ವೆಬ್ಸೈಟ್ಗಳಲ್ಲಿ ವಾರ್ಷಿಕ ವರದಿ ಪ್ರಕಟನೆ ನಿಲ್ಲಿಸಿದ ಇಲಾಖೆಗಳು
ಬೆಂಗಳೂರು, ಮಾ.4: ಸರಕಾರದ ಅಧೀನದಲ್ಲಿ ಬರುವ ವಿವಿಧ ಇಲಾಖೆಗಳ ವಾರ್ಷಿಕ ವರದಿಗಳನ್ನು ಎರಡು ವರ್ಷಗಳಿಂದ ವೆಬ್ಸೈಟ್ಗಳಲ್ಲಿ ಪ್ರಕಟ ಮಾಡುವುದನ್ನು ರಾಜ್ಯ ಸರಕಾರವು ಸ್ಥಗಿತಗೊಳಿಸಿದೆ. ಬಹುತೇಕ ಇಲಾಖೆಗಳ ವೆಬ್ಸೈಟ್ಗಳಲ್ಲಿ ಈಗಲೂ 2020-21ನೇ ಸಾಲಿನ ವಾರ್ಷಿಕ ವರದಿಗಳೇ ಕಂಡು ಬರುತ್ತಿದ್ದು, 2021-22 ಮತ್ತು 2022-23ನೇ ಸಾಲಿನ ವಾರ್ಷಿಕ ವರದಿಗಳನ್ನು ವೆಬ್ಸೈಟ್ಗಳಲ್ಲಿ ಸಿಗುತ್ತಿಲ್ಲ.
ಒಂದು ಆರ್ಥಿಕ ವರ್ಷದಲ್ಲಿ ಬಿಡುಗಡೆಯಾದ ಅನುದಾನ, ಬಳಕೆಯಾದ ಅನುದಾನ, ಕಾರ್ಯರೂಪಕ್ಕೆ ತಂದ ಯೋಜನೆಗಳು, ಯೋಜನೆಯ ಫಲಾನುಭವಿಗಳ ಪಟ್ಟಿ, ನೂತನ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಸಮಗ್ರವಾಗಿ ಇಲಾಖೆಗಳು ವರದಿಯನ್ನು ಸಿದ್ದಪಡಿಸುತ್ತವೆ. ಹೀಗೆ ಸಿದ್ಧವಾದ ವರದಿಗಳನ್ನು ಇಲಾಖೆಯ ವೆಬ್ಸೈಟ್ಗಳಲ್ಲಿ ಪ್ರಕಟಿಸಲಾಗುತ್ತದೆ. ಆದರೆ ಹಿಂದಿನ ಬಿಜೆಪಿ ಸರಕಾರದ ಕಾಲಾವಧಿಯಲ್ಲಿನ ವಾರ್ಷಿಕ ವರದಿಗಳನ್ನು ರಾಜ್ಯ ಸರಕಾರವು ಇದುವರೆಗೂ ವೆಬ್ಸೈಟ್ನಲ್ಲಿ ಪ್ರಕಟಿಸಿಲ್ಲ.
ಜನರ ಉಪಯೋಗಕ್ಕಿಂತ ಭ್ರಷ್ಟಾಚಾರಕ್ಕೆ ಹೆಸರಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ತನ್ನ ವೆಬ್ಸೈಟ್ನಲ್ಲಿ ಇದುವರೆಗೂ ಯಾವುದೇ ವಾರ್ಷಿಕ ವರದಿಗಳನ್ನು ಪ್ರಕಟನೆ ಮಾಡಿಲ್ಲ. ಪ್ರತಿವರ್ಷ 10 ಸಾವಿರ ಕೋಟಿ ರೂ.ಗಳ ಬಜೆಟ್ ಮಂಡಿಸುವ ಬಿಬಿಎಂಪಿ ಅನುದಾನವನ್ನು ಖರ್ಚು ಮಾಡುವ ಕುರಿತು ಸಾರ್ವಜನಿಕವಾಗಿ ಬಹಿರಂಗ ಪಡಿಸಿಲ್ಲ.
ಸಮಾಜ ಕಲ್ಯಾಣ ಇಲಾಖೆಯು 2017-2018ರ ವಾರ್ಷಿಕ ವರದಿಯನ್ನು ಮಾತ್ರ ಪ್ರಕಟಿಸಿದೆ. ಲೋಕೋಪಯೋಗಿ ಇಲಾಖೆ 2019-20ರ ವಾರ್ಷಿಕ ವರದಿ, ಕಾರ್ಮಿಕ ಇಲಾಖೆಯು 2018ರ ವಾರ್ಷಿಕ ವರದಿಯನ್ನು ಪ್ರಕಟಿಸಿದೆ. ಸಹಕಾರ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಆರೋಗ್ಯ ಇಲಾಖೆ, ಯಾವುದೇ ರೀತಿಯ ವರದಿಯನ್ನು ಪ್ರಕಟಿಸಿಲ್ಲ.
