ಶೀಘ್ರವೇ ರಾಜ್ಯ ಬಿಜೆಪಿ ಅಧ್ಯಕ್ಷಗಾದಿ ವಿವಾದಕ್ಕೆ ತೆರೆ: ನಿರಾಣಿ
ವಾರ್ತಾಭಾರತಿ ವಿಶೇಷ ಸಂದರ್ಶನ

ಬೆಂಗಳೂರು: ರಾಜ್ಯ ಬಿಜೆಪಿಯ ಒಳಜಗಳ ತಾರಕಕ್ಕೇರಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಹೈಕಮಾಂಡ್ ನಾಯಕರಿಗೆ ಕಗ್ಗಂಟಾಗಿದೆ. ಹಾಲಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಮುಂದುವರಿಸುತ್ತಾರೆಯೇ ಇಲ್ಲವೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಇದೆಲ್ಲದರ ನಡುವೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಮತ್ತು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೆಸರು ಕೂಡ ಕೇಳಿಬರುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮುರುಗೇಶ್ ನಿರಾಣಿ ಅವರು ‘ವಾರ್ತಾ ಭಾರತಿ’ ಜೊತೆ ಮಾತನಾಡಿದ್ದಾರೆ.
ವಾರ್ತಾಭಾರತಿ: ರಾಜ್ಯ ಬಿಜೆಪಿ ಈಗ ಅಧಿಕಾರದಲ್ಲಿ ಇಲ್ಲ. ಆದರೂ ಏಕೆ ಇಷ್ಟೊಂದು ಕಚ್ಚಾಟ?
ನಿರಾಣಿ: ಮೊದಲು ಪಕ್ಷ ಸಣ್ಣದಿತ್ತು. ಸಮಸ್ಯೆಗಳು ಸ್ವಲ್ಪ ಇದ್ದವು. ಇವತ್ತು ಪಕ್ಷ ದೊಡ್ಡದಾಗಿದೆ. ಹಲವು ನಾಯಕರು ಹುಟ್ಟಿಕೊಂಡಿದ್ದಾರೆ. ಹಲವಾರು ಅಭಿಪ್ರಾಯಗಳು ಹುಟ್ಟಿಕೊಂಡಿವೆ. ಹಾಗಾಗಿ ಕೆಲವು ಸಮಸ್ಯೆಗಳು ಇರುವುದು ನಿಜ. ಆದರೆ ಶೀಘ್ರವೇ ಈ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ.
ವಾರ್ತಾಭಾರತಿ: ನೀವು ಯಾವ ಬಣ?
ನಿರಾಣಿ: ನಾನು ಭಾರತೀಯ ಜನತಾ ಪಕ್ಷದ ಬಣ. ೩೫ ವರ್ಷದಿಂದ ಈ ಪಕ್ಷದಲ್ಲಿ ಇದ್ದೇನೆ. ಯಾವತ್ತೂ ಬೇರೆ ಪಕ್ಷದ ಕಡೆ ತಿರುಗಿ ನೋಡದೇ ಪಕ್ಷ ವಹಿಸಿದ ಕೆಲಸಗಳನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿದ್ದೇನೆ. ನನ್ನದು ಯಾವತ್ತೂ ಬಿಜೆಪಿ ಬಣ.
ವಾರ್ತಾಭಾರತಿ: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ನಿಮ್ಮ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ನಡುವೆ ಕಲಹ ಉಂಟಾಗಿತ್ತು. ಅದರಿಂದ ನೀವು ಅವರ ಬಣ ಸೇರಲ್ಲ ಅನಿಸುತ್ತೆ?
ನಿರಾಣಿ: ನಾನು ಯಾವ ಬಣವೂ ಅಲ್ಲ. ಯಾರ ಜೊತೆಗೂ ಇಲ್ಲ. ಯಾರ ವಿರುದ್ಧವೂ ಮಾತನಾಡಿಲ್ಲ. ಪಕ್ಷದ ಜೊತೆ ಇರುತ್ತೇನೆ ಅಷ್ಟೇ. ಒಂದು ರೀತಿಯಲ್ಲಿ ತಟಸ್ಥ ಬಣ.
ವಾರ್ತಾಭಾರತಿ: ನಿಮ್ಮ ಮತ್ತು ಬಸವನಗೌಡ ಪಾಟೀಲ್ ನಡುವೆ ಈಗ ಸಂಬಂಧ ಸುಧಾರಿಸಿದೆಯೇ?
