ಹ್ಯಾಟ್ರಿಕ್ ಸೋಲಿನ ಆಘಾತ: ಅರ್ಜುನನೂ ಆಗದ ಅಭಿಮನ್ಯುವೂ ಆಗದ ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ
ಈ ಚುನಾವಣೆ ತನಗೆ ಬೇಡ ಎಂದೇ ಅಂದುಕೊಂಡಿದ್ದ ನಿಖಿಲ್ ಕುಮಾರಸ್ವಾಮಿ ವಾಸ್ತವದಲ್ಲಿ ಚುನಾವಣಾ ಕಣಕ್ಕೆ ಧುಮುಕಿದವರಲ್ಲ. ಬದಲಾಗಿ ಅವರನ್ನು ಅಖಾಡಕ್ಕೆ ಒತ್ತಾಯದಿಂದಲೇ ತಳ್ಳಲಾಯಿತು. ಹಾಗಾಗಿ, ಕುಮಾರಸ್ವಾಮಿ ಹೇಳಿದ ಹಾಗೆ ಅವರ ಪುತ್ರ ಅರ್ಜುನ ಹೇಗೂ ಆಗಲಿಲ್ಲ, ಅತ್ತ ಅಭಿಮನ್ಯುವೂ ಆಗಲಿಲ್ಲ, ಇತ್ತ ಗೆಲುವಿನ ದಡ ಸೇರುವುದೂ ಅವರಿಗೆ ಸಾಧ್ಯವಾಗಲಿಲ್ಲ.
ಚುನಾವಣಾ ರಾಜಕಾರಣದಲ್ಲಿ ನಿಖಿಲ್ ಕುಮಾರಸ್ವಾಮಿ ಸತತ ಮೂರನೇ ಸೋಲು ಕಂಡಿದ್ಧಾರೆ. ಈ ಉಪ ಚುನಾವಣೆಯಲ್ಲಿ ಮತದಾರರು ಅವರ ಕೈಹಿಡಿಯಬಹುದು ಎಂಬುದು ಹೆಚ್ಚಿನವರ ನಿರೀಕ್ಷೆಯಾಗಿತ್ತು.
ಎರಡು ಚುನಾವಣೆ ಸೋತಿದ್ದರ ಕುರಿತ ಅನುಕಂಪದ ಲಾಭದ ಲೆಕ್ಕಾಚಾರವೂ ಅವರನ್ನು ಕಣಕ್ಕಿಳಿಸುವಾಗ ಕುಮಾರಸ್ವಾಮಿ ಮನಸ್ಸಿನಲ್ಲಿ ಇದ್ದಿರಲು ಸಾಕು.
ನಿಖಿಲ್ ಎರಡು ಸೋಲುಗಳನ್ನು ಕಂಡ ಬಳಿಕ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಒಡ್ಡಿಕೊಂಡಿದ್ದರು. ನಿಖಿಲ್ ಒಂದೇ ಪಕ್ಷದಿಂದ ಮೂರನೇ ಬಾರಿ ಸ್ಪರ್ಧಿಸಿದ್ದರು ಮತ್ತು ಇದು ಅವರು ಕಣಕ್ಕಿಳಿದ ಮೂರನೇ ಕ್ಷೇತ್ರವಾಗಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್ ಸೋಲು ಕಂಡಿದ್ದರು.
ಈಗ ಚನ್ನಪಟ್ಟಣದ ಉಪ ಚುನಾವಣೆಯಲ್ಲಿಯೂ ಮತದಾರರರು ಅವರ ಕೈಹಿಡಿಯಲಿಲ್ಲ. ಒಕ್ಕಲಿಗರು ನಿರ್ಣಾಯಕ ಸಂಖ್ಯೆಯಲ್ಲಿರುವ, ಜೆಡಿಎಸ್ ನ ಪ್ರಭಾವ ಜೋರಾಗಿರುವ ಕ್ಷೇತ್ರಗಳಲ್ಲೇ ನಿಖಿಲ್ ಕುಮಾರಸ್ವಾಮಿ ಮುಗ್ಗರಿಸಿದ್ದಾರೆ.
ಈ ಬಾರಿಯಂತೂ ತನ್ನ ತಂದೆ ಗೆದ್ದಿದ್ದ ಕ್ಷೇತ್ರದಲ್ಲಿ ಬಿಜೆಪಿಯ ಬೆಂಬಲದ ಜೊತೆ ಕಣಕ್ಕಿಳಿದೂ ಅವರಿಗೆ ಹೀನಾಯ ಸೋಲಾಗಿದೆ.
ತಾನು ಸ್ಪರ್ಧಿಸುವುದಿಲ್ಲ ಎನ್ನುತ್ತಿದ್ದ ನಿಖಿಲ್ ಕಡೆಗೆ ಅಜ್ಜ ದೇವೇಗೌಡರ ಮಾತಿಗೆ ಮಣಿದ ಹಾಗಿತ್ತು. ಮೊಮ್ಮಗನನ್ನು ಮನೆಗೆ ಕರೆಸಿ ಮಾತನಾಡಿದ್ದ ದೇವೇಗೌಡರು ಮಾರನೇ ದಿನ ನಿಖಿಲ್ ಉಮೇದುವಾರಿಕೆಯನ್ನು ಘೋಷಿಸುವಾಗ ಗೆದ್ದೆ ಎಂದ ಭಾವನೆ ದೊಡ್ಡ ಗೌಡರಲ್ಲಿತ್ತು. ಆದರೆ ಸ್ಪರ್ಧಿಸಲು ಒಪ್ಪಿಕೊಂಡಿದ್ದ ನಿಖಿಲ್ ಅವರಲ್ಲಿ ಮಾತ್ರ ಉತ್ಸಾಹವಿರಲಿಲ್ಲ. ಈಗ ಸೋಲಿನ ನಂತರ ಪ್ರತಿಕ್ರಿಯಿಸುವಾಗಲೂ ಅವತ್ತಿನ ಸಂದರ್ಭ ಅವರ ಮನಸ್ಸೊಳಗೆ ಕಾಡುತ್ತಲೇ ಇದ್ದುದು ಸ್ಪಷ್ಟವಿತ್ತು.
