ನೈಸರ್ಗಿಕವಾಗಿ ಕೊಳ ಸಂರಕ್ಷಣೆಯ ಪ್ರಾಜೆಕ್ಟ್ ಪಕ್ಷಿಕೆರೆ
►ಪಕ್ಷಿಕೆರೆಯಲ್ಲೊಂದು ವಿನೂತನ ಅಭಿಯಾನಕ್ಕೆ ಮುನ್ನುಡಿ ►ಕೊಳ ಸಂರಕ್ಷಣೆಗೆ ಜನರ ಸಹಭಾಗಿತ್ವ
ಮಂಗಳೂರು: ಅನಾದಿ ಕಾಲದಿಂದಲೂ ನೀರಿನ ಮೂಲಗಳಾಗಿ ಗುರುತಿಸಿಕೊಂಡಿರುವ ನದಿ, ಕೆರೆ, ಹಳ್ಳ, ಕೊಳಗಳು ಮರೆಯಾಗುತ್ತಿರುವ ಪ್ರಸಕ್ತ ಸನ್ನಿವೇಶಗಳಲ್ಲಿ ದ.ಕ. ಜಿಲ್ಲೆ ಕೆಮ್ರಾಲ್ ಗ್ರಾಮದ ಜನರು ಪಕ್ಷಿಕೆರೆಯ ಕೊಳಗಳನ್ನು ನೈಸರ್ಗಿಕವಾಗಿ ಸಂರಕ್ಷಿಸುವ ವಿನೂತನ ಅಭಿಯಾನ ಕೈಗೆತ್ತಿಕೊಂಡಿದ್ದಾರೆ. ‘ಪ್ರಾಜೆಕ್ಟ್ ಪಕ್ಷಿಕೆರೆ’ (ಪಕ್ಷಿಕೆರೆ ಯೋಜನೆ)
ಹೆಸರಿನಲ್ಲಿ ಪಕ್ಷಿಕೆರೆ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಕೊಳಗಳನ್ನು ಪುನರುಜ್ಜೀವನಗೊಳಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಪಕ್ಷಿಕೆರೆ ಎನ್ನುವ ಹೆಸರೇ ಅದರ ವಿಶೇಷತೆಯನ್ನು ತೋರ್ಪಡಿಸುತ್ತದೆ. ಕೆರೆಯಿಂದ ಕೂಡಿದ್ದ ಈ ಪ್ರದೇಶವು ನಾನಾ ರೀತಿಯ ವಲಸೆ ಹಕ್ಕಿಗಳ ಆಶ್ರಯ ತಾಣವಾಗಿದ್ದ ಕಾರಣ ಇಲ್ಲಿಗೆ ಪಕ್ಷಿಕೆರೆ ಎಂಬ ಹೆಸರು ಬಂದಿದೆ ಎಂದೂ ಹೇಳಲಾಗುತ್ತದೆ. ಆದರೆ, ಪಕ್ಷಿಕೆರೆ ಎಂದು ಕರೆಯಲ್ಪಡುತ್ತಿದ್ದ ಆ ಕೆರೆ ಕಟ್ಟಡ ನಿರ್ಮಾಣದ ಅವಶೇಷ ಹಾಗೂ ತ್ಯಾಜ್ಯದಿಂದ ಹೂತುಹೋಗಿದೆ.
