ಒಂದು ದೇಶ-ಒಂದು ಚುನಾವಣೆ: ಆರ್ಥಿಕ ಸವಾಲುಗಳು
ಸುಮಾರು 30 ಲಕ್ಷ ವಿದ್ಯುನ್ಮಾನ ಮತದಾನ ಯಂತ್ರಗಳು (ಇವಿಎಂ) ಮತ್ತು ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್ (ವಿವಿಪ್ಯಾಟ್) ಯಂತ್ರಗಳ ವ್ಯವಸ್ಥೆ ಹಾಗೂ ದೇಶಾದ್ಯಂತ ಕೇಂದ್ರೀಯ ಪಡೆಗಳ ನಿಯೋಜನೆ:ಏಕಕಾಲದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವುದರಲ್ಲಿ ಸವಾಲುಗಳು ಅಗಾಧವಾಗಿವೆ. ಆದರೆ ಹಲವಾರು ಮಾಜಿ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಹೇಳುವಂತೆ ಇದು ದುಸ್ತರವೇನಲ್ಲ.
1967ರವರೆಗೂ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲಾಗುತ್ತಿತ್ತು. ಆದರೆ ನಂತರದ ವರ್ಷಗಳಲ್ಲಿ ವಿಧಾನಸಭೆಗಳು ಮತ್ತು ಲೋಕಸಭೆಗಳು ಅವಧಿಗೆ ಮೊದಲೇ ವಿಸರ್ಜನೆಗೊಳ್ಳುತ್ತಲೇ ಬಂದಿದ್ದರಿಂದ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಸಾಧ್ಯವಾಗಲಿಲ್ಲ. ಪ್ರಸ್ತುತ ಆಂಧ್ರಪ್ರದೇಶ,ಅರುಣಾಚಲ ಪ್ರದೇಶ,ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆಗಳಿಗೆ ಲೋಕಸಭೆಯೊಂದಿಗೇ ಚುನಾವಣೆಗಳು ನಡೆಯಲಿವೆ.
2022ರಲ್ಲಿ ಆಗಿನ ಸಿಇಸಿ ಸುಶೀಲಚಂದ್ರ ಅವರು,ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗವು ಸಂಪೂರ್ಣವಾಗಿ ಸಜ್ಜಾ
ಗಿದೆ ಎಂದು ಹೇಳಿದ್ದರು. ಹಾಲಿ ಸಿಇಸಿ ರಾಜೀವ ಕುಮಾರ್ ಅವರು ಈ ವಿಷಯದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಹೆಚ್ಚಿದ ವೆಚ್ಚಗಳು
ಈ ಎಲ್ಲ ವರ್ಷಗಳಲ್ಲಿ ಸರಕಾರ ಮತ್ತು ಸಂಸದೀಯ ಸಮಿತಿಗಳಿಗೆ ಸಲ್ಲಿಸಿರುವ ವರದಿಗಳಲ್ಲಿ ಚುನಾವಣಾ ಆಯೋಗವು ಏಕಕಾಲಿಕ ಚುನಾವಣೆ ನಡೆಸುವಲ್ಲಿ ಎದುರಾಗುವ ಸವಾಲುಗಳನ್ನು ಪಟ್ಟಿ ಮಾಡಿದೆ. ಚುನಾವಣಾ ಆಯೋಗವು 2015ರಲ್ಲಿ ಸಲ್ಲಿಸಿದ್ದ ತನ್ನ ವರದಿಯಲ್ಲಿ ಬೆಟ್ಟು ಮಾಡಿರುವ ‘ಹಲವಾರು ತೊಂದರೆಗಳನ್ನು ’ ಸಿಬ್ಬಂದಿ,ಸಾರ್ವಜನಿಕ ಕುಂದುಕೊರತೆಗಳು,ಕಾನೂನು ಮತ್ತು ನ್ಯಾಯ ಕುರಿತು ಸಂಸದೀಯ ಸ್ಥಾಯಿ ಸಮಿತಿಯು ಗಮನಿಸಿದೆ.
ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಬೃಹತ್ ಪ್ರಮಾಣದಲ್ಲಿ ಇವಿಎಮ್‌ಗಳು ಮತ್ತು ವಿವಿಪ್ಯಾಟ್ ಯಂತ್ರಗಳ ಖರೀದಿ ಅಗತ್ಯವಾಗುತ್ತದೆ ಎನ್ನುವುದನ್ನು ಈ ಎಲ್ಲ ವರದಿಗಳು ಪ್ರಮುಖವಾಗಿ ಬಿಂಬಿಸಿವೆ.ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಇವಿಎಮ್‌ಗಳು ಮತ್ತು ವಿವಿಪ್ಯಾಟ್ ಯಂತ್ರಗಳ ಖರೀದಿಗೆ ಒಟ್ಟು 9,284.15 ಕೋ.ರೂ.ಗಳು ಅಗತ್ಯವಾಗುತ್ತವೆ ಎಂದು ಚುನಾವಣಾ ಆಯೋಗವು ನಿರೀಕ್ಷಿಸಿದೆ. ಪ್ರತೀ 15 ವರ್ಷಗಳಿಗೊಮ್ಮೆ ಈ ಯಂತ್ರಗಳನ್ನು ಬದಲಿಸಬೇಕಿರುವುದು ಇನ್ನಷ್ಟು ವೆಚ್ಚವನ್ನುಂಟು ಮಾಡುತ್ತದೆ. ಅಲ್ಲದೆ ಈ ಯಂತ್ರಗಳನ್ನು ದಾಸ್ತಾನಿರಿಸಲು ಗೋದಾಮು ವೆಚ್ಚವೂ ಹೆಚ್ಚಾಗುತ್ತದೆ ಎಂದು ಸಮಿತಿ ವರದಿಯಲ್ಲಿ ಹೇಳಲಾಗಿದೆ.
