ಧೈರ್ಯವಿಲ್ಲದೆ ಪ್ರಶ್ನಿಸಲು ಸಾಧ್ಯವಿಲ್ಲ; ಪ್ರಶ್ನೆಗಳಿಲ್ಲದೆ ಧೈರ್ಯಕ್ಕೆ ಅರ್ಥವಿಲ್ಲ
‘‘ಮೋದಿಯಲ್ಲಿ ನಂಬಿಕೆ ಹುಟ್ಟಿದ್ದು ಪತ್ರಿಕೆಗಳ ಮುಖ್ಯಾಂಶಗಳಿಂದ ಅಥವಾ ಟಿವಿಯಲ್ಲಿ ಹೊಳೆಯುವ ಮುಖಗಳಿಂದ ಅಲ್ಲ. ಈ ದೇಶದ ಜನರಿಗಾಗಿ ನಾನು ನನ್ನ ಪ್ರಾಣವನ್ನು ಪ್ರತಿ ಕ್ಷಣವನ್ನೂ ಮುಡಿಪಾಗಿಟ್ಟಿದ್ದೇನೆ.’’
ಫೆಬ್ರವರಿಯಲ್ಲಿ ಹಿಂಡನ್ಬರ್ಗ್ ವರದಿ ಮತ್ತು ಗೌತಮ್ ಅದಾನಿ ಬಗ್ಗೆ ಪ್ರತಿಪಕ್ಷಗಳು ಉತ್ತರ ನೀಡುವಂತೆ ಒತ್ತಾಯಿಸಿದಾಗ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಗ್ಗೆ ಹೇಳಿದ್ದ ಮಾತು ಇದು.
ಮಾಧ್ಯಮಗಳು ಅವರ ವೌನವನ್ನು ಪ್ರಶ್ನಿಸಿದ್ದರೆ ಮತ್ತು ಅವರು ಉತ್ತರಿಸಿದ್ದರೆ ಬಹುಶಃ ಅವರ ಈ ಅಹಂಕಾರದಲ್ಲಿ ಸ್ವಲ್ಪ ಸತ್ಯವಿದ್ದಿರುತ್ತಿತ್ತು. ಬದಲಾಗಿ, ಮಣಿಪುರದ ಬಗ್ಗೆ ಮೋದಿ ಮತ್ತು ಮಾಧ್ಯಮಗಳ ವೌನದ ಇತ್ತೀಚಿನ ಉದಾಹರಣೆ ನಮ್ಮ ಮುಂದಿದೆ. ಹಿಂಡನ್ಬರ್ಗ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ಲೋಕಸಭೆಯಲ್ಲಿ ಮಾತನಾಡುತ್ತಾ, ‘‘ಉಚಿತ ಪಡಿತರವನ್ನು ಪಡೆಯುವ ದೇಶದ 80 ಕೋಟಿ ಜನರು ಸುಳ್ಳು ಆರೋಪ ಮಾಡುವವರನ್ನು ನಂಬುತ್ತಾರೆಯೇ?’’ ಎಂದಿದ್ದನ್ನು ಕೇಳಿದ್ದೇವೆ. ಅದೊಂದೇ ಭಾಷಣದಲ್ಲಿ ಪ್ರಧಾನಿ ಉತ್ತರದಾಯಿತ್ವದ ಎಲ್ಲಾ ಬೇಡಿಕೆಗಳನ್ನು ತಳ್ಳಿಹಾಕಿದರು.
ಮುಖ್ಯವಾಗಿ, ಕಳೆದ 10 ವರ್ಷಗಳಿಂದ ಗೋದಿ ಮೀಡಿಯಾದ ಆ್ಯಂಕರ್ಗಳು ಪ್ರಧಾನಿ ಸೇವೆಯಲ್ಲಿದ್ದು, ಪತ್ರಿಕೋದ್ಯಮವನ್ನು ಕೊಚ್ಚೆಗೆ ತಳ್ಳಿದ್ದಾರೆ. ಆದರೆ ಅದೇ ಪ್ರಧಾನಿ ತಾನು ಮೀಡಿಯಾಗಳಿಂದ ಜನರ ನಂಬಿಕೆ ಗಳಿಸಿದವನಲ್ಲ ಎಂದುಬಿಟ್ಟರು. ಒಂಭತ್ತು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದ ನಾಯಕ, ಒಂಭತ್ತು ವರ್ಷ ಗಳಿಂದ ಗೋದಿ ಮೀಡಿಯಾ ಪ್ರಶ್ನಿಸದ ನಾಯಕನ ಹೆಗ್ಗಳಿಕೆ ಇದು.