ದ.ಕ. ಜಿಲ್ಲಾದ್ಯಂತ ನೀರಿಲ್ಲದೆ ತತ್ತರಿಸುವ ಅವಧಿಯಲ್ಲೂ ಪಕ್ಷಿಕೆರೆಯ ಈ ಕೆಲ ಕೊಳಗಳಲ್ಲಿ ನೀರು ಕಂಡುಬರುತ್ತವೆ. ಆದರೆ, ಹೂಳಿನಿಂದ ತುಂಬಿರುವ ಈ ಕೊಳಗಳ ನೀರು ಬಳಕೆಗೆ ಯೋಗ್ಯವಲ್ಲ. ಇತ್ತೀಚೆಗೆ ವಿದ್ಯಾರ್ಥಿ, ಯುವಜನರು ಸೇರಿದಂತೆ ಸ್ಥಳೀಯರಲ್ಲಿ ಪರಿಸರದ ಜಾಗೃತಿಗಾಗಿ ಪಚ್ಚನಾಡಿಯಿಂದ ಪಕ್ಷಿಕೆರೆಯ ಪೇಪರ್ ಸೀಡ್ ವಿಜೇಜ್‌ವರೆಗೆ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಜಾಥಾದ ಸಂದರ್ಭ ಸ್ಥಳೀಯರು ಇಲ್ಲಿನ ‘ಪಕ್ಷಿ’ ಹಾಗೂ ‘ಕೆರೆ’ (ಕೊಳ)ಗಳನ್ನು ಉಳಿಸುವ ಬಗ್ಗೆ ಧ್ವನಿ ಎತ್ತಿದ್ದರು. ಹಾಗಾಗಿ ರೂಪುಗೊಂಡ ಈ ಯೋಜನೆಯಡಿ ಪ್ರಥಮ ಭಾಗವಾಗಿ ಇಲ್ಲಿನ ‘ಕಾಟಿಪಳ್ಳ’ (ಕಾಡು ಎಮ್ಮೆಗಳು ನೀರು ಕುಡಿಯುತ್ತಿದ್ದ ಜಾಗ) ಎಂದು ಕರೆಯುವ ಕೊಳವನ್ನು ಸ್ವಚ್ಛಗೊಳಿಸಲಾಗಿದೆ.
ಪಕ್ಷಿಕೆರೆಯಲ್ಲಿರುವ ನಾವು ಗುರುತಿಸಿರುವ ಐದು ಕೊಳಗಳ ಇರುವಿಕೆ ಬಗ್ಗೆ ಯಾವುದೇ ಸರಕಾರಿ ದಾಖಲೆಗಳು ಲಭ್ಯವಿಲ್ಲ. ಆದರೆ, ಆರ್‌ಟಿಸಿಯಲ್ಲಿ ಆ ಜಾಗವು ಸರಕಾರಿ ಜಾಗವಾಗಿ ಉಲ್ಲೇಖದಲ್ಲಿದೆ. ನಮ್ಮ ಯೋಜನೆಯಡಿ ಪ್ರಥಮವಾಗಿ ಆಯ್ಕೆ ಮಾಡಿಕೊಂಡಿರುವ ಕೊಳ ಕಳೆದ ಸುಮಾರು ೪೦ ವರ್ಷಗಳಿಂದೀಚೆಗೆ ಅನಾಥವಾಗಿದೆ ಎನ್ನುತ್ತಾರೆ ಪಕ್ಷಿಕೆರೆಯ ಪೇಪರ್ ಸೀಡ್ ವಿಲೇಜ್‌ನ ಪ್ರಮುಖರಾದ ನಿತಿನ್ ವಾಸ್.
ನಾವು ನಮ್ಮ ಊರಿನ ಇತಿಹಾಸ, ಇಲ್ಲಿನ ಜನಸಂಖ್ಯೆ, ಇಲ್ಲಿನ ನೀರಿನ ಮೂಲಗಳು ಸೇರಿದಂತೆ ಮಾಹಿತಿ ಕಲೆ ಹಾಕಿ ಐದು ಕೊಳಗಳನ್ನು ಗುರುತಿಸಿದ್ದೇವೆ. ಈ ಕೊಳದ ಪುನರುಜ್ಜೀವನವನ್ನು ಮಾದರಿಯಾಗಿಸಿಕೊಂಡು ಸ್ಥಳೀಯರು ಹಾಗೂ ತಮ್ಮ ಸುತ್ತಮುತ್ತಲಿನ ಊರಿನವರು ಕೊಳ, ಹಳ್ಳಗಳನ್ನು ಗುರುತಿಸಿ ಅವುಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ನೀರಿನ ಮೂಲಗಳನ್ನು ಸಂರಕ್ಷಿಸಲು ಉತ್ತೇಜನ ನೀಡುವುದೂ ತಮ್ಮ ಈ ಪ್ರಾಜೆಕ್ಟ್‌ನ ಪ್ರಮುಖ ಗುರಿ ಎಂದು ನಿತಿನ್ ವಾಸ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ ಗುರುತಿಸಿರುವ ಕಾಟಿಪಳ್ಳ ಕೊಳವು ಕೆಸರು ಮತ್ತು ಮಣ್ಣಿನಿಂದ ತುಂಬಿದೆ. ಅದನ್ನು ಸ್ವಚ್ಛಗೊಳಿಸಿ ಅದು ಹಿಂದೆ ಆವರಿಸಿಕೊಂಡಿದ್ದ ಉದ್ದ ಅಗಲಕ್ಕೆ ತಕ್ಕಂತೆ ಹೂಳು ತೆಗೆಯುವುದು, ಕೊಳಕ್ಕೆ ಹರಿದು ಬರುವ ಒರತೆಯನ್ನು ಕಂಡು ಹಿಡಿಯುವುದು, ಎತ್ತರ ಪ್ರದೇಶಗಳಿಂದ ಆ ಕೊಳಕ್ಕೆ ಹೂಳು ತುಂಬದಂತೆ ಹಾಗೂ ಪ್ರವಾಹ ನೀರು ಹರಿದು ಹೋಗಲು ಸೂಕ್ತ ವೈಜ್ಞಾನಿಕ ವ್ಯವಸ್ಥೆಯನ್ನು ಕಲ್ಪಿಸುವುದು ಪ್ರಾಜೆಕ್ಟ್ ಪಕ್ಷಿಕೆರೆಯ ಕಾರ್ಯಕ್ರಮಗಳಾಗಿವೆ.