ಯೋಗೇಶ್ವರ್ ಅವರು ಹೇಳಿದಂತೆ, ಮೊಮ್ಮಗನನ್ನು ಗೆಲ್ಲಿಸಿ ರಾಜಕೀಯವಾಗಿ ಬೀಗಬೇಕೆಂದು ದೇವೇಗೌಡರು ಬಯಸಿದ್ದರು. ಆದರೆ ದೇವೇಗೌಡರ ಕುಟುಂಬದ ಕುಡಿಯ ರಾಜಕೀಯ ಪ್ರವೇಶಕ್ಕೆ ಸತತ ಮೂರನೇ ಸಲವೂ ಜನ ಸಮ್ಮತಿ ಕೊಟ್ಟಿಲ್ಲ. ಸಿಪಿ ಯೋಗೇಶ್ವರ್ ವಿರುದ್ಧ ನಿಖಿಲ್ ಸೋಲನುಭವಿಸಿದ್ದಾರೆ.
ತನಗೆ ಬೇಡವಾಗಿದ್ದ ಈ ಚುನಾವಣೆಯಲ್ಲಿ ಒತ್ತಾಯಕ್ಕೆ ಕಟ್ಟುಬಿದ್ದು ಕಣಕ್ಕಿಳಿದಿದ್ದ ನಿಖಿಲ್ ಈಗ ಆಗಿರುವ ಸೋಲಿನ ಹೊರೆಯನ್ನೂ ಹೊರಬೇಕಾಗಿದೆ.
ಸೋತೆ ಎಂದು ಕುಗ್ಗುವುದಿಲ್ಲ, ಮೂಲೆ ಸೇರಿ ಕೂರುವ ಪ್ರಶ್ನೆಯೇ ಇಲ್ಲ ಎಂದೆಲ್ಲ ಅವರು ಹೇಳಿದ್ದರೂ ಸತತ ಮೂರನೇ ಸೋಲು ಅವರನ್ನು ಆಳವಾಗಿಯೇ ಕಾಡುವಂಥದ್ಧಾಗಿದೆ.
ಇದರೊಂದಿಗೆ ಅವರ ರಾಜಕೀಯ ಭವಿಷ್ಯವೂ ಮಂಕಾಗುವುದೆ ಎಂಬ ಪ್ರಶ್ನೆಯೂ ಎದ್ದಿದೆ. ಸೋಲಿನ ನಂತರ ಮಾಧ್ಯಮದ ಮುಂದೆ ಮಾತನಾಡುವಾಗ ನಿಖಿಲ್ ಭಾವುಕರಾಗಿದ್ದರು.
ಯೋಗೇಶ್ವರ್ ಟೀಕಿಸಿದಂತೆ ಮೂವತ್ತೈದು ಮೂವತ್ತಾರರ ಯುವಕ ಅರವತ್ತು ಅರವತ್ತೈದರವರ ಹಾಗೆ ಮಾತಾಡುತ್ತಿದ್ದರು. ಎದುರಾಳಿ ಪಕ್ಷವನ್ನು ಟೀಕಿಸುವಾಗ ಕಿರಿಯ ನಾಯಕನಾಗಿ ತಾನು ತೋರಿಸಬಹುದಾಗಿದ್ದ ಕರಾರುವಾಕ್ಕುತನವನ್ನು, ಸ್ಪಷ್ಟತೆಯನ್ನು ತೋರಿಸಲಿಲ್ಲ. ಪಕ್ವತೆ ಇರಲಿಲ್ಲ.
ಸೋಲಿನ ನಂತರದ ಮಾತಾಡುವಾಗ ಅವರು ತೋರಿಸಿದ ಪಕ್ವತೆಯ ಒಂದಂಶವನ್ನಾದರೂ ಅವರು ಚುನಾವಣಾ ಪ್ರಚಾರದಲ್ಲಿ ತೋರಿಸಿದ್ದಂತೆ ಕಾಣಲಿಲ್ಲ.
ತಮ್ಮ ಕುಟುಂಬದ ರಾಜಕೀಯದ ಮುಂದಿನ ತಲೆಮಾರಾಗಬೇಕೆಂಬ ಬಯಕೆ ನಿಖಿಲ್ ಅವರಲ್ಲಿ ಇತ್ತೊ ಇಲ್ಲವೊ ಗೊತ್ತಿಲ್ಲ. ಇದ್ದರೂ ಅದಕ್ಕೆ ಅವಸರ ಬೀಳಬೇಕಿರಲಿಲ್ಲ.
ಆದರೆ ಹೇಗಾದ್ರೂ ಮಗನನ್ನು ರಾಜಕೀಯವಾಗಿ ಸ್ಥಾಪಿಸಿಯೇ ಬಿಡಬೇಕೆಂಬ ಆತುರ ಕುಮಾರಸ್ವಾಮಿಯವರಲ್ಲಂತೂ ಇತ್ತು. ಮತ್ತದು ನಿಖಿಲ್ ಅವರನ್ನು ಒಂದಲ್ಲ, ಎರಡಲ್ಲ, ಮೂರು ಸತತ ಸೋಲುಗಳ ಎದುರು ತಂದು ನಿಲ್ಲಿಸಿದೆ.