ಮಾಧ್ಯಮವನ್ನು ಮೋದಿಯಿಂದ ಮತ್ತು ಮೋದಿಯನ್ನು ಮಾಧ್ಯಮದಿಂದ ಬೇರೆಯಾಗಿ ನೋಡಲಾಗದು. ಮಾಧ್ಯಮದ ಒಂದು ವರ್ಗ ಅವರ ಬಗ್ಗೆ ವೌನವಾಗಿರುತ್ತದೆ. ಮಾಧ್ಯಮಗಳ ಮಾತೇನಿದ್ದರೂ ಮೋದಿಗಾಗಿ ಮಾತ್ರ. ಒಬ್ಬ ಸಾಮಾಜಿಕ ಕಾರ್ಯಕರ್ತ ಅಥವಾ ಪತ್ರಕರ್ತನಿಗೆ ವಿದೇಶಗಳಲ್ಲಿ ಗೌರವ ಸಿಕ್ಕರೆ ಅದನ್ನು ಭಾರತ ವಿರೋಧಿ ಪಿತೂರಿ ಎಂದು ಕರೆಯುತ್ತಾರೆ. ಆದರೆ ಪ್ರಧಾನಿಗೆ ಅದೇ ದೇಶಗಳಲ್ಲಿ ಗೌರವ ಸಿಕ್ಕರೆ ಅದನ್ನು ಮೀಡಿಯಾಗಳು ಭಾರತದ ಹೆಸರು-ಮೋದಿ ಹೆಸರು ಜಗತ್ತಿನೆಲ್ಲೆಡೆ ಧ್ವನಿಸುತ್ತಿದೆ ಎಂದು ಸ್ತುತಿ ಮಾಡುತ್ತವೆ. 2014ರಿಂದ 2024ರ ದಶಕ ಮೋದಿಯವರಂತೆ ಗೋದಿ ಮೀಡಿಯಾಕ್ಕೂ ಸಂಬಂಧಿಸಿದೆ. ಈ ಚಾನೆಲ್ಗಳ ಹೆಸರುಗಳು ಮಾತ್ರ ವಿಭಿನ್ನ. ಆದರೆ ವಿಷಯ ಒಂದೇ.
2014ರ ಮೊದಲು ಟಿವಿ ಪತ್ರಿಕೋದ್ಯಮ ಹಣವಿಲ್ಲದ ಸ್ಥಿತಿಯಲ್ಲಿತ್ತು ಎಂದು ನಾವೆಂದುಕೊಂಡಿದ್ದೇವೆ. ಸಾಮಾನ್ಯವಾಗಿ ಪತ್ರಕರ್ತರಲ್ಲದ ಸುದ್ದಿ ವಾಹಿನಿಗಳ ಮಾಲಕರು ಹಣದ ಕೊರತೆ ಎದುರಿಸುತ್ತಿದ್ದರು ಮತ್ತು ವ್ಯವಹಾರ ಮಾದರಿ ಕೂಡ ಸರಿಯಿರಲಿಲ್ಲ. ಎಲ್ಲವನ್ನೂ ಟಿಆರ್ಪಿ ಗಳಿಸುವ ಉದ್ದೇಶದಿಂದ ಮಾಡಲಾಗುತ್ತಿತ್ತು. ಕಡೆಗೆ ವಾಹಿನಿಯನ್ನೇ ಮುಚ್ಚಲಾಗುತ್ತಿತ್ತು.
ಈ ಮಾಲಕರು ಪತ್ರಿಕೋದ್ಯಮದ ಬಗ್ಗೆ ಕಾಳಜಿ ವಹಿಸಲಿಲ್ಲ. ಈಗಿನ ಚಾನೆಲ್ಗಳ ಅಸಹಾಯಕ ಮಾಲಕರು ಸಹ ಇದನ್ನು ಅನುಸರಿಸುತ್ತಾರೆ, ಇಲ್ಲದಿದ್ದರೆ ಅವರು ಜಾಹೀರಾತುಗಳನ್ನು ಪಡೆಯುವುದಿಲ್ಲ. ಹೀಗಾಗಿಯೇ ಈ ಕಳಪೆ ವಿಷಯದ ಸುತ್ತ ಮಾರುಕಟ್ಟೆಯಿಂದಲೇ ದೊಡ್ಡ ಪ್ರಭಾವಳಿ ಸೃಷ್ಟಿಯಾಗಿದೆ.
