ಬೆಲೆ ಏರಿಕೆಯಿಂದ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ..!
Photo: PTI
ಬೆಂಗಳೂರು: ಪೂರೈಕೆಯ ಅಭಾವ ತಲೆದೋರಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈರುಳ್ಳಿಯ ಬೆಲೆ ಪ್ರತಿನಿತ್ಯ ಹೆಚ್ಚಳವಾಗುತ್ತಿದ್ದು, ಒಂದು ವಾರದಿಂದ ಈರುಳ್ಳಿ ಕೆಜಿಗೆ 75 ರೂ.ಗಳಿಂದ 80 ರೂ.ಗೆ ಮಾರಾಟವಾಗುತ್ತಿದೆ. ಸದ್ಯದಲ್ಲಿಯೇ 100 ರೂ.ಗಳ ಗಡಿ ತಲುಪುವ ಸಾಧ್ಯತೆ ಇದೆ.
ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯಾರ್ಡ್ನಲ್ಲಿ ಸಾಧಾರಣ ಗುಣಮಟ್ಟದ ಈರುಳ್ಳಿಯೂ ಪ್ರತಿ ಕ್ವಿಂಟಾಲ್ಗೆ 4ಸಾವಿರ ರೂ.ನಿಂದ 4,300 ರೂ., ಉತ್ತಮ ಗುಣಮಟ್ಟದ ಈರುಳ್ಳಿ 5,900 ರೂ.ಗಳಿಂದ 6 ಸಾವಿರ ರೂ.ಗಳ ವರೆಗೂ ಮಾರಾಟವಾಗುತ್ತಿದೆ.
ಕೇಂದ್ರ ಸರಕಾರ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ ಮೂಲಕ ಬೆಲೆ ನಿಯಂತ್ರಣಕ್ಕಾಗಿ ಇಲ್ಲಿಗೆ ಪೂರೈಸುತ್ತಿರುವ ಈರುಳ್ಳಿಯೂ ಸಹ ಕ್ವಿಂಟ್ವಾಲ್ಗೆ ಸುಮಾರು 4,600 ರೂ.ಗೆ ಮಾರಾಟವಾಗುತ್ತಿದೆ.
ಸಾಗಣೆ ವೆಚ್ಚ, ಕೂಲಿ, ಮತ್ತಿತರ ಕಾರಣದಿಂದ ಚಿಲ್ಲರೆ ಮಾರುಕಟ್ಟೆಗೆ ತಲುಪುವ ವೇಳೆಗೆ ಈರುಳ್ಳಿಯ ಬೆಲೆ ಇನ್ನಷ್ಟು ಹೆಚ್ಚಳವಾಗುತ್ತಿದೆ. ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಧಾರವಾಡ, ವಿಜಯಪುರ, ಹಾಸನ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈರುಳ್ಳಿ ಕೆಜಿಗೆ 65 ರಿಂದ 75 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. ಹಾಪ್ಕಾಮ್ಸ್ ಮತ್ತು ಇತರೆಡೆ ಉತ್ತಮ ಗುಣಮಟ್ಟದ ಈರುಳ್ಳಿಗೆ 85 ರೂಪಾಯಿ ವರೆಗೆ ನಿಗದಿಪಡಿಸಲಾಗಿದೆ.
ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ತಿಂಗಳಲ್ಲಿ ಈರುಳ್ಳಿಯ ಬೆಲೆ ಕೇವಲ 20 ರಿಂದ 30 ರೂ.ಇದ್ದದ್ದು ಇಷ್ಟು ಏರಿಕೆಯಾಗಿರುವುದು ಗ್ರಾಹಕರ ಕಣ್ಣಿನಲ್ಲಿ ನೀರನ್ನು ತರಿಸುತ್ತಿದೆ. ಉತ್ತಮ ಮಳೆ ಇಲ್ಲದೇ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಈರುಳ್ಳಿ ಬಹಳಷ್ಟು ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗಿದೆ.
