ಮೋದಿ ಸರಕಾರದ ಅಗ್ನಿವೀರ್ ಕಥೆ ಏನಾಗಬಹುದು?
ದೇಶದ ಯುವಕರನ್ನು ನಡುದಾರಿಯಲ್ಲಿ ಕೈಬಿಡುವ ಅಪಾಯಕಾರಿ ಯೋಜನೆಯೇ?
PC : PTI
ಯುವಕರನ್ನು ಕರೆದು ಸೈನಿಕ ತರಬೇತಿ ಕೊಡುತ್ತೀರಿ. ಅತ್ಯಂತ ಅಲ್ಪಾವಧಿಯಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿ ಕೆಲಸಕ್ಕೆ ಸೇರಿಸಿಕೊಂಡು, ಅಷ್ಟೇ ಬೇಗ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮನೆಗೂ ಕಳಿಸಲಾಗುತ್ತದೆ. ಆಮೇಲೆ ಅವರ ಗತಿಯೇನು ಎಂಬ ಪ್ರಶ್ನೆಯನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ಎತ್ತಿದ್ದರು.
ಈಗ ಅಗ್ನಿವೀರ್ ಗಳ ಬಗ್ಗೆ ಬರುತ್ತಿರುವ ಸುದ್ದಿಗಳನ್ನು ನೋಡಿದರೆ ನಿಜಕ್ಕೂ ಕಳವಳವಾಗುತ್ತದೆ. ಎರಡು ಘಟನೆಗಳನ್ನು ಗಮನಿಸಬೇಕು.
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆಭರಣ ಅಂಗಡಿಯಿಂದ 50 ಲಕ್ಷಕ್ಕಿಂತಲೂ ಅಧಿಕ ಮೌಲ್ಯದ ಚಿನ್ನ ಲೂಟಿಯಾಗಿತ್ತು. ಕಳೆದ ವಾರ ನಡೆದ ಈ ಪ್ರಕರಣದ ಮುಖ್ಯ ಆರೋಪಿ ಅಗ್ನಿವೀರ್ ಯೋಧನಾಗಿದ್ದವನು ಎಂದು ಪೊಲೀಸರು ತಿಳಿಸಿದ್ದಾರೆ.
ಆತ ಪಠಾಣ್ ಕೋಟ್ ನಲ್ಲಿ ಪೋಸ್ಟಿಂಗ್ ಆಗಿದ್ದವನು ಎನ್ನಲಾಗಿದೆ. ಇದಕ್ಕೂ ಕೆಲ ದಿನಗಳಿಗೆ ಮೊದಲು ಪಂಜಾಬ್ನಲ್ಲಿ ಕ್ಯಾಬ್ ಚಾಲಕನಿಗೆ ಗನ್ ತೋರಿಸಿ ದರೋಡೆ ನಡೆಸಲಾದ ಪ್ರಕರಣವೊಂದು ಸುದ್ದಿಯಾಗಿತ್ತು. ಆದರ ಆರೋಪಿ ಕೂಡ ರಜೆಯ ಮೇಲೆ ಬಂದಿದ್ದ ಅಗ್ನಿವೀರ್ ಯೋಧ ಎಂಬುದು ಬೆಳಕಿಗೆ ಬಂದಿದೆ
ಬಂಧಿತ ಅಗ್ನಿವೀರ್ 2022ರಲ್ಲಿ ಸೇನೆಗೆ ಸೇರಿದ್ದ ಎಂದು ತಿಳಿದು ಬಂದಿದೆ. ಇದು ನಾಲ್ಕು ವರ್ಷಕ್ಕೆ ಸೇನೆಯಿಂದ ನಿವೃತ್ತರಾಗಲಿರುವ ಅಗ್ನಿವೀರ್ ಗಳ ಅಸಲಿ ಪರಿಸ್ಥಿತಿ.
ಅವರಿಗೆ ತಾವು ಕೆಲಸದಲ್ಲಿ ಇದ್ದೇವೆ ಎನ್ನುವುದಕ್ಕಿಂತ ಹೆಚ್ಚಾಗಿ ತಾವು ಇನ್ನು ಕೆಲವೇ ಸಮಯದಲ್ಲಿ ನಿರುದ್ಯೋಗಿಗಳಾಗಿ ಹೊರಬೀಳಲಿರುವವರು ಎಂಬ ಆತಂಕವೇ ದೊಡ್ಡ ಭಾರವಾಗಿ ಕಾಡುತ್ತಿದೆಯೆ ಎಂಬ ಅನುಮಾನ ಮೂಡದೇ ಇರುವುದಿಲ್ಲ.