ಈಗ ಇನ್ನೂ ದೊಡ್ಡ ಬೆಳವಣಿಗೆಯೆಂದರೆ, ಬಿಗ್ ಮೀಡಿಯಾದ ಹೊಸ ಮಾಲಕರಾಗಿರುವವರು ಮುಕೆೇಶ್ ಅಂಬಾನಿ ಮತ್ತು ಗೌತಮ್ ಅದಾನಿ. ಅದಾನಿ ಈ ವರ್ಷ ಹಲವಾರು ಸುದ್ದಿ ಚಾನೆಲ್ಗಳನ್ನು ಪ್ರಾರಂಭಿಸುತ್ತಿದ್ದಾರೆ, ಅಂಬಾನಿ ಈಗಾಗಲೇ ಅನೇಕ ಚಾನೆಲ್ಗಳನ್ನು ಹೊಂದಿದ್ದಾರೆ. ಚಾನೆಲ್ಗಳ ಸಂಖ್ಯೆ ಮತ್ತು ಅವರಿಬ್ಬರ ನಡುವೆ ಇರುವ ಹಣವನ್ನು ಗಮನಿಸಿದರೆ, ಮಾಧ್ಯಮಗಳನ್ನು ಇಲ್ಲಿಯವರೆಗೆ ಕಾಡುತ್ತಿದ್ದ ಹಣದ ಕೊರತೆಯ ಭೂತ ಓಡಿಹೋಗಬೇಕು.
ಆದರೆ ಇದೇ ದುಡ್ಡಿನ ಪ್ರಭಾವ ಅವುಗಳ ವಿಷಯದ ಮೇಲೆ ಏಕಾಗುತ್ತಿಲ್ಲ? ಅವರ ಸಂಪತ್ತು ಮತ್ತು ವ್ಯವಹಾರ ಕೌಶಲ್ಯ ಟಿವಿ ಪತ್ರಿಕೋದ್ಯಮದ ಕಳಪೆ ಸ್ಥಿತಿಯನ್ನು ಏಕೆ ಸುಧಾರಿಸುತ್ತಿಲ್ಲ? ಅದರಲ್ಲೂ ಇಲ್ಲಿ ಅವರು ಹಾಕುವ ಹಣ ಅವರ ಇತರ ವ್ಯವಹಾರಗಳಿಗಿಂತ ಕಡಿಮೆ. ಅಂಬಾನಿ ಮತ್ತು ಅದಾನಿ ವಾಹಿನಿಗಳು ಪತ್ರಿಕೋದ್ಯಮದಲ್ಲಿ ಯಾವ ಮಾದರಿಗಳನ್ನು ನೀಡಿವೆ? ಅವು ಹೊಸದೇನನ್ನಾದರೂ ಅಥವಾ ಅದ್ಭುತವಾದದ್ದೇನಾದರೂ ಮಾಡಿವೆಯೆ?
ಇವು ನನ್ನ ಪ್ರಶ್ನೆಗಳು ಮತ್ತು ಉತ್ತರಗಳು ಸರಳವಾಗಿವೆ.
ಉತ್ತಮ ಪತ್ರಿಕೋದ್ಯಮಕ್ಕೆ ಎರಡು ಅಗತ್ಯ ಮತ್ತು ಮೂಲಭೂತ ಷರತ್ತುಗಳಿವೆ: ಧೈರ್ಯ ಮತ್ತು ಪ್ರಶ್ನಿಸುವುದು. ಧೈರ್ಯವಿಲ್ಲದೆ, ನೀವು ಪ್ರಶ್ನಿಸಲು ಸಾಧ್ಯವಿಲ್ಲ. ಪ್ರಶ್ನೆಗಳಿಲ್ಲದೆ, ಧೈರ್ಯಕ್ಕೆ ಅರ್ಥವಿಲ್ಲ.
