ಶಾಲೆಯ ತಾರಸಿಯಲ್ಲಿ ಸಾವಯವ ತರಕಾರಿ ಕೃಷಿ!
ಬಿಸಿಯೂಟದ ಸಾಂಬಾರು ಪಲ್ಯಕ್ಕೆ ಮಕ್ಕಳೇ ಬೆಳೆವ ತರಕಾರಿ ಬಳಕೆ
ಮಂಗಳೂರು, ನ.21: ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಬಹುತೇಕ ಶಾಲೆಗಳಲ್ಲಿ ನಡೆಯುತ್ತದೆ. ಆದರೆ ನಗರದ ಬೊಕ್ಕಪಟ್ಣದ ದ.ಕ. ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಸದಿಂದ ರಸ, ಸಾವಯವ ಕೃಷಿ ಜತೆಗೆ ತಾರಸಿಯ ಕೃಷಿಗೆ ಉತ್ತೇಜನವನ್ನೂ ನೀಡಲಾಗುತ್ತಿದೆ.
ಶಾಲೆಯ ಕಟ್ಟಡದ ತಾರಸಿಯನ್ನು ತರಕಾರಿ ಕೃಷಿಗೆ ಬಳಸಿಕೊಳ್ಳಲಾಗಿದ್ದು, ಗುಜರಿಗೆ ಹಾಕಲಾದ ಅನುಪಯುಕ್ತ ರೆಫ್ರಿಜರೇಟರ್‌ಗಳ ಪಳೆಯುಳಿಕೆಗಳನ್ನು ಉಪಯೋಗಿಸಿ ಅದರಲ್ಲಿ ತರಕಾರಿ ಬೆಳೆಯಲಾಗುತ್ತಿದೆ. ಶಾಲೆಯ ಮುಖ್ಯೋಪಾಧ್ಯಾಯರ ಮುತುವರ್ಜಿ, ಶಿಕ್ಷಕರ ಸಹಕಾರದೊಂದಿಗೆ ಶಾಲಾ ಮಕ್ಕಳೇ ಈ ಸಾವಯವ ತರಕಾರಿ ಬೆಳೆಯುತ್ತಾರೆ. ಮಾತ್ರವಲ್ಲದೆ ಅಲ್ಲಿ ಬೆಳೆಯಲಾಗುವ ತರಕಾರಿಗಳನ್ನು ಮಕ್ಕಳ ಬಿಸಿಯೂಟದ ಸಾಂಬಾರು, ಪಲ್ಯಕ್ಕೆ ಬಳಸುವ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ.
75 ವರ್ಷ ಹಳೆಯ ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 50 ಮಕ್ಕಳು ಕಲಿಯುತ್ತಿದ್ದು, ಮಕ್ಕಳು ತಮ್ಮ ಬಿಡುವಿನ ಸಮಯದಲ್ಲಿ ಶಿಕ್ಷಕರ ಜತೆ ಶಾಲೆಯ ಆವರಣ ಹಾಗೂ ಶಾಲಾಕಟ್ಟಡದ ತಾರಸಿಯಲ್ಲಿ ತರಕಾರಿ ಬೆಳೆಯುತ್ತಾರೆ.
‘ಬಸಳೆ, ಬೆಂಡೆಕಾಯಿ, ಬದನೆ, ಅಲಸಂಡೆ, ಹೀರೆಕಾಯಿ, ಮೂಲಂಗಿ, ಮುಳ್ಳುಸೌತೆ, ತೊಂಡೆಕಾಯಿಯನ್ನು ಗುಜರಿಯಿಂದ ತರಿಸಲಾದ ಅನುಪಯುಕ್ತ ರೆಫ್ರಿಜರೇಟ ರ್‌ಗಳ ಡಬ್ಬಗಳಲ್ಲಿ ಬೆಳೆಸಲಾಗುತ್ತಿದೆ. ಇತ್ತೀಚೆಗೆ ಹರಿವೆ ಸಾಕಷ್ಟು ಉತ್ತಮವಾಗಿ ಬಂದಿತ್ತು. ಬಸಳೆ, ಅಲಸಂಡೆ, ಬೆಂಡೆಕಾಯಿ ಬೆಳೆ ಕೂಡ ಇದೆ. ಎರಡು ದಿನಕ್ಕೊಮ್ಮೆ ಬೆಂಡೆಕಾಯಿ, ಮೂರು ದಿನಕ್ಕೊಮೆ ಅಲಸಂಡೆ ತಲಾ ಒಂದು ಕೆ.ಜಿ.ಯಂತೆ ಸಿಗುತ್ತದೆ. ಅದನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತದೆ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯಿನಿ (ಪ್ರಭಾರ) ಡ್ರೆಸಿಲ್ ಲಿಲ್ಲಿ ಮಿನೇಜಸ್.