ನಿರಾಣಿ: ನಾನು ಯಾವತ್ತೂ ಅವರ ವಿರುದ್ಧ ಮಾತನಾಡಿಲ್ಲ.
ವಾರ್ತಾಭಾರತಿ: ಅವರ ಹೆಸರು ಹೇಳಲು ಕೂಡ ಸಿದ್ಧ ಇಲ್ಲ ನೀವು?
ನಿರಾಣಿ: ಹಾಗೇನಿಲ್ಲ, ಬಸವನಗೌಡ ಪಾಟೀಲ್ ಯತ್ನಾಳ್ ಬಗ್ಗೆ ನನಗೇನೂ ಬೇಸರ ಇಲ್ಲ. ಅವರು ಕೂಡ ಪಂಚಮಸಾಲಿ ಸಮುದಾಯದ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದರು. ನಾನು ಕೂಡ ಮಾಡುತ್ತಿದ್ದೆ. ನಮ್ಮಿಬ್ಬರ ದಾರಿಗಳು ಬೇರೆ ಇರಬಹುದು. ಗುರಿ ಒಂದೇ ಇತ್ತು.
ವಾರ್ತಾಭಾರತಿ: ಯಡಿಯೂರಪ್ಪ ಅವರೊಂದಿಗೆ ನಿಮ್ಮ ಸಂಬಂಧ ಹೇಗಿದೆ? ಅವರನ್ನು ಭೇಟಿಯಾಗಿದ್ದೀರಾ?
ನಿರಾಣಿ: ಯಡಿಯೂರಪ್ಪರನ್ನು ಮೊನ್ನೆ ಭೇಟಿಯಾ
ಗಿದ್ದೆ. ಅವರ ಆರೋಗ್ಯ ಸರಿ ಇರಲಿಲ್ಲ. ವಿಚಾರಿಸಿಕೊಂಡು ಸ್ವಲ್ಪಹೊತ್ತು ಇದ್ದು ಬಂದೆ. ಅವರು ನನಗೆ ರಾಜಕೀಯ ಗುರುಗಳು. ಅವರು ಹೇಳಿದ್ದನ್ನು ನಾನು ಯಾವತ್ತೂ ಇಲ್ಲ ಎಂದಿಲ್ಲ. ಅವರ ಜೊತೆಗಿನ ಸಂಬಂಧಕ್ಕೆ ಧಕ್ಕೆ ಆಗುವ ಪ್ರಶ್ನೆಯೇ ಇಲ್ಲ.
ವಾರ್ತಾಭಾರತಿ: ನಿಜಕ್ಕೂ ವಿಜಯೇಂದ್ರ ಬದಲಾಗುವ ಸಾಧ್ಯತೆ ಇದೆಯಾ?
ನಿರಾಣಿ: ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಉಜ್ವಲ ಭವಿಷ್ಯವಿದೆ. ನಮ್ಮ ಪಕ್ಷದಲ್ಲಿ ಯಾರು ಬದಲಾಗುತ್ತಾರೆ? ಯಾರಿಗೆ ಯಾವ ಜವಾಬ್ದಾರಿ ಕೊಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.
ವಾರ್ತಾಭಾರತಿ: ನೀವು ಅಮಿತ್ ಶಾ ಅವರನ್ನು ಭೇಟಿಯಾಗಿದ್ದೀರಿ ಎಂಭ ಸುದ್ದಿ ಇದೆ. ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಪ್ರಯತ್ನ ಇದೆಯಾ?
ನಿರಾಣಿ: ನಾನು ದಿಲ್ಲಿಗೆ
ಹೋಗಿದ್ದು ಉದ್ಯಮದ ಕೆಲಸಕ್ಕಾಗಿ. ನಾಲ್ಕು ದಿನ ಅಲ್ಲೇ ಇದ್ದೆ. ಅಮಿತ್ ಶಾ ಅವರಿಂದ ಹಿಡಿದು ಯಾರ ಭೇಟಿಗೂ ಸಮಯಾವಕಾಶ ಕೇಳಿಯೇ ಇಲ್ಲ. ದಿಲ್ಲಿಯಲ್ಲಿ ಇದ್ದುದರಿಂದ ಸೋಮಣ್ಣ ಮನೆಗೆ ಊಟಕ್ಕೆ ಹೋಗಿದ್ದೆ. ಅದರಿಂದಾಗಿ ಊಹಾಪೋಹಗಳು ಹುಟ್ಟಿಕೊಂಡಿವೆ.