ಆದ್ದರಿಂದ, ನೀವು ಕೇವಲ ವ್ಯವಹಾರ ಕೌಶಲ್ಯ ಮತ್ತು ಹಣದಿಂದ ಗೋದಿ ಮೀಡಿಯಾದ ವಿಷಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಬದಲಾಗಿ ನಿಮಗೆ ಧೈರ್ಯ ಬೇಕು ಮತ್ತು ನೀವು ಪ್ರಶ್ನಿಸಬೇಕು. ಆದರೆ, ಈಗಾಗಲೇ ಅರೂನ್ ಪುರಿ, ಸುಭಾಷ್ ಚಂದ್ರ, ಜಗದೀಶ್ ಚಂದ್ರ ‘ಕಾತಿಲ್’ ಮತ್ತು ರಜತ್ ಶರ್ಮಾ ಅವರಿರುವ ಸರತಿ ಸಾಲಿನಲ್ಲಿ ಅಂಬಾನಿ ಮತ್ತು ಅದಾನಿ ಸೇರುತ್ತಾರೆ. ಎಲ್ಲ ಅಂಜುಬುರುಕರೇ ಇರುವ ಸರತಿ ಸಾಲು.
ಕಳೆದ 10 ವರ್ಷಗಳಲ್ಲಿ ಮುಖ್ಯವಾಹಿನಿಯ ಮಾಧ್ಯಮದಲ್ಲಿ ಇದು ಅತಿದೊಡ್ಡ ಬದಲಾವಣೆ. ಅದರ ವಿಷಯ ಮಾಲಕರಿಂದ ಪ್ರಭಾವಿತವಾಗಿಲ್ಲ, ಅದು ಈ ಮಾಲಕರ ಅಜ್ಞಾತ ಮಾಲಕರಿಂದ ಪ್ರಭಾವಿತವಾಗಿದೆ. ಈ ಚಾನೆಲ್ಗಳು ಟೆಲಿಗ್ರಾಫ್ನ ಹಾಗೆ ಪ್ರಶ್ನೆಗಳನ್ನು ಕೇಳುತ್ತವೆ ಎಂದು ನಾವು ನಿರೀಕ್ಷಿಸಲಾಗದು. ಕೇವಲ ಚಾನೆಲ್ ತೆರೆಯುವುದರಿಂದ ಒಬ್ಬ ಪತ್ರಕರ್ತನಾಗುವುದಿಲ್ಲ. ಈ ಚಾನೆಲ್ಗಳ ವಿಷಯ ಮೋದಿ ಸರಕಾರದೊಂದಿಗೆ ಹೊಂದಿರುವ ಸಂಬಂಧದ ಬಗ್ಗೆ ನಮಗೆ ಹೇಳುತ್ತದೆ. ಪತ್ರಕರ್ತರು ತಮ್ಮ ಗೆಳೆಯರ ಮೇಲಿನ ಹಲ್ಲೆಗಳ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದರೆ, ಈ ಚಾನೆಲ್ಗಳ ಎಷ್ಟು ಪತ್ರಕರ್ತರು ಹಾಜರಾಗುತ್ತಾರೆ ಎಂಬುದನ್ನು ಗಮನಿಸಬಹುದು.