ಬಿಜೆಪಿ ಸರಕಾರದಲ್ಲಿ ಸುನೀಲ್ ಕುಮಾರ್ ಅವರು ಸಚಿವರಾಗಿದ್ದ ಇಂಧನ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಲ್ಲಿ ಕೇವಲ 2017-18ನೇ ಸಾಲಿನ ವಾರ್ಷಿಕ ವರದಿಯನ್ನು ಮಾತ್ರ ಪ್ರಕಟಿಸಿದೆ. ಇನ್ನು ಕಂದಾಯ ಇಲಾಖೆಯು 2021-22ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಕಟಿಸಿದ್ದು, 2022-23ನೇ ಸಾಲಿನ ವಾರ್ಷಿಕ ವರದಿಯನ್ನು ಬಹಿರಂಗ ಪಡಿಸಲು ನಿರಾಕರಿಸಿದೆ.
ಕೃಷಿ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳು 2022-23ನೇ ವಾರ್ಷಿಕ ವರದಿಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿವೆ. ಉಳಿದ ಇಲಾಖೆಗಳು ಮಾಹಿತಿಯನ್ನು ಪ್ರಕಟಿಸಿಲ್ಲ.
ಇಲಾಖೆಗಳಿಗೆ ಹೋದರೂ ವಾರ್ಷಿಕ ವರದಿಗಳನ್ನು ನೀಡದ ಅಧಿಕಾರಿಗಳು
ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಭೇಟಿ ನೀಡಿದರೆ ಇಲಾಖೆಯ ಅಧಿಕಾರಿಗಳು ಹಿಂದಿನ ವರ್ಷದ ವಾರ್ಷಿಕ ವರದಿಯನ್ನು ನೀಡಲು ನಿರಕಾರಿಸುತ್ತಿದ್ದಾರೆ. ಈ ಮೂಲಕ ಬಿಜೆಪಿಯ ಭ್ರಷ್ಟಾಚಾರವನ್ನು ಮರೆಮಾಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿವೆ.
ನೋಡಲ್ ಅಧಿಕಾರಿಯ ಜವಾಬ್ದಾರಿ
ರಾಜ್ಯ ಸರಕಾರದ ಎಲ್ಲ ಇಲಾಖೆಗಳಲ್ಲಿ ಇಲಾಖೆಯ ವೆಬ್ಸೈಟ್ಗಳನ್ನು ನಿರ್ವಹಣೆ ಮಾಡಲು ಆಯಾ ಇಲಾಖೆಗಳಲ್ಲಿಯೇ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಎಲ್ಲ ಇಲಾಖೆಗಳಿಗೂ ನೋಡಲ್ ಅಧಿಕಾರಿಗಳು ಇದ್ದಾರೆ. ಹೀಗಾಗಿ ನೋಡಲ್ ಅಧಿಕಾರಿಯೇ ಮಾಹಿತಿಯನ್ನು ವೆಬ್ಸೈಟ್ಗಳಲ್ಲಿ ಹಾಕುವಂತೆ ಕ್ರಮ ವಹಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ(ಇ-ಆಡಳಿತ) ಇಲಾಖೆಯು ತಿಳಿಸಿದೆ.
ಸಾರ್ವಜನಿಕರಿಗೆ ತೊಂದರೆ
ವಾರ್ಷಿಕ ವರದಿಗಳನ್ನು ಮಾತ್ರವಲ್ಲದೆ, ಇಲಾಖೆಯು ಹೊರಡಿಸುವ ಆದೇಶಗಳು, ಸುತ್ತೋಲೆಗಳು, ಜ್ಞಾಪನಾಪತ್ರಗಳನ್ನೂ ವೆಬ್ಸೈಟ್ನಲ್ಲಿ ಹಾಕುವುದನ್ನು ಇಲಾಖೆಗಳು ಸ್ಥಗಿತಗೊಳಿಸಿವೆ. ಇದರಿಂದ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಸಿಗುತ್ತಿಲ್ಲ. ಕೆಲವೊಂದು ಇಲಾಖೆಗಳು ಟೆಂಡರ್ಗಳನ್ನು ಮರೆ ಮಾಚುತ್ತಿರುವುದು ಸಾಮನ್ಯವಾಗಿದೆ.