೀಪದ ಸ್ವಾಮಿನಾಥಪುರಂನಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಮೊದಲಿಗೆ ವಿದ್ಯಾರ್ಥಿ ನಿಲಯದ ಆರಂಭದಲ್ಲೇ ಎರಡೂ ಇಕ್ಕಲುಗಳಲ್ಲಿ ದೊಡ್ಡ ಮಟ್ಟದಲ್ಲಿ ಗಿಡಗಳು ಬೆಳೆದು ನಿಂತು ಪಾಳು ಕಟ್ಟಡ
ಗಳಿಂದ ಸುತ್ತುವರಿದಿರುವ ಈ ವಿದ್ಯಾರ್ಥಿ ನಿಲಯಕ್ಕೆ ರಕ್ಷಣೆಯ ಕೊರತೆಯಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಇಲ್ಲಿನ ಶೌಚಾಲಯಗಳ ಪರಿಸ್ಥಿತಿ ನೋಡಿದರೆ ನೆಲದ ಟೈಲ್ಸ್ ಗಳು ಪುಡಿ ಪುಡಿಯಾಗಿವೆ. ಶೌಚಾಲಯದದಲ್ಲಿ ಒಂದು ಸಣ್ಣ ಬಕೇಟ್ ಕೂಡ ಇಲ್ಲ. ಸ್ನಾನದ ರೂಮ್ಗಳಲ್ಲೂ ಅಷ್ಟೇ ಟೈಲ್ಸ್ ಕಿತ್ತು ಬಂದಿದ್ದು ನೆಲದಲ್ಲಿ ಕಾಲಿಡಲೂ ಭಯವಾಗುವಷ್ಟು ಪಾಚಿ ಕಟ್ಟಿದ್ದರೂ ಅದರ ಸೂಕ್ತ ನಿರ್ವಹಣೆ ಇಲ್ಲದೆ ಕೆಟ್ಟ ವಾಸನೆಯಿಂದ ತುಂಬಿದೆ.
ಹಾಸ್ಟೆಲ್ನಲ್ಲಿರುವ ಬಹುತೇಕ ವಿದ್ಯಾರ್ಥಿಗಳು 17ವರ್ಷದಿಂದ 21ವರ್ಷಗಳ ವಯೋಮಿತಿಯವರೇ ಆಗಿದ್ದು, ಚೆನ್ನಾಗಿ ಪೌಷ್ಠಿಕ ಆಹಾರವನ್ನು ಸೇವಿಸಬೇಕಾದ ವಯಸ್ಸಿನವರಾಗಿದ್ದಾರೆ. ಇವರಿಗೆ ಮೆನು ಚಾರ್ಟ್ ಪ್ರಕಾರ ಆಹಾರ ಪೂರೈಕೆ ಮಾಡುತ್ತಾರೆಯೇ? ಎಂದು ನೋಡಿದರೆ ಅದರಲ್ಲೂ ಒಂದಿದ್ದರೆ ಒಂದು ಇರುವುದಿಲ್ಲ.
ಸುಮಾರು 70 ಜನ ಇರುವ ಈ ವಿದ್ಯಾರ್ಥಿ ನಿಲಯದಲ್ಲಿ ಶೇ.80ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತರ ಕರ್ನಾಟಕದ ಮೂಲದವರೇ ಆಗಿದ್ದಾರೆ. ಅವರಲ್ಲಿ ಹೆಚ್ಚಿ
ನವರು ಸ್ಕೂಲ್ ಆಫ್ ಮೈನ್ಸ್ ಕಾಲೇಜಿನಲ್ಲಿ ಮೈನಿಂಗ್ ಡಿಪ್ಲೋಮಾ ಓದುವ ವಿದ್ಯಾರ್ಥಿಗಳೇ ಆಗಿದ್ದಾರೆ. ಅವರು ಸ್ಥಳೀಯರಲ್ಲದ ಕಾರಣ ಅವರನ್ನು ಹೆದರಿಸಲಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ.
ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಹಾಸ್ಟೆಲ್ಗಳ ಪರಿಸ್ಥಿತಿ ಹೀಗಿದ್ದಾಗ, ಇನ್ನೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿರುವ ಮಕ್ಕಳ ಗತಿ ಏನು? ಎಂಬ ಪ್ರಶ್ನೆ ಮೂಡುತ್ತದೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸುವ ಮೂಲಕ ಸರಕಾರದ ಮೂಲ ಉದ್ದೇಶಗಳಿಗೆ ಚ್ಯುತಿ ಬಾರದಂತೆ ವಿದ್ಯಾರ್ಥಿ ನಿಲಯಗಳನ್ನು ಪರಿವರ್ತನೆಗೊಳಿಸುತ್ತದೆಯೇ ಎಂದು ಕಾದುನೋಡಬೇಕಿದೆ.
ಜಿಲ್ಲಾಧಿಕಾರಿ ವಿದ್ಯಾರ್ಥಿ ನಿಲಯವನ್ನು ಪರಿಶೀಲಿಸಬೇಕು. ಈಗಿನ ಆಹಾರ ಪದಾರ್ಥಗಳ ಸರಬರಾಜು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಕೂಡಲೇ ಹೊಸ ಟೆಂಡರ್ ಮಾಡಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ವಿದ್ಯಾರ್ಥಿ ನಿಲಯದ ನಿರ್ವಹಣೆ ವಿಷಯದಲ್ಲಿ ಪಾರದರ್ಶಕತೆ ಇರಬೇಕು. ಇನ್ನು ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸತ್ಯ ಶೋಧನಾ ಸಮಿತಿಯು ವಾರಕ್ಕೆ ಒಂದು ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಗುಣಮಟ್ಟ ಆಹಾರ ಕಲ್ಪಿಸುವ ಬಗ್ಗೆ ಹೋರಾಟ ಮಾಡುತ್ತದೆ.
- ಸೂಲಿಕುಂಟೆ ರಮೇಶ್, ರಾಜ್ಯ ಸಂಘಟನಾ ಸಂಚಾಲಕ, ಡಿಎಸ್ಎಸ್
ಶೌಚಾಲಯಗಳ ಪರಿಸ್ಥಿತಿ, ಅನೈರ್ಮಲ್ಯದ ಬಗ್ಗೆ ಪರಿಶೀಲಿಸಿದ್ದೇವೆ. ಬಿಸಿ ನೀರಿನ ಸೋಲಾರ್ ವ್ಯವಸ್ಥೆಯು ರಿಪೇರಿಗೆ ಬಂದಿದ್ದು, ಸಿಮೆಂಟ್ ಕೆಲಸ ಮತ್ತು ಸೋಲಾರ್ ರಿಪೇರಿ ಮಾಡಲು ಪ್ರಸ್ತಾವ ಕಳಿಸಲಾಗಿದೆ.
- ಶಿವಾರೆಡ್ಡಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ, ಕೆಜಿಎಫ್