ಪ್ರಾಥಮಿಕವಾಗಿ ಪುನರುಜ್ಜೀವನಕ್ಕಾಗಿ ಕೈಗೆತ್ತಿಕೊಂಡಿರುವ ಕಾಟಿಪಳ್ಳವು ೬೦ ಮೀಟರ್ ಉದ್ದ ಹಾಗೂ ಸುಮಾರು ೩೫ ಮೀಟರ್ ಅಗಲವಿದೆ. ಈ ಕೊಳದ ಇನ್ನೂ ಅರ್ಧ ಭಾಗ ಮುಚ್ಚಿಹೋಗಿದ್ದು, ಅದನ್ನು ಗುರುತಿಸಿ ಅಗಲಗೊಳಿಸಬೇಕಾಗಿದೆ. ಕೊಳದ ಪಕ್ಕದಲ್ಲೇ ಬಂಡೆಕಲ್ಲಿದ್ದು, ಅದು ಆ ಕೊಳದ
ಪ್ರಾಕೃತಿಕ ಸೌಂದರ್ಯವನ್ನು ಇಮ್ಮಡಿಗೊಳಿಸುವಂತಿದೆ. ಕೊಳ ನಿರ್ಮಾಣದ ಬಳಿಕ ಸುತ್ತಲೂ ಸ್ಥಳೀಯವಾಗಿ ಬೆಳೆಯುವ ಗಿಡಗಳನ್ನು ಬೆಳೆಸಿ ಅರಣ್ಯ ನಿರ್ಮಾಣ ಮಾಡುವುದು. ಆ ಮೂಲಕ ವಲಸೆ ಹಕ್ಕಿಗಳನ್ನು ಆಕರ್ಷಿಸುವುದು, ಶಾಲಾ ಮಕ್ಕಳಿಗೆ ಅರಣ್ಯ ಹಾಗೂ ಜಲಮೂಲಗಳ ಮಾಹಿತಿ ನೀಡಲು ಯೋಗ್ಯವಾಗುವಂತೆ ಸ್ಥಳಾವಕಾಶ ಕಲ್ಪಿಸುವುದು ನಮ್ಮ ಯೋಜನೆಯಲ್ಲಿ
ಅಡಕವಾಗಿದೆ. ಕಾಟಿ ಪಳ್ಳ ಕೊಳವನ್ನು ಕಳೆದ ಶನಿವಾರ ಸ್ವಚ್ಛಗೊಳಿಸಲಾಗಿದೆ. ಪ್ರಸಕ್ತ ಕೆರೆಯ ಮ್ಯಾಪಿಂಗ್ ಕಾರ್ಯ ನಡೆಯುತ್ತಿದೆ. ಹಂತ-ಹಂತವಾಗಿ ಈ ಕೊಳದ ಪುನರುಜ್ಜೀವನ ಕಾರ್ಯ ನಡೆಯಲಿದೆ ಎನ್ನುತ್ತಾರೆ ನಿತಿನ್ ವಾಸ್.