ಸದ್ಯದ ಮಟ್ಟಿಗೆ ಚುನಾವಣಾ ಆಯೋಗವು ವಿಶ್ವದಲ್ಲಿ ಅತ್ಯಂತ ಅಗ್ಗದಲ್ಲಿ (ಒಂದು ಮತಕ್ಕೆ ಒಂದು ಡಾಲರ್ ವೆಚ್ಚ) ಚುನಾವಣೆಗಳನ್ನು ನಡೆಸುತ್ತಿದೆ. ಅಂದರೆ ಇವಿಎಮ್‌ಗಳನ್ನು ಹಲವಾರು ಚುನಾವಣೆಗಳಿಗೆ ಬಳಸಲಾಗುತ್ತಿದೆ. ಏಕಕಾಲದಲ್ಲಿ ಚುನಾವಣೆಗಳು ನಡೆದರೆ,ಇವುಗಳ ಜೀವಿತಾವಧಿ ಸುಮಾರು 15 ವರ್ಷಗಳಾಗಿರುವುದರಿಂದ ಮೂರು ಚುನಾವಣೆಗಳಲ್ಲಿ ಬಳಸಬಹುದು ಎಂದು ರಾವತ್ ಹೇಳಿದರು.
2021ರಲ್ಲಿ ಸಂಸತ್ತಿನಲ್ಲಿ ನೀಡಲಾಗಿದ್ದ ಉತ್ತರದಂತೆ 2014 ಮತ್ತು 2019ರ ನಡುವೆ ಚುನಾವಣೆಗಳನ್ನು ನಡೆಸಲು ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 5,814.29 ಕೋ.ರೂ.ಗಳನ್ನು ಒದಗಿಸಿತ್ತು.
ಕೇಂದ್ರೀಯ ಪಡೆಗಳು,ಚುನಾವಣಾ ಸಿಬ್ಬಂದಿ
ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಕೇಂದ್ರೀಯ ಪಡೆಗಳ ಅಗತ್ಯ ಇನ್ನೊಂದು ಸವಾಲನ್ನೊಡ್ಡಬಹುದು. ಹೆಚ್ಚಿನ ರಾಜ್ಯಗಳು ಚುನಾವಣೆ ಸಂದರ್ಭಗಳಲ್ಲಿ ಕೇಂದ್ರೀಯ ಪಡೆಗಳನ್ನು ಕೋರುತ್ತವೆ ಎಂದು ಹೇಳಿದ ರಾವತ್,ಈ ಪಡೆಗಳ ಮತ್ತು ಚುನಾವಣಾ ಸಿಬ್ಬಂದಿಯ ಸಾಗಾಟ ಬಗೆಹರಿಸಬೇಕಾದ ಇನ್ನೊಂದು ಸಮಸ್ಯೆಯಾಗಿದೆ ಎಂದರು.
ಸವಾಲುಗಳನ್ನು ಎದುರಿಸುವುದು
ಏಕಕಾಲಿಕ ಚುನಾವಣೆಗಳನ್ನು ನಡೆಸುವ ಪರಿಕಲ್ಪನೆಯು ತನ್ನದೇ ಆದ ಸಾಧಕ-ಬಾಧಕಗಳನ್ನು ಹೊಂದಿದೆ. ಅದು ಸಮಯ,ವೆಚ್ಚ ಮತ್ತು ಆಡಳಿತಾತ್ಮಕ ಶ್ರಮವನ್ನು ಉಳಿಸುತ್ತದೆ. ಈ ಸವಾಲುಗಳನ್ನು ಎದುರಿಸುವುದು ದುಸ್ತರವೇನಲ್ಲ. 3-4 ತಿಂಗಳುಗಳ ಅವಧಿಯಲ್ಲಿ ಚುನಾವಣೆಗಳನ್ನು ನಡೆಸಿದರೆ ಅದು ಸಾಧ್ಯವಿದೆ ಎಂದು ಮಾಜಿ ಸಿಇಸಿ ಟಿ.ಎಸ್.ಕೃಷ್ಣಮೂರ್ತಿ ಹೇಳಿದರು.
(ಕೃಪೆ: indianexpress.com)