ರಾಜ್ಯದ ಆರ್ಥಿಕ ಪರಿಸ್ಥಿತಿ: ಹಣಕಾಸು ಆಯೋಗದ ಮನವರಿಕೆಗೆ ತಜ್ಞರ ತಂಡ
ಸಮಿತಿಗೆ ಹಿರಿಯ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವ?
ಬೆಂಗಳೂರು: ಕೇಂದ್ರ ಸರಕಾರವು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಡಾ. ಅರವಿಂದ್ ಪನಗಾರಿಯಾ ಅವರನ್ನು 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ ಬೆನ್ನಲ್ಲೇ ಇದೇ ಆಯೋಗದ ಮುಂದೆ ಕರ್ನಾಟಕದ ಆರ್ಥಿಕ ಪರಿಸ್ಥಿತಿ, ಆರ್ಥಿಕ ಸವಾಲುಗಳು ಕುರಿತು ಮನವರಿಕೆ ಮಾಡಲು ವಿಷಯ ತಜ್ಞರು ಮತ್ತು ಅನುಭವಿ ಆಡಳಿತಗಾರರ ತಂಡವೊಂದನ್ನು ರಚಿಸಲು ರಾಜ್ಯ ಸರಕಾರ ಮುಂದಾಗಿದೆ.
ರಾಜ್ಯದ 6ನೇ ವೇತನ ಆಯೋಗದ ಅಧ್ಯಕ್ಷರೂ ಆಗಿದ್ದ ಹಿರಿಯ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲು ಒಲವು ವ್ಯಕ್ತಪಡಿಸಿರುವುದು ಇದೀಗ ಬಹಿರಂಗವಾಗಿದೆ.
16ನೇ ಕೇಂದ್ರ ಹಣಕಾಸು ಆಯೋಗದ ಮುಂದೆ ರಾಜ್ಯ ಸರಕಾರದ ಪರವಾಗಿ ತಾರ್ಕಿಕ ಮತ್ತು ನಿಖರ ಅಂಕಿ ಅಂಶಗಳೊಂದಿಗೆ ಮೆಮೊರಂಡಮ್ ಸಿದ್ಧಪಡಿಸುವ ಮಹತ್ತರ ಹೊಣೆಗಾರಿಕೆಯನ್ನು ಈ ಸಮಿತಿ ಮೇಲೆ ಹೊರಿಸಲಿದೆ. ವಿಶೇಷವೆಂದರೆ 16ನೇ ಕೇಂದ್ರ ಹಣಕಾಸು ಆಯೋಗವನ್ನು ಭಾರತ ಸರಕಾರವು ರಚಿಸುವ ಮುನ್ನವೇ ಮುಂಜಾಗ್ರತೆಯಿಂದ ಕರ್ನಾಟಕ ಸರಕಾರವು ನವೆಂಬರ್ 2023ರಲ್ಲೇ ಎಂ.ಆರ್. ಶ್ರೀನಿವಾಸಮೂರ್ತಿ ಅವರ ನೇತೃತ್ವದ ತಂಡವೊಂದನ್ನು ರಚಿಸಲು ಕಸರತ್ತು ನಡೆಸಿತ್ತು.
ಈ ಕುರಿತು ‘the-file.in’ಗೆ ಕೆಲ ದಾಖಲೆಗಳು (FD -FCC/12/2023) ಲಭ್ಯವಾಗಿವೆ. ಹಿಂದಿನ 15ನೇ ಕೇಂದ್ರ ಹಣಕಾಸು ಆಯೋಗದ ವರದಿಯಿಂದ ಕರ್ನಾಟಕ ರಾಜ್ಯಕ್ಕೆ ದೊರಕಬೇಕಾದ ಪಾಲು ಸರಿಯಾದ ಪ್ರಮಾಣದಲ್ಲಿ ದೊರಕಿಲ್ಲ. ಹೀಗಾಗಿ ರಾಜ್ಯ ಸರಕಾರಕ್ಕೆ ಬಹಳಷ್ಟು ಪ್ರಮಾಣದಲ್ಲಿ ಆರ್ಥಿಕ ನಷ್ಟವುಂಟಾಗಿದೆ. 15ನೇ ಹಣಕಾಸು ಆಯೋಗದ ವರದಿಯಿಂದ ಉಂಟಾಗಿರುವ ಅನ್ಯಾಯವು 16ನೇ ಕೇಂದ್ರ ಹಣಕಾಸು ಆಯೋಗದ ವರದಿಯಲ್ಲಿ ಮತ್ತೊಮ್ಮೆ ಉದ್ಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ರಾಜ್ಯ ಸರಕಾರವು ಇಂಗಿತ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ, ರಾಜ್ಯದ ಮುಂದಿರುವ ಆರ್ಥಿಕ ಸವಾಲುಗಳು ಮತ್ತಿತರ ವಿಷಯಗಳನ್ನು ಒಳಗೊಂಡಂತೆ ರಾಜ್ಯಕ್ಕೆ ದೊರಕಬೇಕಾದ ನ್ಯಾಯಯುತ ಪಾಲನ್ನು ಕೇಂದ್ರದಿಂದ ಪಡೆಯಲು ಸರಿಯಾಗಿ ಮನವರಿಕೆ ಮಾಡಲು ಒಂದು ವಿಸ್ತೃತವಾದ ಮೆಮೊರಂಡಮ್ ಸಲ್ಲಿಸಬೇಕಿದೆ. ಈ ಸಮಿತಿಯು ರಾಜ್ಯಕ್ಕೆ ಹೆಚ್ಚಿನ ಮತ್ತು ನ್ಯಾಯಯುತ ಪಾಲನ್ನು ಒದಗಿಸಿಕೊಡುವಲ್ಲಿ ಈ ಮೆಮೊರಂಡಮ್ ಗಣನೀಯ ಪಾತ್ರವನ್ನು ವಹಿಸತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್’ ಮುಂದೆ ಆಶಯ ವ್ಯಕ್ತಪಡಿಸಿದರು.
ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ?
ಎಂ.ಆರ್. ಶ್ರೀನಿವಾಸ್ ಮೂರ್ತಿ ಅವರ ನೇತೃತ್ವದಲ್ಲಿ ಐಸೆಕ್‌ನ ನಿವೃತ್ತ ನಿರ್ದೇಶಕರೂ ಮತ್ತು 14ನೇ ಕೇಂದ್ರ ಹಣಕಾಸು ಆಯೋಗದ ಸದಸ್ಯರೂ ಆಗಿದ್ದ ಡಾ.ಗೋವಿಂದರಾವ್, ಐಐಎಸ್ಸಿಯ ಡಾ.ನರೇಂದ್ರಪಾಣಿ, ನಾರಾಯಣರಾವ್ ಅವರನ್ನೊಳಗೊಂಡ ಪರಿಣಿತರ ತಂಡವಿರಲಿದೆ. ಇವರಿಗೆ ಲಂಪ್‌ಸಮ್ ಒಟ್ಟು 5 ಲಕ್ಷ ರೂ. ಗೌರವ ಧನ ನೀಡಬಹುದು ಎಂದು ಗೊತ್ತಾಗಿದೆ.
ಕೇಂದ್ರ ಸರಕಾರವು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಡಾ.ಅರವಿಂದ್ ಪನಗಾರಿಯಾ ಅವರನ್ನು 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಈಗಾಗಲೇ ಆದೇಶವನ್ನು ಹೊರಡಿಸಿದೆ. ಆಯೋಗದ ಅಧ್ಯಕ್ಷರು ಮತ್ತು ಇತರ ಸದಸ್ಯರು ಹುದ್ದೆಯನ್ನು ವಹಿಸಿಕೊಂಡ ದಿನಾಂಕದಿಂದ ವರದಿ ಸಲ್ಲಿಕೆಯ ದಿನಾಂಕ ಅಥವಾ 2025,ಅ.31; ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹಣಕಾಸು ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ, ಭಾರತದ ಸಂಚಿತ ನಿಧಿಯಿಂದ ರಾಜ್ಯಗಳಿಗೆ ಆದಾಯ ಅನುದಾನವನ್ನು ನಿಯಂತ್ರಿಸುವ ನೀತಿಗಳು, ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಆಧಾರದಲ್ಲಿ ಪಂಚಾಯತ್‌ಗಳು ಮತ್ತು ನಗರಸಭೆಗಳ ಸಂಪನ್ಮೂಲಗಳನ್ನು ಹೆಚ್ಚಿಸಲು ರಾಜ್ಯದ ಸಂಚಿತ ನಿಧಿಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳ ಬಗ್ಗೆ ಶಿಫಾರಸುಗಳನ್ನು ಮಾಡುತ್ತದೆ.
ಆಯೋಗವು ವಿಪತ್ತು ನಿರ್ವಹಣಾ ಕ್ರಮಗಳಿಗೆ ಹಣಕಾಸು ಒದಗಿಸುವ ಪ್ರಸ್ತುತ ವ್ಯವಸ್ಥೆಗಳನ್ನು ಪುನರ್‌ಪರಿಶೀಲಿಸಬಹುದು ಮತ್ತು ಸೂಕ್ತ ಶಿಫಾರಸುಗಳನ್ನು ಮಾಡಬಹುದು ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ. ಆಯೋಗವು 2026, ಎ.1ರಿಂದ ಆರಂಭಗೊಳ್ಳುವ ಐದು ವರ್ಷಗಳ ಅವಧಿಗಾಗಿ ತನ್ನ ವರದಿಯನ್ನು 2025,ಅ.31ರೊಳಗೆ ಸಲ್ಲಿಸಬೇಕಿದೆ.