ಹಿಂದಿನ ಬಿಜೆಪಿ ಸರಕಾರದಿಂದ ಮೀಸಲು ನಿಧಿಗಿಂತಲೂ ಅಧಿಕ ಮೊತ್ತದ ವೇತನ ಪರಿಷ್ಕರಣೆ
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 314.06 ಕೋಟಿ ರೂ. ನಷ್ಟ ಸಾಧ್ಯತೆ
ಬೆಂಗಳೂರು: ಹಿಂದಿನ ಬಿಜೆಪಿ ಸರಕಾರವು 2022-23ನೇ ಸಾಲಿನಲ್ಲಿ ಮೀಸಲಿರಿಸಿದ್ದ ಮೊತ್ತಕ್ಕಿಂತಲೂ 114. ಕೋಟಿ ರೂ. ಹೆಚ್ಚಿಗೆ ಮೊತ್ತಕ್ಕೆ ವೇತನ ಪರಿಷ್ಕರಣೆಗೆ ನೀಡಿರುವ ಅನುಮೋದನೆಯು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 314.06 ಕೋಟಿ ರೂ. ನಷ್ಟ ಸಂಭವಿಸಲು ಕಾರಣವಾಗಲಿದೆ ಇದೀಗ ಬಹಿರಂಗವಾಗಿದೆ.
ಈ ಕುರಿತು ವಿವರಣೆ ನೀಡಬೇಕು ಎಂದು ಪ್ರಧಾನ ಮಹಾಲೇಖಪಾಲರು ಸಾರಿಗೆ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಅವರಿಗೆ 2024ರ ಎಪ್ರಿಲ್ 1ರಂದು ಗೌಪ್ಯ ಪತ್ರ ಬರೆದಿದ್ದು, ಈ ಪತ್ರವು ‘the-file.in’ಗೆ ಲಭ್ಯವಾಗಿದೆ.
ಹಿಂದಿನ ಬಿಜೆಪಿ ಸರಕಾರವು 2022-23ರಲ್ಲಿ ಸಿಬ್ಬಂದಿ ವೇತನ ಪರಿಷ್ಕರಣೆಗಾಗಿ 202.60 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು. ಆದರೆ ನಿಗಮದ ಲಾಭ-ನಷ್ಟದ ಲೆಕ್ಕಾಚಾರದ ಪ್ರಕಾರ ಸಿಬ್ಬಂದಿ ವೇತನ ಪರಿಷ್ಕರಣೆಗಾಗಿ 314.06 ಕೋಟಿ ರೂ.ಗಳಿಗೆ ಅವಕಾಶ ಮಾಡಿಕೊಂಡಿತ್ತು.
ತನ್ನ ಅಧಿಕಾರದ ಅಂತ್ಯದ ದಿನಗಳಲ್ಲಿ ಅಂದರೆ ಮಾರ್ಚ್ 1, 2023ರಿಂದಲೇ ಅನ್ವಯವಾಗುವಂತೆ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಸಿಬ್ಬಂದಿ ವೇತನ ಪರಿಷ್ಕರಣೆಗೆ ಅನುಮೋದಿಸಿ 2023ರ ಮಾರ್ಚ್ 17ರಂದು ಆದೇಶ ಹೊರಡಿಸಿತ್ತು ಎಂಬುದು ಸಿಎಜಿಯ ಪತ್ರದಿಂದ ಗೊತ್ತಾಗಿದೆ.
ವಿಶೇಷವೆಂದರೇ ವೇತನ ಪರಿಷ್ಕರಣೆಯು ಎಂದಿನಿಂದ ಅನ್ವಯ ಆಗಬೇಕು ಎಂಬುದನ್ನು ನಿರ್ಧರಿಸಲು ಸರಕಾರವು ಸಮಿತಿ ರಚಿಸಿತ್ತು. ಈ ಸಮಿತಿಯು 2023ರ ನವೆಂಬರ್ನಲ್ಲಿ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಹೀಗಾಗಿ ಈಗಿನ ಸರಕಾರವು ಇನ್ನೂ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಆದರೂ ಈಗಾಗಲೇ ವೇತನ ಪರಿಷ್ಕರಣೆಗೆ ಅನುಮೋದನೆ ನೀಡಿರುವ ಪರಿಣಾಮ ಚಾಲ್ತಿ ಖಾತೆಯಲ್ಲಿ 314.06 ಕೋಟಿಯಷ್ಟು ನಷ್ಟವಾಗಲಿದೆ ಎಂದು ಸಿಎಜಿ ತನ್ನ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ರಸ್ತೆ ಅಪಘಾತಗಳ ಪರಿಹಾರಗಳಿಗಾಗಿ ಮಾಡಿರುವ ವೆಚ್ಚದ ಬಗ್ಗೆಯೂ ಸಿಎಜಿಯು ತನ್ನ ಗೌಪ್ಯ ಪತ್ರದಲ್ಲಿ ಉಲ್ಲೇಖಿಸಿದೆ. ‘2019-20ರಿಂದ 2021-22ರವರೆಗೆ ಪರಿಹಾರಕ್ಕಾಗಿ 57.47 ಕೋಟಿ ರೂ. ವೆಚ್ಚವಾಗಿದೆ. ಇದೇ ಸಂದರ್ಭದಲ್ಲಿ 2023ರ ಮಾರ್ಚ್ 31ರಂದು 25.42 ಕೋಟಿ ರೂ. ಉಳಿದಿತ್ತು. ಇದು ವರ್ಷದ ಮಟ್ಟಿಗೆ 32.05 ಕೋಟಿ ರೂ.