ವಾರ್ತಾಭಾರತಿ: ಹೊಸ ಬಿಜೆಪಿ ಅಧ್ಯಕ್ಷರ ಆಯ್ಕೆ ಅಥವಾ ನೇಮಕ ಯಾವಾಗ ಆಗಬಹುದು?
ನಿರಾಣಿ: ನಮ್ಮ ಪಕ್ಷದಲ್ಲಿ ಯಾವಾಗ ಏನು ತೀರ್ಮಾನ ಆಗುತ್ತದೆ ಎನ್ನುವುದು ಕಡೆ ಒಂದು ಗಂಟೆಯಲ್ಲಿ ಗೊತ್ತಾಗುತ್ತದೆ. ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಬಿಎಲ್ ಸಂತೋಷ್ ಸೇರಿ ತೀರ್ಮಾನ ಮಾಡುತ್ತಾರೆ. ಎಲ್ಲ ರೀತಿಯಲ್ಲೂ ಅಳೆದು-ತೂಗಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ.
ವಾರ್ತಾಭಾರತಿ: ನಿಮ್ಮ ನೆಟ್‌ವರ್ಕ್ ಮತ್ತು ನೆಟ್‌ವರ್ತ್ ಎರಡೂ ದೊಡ್ಡದು. ಹಾಗಾಗಿ ನೀವೂ ಪ್ರಯತ್ನ ಮಾಡುತ್ತಿದ್ದೀರಿ. ಪಕ್ಷವೂ ನಿಮ್ಮನ್ನು ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ. ನಿಜವೇ?
ನಿರಾಣಿ: ನಾನು ಆಗಲೇ ಹೇಳಿದಂತೆ ಅದು ಯಾರಿಗೂ ಗೊತ್ತಿಲ್ಲದ ವಿಷಯ. ನನಗೆ ಸಾಮರ್ಥ್ಯ ಇದೆ ಎನಿಸಿದರೆ ಅವಕಾಶ ಕೊಡುತ್ತಾರೆ. ಆದರೆ ನಾನು ಯಾರ ಬಳಿಯೂ ಹೋಗಿ ಏನನ್ನೂ ಕೇಳಿಲ್ಲ. ಕೊಡುವುದು-ಬಿಡುವುದು ಎಲ್ಲವೂ ಹೈಕಮಾಂಡ್ ನಾಯಕರ ನಿರ್ಧಾರಕ್ಕೆ ಬಿಟ್ಟದ್ದು.
ವಾರ್ತಾಭಾರತಿ: ಹಿಂದೆ ಕೂಡ ರಾಜ್ಯ ಬಿಜೆಪಿ ಅಧ್ಯಕ್ಷಗಾದಿಗೆ ನೇಮಿಸುವಾಗ, ಮುಖ್ಯಮಂತ್ರಿ ಮಾಡುವ ವಿಚಾರದಲ್ಲಿ, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ವಿಚಾರ ಬಂದಾಗೆಲ್ಲಾ ನಿಮ್ಮ ಹೆಸರು ಚಾಲ್ತಿಗೆ ಬಂದಿತ್ತು. ಈಗಲೂ ಚರ್ಚೆ ಆಗುತ್ತಿದೆ. ಹಾಗಿದ್ದರೆ ಏನು ನಡೆಯುತ್ತಿದೆ?
ನಿರಾಣಿ: ಮಾಧ್ಯಮದಲ್ಲಿ ಚರ್ಚೆ ಆಗುತ್ತಿರುವುದು ನಿಜ. ಆದರೆ ನಾನು ಯಾರನ್ನೂ ಕೇಳಿಲ್ಲ. ನನ್ನನ್ನೂ ಯಾರು ಕೇಳಿಲ್ಲ.
ವಾರ್ತಾಭಾರತಿ: ನಿಮ್ಮ ಮೊದಲ ಆದ್ಯತೆ ಯಾವುದು ರಾಜಕಾರಣವೇ? ಉದ್ಯಮವೇ?
ನಿರಾಣಿ: ಮೊದಲಿಗೆ ರಾಜಕಾರಣ ಮತ್ತು ಉದ್ಯಮಗಳೆರಡನ್ನೂ ಸಮಾನವಾಗಿ ನೋಡುತ್ತಿದ್ದೆ. ಈಗ ಮಕ್ಕಳು ದೊಡ್ಡವರಾಗಿದ್ದಾರೆ. ಉದ್ಯಮವನ್ನು ಅವರೇ ನಿಭಾಯಿಸುತ್ತಿದ್ದಾರೆ. ಅಗತ್ಯ ಬಿದ್ದರೆ ಮಾತ್ರ ನನ್ನ ಸಲಹೆ ಕೇಳುತ್ತಾರೆ. ಹಾಗಾಗಿ ಈಗ ಸಂಪೂರ್ಣವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದೇನೆ. ಪಕ್ಷ ಏನೇ ಕೆಲಸ ಕೊಟ್ಟರೂ ಮಾಡುತ್ತಿದ್ದೇನೆ.