ಶಾಲೆಯ ಶಿಕ್ಷಕರಾದ ಕಲ್ಪನಾ ಆರ್., ಸ್ಟೆಲ್ಲಾ ಮೋರಸ್, ಆಶಾ, ಉಷಾ ಮತ್ತು ಮಾಧವಿ, ಎಸ್‌ಡಿಎಂಸಿ ಅಧ್ಯಕ್ಷೆ ಗೀತಾ, ಶಿಕ್ಷಣ ಸಮಿತಿ ಅಧ್ಯಕ್ಷ ಮೋಹನ್ ಶೆಟ್ಟಿ, ಸ್ಥಳೀಯ ಮನಪಾ ಸದಸ್ಯ ಜಗದೀಶ್ ಶೆಟ್ಟಿ ಅವರೂ ಸಹಕರಿಸುತ್ತಾರೆ ಎಂದು ಅವರು ಹೇಳುತ್ತಾರೆ.
ಶಾಲೆಯ ಆವರಣದಲ್ಲಿ ತರಕಾರಿ ಜತೆಗೆ ಬಾಳೆಹಣ್ಣು ಹಾಗೂ ಪಪ್ಪಾಯ ಗಿಡಗಳನ್ನು ಬೆಳೆಯಲಾಗಿದೆ. ಇದು ಮಕ್ಕಳಿಗೆ ಸಾವಯವ ಕೃಷಿಯ ಬಗ್ಗೆ ನೈಜ ಅನುಭವವನ್ನು ಒದಗಿಸುತ್ತದೆ. ಶಾಲೆಯ ಎಲ್ಲರೂ ಶನಿವಾರ ಸುಮಾರು ಎರಡು ಗಂಟೆಗಳನ್ನು ತರಕಾರಿ ತೋಟದ ಕಳೆ ಕೀಳುವುದು, ಗೊಬ್ಬರ ಹಾಕುವುದಕ್ಕೆ ವ್ಯಯಿಸುತ್ತೇವೆ ಎಂದು ಮುಖ್ಯೋಪಾಧ್ಯಾಯನಿ ಮಾಹಿತಿ ನೀಡುತ್ತಾರೆ.
ತರಕಾರಿ ಬೆಳೆಯುವುದು ಸುಲಭದ ಕೆಲಸವಲ್ಲ. ಅವುಗಳಿಗೆ ನೀರುಣಿಸುವುದು, ಗೊಬ್ಬರ ಹಾಕುವುದರ ಜತೆಗೆ, ಕ್ರಿಮಿಕೀಟಗಳಿಂದ ತೊಂದರೆ ಆಗದಂತೆ ನಿಗಾ ವಹಿಸಬೇಕಾಗುತ್ತದೆ. ಇದು ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಪ್ರೀತಿ ಹಾಗೂ ಕಾಳಜಿಯನ್ನು ಮೂಡಿಸುವಲ್ಲಿಯೂ ಸಹಕಾರಿ. ನನ್ನ ಮಗಳು ಸನ್ನಿಧಿ ಪ್ರತಿನಿತ್ಯ ಶಾಲೆಯಲ್ಲಿ ಬೆಳೆದ ತರಕಾರಿ ಬಗ್ಗೆ, ಗಿಡಗಳಿಗೆ ನೀರುವುಣಿಸುವುದು, ಅವುಗಳ ಪೋಷಣೆ ಬಗ್ಗೆ ಮಾತನಾಡುತ್ತಾಳೆ ಎನ್ನುತ್ತಾರೆ ಎಸ್‌ಡಿಎಂಸಿ ಉಪಾಧ್ಯಕ್ಷೆ ವಿನಯಾ.