ಗಳಾಗಿವೆ. 2021-22ರ ಪರಿಸ್ಥಿತಿಯಂತೆಯೇ ಇದ್ದರೂ ನಿಗಮವು ಯಾವುದೇ ಕ್ರಮ ಜರುಗಿಸಲಿಲ್ಲ,’ ಎಂದು ವಿವರಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಬೀದರ್ ವಿಭಾಗಕ್ಕೆ ಸಂಬಂಧಿಸಿದಂತೆ 1.21 ಕೋಟಿ ರೂ. ಬಾಕಿ ಇತ್ತು. ಜಿಲ್ಲಾಧಿಕಾರಿ ಮಾಹಿತಿ ಮೇರೆಗೆ ನಿಗಮವು ಈ ಮೊತ್ತವನ್ನು ಪಡೆಯಲಿದೆ. ನಗರದೊಳಗೆ ಪ್ರವಾಸಿ ಬಸ್ಗಳನ್ನು ನಿರ್ವಹಣೆ ಮಾಡಲು ಕೈಗೊಂಡ ನಷ್ಟವನ್ನು ಭರಿಸಲು ಈ ಮೊತ್ತವನ್ನು ಬಳಸಲಾಗುತ್ತದೆ. ಆದರೆ ಜಿಲ್ಲಾಧಿಕಾರಿಗಳ ಈ ಕ್ರಮಕ್ಕೆ ಹಣಕಾಸು ಇಲಾಖೆಯು ಯಾವುದೇ ಅನುಮೋದನೆ ನೀಡಿಲ್ಲ. ಹೀಗಾಗಿ ಖರ್ಚು ಮತ್ತು ವೆಚ್ಚಗಳ ಲೆಕ್ಕವು ಕ್ರಮಬದ್ಧವಾಗಿಲ್ಲ. ಇದರಿಂದ ನಿಗಮವು 1.21 ಕೋಟಿ ರೂ. ನಷ್ಟಕ್ಕೆ ಗುರಿಯಾಗಲಿದೆ ಎಂದು ಸಿಎಜಿಯು ಹೇಳಿದೆ.
ವಾಹನಗಳ ಮೇಲಿನ ಸವಕಳಿ ಕುರಿತೂ ಸಿಎಜಿಯು ವಿವರಿಸಿದೆ. ಬಸ್ಗಳ ಹೊರ ಕವಚಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಎಸ್ಟಿ 2.41 ಕೋಟಿ ರೂ.ಗಳನ್ನು 2022-23ನೇ ಸಾಲಿಗೆ ಕಟಾಯಿಸಿಲ್ಲ. ಆದರೆ ನಿಗಮವು ಬಸ್ಗಳ ಮೌಲ್ಯವನ್ನೇ ಕಡಿಮೆ ಮಾಡಿತ್ತು. ಇದರಿಂದಾಗಿ 2.41 ಕೋಟಿ ರೂ. ನಷ್ಟವಾಗಿದೆ ಎಂದು ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.
ಲೆಕ್ಕ ಪರಿಶೋಧನೆ ನೀತಿ ಪ್ರಕಾರ ಕಟ್ಟಡ ಸವಕಳಿಯನ್ನು ಶೇ.2.5ರಷ್ಟು ತೆಗೆಯಬೇಕು. ಡಾಂಬರೀಕರಣ ಸೇರಿದಂತೆ ಕಟ್ಟಡಗಳ ಕಾಮಗಾರಿಗಳು, ವಿದ್ಯುತ್ ಸಂಪರ್ಕ ಕಾಮಗಾರಿಗಳು ಸೇರಿದಂತೆ 2022-23ರಲ್ಲಿ 3.37 ಕೋಟಿ ರೂ. ವೆಚ್ಚವಾಗಿತ್ತು. ಸವಕಳಿ ತೆಗೆಯುವ ಸಂಬಂಧ 2016-17ರಿಂದ 2021-22ರ ಅವಧಿಯಲ್ಲಿ ಎಚ್ಚರಿಕೆ ನೀಡಿದ್ದರೂ ಈ ಸಂಬಂಧ ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬುದು ಸಿಎಜಿ ಪತ್ರದಿಂದ ತಿಳಿದು ಬಂದಿದೆ.
ಸಾರಿಗೆ ನಿಗಮವು 76.43 ಕೋಟಿ ರೂ. ಗ್ರಾಚ್ಯುಟಿ ನಿಧಿ ಸೃಷ್ಟಿಸಿದೆ. 1.21 ಕೋಟಿ ರೂ. ಮೊತ್ತದ ಆಸ್ತಿಗಳನ್ನು ಅಧಿಕವಾಗಿ ತೋರಿಸುತ್ತಿದೆ. ಋಣಭಾರ 284.42 ಕೋಟಿ ರೂ. ಎಂದು ತೋರಿಸಿದೆ. ಅಲ್ಲದೇ ನಷ್ಟವನ್ನು 243.21 ಕೋಟಿ ರೂ. ಹೆಚ್ಚುವರಿಯಾಗಿ ತೋರಿಸಿದೆ ಎಂದು ಸಿಎಜಿ ಪತ್ರದಲ್ಲಿ ಹೇಳಲಾಗಿದೆ.