ಪುಸ್ತಕೋದ್ಯಮದ ಬೆಳವಣಿಗೆಗೆ ಪೂರಕವಾದ ‘ಮನೆಗೊಂದು ಗ್ರಂಥಾಲಯ ಯೋಜನೆ’

ಸಾಂದರ್ಭಿಕ ಚಿತ್ರ PC | freepik
ಬೆಂಗಳೂರು : ಆಗಾಗ ಕನ್ನಡ ಪುಸ್ತಕೋದ್ಯಮ ಸಂಕಷ್ಟದಲ್ಲಿದೆ. ಪುಸ್ತಕಗಳು ಖರೀದಿಯಾಗುತ್ತಿಲ್ಲ ಎನ್ನುವ ಮಾತುಗಳ ಕೇಳುತ್ತಿರುತ್ತೇವೆ. ಆದರೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಮನೆಗೊಂದು ಗ್ರಂಥಾಲಯ’ ಯೋಜನೆಯು ಕನ್ನಡ ಪುಸ್ತಕೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಪೂರಕವಾಗಿದೆ.
ಮನೆಗೊಂದು ಗ್ರಂಥಾಲಯ ಯೋಜನೆಯು ರಾಜ್ಯದ 1ಲಕ್ಷ ಮನೆಗಳಲ್ಲಿ ಗ್ರಂಥಾಲಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದು, ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಗ್ರಂಥಾಲಯವನ್ನು ಸ್ಥಾಪಿಸುವ ಮೂಲಕ ಪ್ರಾರಂಭವಾದ ಯೋಜನೆಯು ಯಶಸ್ವಿಯಾಗಿ ಸಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರ ಅಭಿಮತ.
ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು, ಲೋಕಸಭಾ ಸದಸ್ಯರ ಮನೆ ಸೇರಿದಂತೆ ಪ್ರಮುಖ ನಟ, ನಟಿಯರ ಮನೆಗಳಲ್ಲಿ ಗ್ರಂಥಾಲಯವನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಅನೇಕ ಜನ ಪುಸ್ತಕ ಪ್ರೇಮಿಗಳು ಗ್ರಂಥಾಲಯ ಸ್ಥಾಪನೆಗೆ ಮುಂದೆ ಬರುತ್ತಿದ್ದಾರೆ.
ಏನಿದು ಯೋಜನೆ? :
ಈ ಯೋಜನೆಯು ಮನೆಯ ಮಾಲಕರಿಗೆ ಕನಿಷ್ಠ 100ರಿಂದ 500 ಪುಸ್ತಕ ಖರೀದಿಸುವ ಹಾಗೆ ಪ್ರೇರಣೆ ನೀಡಿ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರು ಸದಸ್ಯರು ಅವರ ಮನೆಗೆ ಹೋಗಿ ಗ್ರಂಥಾಲಯ ನಿರ್ಮಿಸಿ ಕೊಡುತ್ತಾರೆ. ಜತೆಗೆ ಪುಸ್ತಕ ಖರೀದಿಸುವಾಗ ಯಾವ್ಯಾವ ಪುಸ್ತಕಗಳು ಬೇಕು ಎನ್ನುವ ಸಲಹೆಯನ್ನು ನೀಡುತ್ತಾರೆ. ಮನೆಯಲ್ಲಿ ಸ್ಥಾಪನೆಯಾದ ಗ್ರಂಥಾಲಯವನ್ನು ಸಾಹಿತಿಗಳ ಮೂಲಕ ಉದ್ಘಾಟನೆ ಮಾಡಿಸಲಾಗುತ್ತದೆ.