ನಾನು ‘ದಿ ವೈರ್’, ‘ಕ್ಯಾರವಾನ್’, ‘ಸ್ಕ್ರಾಲ್’, ‘ನ್ಯೂಸ್ಲಾಂಡ್ರಿ’, ‘ಆಲ್ಟ್ ನ್ಯೂಸ್,’ ‘ನ್ಯೂಸ್ಕ್ಲಿಕ್’, ‘ದಿ ನ್ಯೂಸ್ ಮಿನಿಟ್’, ‘ಬೂಮ್ಲೈವ್’ ಮತ್ತು ‘ಆರ್ಟಿಕಲ್ 14’ ಅನ್ನು ಮುಖ್ಯವಾಹಿನಿಯ ಮಾಧ್ಯಮಕ್ಕೆ ಪರ್ಯಾಯವಾಗಿ ಪರಿಗಣಿಸುವುದಿಲ್ಲ. ಆ ಚಿಂತನೆಯ ಮಾರ್ಗ ಮುಖ್ಯವಾಹಿನಿಯ ಮಾಧ್ಯಮವನ್ನು ತಪ್ಪಿತಸ್ಥತೆಯಿಂದ ಮುಕ್ತಗೊಳಿಸುತ್ತದೆ. ಈ ಸಂಸ್ಥೆಗಳನ್ನು ವೈಯಕ್ತಿಕ ಪ್ರಯತ್ನಗಳಾಗಿ ನೋಡಬೇಕು. ಅವರೂ ಈ ಕಾಲದವರೆಂದು ಗೋದಿ ಮೀಡಿಯಾ ಚರ್ಚೆಯ ಸಂದರ್ಭದಲ್ಲಿ ಅವರ ಹೆಸರುಗಳನ್ನು ತರಬಾರದು. ಏಕೆಂದರೆ ಅವರು ಹಾಗಲ್ಲ. ಸರಕಾರ ಅವರಿಗೆ ಜಾಹೀರಾತುಗಳನ್ನು ನೀಡುವುದಿಲ್ಲ. ಅಪರೂಪಕ್ಕೆ ಕಾರ್ಪೊರೇಟ್ ಜಾಹೀರಾತುಗಳು ಸಿಗುತ್ತವೆ. ಅವು ಸರಕಾರದಿಂದ ಸಹಾಯ ಪಡೆದ ಸ್ಟಾರ್ಟಪ್ಗಳಲ್ಲ.
ಜಾಹೀರಾತು ರೂಪದಲ್ಲಿ ಕೋಟಿಗಟ್ಟಲೆ ಸಾರ್ವಜನಿಕ ಹಣವನ್ನು ಪಡೆಯುವ ಮಾಧ್ಯಮ ಸಂಸ್ಥೆಗಳ ಬಗ್ಗೆ ನಾವು ಎಚ್ಚರ ವಹಿಸಬೇಕು. ಅವರೇಕೆ ಪತ್ರಿಕೋದ್ಯಮವನ್ನು ಅನುಸರಿಸುತ್ತಿಲ್ಲ? ಪತ್ರಿಕೋದ್ಯಮ ಸಾಧ್ಯವಾಗದಿದ್ದರೆ ಮತ್ತೇಕೆ ದೇಶದ ಶ್ರೀಮಂತ ಚಾನೆಲ್ಗಳು ಶುರುವಾಗುತ್ತವೆ?
ವಿಶ್ವದ ಇಬ್ಬರು ಶ್ರೀಮಂತ ಕೈಗಾರಿಕೋದ್ಯಮಿಗಳು ತಮ್ಮ ಹಣವನ್ನು ಗೋದಿ ಮೀಡಿಯಾದೆಡೆ ಎಸೆದಿದ್ದಾರೆ. ಅರ್ಥವಿಷ್ಟೆ, ಅದಕ್ಕೆ ಮಾರುಕಟ್ಟೆ ಇದೆ, ಅದು ಉತ್ತಮ ವ್ಯವಹಾರವಾಗಿದೆ. ಆದರೆ ಹೃದಯವಂತಿಕೆಯಿಂದ ಕೊಡುವುದರಲ್ಲಿ ಅವರಿಗೆ ಯಾವುದೇ ಸಂತೋಷವಿಲ್ಲ. ನಾನು ಕೇಳುತ್ತೇನೆ: ಸ್ಟಾರ್ಟಪ್ ಮಾಡಹೊರಡುವ ಯುವ, ವಿದ್ಯಾವಂತ ಜನರು ಮಾಧ್ಯಮ ಪ್ರಾರಂಭದ ಬಗ್ಗೆ ಏಕೆ ಯೋಚಿಸಲಿಲ್ಲ? ಏಕೆಂದರೆ ಮಾಧ್ಯಮದಲ್ಲಿ ಸ್ವತಂತ್ರ ವಿಷಯವನ್ನು ಕೊಡುವುದು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತು.
ಆದರೆ ಗೋದಿ ಮೀಡಿಯಾ ಅಂತಹ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಮತ್ತದು ಪತ್ರಿಕೋದ್ಯಮದ ಹೆಸರಿನಲ್ಲಿ ನಡೆಯುತ್ತದೆ. ಆದರೆ ಅದು ಕೊಡುತ್ತಿರುವುದಕ್ಕೂ ಪತ್ರಿಕೋದ್ಯಮಕ್ಕೂ ಯಾವುದೇ ಸಂಬಂಧವಿಲ್ಲ.