ಪಕ್ಷಿಕೆರೆ ಗ್ರಾಮದಲ್ಲಿ ಕಂಡು ಬರುತ್ತಿದ್ದ ವಲಸೆ ಪಕ್ಷಿಗಳು ಪ್ರಸಕ್ತ ದಿನಗಳಲ್ಲಿ ಬಹುತೇಕವಾಗಿ ಕಣ್ಮರೆಯಾಗಿವೆ. ಕಿಂಗ್ ಫಿಶರ್, ಡ್ರೋಗೋ, ಕೈಟ್, ರಾಬಿನ್ ಸೇರಿದಂತೆ ಸುಮಾರು ೫೦ರಷ್ಟು ವಿಧದ ಪಕ್ಷಿಗಳ ದಾಖಲೆಯನ್ನು ಮಾಡಲಾಗಿದೆ. ಗ್ರಾಮಸ್ಥರು ಇಲ್ಲಿ ಹಾರ್ನ್ ಬಿಲ್‌ಗಳನ್ನೂ ಕಂಡಿದ್ದು, ಅವುಗಳನ್ನು ದಾಖಲೀಕರಿಸಬೇಕಾಗಿದೆ. ಈ ಕೊಳಗಳನ್ನು ಪುನರುಜ್ಜೀವನಗೊಳಿಸಿದ ಬಳಿಕ ಇದರ ನೀರನ್ನು ಬಳಕೆಗೆ ಯೋಗ್ಯವನ್ನಾಗಿಸುವ ನಿಟ್ಟಿನಲ್ಲೂ ಕ್ರಮ ವಹಿಸುವ ಚಿಂತನೆ ಸ್ಥಳೀಯರದ್ದು.
ಬೇಸಿಗೆಯಲ್ಲಿ ದ.ಕ. ಜಿಲ್ಲಾದ್ಯಂತ ನೀರಿನ ಸಮಸ್ಯೆ ಸಾಮಾನ್ಯ. ಅದರಲ್ಲೂ ಕಳೆದ ಬಾರಿ ಫೆಬ್ರವರಿ ತಿಂಗಳಿನಿಂದಲೇ ಜಿಲ್ಲೆಯ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಿತ್ತು. ಬೋರ್‌ವೆಲ್‌ಗಳು ಬತ್ತಿ ಹೋಗಿ ಅಂತರ್ಜಲ ತಳಕಂಡಿತ್ತು. ಜಿಲ್ಲೆಯ ಭಾಗವಾದ ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಪಂ ವ್ಯಾಪ್ತಿಯಲ್ಲೂ ನೀರಿನ ಸಮಸ್ಯೆ ಬಿಗಡಾಯಿಸಿತ್ತು. ಈ ಬಾರಿಯೂ ರಾಜ್ಯಾದ್ಯಂತ ಮಳೆ ಕೊರತೆಯಾಗಿದೆ. ದ.ಕ. ಜಿಲ್ಲೆಯಲ್ಲೂ ಈ ಬಾರಿ ಬೇಸಿಗೆಗೂ ಮುನ್ನ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಅಲ್ಲಗಳೆಯಲಾಗದು. ಈ ರೀತಿಯಾಗಿ ಜಲ ಮೂಲಗಳನ್ನು ಗುರುತಿಸಿಕೊಂಡು ಅವುಗಳನ್ನು ಸಂರಕ್ಷಿಸಿ, ಬಳಕೆಗೆ ಯೋಗ್ಯವಾಗಿಸುವ ಕಾರ್ಯ ನಡೆದಲ್ಲಿ ಸ್ಥಳೀಯವಾಗಿ ನೀರಿನ ಸಮಸ್ಯೆಯನ್ನು ಸಾಕಷ್ಟು ಪ್ರಮಾಣದಲ್ಲಿ ತಗ್ಗಿಸಲು ಸಾಧ್ಯವಾಗಲಿದೆ. ಸ್ಥಳೀಯ ಈ ಕಾರ್ಯಕ್ಕೆ ಸ್ಥಳೀಯ ಸಂಘ-ಸಂಸ್ಥೆಗಳ ಜತೆಗೆ ಸ್ಥಳೀಯಾಡಳಿತ ಸೇರಿದಂತೆ ಸರಕಾರದ ಸಹಕಾರವೂ ಅಗತ್ಯವಾಗಿದೆ.