ವಾರ್ತಾಭಾರತಿ: ಹಿಂದೊಮ್ಮೆ ನೀವು ಕಾಂಗ್ರೆಸ್ ಸೇರುತ್ತೀರಿ, ಕಾಂಗ್ರೆಸ್ ನಾಯಕರು ನಿಮ್ಮನ್ನು ಸಂಪರ್ಕಿಸಿದ್ದರು ಎನ್ನುವ ಮಾತು ಕೇಳಿಬಂದಿತ್ತು.
ನಿರಾಣಿ: ಬಿಜೆಪಿ ಬಿಡುವ ಮಾತೇ ಇಲ್ಲ. ನನ್ನನ್ನು ಕಾಂಗ್ರೆಸ್ ನಾಯಕರು ಯಾರೂ ಸಂಪರ್ಕ ಮಾಡಿಲ್ಲ. ಏಕೆಂದರೆ ಅವರೆಲ್ಲರಿಗೂ ಗೊತ್ತು ನಾನು ನಿಷ್ಠಾವಂತ ಬಿಜೆಪಿ ಕಾರ್ಯಕರ್ತ ಎಂದು.
ವಾರ್ತಾಭಾರತಿ: ಯಡಿಯೂರಪ್ಪಬಗ್ಗೆ ಇಷ್ಟೆಲ್ಲಾ ಹೇಳಿದಿರಿ, ನೀವೇಕೆ ಕೆಜೆಪಿಗೆ ಹೋಗಲಿಲ್ಲ?
ನಿರಾಣಿ: ಇದು ಈಗ ಅಪ್ರಸ್ತುತ ವಿಷಯ. ಆದರೂ ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷಕ್ಕಿಂತ ದೇಶ ದೊಡ್ಡದು ಎನ್ನುವುದು ನಮ್ಮ ಪಕ್ಷದ ನಿಲುವು. ಹಾಗಾಗಿ ಅನಿವಾರ್ಯವಾಗಿ ಯಡಿಯೂರಪ್ಪ ಅವರ ಮೇಲೆ ಅಷ್ಟೆಲ್ಲ ಪ್ರೀತಿ-ಗೌರವ ಇದ್ದರೂ ಬಿಜೆಪಿಯಲ್ಲೇ ಉಳಿಯಬೇಕಾಯಿತು.
ವಾರ್ತಾಭಾರತಿ: ನೀವು ಕೆಜೆಪಿಗೆ ಹೋಗುವುದನ್ನು ತಡೆದದ್ದು ಬಸವರಾಜ ಬೊಮ್ಮಾಯಿ ಅವರೇ?
ನಿರಾಣಿ: ರಾಜಕೀಯವಾಗಿ ನಾನು ಪ್ರಬುದ್ಧನಿದ್ದೇನೆ. ನನ್ನ ನಡೆಗಳ ಬಗ್ಗೆ ನಾನೇ ತೀರ್ಮಾನ ಮಾಡುತ್ತೇನೆ?
ವಾರ್ತಾಭಾರತಿ: ಅವರು (ಬೊಮ್ಮಾಯಿ) ಕೂಡ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರಂತೆ?
ನಿರಾಣಿ: ನನಗೆ ಗೊತ್ತಿಲ್ಲ. ಅವರು ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅನುಭವ ಇದೆ. ಅದರ ಆಧಾರದ ಮೇಲೆ ಕೇಳುತ್ತಿರಬಹುದು.
ವಾರ್ತಾಭಾರತಿ: ಕಡೆಯದಾಗಿ ಬಿಜೆಪಿಯ ಈ ಸಮಸ್ಯೆಗಳಿಗೆ ಯಾವಾಗ ಪರಿಹಾರ ಸಿಗಬಹುದು?
ನಿರಾಣಿ: ಗೊಂದಲಗಳು ಶೀಘ್ರವೇ ಬಗೆಹರಿಯಲಿದೆ. ನಾವೆಲ್ಲಾ ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ಧ ಹೋರಾಟ ಮಾಡಿದರೆ ಮುಂದೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನ ಇಲ್ಲ.