ಎನ್ಡಿಟಿವಿ ಸ್ವಾಧೀನದ ಸಮಯದಲ್ಲಿ ಗೌತಮ್ ಅದಾನಿ, ‘‘ಭಾರತ ‘ಫೈನಾನ್ಷಿಯಲ್ ಟೈಮ್ಸ್’ ಅಥವಾ ‘ಅಲ್ ಜಝೀರಾ’ಗೆ ಹೋಲಿಸಬಹುದಾದ ಒಂದೇ ಒಂದು ಸಂಸ್ಥೆಯನ್ನು ಹೊಂದಿಲ್ಲ’’ ಎಂದು ಹೇಳಿದ್ದರು. ಇದಕ್ಕೆಲ್ಲ ಹಣದ ಕೊರತೆ ಇಲ್ಲ ಎಂಬ ರೀತಿಯಲ್ಲಿ ಅವರ ಮಾತಿತ್ತು.
ಆದರೆ ಪತ್ರಿಕೋದ್ಯಮ ಹಣದಿಂದ ನಡೆಯುತ್ತಿಲ್ಲ ಎಂಬುದು ಅವರಿಗೆ ತಿಳಿದಿಲ್ಲ. ಅದೇ ‘ಫೈನಾನ್ಷಿಯಲ್ ಟೈಮ್ಸ್’ ಅದಾನಿ ತನ್ನ ಸಾಮ್ರಾಜ್ಯದ ಸಾಗರೋತ್ತರ ಹಣಕಾಸಿನ ಕುರಿತ ವರದಿಯನ್ನು ತೆಗೆದುಹಾಕಲು ಒತ್ತಾಯಿಸಿದಾಗ ನಿರಾಕರಿಸಿತ್ತು, ಅದು ತನ್ನ ವರದಿಗೆ ಬದ್ಧವಾಗಿರುವುದಾಗಿ ಹೇಳಿತು.
ಅನೇಕ ಜಾಗತಿಕ ಮಾಧ್ಯಮ ಸಂಸ್ಥೆಗಳು ಅಂತಹ ಧೈರ್ಯವನ್ನು ಹೊಂದಿವೆ. ಭಾರತದಲ್ಲಿ ಚಾನೆಲ್ ಮಾಲಕರು ದುಬಾರಿ ಕಾರುಗಳನ್ನು ಖರೀದಿಸುತ್ತಾರೆ. ಆದರೆ ವಿವಿಧ ದೇಶಗಳಲ್ಲಿ ವರದಿಗಾರರನ್ನು ನೇಮಿಸುವುದಿಲ್ಲ. ವಿದೇಶಕ್ಕೆ ಬಿಡಿ, ಅವರು ತಮ್ಮ ವರದಿಗಾರರನ್ನು ಬೇರೆ ರಾಜ್ಯಗಳಿಗೂ ಕಳುಹಿಸುವುದಿಲ್ಲ. ಅದಾನಿ ಜಾಗತಿಕ ಮಾಧ್ಯಮ ಬ್ರ್ಯಾಂಡ್ ರಚಿಸಲು ಬಯಸುತ್ತಾರೆ ಮತ್ತು ಮೋದಿ ಕೂಡ ಅದನ್ನು ಇಷ್ಟಪಡುತ್ತಾರೆ, ಆದರೆ ದೂರದರ್ಶನಕ್ಕೆ ಏನಾಯಿತು ಎಂಬುದನ್ನು ನೋಡಿ. ಮೋದಿಯವರ ಭಾರತದಲ್ಲಿ ಸುಮಾರು 10 ವರ್ಷಗಳಲ್ಲಿ ಇದು ಸಮೃದ್ಧವಾಗಿದೆ ಮತ್ತು ಗೋದಿ ಮೀಡಿಯಾ ಆಟವನ್ನು ಸಕ್ರಿಯವಾಗಿ ಆಡುತ್ತಿದೆ.
ಗೋದಿ ಮೀಡಿಯಾ ಫ್ಯಾಕ್ಟರಿ ಸರಕಾರಕ್ಕೆ ಪ್ರಶ್ನೆಗಳನ್ನು ಕೇಳುವುದಿಲ್ಲ. ಪ್ರಶ್ನಿಸುವವರನ್ನು ಗುರಿಯಾಗಿಸಲು ಅದು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತದೆ. ಅವರನ್ನು ದೇಶದ್ರೋಹಿಗಳು ಅಥವಾ ಭಯೋತ್ಪಾದಕರು ಎಂದು ಕರೆಯುತ್ತದೆ.