ಮನೆಯಲ್ಲಿ ಸ್ಥಾಪನೆಯಾದ ಗ್ರಂಥಾಲಯಗಳ ನಿರ್ವಹಣೆ ಮತ್ತು ಬೆಳವಣಿಗೆಗಾಗಿ ಜಿಲ್ಲಾಮಟ್ಟದ ಗ್ರಂಥಾಲಯ ಜಾಗೃತ ಸಮಿತಿ ನೇಮಿಸಲಾಗುವುದು. ಸಮಿತಿಯ ಸದಸ್ಯರು ಗ್ರಂಥಾಲಯ ಸ್ಥಾಪಿಸಿದ ಮನೆಯ ಮಾಲಕರೊಂದಿಗೆ ನಿರಂತರ ಸಂಪರ್ಕ ಹೊಂದಿರುತ್ತಾರೆ. ಹೊಸದಾಗಿ ಪ್ರಕಟಗೊಂಡ ಪುಸ್ತಕಗಳ ಬಗ್ಗೆ ಮಾಹಿತಿ, ಪುಸ್ತಕ ಬಿಡುಗಡೆ ಮಾಡಿಸುವುದು, ಸಾಹಿತಿಗಳನ್ನು ಕರೆಸಿ, ಸಂವಾದ ಮಾಡಿಸುವ ಕೆಲಸವನ್ನು ಸದಸ್ಯರು ಮಾಡುತ್ತಾರೆ.
ಉತ್ತಮ ಗ್ರಂಥಾಲಯಗಳಿಗೆ ಪ್ರಶಸ್ತಿ :
ಮನೆಗಳಲ್ಲಿ ಸ್ಥಾಪನೆಯಾದ ಗ್ರಂಥಾಲಯಗಳ ಬೆಳವಣಿಗೆ ಹಾಗೂ ವಾರಸುದಾರರಿಗೆ ಗೌರವಿಸುವ ನಿಟ್ಟಿನಲ್ಲಿ ರಾಜ್ಯದ 4 ಕಂದಾಯ ವಿಭಾಗಗಳಿಗೆ ನಂಜನಗೂಡು ತಿರುಮಲಾಂಬ, ಹಾ.ಮಾ.ನಾಯಕ, ಪಿ.ಆರ್.ತಿಪ್ಪೇಸ್ವಾಮಿ, ಗಳಗನಾಥ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲಾಗಿದೆ. ಈ ವಾರ್ಷಿಕ ಪ್ರಶಸ್ತಿಯನ್ನು ಪುಸ್ತಕ ದಿನಾಚರಣೆಯಂದು ಮುಖ್ಯಮಂತ್ರಿಗಳಿಂದ ಪ್ರದಾನ ಮಾಡಿಸುವ ಯೋಜನೆ ಇದೆ.
ಮನೆಗೊಂದು ಗ್ರಂಥಾಲಯ ಯೋಜನೆಯಿಂದ ಪುಸ್ತಕೋದ್ಯಮಕ್ಕೆ ಸಹಕಾರಿಯಾಗುತ್ತದೆ. ಜತೆಗೆ ಸಾಹಿತಿಗಳ ಸಂಭಾವನೆ, ಮುದ್ರಣಾಲಯದಿಂದ ಹಿಡಿದು ಡಿಟಿಪಿ, ಕಾಗದ ಮಾರಾಟ ಮಾಡುವವರಿಗೂ ಬೆಂಬಲವಾಗುತ್ತದೆ. ಈಗ ಪ್ರಕಾಶಕರು ಕನಿಷ್ಠ 1ಸಾವಿರ ಪುಸ್ತಕ ಮುದ್ರಣ ಮಾಡಲು ಕೂಡ ಯೋಚಿಸುತ್ತಾರೆ. ಆದರೆ ಯೋಜನೆ ಯಶಸ್ವಿಯಾಗಿ ನಡೆದರೆ ಪುಸ್ತಕ ಮುದ್ರಣದ ಸಂಖ್ಯೆ ಕನಿಷ್ಠ 3ಸಾವಿರಕ್ಕೆ ಏರುತ್ತದೆ.
-ಡಾ.ಮಾನಸ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