ಮುಖ್ಯವಾಗಿ ಮಹಾರಾಷ್ಟ್ರ,ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಂದ ಈರುಳ್ಳಿ ಪೂರೈಕೆ ಕುಂಠಿತವಾಗಿರುವುದು ಬೆಲೆ ದಿನಂಪ್ರತಿ ಏರಿಕೆಗೆ ಕಾರಣವಾಗಿದೆ. ಇದೇ ರೀತಿ ಮುಂದುವರಿದರೇ ಇನ್ನು ಕೆಲವೇ ದಿನಗಳಲ್ಲಿ ಈರುಳ್ಳಿ ಕೆಜಿಗೆ 100 ರಿಂದ 120 ರೂ.ಗೆ ತಲುಪಬಹುದು ಎಂದು ವರ್ತಕರು ವಿಶ್ಲೇಷಿಸಿದ್ದಾರೆ. ಯಶವಂತಪುರ ಎಪಿಎಂಸಿಗೆ ಈ ವೇಳೆಯಲ್ಲಿ 1 ಲಕ್ಷಕ್ಕಿಂತ ಹೆಚ್ಚು ಮೂಟೆ ಈರುಳ್ಳಿ ಬರುತ್ತಿತ್ತು. ಆದರೆ, ಸದ್ಯ ಸುಮಾರು 60 ಸಾವಿರ ಮೂಟೆಗಳು ಮಾತ್ರ ಬಂದಿದೆ. ಚಿತ್ರದುರ್ಗ, ಕೊಪ್ಪಳ, ಹಾವೇರಿ, ಬಾಗಲಕೋಟೆ, ಗದಗ, ವಿಜಯಪುರ ಸೇರಿ ಉತ್ತರ ಕರ್ನಾಟಕ ಭಾಗದಿಂದ ಕೂಡ ನಿರೀಕ್ಷಿತ ಪ್ರಮಾಣದ ಪೂರೈಕೆ ಇಲ್ಲ.
ಸದ್ಯ ಬೆಂಗಳೂರಿನಿಂದ ತಮಿಳುನಾಡು, ಆಂದ್ರಕ್ಕೆ ಸ್ವಲ್ಪ ಪ್ರಮಾಣದ ಈರುಳ್ಳಿ ರಫ್ತಾಗುತ್ತಿರುವುದು ಬಿಟ್ಟರೆ ಉಳಿದ ದಕ್ಷಿಣ ರಾಜ್ಯಗಳಿಗೆ ಹೋಗುತ್ತಿಲ್ಲ ಎಂದು ಎಪಿಎಂಸಿ ವರ್ತಕರೊಬ್ಬರು ಮಾಹಿತಿ ನೀಡಿದ್ದಾರೆ.
ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲೂ ಮಳೆಯ ಕೊರತೆಯಿಂದಾಗಿ ಅಲ್ಲಿಂದಲೂ ಈರುಳ್ಳಿ ಬರುವುದು ಕಡಿಮೆಯಾಗಿದೆ. ಬರುವ ಡಿಸೆಂಬರ್ ತಿಂಗಳಿನಲ್ಲಿ ಹಲವು ರಾಜ್ಯಗಳಿಂದ ಈರುಳ್ಳಿ ಪೂರೈಕೆ ಹೆಚ್ಚಾಗಬಹುದು. ನಾಫೆಡ್(ನಾಫೆಡ್-
ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ) ಮೂಲಕ ಇನ್ನಷ್ಟು ಹೆಚ್ಚಿನ ಈರುಳ್ಳಿ ಪೂರೈಕೆ ಮಾಡಿದರೆ ದರ ಸ್ವಲ್ಪನಿಯಂತ್ರಣಕ್ಕೆ ಬರಬಹುದು. ಇಲ್ಲದಿದ್ದರೆ ಮತ್ತಷ್ಟು ಏರಿಕೆಯಾಗುವುದು ಖಚಿತ ಎಂದು ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಬಿ.ರವಿಶಂಕರ್ ಹೇಳಿದ್ದಾರೆ.