ಆದರೆ ಸಾರ್ವಜನಿಕರು ಈಗ ಹೆಚ್ಚು ಜಾಗೃತರಾಗಿದ್ದಾರೆ. ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಗೋದಿ ಮೀಡಿಯಾ ತನ್ನದು ದೇಶಭಕ್ತಿ ಎಂದು ಬಿಂಬಿಸಿಕೊಂಡರೂ ಅದು ದೇಶಕ್ಕೆ ಒಳ್ಳೆಯದಲ್ಲ ಎಂಬುದು ಜನರಿಗೆ ಅರ್ಥವಾಗತೊಡಗಿದೆ. ಸಾಮಾಜಿಕ ಮಾಧ್ಯಮ ಖಾತೆಗಳು ಮಾಧ್ಯಮದಲ್ಲಿ ದ್ವೇಷ ಹಬ್ಬಿಸಲು ಮೀಸಲಾಗಿವೆ. ಮಾಧ್ಯಮಗಳು ವಾಚ್ಡಾಗ್ ಆದರೆ ಜನರು ವೀಕ್ಷಿಸುತ್ತಿದ್ದಾರೆ. ಮೋದಿ ದಶಕದಲ್ಲಿ ಮಾಧ್ಯಮಗಳ ನಿರಂತರ ಟೀಕೆಗಳು ಬೇರೆಯದಕ್ಕಿಂತ ಭಿನ್ನವಾಗಿವೆ.
ಹಾಗೆ ನೋಡಿದರೆ, ಎಲ್ಲವೂ ಬದಲಾಗುತ್ತಿದೆ ಎಂದೆನಿಸುತ್ತದೆ. ಹಳೆಯ ಮುಖಗಳು ಒಂದು ಚಾನೆಲ್ನಿಂದ ಇನ್ನೊಂದಕ್ಕೆ ಬದಲಾಗುತ್ತಿವೆ, ಹೊಚ್ಚಹೊಸ ಮುಖಗಳೊಂದಿಗೆ ಹೊಸ ಚಾನೆಲ್ಗಳು ಪ್ರಾರಂಭವಾಗುತ್ತಿವೆ. ಆದರೆ ಅವು ಒಂದೇ ಉತ್ಪನ್ನದ ಮರುಪ್ಯಾಕೇಜ್ ರೀತಿಯ ಆವೃತ್ತಿಗಳಾಗಿವೆ, ಎಲ್ಲವೂ ಒಂದೇ ಕೆಲಸ ಮಾಡುತ್ತಿವೆ. ಇದು ಸಿನೆಮಾದ ಸುವರ್ಣ ದಿನಗಳ ಮಾಫಿಯಾ ಚಲನಚಿತ್ರಗಳಂತಿದೆ: ಒಬ್ಬ ಹಳೆಯ ಗ್ಯಾಂಗ್ ಲೀಡರ್ನನ್ನು ತೆಗೆದುಹಾಕಲಾಗುತ್ತದೆ. ಆದರೆ ಮತ್ತೊಬ್ಬ ಅತಿ ಬೇಗ ಅವನ ಸ್ಥಾನಕ್ಕೆ ಬರುತ್ತಾನೆ. ಸಾಮ್ರಾಜ್ಯ ಮುಂದುವರಿಯುತ್ತದೆ.
ಇನ್ನೂ ವಿಶ್ವಾಸಾರ್ಹತೆ ಎಷ್ಟು ಕಡಿಮೆಯಾಗಿದೆ ಎಂದರೆ ಮಂತ್ರಿಗಳು ಸಾಮಾಜಿಕ ಮಾಧ್ಯಮದ ಪ್ರಭಾವಿಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. 2019ರಲ್ಲಿ ಅಕ್ಷಯ್ ಕುಮಾರ್ ಅವರಿಗೆ ತಮ್ಮನ್ನು ಸಂದರ್ಶಿಸಲು ಮೋದಿ ಅನುಮತಿ ನೀಡಿದ್ದನ್ನು ಗಮನಿಸಬೇಕು. ಅದಾನಿ ಮತ್ತು ಅಂಬಾನಿಯ ಚಾನೆಲ್ಗಳು ಮತ್ತು ಆ್ಯಂಕರ್ಗಳು ವಿಶ್ವಾಸಾರ್ಹತೆ ಹೊಂದಿದ್ದರೆ ಅವರದನ್ನು ಮಾಡುತ್ತಿರಲಿಲ್ಲ. ಮೋದಿಗೆ ನಿಜವಾಗಿಯೂ ಹೊಸ ಗೋದಿ ಮೀಡಿಯಾ ಬೇಕಿದೆ.