ನಾಲ್ಕು ವರ್ಷಗಳ ಕೆಲಸ, ಅಷ್ಟರೊಳಗೇ ಜೀವನೋಪಾಯಕ್ಕೆ ಅಡ್ಡದಾರಿಯಲ್ಲಿ ಏನಾದರೂ ಮಾಡಿಕೊಂಡು ಬಿಡಬೇಕು ಎಂಬ ಆತುರಕ್ಕೆ, ಕ್ರಿಮಿನಲ್ ಮನಃಸ್ಥಿತಿಗೆ ತಳ್ಳುತ್ತಿದೆಯೆ? ಅತಂತ್ರ ಸ್ಥಿತಿಯೇ ಅವರನ್ನು ಇಂಥ ಅವಸ್ಥೆಗೆ ದೂಡುತ್ತಿದೆಯೆ? ಅಗ್ನಿವೀರ್ ನಿಂದ ದೊಡ್ಡ ಸಂಖ್ಯೆಯಲ್ಲಿ ನಿವೃತ್ತರಾಗಿ ಬರುವವರ ಸ್ಥಿತಿಯಿನ್ನು ಹೇಗಿರಬಹುದು?
ಅವರು ಇನ್ನು ಮುಂದೆ ತಾವು ನಿರುದ್ಯೋಗಿಗಳು ಎಂಬ ಸಂಕಟದ ಮನಃಸ್ಥಿತಿಯಲ್ಲೇ ಬರುತ್ತಾರೆ. ಈಗಾಗಲೇ ಅವರು ತಪ್ಪು ದಾರಿಗೆ ಹೊರಳಿಬಿಟ್ಟಿದ್ದಾರೆ ಮತ್ತು ಹೀಗೆ ತಪ್ಪು ದಾರಿಗೆ ಹೊರಳಿರುವುದಕ್ಕೆ, ನಾಲ್ಕು ವರ್ಷಗಳ ಬಳಿಕ ತಮ್ಮ ಕೈಯಲ್ಲಿ ಈ ಕೆಲಸವಿರುವುದಿಲ್ಲ ಎಂಬ ಅತಂತ್ರ ಭಾವನೆಯೇ ಕಾರಣವಾಗಿದೆಯೆ?
ಅಗ್ನಿವೀರ್ ಬಗ್ಗೆ ದೊಡ್ಡ ದೊಡ್ಡ ಮಾತಾಡುವ ಮೋದಿ ಸರ್ಕಾರ ಈ ಸಣ್ಣ ಸಣ್ಣ ಘಟನೆಗಳನ್ನು ಸೂಕ್ಷವಾಗಿ ಗಮನಿಸದೇ ಹೋದರೆ ಅಪಾಯ ಇಲ್ಲದೆ ಇಲ್ಲ. ಯಾರೋ ಕದ್ದರು, ಯಾರೋ ದರೋಡೆ ಮಾಡಿದರು ಎಂದು ಎಲ್ಲ ಕ್ರೈಮ್ ಘಟನೆಗಳ ಹಾಗೆ ಅಲಕ್ಷಿಸಿಬಿಡುವ ಸಂಗತಿ ಇದಲ್ಲ ಎಂದೇ ಅನಿಸುತ್ತದೆ.
ಈಗಾಗಲೇ ಟೀಕೆಗಳಿರುವ ಹಾಗೆ ವಿವೇಚನೆಯಿಲ್ಲದ ಮತ್ತು ಸೇನೆಯಲ್ಲೇ ತಾರತಮ್ಯ ಭಾವನೆಗೆ ಕಾರಣವಾಗಿರುವ ಅಗ್ನಿವೀರ್ ಯೋಜನೆಯ ಅಂತಿಮ ಅಪಾಯದ ಬಗ್ಗೆ ಈಗಲಾದರೂ ಎಚ್ಚೆತ್ತುಕೊಳ್ಳುವ ಅಗತ್ಯತೆಯಿದೆ.