ಮೋದಿಯವರ ಮಾಧ್ಯಮದ ನಿಯಂತ್ರಕ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ಪ್ರತಿಪಕ್ಷಗಳಿಗೆ ಬಹಳ ಸಮಯ ಬೇಕಾಯಿತೆಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಭಾರತ್ ಜೋಡೊ ಯಾತ್ರೆ ವೇಳೆ ರಾಹುಲ್ ಗಾಂಧಿಯವರು ತಮ್ಮ ಸುದ್ದಿಗೋಷ್ಠಿಗಳನ್ನೇ ಈ ಸುದ್ದಿ ವಾಹಿನಿಗಳಿಗೆ ಪರ್ಯಾಯವಾಗಿ ಸಿದಾಗ ಅದು ಕಂಡಿತು. ನೀವು ಈ ಪ್ರಶ್ನೆಯನ್ನು ಪ್ರಧಾನಿಯವರಿಗೆ ಕೇಳಲು ಸಾಧ್ಯವಿಲ್ಲ, ಆದರೆ ನೀವು ನನ್ನನ್ನು ಕೇಳಬಹುದು ಎಂದು ರಾಹುಲ್ ಪತ್ರಕರ್ತರಿಗೆ ಸವಾಲು ಹಾಕಿದರು. ಮಾಧ್ಯಮದವರು ಪ್ರಶ್ನೆಗಳನ್ನು ಕೇಳಿದರು ಮತ್ತು ರಾಹುಲ್ ಉತ್ತರಿಸಿದರು.
ಸಹಜವಾಗಿಯೇ ಗೋದಿ ಮೀಡಿಯಾಗಳು ರಾಹುಲ್ ಯಾತ್ರೆಯನ್ನು ನಿರ್ಲಕ್ಷಿಸಿದ್ದವು. ಈಗ ಯಾತ್ರೆ ಮುಗಿದಿದ್ದು, ರಾಹುಲ್ ತಮ್ಮ ಭಾಷಣಗಳಲ್ಲಿ ಗೋದಿ ಮೀಡಿಯಾ ಬಗ್ಗೆ ಹೆಚ್ಚು ಪ್ರಸ್ತಾಪಿಸುವುದಿಲ್ಲ. ತಮ್ಮ ನಾಯಕನನ್ನು ಅವು ಹೇಗೆ ನಡೆಸಿಕೊಂಡವೆಂಬುದರ ಹೊರತಾಗಿಯೂ ಕಾಂಗ್ರೆಸ್ ಸರಕಾರಗಳು ಈ ಚಾನೆಲ್ಗಳಿಗೆ ತಮ್ಮ ಜಾಹೀರಾತುಗಳನ್ನು ನೀಡುತ್ತಿವೆ. ವಿಪರ್ಯಾಸವನ್ನು ಕಲ್ಪಿಸಿಕೊಳ್ಳಿ: ಕಾಂಗ್ರೆಸ್ ಸರಕಾರಗಳು ಜಾಹೀರಾತುಗಳೊಂದಿಗೆ ಗೋದಿ ಮಾಧ್ಯಮದತ್ತ ಮುಖ ಮಾಡುತ್ತಿರುವಾಗ ಮೋದಿಯ ಮಂತ್ರಿಗಳು ಪ್ರಭಾವಿಗಳ ಕಡೆಗೆ ಸೇರುತ್ತಿದ್ದಾರೆ.
ಈ ನಡುವೆ, ಪತ್ರಿಕೋದ್ಯಮದ ಅಂತ್ಯವನ್ನು ಸಂಭ್ರಮಿಸಲಾಗುತ್ತಿದೆ.
ಕೃಪೆ: newslaundry.com